Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ರಾಷ್ಟ್ರೀಯ ದ್ವೇಷದ ಹೊಸ ಹೊಸ ಆಯಾಮಗಳು

Tuesday, 03.10.2017, 3:05 AM       No Comments

ಮೈಸೂರಿನಲ್ಲಿ ‘ಮಹಿಷಾಸುರ ವರ್ಧಂತಿ’ಯ ಆಚರಣೆಯಾಯಿತಂತೆ. ಹಾಗೇ ಬಿಟ್ಟರೆ ಕಂಸ, ಜರಾಸಂಧ, ದುರ್ಯೋಧನ, ಸೈಂಧವ, ಮಾರೀಚರ ಜಯಂತಿಗಳೂ ಹುಟ್ಟಿಕೊಂಡರೆ ಅಚ್ಚರಿಯಿಲ್ಲ. ಅದೆಲ್ಲೋ ರಾವಣನ ದೇಗುಲವೂ ಇದೆಯಂತೆ! ಲಂಕೆಯವರೇ ಮರೆತ ರಾವಣನನ್ನು ನಮ್ಮವರು ನೆನೆಸುವುದು ಯಾರ ಪ್ರೇರಣೆಯಿಂದ? ಭಾರತವನ್ನು ಒಡೆಯುವ ಪರಧರ್ವಿುಯರ ಹುನ್ನಾರದಲ್ಲಿ ನಮ್ಮವರೂ ಸೇರಿಕೊಳ್ಳುವುದು ದುರದೃಷ್ಟವಲ್ಲವೇ?

 ರಾಷ್ಟ್ರಪ್ರೇಮಿಗಳ-ತ್ಯಾಗಿಗಳ-ಏಕತಾದ್ರಷ್ಟಾರರ, ಸಮನ್ವಯ, ಸಂಘಟಕ, ಸೂತ್ರಧಾರರ ತೇಜೋವಧೆಯ ಚಳವಳಿಗಳು ಒಂದು ಕಡೆ; ರಾಷ್ಟ್ರದ್ರೋಹಿ ‘ಅಸುರೀ’ ಶಕ್ತಿಗಳ ಕೊಂಡಾಟಗಳು ‘ಜಯಹೇ ಸಮಾರಂಭಗಳು’ ಇನ್ನೊಂದು ಕಡೆ, ಈಗ ವ್ಯಾಪಕವಾಗುತ್ತ, ಮುಗ್ಧರಿಗೆ ಗೊಂದಲ ತರುತ್ತ, ‘ಹಿಂದೂ ದಮನ’ ಕಾಯಕಗಳು ನಡೆಯುತ್ತಿರುವುದರಲ್ಲಿ ನೀವೂ ನಾವೂ ಒಂದು ವ್ಯೂಹವನ್ನು, ಜಾಲವನ್ನು ಇಂದು ಕಾಣುವುದಿದೆ. ಕಾಣುವುದು ಮಾತ್ರವಲ್ಲ, ಮಹಾತ್ಯಾಗಗಳಿಂದ ಸಂಪಾದಿಸದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಹೊರಶಕ್ತಿಗಳ ಸಂಚಿಗೆ, ಒಳದ್ರೋಹಿಗಳೂ ಮರುಳಾಗಿ ಮಾರಿಕೊಂಡು ಒಂದು ‘ಜರಾಸಂಧ-ಜಾಲ’ ಈಗೀಗ ಬಯಲಾಗುತ್ತಿದೆ. ಕಾಶ್ಮೀರದಲ್ಲಿ ‘ಹುರಿಯತ್’, ತಮಿಳುನಾಡಲ್ಲಿ ದ್ರಾವಿಡರೆಂದು ಭ್ರಮಿಸಿದ ನೇತಾರರು, ಕೇರಳದಲ್ಲಿ ಐಸಿಸ್ ಮತ್ತು ನಕ್ಸಲ್, ಮಾವೋಗಳ ಹಾವಳಿ, ಈಗ ಕರ್ನಾಟಕದಲ್ಲಿ ಸೆಕ್ಯುಲರಿಸ್ಟರು ಎಂದು ಕರೆದುಕೊಳ್ಳುವ ಕಾಂಗ್ರೆಸ್ಸು, ಪ್ರಚ್ಛನ್ನ ಕಾಂಗ್ರೆಸ್ಸಿಗರ ಕಮ್ಯುನಿಸ್ಟ್ ರೀತಿಯ ನಡವಳಿಕೆಗಳು, ಯಾರು ಎಲ್ಲಿ ಕೊಲೆಯಾದರೂ ‘ಆರ್​ಎಸ್​ಎಸ್, ಮೋದಿ, ಭಾಜಪ, ಹಿಂದೂಶಾಹಿ, ಪುರೋಹಿತಶಾಹಿ’ ಎಂದು ಬಿಂಬಿಸಿ, ದೂರಿ, ಅಪಪ್ರಚುರಿಸಿ, ಸ್ಥಾನಭದ್ರತೆಗೆ ದುರುಪಯೋಗಿಸುವ ‘ಮಾರೀಚ’ ರೀತಿಯ ರಾಜಕಾರಣಿಗಳೂ, ಬೀದಿ ಭಾಷಣಗಳೂ- ಎಲ್ಲವನ್ನೂ ಒಟ್ಟಾಗಿ ವೀಕ್ಷಿಸುವಾಗ ಒಂದು ಭಯಂಕರ ಚಿತ್ರ ಕಾಣಿಸುತ್ತದೆ.

ಇಲ್ಲಿ ಒಂದು ‘ದೈವಾಸುರ ರೀತಿಯ’ ಸ್ಪರ್ಧೆ, ಯುದ್ಧ, ವೈದಿಕ ದರ್ಶನದ ಹುರುಳಿನಲ್ಲಿ ಒಂದು ಸಾರ್ವಕಾಲಿಕ ಮರ್ಮವನ್ನು ತೆರೆದಿಡಬೇಕಾಗಿದೆ.

1) ಧ್ಯೇಯವಾದ, ಜೀವನವು ಸಮಷ್ಟಿಯಾಗಿಯೂ, ವೈಯಕ್ತಿಕವಾಗಿಯೂ ಆವಿಷ್ಕಾರದತ್ತ, Evolutionನತ್ತ, ಮಂಗಳಮಯ ಗುರಿಯತ್ತ ನಡೆದಿದೆ, ನಡೆಯಬೇಕು ಎಂಬ ಧ್ಯೇಯಾತ್ಮಕ ದಿಕ್ಕಿನ ರಾಷ್ಟ್ರನಿರ್ವಣ, ಅದಕ್ಕೆ ತಕ್ಕ ಔದ್ಯೋಗಿಕ ವ್ಯವಸ್ಥೆ, ಸಾಮಾಜಿಕ ಸಂಸ್ಥಾರಚನೆ, ಹಂತಹಂತವಾಗಿ ಅತ್ತ ಸಾಗಿಸುವ ವಿದ್ಯಾಸಂಸ್ಥೆಗಳು, ಗುರುಕುಲಗಳು, ದೇವಾಲಯಗಳು, ಮಠಮಾನ್ಯಗಳು, ಗೌರವಾರ್ಹರಾದ ವಿದ್ಯಾನಿಧಿ ತಪಸ್ವಿಗಳು, ಇದಕ್ಕೆ ಬೇಕಾದ ಕುಟುಂಬ ವ್ಯವಸ್ಥೆ, ಆಡಳಿತಯಂತ್ರ ನಿರ್ವಹಣೆ- ಇವು ಒಂದು ದಿಕ್ಕಿನತ್ತ ನಡೆಸುತ್ತ ಬಂದ ಮಹಾಯತ್ನಗಳು. The Foundations of Indian Culture ಎಂಬ ಮಹರ್ಷಿ ಅರವಿಂದರ ಮಹಾಗ್ರಂಥವನ್ನು ನೋಡಿ. ವಿಲಿಯಂ ಆರ್ಚರ್ ಎಂಬ ಹಿಂದುದ್ವೇಷಿಯೂ ಬ್ರಿಟಿಷರ, ಐರೋಪ್ಯರ ದೃಷ್ಟಿಯಲ್ಲಿ ಆಕ್ಷೇಪಿಸಿ ಬರೆದ ಒಂದು ಪುಸ್ತಕವನ್ನು ನೆಪವಾಗಿಟ್ಟುಕೊಂಡು ಶ್ರೀ ಅರವಿಂದರು ಈ ಮಹಾಗ್ರಂಥವನ್ನೇ ಬರೆದರು. ಈ ಪುಸ್ತಕದ ರಚನಾಕಾಲ, ಬ್ರಿಟಿಷರ ಆಡಳಿತ ವಿರುದ್ಧ ಸಂಘಟಿತ ಹಿಂದು ಸಮಾಜ ಸಂಸ್ಥೆಗಳು ಸೆಟೆದೆದ್ದು ನಿಂತು ವೈಚಾರಿಕ ಸಂಗ್ರಾಮ ನಡೆಸಿ ಯಶಸ್ವಿಯಾದ ಕಾಲ. ಅಲ್ಲಿ ಧ್ಯೇಯ ಇತ್ತು. ಕ್ರೖೆಸ್ತ ಮಿಷನರಿಗಳಿಗೆ ಮಹಾಹೊಡೆತ ತಂದ ಗ್ರಂಥ ಇದು. ಆಗ ಕಮ್ಯುನಿಸಂ ಇಲ್ಲಿ ಪ್ರಬಲವಾಗಿ ಇರಲಿಲ್ಲ. ಇಸ್ಲಾಂ ಇನ್ನೂ ಪೆಟ್ರೋ ಡಾಲರುಗಳಿಂದ ವಿಶ್ವವನ್ನೇ ಬೆದರಿಸುವ ಕಾಲ ಬಂದಿರಲಿಲ್ಲ. ಸ್ವಾತಂತ್ರ್ಯ ಬರುವ ತನಕ ಇದ್ದ ಈ ಧ್ಯೇಯಾತ್ಮಕ, ರಚನಾತ್ಮಕ, ಧನಾತ್ಮಕ, ಆತ್ಮವಿಶ್ವಾಸಪೂರ್ವಕ ಒಂದು ದೃಢದೃಷ್ಟಿ, ನೆಹರು ಕಾಲದಿಂದೀಚೆಗೆ ಸಂಪೂರ್ಣ ಬದಲಾಗಿ, ಕ್ಷುದ್ರ ಪಾತಳಿಯ ವ್ಯಾವಹಾರಿಕ ವ್ಯಾಪಾರಾತ್ಮಕ ಮಾರಕ ದೃಷ್ಟಿ ಉದಯವಾಯಿತು.

2) ಇಲ್ಲಿ ಧ್ಯೇಯ ಸತ್ತಿತು. ಆ ಸಾವಿಗೆ ಬೇರೆ ಬೇರೆ ಆಮದಾದ ‘ವಾದ’ಗಳು ವಿಷನೀರನ್ನೆರೆದವು. ಸಮತಾವಾದ, ಸಾಮ್ಯವಾದ, ಭೌತವಾದ ಈ ಸಿನಿಕ ದೃಷ್ಟಿಗೆ ಪೋಷಕವಾದ ದ್ವಿತೀಯ ಮಹಾಯುದ್ಧದ ನಂತರ ಐರೋಪ್ಯ ನೆಲ, ಜನತೆಯನ್ನು ಕೊಚ್ಚಿದ Existentialism, Realism, Sur-ealism, Absurdism ಮುಂತಾದ ಸಾಹಿತ್ಯ ಪ್ರಪಂಚವನ್ನು ಪ್ರವೇಶಿಸಿದ ಧೂಮಕೇತುಗಳು, ಬಿರುಗಾಳಿಗಳು, ಚಂಡಮಾರುತಗಳೂ ಸೇರಿ ನಮ್ಮಲ್ಲೂ ಅಡಿಗ, ಅನಂತಮೂರ್ತಿ, ಲಂಕೇಶ, ಬಂಡಾಯ ಸಾಹಿತಿಗಳು, ಅವರ ‘ಮಾರ್ಗ’ದರ್ಶನದ ಸಂಶೋಧಕರೂ, ‘ಖ್ಯಾತ’ ವಿಮರ್ಶಕರೂ, ದಿಕ್ಕುಗೆಟ್ಟ ದಲಿತ ಶೋಷಿತರ ದ್ವೇಷಬರಹಗಳೂ ಹುಲುಸಾಗಿ ಬೆಳೆದು, ಭಾರತ ಬೆಳೆಯಬೇಕೆಂಬ, ಬಲಾಢ್ಯವಾಗಬೇಕೆಂಬ, ಸಮೃದ್ಧವಾಗಬೇಕೆಂಬ ಕೂಗು ಅಡಗಿ, ಅದು ಅಪಹಾಸ್ಯಕ್ಕೂ ಈಡಾಗಿ, ಈವರೆಗೆ- ಮೋದಿ ಬರುವವರೆಗೆ- ‘ಹಿಂದು’ ಧ್ವನಿ ಎಚ್ಚೆತ್ತು, ಹಿಂದುತ್ವವು ಸೆಟೆದು ನಿಲ್ಲುವ ತನಕ- ಅಬ್ಬರಾರ್ಭಟಗಳಿಂದ ನಮ್ಮನ್ನು ಸಾಯಿಸುತ್ತಿದೆ. Existentialism ಎಂಬುದರ ಸಾರಸಂಗ್ರಹ ನೋಡಿ. ‘ಹುಟ್ಟು ಇದೆ. ಏಕೆ? ನಾವು ಇದ್ದೇವೆ. Existence ಇದೆ. ಹಾಗೇ ಸಾವೂ ಇದೆ. ನಡುವೆ ಕಾಮವಿದೆ. Eros ಎಂಬ ಗ್ರೀಕರ ಕಲ್ಪನೆ! ಅದನ್ನು ನಾವು ಮಾಡಿಕೊಂಡದ್ದಲ್ಲ. ಪ್ರಕೃತಿಸಿದ್ಧ, ಪ್ರಕೃತಿ ಪ್ರಚೋದಿತ ಅದು. ಅದರ ಪೂರಣಕ್ಕೆ ನಿಮ್ಮ ಪಾರಂಪರಿಕ ತಪು್ಪ-ಸರಿ ಮಾನದಂಡಗಳು ಬೇಕಿಲ್ಲ. ಅದೆಲ್ಲ ಪೊಳ್ಳು ಧ್ಯೇಯವಾದ. ಸ್ವರ್ಗ, ನರಕ, ಪುಣ್ಯ, ಪಾಪ ಕಲ್ಪನೆಗಳು ಜೀವನದಿಕ್ಕಿನ ಕಲ್ಪಿತ ಪೊಳ್ಳುಗ್ರಹಿಕೆಗಳು. ಇದೇ ಪುರೋಹಿತಶಾಹಿ, ಪಟ್ಟಭದ್ರರ ಹಿಡಿತದ ಸರಪಳಿ’- ಇತ್ಯಾದಿ. ಇದು ಕಮ್ಯುನಿಸಂ, ಫ್ರಾಯ್ಡಿಯಾನಿಸಂಗಳಿಗೆ, ಭೌತವಾದಕ್ಕೆ ಬಗ್ಗುವುದಾಗಿ ಎಲ್ಲ ಸೇರಿಕೊಂಡು ಯುರೋಪದಲ್ಲಿ ದಾಂಧಲೆ ಮಾಡಿ, ರೊಮ್ಯಾಂಟಿಕ್ ಕವಿ ಶೆಲ್ಲಿ, ವರ್ಡ್ಸ್​ವರ್ತ್, ಕೀಟ್ಸ್, ಟೆನಿಸನ್, ಅದೇ ಸಾಲಿನ ಕಾದಂಬರಿಕಾರರು, ನಾಟಕಕಾರರು ಎಲ್ಲರನ್ನೂ ಗುಡಿಸಿ ಅಪ್ರಸ್ತುತಮಾಡಿ ರಾಶಿಹಾಕಿತು.

