Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ರ್ಯಾಂಡ್ ಎಂಬ ರಕ್ಕಸನ ಸಂಹಾರ

Thursday, 04.05.2017, 3:00 AM       No Comments

ಭಾರತೀಯರೆಂದರೆ ತಿರಸ್ಕಾರದಿಂದ ನೋಡುತ್ತಿದ್ದ ರ್ಯಾಂಡ್ ಎಂಬ ಬ್ರಿಟಿಷ್ ಅಧಿಕಾರಿ, ಸರ್ವಾಧಿಕಾರಿಯಂತೆ ಮೆರೆಯುತ್ತ ಮಿಲಿಟರಿ ಅಧಿಕಾರಿಗಳ ಸಹಾಯದಿಂದ ಜನರ ಮೇಲೆ ದೌರ್ಜನ್ಯ ವೆಸಗುತ್ತಾನೆ, ಧಾರ್ವಿುಕ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಾನೆ. ನಿಷ್ಠಾವಂತ ಧರ್ವಿುಷ್ಠರೆನಿಸಿದ್ದ ಚಾಪೇಕರ್ ಸೋದರರು ಇದರಿಂದ ಕೆರಳಿ ರ್ದಪಿಷ್ಟ ಬ್ರಿಟಿಷರಿಗೆ ಪಾಠ ಕಲಿಸಿದ್ದು ರೋಚಕ ಘಟನೆ.

 ಬ್ರಿಟಿಷರ ಜಂಘಾಬಲ ಉಡುಗಿಸಿದ ಚಾಪೇಕರ್ ಸೋದರರು, ಅವರ ಬಾಲಬಡುಕರಿಗೆ ಮತ್ತು ಕ್ರೖೆಸ್ತ ಮಿಷನರಿಗಳಿಗೂ ನಡುಕ ಹುಟ್ಟಿಸುತ್ತಿದ್ದರು. ಲೋಕಮಾನ್ಯ ತಿಲಕರನ್ನು ಗುರುವಿನಂತೆ ಕಾಣುತ್ತಿದ್ದ ಈ ಸೋದರರು ಶಿವಾಜಿ ಜಯಂತಿ, ಗಣೇಶೋತ್ಸವಗಳಲ್ಲಿ ತಾವೇ ರಚಿಸಿದ ಉದ್ಬೋಧಕ ಗೀತೆಗಳನ್ನು ಸ್ಪೂರ್ತಿಪ್ರದವಾಗಿ ಹಾಡುತ್ತಿದ್ದರು. ಇದು ಎಂಥ ಹೇಡಿಯಲ್ಲೂ ಪೌರುಷ ಉಕ್ಕಿಸುತ್ತಿತ್ತು ಎಂಬ ಸಂಗತಿಗಳನ್ನು ಹಿಂದಿನ ಕಂತಿನಲ್ಲಿ ಅರಿತೆವು.

‘ಶಿವಾಜಿಯ ಸ್ವಗತ’ ಎಂಬ ಕವನದಲ್ಲಿ ಹನ್ನೆರಡು ಪದ್ಯಗಳಿದ್ದು ಮೊದಲನೆಯದರಲ್ಲಿ ಶಿವಾಜಿ ಹೀಗನ್ನುತ್ತಾನೆ: ‘ನಾನು ವಿಶ್ರಾಂತಿಯಲ್ಲಿರುವಾಗ ನನ್ನನ್ನು ಕರೆಯುತ್ತಿರುವವರು ಯಾರು? ನಾನು ದುಷ್ಟರನ್ನು ನಾಶಮಾಡಿ ಜನರು ಬದುಕಲು ದೇಶವನ್ನು ಅನುಕೂಲಕರವನ್ನಾಗಿ ಮಾಡಿದೆ. ಬಹುಕಾಲದ ಹಿಂದೆ ಕಳೆದುಕೊಂಡಿದ್ದ ಸ್ವರಾಜ್ಯವನ್ನು ಹಿಂದಕ್ಕೆ ಪಡೆದು ದೇಶವನ್ನು ಪುನರುಜ್ಜೀವನಗೊಳಿಸಿದೆ. ನಮ್ಮ ಶ್ರೇಷ್ಠಧರ್ಮವನ್ನು ಅಳಿವಿನಂಚಿನಿಂದ ರಕ್ಷಿಸಿ ಮತ್ತೆ ಧರ್ಮರಾಜ್ಯವನ್ನು ಸ್ಥಾಪಿಸಿದೆ. ಓ! ಎಷ್ಟು ಕಷ್ಟಕರವಾದ ಕಾರ್ಯ ಅದಾಗಿತ್ತು! ಎಷ್ಟು ಬಳಲಿಹೋದೆ! ಮತ್ತೆ ಇದೇನು ಕರೆ ನನ್ನ ಪ್ರಿಯ ದೇಶಬಾಂಧವರೇ! ನನ್ನನ್ನು ಕರೆಯುವಂಥ ಮತ್ತಾವ ಅಪಾಯ ಮತ್ತೊಮ್ಮೆ ನಮಗೊದಗಿ ಬಂದಿದೆ?’.

