Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ರಾಜ್ಯಕ್ಕೆ ಮುನ್ನಡೆ ಯಶ, ನಾಕೌಟ್ ಸನಿಹ

Monday, 13.11.2017, 3:05 AM       No Comments

| ರಘುನಾಥ್ ಡಿ.ಪಿ.

ಬೆಂಗಳೂರು: ಆತಿಥೇಯ ಕರ್ನಾಟಕ ಹಾಗೂ ದೆಹಲಿ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯ ನಿರೀಕ್ಷೆಯಂತೆಯೇ ಡ್ರಾಗೊಂಡಿತು. ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿದ್ದ ಕರ್ನಾಟಕ, ದೆಹಲಿ ವಿರುದ್ಧ ಇನಿಂಗ್ಸ್ ಮುನ್ನಡೆಗೆ ತೃಪ್ತಿಪಟ್ಟರೂ, ಕ್ವಾರ್ಟರ್​ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು. ದೆಹಲಿ ತಂಡದ ಪ್ರತಿರೋಧದಿಂದಾಗಿ ಮೂರನೇ ದಿನದಾಟದಲ್ಲೇ ಗೆಲುವಿನ ಆಸೆ ಕೈಬಿಟ್ಟಿದ್ದ ಆತಿಥೇಯ ತಂಡ ಅಂತಿಮ ದಿನವಾದ ಭಾನುವಾರ ಪ್ರಭುತ್ವ ಸಾಧಿಸಲು ಯಶಸ್ವಿಯಾಯಿತು.

ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 4 ವಿಕೆಟ್​ಗೆ 277ರನ್​ಗಳಿಂದ ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ದೆಹಲಿ, ವೇಗಿ ಅಭಿಮನ್ಯು ಮಿಥುನ್ (70ಕ್ಕೆ 5) ಮಾರಕ ದಾಳಿಗೆ ನಲುಗಿ 301ರನ್​ಗಳಿಗೆ ಆಲೌಟ್ ಆಯಿತು. ಇದರಿಂದ ವಿನಯ್ಕುಮಾರ್ ಪಡೆ 348 ರನ್ ಮುನ್ನಡೆ ಕಂಡರೂ ಫಾಲೋಆನ್ ಹೇರಲಿಲ್ಲ. ದ್ವಿತೀಯ ಇನಿಂಗ್ಸ್​ನಲ್ಲಿ ಕರ್ನಾಟಕ ತಂಡ, ಕೆಎಲ್ ರಾಹುಲ್ (92 ರನ್, 109 ಎಸೆತ, 9 ಬೌಂಡರಿ, 2 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್​ಗೆ 235 ರನ್ ಗಳಿಸಿತು. ಚಹಾ ವಿರಾಮದ 45 ನಿಮಿಷಗಳ ಆಟದ ಬಳಿಕ ಪಂದ್ಯವನ್ನು ಡ್ರಾ ಎಂದು ಘೊಷಿಸಲಾಯಿತು. ಕರ್ನಾಟಕ 23 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಇನಿಂಗ್ಸ್ ಹಿನ್ನಡೆ ಅನುಭವಿಸಿದರೂ ದೆಹಲಿ ತಂಡ 17 ಅಂಕಗಳೊಂದಿಗೆ 2ನೇ ಸ್ಥಾನ ಉಳಿಸಿಕೊಂಡಿದ್ದು, ಕ್ವಾರ್ಟರ್​ಫೈನಲ್ ಆಸೆ ಜೀವಂತವಾಗಿರಿಸಿಕೊಂಡಿತು.