ಬೇಂದ್ರೆಯವರ ‘ನಾಕುತಂತಿ’ ಕವನ ಸಂಗ್ರಹದ Heterodoxy ಕವನವನ್ನೂ, ಅದರ ಮೇಲೆ ನನ್ನ ವಿವರಣೆಯನ್ನೂ ನೋಡಿ (ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮದ ನೆಲೆ ಮತ್ತು ಆರ್ಷದೃಷ್ಟಿ). ಬೇಂದ್ರೆಯವರನ್ನೂ ಕಮ್ಯುನಿಸ್ಟರ ವಕ್ತಾರರನ್ನಾಗಿಸಲು ಪ್ರಬಂಧ ನಿಬಂಧಗಳು ಬರೆಯಲ್ಪಟ್ಟು (‘ಶಕ್ತಿಶಾರದೆಯ ಮೇಳ- ಡಿ.ಆರ್. ನಾಗರಾಜ್, ‘ಬೇಂದ್ರೆ ಕಾವ್ಯದ ವಿಭಿನ್ನ ನೆಲೆಗಳು’- ಸುಮತೀಂದ್ರ ನಾಡಿಗ) ಇವುಗಳ ಪೊಳ್ಳುತನವನ್ನು ನಾನು ಬಯಲುಮಾಡಿದ್ದೇನೆ. ಅವರಾರೂ ಉತ್ತರಿಸಿಲ್ಲ, ಈವರೆಗೆ. ಹಳೆಯ ಮೈಸೂರಿನಲ್ಲಿ ಕುವೆಂಪು ಅವರನ್ನೂ, ಅವರ ಕೃತಿಗಳನ್ನೂ ಇದೇ ಚೌಕಟ್ಟಿನಲ್ಲಿ ಬಿಗಿಯುವ ಯತ್ನಗಳೂ ಆಗಿವೆ. ಕುವೆಂಪು, ಬೇಂದ್ರೆ, ಪುತಿನ- ಇವರೆಲ್ಲ ಅಧ್ಯಾತ್ಮ ತಿರಸ್ಕರಿಸಿ ಬರೆದವರಲ್ಲ. ಸುಧಾರಕ ರೀತಿಯ ಕವನಗಳು ಅವರು ಬರೆದದ್ದು ಇಲ್ಲಿ ಸೇರುವುದಿಲ್ಲ. ಸುಧಾರಣೆ, ಜೀವಾಧಾರದ ವ್ಯಾಪಾರ. ಅದು ಬೇಕೇಬೇಕು. ಭಾರತೀಯತ್ವ ನಾಶ, ಹಿಂದು ಮೂಲ ಭಾವನೆ ಗ್ರಹಿಕೆಗಳ ನಾಶ- ಸುಧಾರಣೆಯಲ್ಲಿ ಬರುವುದಿಲ್ಲ. ವಿಧ್ವಂಸನ ಕ್ರಿಯೆಯಲ್ಲಿ ‘ಕಮ್ಯುನಿಸ್ಟ್ ಕ್ರಾಂತಿಯ’ ರೀತಿಯಲ್ಲಿ ಇವು ಸೇರುತ್ತವೆ. ಇಲ್ಲಿ ಈಗ ಹುಟ್ಟಿಕೊಂಡವೇ ಈಗಣ ಅನೇಕ ಬುಡ, ದಿಕ್ಕು, ಬೆಲೆ, ನೆಲೆ ಕಳಕೊಂಡ ಆಯಾಮಗಳು.

