Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ರಾಜ್ಯಕ್ಕೆ ಡೆಂಘ ಗುನ್ಯಾ

Saturday, 16.09.2017, 3:06 AM       No Comments

ರಾಜ್ಯದಲ್ಲಿನ ಸತತ ಬರಗಾಲದ ಕಾಮೋಡ ಸರಿಸಿ ಕೃಷಿ ಜತೆಗೆ ಜನ, ಜಾನುವಾರುಗಳ ದಾಹ ತಣಿಸುವ ವಿಶ್ವಾಸ ಮೂಡಿಸಿರುವ ಭರ್ಜರಿ ಮಳೆ ಮತ್ತೊಂದೆಡೆ ಸಾಂಕ್ರಾಮಿಕ ರೋಗ ಇಮ್ಮಡಿಗೊಳ್ಳುವುದಕ್ಕೂ ಕಾರಣವಾಗಿದೆ. ರಾಜ್ಯಾದ್ಯಂತ ಡೆಂಘ, ಚಿಕೂನ್​ಗುನ್ಯಾ ಹಾಗೂ ಎಚ್1ಎನ್1 ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಳೆದ ಒಂದು ತಿಂಗಳಲ್ಲಿ 3672 ಹೊಸ ಡೆಂಘ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಗ್ಯ ಇಲಾಖೆ ರೋಗ ತಡೆಗೆ ಹತ್ತು ಹಲವು ಕ್ರಮ ಕೈಗೊಳ್ಳುತ್ತಿರುವ ಹೊರತಾಗಿಯೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ.

ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಹವಾಮಾನ ವೈಪರೀತ್ಯದಿಂದ ಸೊಳ್ಳೆಗಳ ಉತ್ಪತ್ತಿ ದ್ವಿಗುಣವಾಗಿದ್ದು, ಇದರಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘ ಪೀಡಿತರ ಸಂಖ್ಯೆ 11 ಸಾವಿರದ ಗಡಿದಾಟಿದೆ. ಕಳೆದ ಒಂದು ತಿಂಗಳಲ್ಲಿ 3672 ಹೊಸ ಡೆಂಘ ಪ್ರಕರಣಗಳು ಪತ್ತೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಆ.15ರಿಂದ ಸೆ.15ರವರೆಗೆ ಸರಾಸರಿ ವಾರದಲ್ಲಿ 100ಕ್ಕೂ ಅಧಿಕ ಹೊಸ ಡೆಂಘ ಪ್ರಕರಣ ಪತ್ತೆಯಾಗುತ್ತಿವೆ. ಜನವರಿ ಆರಂಭದಿಂದ ಆ.16ರ ವರೆಗೆ ರಾಜ್ಯದಲ್ಲಿ ಒಟ್ಟು 7,996 ಜನರಿಗೆ ಡೆಂಘ ತಗುಲಿದ್ದು, 1 ತಿಂಗಳ ಅಂತರದಲ್ಲಿ ಡೆಂಘ ಬಾಧಿತರ ಒಟ್ಟು ಸಂಖ್ಯೆ 11,662ಕ್ಕೆ ಏರಿಕೆಯಾಗಿದೆ.

ಕಳೆದ ತಿಂಗಳು ಪಾಲಿಕೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ 2, 696 ಜನರು ಡೆಂಘಯಿಂದ ಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ಸಂಖ್ಯೆ ದ್ವಿಗುಣಗೊಂಡಿದೆ (4,224). ಮಂಡ್ಯ (776), ಮೈಸೂರು (717), ದಾವಣಗೆರೆ(675), ಕಲಬುರಗಿ(672), ಶಿವಮೊಗ್ಗ (450)ದಲ್ಲಿ ಡೆಂಘ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯಾದ್ಯಂತ ಈವರೆಗೆ ಡೆಂಘಯಿಂದ ಐವರು ಸಾವನ್ನಪ್ಪಿದ್ದಾರೆ.

ಆಸ್ಪತ್ರೆಗಳೆಲ್ಲ ವೈರಲ್ ಡೆಂಘಮಯ

ಕಳೆದ ಒಂದು ತಿಂಗಳಲ್ಲಿ ಬೆಂಗಳೂರು ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಡೆಂಘ ಹಾಗೂ ವೈರಲ್ ಜ್ವರದಿಂದ ದಾಖಲಾಗಿರುವ ರೋಗಿಗಳ ಸಂಖ್ಯೆ ಗಣನೀಯವಾಗೆ ಹೆಚ್ಚಳವಾಗಿದೆ. ಇದರಿಂದ ಕಡಿಮೆ ಹಾಸಿಗೆ ಇರುವ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸುವುದು ಕಷ್ಟವಾಗುತ್ತಿದೆ. ಹಾಸಿಗೆಗಳು ಸಿಗದೆ ರೋಗಿಗಳು ಪರದಾಡುವ ಸ್ಥಿತಿ ನಿರ್ವಣವಾಗಿದೆ.

