Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ರಾಷ್ಟ್ರೀಯತೆಯ ಹೊಸಪರ್ವ ಜೀವ ತಳೆಯುತ್ತಿದೆ

Monday, 20.03.2017, 8:22 AM       No Comments

ಇತ್ತೀಚೆಗೆ ಹೊರಬಂದಿರುವ ಪಂಚರಾಜ್ಯ ಚುನಾವಣಾ ಫಲಿತಾಂಶ ಭಾರತ ಕೇಸರಿಮಯವಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಯ ಕಮಲ ಅರಳಿದೆ. ಇನ್ನು ತಮಿಳುನಾಡು ಮತ್ತು ಕೇರಳದಲ್ಲೂ ಬಿಜೆಪಿ ಸರ್ಕಾರ ರಚನೆ ದಿನಗಳು ದೂರವಿಲ್ಲವೇನೋ.

 ಭಾರತೀಯ ಸರ್ವೆಕ್ಷಣಾ ವಿಭಾಗ (ಸರ್ವೆ ಆಫ್ ಇಂಡಿಯಾ)ದ ಚಿಹ್ನೆಯಲ್ಲಿ ಕಂಡುಬರುವ ಸಾಲು ‘ಆ ಸೇತು ಹಿಮಾಚಲಂ’. ವೀರ ಸಾವರ್ಕರ್ 1905ರಲ್ಲಿ ಅಂಡಮಾನ್ ಜೈಲಿನಲ್ಲಿದ್ದಾಗ ಇದನ್ನೇ ಹೇಳಿದ್ದರು. ‘ಆ ಸಿಂಧೂ ಸಿಂಧೂ ಪರ್ಯಂತ’. ಇದರರ್ಥ ಸಿಂಧೂ ನದಿಯಿಂದ ಹಿಂದೂ ಮಹಾಸಾಗರದವರೆಗೆ ಎಂದು. ನರೇಂದ್ರ ಮೋದಿ ಇದನ್ನು ಬಿಜೆಪಿಯಲ್ಲಿ ಅಳವಡಿಸಿಕೊಳ್ಳುತ್ತಿದ್ದು ಅಕ್ಷರಶಃ ಓರ್ವ ಚಕ್ರವರ್ತಿಯಂತೆ ಕೇಸರಿ ಧ್ವಜವನ್ನು ದೇಶದ ಮೂಲೆ ಮೂಲೆಗಳಲ್ಲಿ ಸ್ಥಾಪಿಸುತ್ತಿದ್ದಾರೆ.

ಕಲ್ಪನೆಯಲ್ಲಲ್ಲ, ಕವಿತೆಯಲ್ಲಲ್ಲ ಅಕ್ಷರಶಃ ಇದು ಸತ್ಯವಾಗುತ್ತಿದೆ. ಲೆಹ್​ನಿಂದ ಕನ್ಯಾಕುಮಾರಿ, ತವಾಂಗ್​ನಿಂದ ಓಕಾವರೆಗೆ. ಸಿಂಧೂ ನದಿ ತಟದಿಂದ ಹಿಂದೂ ಮಹಾಸಾಗರ ಮತ್ತು ವೈಷ್ಣೋದೇವಿ ತೀರ್ಥಕ್ಷೇತ್ರದಿಂದ ಮಾತೆ ಕಾಮಾಕ್ಯ ದಿವ್ಯಕ್ಷೇತ್ರ ಮತ್ತು ಇದೀಗ ಮಂಗೇಶ ದೇವರ ಗೋಮಾಂತಕದಿಂದ ಗೋವಿಂದನ ಮಣಿಪುರದವರೆಗೆ ಹಿಂದೂ ಸಭ್ಯತೆ, ಸಂಸ್ಕೃತಿ, ಉದಾರ ವಿಚಾರಧಾರೆ ಮುಂತಾದವುಗಳಿಗೆ ನಿಷ್ಠಾವಂತವಾಗಿರುವ ಬಿಜೆಪಿ ವಿಸ್ತರಿಸುತ್ತಿದ್ದು, ಪಕ್ಷ ಹೊಸರೂಪ ಪಡೆಯುವಂತಾಗಿದೆ.

