Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News

ರಾಜ್ಯದ ಖಜಾನೆ ಖಾಲಿ ಖಾಲಿ?

Sunday, 15.10.2017, 3:06 AM       No Comments

ಬೆಂಗಳೂರು: ಸಾಲಮನ್ನಾ ಯೋಜನೆಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಮಾಡುತ್ತಿರುವ ಕಸರತ್ತು ನೋಡಿದರೆ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆಯೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ.

ಮೂಲಸೌಕರ್ಯ, ಕೃಷಿ, ಕಾನೂನು ಸುವ್ಯವಸ್ಥೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ರ‍್ಯಾಂಕಿಂಗ್ ಕುಸಿಯುತ್ತಿದೆ ಎಂಬ ವರದಿಯ ಬೆನ್ನಲ್ಲೇ, ರೈತರ ಸಾಲಮನ್ನಾ ಯೋಜನೆಗೆ ಹಣ ಹೊಂದಿಸಲು ಹಾಗೂ ವಿಶ್ವವಿದ್ಯಾಲಯಗಳಿಂದ ಹಣ ಪಡೆಯಲು ಮಾಡುತ್ತಿರುವ ಕಸರತ್ತುಗಳು ಇದನ್ನು ಖಾತ್ರಿಪಡಿಸುತ್ತಿವೆ. ರೈತರ ಸಾಲಮನ್ನಾ ಯೋಜನೆಗೆ 8,156 ಕೋಟಿ ರೂ ಅಗತ್ಯವಿದ್ದರೂ, ಸುಮಾರು 2 ಲಕ್ಷ ಕೋಟಿ ರೂ. ಆಯವ್ಯಯ ಮಂಡಿಸುವ ಸರ್ಕಾರಕ್ಕೆ ಇದು ದೊಡ್ಡ ಹೊರೆಯಾಗಲಾರದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರು. ಆದರೆ ಈಗ ಸಾಲಮನ್ನಾದ ಮೊದಲ ಕಂತಿಗೆ ಹಣ ಹೊಂದಿಸಲು ಮಾಡುತ್ತಿರುವ ಕಸರತ್ತು ರಾಜ್ಯದ ಆರ್ಥಿಕ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಹಣವನ್ನು ಸಾಲದ ರೂಪದಲ್ಲಿ ಅಥವಾ ವರ್ಗಾಯಿಸಿಕೊಳ್ಳಲು ಮುಂದಾಗುವ ಹಂತಕ್ಕೆ ಆರ್ಥಿಕ ಇಲಾಖೆ ಬಂದು ನಿಂತಿರುವುದು ಗಮನಕ್ಕೆ ಬಂದಿದೆ. ವಿಶ್ವವಿದ್ಯಾಲಯಗಳಿಂದ 1600 ಕೋಟಿ ರೂ., ಕಾರ್ವಿುಕ ನಿಧಿಯಿಂದ 4 ಸಾವಿರ ಕೋಟಿ ರೂ. ಪಡೆಯುವ ವಿಫಲ ಪ್ರಯತ್ನದ ಬಳಿಕ ಈಗ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ರಾಜ್ಯಪಾಲರ ಮಧ್ಯಪ್ರವೇಶದ ಬಳಿಕ ವಿವಿ ಹಣ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕಾರ್ವಿುಕ ನಿಧಿ ಬಳಸಿಕೊಳ್ಳಲು ಸರ್ಕಾರಕ್ಕೆ ಆಗುತ್ತಿಲ್ಲ. ಹಾಗಾಗಿ ಸಾಲಮನ್ನಾ ಯೋಜನೆಗೆ ಅಗತ್ಯವಾದ ಹಣ ಸಂಗ್ರಹ ಮಾಡಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತವನ್ನು(ಇನ್ವೆಸ್ಟಿಬಲ್ ಸರ್ಪ್ಲಸ್) ಅಪೆಕ್ಸ್ ಬ್ಯಾಂಕ್​ನಲ್ಲಿ ಠೇವಣಿ ಇಡುವಂತೆ ಸೂಚನೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಸಂಸ್ಥೆಯಿಂದ 1400 ಕೋಟಿ ರೂ. ಠೇವಣಿ ವರ್ಗಾಯಿಸುವಂತೆ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.

