Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ        ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆಶಿ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕ ನೇಮಕ        ಅಮೆರಿಕ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ಶಾಕ್​        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಸಂಗ್ರಹ​-ಸ್ಯಾಂಡಲ್​​​ವುಡ್​​​​ ದಾಖಲೆಗಳೆಲ್ಲ ಪೀಸ್​ ​​       
Breaking News

ರೈತ ಹೋರಾಟಕ್ಕೆ ಜಯ

Thursday, 07.12.2017, 3:00 AM       No Comments

ರಾಜ್ಯದಲ್ಲಿ ನೀರಾ ಇಳಿಸಲು ಅನುಮತಿ ನೀಡಬೇಕು ಎಂದು ಕಳೆದ 18 ವರ್ಷದಿಂದ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. 2016ರ ಬೆಳಗಾವಿ ಅಧಿವೇಶನದಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ರೂಪಿಸಲಾದ ‘ನೀರಾ ನೀತಿ’ಗೆ ರಾಜ್ಯ ಸರ್ಕಾರ ನ. 20ರಂದು ಅಂತಿಮ ಅಧಿಸೂಚನೆ ಹೊರಡಿಸಿರುವುದು ತೆಂಗು ಬೆಳೆಗಾರರಲ್ಲಿ ಸಂತಸದ ಅಲೆಯನ್ನೇ ಹೊಮ್ಮಿಸಲಿದೆ ಎಂದರೆ ಅತಿಶಯೋಕ್ತಿಯಲ್ಲ.

‘ನೀರಾ’ ಎಂದರೆ ಮದ್ಯ/ಸಾರಾಯಿಯಂಥ ಮಾದಕಪೇಯ ಎಂಬ ಕಲ್ಪನೆ ಬಹುತೇಕರಲ್ಲಿದೆ. ಪರಿಶುದ್ಧ ಸ್ವರೂಪದಲ್ಲಿನ ನೀರಾ ಅತ್ಯದ್ಭುತ ಔಷಧವೂ ಹೌದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ನರದೌರ್ಬಲ್ಯ ನೀಗುವ ಸಾಮರ್ಥ್ಯ ಇದಕ್ಕಿದೆ. ಆದರೆ ಬಳಕೆಯಲ್ಲಿ ಅನುಸರಿಸಲಾಗುವ ಅಡ್ಡದಾರಿಗಳು ಮತ್ತು ಕಲಬೆರಕೆ ದಂಧೆಯ ಕಾರಣದಿಂದಾಗಿ ನೀರಾಕ್ಕೆ ಕಳಂಕ ಹತ್ತಿಕೊಂಡಿತ್ತು ಎನ್ನಲಡ್ಡಿಯಿಲ್ಲ. ಈಗ ನೀರಾಗೆ ಅನುಮತಿಸುವಂಥ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿರುವುದರಿಂದ, ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಅದು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬುದು ಕೃಷಿಕರ, ಕೃಷಿತಜ್ಞರ ಅಭಿಮತ. 2014ರಲ್ಲಿ ಕೇರಳದಲ್ಲಿ ಜಾರಿಗೆ ಬಂದ ನೀರಾ ನೀತಿಯಿಂದಾಗಿ ಅಲ್ಲಿನ ತೆಂಗು ಬೆಳೆಗಾರರ ಬದುಕು ಹಸನಾಗಿದೆ ಎಂಬ ಸಂಗತಿ ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುವಂಥದ್ದು.

ಆದರೆ ನೀರಾ ಇಳಿಸುವಿಕೆಯಂಥ ಪಾರಂಪರಿಕ ಪರಿಪಾಠಕ್ಕೆ ತಡೆಯೊದಗಿತು. ಅಬಕಾರಿ ಲಾಬಿಯೂ ಇದಕ್ಕೊಂದು ಕಾರಣ ಎನ್ನಲಾಗುತ್ತದೆಯಾದರೂ, ಸಾಮಾಜಿಕ ಸ್ವಾಸ್ಥ್ಯಕ್ಕೆ ಯಾವ ರೀತಿಯಲ್ಲೂ ಧಕ್ಕೆ ತರದ ನೀರಾದಂಥ ಪೇಯ ಇನ್ನು ಮುಂದಾದರೂ ಸಂಕಷ್ಟಕ್ಕೆ ಸಿಲುಕದಂತಾಗಲು ಕ್ರಮಗಳಿಗೆ ಮುಂದಾಗಬೇಕಿದೆ. ಕಾರಣ, ನೀರಾ ಇಳಿಸುವಿಕೆಯನ್ನೇ ಜೀವನೋಪಾಯ ಮಾಡಿಕೊಂಡ ಕುಟುಂಬಗಳು ಕರ್ನಾಟಕದಲ್ಲಿ ಹಲವು ಕಡೆ, ಅದರಲ್ಲೂ ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ನೆಲೆಗೊಂಡಿದ್ದವು. ನೀರಾಕ್ಕೆ ಸಂಕಷ್ಟ ಒದಗಿದ ಕಾರಣದಿಂದಾಗಿ ಅವರ ಬಾಳು ಆತಂಕದ ಕೂಪಕ್ಕೆ ಸಿಲುಕಿತ್ತು. ಈಗಿನ ನೀರಾ ನೀತಿ ಅಂಥವರಲ್ಲಿ ಉತ್ಸಾಹದ ಬುಗ್ಗೆ ಚಿಮ್ಮಿಸುವುದು ಸಹಜ.