ನಿಜವಾಗಿ ಹೇಳಬೇಕೆಂದರೆ ಇದೊಂದು ಆರಂಭ. ಈ ಆರಂಭದ ಅರ್ಥ ಶಕ್ತಿವರ್ಧನೆ ಮತ್ತು ಲೋಕತಾಂತ್ರಿಕ ಪರಾಕ್ರಮ. ಆಕ್ರಮಣಕಾರರು ನೂರಾರು ವರ್ಷಗಳಿಂದ ಭಾರತದ ಮೇಲೆ ದಾಳಿ ನಡೆಸುತ್ತಲೇ ಬಂದಿದ್ದಾರೆ. ಸ್ವಾತಂತ್ರ್ಯ ಬಳಿಕವೂ ಇದು ನಿಂತಿಲ್ಲ. ಸ್ವಾತಂತ್ರ್ಯ ಬಳಿಕ ವೈಚಾರಿಕ ಶತ್ರುಗಳ ಆಕ್ರಮಣದಿಂದ ಭಾರತ ನಿರಂತರವಾಗಿ ಗಾಯಗೊಳ್ಳುತ್ತಲೇ ಬಂದಿದೆ. ಆದರೆ, ಇದೀಗ ಕನಸುಗಳು ಮತ್ತೊಮ್ಮೆ ಚಿಗುರೊಡೆಯುತ್ತಿರುವ ಮುನ್ಸೂಚನೆ ಸಿಕ್ಕಿದೆ. ಗ್ರಾಮಗಳಿಗೆ ವಿದ್ಯುತ್, ನೀರು ಸರಬರಾಜು, ಶಿಕ್ಷಣ ಸಂಸ್ಥೆಗಳು ಮತ್ತು ರಸ್ತೆ ಸಂಪರ್ಕ ಸಾಧ್ಯವಾಗಿದೆ ನಿಜ. ಆದರೆ ಅಭಿವೃದ್ಧಿ ಎಂದರೆ ಕೇವಲ ಇಷ್ಟಕ್ಕೇ ಸೀಮಿತ ಎನ್ನಲಾಗುವುದಿಲ್ಲ. ಭಾರತ ಕೇವಲ ಬೌದ್ಧಿಕ ವಸ್ತುಗಳ ಅಭಿವೃದ್ಧಿಯಿಂದ ರೂಪುಗೊಂಡಿರುವುದಲ್ಲ. ಇದು ಕೇವಲ ದೇಹವಷ್ಟೇ. ಅದಕ್ಕೆ ಪ್ರಾಣ ತುಂಬಬೇಕಾದರೆ ಸಂಸ್ಕೃತಿ ಮತ್ತು ಶೌರ್ಯದಿಂದ ಮಾತ್ರ ಸಾಧ್ಯ. ಆದರೆ ಅಂತಹ ಸಂಸ್ಕೃತಿ ಮತ್ತು ಶೌರ್ಯ ಕಳೆದ ಕೆಲ ದಶಕಗಳಿಂದ ತೆರೆಮರೆಗೆ ಸರಿದಿವೆ.