ನಿಯಮಗಳಿಂದ ಅಡ್ಡಿ: ಹಣವನ್ನು ಠೇವಣಿ ಇಡಲು ಮಾನದಂಡಗಳು ಅಡ್ಡಿಯಾಗುತ್ತವೆ ಎಂಬ ಎಂಎಂಎಲ್ ತಿಳಿಸಿತ್ತು. ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್​ಎನ್ ಪ್ರಸಾದ್ ಸ್ಪಷ್ಟನೆ ನೀಡಿ, ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಠೇವಣಿ ಇಡಿ. ಎಂಎಂಎಲ್​ಗೆ ಯಾವುದೇ ನಷ್ಟವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಅಪೆಕ್ಸ್ ಬ್ಯಾಂಕ್ ಸಹ ಪತ್ರ ಬರೆದು ತಾನು ಎಲ್ಲ ರೀತಿಯಲ್ಲಿ ಸಶಕ್ತನಾಗಿದ್ದು, ಠೇವಣಿ ಇಡಬಹುದು ಎಂದು ತಿಳಿಸಿತ್ತು. ಈ ವಿಚಾರವನ್ನು ಸೆ. 11ರ ಸಭೆಯಲ್ಲಿ ಎಂಎಂಎಲ್ ರ್ಚಚಿಸಿತ್ತು. ಈ ರೀತಿ ಠೇವಣಿ ಇಡಲು ನಿಯಮಗಳಲ್ಲಿ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಇದು ಅಸಾಧ್ಯ ಎಂದು ಸರ್ಕಾರಕ್ಕೆ ತಿಳಿಸಲಾಗಿತ್ತು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಅನುಮೋದಿಸಿದ ಮತ್ತೊಂದು ಪತ್ರ ರವಾನಿಸಿದ ಆರ್ಥಿಕ ಇಲಾಖೆ, ಸಾಲಮನ್ನಾ ಮಾಡುವುದು ಪ್ರಮುಖ ಜವಾಬ್ದಾರಿಯಾಗಿದ್ದು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ. ಇತರೆ ಬ್ಯಾಂಕ್​ಗಳಿಂದ ಠೇವಣಿಯನ್ನು ಅವಧಿಪೂರ್ವದಲ್ಲಿ ಹಿಂಪಡೆಯಲು ತಗಲುವ ಸುಮಾರು 12 ಕೋಟಿ ರೂ. ದಂಡ, ಅಲ್ಲಿಯ ಬಡ್ಡಿಗೆ ಸಮಾನಾಂತರ ಬಡ್ಡಿ ಸೇರಿದಂತೆ ಯಾವುದೇ ನಷ್ಟವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸೆ.26ರಂದು ತಿಳಿಸಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಅ.9ಕ್ಕೆ ಎಂಎಂಎಲ್​ಗೆ ಪತ್ರ ಬರೆದು, ಸಿಎಂ ಸಿದ್ದರಾಮಯ್ಯ ಅನುಮೋದನೆ ಪಡೆದ ಟಿಪ್ಪಣಿಯನ್ನು ಉಲ್ಲೇಖಿಸಿದ್ದಾರೆ.

