Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ರೊನಾಲ್ಡೊ ಎಂಬ ಫುಟ್​ಬಾಲ್ ಅದ್ಭುತ

Wednesday, 20.06.2018, 3:03 AM       No Comments

| ರಾಘವೇಂದ್ರ ಗಣಪತಿ

ಅದೊಂದು ಮೋಜಿನ ಟೇಬಲ್ ಟೆನಿಸ್ ಪಂದ್ಯ. ಎದುರಾಳಿಗಳಾಗಿ ಆಡುತ್ತಿದ್ದವರು ಮ್ಯಾಂಚೆಸ್ಟರ್ ಯುನೈಟೆಡ್ ಫುಟ್​ಬಾಲ್ ಕ್ಲಬ್​ನಲ್ಲಿ ಜೊತೆಗಾರರಾಗಿದ್ದ ರಿಯೋ ಫರ್ಡಿನಾಂಡ್ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ. ಯುನೈಟೆಡ್​ನ ಉಳಿದ ಜೊತೆಗಾರರು ಟೇಬಲ್ ಸುತ್ತುವರಿದು ಇವರಿಬ್ಬರ ಆಟ ಆಸ್ವಾದಿಸುತ್ತಿದ್ದರು. ಫರ್ಡಿನಾಂಡ್ ಆ ಪಂದ್ಯ ಗೆದ್ದಾಗ ಜೊತೆಗಾರರ ಹಷೋದ್ಗಾರ ಮುಗಿಲುಮುಟ್ಟಿತ್ತು. ಅದೊಂದು ತಮಾಷೆಯ ಪಂದ್ಯವಾದರೂ ರೊನಾಲ್ಡೊ ಮಾತ್ರ ದುಃಖಿತರಾಗಿದ್ದರು. ಆ ದಿನವೇ ಅವರು ಟೆನಿಸ್ ಟೇಬಲ್ ಒಂದನ್ನು ಸ್ವಂತಕ್ಕೆ ಖರೀದಿಸಿ ಮನೆಯಲ್ಲೇ ಅಭ್ಯಾಸ ಪ್ರಾರಂಭಿಸಿದ್ದರು. ಒಂದೇ ವಾರದಲ್ಲಿ ರಿಯೋ ಫರ್ಡಿನಾಂಡ್​ರನ್ನು ಪಂದ್ಯಕ್ಕೆ ಆಹ್ವಾನಿಸಿ ಸೋಲಿಸಿದ್ದರು.

ಸೋಲಿಗಿಂತ ದೊಡ್ಡ ಶತ್ರುವಿಲ್ಲ… ಎದುರಿಗಿರುವವರು ಸ್ನೇಹಿತ, ಜೊತೆಗಾರ ಯಾರೇ ಆಗಿರಲಿ, ಸೋಲನ್ನು ದ್ವೇಷಿಸುತ್ತೇನೆ… ಇದು ರೊನಾಲ್ಡೊ ಬದುಕಿನ ಒನ್​ಲೈನ್ ಸ್ಟೋರಿ. ಪೋರ್ಚುಗಲ್ ಎಂಬ ಫುಟ್​ಬಾಲ್ ಹುಚ್ಚಿನ ರಾಷ್ಟ್ರದ ಅದ್ಭುತ ಈ ಕ್ರಿಶ್ಚಿಯಾನೊ ರೊನಾಲ್ಡೊ. ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಪ್ರೇರಣೆಯಿಂದ ಅಪ್ಪ-ಅಮ್ಮ ಈ ಹೆಸರನ್ನಿಟ್ಟರೂ ಬ್ರೆಜಿಲ್​ನ ದಂತಕಥೆ ರೊನಾಲ್ಡೋರನ್ನು ಮೀರಿಸುವಂತೆ ಫುಟ್​ಬಾಲ್ ಜಗತ್ತಿನ ಕಣ್ಮಣಿಯಾಗಿದ್ದು ಈ ಕ್ರಿಶ್ಚಿಯಾನೊ ಹೆಗ್ಗಳಿಕೆ. ಫುಟ್​ಬಾಲ್ ಜಗತ್ತಿನ ಶ್ರೇಷ್ಠರ ಯಾದಿಯಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಈ ಮಾಂತ್ರಿಕನ ಗುರಿ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರನೆನಿಸುವುದು.

ಶ್ರೇಷ್ಠತೆಯ ಕನಸು ಕಾಣುವವರು ಸಾವಿರ. ಆದರೆ, ಎಲ್ಲರಲ್ಲೂ ಅಂಥ ಅಂತಃಸತ್ವ ಇರುವುದಿಲ್ಲ. ರೊನಾಲ್ಡೋ ಎಂಬ ಕನಸುಗಾರನಲ್ಲಿ ಅಂಥ ಸತ್ವವನ್ನು ಜಗತ್ತು ಈಗಾಗಲೇ ಗುರುತಿಸಿದೆ. ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್​ಬಾಲ್ ರೊನಾಲ್ಡೋ ಶ್ರೇಷ್ಠತೆಗೊಂದು ಅಳತೆಗೋಲಾಗಲಿದೆ. ಅವರು ಮಾತ್ರವಲ್ಲ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ – ಬ್ರೆಜಿಲ್​ನ ನೇಮರ್ ಹಾಗೂ ರೊನಾಲ್ಡೋ ನಡುವಿನ ಶ್ರೇಷ್ಠತೆಯ ತ್ರಿಕೋನ ಸಮರದಲ್ಲೂ ವಿಜೇತರನ್ನು ನಿರ್ಣಯಿಸುವ ವೇದಿಕೆಯಾಗಲಿದೆ.