ಇದೇ ಧಾಟಿಯಲ್ಲಿ ಭಾವನಾತ್ಮಕವಾಗಿ ರೊಚ್ಚಿಗೆಬ್ಬಿಸುವ ರೀತಿಯಲ್ಲಿ ಸಭೆಗಳಲ್ಲಿ ಹಾಡಲಾಗುತ್ತಿತ್ತು. ‘ಕೇಸರಿ’ ಪತ್ರಿಕೆಯಲ್ಲೂ ಇವುಗಳ ಮುದ್ರಣವಾಯಿತು. ‘ವ್ಯಾಲೆಂಟೈನ್ ಚಿರೋಲ್’ ಲೇಖನದಲ್ಲಿ ಮತ್ತು ರೌಲಟ್ ಆಕ್ಟ್ ವರದಿಯಲ್ಲಿ ಈ ಕವನಗಳನ್ನು ಉದಾಹರಿಸಿ, ‘ಇವು ತಿಲಕ್ ಮತ್ತು ಅವರ ಹಿಂಬಾಲಕರ ಉದ್ದೇಶ, ಆಕಾಂಕ್ಷೆಗಳ ಪ್ರತಿಬಿಂಬವಾಗಿವೆ’ ಎಂದು ಉಲ್ಲೇಖಿಸಲಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಅತಿಘೊರ ಕ್ಷಾಮ ತಲೆದೋರಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸಾವನ್ನಪ್ಪತೊಡಗಿದರು.

ಪ್ಲೇಗ್ ಮಾರಿಯ ಪುರಪ್ರವೇಶ: 1896ರ ಅಕ್ಟೋಬರ್ ತಿಂಗಳಲ್ಲಿ ಇನ್ನೊಂದು ಪುಕಾರು ಶುರುವಾಗಿ ಮತ್ತೊಂದು ಘೊರ ಅಧ್ಯಾಯಕ್ಕೆ ನಾಂದಿಹಾಡಿತು. ಯಾವುದೋ ಸಾಂಕ್ರಾಮಿಕ ರೋಗವೊಂದು ತಲೆಹಾಕಿ ಲಕ್ಷಾಂತರ ಜನ ಸಾಯಲಾರಂಭಿಸಿದರು. ‘ಇಲಿಗಳ ಶಾಪ’ ಎಂದು ಇಂಗ್ಲಿಷರು ಕರೆಯುತ್ತಿದ್ದ ಈ ರೋಗ ಭಯಂಕರ ಪ್ಲೇಗ್ ಮಾರಿಯಾಗಿತ್ತು. ಅದು ಪುಣೆಗೂ ಬಂದು ತಲುಪಿತು. ಆ ವೇಳೆಗೆ ತಿಲಕರು ಮಿಕ್ಕ ಮುಂದಾಳುಗಳನ್ನು ಸೇರಿಸಿಕೊಂಡು ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಪ್ರಹಾರದ ಮೇಲೆ ಪ್ರಹಾರ ಮಾಡಲಾರಂಭಿಸಿದರು. ಆಗ ಆಂಗ್ಲ ಆಡಳಿತ ‘ದಿ ಎಪಿಡಮಿಕ್ ಡಿಸೀಸಸ್ ಆಕ್ಟ್’ ಎಂಬ ಕಾನೂನನ್ನು ಮಾಡಿ ಪುಣೆಯ ಸ್ಥಳೀಯ ಅಧಿಕಾರಿಗಳಿಗೆ ಸಮಸ್ತ ಅಧಿಕಾರವನ್ನು ವರ್ಗಾಯಿಸಿತು. ಮೊದಲೇ ಕ್ಷಾಮ, ಪ್ಲೇಗ್​ನಿಂದ ಕಂಗಾಲಾಗಿದ್ದ ಪುಣೆಯ ಜನರ ಮೇಲೆ, ಪ್ಲೇಗ್ ಸಾಂಕ್ರಾಮಿಕವನ್ನು ಎದುರಿಸುವ ನೆಪದಲ್ಲಿ ಪ್ಲೇಗ್ ಕಮಿಷನರ್ ಒಬ್ಬನನ್ನು ನೇಮಿಸಲಾಯಿತು. ಅವನೇ ಖಳನಾಯಕ ವಾಲ್ಟರ್ ಚಾರ್ಲ್ಸ್ ರ್ಯಾಂಡ್! ಸತಾರದ ಸಹಾಯಕ ಜಿಲ್ಲಾ ಕಲೆಕ್ಟರ್ ಆಗಿದ್ದ ಈ ದುಷ್ಟ 1897ರ ಫೆಬ್ರವರಿ 17ರಂದು ಪ್ಲೇಗ್ ಕಮಿಷನರ್ ಆಗಿ ಪುಣೆಗೆ ಕಾಲಿಟ್ಟ. ಅಲ್ಲಿಂದ ಪುಣೆಯ ಇತಿಹಾಸದ ಕರಾಳ ಅಧ್ಯಾಯವೊಂದು ಶುರುವಾಯಿತು.