ಸಿಎಂ ಕಚೇರಿಯಿಂದ ಸ್ಪಷ್ಟನೆ: ಎಂಎಂ ಎಲ್ ಅನುಮತಿ ನೀಡದಿದ್ದರೂ ಸಿಎಂ ಸಿದ್ದರಾಮಯ್ಯ ಒತ್ತಡ ಹೇರುತ್ತಿದ್ದಾರೆ ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ ಆರೋಪ ನಿರಾಧಾರ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ. ಸಾಲಮನ್ನಾ 22 ಲಕ್ಷ ರೈತರಿಗೆ ಸಹಕಾರಿಯಾಗಿದೆ. 2017-18ರ ಬಜೆಟ್​ನಲ್ಲಿ ಸಾಲಮನ್ನಾ ಪ್ರಸ್ತಾಪವಿರದಿದ್ದ ಕಾರಣ ಸ್ವಲ್ಪ ಹಣವನ್ನು ಸಾರ್ವಜನಿಕ ಸಂಸ್ಥೆಗಳಿಂದ ಭರಿಸಲು ಕ್ರಮ ಕೈಗೊಳ್ಳಲಾಗಿದೆ. ಸೆ.28ರಂದು ಎಂಎಂಎಲ್ ಒಪ್ಪಿಗೆ ನೀಡಿದ್ದು, ಈಗಾಗಲೆ ಠೇವಣಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಎಂಎಂಎಲ್ ಸರ್ಕಾರದ ಸಂಸ್ಥೆಯಾದ್ದರಿಂದ ಅದರ ಹಣವೂ ಸರ್ಕಾರಕ್ಕೇ ಸೇರಿದ್ದು. ಕಾಲಮಿತಿಯಲ್ಲಿ ಅಥವಾ ಸಂಸ್ಥೆಗೆ ಅವಶ್ಯಕವಿದ್ದಾಗ ಹಣವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.

ಸಾಲಮನ್ನಾ ಘೋಷಿಸಿ 100 ದಿನ ಕಳೆದರೂ ನಯಾಪೈಸೆ ಸಂದಾಯವಾಗಿಲ್ಲ. ಈಗಾಗಲೇ 60 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಗೊಬ್ಬರ ಖರೀದಿಸಲು ಸಹಕಾರ ಸಂಸ್ಥೆಗಳಲ್ಲಿ ಹಣವಿಲ್ಲ.

| ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ.

ವಿಧಾನಸೌಧವನ್ನೂ ಅಡವಿಡುತ್ತಾರೆ!

ಸಾಲಮನ್ನಾ ಘೋಷಿಸಿ ಇದೀಗ ಹಣಕ್ಕೆ ತಿಣುಕಾಡುತ್ತಿರುವ ಸರ್ಕಾರ ದಿವಾಳಿಯಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಸಹಕಾರಿ ಬ್ಯಾಂಕ್​ನಲ್ಲಿ ಠೇವಣಿಗೆ ಅವಕಾಶವಿಲ್ಲದಿದ್ದರೂ ಎಂಎಂಎಲ್ ಮೇಲೆ ಸಿಎಂ ಒತ್ತಡ ಹೇರುತ್ತಿದ್ದಾರೆ. ಸಾಲಮನ್ನಾ ಘೋಷಣೆಯಾಗಿ 100 ದಿನ ಕಳೆದರೂ ನಯಾಪೈಸೆ ಯಾರಿಗೂ ಸಿಕ್ಕಿಲ್ಲ. ಕೇಂದ್ರದಿಂದ ಅಪಾರ ಅನುದಾನ ಬಂದಿದೆ. ಇಷ್ಟಾದರೂ 1.33 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇದೀಗ ಬಿಡಿಎ ಸೈಟ್ ಒತ್ತೆಯಿಟ್ಟು ಹಣ ಹೊಂದಿಸುತ್ತಿದ್ದಾರೆ. ಇಷ್ಟೆಲ್ಲ ಹಣ ಎಲ್ಲಿ ಹೋಗಿದೆ? ಇವರನ್ನು ನೋಡಿದರೆ ವಿಧಾನಸೌಧವನ್ನೂ ಒತ್ತೆಯಿಡಲು ಹಿಂಜರಿಯುವುದಿಲ್ಲ ಎನ್ನಿಸುತ್ತದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಠೇವಣಿ ಏಕೆ ಸಾಧ್ಯವಿಲ್ಲ?