ರಾಹುಲ್-ಸಮರ್ಥ್ ಉತ್ತಮ ಬ್ಯಾಟಿಂಗ್

ದೆಹಲಿಗೆ ಫಾಲೋಆನ್ ಹೇರದೆ ಬ್ಯಾಟಿಂಗ್ ಮಾಡಿದ ಕರ್ನಾಟಕ ಉತ್ತಮ ಆರಂಭ ಕಂಡಿತು. ಮೊದಲ ಇನಿಂಗ್ಸ್​ನಲ್ಲಿ ವೈಫಲ್ಯ ಅನುಭವಿಸಿದ್ದ ಆರಂಭಿಕ ಕೆಎಲ್ ರಾಹುಲ್ ಹಾಗೂ ಆರ್.ಸಮರ್ಥ್ (47 ರನ್, 90ಎಸೆತ, 6 ಬೌಂಡರಿ) ಜೋಡಿ ಮೊದಲ ವಿಕೆಟ್​ಗೆ 121 ರನ್ ಕಲೆಹಾಕಿತು. ನೆರೆದಿದ್ದ ನೂರಾರು ಪ್ರೇಕ್ಷಕರ ಬೆಂಬಲ ಗಿಟ್ಟಿಸಿಕೊಂಡ ರಾಹುಲ್-ಸಮರ್ಥ್ ಜೋಡಿ ತಂಡದ ಮೊತ್ತ ಹಿಗ್ಗಿಸಲು ನೆರವಾಯಿತು. ಮಿಲಿಂದ್ ಕುಮಾರ್ ಓವರ್​ನಲ್ಲಿ ಸತತ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ ರಾಹುಲ್ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ, ಅರ್ಧಶತಕದಂಚಿನಲ್ಲಿದ್ದ ಸಮರ್ಥ್, ಮನನ್ ಶರ್ಮ ಓವರ್​ನಲ್ಲಿ ಸ್ಲಿಪ್​ನಲ್ಲಿದ್ದ ನಿತೀಶ್ ರಾಣಾಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು.

ಮಿಥುನ್ ದಾಳಿಗೆ ದೆಹಲಿ ಚಿತ್

ವೇಗಿ ಮಿಥುನ್ ಅಬ್ಬರದಿಂದಾಗಿ ದೆಹಲಿ ತಂಡದ ಮೊದಲ ಇನಿಂಗ್ಸ್ ಆಟ ಭಾನುವಾರ ಬೆಳಗ್ಗೆ ಒಂದೇ ಗಂಟೆಯಲ್ಲಿ ಮುಕ್ತಾಯ ಕಂಡಿತು. ಕೇವಲ 11 ಓವರ್ ಆಡಿದ ದೆಹಲಿ 24ರನ್ ಗಳಿಸಿ ಉಳಿದ 6 ವಿಕೆಟ್ ಕಳೆದುಕೊಂಡಿತು. ಕ್ರಮವಾಗಿ 135 ಮತ್ತು 10 ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಗಂಭೀರ್ ಮತ್ತು ಮಿಲಿಂದ್ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ದಿನದ ಮೊದಲ ಓವರ್ ಎಸೆದ ಮಿಥುನ್, 3ನೇ ಎಸೆತದಲ್ಲೇ ಮಿಲಿಂದ್ ವಿಕೆಟ್ ಕಬಳಿಸಿದರು. ಸಮರ್ಥ್ ಹಿಡಿದ ಅದ್ಭುತ ಕ್ಯಾಚ್​ಗೆ ಮಿಲಿಂದ್ ಬಲಿಯಾದರು. ಮರು ಎಸೆತದಲ್ಲೇ ಮನನ್ ಶರ್ಮ ಕೂಡ ರನೌಟ್ ಬಲೆಗೆ ಬಿದ್ದರು. ಮಿಥುನ್ ಮರು ಓವರ್​ನಲ್ಲಿ ಸತತ 2 ಬೌಂಡರಿ ಸಿಡಿಸಿ ತಿರುಗೇಟು ನೀಡಲು ಯತ್ನಿಸಿದ ಗಂಭೀರ್, ಅದೇ ಓವರ್​ನ ಕೊನೇ ಎಸೆತದಲ್ಲಿ ಸ್ಲೀಪ್​ನಲ್ಲಿದ್ದ ಸಮರ್ಥ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ರಾಹುಲ್ ಶತಕವಂಚಿತ ಬ್ಯಾಟಿಂಗ್

