Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಲಕ್ಷ್ಮಣರೇಖೆ ದಾಟದಿರುವುದೇ ಪ್ರಜಾಪ್ರಭುತ್ವದ ಲಕ್ಷಣ

Wednesday, 09.08.2017, 3:00 AM       No Comments

ಕಾನೂನನ್ನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಷಯ, ಅದನ್ನು ಅನುಷ್ಠಾನಕ್ಕೆ ತರುವುದು ಕಾರ್ಯಾಂಗದ ಹೊಣೆ ಮತ್ತು ಸಾಂವಿಧಾನಿಕ ದೃಷ್ಟಿಕೋನದಿಂದ ಆ ಕಾನೂನನ್ನು ನಿಯಂತ್ರಿಸುವುದು ನ್ಯಾಯಾಂಗದ ಜವಾಬ್ದಾರಿ. ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಒಬ್ಬರು ಮತ್ತೊಬ್ಬರ ಅಧಿಕಾರವ್ಯಾಪ್ತಿ ಪ್ರವೇಶಿಸುವುದು ಸರಿಯಲ್ಲ.

‘ಅಪರಾಧ ಎಂಬುದು ಕೇವಲ ಒಂದು ಅನುಕೂಲಸಿಂಧು ಪದವಾಗಿಬಿಟ್ಟಿದ್ದು, ಮಿದುಳು ಮತ್ತು ಹೃದಯದ ನಡುವೆ ಸಂಘರ್ಷ ಏರ್ಪಟ್ಟು, ಅದರಲ್ಲಿ ಮಿದುಳು ಸೋತಾಗ ಘಟಿಸುವ ಪರಿಣಾಮಕ್ಕೆ ಈ ಪದವನ್ನು ಅನ್ವಯಿಸಿಬಿಡುತ್ತೇವೆ’

– ಅರ್ನಾಲ್ಡ್ ಬೆನೆಟ್, ಕಾದಂಬರಿಕಾರ.

ಇತ್ತೀಚಿನ ಏರಾ ವರ್ಸಸ್ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿ ಸವೋಚ್ಚ ನ್ಯಾಯಾಲಯವು ತೀರ್ಪು ನೀಡುವಾಗ (2017ರ ಜುಲೈ 21ರಂದು), ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆಯ ಕಾಯ್ದೆ, 2012ರ ಪರಿಚ್ಛೇದ 2(1)(ಡಿ) ಅಡಿಯಲ್ಲಿ ವ್ಯಾಖ್ಯಾನಿಸಲಾಗಿರುವಂತೆ ‘ಮಗು’ ಎಂಬ ಶಬ್ದದ ಅರ್ಥವನ್ನು ವಿವರಿಸಬೇಕಾಗಿ ಬಂತು. ಈ ಕಾಯ್ದೆಯು ಮಕ್ಕಳ ಸುರಕ್ಷತೆಗೆ, ಅಂದರೆ ಸಾಮಾಜಿಕ ಅಪರಾಧಗಳಿಂದ ಎಲ್ಲ ಸಮಯಗಳಲ್ಲೂ ತಮ್ಮನ್ನು ರಕ್ಷಿಸಿಕೊಳ್ಳಲಾಗದಂಥ ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಹೆಚ್ಚುವರಿ ಸಂರಕ್ಷಣೆಯನ್ನು ಒದಗಿಸುವುದರೆಡೆಗಿನ ಒಂದು ಹೆಜ್ಜೆಯಾಗಿದೆ. ಕಾಯ್ದೆಯ ಈ ಪರಿಚ್ಛೇದದ ಅನುಸಾರ, ‘ಮಗು’ ಎಂದರೆ 18 ವರ್ಷ ವಯೋಮಾನಕ್ಕೂ ಕೆಳಗಿರುವ ಯಾವುದೇ ವ್ಯಕ್ತಿ ಎಂದರ್ಥ.