  • ಆರ್​ಬಿಐನ ಶೆಡ್ಯೂಲ್ಡ್ ಬ್ಯಾಂಕ್​ನಲ್ಲಿ ಮಾತ್ರ ಠೇವಣಿ ಇಡಬಹುದು. (ಅಪೆಕ್ಸ್ ಬ್ಯಾಂಕ್ ಸಹಕಾರಿ ಸಂಸ್ಥೆ)
  • ಠೇವಣಿ ಇಡುವ ಬ್ಯಾಂಕ್ ಮೌಲ್ಯ 500 ಕೋಟಿ ರೂ.ಗೂ ಹೆಚ್ಚಿರಬೇಕು.(ಅಪೆಕ್ಸ್ ಬ್ಯಾಂಕ್ ನಿವ್ವಳ ಮೌಲ್ಯ 418 ಕೋಟಿ ರೂ.)
  • ಠೇವಣಿ ಇಡಬೇಕಾದ 1,400 ಕೋಟಿ ರೂ. ಹೋಲಿಕೆಯಲ್ಲಿ ಅಪೆಕ್ಸ್ ಬ್ಯಾಂಕ್​ನ ವಾರ್ಷಿಕ ಲಾಭ ಕೇವಲ 30 ಕೋಟಿ ರೂ.
  • ಹೆಚ್ಚಿನ ಬಡ್ಡಿ ನೀಡಿಕೆಯಂತಹ ಕಾರಣಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ಒಂದೇ ಸಂಸ್ಥೆಯಲ್ಲಿಡುವುದನ್ನು ಪರಿಶೀಲಿಸಬೇಕು.
  • ಶೇ. 60 ಹಣವನ್ನು ಮಾತ್ರ ಠೇವಣಿ ಇಡಲು ಸಾಧ್ಯ. 1,400 ಕೋಟಿ ರೂ. ಮೊತ್ತವು ಶೇ.67ರಷ್ಟಾಗುವ ಕಾರಣ ಸಾಧ್ಯವಿಲ್ಲ.
  • ಅವಧಿಪೂರ್ವ ಠೇವಣಿ ಹಿಂಪಡೆತದಿಂದ ಶೇ.1ರಷ್ಟು ದಂಡದ ಮೊತ್ತ 12 ಕೋಟಿ ರೂ. ನಷ್ಟವಾಗುತ್ತದೆ.

ಹಣ ಕೊಡಬೇಡಿ ಎಂದ ನೌಕರರು

ಮೈಸೂರು ಮಿನರಲ್ಸ್​ಗೆ ನೌಕರರು ಸೆ. 25ರಂದು ಮೂರು ಪುಟಗಳ ವಿಸõತ ಪತ್ರ ಬರೆದಿದ್ದಾರೆ. ಲಾಭದಲ್ಲಿದ್ದ ಸಂಸ್ಥೆ ಇದೀಗ ನಷ್ಟದಲ್ಲಿದೆ. 1-3 ವರ್ಷದ ಅವಧಿಯಲ್ಲಿ ಸಂಸ್ಥೆಯ ಶೇ.90 ನೌಕರರು ನಿವೃತ್ತರಾಗಲಿದ್ದಾರೆ. ನೌಕರರ ಪುನರ್ವಸತಿ, ಗಣಿ ಚಟುವಟಿಕೆಗೆ ಅವಶ್ಯಕ ಭೂಮಿ ಖರೀದಿ, ನೂತನ ಯಂತ್ರೋಪಕರಣ ಖರೀದಿ, ಮರಳು ತಯಾರಿಕೆ ಘಟಕ, ನಿವೃತ್ತ ಉದ್ಯೋಗಿಗಳಿಗೆ ಸವಲತ್ತು, ಸ್ವಯಂನಿವೃತ್ತಿ ಯೋಜನೆಗೆ ಸೇರಿದಂತೆ ಸಾವಿರಾರು ಕೋಟಿ ರೂ. ಅಗತ್ಯವಿದೆ. ಸಂಸ್ಥೆಯು ಗಳಿಸಿರುವ ಹಣವನ್ನು ಸಹಕಾರ ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಸುರಕ್ಷಿತವಲ್ಲ. ಸರ್ಕಾರದ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.

Leave a Reply

Your email address will not be published. Required fields are marked *

Back To Top