3) ‘ಸಾಹಿತ್ಯವು ಬರೀ ಅಭಿವ್ಯಕ್ತಿಯೇ ಹೊರತು ಜೀವನ ಪರಿವರ್ತಕ ಉಪಕರಣವೋ, ಸಾಧಕವೋ, ಶಕ್ತಿಯೋ ಅಲ್ಲ’ ಎಂದು ಒಂದು ವರ್ಗದ ತಟಸ್ಥ ಭ್ರಾಂತಿಯ ಕವಿ, ಕಾದಂಬರಿಕಾರರು ಈಗೀಗ ಹೇಳುತ್ತ ಬಂದಿದ್ದಾರೆ. ನನ್ನ ಹಳೆಯ ಮಿತ್ರರೂ, ಸಹಪಾಠಿಗಳೂ, ವಾರಿಗೆಯವರೂ ಕೆಲವರು ಹೀಗೆ ಬರೆಯುತ್ತಾರೆ, ಹೇಳುತ್ತಾರೆ. ಆದರೆ ಟಿ.ಎಸ್. ಎಲಿಯಟ್ ಹೇಳುತ್ತಾನೆ- “There are times when literature has to become dynamite to harmful ideas’ (Critical Essays)& – ‘ಸಾಹಿತ್ಯವು ಅಪಾಯಕರ ಗ್ರಹಿಕೆಗಳನ್ನು ಸಿಡಿಸುವ ಡೈನಮೈಟ್ ಆಗಬೇಕಾದ ಕಾಲಗಳೂ ಇವೆ’ ಎಂಬುದು ಇದರರ್ಥ. ಅವನು ಬಿಟ್ಟದ್ದು ಹೇಳುತ್ತೇನೆ- ಅಪಾಯಕರ ಕಲ್ಪನೆಗಳನ್ನು ಹೆಚ್ಚು ಅಪಾಯಕರ ಕಲ್ಪನೆಗಳಿಂದ ಕೊಚ್ಚಿದರೆ ನೀವು ಸ್ಮಶಾನವನ್ನೇ ಸೃಷ್ಟಿಸುತ್ತೀರಿ! Existentialists ಮುಂತಾದವರು ಮಾಡಿರುವುದೂ ಇದನ್ನೇ. ಅದಲ್ಲ, ಎಲಿಯಟ್ ಉದ್ದೇಶಿಸಿದ್ದು! ವ್ಯಾಸಭಾರತ, ವಾಲ್ಮೀಕಿ ರಾಮಾಯಣ, ಶುಕ ಭಾಗವತಾದಿಗಳು ಶಾಶ್ವತ ನೆಲೆ ಕೊಟ್ಟು, ಕೃತಕ ಮೌಲ್ಯಗಳಿಗೆ ಕೊಚ್ಚೆ ಸಿಡಿಸುವ ‘ಡೈನಮೈಟುಗಳು’ ಬೇರೆಯಲ್ಲ. ಷೇಕ್ಸ್​ಪಿಯರನ 400ನೇ ಜಯಂತಿಗೆ ನಾನಿದ್ದ ಒಂದು ವಿಶ್ವವಿದ್ಯಾಲಯದಲ್ಲಿ ಪ್ರಬಂಧಗಳನ್ನು ಬರೆಸಿ ಓದಿಸಲಾಯ್ತು. ನಾನು ‘ಷೇಕ್ಸ್​ಪಿಯರನ ಸಾಹಿತ್ಯದಲ್ಲಿ ಜೀವನದರ್ಶನ’ ಕುರಿತಾಗಿ ಒಂದು ಪ್ರಬಂಧ ಬರೆದೆ. ಆಗಣ ಇಲಾಖಾ ಮುಖ್ಯಸ್ಥರಿಗೆ ಇದು ಸೇರಲಿಲ್ಲ. ‘ಅಕಸ್ಮಾತ್ತಾಗಿ ಸಾಹಿತಿಯಾದವನ ಸಾಹಿತ್ಯದಲ್ಲಿ ಏನು ದರ್ಶನ ಇದೆ?’ ಎಂದು ಮೂಗುಮುರಿದರು. ನಾನು ತೋರಿಸಿದೆ- ‘ಇಲ್ಲಿದೆ ಕ್ರೖೆಸ್ತಮತ ತಿರಸ್ಕಾರಪೂರ್ವಕ ಮಹಾಮಾನವತಾ ದರ್ಶನ’ ಎಂದು. ಅರೆಮನಸ್ಸಿನಿಂದ ಅವರು ಓದಲು ನನಗೆ ಅನುಮತಿಸಿದರು!