ಶ್ರೇಷ್ಠತೆ ಎನ್ನುವುದು ಒಬ್ಬ ವ್ಯಕ್ತಿಯಿಂದ ಶುರುವಾಗಿ, ಆತನೊಂದಿಗೇ ಕೊನೆಗೊಳ್ಳುವಂಥದ್ದಲ್ಲ. ಫುಟ್​ಬಾಲ್​ಗೆ ಸೀಮಿತವಾಗಿ ಹೇಳುವುದಾದರೆ, ಪೀಲೆ, ಯುಸೇಬಿಯೋ, ಮರಡೋನಾ, ರೊನಾಲ್ಡೋ, ರೊನಾಲ್ಡಿನೋರಿಂದ ಈಗಿನ ರೊನಾಲ್ಡೊ, ಮೆಸ್ಸಿವರೆಗೆ ನೂರಾರು ಶ್ರೇಷ್ಠರಿದ್ದಾರೆ. ಆದರೆ, ಒಂದು ಕಾಲಘಟ್ಟದ ಆಟಗಾರನನ್ನು ಸರ್ವಕಾಲಕ್ಕೂ ಶ್ರೇಷ್ಠ ಎಂದು ನಿರ್ಷRಸುವುದು ಕಷ್ಟದ ಕೆಲಸ. ಅದು ಸಾಧುವೂ ಅಲ್ಲ. ಪೀಲೆ ಕಾಲದಿಂದ ಇವತ್ತಿನವರೆಗೆ ಫುಟ್​ಬಾಲ್ ಸಾಕಷ್ಟು ಮಜಲುಗಳನ್ನು ದಾಟಿಬಂದಿದೆ. ತಾಂತ್ರಿಕವಾಗಿ ಆಟಗಾರರಿಗೆ ಈಗಿರುವ ಸೌಲಭ್ಯಗಳು ಆಗಿರಲಿಲ್ಲ. ಇನ್ನು ಆಯಾ ಕಾಲದ ಆಟಗಾರರು, ಎದುರಾಳಿಗಳು, ಸ್ಪರ್ಧಾತ್ಮಕತೆಗೆ ತುಲನೆ ಸಾಧ್ಯವಿಲ್ಲ. ಫುಟ್​ಬಾಲ್ ಪ್ರಪಂಚದ ಬಹುತೇಕ ದೇಶಗಳಲ್ಲಿ ಆಡುವಂಥ ಆಟ. ಆದರೆ, ಯುರೋಪಿನಲ್ಲಿ ಆಡುವ ಫುಟ್​ಬಾಲ್​ಗೂ, ಅಮೆರಿಕ-ದಕ್ಷಿಣ ಅಮೆರಿಕದ ಆಟಕ್ಕೂ ತುಂಬ ವ್ಯತ್ಯಾಸವಿದೆ. ಅದೇ ರೀತಿ ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ ಮೊದಲಾದ ಖಂಡಗಳ ಆಟದ ಗುಣಮಟ್ಟದ ನಡುವೆ ಅಗಾಧ ಅಂತರವಿದೆ. ಮೊನ್ನೆ ತಾನೆ ನೂರು ಅಂತಾರಾಷ್ಟ್ರೀಯ ಪಂದ್ಯ ಆಡಿದ ಭಾರತ ತಂಡದ ನಾಯಕ ಸುನೀಲ್ ಛೇಟ್ರಿ 64 ಅಂತಾರಾಷ್ಟ್ರೀಯ ಗೋಲು ಬಾರಿಸಿದ್ದಾರೆ. ಗೋಲುಗಳಿಕೆಯಲ್ಲಿ ಅವರು ಸಮಕಾಲೀನ ಅಂತಾರಾಷ್ಟ್ರೀಯ ಆಟಗಾರರ ಪೈಕಿ ವಿಶ್ವದಲ್ಲೇ ನಂ.2 ಸ್ಥಾನದಲ್ಲಿದ್ದಾರೆ. ಪೋರ್ಚುಗಲ್​ನ ರೊನಾಲ್ಡೊ 84 ಗೋಲುಗಳೊಂದಿಗೆ ಅಗ್ರಗಣ್ಯರಾಗಿದ್ದಾರೆ. ಅಂದ ಮಾತ್ರಕ್ಕೆ ಛೇಟ್ರಿ ಮತ್ತು ರೊನಾಲ್ಡೋ ಹೋಲಿಕೆ ಸಾಧ್ಯವೇ? ಫುಟ್​ಬಾಲ್​ನಲ್ಲಿ ಭಾರತದ ಎದುರಾಳಿಗಳು ಮಾಲ್ಡೀವ್ಸ್, ನೇಪಾಳ, ಬಾಂಗ್ಲಾದೇಶ, ಕತಾರ್, ಪಾಕಿಸ್ತಾನ, ಲೆಬನಾನ್​ನಂಥ ದೇಶಗಳು. ಇರಾನ್​ನ ಅಲಿ ದಾಯಿ ವಿಶ್ವದಲ್ಲೇ ಅತ್ಯಧಿಕ 109 ಅಂತಾರಾಷ್ಟ್ರೀಯ ಗೋಲು ಬಾರಿಸಿದ್ದಾರೆ. ಆದರೆ, ಸರ್ವಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅವರ ಹೆಸರಿರುವುದಿಲ್ಲ. ಹಾಗೆ ಗುಣಮಟ್ಟದ ವಿಚಾರದಲ್ಲಿ ಹೇಳುವುದಾದರೆ, ಫುಟ್​ಬಾಲ್ ಶಕ್ತಿಕೇಂದ್ರಗಳಾದ ಬ್ರೆಜಿಲ್, ಜರ್ಮನಿ, ಅರ್ಜೆಂಟೀನಾ ಅಥವಾ ಯಾವುದೇ ಇತ್ತೀಚಿನ ವಿಶ್ವಚಾಂಪಿಯನ್ ತಂಡಗಳು ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನಾದಂಥ ಕ್ಲಬ್ ತಂಡಗಳನ್ನು ಸೋಲಿಸುವಷ್ಟು ಸಮರ್ಥವಾಗಿಲ್ಲ. ಯುರೋಪಿನ ಕ್ಲಬ್​ಗಳಲ್ಲಿ ವಿಶ್ವದ ಶ್ರೇಷ್ಠ ಪ್ರತಿಭೆಗಳ ಮೇಳಾಮೇಳಿ ಇರುವುದೇ ಅದಕ್ಕೆ ಕಾರಣ.

