Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ರೋಜರ್ ಫೆಡರರ್​ಗೆ ಗ್ರಾಂಡ್ ಸ್ಲಾಂ ನಂ.19

Monday, 17.07.2017, 3:01 AM       No Comments

ಲಂಡನ್: ತರುಣ ಆಟಗಾರರನ್ನೇ ನಾಚಿಸುವಂಥ ನಿರ್ವಹಣೆ ತೋರಿದ ಟೆನಿಸ್​ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ರೋಜರ್ ಫೆಡರರ್ ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಹಾಗೂ ದಾಖಲೆಯ 8ನೇ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 35ನೇ ವರ್ಷದಲ್ಲಿ ಆಲ್ ಇಂಗ್ಲೆಂಡ್ ಕ್ಲಬ್​ನ ಟ್ರೋಫಿಯನ್ನು ಜಯಿಸುವ ಮೂಲಕ ಮುಕ್ತ ಯುಗದ ಟೆನಿಸ್​ನಲ್ಲಿ ವಿಂಬಲ್ಡನ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎನ್ನುವ ವಿರಳ ದಾಖಲೆಯನ್ನೂ ಬರೆದರು. 1975ರಲ್ಲಿ ಆರ್ಥರ್ ಆಶ್, 31ನೇ ವರ್ಷದಲ್ಲಿ ವಿಂಬಲ್ಡನ್ ಗೆದ್ದಿದ್ದು ಈವರೆಗಿನ ದಾಖಲೆ ಎನಿಸಿತ್ತು.

ಭಾನುವಾರ ಸೆಂಟರ್ ಕೋರ್ಟ್​ನಲ್ಲಿ ನಡೆದ ಒಂದು ಗಂಟೆ, 41 ನಿಮಿಷಗಳ ನೀರಸ ಫೈನಲ್ ಸೆಣಸಾಟದಲ್ಲಿ ವಿಶ್ವ ನಂ.3 ಫೆಡರರ್ ಕ್ರೋಷಿಯಾದ ಮರಿನ್ ಸಿಲಿಕ್​ರನ್ನು 6-3, 6-1, 6-4 ರಿಂದ ಸೋಲಿಸಿದರು. ಅದರೊಂದಿಗೆ ಪುರುಷರ ವಿಭಾಗದಲ್ಲಿ ಅತ್ಯಧಿಕ ವಿಂಬಲ್ಡನ್ ಗೆದ್ದ ಏಕೈಕ ಸಾಧಕರೆನಿಸಿಕೊಂಡರು. ವೃತ್ತಿಜೀವನದ 11ನೇ ವಿಂಬಲ್ಡನ್ ಪ್ರಯತ್ನದಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಮಹೋನ್ನತ ಕನಸಿನೊಂದಿಗೆ ಕಣಕ್ಕಿಳಿದ ಮಾಜಿ ಯುಎಸ್ ಓಪನ್ ಚಾಂಪಿಯನ್ ಸಿಲಿಕ್ ಪಾದದ ಗಾಯದ ಹಿನ್ನಡೆಯೊಂದಿಗೆ ಫೆಡ್ ದಿಟ್ಟ ಆಟಕ್ಕೆ ಶರಣಾದರು. ಇದರಿಂದ ಫೆಡ್ 5 ವರ್ಷಗಳ ಬಳಿಕ ವಿಂಬಲ್ಡನ್ ಗೆದ್ದರೆ, ಹಾಲಿ ಋತುವಿನಲ್ಲಿ 2ನೇ ಗ್ರಾಂಡ್ ಸ್ಲಾಂ ಜಯಿಸಿದ ಸಂಭ್ರಮಾಚರಿಸಿದರು. 2012ರಲ್ಲಿ ಕೊನೇ ಬಾರಿ ಚಾಂಪಿಯನ್ ಆಗಿದ್ದ ಫೆಡ್ ಇದರೊಂದಿಗೆ ವಿಂಬಲ್ಡನ್ ಮುಕ್ತ ಯುಗದ ಫೈನಲ್​ನಲ್ಲಿ ಒಂದೂ ಸೆಟ್ ಸೋಲದೆ ಗೆದ್ದ ಬೋರ್ನ್ ಬೋರ್ಗ್ ನಂತರದ ಮೊದಲ ಸಾಧಕರೆನಿಸಿಕೊಂಡರು. ಬೋರ್ನ್ ಬೋರ್ಗ್ 1976ರ ಫೈನಲ್​ನಲ್ಲಿ ಈ ಸಾಧನೆ ಮಾಡಿದ್ದರು.