ಅಮಾನುಷ ವ್ಯಕ್ತಿಯಾದ ರ್ಯಾಂಡ್​ಗೆ ಭಾರತೀಯರೆಂದರೆ ತಿರಸ್ಕಾರ. ಅವನು ಪುಣೆಯ ನಾಗರಿಕರನ್ನು ದಂಡಿಸಲಾರಂಭಿಸಿದ. ಅವನೇ ನಿರಂಕುಶ ಸರ್ವಾಧಿಕಾರಿಯಾದ. ಮಿಲಿಟರಿ ಅಧಿಕಾರಿಗಳ ಸಹಾಯದಿಂದ ಅವನು ನಡೆಸಿದ ದಾಂಧಲೆಗೆ ಪುಣೆ ನಗರ ನಡುಗಿಹೋಯಿತು. ಪ್ಲೇಗ್ ಸೋಂಕಿದೆ ಎಂದು ಹೇಳುತ್ತಾ ಅವನ ಸಿಪಾಯಿಗಳು ಪುಣೆಯ ಮನೆಮನೆಗೂ ನುಗ್ಗಿ ಹುಯಿಲೆಬ್ಬಿಸಿ ದಾಂಧಲೆ ಮಾಡಿದರು. ಬೂಟುಕಾಲುಗಳಲ್ಲಿ ದೇವರಮನೆ, ಅಡುಗೆಮನೆಗಳನ್ನು ಹೊಕ್ಕರು. ಇಲಿಗಳನ್ನು ಹುಡುಕುವ ನೆಪವೊಡ್ಡಿ ದೇವತಾಮೂರ್ತಿಗಳನ್ನು, ಪೂಜಾಸಾಮಗ್ರಿಗಳನ್ನು ರಸ್ತೆಗೆಸೆದರು. ಬಡವರು, ಬಲ್ಲಿದರು, ಸಜ್ಜನರು, ಮುದುಕರು, ಮಕ್ಕಳು, ಮಹಿಳೆಯರು ಎಂಬ ವ್ಯತ್ಯಾಸವನ್ನೆಣಿಸದೆ ಎಲ್ಲರ ಮೇಲೂ ದಂಡಪ್ರಯೋಗ ಮಾಡುತ್ತಾ ನೃಶಂಸರಾಗಿ ವರ್ತಿಸತೊಡಗಿದರು. ಪ್ಲೇಗ್ ಸೋಂಕಿದೆ ಎಂದು ನೆಪ ಹೇಳಿ ಆರೋಗ್ಯವಂತರನ್ನು ಪುಣೆಯಾಚೆಯ ಪ್ಲೇಗ್ ಶಿಬಿರಗಳಿಗೆ ದೂಡಿದರು. ‘ರ್ಯಾಂಡ್​ಷಾಹಿ’ ಎಂಬ ಹೆಸರನ್ನು ಗಳಿಸಿದ ಈ ವಿಕೃತಮನಸ್ಕನ ದಬ್ಬಾಳಿಕೆ ಪುರಾಣಕಾಲದ ರಾಕ್ಷಸರನ್ನೂ ಮೀರಿಸಿತು.