ಕೊಚ್ಚಬೇಕಾದ್ದು ಪೊಳ್ಳು, ಕೃತಕ ಮೌಲ್ಯಗಳನ್ನು. ಸಂವರ್ಧಿಸಬೇಕಾದ್ದು ಶಾಶ್ವತ ಮೌಲ್ಯಗಳನ್ನು- time honoured and time tested ಎಂಬುವನ್ನು. ಭಾರತ ನೆಲದಲ್ಲಿ ಇವನ್ನೇ ಕೊಚ್ಚುವ ಸಾಹಿತಿಗಳೂ, ವಿಮರ್ಶಕರೂ, ಇವರ ಕೃಪಾಪೋಷಿತ ಹಿಂಸಾವಾದಿಗಳೂ, ನಕ್ಸಲರೂ, ಮಾವೋವಾದಿಗಳೂ, ನಾನಾಬಗೆಯ ಎಡಪಂಥೀಯರ ಬರಹಗಾರರೂ ಹುಟ್ಟಿಬರುತ್ತಿರುವುದರಿಂದಲೇ ಈಗ ಪ್ರಕಟವಾಗಿ ಹಿಂಸೆ, ಕೊಲೆ, ಸಾಮೂಹಿಕ ಹಿಂಸಾತ್ಮಕ ಚಳವಳಿಗಳು ಆರಂಭವಾಗಿವೆ. ಕನ್ಹಯ್ಯ, ರೋಹಿತ್ ವೇಮುಲ, ಗೌರಿ ಲಂಕೇಶ್, ಕಲಬುರ್ಗಿ, ಧಾಬೋಲ್ಕರ್, ಪನ್ಸಾರೆ ಇಂಥವರನ್ನು ದಾರಿ ತಪ್ಪಿಸುತ್ತಿರುವ ವಾದಗಳು ಯಾವುವು? ಯಾವ ಮೂಲದವು? ಯಾರ ಪೋಷಿತ? ಎಂಬುದಕ್ಕೆ ಉತ್ತರ ಬೇಕಾಗಿದೆ. ಪಾಕ್ ಉಗ್ರರಿಗೆ, ಭಾರತ ಹುರಿಯತ್ತರಿಗೆ ಹಣ ಸಂದಾಯದ ಸಂಬಂಧ ಇತ್ತೀಚೆಗೆ ಬೆಳಕಿಗೆ ಬಂದಿದೆ! ಹಾಗೇ ಚೀನಾ ಮೂಲದ ಪ್ರಚೋದನೆಯ ಸಂಬಂಧವನ್ನೂ ಸಾಹಿತಿಗಳಲ್ಲಿ ಹುಡುಕಬೇಕಿದೆ. ಮೈಸೂರಿನಲ್ಲಿ ‘ಮಹಿಷಾಸುರ ವರ್ಧಂತಿ’ಯ ಆಚರಣೆ ಇಲ್ಲಿಯೇ ಗಮನಿತವಾಗಬೇಕು.

ಹಾಗೇ ಬಿಟ್ಟರೆ ಕಂಸ ಜಯಂತಿ, ಜರಾಸಂಧ ಜಯಂತಿ, ದುರ್ಯೋಧನ ಜಯಂತಿ, ಸೈಂಧವ ಜಯಂತಿ, ಮಾರೀಚ ಜಯಂತಿಗಳೂ ಹುಟ್ಟಿಕೊಳ್ಳುತ್ತವೆ! ಎಲ್ಲೋ ಒಂದೂರಲ್ಲಿ ರಾವಣನ ದೇವಾಲಯವೂ ಇದೆಯಂತೆ! ಲಂಕೆಯವರೇ ಮರೆತ ರಾವಣನನ್ನು ನಮ್ಮವರು ನೆನೆಸುವುದು ಯಾರ ಪ್ರೇರಣೆಯಿಂದ? ಭಾರತವನ್ನು ಒಡೆಯಲು ಈಸಾಯಿ, ಇಸ್ಲಾಮೀಯರ ಜತೆಗೆ ನಮ್ಮವರೂ ಸೇರಿಕೊಳ್ಳುವುದು ಎಂಥ ದುರದೃಷ್ಟ? ಮಾರೀಚ ಚೆನ್ನಾಗಿ ಬಾಳಬಹುದಿತ್ತು, ಅವರಮ್ಮ ತಾಟಕಿಯೂ ಸಹ! ಆದರೆ ಅವರ ವಧೆಯನ್ನು ರಾಮನೇ ಮಾಡಬೇಕಾಯ್ತು. ಕೊಲೆ ಆಗಬಾರದು. ‘ಆದರೆ ನಾನೂ ಸತ್ತು

ನಿನ್ನನ್ನೂ ಸಾಯಿಸುತ್ತೇನೆ’ ಎಂಬ ಜಿಹಾದಿಗಳನ್ನು ಹೇಗೆ ದಾರಿಗೆ ತರುತ್ತೀರಿ? ಸಿಬಿಐ, ಸಿಐಡಿ, ಎಸ್​ಐಟಿಗಳು ಇಲ್ಲಿ ಉಪಯೋಗವಿಲ್ಲ. Good will have to put down Evil. ಅದೇ ಸರಿದೃಷ್ಟಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top