ಮೊನ್ನೆಮೊನ್ನೆ ತಾನೆ ರಿಯಲ್ ಮ್ಯಾಡ್ರಿಡ್ ತಂಡದೊಂದಿಗೆ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆದ್ದು ವಿಶ್ವಕಪ್​ಗೆ ಆಗಮಿಸಿರುವ ರೊನಾಲ್ಡೊ ಸರ್ವಶ್ರೇಷ್ಠ ಪಟ್ಟದ ಕನಸಿನ ಹಾದಿಯಲ್ಲಿ ಇನ್ನೊಂದಿಷ್ಟು ಮಹತ್ವಪೂರ್ಣ ಕಿಲೋಮೀಟರ್​ಗಳನ್ನು ಕ್ರಮಿಸುವ ಅವಕಾಶವನ್ನು ಹಾಲಿ ರಷ್ಯಾ ವಿಶ್ವಕಪ್​ನಲ್ಲಿ ಹೊಂದಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಮೆಸ್ಸಿ ಒಂದು ಪೆನಾಲ್ಟಿ ಗೋಲು ಹಾಗೂ ಇನ್ನೊಂದು ಫ್ರೀಕಿಕ್ ಅವಕಾಶ ಕೈಚೆಲ್ಲಿದ್ದರಿಂದ ಅರ್ಜೆಂಟೀನಾ ತಂಡ ಹೊಸಮುಖ ಐಸ್​ಲ್ಯಾಂಡ್ ವಿರುದ್ಧ ಗೆಲ್ಲಲು ವಿಫಲವಾದರೆ, ಬ್ರೆಜಿಲ್ ತಂಡಕ್ಕೂ ಸ್ವಿಟ್ಜರ್ಲೆಂಡ್ ವಿರುದ್ಧ ಜಯ ತಂದು ಕೊಡಲು ನೇಮರ್ ವಿಫಲರಾದರು. ಆದರೆ, ರೊನಾಲ್ಡೋ ಏಕಾಂಗಿಯಾಗಿ ಸ್ಪೇನ್ ತಂಡಕ್ಕೆ ನೀರು ಕುಡಿಸಿದರು.

ರಷ್ಯಾ ವಿಶ್ವಕಪ್​ನ ಮೊದಲ ಸುತ್ತಿನ 16 ಪಂದ್ಯಗಳಲ್ಲಿ ಶ್ರೇಷ್ಠವೆನಿಸಿದ್ದೇ ಸ್ಪೇನ್-ಪೋರ್ಚುಗಲ್ ಪಂದ್ಯ. ಇಲ್ಲಿ ಪೂರ್ತಿ ಸ್ಪೇನ್ ವರ್ಸಸ್ ಏಕಾಂಗಿ ರೊನಾಲ್ಡೋ ಎಂಬ ರೀತಿ ಪಂದ್ಯ ನಡೆಯಿತು. ಪೋರ್ಚುಗಲ್ ತಂಡ 2016ರ ಯುರೋ ಕಪ್ ವಿಜೇತ ತಂಡವಾಗಿದ್ದರೂ ವಿಶ್ವಮಟ್ಟದಲ್ಲಿ ಸಾಧಿಸಿರುವುದು ಕಡಿಮೆ. ಈ ದೇಶದಲ್ಲಿ ಕಾಲಕಾಲಕ್ಕೆ ಅನೇಕ ಶ್ರೇಷ್ಠ ಆಟಗಾರರು ಹೊರಹೊಮ್ಮಿದರೂ, ಶ್ರೇಷ್ಠ ತಂಡವಾಗಿ ಯಶಸ್ಸು ಗಳಿಸುವ ಸುವರ್ಣಯುಗವನ್ನು ಆ ದೇಶ ಕಂಡಿಲ್ಲ. 1970ರ ದಶಕದಲ್ಲಿ ಯುಸೇಬಿಯೊರಿಂದ ಪೋರ್ಚುಗಲ್ ಗುರುತಿಸಿಕೊಂಡಿತು. 2000ದ ಮೊದಲ ದಶಕದಲ್ಲಿ ಲೂಯಿಸ್ ಫಿಗೊ ಏಕಾಂಗಿಯಾಗಿ ಹೆಣಗಿದರು. ಸದ್ಯ ರೊನಾಲ್ಡೋ ಬಿಟ್ಟರೆ, ಅವರ ಹೆಗಲಿಗೆ ಹೆಗಲು ಕೊಡುವಂಥ ಮತ್ತೊಬ್ಬ ಆಟಗಾರ ನೆನಪಾಗುವುದಿಲ್ಲ.