ಅತ್ಯಾಚಾರಕ್ಕೆ ಬಲಿಪಶುವಾದ ತನ್ನ ಮಗಳಿಗೆ ಸದರಿ ಕಾಯ್ದೆಯ ಪ್ರಯೋಜನಗಳು ಸಿಗುವಂತಾಗಬೇಕೆಂದು ಆಕೆಯ ತಾಯಿಯು ಅಪೇಕ್ಷಿಸಿ ಸವೋಚ್ಚ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಮೊರೆಹೋದ ಕಾರಣದಿಂದಾಗಿ, ನ್ಯಾಯಾಲಯವು ‘ಮಗು’ ಎಂಬ ಶಬ್ದದ ಅರ್ಥವನ್ನು ಹೀಗೆ ವ್ಯಾಖ್ಯಾನಿಸಬೇಕಾದ ಅಗತ್ಯ ಉದ್ಭವಿಸಿತೆನ್ನಬೇಕು. ಅತ್ಯಾಚಾರದ ಬಲಿಪಶುವಿನ ಜೈವಿಕ ವಯಸ್ಸು 38 ವರ್ಷಗಳಾಗಿದ್ದರೂ, ವೈದ್ಯಕೀಯ ವರದಿಗಳ ಪ್ರಕಾರ, ಆಕೆಯ ಮಾನಸಿಕ ವಯಸ್ಸು 6ರಿಂದ 8 ವರ್ಷದೊಳಗಿನ ವಯಸ್ಸಿನವರಂಥದ್ದು. ಈ ವಿಲಕ್ಷಣ ಸಂಗತಿಯನ್ನು ಮುಂದುಮಾಡಿಕೊಂಡು ಸಂತ್ರಸ್ತೆಯ ತಾಯಿಯು ‘ಮಗು’ ಎಂಬ ಶಬ್ದದ ವಿಸõತ ವ್ಯಾಖ್ಯಾನವನ್ನು ಬಯಸಿದ್ದಳು; ಇದರನ್ವಯ, ಒಂದೊಮ್ಮೆ ವ್ಯಕ್ತಿಯೊಬ್ಬರ ವಯಸ್ಸು- ಅದು ಜೈವಿಕವಿರಲಿ ಅಥವಾ ಮಾನಸಿಕವೇ ಇರಲಿ- 18 ವರ್ಷಗಳಿಗಿಂತ ಕೆಳಗಿದ್ದರೆ, ಸದರಿ ಕಾಯ್ದೆಯ ಅಡಿಯಲ್ಲಿ ಆ ವ್ಯಕ್ತಿ ಅಧಿಕೃತ ಅರ್ಹತೆ ಉಳ್ಳವರಾಗುತ್ತಾರೆ ಮತ್ತು ಪ್ರಯೋಜನಗಳನ್ನು ಪಡೆಯುತ್ತಾರೆ.

