Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ರ‍್ಯಾಪಿಡ್ ಚೆಸ್​ನ ವಿಶ್ವನಾಥ

Sunday, 31.12.2017, 3:04 AM       No Comments

| ಗಣೇಶ್ ಉಕ್ಕಿನಡ್ಕ

ವಯಸ್ಸು ಕೇವಲ ಸಂಖ್ಯೆಯಷ್ಟೆ. ಶ್ರದ್ಧೆ, ಕಠಿಣ ಪರಿಶ್ರಮ, ಆತ್ಮವಿಶ್ವಾಸವಿದ್ದರೆ ಯಾವ ವಯಸ್ಸಿನಲ್ಲೂ ಸಾಧನೆ ತೋರುವುದು ಅಸಾಧ್ಯವಲ್ಲ. ಕಿರಿಯರ ಸ್ಪರ್ಧೆಯನ್ನೂ ಸಮರ್ಥವಾಗಿ ಹಿಮ್ಮೆಟ್ಟಿಸಬಹುದು. ಹಾಲಿ ಕ್ರೀಡಾ ದಿಗ್ಗಜರ ಪೈಕಿ ಸ್ವಿಜರ್ಲೆಂಡ್ ಟೆನಿಸ್ ಸ್ಟಾರ್ ರೋಜರ್ ಫೆಡರರ್, ಟೀಮ್ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿ ಈ ವರ್ಷ ಇದನ್ನು ಸಾಧಿಸಿತೋರಿದ್ದಾರೆ. ಇದೀಗ ಇವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ ವಿಶ್ವ ಚೆಸ್ ಕಿಂಗ್ ವಿಶ್ವನಾಥನ್ ಆನಂದ್. ಅವರು 48ನೇ ವಯಸ್ಸಿನಲ್ಲಿ ವೇಗದ ಆಟ ರ್ಯಾಪಿಡ್ ಚೆಸ್​ನಲ್ಲಿ ವಿಶ್ವ ವಿಕ್ರಮ ಸಾಧಿಸಿ ಬೀಗಿದ್ದಾರೆ.

ರೋಚಕ ಫಲಿತಾಂಶದೊಂದಿಗೆ ಮನರಂಜನೆ ನೀಡುವ ಕ್ರಿಕೆಟ್, ಫುಟ್​ಬಾಲ್​ನಂಥ ಕ್ರೀಡೆಯಲ್ಲ ಚೆಸ್. ಆದರೆ ಸಾಮಾನ್ಯ ವ್ಯಕ್ತಿಯೋರ್ವ ತಾಳ್ಮೆಯೊಂದಿಗೆ ಬುದ್ಧಿ, ಆಲೋಚನಾ ಕೌಶಲಕ್ಕೆ ಅಗ್ನಿಪರೀಕ್ಷೆಯೊಡ್ಡುವ ಚೆಸ್ ಬೋರ್ಡ್​ನಲ್ಲಿ ಎದುರಾಳಿ ನಿರೀಕ್ಷೆ ಮೀರಿಸಿ, ಅತಿ ವೇಗವಾಗಿ ಕಾಯಿಗಳನ್ನು ಚಲಿಸುವ ಚಾಕಚಕ್ಯತೆಯನ್ನು ಕಾಯ್ದುಕೊಳ್ಳುವುದು ಹಿರಿ ವಯಸ್ಸಿನಲ್ಲಿ ಅಷ್ಟು ಸುಲಭವಲ್ಲ. ದಿಗ್ಗಜ ವಿಶ್ವನಾಥನ್ ಆನಂದ್ ಅವರು ಇಂದು ಪ್ರಶಸ್ತಿ ಜಯಿಸಿದ್ದಕ್ಕಿಂತ ಹೆಚ್ಚು ಖುಷಿಯಾಗಿದ್ದು ಇದೇ ಕಾರಣಕ್ಕೆ. ಸೌದಿ ಅರೇಬಿಯಾದಲ್ಲಿ ಗುರುವಾರ ಮುಕ್ತಾಯಗೊಂಡ ವಿಶ್ವ ರ್ಯಾಪಿಡ್ ಚೆಸ್​ನಲ್ಲಿ ವಿಶ್ವನಾಥನ್ ಆನಂದ್ ಪ್ರಶಸ್ತಿ ಗೆಲ್ಲುವ ಮೂಲಕ 14 ವರ್ಷಗಳ ನಂತರ ಸ್ಪೀಡ್ ಚೆಸ್​ನಲ್ಲಿ ವಿಶ್ವ ಮುಕುಟ ಮುಡಿಗೇರಿಸಿಕೊಂಡ ಸಾಧನೆ ಮಾಡಿದರು. ನಿರ್ಣಾಯಕ ಸುತ್ತಿನಲ್ಲಿ ವಿಶ್ವನಾಥನ್ ತಮಗಿಂತ 26 ವರ್ಷ ಕಿರಿಯವರಾದ ರಷ್ಯಾದ ವ್ಯಾಡಿಮೀರ್ ಫೆಡೊಸೀವ್ ವಿರುದ್ಧದ ಟೈಬ್ರೇಕರ್ ಮಿನಿ ಮ್ಯಾಚ್​ನಲ್ಲಿ 2-0ಯಿಂದ ಗೆದ್ದರು. ಇದು ಇವರ ವೃತ್ತಿ ಬದುಕಿನ 7ನೇ ಚೆಸ್ ವಿಶ್ವ ಚಾಂಪಿಯನ್ ಪಟ್ಟವಾಗಿದೆ. ಅಂದರೆ ಇಲ್ಲಿ ವಿಶ್ವನಾಥನ್ ಎಷ್ಟು ಪ್ರಶಸ್ತಿ ಗೆದ್ದರು ಎನ್ನುವುದಕ್ಕಿಂತ ವಿದಾಯ ಹೇಳಬೇಕಿದ್ದ ಹಿರಿಯ ವಯಸ್ಸಿನಲ್ಲಿ ಈ ಕೀರ್ತಿ ಶಿಖರವೇರಿದ್ದು ಎಲ್ಲರಿಗೂ ಸ್ಪೂರ್ತಿ.