ಅಡುಗೆ ಕೆಲಸಕ್ಕೆ ಹೋಗುವ ತಾಯಿ, ಉದ್ಯಾನದ ಮಾಲಿಯಾಗಿ ದುಡಿಯುತ್ತಿದ್ದ ತಂದೆ… ಕಡು ಬಡಕುಟುಂಬದಲ್ಲಿ ಬೆಳೆದ ರೊನಾಲ್ಡೊ 16ನೇ ವಯಸ್ಸಿನಲ್ಲೇ ಹೃದಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು. ಓರ್ವ ರೋಗಿಯಾಗಿ ಜೀವನ ಕಳೆಯಬೇಕಿದ್ದ ಅವರು ಫುಟ್​ಬಾಲ್ ದೇವರ ಎತ್ತರಕ್ಕೇರಿದ್ದು, ಗಳಿಕೆಯಲ್ಲಿ ಕುಬೇರನಾಗಿದ್ದು ಪವಾಡಕ್ಕಿಂತ ಮಿಗಿಲಾಗಿ ಅವರ ಛಲ ಮತ್ತು ಹೋರಾಟ ಮನೋಭಾವದಿಂದ. ಆರಡಿ ಎತ್ತರವಿದ್ದರೂ, ಸಣಕಲು ಶರೀರದ ರೊನಾಲ್ಡೋರನ್ನು ದೈಹಿಕವಾಗಿ ದುರ್ಬಲರೆಂದು ಭಾವಿಸಿ ಮೋಸಹೋದವರೇ ಅನೇಕ. ಚಿರತೆಯಂತೆ ವೇಗ, ಆಕ್ರಮಣಕಾರಿ ಮನೋಭಾವ, ಕ್ಷಣಾರ್ಧದಲ್ಲಿ ಆಟ-ತಂತ್ರ ಬದಲಾಯಿಸಿ ಎದುರಾಳಿಗಳನ್ನು ಮಣ್ಣುಮುಕ್ಕಿಸುವ ಚಾಕಚಕ್ಯತೆ, ಗುರಿ ಮುಖ್ಯವೇ ಹೊರತು ದಾರಿಯಲ್ಲ ಎನ್ನುವ ಚಾಣಾಕ್ಷ, ಗೋಲು ಆವರಣದ ಯಾವುದೇ ಜಾಗದಿಂದಲೂ ಏಕಪ್ರಕಾರವಾಗಿ ಅಪಾಯಕಾರಿಯಾಗಿ ಆಡುವ ಕಲೆಗಾರ… ರೊನಾಲ್ಡೊರಂಥ ಆಟಗಾರ ತಂಡದಲ್ಲಿದ್ದರೆ, ಕೋಚ್​ಗಳಿಗೆ ಆಯ್ಕೆಗಳು ಹೇರಳ. ಅಂಕಣದ ಎರಡೂ ಪಾರ್ಶ್ವಗಳಿಂದ, ಗೋಲು ಪೆಟ್ಟಿಗೆ ಮುಂಭಾಗದಲ್ಲಿ ಎಲ್ಲಿಯೇ ಆದರೂ ಸರಿ ತಂಡದ ವ್ಯೂಹಕ್ಕೆ ತಕ್ಕಂತೆ ರೊನಾಲ್ಡೋ ರೆಡಿ. ಇಷ್ಟಾಗಿಯೂ ಗೋಲ್ ಮಷಿನ್ ರೊನಾಲ್ಡೋ ಸ್ವಂತಕ್ಕಾಗಿ ಆಡುತ್ತಾರೆ, ಸ್ವಾರ್ಥಿ ಎಂಬ ಟೀಕೆಗಳಿವೆ. ಆದರೆ, ವಾಸ್ತವದಲ್ಲಿ ಪೋರ್ಚುಗಲ್ , ರಿಯಲ್ ಮ್ಯಾಡ್ರಿಡ್, ಮ್ಯಾಂಚೆಸ್ಟರ್ ಯುನೈಟೆಡ್ ತಂಡಗಳ ಪರ ಅವರು ಸ್ವತಃ ಗೋಲು ಹೊಡೆದದ್ದಕ್ಕಿಂತ ಹೆಚ್ಚು ಬಾರಿ ಜೊತೆಆಟಗಾರರ ಗೋಲುಗಳಿಗೆ ಸಹಕರಿಸಿದ್ದಾರೆ. ಚೆಂಡನ್ನು ಡ್ರಿಬಲ್ ಮಾಡುತ್ತ ಎದುರಾಳಿ ಡಿಫೆಂಡರ್​ಗಳನ್ನು ಮಣ್ಣುಮುಕ್ಕಿಸುವ ರೊನಾಲ್ಡೋಗೆ ಕಾಲಿನಷ್ಟೇ ತಲೆಯೂ ಗಟ್ಟಿ. ಅವರ ಹೆಚ್ಚಿನ ಗೋಲುಗಳು ಹೆಡ್ಡರ್ ರೂಪದಲ್ಲಿ ಬಂದಿರುವುದೇ ಇದಕ್ಕೆ ಸಾಕ್ಷಿ.