ಕೆಲ ಮೌಲ್ವಿಗಳು ಅಸ್ಸಾಂನ ಉದಯೋನ್ಮುಖ ಗಾಯಕಿ ನಹೀದಾ ಅಫ್ರೀನ್ ವಿರುದ್ಧ ಹಲವು ಫತ್ವಾ ಹೊರಡಿಸಿದ್ದಾರೆ. ಇದು ನಮ್ಮ ಪರಂಪರೆ, ಸಂಸ್ಕೃತಿಯಲ್ಲ. ಛತ್ತೀಸ್​ಗಢದ ಸುಕ್ಮಾದಲ್ಲಿ ಕಮ್ಯೂನಿಸ್ಟ್ ವಿಚಾರಧಾರೆ ಹೊಂದಿರುವ ಆತಂಕವಾದಿಗಳು ಸಿಆರ್​ಪಿಎಫ್​ನ 12 ಯೋಧರ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದರು. ಕೇರಳದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಲೇ ಇವೆ. ಇವುಗಳೆಲ್ಲವೂ ಹಿಂದೂ ವಿರೋಧಿ ಆಕ್ರಮಣದ ಭಾಗವೇ ಆಗಿದೆ. ಇಂತಹ ವೈಚಾರಿಕ ದ್ರೋಹದಿಂದ ನಾವು ಹೊರಬರಬೇಕು.

ವಿಶ್ವಾದ್ಯಂತ ನೆಲೆಸಿರುವ ತಮಿಳರ ಬಗ್ಗೆ ತಮಿಳುನಾಡಿನ ವಿದ್ವಾನ್

ಡಾ. ಸೂರ್ಯನಾರಾಯಣ ಅವರು ಬರೆದಿರುವ ಪುಸ್ತಕದ ಕುರಿತು ಕಳೆದ ಕೆಲ ದಿನಗಳ ಹಿಂದೆ ಅಂತಾರಾಷ್ಟ್ರೀಯ ಸಹಯೋಗ ಪರಿಷದ್ ಚರ್ಚಾಗೋಷ್ಠಿಯನ್ನು ಆಯೋಜಿಸಿತ್ತು. ಶ್ರೀಲಂಕಾದಿಂದ ಮಲೇಷ್ಯಾವರೆಗೆ ಎಲ್ಲ ಕಡೆಯೂ ತಮಿಳರ ಮೇಲೆ ದೌರ್ಜನ್ಯಗಳು ನಡೆದಿವೆ. ಇಂದಿಗೂ ನಡೆಯುತ್ತಲೇ ಇವೆ. 30 ಸಾವಿರ ತಮಿಳು ಹಿಂದೂಗಳು ಇಂದಿಗೂ ಶರಣಾರ್ಥಿಗಳಾಗಿದ್ದಾರೆ. ಅವರ ರಕ್ಷಣೆಗಾಗಿ ಯಾರಾದರೂ ಮುಂದೆ ಬಂದಿದ್ದಾರೆಯೇ? ಮಲೇಷ್ಯಾದಲ್ಲಿ ಒಂದು ಲಕ್ಷಕ್ಕೂ ಅಧಿಕ ತಮಿಳ ಹಿಂದೂಗಳಿಗೆ ಪೌರತ್ವವೇ ಇಲ್ಲ ಎಂಬ ವಾಸ್ತವಾಂಶಗಳನ್ನು ಅಲ್ಲಿ ಅನಾವರಣಗೊಳಿಸಲಾಯಿತು. ಇಂದಿಗೂ ಕೇರಳ, ಕಾಶ್ಮೀರ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ ಸೇರಿದಂತೆ ಇತರೆಡೆಗಳಲ್ಲಿ ಹಿಂದೂ ಎಂಬ ಕಾರಣಕ್ಕಾಗಿಯೇ ಹಲ್ಲೆಗಳು ನಡೆಯುತ್ತಿವೆ ಎನ್ನುವುದು ವಾಸ್ತವ ಸಂಗತಿ. ಇದನ್ನು ತಡೆಯುವವರು ಯಾರು?