ಚಾಪೇಕರ್ ಸೋದರರು ನಿಷ್ಠಾವಂತ ಧರ್ವಿುಷ್ಠರು. ಸಮರ್ಥ ರಾಮದಾಸರು ಅವರಿಗೆ ಪ್ರೇರಕರು. ಈಗ ಅವರ ಧರ್ಮಕ್ಕೆ ಆಂಗ್ಲ ಹಾಗೂ ಈಸಾಯಿಗಳ ಪಿಡುಗು ಬಡಿದುಕೊಂಡಿತ್ತು. ಹೀಗಾಗಿ ಆಂಗ್ಲರೆಂದರೆ ಈ ಸೋದರರು ನಖಶಿಖಾಂತ ಉರಿಯುತ್ತಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಪ್ಲೇಗ್ ಪಿಡುಗು ವಕ್ಕರಿಸಿಕೊಂಡು, ಅದನ್ನು ನಿವಾರಿಸುವ ನೆಪದಲ್ಲಿ ಬಂದ ಪ್ಲೇಗ್ ಕಮಿಷನರ್ ರ್ಯಾಂಡ್ ಕ್ರೂರವಾಗಿ ನಡೆದುಕೊಂಡ. ಅವನಿಗೆ ಕರ್ನಲ್ ಫಿಲಿಪ್ಸ್ ಮತ್ತು ಕರ್ನಲ್ ಬಿವರಿಜ್ ಎಂಬಿಬ್ಬರು ಸೇನಾಧಿಕಾರಿಗಳ ನೆರವು ಬೇರೆ.

ಕಾರ್ಯಕ್ಕೆ ಕಟ್ಟಿದರು ಕಂಕಣ: ಇದನ್ನೆಲ್ಲ ನೋಡುತ್ತ ರೋಸಿಹೋದ ಚಾಪೇಕರ್ ಸೋದರರು ತಮ್ಮ ಗುರು ತಿಲಕರನ್ನು ಕಾಣುತ್ತಾರೆ, ನಡೆಯುತ್ತಿದ್ದ ಘೊರ ಘಟನಾವಳಿಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಇಡೀ ಸಮಾಜವೇ ನಿರ್ವೀರ್ಯವಾಗಿದೆಯಲ್ಲ ಎಂದು ಪರಿತಪಿಸುತ್ತಾರೆ. ಆಗ ತಿಲಕರು, ‘ಇನ್ನೊಬ್ಬರನ್ನು ಹೇಡಿಗಳೆಂದು ಕರೆಯುವುದರಿಂದ ಪರಿಹಾರ ಸಿಗುವುದಿಲ್ಲ. ನಿಮ್ಮಂಥವರು ಕ್ರಿಯಾಶೀಲರಾಗಿದ್ದರೆ ಈ ರ್ಯಾಂಡ್​ಷಾಹಿ ಬರುತ್ತಿತ್ತೆ? ಅವನ ಆಟ ಪುಣೆಯಲ್ಲಿ ನಡೆಯುತ್ತಿತ್ತೆ?’ ಎಂದು ಪ್ರಶ್ನಿಸುತ್ತಾರೆ. ಆ ಸೋದರರನ್ನು ಕಾಡುತ್ತಿದ್ದ ಪ್ರಶ್ನೆಗೆ ತಿಲಕರಿಂದ ಉತ್ತರ ದೊರೆಯುತ್ತದೆ. ಗುರಿ ನಿಶ್ಚಯಗೊಳ್ಳುತ್ತದೆ. ಈ ಸೋದರರು ಮುಂದಿನ ಕೆಲಸಕ್ಕೆ ಕಂಕಣ ಕಟ್ಟುತ್ತಾರೆ. ಹಲವು ಪ್ರಯತ್ನಗಳನ್ನು ನಡೆಸಿದರೂ ಅವರ ಬಲಿ ಕೈಗೆ ಸಿಗುವುದಿಲ್ಲ. ಅಂತಿಮವಾಗಿ ದಾಮೋದರನ ಮುಂದಾಳ್ತನದಲ್ಲಿ ಇನ್ನೊಂದು ಯೋಜನೆ ಸಿದ್ಧವಾಗುತ್ತದೆ.