ಮೊನ್ನೆ ಸ್ಪೇನ್ ವಿರುದ್ಧ ಪೋರ್ಚುಗಲ್ 2-3 ಗೋಲುಗಳ ಹಿನ್ನಡೆಯಲ್ಲಿತ್ತು. ನಿಗದಿತ ಅವಧಿ ಮುಕ್ತಾಯಕ್ಕೆ 2 ನಿಮಿಷವಷ್ಟೇ ಬಾಕಿ ಇತ್ತು. ಆಗ ಚಾಣಾಕ್ಷ ಆಟದಿಂದ ಫ್ರೀಕಿಕ್ ಗಿಟ್ಟಿಸಿದ ರೊನಾಲ್ಡೊ ಮ್ಯಾಜಿಕ್ ಮಾಡಿದರು. ಈ ಪಂದ್ಯಕ್ಕೆ ಮುನ್ನ ಅವರು ಸತತ 45 ಬಾರಿ ಫ್ರೀಕಿಕ್​ನಲ್ಲಿ ಗೋಲುಗಳಿಸಲು ವಿಫಲರಾಗಿದ್ದರು. ಆದರೆ, ಪೋರ್ಚುಗಲ್ ತಂಡದ ನಾಯಕರಾಗಿ ಅವರ ನಿರ್ಧಾರ ಬೇರೆಯೇ ಇತ್ತು. ತೊಡೆಯ ಸ್ನಾಯುಗಳು ಕಾಣುವಂತೆ ಶಾರ್ಟ್ಸ್ ಮಡಿಚಿದ ಕಾಲನ್ನು ಚೆಂಡಿನ ಮೇಲಿಟ್ಟು ಕಣ್ಣು ಮುಚ್ಚಿ ಒಮ್ಮೆ ದೀರ್ಘವಾಗಿ ಉಸಿರೆಳೆದ ರೊನಾಲ್ಡೋ, ಪವಾಡಸದೃಶವಾಗಿ ಗೋಲು ಬಾರಿಸಿಯೇ ಬಿಟ್ಟರು. ಆ ಪಂದ್ಯದಲ್ಲಿ ಅದು ಅವರ ಹ್ಯಾಟ್ರಿಕ್ ಗೋಲಾಗಿತ್ತು. ವಿಶ್ವಕಪ್ ಇತಿಹಾಸ ಹಾಗೂ ರೊನಾಲ್ಡೊ ವೃತ್ತಿಜೀವನದ 51ನೇ ಹ್ಯಾಟ್ರಿಕ್ ಅದಾಗಿತ್ತು.