ಈ ಚರ್ಚೆಗೆ ಒತ್ತಾಸೆಯಾಗುವ ನಿಟ್ಟಿನಲ್ಲಿ, ‘ಹದಿನೆಂಟು ವರ್ಷಗಳು’ ಎಂಬ ಪದಗಳು ಜೈವಿಕ ಅಥವಾ ಕಾಲಗಣನಶಾಸ್ತ್ರಕ್ಕನುಸಾರವಾದ ವಯಸ್ಸಿನೊಂದಿಗೆ ವಿಲಕ್ಷಣ ರೀತಿಯಲ್ಲಿ ಮತ್ತು ಪ್ರತ್ಯೇಕವಾಗಿ ಸಂಬಂಧ ಹೊಂದಿವೆಯೇ ಹೊರತು ‘ವಯಸ್ಸು’ ಎಂಬ ವಾಸ್ತವಿಕ ಪರಿಕಲ್ಪನೆ ಅಥವಾ ಭಾವನೆಗೂ ಇದಕ್ಕೂ ಸಂಬಂಧವಿಲ್ಲ ಎಂಬುದನ್ನು ವ್ಯಕ್ತಪಡಿಸುವ ರೀತಿಯಲ್ಲಿ 2(1)(ಡಿ) ಪರಿಚ್ಛೇದಕ್ಕೆ ಒಂದು ಸೀಮಿತಾರ್ಥವನ್ನು ನೀಡಬಾರದು ಎಂದು ವಾದಿಸಲಾಯಿತು. ಅಷ್ಟೇ ಅಲ್ಲ, ಸದರಿ ಕಾಯ್ದೆಯ ವಾಸ್ತವಿಕ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಜೈವಿಕ ಮತ್ತು ಮಾನಸಿಕ ವಯಸ್ಸನ್ನು ಸಂಯೋಜಿತವಾಗಿ ಒಳಗೊಳ್ಳುವ ರೀತಿಯಲ್ಲಿ ‘ವಯಸ್ಸು’ ಎಂಬ ಪದದ ಮೇಲೆ ಅರ್ಥವಿವರಣೆಯನ್ನು ಕೇಂದ್ರೀಕರಿಸಬೇಕು ಮತ್ತು ದುರುಪಯೋಗ-ಶೋಷಣೆಯನ್ನು ತಪ್ಪಿಸಲೆಂದು ಮಗುವನ್ನುದ್ದೇಶಿಸಿ ಕಾನೂನಿನ ಅಡಿಯಲ್ಲಿ ಮಾನ್ಯ ಮಾಡಲಾಗಿರುವ ಸಂರಕ್ಷಣಾತ್ಮಕ ಆಶ್ರಯದ ಆಶಯವು ತನ್ಮೂಲಕ ಈಡೇರುವಂತಾಗಬೇಕು ಎಂದು ಕೂಡ ಒತ್ತಾಯಿಸಲಾಯಿತು.

ಜೈವಿಕ ವಯಸ್ಸನ್ನಷ್ಟೇ ಆಧಾರವಾಗಿಟ್ಟುಕೊಳ್ಳದೆ ಗ್ರಹಿಕೆಯ ಪ್ರಬುದ್ಧತೆಯ ಆಧಾರದ ಮೇಲೆ ಸದರಿ ಕಾಯ್ದೆಯ ಸಂರಕ್ಷಣೆಯನ್ನು ವಿಧಿಸಲಾಗಿದೆ ಎಂದು ಕೂಡ ವಾದಿಸಲಾಯಿತು. ಈ ರೀತಿಯಾಗಿ, ಸಂತ್ರಸ್ತೆಯ ತಾಯಿ ವಾದಿಸಿದಂತೆ, ‘ಮಗು’ ಎಂಬ ಶಬ್ದದ ಅಕ್ಷರಶಃ ಅರ್ಥವಿವರಣೆಯು ಶಾಸನದ ಆಶಯವನ್ನೇ ಸೋಲಿಸಿಬಿಡುತ್ತದೆ. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ನ್ಯಾಯಾಲಯವು ಕೇವಲ ಶಬ್ದಕೋಶಗಳನ್ನಾಧರಿಸಿ ರಕ್ಷಣಾವರಣವೊಂದನ್ನು ರೂಪಿಸಬಾರದು ಮತ್ತು ನೆರವೇರಿಸಬೇಕಾದ ಯಾವುದೋ ಉದ್ದೇಶ ಅಥವಾ ಗುರಿಯನ್ನು ಶಾಸನಗಳು ಹೊಂದಿರುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು; ಇಂಥ ಉದ್ದೇಶ ಅಥವಾ ಗುರಿಯನ್ನು ಸಹಾನುಭೂತಿಯೊಂದಿಗೆ ಮತ್ತು ಭಾವನಾಶಕ್ತಿಯೊಂದಿಗೆ ಕಂಡುಕೊಳ್ಳುವುದು ಅವುಗಳ ಅರ್ಥಗ್ರಹಿಕೆಗಿರುವ ಮಾಗೋಪಾಯವಾಗಿದೆ.