ಜತೆಗೆ, ನೀರಾದಿಂದ ರೂಪಿಸಬಹುದಾದ ಉಪ-ಉತ್ಪನ್ನಗಳ ಕುರಿತಾಗಿಯೂ ಸಂಶೋಧನೆ, ಚಿಂತನ-ಮಂಥನಗಳು ನಡೆಯಬೇಕಿದೆ. ಸಾಂಪ್ರದಾಯಿಕ ಬಳಕೆಯ ಹೊರತಾಗಿ ಅಡಕೆಯಿಂದ ಮತ್ತಷ್ಟು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಹೊಸಹೊಳಹುಗಳು ಹೊಮ್ಮಿರುವಂತೆಯೇ ನೀರಾ ವಿಷಯದಲ್ಲೂ ಹೊಸಯತ್ನಗಳಾಗಬೇಕಿದೆ. ಅಡಕೆ ಮತ್ತು ಕೋಕೋ ಬೆಳೆಗಾರರ ಸಮಸ್ಯೆಗಳನ್ನು ನೀಗುವುದಕ್ಕೆಂದು ಸಹಕಾರಿ ತತ್ತ್ವದ ಆಧಾರದ ಮೇಲೆ ‘ಕ್ಯಾಂಪ್ಕೊ’ ಸಂಘಟನೆಯನ್ನು ಹುಟ್ಟುಹಾಕಿದ್ದು ಈ ನಿಟ್ಟಿನಲ್ಲಿ ಮೇಲ್ಪಂಕ್ತಿಯಾದೀತು. ಅಡಕೆಯಿಂದ ಸೋಪ್ ಮತ್ತು ‘ಸಾಫ್ಟ್​ಡ್ರಿಂಕ್’ ತಯಾರಿಸಬಹುದು ಎಂಬುದನ್ನು ಬಂಟ್ವಾಳ ಮೂಲದ ಕೃಷಿಕರೊಬ್ಬರು ನಿದರ್ಶಿಸಿದ್ದು ಇಲ್ಲಿ ಉಲ್ಲೇಖನೀಯ. ನೀರಾದಿಂದ ಬೆಲ್ಲ, ಕಲ್ಲುಸಕ್ಕರೆ, ಜ್ಯೂಸ್, ಜಾಮ್ ಚಾಕೊಲೇಟ್, ಸಿರಪ್, ಬಿಸ್ಕತ್ತುಗಳನ್ನು ತಯಾರಿಸಬಹುದೆಂಬ ಮಾಹಿತಿಯ ಹಿನ್ನೆಲೆಯಲ್ಲಿ, ವಿನೂತನ ಉತ್ಪನ್ನಶ್ರೇಣಿ ಹಾಗೂ ಮಾರುಕಟ್ಟೆ ತಂತ್ರಗಾರಿಕೆಯ ನೆರವಿನಿಂದ ನೀರಾಕ್ಕೊಂದು ಘನತೆಯನ್ನು ತಂದುಕೊಡಬೇಕಿದೆ. ಬೆಂಬಲ ಬೆಲೆ ಇಲ್ಲದೆಯೋ ಅಥವಾ ಬಹೂಪಯೋಗಿ ಅನ್ವಯಿಕತೆಯ ಕುರಿತಾದ ಮಾಹಿತಿಯ ಕೊರತೆಯಿಂದಾಗಿಯೋ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಕಂಗಾಲಾಗಿರುವ ಸಾಧ್ಯತೆಗಳಿವೆ. ಇಂಥವರ ಬಾಳನ್ನು ಹೇಗೆಲ್ಲ ಹಸನು ಮಾಡಬಹುದು ಎಂಬ ನಿಟ್ಟಿನಲ್ಲಿ ಕೃಷಿತಜ್ಞರು, ಸಂಶೋಧಕರು, ಸರ್ಕಾರ ಮತ್ತು ಕೃಷಿಕರು ಪರಸ್ಪರ ಕೈಜೋಡಿಸುವಂತಾಗಬೇಕು.

Leave a Reply

Your email address will not be published. Required fields are marked *

Back To Top