ಸಿಲಿಕ್ ಪೈಪೋಟಿ ನೀಡುವರೆಂಬ ನಿರೀಕ್ಷೆಯಿದ್ದರೂ ಅದು ಸುಳ್ಳಾಯಿತು. 23 ವಿನ್ನರ್ಸ್ ಹಾಗೂ 8 ಏಸ್ ಸಿಡಿಸಿದ ಫೆಡ್ ಗೆಲುವಿಗೆ ಹೆಚ್ಚು ಹೊತ್ತು ಕಾಯಲಿಲ್ಲ. ಸಿಲಿಕ್ ಆಕರ್ಷಕ ಫೋರ್​ಹ್ಯಾಂಡ್ ಮೂಲಕ 1-0ಯಿಂದ ಉತ್ತಮ ಆರಂಭ ಕಂಡಾಗ ದಿಟ್ಟ ಪೈಪೋಟಿ ನೀಡುವರೆಂಬ ನಿರೀಕ್ಷೆಯಿತ್ತು. ಸೆಮಿಫೈನಲ್​ನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಸಿಲಿಕ್​ಗೆ ಪಾದದ ಗಾಯ ಹಿಂಸೆ ನೀಡಿತು. ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದ ಫೆಡರರ್ 2ನೇ ಸೆಟ್​ನಲ್ಲೂ ಏಕಪಕ್ಷೀಯವಾಗಿ ಗೆದ್ದರು. 2ನೇ ಸೆಟ್ ಪೂರ್ಣಗೊಳ್ಳುವ ಮುನ್ನವೆ ಸಿಲಿಕ್ ಬರೋಬ್ಬರಿ 22 ಅನಿರ್ಬಂಧಿತ ತಪ್ಪುಗಳನ್ನೆಸಗಿದ್ದರಿಂದ ತಿರುಗೇಟು ನೀಡಲು ಅವಕಾಶವೇ ಸಿಗಲಿಲ್ಲ. ಗೆಲುವಿನ ಅಂಕವನ್ನು ಫೆಡ್ ಏಸ್ ಮೂಲಕ ಗಳಿಸಿದರು.

ಫೆಡರರ್ 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರಲ್ಲಿ 8 ವಿಂಬಲ್ಡನ್, 5 ಆಸ್ಟ್ರೇಲಿಯನ್ ಓಪನ್, 5 ಯುಎಸ್ ಓಪನ್ ಮತ್ತು 1 ಫ್ರೆಂಚ್ ಓಪನ್ ಒಳಗೊಂಡಿವೆ. ಫೆಡರರ್ ಪುರುಷರ ಮುಕ್ತ ಟೆನಿಸ್ ಯುಗದಲ್ಲಿ ಅತ್ಯಧಿಕ ವಿಂಬಲ್ಡನ್ ಗೆದ್ದ ಅಗ್ರ ಸಾಧಕರೆನಿಸಿಕೊಂಡರು. ಅಮೆರಿಕದ ಪೀಟ್ ಸಾಂಪ್ರಸ್(7 ). ಮಾರ್ಟಿನಾ ನವ್ರಾಟಿಲೋವಾ (9) ಈವರೆಗೂ ಗರಿಷ್ಠ ವಿಂಬಲ್ಡನ್ ಗೆದ್ದ ಸಾಧಕಿ.

ಗಾಯದಿಂದ ಕಣ್ಣೀರಿಟ್ಟ ಸಿಲಿಕ್!