ಇದಕ್ಕೆ ಪ್ರತಿಯಾಗಿ ಸರ್ಕಾರ, ‘‘….‘ವಯಸ್ಸು’ ಮತ್ತು ‘ವರ್ಷಗಳು’ ಎಂದು ಕರೆಯಲಾಗುವ ಎರಡು ಶಬ್ದಗಳು ನಡುವೆ ಒಂದು ವೈಲಕ್ಷಣ್ಯವಿದೆ; ‘ವಯಸ್ಸು’ ಎಂಬುದು ಮಾನಸಿಕ ಅಥವಾ ಜೈವಿಕ/ಶಾರೀರಿಕ ವಯಸ್ಸನ್ನೂ, ‘ವರ್ಷಗಳು’ ಎಂಬುದು ಕಾಲಗಣನಶಾಸ್ತ್ರವನ್ನೂ ಸೂಚಿಸುತ್ತವೆ. ಆದ್ದರಿಂದ, ‘ವಯಸ್ಸು’ ಎಂಬ ಪದವನ್ನು ಮಾನಸಿಕ ವಯಸ್ಸು ಎಂಬ ಅರ್ಥಬರುವಂತೆ ನಿರ್ದಿಷ್ಟ ಉಪಬಂಧವೊಂದರಲ್ಲಿ ವ್ಯಾಖ್ಯಾನಿಸಲು ಸಾಧ್ಯವಿದೆಯಾದರೂ, ಅದು ‘ವರ್ಷ’ ಎಂಬ ಪದದಿಂದ ನಿರೂಪಿಸಲ್ಪಟ್ಟಾಗ ಇದೇ ಮಾರ್ಗವನ್ನು ಅನುಸರಿಸಲಾಗದು- ಕಾರಣ,

“General Clauses Act, 1897′ ರಲ್ಲಿ ‘ವರ್ಷ’ ಎಂಬ ಪದವನ್ನು 365 ದಿನಗಳ ಅವಧಿಯಾಗಿ ವ್ಯಾಖ್ಯಾನಿಸಲಾಗಿದೆ‘ ಎಂಬುದಾಗಿ ಸಮರ್ಥನೆ ಮಂಡಿಸಿತು.

ಈ ವಾದಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಮತ್ತೊಂದು ಸಮರ್ಥನೆಯೂ ಹೊಮ್ಮಿತು. ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆಯ ಕಾಯ್ದೆ, 2012’ಕ್ಕೆ ಪ್ರತಿಯಾಗಿ, 2 ಮತ್ತು 32ನೇ ಪರಿಚ್ಛೇದಗಳ ಅಡಿಯಲ್ಲಿ ‘ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015’ ‘ವಯಸ್ಸು’ ಎಂಬುದರ ವ್ಯಾಪ್ತಿನಿರ್ಣಯವನ್ನು ಒಳಗೊಂಡಿದ್ದು, ವ್ಯಕ್ತಿಯೊಬ್ಬನ ಮಾನಸಿಕ ಸಾಮರ್ಥ್ಯವು ವಿಚಾರಣಾ ನ್ಯಾಯಾಲಯದಲ್ಲಿ ನಿರ್ಣಯಿಸಲ್ಪಡುವುದಕ್ಕೆ ಬಾಲ ನ್ಯಾಯ ಕಾಯ್ದೆಯ ವಿಷಯದಲ್ಲಿ ಒಂದು ಸುಸಂಬದ್ಧ ಅಂಶವನ್ನು ಹೊಂದಿರುತ್ತದೆಯೇ ವಿನಾ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆಯ ಕಾಯ್ದೆಯ ವಿಷಯದಲ್ಲಲ್ಲ ಎಂಬುದನ್ನು ಅದು ಸೂಚಿಸುತ್ತದೆ’ ಎಂಬುದೇ ಆ ಸಮರ್ಥನೆಯಾಗಿತ್ತು.