ಸುದೀರ್ಘ ಅವಧಿಯ ಚೆಸ್ ಬದುಕಿನಲ್ಲಿ ವಿಶ್ವನಾಥನ್ ಅವರು 2012ರಲ್ಲಿ ಕೊನೇ ಬಾರಿ ಚಾಂಪಿಯನ್ ಆದ ಬಳಿಕ ಸಾಕಷ್ಟು ಹಿನ್ನಡೆಗಳನ್ನು ಎದುರಿಸಿ, ದಿಢೀರ್ ಕುಸಿದರು. ಆದರೆ ಅವರು ಇದಕ್ಕೇನೂ ವಿಚಲಿತರಾಗಲಿಲ್ಲ. ಅವರು 2000ದಲ್ಲಿ ಚೊಚ್ಚಲ ಫಿಡೆ ವಿಶ್ವ ಚೆಸ್ ಚಾಂಪಿಯನ್​ಷಿಪ್ ಪ್ರಶಸ್ತಿ ಗೆದ್ದರು. ಅಂದು ಫೈನಲ್​ನಲ್ಲಿ ಆನಂದ್ ಲಾಟ್ವಿಯಾ ಗ್ರಾಂಡ್​ವಾಸ್ಟರ್ ಅಲೆಕ್ಸಿ ಶಿರೊವ್​ರನ್ನು ಮಣಿಸಿ ಇತಿಹಾಸ ರಚಿಸಿದರು. ನಂತರ ವೈಫಲ್ಯಗೊಂಡ ಇವರು ಉಳಿದ 6 ವರ್ಷಗಳಲ್ಲಿ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಯಶಸ್ವಿಯಾಗಲಿಲ್ಲ. ಆದರೆ 2007ರಲ್ಲಿ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೆದ್ದ ಇವರು ಮೆಕ್ಸಿಕೋದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್​ಷಿಪ್ ಫೈನಲ್​ನ ನಿರ್ಣಾಯಕ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರೆ ಪ್ರಶಸ್ತಿ ಖಚಿತವಾಗಿತ್ತು. ಇದನ್ನೆ ಸಾಧಿಸಿದ ಆನಂದ್ ಹಂಗೆರಿಯ ಪೀಟರ್ ಲೆಕೊ ವಿರುದ್ಧ ಡ್ರಾ ಆಗಿ ವೃತ್ತಿಜೀವನದಲ್ಲಿ ಚೊಚ್ಚಲ ಬಾರಿ ವಿಶ್ವ ನಂ.1 ಚೆಸ್ ಪಟು ಎನಿಸಿಕೊಂಡರು. ಆ ನಂತರ 2008, 2010, 2012ರ ಫಿಡೆ ವಿಶ್ವ ಚೆಸ್ ಸೇರಿದಂತೆ ಇದೀಗ ಒಟ್ಟಾರೆ 7ನೇ ವಿಶ್ವ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.