ಭಾರತೀಯನಾಗಿರುವುದು ಕೇವಲ ಅಭಿಮಾನದ ವಿಚಾರವಲ್ಲ. ಭಾರತೀಯನಾಗಿರುವುದು ಸುರಕ್ಷತೆಯ ಗ್ಯಾರಂಟಿಯೂ ಆಗಿರುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ನೆಲೆಸಿರುವ ಭಾರತೀಯನಿಗೆ ಅಥವಾ ಭಾರತೀಯ ಮೂಲದ ವ್ಯಕ್ತಿಗೆ ತನ್ನೊಂದಿಗೆ ಬೆಸೆದುಕೊಂಡಿರುವ ಭಾರತ ಎಂಬ ಶಬ್ದದ ಕಾರಣದಿಂದ ತಿರಸ್ಕಾರ ಎದುರಿಸುವಂತಾಗಬಾರದು. ಇಂತಹ ಶಕ್ತಿಶಾಲಿ ಭಾರತ ನಿರ್ವಣದ ಅಗತ್ಯವಿತ್ತು. ಆ ಪರ್ವ ಈಗ ಆರಂಭವಾದಂತೆ ಕಾಣಿಸುತ್ತಿದೆ.

ಪಂಜಾಬ್ ಮತ್ತು ಗೋವಾದಿಂದ ಆಪ್ ಮಾಯವಾಗುವಂತೆ ಮಾಡಿದ ರಾಷ್ಟ್ರನಿಷ್ಠ ಜನಸಮರ್ಥನೆಗೆ ಅಭಾರಿಗಳಾಗಿರಬೇಕು. ಉತ್ತರಪ್ರದೇಶವನ್ನು ಪರಿವಾರದ ಜಮೀನುದಾರಿಕೆ ಮತ್ತು ರಾಜಕೀಯ ಲೂಟಿಯ ಶಿಕಾರಿಯನ್ನಾಗಿ ಮಾಡಿದ್ದವರಿಗೆ ಜನರೇ ಸರಿಯಾದ ಉತ್ತರ ನೀಡಿದ್ದಾರೆ. ಅಯೋಧ್ಯೆ, ಕಾಶಿ ಮತ್ತು ಮಥುರಾ ಇರುವ ಜಾಗವನ್ನು ಭಾರತದ ಆತ್ಮವೆಂದು ಕರೆದರೆ ಅದರಲ್ಲಿ ತಪ್ಪೇನಿದೆ? ಇದನ್ನೇ ಆಧರಿಸಿ ಸಮಾಜವಾದಿ ನಾಯಕ ರಾಮಮನೋಹರ್ ಲೋಹಿಯಾ ಭಾರತದ ಮೂರು ಕನಸುಗಳು ರಾಮ, ಕೃಷ್ಣ ಮತ್ತು ಶಿವ ಎಂದು ಹೇಳಿದ್ದರು. ಲೋಹಿಯಾರ ಈ ಮಾತನ್ನು ಸಮಾಜವಾದಿ ಪಕ್ಷ ಮರೆತುಬಿಟ್ಟಿದೆ. ಇದು ಭಾರತೀಯರೆಲ್ಲರ ಕನಸಾಗಿದೆ. ನಮ್ಮ ಭಕ್ತಿ, ನಂಬಿಕೆ ಬದಲಾದರೂ ನಮ್ಮ ಪೂರ್ವಜರು ಬದಲಾಗುವುದಿಲ್ಲ. ನಮ್ಮ ಕನಸೂ ಬದಲಾಗುವುದಿಲ್ಲ.

ಉತ್ತರಪ್ರದೇಶ ರಾಮ, ಕೃಷ್ಣ ಮತ್ತು ಶಿವನ ಪ್ರದೇಶವಾಗಿದೆ. ಇಲ್ಲಿ ಪುಣ್ಯತೀರ್ಥವಿದೆ, ತ್ರಿವೇಣಿ ಸಂಗಮವಿದೆ. ಅದು ಉತ್ತರಪ್ರದೇಶವನ್ನು ವಿಭಿನ್ನವಾಗಿಸುತ್ತದೆ. ಇದನ್ನು ನಿಭಾಯಿಸುವುದು ಇದೀಗ ಬಿಜೆಪಿಯ ಕೈಯಲ್ಲಿದೆ. ಈ ತ್ರಿವೇಣಿ ಸಂಗಮವನ್ನು ವೋಟ್​ಬ್ಯಾಂಕ್ ರಾಜಕಾರಣದಿಂದ ಹೊರತಂದು ಎಲ್ಲರ ಸಹಕಾರದಿಂದ ಗಾಂಧಿ-ದೀನದಯಾಳ ಮತ್ತು ಲೋಹಿಯಾರ ವೈಚಾರಿಕ ತ್ರಿವೇಣಿಯನ್ನಾಗಿ ಬದಲಾಯಿಸಬೇಕಾಗಿದೆ.