ಎದುರಾಳಿಯ ಸಮರ್ಥನೆಗಳ ಪರಿಗಣನೆಯ ನಡುವೆ ಮತ್ತು ಅನ್ವಯವಾಗುವ ಶಾಸನಸಮ್ಮತ ಅರ್ಥವಿವರಣೆಯ ನಿಯಮವನ್ನು ನಿರ್ಣಯಿಸುವುದಕ್ಕೊಂದು ಪೀಠಿಕೆಯಾಗಿ, ನ್ಯಾಯಮೂರ್ತಿಗಳಲ್ಲೊಬ್ಬರು ‘ನಾನು ಸಂಸತ್ತಿನ ಕರಡು ತಯಾರಕನಾಗಿದ್ದು, ದೇಶದ ಕಾನೂನುಗಳನ್ನು ರೂಪಿಸುತ್ತೇನೆ ಮತ್ತು ಅರ್ಧದಷ್ಟು ವ್ಯಾಜ್ಯ ಹೂಡುವಿಕೆ/ಖಟ್ಲೆಗಳಿಗೆ ನಿಸ್ಸಂದೇಹವಾಗಿ ನಾನೇ ಕಾರಣನಾಗಿದ್ದೇನೆ’ ಎಂಬ ಹಳೆಯ ಬ್ರಿಟಿಷ್ ಉಲ್ಲೇಖವೊಂದನ್ನು ನೆನಪಿಸಿಕೊಂಡು, ಪ್ರಸಕ್ತ ವಿವಾದವನ್ನು ಅಂಥದೇ ಸಂದರ್ಭದೊಂದಿಗೆ ಹೋಲಿಸಲು ಮುಂದಾದರು. ಅವರು ಮಾಡಿರುವ ಉಲ್ಲೇಖವೊಂದು, ಕಾನೂನು-ಕಟ್ಟಳೆಗಳ ಅರ್ಥವನ್ನು ವಿಶ್ಲೇಷಿಸುವಾಗ ವಕೀಲರು ಮತ್ತು ನ್ಯಾಯಾಧೀಶರು ಬಹುತೇಕ ಸಮಸಮನಾಗಿ ಎದುರಿಸುವ ತೊಡಕುಗಳನ್ನು ಸುಂದರವಾಗಿ ಹಿಡಿದಿಟ್ಟಿದ್ದು, ಅದು ಹೀಗಿದೆ: ‘ಮಧ್ಯರಾತ್ರಿಯನ್ನು ಮಧ್ಯಾಹ್ನ ಎಂಬುದಾಗಿ ತಪ್ಪಾಗಿ ಗ್ರಹಿಸುವಂಥ ಸಾಧ್ಯತೆಯೇನೂ ಇಲ್ಲ; ಆದರೆ ಕರಾರುವಾಕ್ಕಾಗಿ ಯಾವ ಕ್ಷಣದಲ್ಲಿ ಮಬ್ಬಿನ ಸಮಯವು (ಅಂದರೆ ಅರೆ ತಿಳಿವಳಿಕೆಯು) ಅಂಧಕಾರವಾಗಿ (ಅಂದರೆ ಅಜ್ಞಾನವಾಗಿ) ಪರಿವರ್ತನೆಗೊಂಡುಬಿಡುತ್ತದೆ ಎಂಬುದನ್ನು ನಿರ್ಣಯಿಸುವುದು ಕಷ್ಟ’.

ಶಾಸನಾತ್ಮಕ ಅರ್ಥವಿವರಣೆಯ ಸಂದರ್ಭದಲ್ಲಿ ಅನೇಕ ನಿಯಮಗಳು ಅನ್ವಯವಾಗಬಹುದು.

ಪದಗಳ ಬಳಕೆ ಮತ್ತು ಅರ್ಥ ಇವು ಸುಸ್ಪಷ್ಟವಾಗಿರುವಲ್ಲಿ, ಅದರ ಅಕ್ಷರಶಃ ಅರ್ಥವನ್ನು ಸ್ವೀಕರಿಸಿ ಅಳವಡಿಸಿಕೊಳ್ಳಬೇಕು.