1897 ಜೂನ್ 22ರ ಮಂಗಳವಾರ ತಮ್ಮ ಕಾರ್ಯಕ್ಕೆ ಪ್ರಶಸ್ತವಾದ ಮುಹೂರ್ತವೆಂದು ನಿಶ್ಚಯಿಸುವ ದಾಮೋದರ ಅಂದಿನ ಕಾರ್ಯಾಚರಣೆಯ ರೂಪರೇಷೆಗಳನ್ನು ತಯಾರಿಸುತ್ತಾನೆ. ಅಂದೇ ವಿಕ್ಟೋರಿಯಾ ಮಹಾರಾಣಿಯ ಪಟ್ಟಾಭಿಷೇಕದ ವಜ್ರಮಹೋತ್ಸವದ ದಿನ. ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಎಲ್ಲೆಡೆ ಆ ಸಂದರ್ಭದ ಸಂಭ್ರಮಾಚರಣೆ. ಪುಣೆಯಲ್ಲೂ ಅದ್ದೂರಿಯ ಸಿದ್ಧತೆ. ಒಂದು ಕಡೆ ಪುಣೆಯ ನಾಗರಿಕರ ಮಾರಣಹೋಮ ನಡೆಯುತ್ತ ಅವರು ಹುಳುಗಳಂತೆ ಸತ್ತುಬೀಳುತ್ತಿದ್ದರೆ, ಇಡೀ ಪುಣೆ ಸಾವಿನ ಮನೆಯಾಗಿದ್ದರೆ, ಇನ್ನೊಂದು ಕಡೆ ವಿಕ್ಟೋರಿಯಾಳ ಹೆಸರಿನಲ್ಲಿ ಸಂಭ್ರಮದ ಮೇಜವಾನಿ! ಚಾಪೇಕರರ ದ್ವೇಷಾಗ್ನಿಗೆ ಆಜ್ಯ ಸುರಿದಂತಾಯಿತು.

ವಜ್ರಮಹೋತ್ಸವ ಕಾರ್ಯಕ್ರಮವನ್ನು ಪುಣೆಯ ಗಣೇಶ್​ಖಿಂಡ್ ಎಂಬ ಪ್ರದೇಶದಲ್ಲಿದ್ದ ಗವರ್ನ್​ವೆುಂಟ್ ಹೌಸ್​ನಲ್ಲಿ, ಬಾಜಾ-ಬಜಂತ್ರಿ, ಬಾಣ-ಬಿರುಸುಗಳ ವೈಭವ, ಸುಗ್ರಾಸ ಭೋಜನ, ಮತ್ತೇರಿಸುವ ಪಾನಗೋಷ್ಠಿ, ನೃತ್ಯಕೂಟಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ಮುಂಬಯಿ ಪ್ರೆಸಿಡೆನ್ಸಿಯ ಗವರ್ನರ್ ಸ್ಯಾಂಡ್ ಹರ್ಸ್ಟ್ ವಿಶೇಷ ಆಸ್ಥೆ ವಹಿಸಿದ್ದ.

ಇತ್ತ ಚಾಪೇಕರರೂ ತಮ್ಮ ಕೆಲಸಕ್ಕೆ ಪೂರ್ವಸಿದ್ಧತೆ ಮಾಡಿಕೊಂಡರು. ಇಡೀ ದಿವಸ ದಾಮೋದರ ತನ್ನ ಇಷ್ಟದೇವತೆಯ ಪೂಜೆಯಲ್ಲಿ ನಿರತನಾದ. ಪೂರ್ಣ ಉಪವಾಸ! ಬಾಲಕೃಷ್ಣ, ವಾಸುದೇವರೂ ಅಣ್ಣನನ್ನೇ ಅನುಸರಿಸುತ್ತಾರೆ. ಕತ್ತಲಾದ ಮೇಲೆ ಪಿಸ್ತೂಲು, ಕತ್ತಿ ಮುಂತಾದ ಶಸ್ತ್ರಗಳೊಂದಿಗೆ ಹೊರಡಲು ತಯಾರಾಗುತ್ತಾರೆ. ಮಕ್ಕಳ ಚಟುವಟಿಕೆಯನ್ನು ಸ್ಥಿತಪ್ರಜ್ಞನಂತೆ, ಮೂಕಪ್ರೇಕ್ಷಕರಾಗಿ ಗಮನಿಸುತ್ತಿದ್ದ ತಂದೆ ತಾಯಿಗೆ ನಮಿಸಿ ಮೌನವಾಗಿ ಮನೆ ತೊರೆಯುತ್ತಾರೆ. ಅವರೇನು ಮಾಡಲು ಹೊರಟಿದ್ದಾರೋ ಆ ವೃದ್ಧ ದಂಪತಿಗೇನು ಗೊತ್ತು!