ಇನ್ನು ಶ್ರೇಷ್ಠ ಆಟಗಾರರು ಸುಭಗರಾಗಿರಬೇಕು ಎಂದು ಬಯಸುವುದು ರೊನಾಲ್ಡೊ ವಿಚಾರದಲ್ಲಿ ತಪ್ಪು. 2006ರಲ್ಲಿ ತಮ್ಮ ಚೊಚ್ಚಲ ವಿಶ್ವಕಪ್​ನಲ್ಲೇ ಚಾಣಾಕ್ಷ ತಂತ್ರದಿಂದ ಎದುರಾಳಿ ಇಂಗ್ಲೆಂಡ್​ನ ಹೀರೋ ವೇಯ್ನ ರೂನಿಗೆ ರೆಡ್​ಕಾರ್ಡ್ ಸಿಗುವಂತೆ ನೋಡಿಕೊಂಡಿದ್ದ ರೊನಾಲ್ಡೋ ತಮ್ಮ ಸಹ ಆಟಗಾರರತ್ತ ಕಣ್ಣು ಮಿಟುಕಿಸಿ ಸಂಭ್ರಮ ಪಟ್ಟಿದ್ದು ದೊಡ್ಡ ವಿವಾದವಾಗಿತ್ತು. ವಿನಾಕಾರಣ ಬೀಳುವ, ಗಾಯದ ನಾಟಕಮಾಡಿ ರೆಫ್ರಿಗಳ ಮೇಲೆ ಪ್ರಭಾವ ಬೀರುವ ಅಪವಾದ ಅವರ ಮೇಲೆ ಇದ್ದೇ ಇದೆ. ಮೊನ್ನೆ ಸ್ಪೇನ್ ವಿರುದ್ಧ ಪೋರ್ಚುಗಲ್​ಗೆ ಮೊದಲ 4 ನಿಮಿಷದಲ್ಲೇ ಪೆನಾಲ್ಟಿ ಕಿಕ್ ದೊರೆತಿದ್ದು ಕೂಡ ರೊನಾಲ್ಡೋರ ಇಂಥ ತಂತ್ರದ ಮೂಲಕವೇ. ಆಗಲೂ ಅವರು ಸ್ಪೇನ್​ನ ನಾಚೋರತ್ತ ಕಣ್ಣುಮಿಟುಕಿಸಿ ವ್ಯಂಗ್ಯವಾಗಿ ನಕ್ಕಿದ್ದರು. ಆದರೆ, ಫುಟ್​ಬಾಲ್ ಎಂಬ ದೈಹಿಕ ಹೋರಾಟದಲ್ಲಿ, ಗೆಲುವಿಗಾಗಿ ಶಕ್ತಿ, ಯುಕ್ತಿ ಎಲ್ಲವನ್ನೂ ಬಳಸಿಕೊಳ್ಳುವುದು ರೊನಾಲ್ಡೊ ಹೆಚ್ಚುಗಾರಿಕೆ.

ವ್ಯಕ್ತಿಗತ ಬದುಕಿನಲ್ಲಿ ಸೊಗಸುಗಾರನೆನಿಸಿರುವ, ಹಲವು ಸಂಬಂಧಗಳಿಂದ ನಾಲ್ಕು ಮಕ್ಕಳನ್ನು ಪಡೆದು, ಇತ್ತೀಚೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ರೊನಾಲ್ಡೋ ಈ ವಿಶ್ವಕಪ್​ನಲ್ಲಿ ಗೋಲ್ಡನ್ ಬೂಟ್ ಗೆಲ್ಲಲು ಸಾಧ್ಯವಾದರೆ, ಅವರ ಶ್ರೇಷ್ಠತೆಯ ಕನಸಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಈಗಾಗಲೇ 3 ಗೋಲು ಬಾರಿಸಿರುವ ಅವರು ಬುಧವಾರ ಮೊರಕ್ಕೋ, ಬಳಿಕ ಇರಾನ್ ವಿರುದ್ಧ ಇನ್ನೊಂದೆರಡು-ಮೂರು ಗೋಲು ಬಾರಿಸಿದರೆ, ಟೂರ್ನಿಯ ಗರಿಷ್ಠ ಗೋಲು ಹೀರೋ ಆಗುವ ಎಲ್ಲ ಸಾಧ್ಯತೆ ಇದೆ. 33ನೇ ವಯಸ್ಸಿನಲ್ಲಿ ಸತತ 4 ವಿಶ್ವಕಪ್​ಗಳಲ್ಲಿ ಗೋಲುಗಳಿಕೆ ಸಾಧನೆ ಮಾಡಿರುವ ರೊನಾಲ್ಡೋ ಇಚ್ಛಾಶಕ್ತಿಗೆ ಎಟುಕದ್ದು ಯಾವುದೂ ಇಲ್ಲ ಎನ್ನುವುದೂ ಸಹ ಗೊತ್ತಿರುವಂಥದ್ದೇ.

Leave a Reply

Your email address will not be published. Required fields are marked *

Back To Top