ಕಿಡಿಗೇಡಿತನ-ಕುಚೋದ್ಯ-ಕುಟಿಲತೆಯ ಆಶಯಗಳನ್ನು ದಮನಿಸುವಂಥ, ಮತ್ತು ಕಾಯ್ದೆಯನ್ನು ರೂಪಿಸಿದವರ ನೈಜ ಆಶಯಕ್ಕೆ ಅನುಸಾರವಾಗಿ ಪರಿಹಾರೋಪಾಯದ ಕ್ರಮಕ್ಕೆ ಬಲವನ್ನೂ ಜೀವವನ್ನೂ ತುಂಬುವಂಥ ಅರ್ಥಕಲ್ಪನೆಯೊಂದಕ್ಕೆ ಆದ್ಯತೆ ನೀಡಬೇಕು.

ಪದಗಳ ವ್ಯಾಕರಣಬದ್ಧ ಮತ್ತು ಸಾಮಾನ್ಯ ಗ್ರಹಿಕೆಯು ವಿಧಿಬದ್ಧ ದಸ್ತಾವೇಜಿನ ಮಿಕ್ಕ ಭಾಗದೊಂದಿಗಿನ ಯಾವುದೋ ಅಸಂಬದ್ಧತೆಗೆ ಅಥವಾ ಅಸಾಮಂಜಸ್ಯಕ್ಕೆ ಅಥವಾ ವಿವೇಚನಾಶೂನ್ಯತೆಗೆ ಕಾರಣವಾಗದ ಹೊರತು ಇಂಥ ಗ್ರಹಿಕೆಗೆ ನಿಷ್ಠವಾಗಿರಬೇಕು; ಒಂದೊಮ್ಮೆ ಇಂಥ ಅಸಂಬದ್ಧತೆ ಅಥವಾ ಅಸಾಮಂಜಸ್ಯ ಕಂಡುಬಂದಲ್ಲಿ ಅದನ್ನು ತಪ್ಪಿಸಲು ಪದಗಳ ವ್ಯಾಕರಣಬದ್ಧ ಮತ್ತು ಸಾಮಾನ್ಯ ಗ್ರಹಿಕೆಯನ್ನು ಮಾರ್ಪಡಿಸಬಹುದೇ ವಿನಾ ಆ ಮಿತಿಯನ್ನು ಮೀರುವಂತಿಲ್ಲ.

ಪೀಠಿಕೆ, ಉದ್ದೇಶಗಳು ಮತ್ತು ಕಾರಣಗಳು, ಪರಿಚ್ಛೇದಗಳ ಪೂರ್ವಸಿದ್ಧತೆಗಳೆಡೆಗೆ ಅವಲೋಕಿಸುವುದರ ಸಾಧ್ಯತೆಯ ಜತೆಜತೆಗೆ ಮೇಲೆ ಉಲ್ಲೇಖಿಸಲಾಗಿರುವ ನಿಯಮಗಳೂ ಸೇರಿಕೊಂಡು ರೂಪುಗೊಳ್ಳುವ ಮಿಶ್ರಣವು ಹೊಸದೊಂದು ನಿಯಮವನ್ನು ಹುಟ್ಟುಹಾಕಿದ್ದು, ತನ್ಮೂಲಕ ಕಾಯಿದೆ-ಕಾನೂನುಗಳು ಮತ್ತು ಪರಿಚ್ಛೇದಗಳ ಉದ್ದೇಶಪೂರ್ವಕ ಅರ್ಥವಿವರಣೆಗೆ ಆದ್ಯತೆ ನೀಡಬೇಕಾಗಿ ಬಂದಿದೆ. ನಿವೃತ್ತ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಮಾತುಗಳಲ್ಲೇ ಹೇಳುವುದಾದರೆ, ಇದಕ್ಕೆ ಕಾರಣ, ‘ಶಬ್ದಾರ್ಥ ವಿಜ್ಞಾನದಲ್ಲಿ ಪದಗುಚ್ಛ ಅಥವಾ ನುಡಿಗಟ್ಟುಗಳು ಸಂದರ್ಭಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿರುವುದರಿಂದ ಮತ್ತು ಮುದ್ರಿತ ಮೂಲಪಠ್ಯಕ್ಕೆ ನ್ಯಾಯಾಲಯವು ವಿಮರ್ಶಾತ್ಮಕ ಅರ್ಥಗಳನ್ನು ನೀಡಬಹುದಾದ್ದರಿಂದ, ಕಾಲ ಮತ್ತು ಸಂದರ್ಭಕ್ಕನುಸಾರವಾಗಿ ಪದಗಳ ಅರ್ಥವಿಸ್ತಾರ ಬೆಳೆಯುತ್ತ ಹೋಗುತ್ತದೆ’. ಆದರೆ ಹಾಗೆ ಮಾಡುವಾಗ, ಶಾಸನವೊಂದರ ಭಾಷೆಯಲ್ಲಿ ಯಾವುದೇ ಸಂದೇಹ ಅಥವಾ ದ್ವಂದ್ವವನ್ನು ಕಾಣುವುದು ಅಥವಾ ಹುಟ್ಟುಹಾಕುವುದು ನ್ಯಾಯಾಲಯದ ಕೆಲಸವಲ್ಲ; ಇದು ದಂಡನೆಯ ಕಾನೂನಿಗೂ ಹೆಚ್ಚಿನ ರೀತಿಯಲ್ಲಿ ಅನ್ವಯಿಸುವಂಥ ಮಾತು.