ಇಂಗ್ಲಿಷ್ ಆಫೀಸರುಗಳ ಬಟ್ಲರ್​ನಂತೆ ವೇಷ ಧರಿಸಿದ್ದ ಹದಿನೆಂಟು ವರ್ಷದ ಕಿಶೋರ ವಾಸುದೇವ ಗವರ್ನ್​ವೆುಂಟ್ ಹೌಸ್ ಬಳಿ ಹೋಗಿ ಯಾರೋ ಇಂಗ್ಲಿಷ್ ಆಫೀಸರ್​ನ ಅನುಚರನೋ ಎಂಬಂತೆ ಅವರೊಂದಿಗೆ ಸೇರಿಕೊಂಡ. ದಾಮೋದರ, ಬಾಲಕೃಷ್ಣರು ಬಂಗಲೆಯ ಗೇಟ್ ಸಮೀಪದಲ್ಲಿ ಪೊದೆಗಳಲ್ಲಿ ಅವಿತಿಟ್ಟುಕೊಂಡು ವಾಸುದೇವನ ಸೂಚನೆಗಾಗಿ ಕಾಯುತ್ತಿದ್ದರು.

ಪಾರ್ಟಿ ಮುಗಿದಿದ್ದು ರಾತ್ರಿ ಹನ್ನೊಂದರ ಸುಮಾರಿನಲ್ಲಿ. ಗವರ್ನ್ ಮೆಂಟ್ ಹೌಸ್​ನಿಂದ ಕೋಚ್ ಗಾಡಿಗಳು ಒಂದರ ಹಿಂದೆ ಒಂದು ಹೊರಬರಲಾರಂಭಿಸಿದವು. ರ್ಯಾಂಡ್​ನ ಕೋಚ್​ನಂತೆಯೇ ಕಾಣುತ್ತಿದ್ದ ಇನ್ನೊಂದು ಕೋಚ್ ಇತ್ತು. ಅದರಲ್ಲಿ ಲೆಫ್ಟಿನೆಂಟ್ ಆಯರ್ಸ್ಟ್ ಎಂಬುವನು ಪತ್ನೀಸಮೇತನಾಗಿ ಕುಳಿತ. ಅದರ ಚಾಲಕ ಕುದುರೆಗೆ ಚಾಟಿಯಿಂದ ಹೊಡೆದು ಗಾಡಿಯನ್ನು ಮುಂದಕ್ಕೆ ಚಲಿಸಿದ. ಅದು ಸುಮಾರು ಐದುನೂರು ಗಜ ಕ್ರಮಿಸಿರಬೇಕು…. ಅಷ್ಟರಲ್ಲಿ ಅದು ರ್ಯಾಂಡನ ಗಾಡಿಯೆಂದೇ ತಪ್ಪಾಗಿ ಗ್ರಹಿಸಿದ ಬಾಲಕೃಷ್ಣ ಪಕ್ಕದಲ್ಲಿದ್ದ ಸಹಕಾರಿ ಮಹಾದೇವ ರಾನಡೆಯಿಂದ ಪಿಸ್ತೂಲನ್ನು ಕಸಿದುಕೊಂಡು ಗಾಡಿಯನ್ನು ಹಿಂದಿನಿಂದ ಹತ್ತಿ ಆಯರ್ಸ್ಟ್​ನ ತಲೆಗೆ ಅತಿ ಸಮೀಪದಿಂದ ಗುಂಡು ಹಾರಿಸಿ ಕತ್ತಲೆಯಲ್ಲಿ ಲೀನವಾದ. ಒಮ್ಮೆಲೆ ಆಯರ್ಸ್ಟ್ ಕಿಟಾರನೆ ಕಿರುಚಿಕೊಂಡ! ‘ಓ… ಯಾರೋ ನನ್ನನ್ನು ಷೂಟ್ ಮಾಡಿದ್ದಾರೆ… ಗುಂಡೇಟು ಬಿದ್ದಿದೆ’. ಆಯರ್ಸ್ಟ್​ನ ಹೆಂಡತಿ ಗಾಡಿಯನ್ನು ನಿಲ್ಲಿಸುವಂತೆ ಕೂಗಿಕೊಂಡಳು. ಗುಂಡಿನ ಸದ್ದಿಗೋ ಏನೋ ಕುದುರೆ ನಾಗಾಲೋಟದಲ್ಲಿ ಓಡಲಾರಂಭಿಸಿತು.