ಮೊದಲ ಸೆಟ್ ವೇಳೆ ಕೋರ್ಟ್​ನಲ್ಲಿ ಜಾರಿ ಬಿದ್ದ ಕಾರಣದಿಂದ ಮರಿನ್ ಸಿಲಿಕ್ ಪಾದದ ಗಾಯಕ್ಕೆ ತುತ್ತಾದರು. ಇದರಿಂದ ಆಡಲು ಕಷ್ಟಪಡುತ್ತಿದ್ದ ಸಿಲಿಕ್, ಮೆಡಿಕಲ್ ಟೈಮ್​ಟ್ ವೇಳೆ ಕಣ್ಣೀರು ಸುರಿಸುತ್ತಿದ್ದರು. ಪ್ರೇಕ್ಷಕರ ಕರತಾಡನದಿಂದ ಹುಮ್ಮಸ್ಸು ಪಡೆದ ಸಿಲಿಕ್, ಪಂದ್ಯವನ್ನು ಮುಗಿಸುವಲ್ಲಿ ಯಶ ಕಂಡರು.

ಮಕರೋವಾ-ವೆಸ್ಬಿನಾ ಜೋಡಿಗೆ ಡಬಲ್ಸ್ ಪ್ರಶಸ್ತಿ

ಒಲಿಂಪಿಕ್ ಚಾಂಪಿಯನ್ಸ್ ಎಕಟರಿನಾ ಮಕರೋವಾ ಹಾಗೂ ಎಲೆನಾ ವೆಸ್ನಿನಾ ಜೋಡಿ ವಿಂಬಲ್ಡನ್ ಮಹಿಳಾ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಕೇವಲ 55 ನಿಮಿಷಗಳ ಅವಧಿ ನಡೆದ ಫೈನಲ್ ಹೋರಾಟದಲ್ಲಿ ರಷ್ಯಾದ ಮಕರೋವಾ ಹಾಗೂ ವೆಸ್ನಿನಾ ಜೋಡಿ 6-0, 6-0ಯಿಂದ ಚೀನಾದ ಹವೊ ಚಿಂಗ್ ಚಾನ್ ಮತ್ತು ಮೋನಿಕಾ ನಿಕುಲೆಸ್ಕೂ ಜೋಡಿಯನ್ನು ಮಣಿಸಿತು. ಮಕರೋವಾ-ವೆಸ್ನಿನಾ ಜೋಡಿಗೆ ಇದು ಚೊಚ್ಚಲ ವಿಂಬಲ್ಡನ್ ಹಾಗೂ ಮೂರನೇ ಗ್ರಾಂಡ್ ಸ್ಲಾಂ ಡಬಲ್ಸ್ ಪ್ರಶಸ್ತಿಯಾಗಿದೆ. 2013ರ ಯುಎಸ್ ಓಪನ್ ಹಾಗೂ 2015ರ ಫ್ರೆಂಚ್ ಓಪನ್​ನಲ್ಲಿ ಈ ಜೋಡಿ ಚಾಂಪಿಯನ್ ಆಗಿತ್ತು.

ಲುಕಾಸ್-ಮೆಲೊಗೆ ಪುರುಷ ಡಬಲ್ಸ್ ಗರಿ

ಬರೋಬ್ಬರಿ 4 ಗಂಟೆ, 40 ನಿಮಿಷಗಳ ಅವಧಿ ನಡೆದ ಪುರುಷರ ಡಬಲ್ಸ್ ವಿಭಾಗದ ರೋಚಕ ಮ್ಯಾರಥಾನ್ ಫೈನಲ್ ಹೋರಾಟದಲ್ಲಿ ಗೆದ್ದ ಲುಕಾಸ್ ಕುಬೊಟ್ ಹಾಗೂ ಮಾರ್ಸೆಲೊ ಮೆಲೊ ಜೋಡಿ ಚಾಂಪಿಯನ್ ಆಯಿತು. ಪೋಲೆಂಡ್​ನ ಕುಬೊಟ್ ಹಾಗೂ ಬ್ರೆಜಿಲ್​ನ ಮೆಲೊ ಜೋಡಿ 5-7, 7-5, 7-6(2), 6-3, 13-11 ರಿಂದ ಆಸ್ಟ್ರೀಯಾದ ಆಲಿವರ್ ಮರಾಕ್ ಹಾಗೂ ಕ್ರೋಷಿಯಾ ಮ್ಯಾಟ್ ಪೆವಿಕ್ ಜೋಡಿಯನ್ನು ಮಣಿಸಿತು. ಕ್ಯುಬೊಟ್-ಮೆಲೊ ಜೋಡಿಗೆ ಇದು ಚೊಚ್ಚಲ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ.-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top