ಮಣಿಪುರದಲ್ಲಿ ಬಿಜೆಪಿ ಗೆದ್ದಿರುವುದು ರಾಷ್ಟ್ರೀಯತೆ ರಕ್ಷಾಯಜ್ಞವು ಯಶಸ್ವಿಯಾದ ಪ್ರತೀಕವಾಗಿದೆ. ಇಲ್ಲಿ ಕಳೆದ ಎರಡು ದಶಕಗಳಿಂದ ಬಂಡುಕೋರ ಸಂಘಟನೆಗಳ ಮೆರೆದಾಟವಿತ್ತು. ಹಿಂದಿಯ ಒಂದೇ ಒಂದು ಪೋಸ್ಟರ್ ಅಂಟಿಸುವುದಕ್ಕೂ ಅವಕಾಶವಿರಲಿಲ್ಲ. ಹಿಂದಿ ಸಿನಿಮಾಗಳನ್ನು 20 ವರ್ಷಗಳಿಂದ ನಿರ್ಬಂಧಿಸಲಾಗಿತ್ತು. ಇಲ್ಲಿನ 14 ಬಂಡುಕೋರ ಸಂಘಟನೆಗಳು ಗೃಹಸಚಿವಾಲಯದ ಪಟ್ಟಿಯಲ್ಲಿವೆ. ಇದರಲ್ಲಿ ಪ್ರಮುಖ ಸಂಘಟನೆ ಪೀಪಲ್ಸ್ ಲಿಬರೇಷನ್ ಆರ್ವಿು. ಇದು ಚೀನಾ ಸೇನೆಯ ಹೆಸರಾಗಿದೆ. ಬಿಜೆಪಿ ಸರ್ಕಾರ ಇಂತಹ ಜಾಗದಲ್ಲೂ ಭಾರತದ ಆತ್ಮವನ್ನು ಪುನಃ ಪ್ರತಿಷ್ಠಾಪಿಸಲು ಹೊರಟಿದೆ.

ಪಂಜಾಬ್​ನಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಕೂಡ ಸ್ವಾಗತಿಸುತ್ತೇನೆ. ಆಪ್​ನ ಸಂಕಷ್ಟದಿಂದ ರಕ್ಷಿಸಿದ್ದಕ್ಕಾಗಿ ಆ ಪಕ್ಷಕ್ಕೆ ಧನ್ಯವಾದಗಳು. ನನ್ನ ಮಿತ್ರ ನವಜೋತ್ ಸಿಂಗ್ ಸಿಧು ಯಶಸ್ವಿಯಾಗಲಿ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಪಂಜಾಬ್ ಮಾರಕ ಡ್ರಗ್ಸ್ ಜಾಲದಿಂದ ಹೊರಬರಲಿ. ಇದೇ ನನ್ನ ಹಾರೈಕೆಯಾಗಿದೆ. ಭಾರತದ ವಿಜಯದ ಆರಂಭಿಕ ಪರ್ವವಿದು. ಕೇಸರಿಯ ಹೋಳಿ ಇಲ್ಲಾಗಿದೆ. ಇನ್ನು ಕೇಸರಿಯ ಪೊಂಗಲ್ ಮತ್ತು ಕೇಸರಿಯ ಓಣಂ ಕೂಡ ದೂರವಿರಲಾರದು.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top