ಆಗ ದಾಮೋದರನಿಗೆ ಕೇಳಿಬಂತು ವಾಸುದೇವನ ಎಚ್ಚರಿಕೆಯ ಸೂಚನೆ ‘ಗೋಂದ್ಯಾ ಆಲಾ ರೇ!’. ಮರುಕ್ಷಣವೇ ದಾಮೋದರ ಸೊಂಟದಲ್ಲಿ ಸಿಲುಕಿಸಿಕೊಂಡಿದ್ದ ಪಿಸ್ತೂಲನ್ನು ಹೊರತೆಗೆದು ರ್ಯಾಂಡ್​ನ ಗಾಡಿಯನ್ನು ಅಟ್ಟಿಸಿಕೊಂಡು ಹೋಗಿ ಹಿಂಬದಿಯಿಂದ ಗಾಡಿಯ ಮೇಲೆ ಹತ್ತಿ ರ್ಯಾಂಡ್​ನ ಬೆನ್ನಿಗೆ ಗುಂಡುಹಾರಿಸಿ ತಾನು ಕೆಳಕ್ಕೆ ಹಾರಿ ಕತ್ತಲಲ್ಲಿ ಸೇರಿಹೋದ. ಎರಡೂ ಗಾಡಿಗಳು ನಿಂತವು. ಜನ ಸೇರಿದರು. ಆಯರ್ಸ್ಟ್ ನಿಶ್ಚೇಷ್ಟಿತನಾಗಿ ಬಿದ್ದಿದ್ದ. ಅವನ ಹೆಂಡತಿ ಜ್ಞಾನತಪ್ಪಿ ಬಿದ್ದಿದ್ದಳು. ರ್ಯಾಂಡ್ ಪ್ರಜ್ಞಾಶೂನ್ಯನಾಗಿ ರಕ್ತಸಿಕ್ತನಾಗಿ ಗಾಡಿಯ ಹಿಂಬದಿಯ ಸೀಟ್​ನಲ್ಲಿ ಕುಸಿದಿದ್ದ.

ಪುಣೆಯ ಜನ ಕುಣಿದು ಕುಪ್ಪಳಿಸಿದರು: ಚಾಪೇಕರ್ ಸೋದರರು ವಿಕ್ಟೋರಿಯಾ ರಾಣಿಗೆ ಅವಳ ಪಟ್ಟಾಭಿಷೇಕದ ವಜ್ರಮಹೋತ್ಸವದ ದಿವಸ ಒಳ್ಳೆಯ ಉಡುಗೊರೆಯನ್ನೇ ನೀಡಿದ್ದರು. ರಾತ್ರಿಯೇ ಈ ಸುದ್ದಿ ಪುಣೆ ನಗರದಲ್ಲಿ ಹಬ್ಬಲಾರಂಭಿಸಿತು. ಬೆಳಗ್ಗೆ ಎಲ್ಲರ ಬಾಯಲ್ಲೂ ಇದೇ ಸುದ್ದಿ. ಎಲ್ಲರೂ ‘ಪಾತಕಿಗೆ ಒಳ್ಳೆಯ ಶಿಕ್ಷೆಯಾಯಿತು’ ಎಂದು ಪರಸ್ಪರ ಮಾತನಾಡಿಕೊಂಡರು.

ಆಯರ್ಸ್ಟ್ ಸ್ಥಳದಲ್ಲಿಯೇ ಮೃತನಾದ. ರ್ಯಾಂಡ್ ಆಸ್ಪತ್ರೆಯಲ್ಲಿ ನರಳಾಡುತ್ತ 10-12 ದಿವಸಗಳ ಅನಂತರ ಕೊನೆಯುಸಿರೆಳೆದ. ಪುಣೆ ನಗರದ ಸುತ್ತ ಸರ್ಪಗಾವಲು. ನಗರದ ತುಂಬ ಗೂಢಚಾರರು. ಗೂಢಚಾರ ವಿಭಾಗದ ಮುಖ್ಯಸ್ಥ ಬ್ರೂಯಿನ್ ಎಂಬುವನಿಗೆ ಹಂತಕರನ್ನು ಹುಡುಕಿ ಬಂಧಿಸುವ ಜವಾಬ್ದಾರಿ. ಸುಳಿವು ಕೊಟ್ಟವರಿಗೆ ಅಥವಾ ಬಂಧನಕ್ಕೆ ಸಹಾಯ ಮಾಡಿದವರಿಗೆ 20,000 ರೂ.ಗಳ ಬಹುಮಾನದ ಘೊಷಣೆ. ಇಷ್ಟಾದರೂ ಹಂತಕರ ಪತ್ತೆ ಆಗಲಿಲ್ಲ.