ಸಮರ್ಥ್ ನಿರ್ಗಮನದ ಬಳಿಕ ಜತೆಯಾದ ಮಯಾಂಕ್ ಅಗರ್ವಾಲ್​ರಿಂದಲೂ (23) ರಾಹುಲ್ ಉತ್ತಮ ಸಾಥ್ ಗಿಟ್ಟಿಸಿಕೊಂಡರು. ಬಿರುಸಿನ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ರಾಹುಲ್, ಶತಕದ ಗಡಿ ದಾಟಲು ಕೇವಲ 8 ರನ್ ಬಾಕಿ ಇರುವ ವೇಳೆ ವಿಕಾಸ್ ಟೋಕಸ್ ಎಸೆತದಲ್ಲಿ ಬ್ಯಾಕ್​ವರ್ಡ್ ಪಾಯಿಂಟ್​ನತ್ತ ಚೆಂಡನ್ನು ತಳ್ಳಿ ಒಂದು ರನ್ ಗಳಿಸಲು ಯತ್ನಿಸಿದರು. ಆದರೆ, ರನ್ ಪೂರೈಸುವ ವೇಳೆ ರಾಹುಲ್ ನಿಧಾನಗತಿಯಲ್ಲಿ ಹೆಜ್ಜೆ ಹಾಕುತ್ತಿದ್ದುದನ್ನು ಗಮನಿಸಿದ ಫೀಲ್ಡರ್ ನಿತೀಶ್ ರಾಣಾ, ಚೆಂಡನ್ನು ನೇರವಾಗಿ ವಿಕೆಟ್​ಗೆ ಬಡಿದರು. ರಾಹುಲ್ ಔಟಾದ ಕೆಲ ಹೊತ್ತಿನಲ್ಲೇ ಮಯಾಂಕ್, ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು. ನಂತರ ಕರುಣ್ ನಾಯರ್ (33*) ಹಾಗೂ ಮನೀಷ್ ಪಾಂಡೆ (34*) ಜೋಡಿ ಮುರಿಯದ 4ನೇ ವಿಕೆಟ್​ಗೆ 61 ರನ್ ಸೇರಿಸಿತು.

ಸೋಲಿನಿಂದ ಪಾರಾದ ಮುಂಬೈ

500ನೇ ರಣಜಿ ಪಂದ್ಯವಾಡಿದ 41 ಬಾರಿಯ ಚಾಂಪಿಯನ್ ಮುಂಬೈ ತಂಡ (171,260ಕ್ಕೆ 7) ಕೂದಲೆಳೆ ಅಂತರದಲ್ಲಿ ಬರೋಡ (575ಕ್ಕೆ 9) ವಿರುದ್ಧ ಇನಿಂಗ್ಸ್ ಸೋಲಿನಿಂದ ಪಾರಾಯಿತು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಸಿದ್ದೇಶ್ ಲಾಡ್ (71*) ಹಾಗೂ ಅಭಿಷೇಕ್ ನಾಯರ್ (8ರನ್, 108ಎಸೆತ) ತಂಡವನ್ನು ಸೋಲಿನಿಂದ ಪಾರು ಮಾಡಿದರು. ಬಿ ಗುಂಪಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡ 106ರನ್​ಗಳಿಂದ ಜಾರ್ಖಂಡ್ ತಂಡವನ್ನು ಮಣಿಸಿದರೆ, ಡಿ ಗುಂಪಿನಲ್ಲಿ ವಿದರ್ಭ 10 ವಿಕೆಟ್​ಗಳಿಂದ ಬಂಗಾಳ ತಂಡವನ್ನು ಸೋಲಿಸಿತು. ಎ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ, ಅಸ್ಸಾಂ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿತು. ಸೌರಾಷ್ಟ್ರ, ಮಹಾರಾಷ್ಟ್ರ, ಹರಿಯಾಣ, ಆಂಧ್ರ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಕರ್ನಾಟಕ ಪ್ರಥಮ ಇನಿಂಗ್ಸ್: 649