ಮೇಲೆ ಉಲ್ಲೇಖಿಸಿದ ಪ್ರಕರಣದಲ್ಲಿ, ಇಬ್ಬರೂ ನ್ಯಾಯಮೂರ್ತಿಗಳು ನೀಡಿದ ಅಭಿಪ್ರಾಯ ಹೀಗಿತ್ತು: ‘ಒಟ್ಟಾರೆಯಾಗಿ ಕಾಯ್ದೆಯ ಅರ್ಥಗ್ರಹಿಸಿದ ನಂತರ, ಅದರಲ್ಲೂ ನಿರ್ದಿಷ್ಟವಾಗಿ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಂಡಾಗ, ಸಾಮಾನ್ಯವಾಗಿ ಅರ್ಥೈಸಿಕೊಳ್ಳಲಾಗಿರುವಂತೆ ಮಕ್ಕಳ ಮೇಲೆ, ಅಂದರೆ ಶಾರೀರಿಕವಾಗಿ 18 ವರ್ಷ ವಯಸ್ಸಿಗಿಂತ ಕೆಳಗಿರುವ ವ್ಯಕ್ತಿಗಳ ಕುರಿತಾಗಿ ಗಮನ ಹರಿಸುವುದು ಕಾಯಿದೆಯ ಆಶಯವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಕಾಯ್ದೆಯ ಮೂಲಸಾಮಗ್ರಿಯನ್ನು ಮಾರ್ಪಡಿಸುವುದು ನ್ಯಾಯಾಧೀಶರ ಪಾಲಿಗೆ ನಿಷಿದ್ಧ’.