ತಾಯಿಯೇ ಮೊದಲ ಗುರು: ಚೆನ್ನೈನ ಆನಂದ್ 6ನೇ ವಯಸ್ಸಿಗೆ ಚೆಸ್ ಆಟವನ್ನೇ ಮೆಚ್ಚಿಕೊಂಡರು. ಚೆಸ್ ಪಟುವಾಗಿದ್ದ ತಾಯಿ ಸುಶೀಲಾ ಮೊದಲ ಗುರು. ಆನಂದ್ ತಮ್ಮ 14ನೇ ವಯಸ್ಸಿನಲ್ಲಿ 1983ರ ಸಬ್​ಜೂನಿಯರ್ ವಿಭಾಗದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ ಗೆದ್ದರು. ಅದರ ಬೆನ್ನಲ್ಲೆ ಕೊಯಂಬತ್ತೂರಿನಲ್ಲಿ ನಡೆದ ಏಷ್ಯನ್ ಜೂನಿಯರ್ ಚೆಸ್​ನಲ್ಲಿ ಚಾಂಪಿಯನ್ ಆಗುವ ಮೂಲಕ ಅತಿ ಕಿರಿಯ(15 ವರ್ಷ) ಭಾರತದ ಅಂತಾರಾಷ್ಟ್ರೀಯ ಮಾಸ್ಟರ್ ಎನಿಸಿಕೊಂಡರೆ, 1985ರಲ್ಲೂ ಸತತ 2ನೇ ಬಾರಿ ಇದೇ ಟೂರ್ನಿಯಲ್ಲಿ ಗೆದ್ದರು.1987ರಲ್ಲಿ ಚೆಸ್​ನಲ್ಲಿ ಅತ್ಯಂತ ವೇಗವಾದ ಮಾದರಿ ಬಿಟ್ಜ್ ವಿಭಾಗದ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್​ಷಿಪ್​ನಲ್ಲಿ ಚಾಂಪಿಯನ್ ಆದ ಮೊದಲ ಭಾರತೀಯರಾದರು. ಬೆನ್ನಲ್ಲೆ ಶಕ್ತಿ ಫಿನಾನ್ಸ್ ಅಂತಾರಾಷ್ಟ್ರೀಯ ಚಾಂಪಿಯನ್​ಷಿಪ್ ಗೆದ್ದ ಆನಂದ್ ಭಾರತದ ಮೊದಲ ಗ್ರಾಂಡ್ ಮಾಸ್ಟರ್ ಆದರಲ್ಲದೆ 18ನೇ ವಯಸ್ಸಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. ಬಳಿಕ ಅವರು ಅಂತಾರಾಷ್ಟ್ರೀಯ ಚೆಸ್​ನಲ್ಲಿ ಸಾಗಿದ ಹಾದಿಯೆಲ್ಲಾ ಯಶಸ್ಸಿನ ಹೆಜ್ಜೆಯ ಗುರುತಾಯಿತು.

ಅಂತಾರಾಷ್ಟ್ರೀಯ ಪತ್ರಕರ್ತರು ಆಯ್ಕೆ ಮಾಡಿ ನೀಡಲಾಗುವ ವರ್ಷದ ಪ್ರಶಸ್ತಿ ‘ಚೆಸ್ ಆಸ್ಕರ್’ ಅನ್ನು ಆನಂದ್ ಬರೋಬ್ಬರಿ ಆರು ಬಾರಿ(1997, 1998, 2003, 2004, 2007, 2008) ಗೆದ್ದ ವಿಶ್ವದ ಮೂರನೇ ಅಗ್ರಗಣ್ಯರಾಗಿದ್ದಾರೆ. 2000ರಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆನಂದ್ ಕುಟುಂಬ: ವಿಶ್ವನಾಥನ್ ಆನಂದ್ ಅವರದ್ದು ಪುಟ್ಟ ತುಂಬು ಕುಟುಂಬವಾಗಿದ್ದು, ಈಗ ಎಲ್ಲರೂ ದೇಶ-ವಿದೇಶಗಳಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪದವಿ ಮುಗಿಸಿದ ವಿಶ್ವನಾಥನ್​ರ ತಂದೆ ವಿಶ್ವನಾಥನ್ ಅಯ್ಯರ್ ಸದರ್ನ್ ರೈಲ್ವೇಸ್​ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರೆ, ತಾಯಿ ಮನೆಯೊಡತಿಯಾಗಿದ್ದರು. ಸಹೋದರ ಶಿವಕುಮಾರ್ ಈಗ ಭಾರತದಲ್ಲೆ ಉದ್ಯಮಿಯಾಗಿದ್ದರೆ, ಸಹೋದರಿಯ ಅನುರಾಧಾ ಅಮೆರಿಕದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1996ರಲ್ಲಿ ಅರುಣಾ ಅವರನ್ನು ವರಿಸಿದ ವಿಶ್ವನಾಥನ್ ದಂಪತಿಗೆ ಈಗ 6 ವರ್ಷದ ಅಖಿಲ್ ಆನಂದ್ ಎಂಬ ಪುತ್ರನಿದ್ದಾನೆ. ಚೆಸ್ ಜತೆಗೆ ವಿಶ್ವನಾಥನ್ ಹವ್ಯಾಸವಾಗಿ ಕ್ರಿಕೆಟ್ ನೋಡುತ್ತಾರೆ. ಜತೆಗೆ ಸ್ವಿಮ್ಮಿಂಗ್, ಪುಸ್ತಕ ಓದುವುದು ಇವರ ಆಸಕ್ತಿದಾಯಕ ವಿಚಾರ.

(ಲೇಖಕರು ವಿಜಯವಾಣಿಯ ಕ್ರೀಡಾ ವರದಿಗಾರ)

[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top