ದೆಹಲಿ ಪ್ರಥಮ ಇನಿಂಗ್ಸ್: 95 ಓವರ್​ಗಳಲ್ಲಿ 301 (ಶನಿವಾರ 4 ವಿಕೆಟ್​ಗೆ 277)

ಗೌತಮ್ ಗಂಭೀರ್ ಸಿ ಸಮರ್ಥ್ ಬಿ ಮಿಥುನ್ 144

ಮಿಲಿಂದ್ ಕುಮಾರ್ ಸಿ ಸಮರ್ಥ್ ಬಿ ಮಿಥುನ್ 10

ಮನನ್ ಶರ್ಮ ರನೌಟ್ (ಸಮರ್ಥ್) 0

ವಿಕಾಸ್ ಟೋಕಸ್ ಸಿ ಮಯಾಂಕ್ ಬಿ ಮಿಥುನ್ 11

ಸೈನಿ ಎಲ್​ಬಿಡಬ್ಲ್ಯು ಬಿ ವಿನಯ್ಕುಮಾರ್ 4

ವಿಕಾಸ್ ಮಿಶ್ರಾ ಔಟಾಗದೆ 0

ಖೆಜ್ರೋಲಿಯಾ ಸಿ ರಾಹುಲ್ ಬಿ ಮಿಥುನ್ 0

ಇತರೆ: 2, ವಿಕೆಟ್ ಪತನ: 4-249, 5-277, 6-277, 7-286, 8-301, 9-301. ಬೌಲಿಂಗ್: ವಿನಯ್ಕುಮಾರ್ 21-4-70-1, ಅಭಿಮನ್ಯು ಮಿಥುನ್ 23-7-70-5, ಸ್ಟುವರ್ಟ್ ಬಿನ್ನಿ 13-2-39-2, ಶ್ರೇಯಸ್ ಗೋಪಾಲ್ 16-2-64-0, ಕೆ. ಗೌತಮ್ 20-4-46-1, ಕರುಣ್ ನಾಯರ್ 2-0-12-0.

ಕರ್ನಾಟಕ ದ್ವಿತೀಯ ಇನಿಂಗ್ಸ್: 63 ಓವರ್​ಗಳಲ್ಲಿ 3 ವಿಕೆಟ್​ಗೆ 235

ಕೆಎಲ್ ರಾಹುಲ್ ರನೌಟ್ (ರಾಣಾ) 92

ಆರ್. ಸಮರ್ಥ್ ಸಿ ರಾಣಾ ಬಿ ಮನನ್ ಶರ್ಮ 47

ಮಯಾಂಕ್ ಅಗರ್ವಾಲ್ ಬಿ ಸೈನಿ 23

ಕರುಣ್ ನಾಯರ್ ಅಜೇಯ 33

ಮನೀಷ್ ಪಾಂಡೆ ಅಜೇಯ 34

ಇತರೆ: 6, ವಿಕೆಟ್ ಪತನ: 1-121, 2-161, 3-174. ಬೌಲಿಂಗ್: ವಿಕಾಸ್ ಟೋಕಸ್ 9-0-38-0, ಸೈನಿ 9-0-28-1, ಮನನ್ ಶರ್ಮ 17-1-47-1, ಮಿಲಿಂದ್ ಕುಮಾರ್ 10-0-40-0, ವಿಕಾಸ್ ಮಿಶ್ರಾ 8-1-25-0, ಶೋರೆ 3-0-24-0, ನಿತೀಶ್ ರಾಣಾ 5-0-24-0, ಉನ್ಮುಕ್ತ್ ಚಂದ್ 2-0-4-0.

ಪಂದ್ಯಶ್ರೇಷ್ಠ: ಸ್ಟುವರ್ಟ್ ಬಿನ್ನಿ

ಕರ್ನಾಟಕಕ್ಕೆ ಮುಂದಿನ ಪಂದ್ಯ

ಯಾವಾಗ: ನ. 17-20

ಎದುರಾಳಿ: ಉತ್ತರ ಪ್ರದೇಶ ಎಲ್ಲಿ: ಕಾನ್ಪುರ

Leave a Reply

Your email address will not be published. Required fields are marked *

Back To Top