ಆದ್ದರಿಂದ, ಸವೋಚ್ಚ ನ್ಯಾಯಾಲಯವು ತನ್ನ ಅಂತಿಮ ವಿಶ್ಲೇಷಣೆಯಲ್ಲಿ, ಮನೋವೈದ್ಯಶಾಸ್ತ್ರ ಮತ್ತು ಮನಶ್ಶಾಸ್ತ್ರದ ವಿಜ್ಞಾನಗಳ ಅನ್ವಯದ ಮೂಲಕ ನಿರ್ಣಯಿಸಲಾದ ವ್ಯಕ್ತಿಯೊಬ್ಬರ ‘ಮಾನಸಿಕ ವಯಸ್ಸನ್ನು’ ಅಥವಾ 18 ವರ್ಷಗಳಷ್ಟು ಜೈವಿಕ ವಯಸ್ಸನ್ನು ದಾಟಿದ್ದು ಬೌದ್ಧಿಕ ವೈಕಲ್ಯವಿರುವ ವ್ಯಕ್ತಿಯೊಬ್ಬರನ್ನು ‘ಮಗು’ ಎಂಬ ಶಬ್ದದ ವ್ಯಾಖ್ಯಾನದೊಳಗೆ ಸೇರಿಸಲು ನಿರಾಕರಿಸಿತು. ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಆರ್.ಎಫ್. ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠವು, ‘ಮಗು’ ಮತ್ತು ‘ವಯಸ್ಸು’ ಎಂಬ ಶಬ್ದಗಳ ವ್ಯಾಖ್ಯಾನವನ್ನು ಕಾಲಗಣನಶಾಸ್ತ್ರದ ಅಥವಾ ಜೈವಿಕ ವಯಸ್ಸಿನಂಥ ಕ್ಷೇಮಕರ ಅಳತೆಗೋಲುಗಳ ವ್ಯಾಪ್ತಿಗೆ ಬಿಡುವುದು ಸೂಕ್ತ ಎಂದು ಸಂಸತ್ತು ಅಭಿಪ್ರಾಯಪಟ್ಟಿದೆ. ಇದು ಹೀಗೆ ಸ್ಪಷ್ಟಗೊಂಡಿರುವಾಗ, ಸಂಸತ್ತಿನ ಆಶಯ ಮತ್ತು ಭಾಷೆಗೆ ಅಪಚಾರವಾಗಬಾರದು ಎಂದಿತು.

ಉದ್ದೇಶಪೂರ್ವಕ ಅರ್ಥವಿವರಣೆಯೊಂದು ಭಾವನಾತ್ಮಕವಾಗಿ ಮನವೊಪ್ಪಿಸುವ ರೀತಿಯಲ್ಲಿರುವಂತೆ ಕಾಣಬಹುದಾದರೂ, ಲಕ್ಷ್ಮಣರೇಖೆಯನ್ನು ದಾಟುವಂಥ ಸಂದರ್ಭಕ್ಕೆ ಅದು ಕಾರಣವಾಗುವಂತಾಗುವುದನ್ನು ತಪ್ಪಿಸಬೇಕಾಗುತ್ತದೆ. ಅಂದರೆ, ಶಾಸನದ ಆಶಯವೆಂದು ಭಾವಿಸಿಕೊಳ್ಳುವ ಮೂಲಕ, ಕಾನೂನಿನಲ್ಲಿ ಇರುವುದಕ್ಕಿಂತ ಭಿನ್ನವಾದುದೇನನ್ನೋ ನ್ಯಾಯಾಧೀಶರು ಸೇರ್ಪಡೆ ಮಾಡುವಂಥ ಅಥವಾ ಶಾಸನದ ಸೃಜನಾತ್ಮಕ ಅರ್ಥವಿವರಣೆಯಿಂದಾಚೆಗೆ ಅವರು ಹೋಗುವಂಥ ಸಂದರ್ಭಕ್ಕೆ ಆಸ್ಪದ ಇರಬಾರದು. ಕಾನೂನನ್ನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಷಯ, ಅದನ್ನು ಅನುಷ್ಠಾನಕ್ಕೆ ತರುವುದು ಕಾರ್ಯಾಂಗದ ಹೊಣೆ ಮತ್ತು ಸಾಂವಿಧಾನಿಕ ದೃಷ್ಟಿಕೋನದಿಂದ ಆ ಕಾನೂನನ್ನು ನಿಯಂತ್ರಿಸುವುದು ನ್ಯಾಯಾಂಗದ ಜವಾಬ್ದಾರಿ. ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಒಬ್ಬರು ಮತ್ತೊಬ್ಬರ ಅಧಿಕಾರವ್ಯಾಪ್ತಿ ಪ್ರವೇಶಿಸಿ ತಡೆಯೊಡ್ಡುವುದು ತರವಲ್ಲ, ಅಲ್ಲವೇ?

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top