ಜೂನ್ 28ರಂದು ಪುಣೆಯ ಗಣ್ಯರ ಸಭೆಯನ್ನು ಕರೆದ ಜಿಲ್ಲಾ ಕಲೆಕ್ಟರ್ ಮಿಸ್ಟರ್ ಲ್ಯಾಂಬ್, ಹಂತಕರನ್ನು ಬಂಧಿಸುವುದರಲ್ಲಿ ಸಹಕರಿಸದಿದ್ದರೆ ಎಲ್ಲರನ್ನೂ ಮಟ್ಟಹಾಕುವುದಾಗಿ ಬೆದರಿಸಿದ. ಇದಕ್ಕೆ ಮೂಲಕಾರಣ ಶಿವಾಜಿ ಉತ್ಸವ, ಗಣೇಶೋತ್ಸವಗಳೇ ಎಂದೂ ಹೇಳಿದ. ಇದರಿಂದ ಬ್ರಿಟಿಷ್ ಸರ್ಕಾರದ ಕೂದಲು ಕೂಡ ಕೊಂಕುವುದಿಲ್ಲ ಎಂದು ಬೀಗಿದ.

ತಿಲಕರು ‘ಕೇಸರಿ’ಯಲ್ಲಿ ತೀಕ್ಷ್ಣ ಸಂಪಾದಕೀಯಗಳನ್ನು, ಲೇಖನಗಳನ್ನು ಬರೆದು ಜನರಲ್ಲಿ ಧೈರ್ಯ ತುಂಬಿದರು. ತಮ್ಮನ್ನು ಭೇಟಿಮಾಡಿದ ಚಾಪೇಕರ್ ಸೋದರರ ಬೆನ್ನುತಟ್ಟಿ ‘ಭಲೆ ಭಲೆ! ಗಂಡಸರೆಂದರೆ ನೀವೇನೇ’ ಎಂದು ಭಾವಪೂರ್ಣರಾಗಿ ಶ್ಲಾಘಿಸಿದರು. ಚಾಪೇಕರ್ ಸೋದರರಿಗೆ ಆ ಮಾತುಗಳೇ ಸಾಕಾಗಿತ್ತು. ಅವರ ಎದೆ ಉಬ್ಬಿತು. ಕಂಗಳಿಂದ ಅಶ್ರುಗಳು ಉದುರಿದವು. ತಿಲಕರು ಸಂಪಾದಕೀಯದಲ್ಲಿ ಸರ್ಕಾರದ ನಿಲುವುಗಳನ್ನು ಖಂಡಿಸುತ್ತ, ‘ಸರ್ಕಾರದ ಮಿದುಳು ಸರಿಯಾದ ಸ್ಥಳದಲ್ಲಿದೆಯೇ?’ ಎಂದು ಕುಟುಕಿದರು.

‘ಲಂಡನ್ ಟೈಮ್್ಸ’ ಪತ್ರಿಕೆ ಸುದೀರ್ಘ ಲೇಖನ ಬರೆದು ‘1857ರ ದಂಗೆಯಂತೆ ಮುಂದೆ ಬರಲಿರುವ ದೇಶದಾದ್ಯಂತದ ಮತ್ತೊಂದು ಬಂಡಾಯಕ್ಕೆ ಇದು ಮುನ್ಸೂಚನೆಯಾಗಿದೆ. ಪೇಶ್ವೆ ರಾಜ್ಯದ ಪುನರ್​ಸ್ಥಾಪನೆಯ ಕನಸು ಕಾಣುತ್ತಿರುವ ಪುಣೆಯ ಬ್ರಾಹ್ಮಣರೇ ಇದರ ಹಿಂದಿದ್ದಾರೆ. ಇವರನ್ನೆಲ್ಲ ಸಾಮೂಹಿಕವಾಗಿ ಗಲ್ಲಿಗೇರಿಸಬೇಕು!’ ಎಂದು ವಿಷಕಾರಿತು. ಈ ಕಾರ್ಯದ ಹಿಂದಿರುವ ಶಕ್ತಿ ಲೋಕಮಾನ್ಯ ತಿಲಕರೇ ಎಂಬ ನಿರ್ಣಯಕ್ಕೆ ಬಂದ ಸರ್ಕಾರ 1897ರ ಜುಲೈ 27ರಂದು ಮುಂಬಯಿಯಲ್ಲಿ ಅವರನ್ನು ಬಂಧಿಸಿತು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top