3013 ಜನರಿಗೆ ಎಚ್1ಎನ್1 ಸೋಂಕು

ಎಚ್1ಎನ್1 ಬಾಧಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ವರ್ಷಾರಂಭದಿಂದ ಈವರೆಗೆ 3013 ಜನ ಇದಕ್ಕೆ ತುತ್ತಾಗಿದ್ದಾರೆ. ಈ ಪೈಕಿ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. ಆ.15 ರಿಂದ ಸೆ.15ರವರೆಗೆ 180 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸರಾಸರಿ ಪ್ರತಿ ವಾರ 6 ಹೊಸ ಪ್ರಕರಣಗಳು ಪತ್ತೆಯಾಗಿವೆ. ಉಡುಪಿ(508), ದಕ್ಷಿಣ ಕನ್ನಡ(315), ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 886 ಜನರಿಗೆ ಎಚ್1ಎನ್1 ತಗುಲಿದೆ. ಮೈಸೂರು(268), ಶಿವಮೊಗ್ಗ (169) ಭಾಗದಲ್ಲಿ ದಿನಂಪ್ರತಿ 3 ರಿಂದ 4 ಪ್ರಕರಣಗಳು ದಾಖಲಾಗುತ್ತಿವೆ.

ಕಳೆದ ಕೆಲವು ತಿಂಗಳಿನಿಂದ ಡೆಂಘ ಹಾಗೂ ವೈರಲ್ ಜ್ವರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ನಮ್ಮಲ್ಲಿ ರೋಗಿಗಳನ್ನು ದಾಖಲಿಸಲು ಯಾವುದೇ ಸಮಸ್ಯೆ ಇಲ್ಲ. ಯಾವುದೇ ಕಾಯಿಲೆಯ ರೋಗಿಗಳನ್ನು ಚಿಕಿತ್ಸೆ ನೀಡದೆ ವಾಪಸ್ ಕಳಿಸುವುದಿಲ್ಲ. ಸದ್ಯಕ್ಕೆ ಶೇ.73 ಹಾಸಿಗೆ ತುಂಬಿದೆ.

| ಕೃಷ್ಣ ಮೂರ್ತಿ ಅಧ್ಯಕ್ಷ, ಕಿಮ್್ಸ (ಕೆಂಪೇಗೌಡ ವೈದ್ಯಕೀಯ ವಿಜ್ಞಾನ, ಸಂಶೋಧನಾ ಸಂಸ್ಥೆ)

 


ಗಜೇಂದ್ರಗಡದಲ್ಲಿ ಮೂವರ ಸಾವು

ಗಜೇಂದ್ರಗಡ (ಗದಗ): ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಡೆಂಘೆ ಮಹಾಮಾರಿ ದಾಂಗುಡಿ ಇಟ್ಟಿದ್ದು, ಎರಡು ದಿನದಲ್ಲಿ ಗ್ರಾಮವೊಂದರಲ್ಲಿ ಮೂವರು ಬಲಿಯಾಗಿದ್ದಾರೆ.

ಜ್ವರದಿಂದ ಬಳಲುತ್ತಿರುವ ಶೇ.60 ಗ್ರಾಮಸ್ಥರು ಹುಬ್ಬಳ್ಳಿ ಕಿಮ್್ಸ ಸೇರಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ನಾಗರಸಕೊಪ್ಪ ಗ್ರಾಮದ ಹನುಮಂತ ಹಗೇದಾಳ (28) ಶುಕ್ರವಾರ ಮೃತಪಟ್ಟರೆ, ಪರಸಪ್ಪ ಗೌಡ್ರ (40), ಹೊಳಿಯವ್ವ ಲ್ಯಾವಕ್ಕಿ (52) ಗುರುವಾರ ಮೃತಪಟ್ಟಿದ್ದಾರೆ. ಈ ಮೂವರು ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಡೆಂಘೆ ಪ್ರಕರಣ ಕಂಡು ಬಂದ ನಂತರ ಇವರನ್ನು ಕಿಮ್ಸ್​ಗೆ ದಾಖಲಿಸಲಾಗಿತ್ತು.

ಪಿಡಿಒ ಅಮಾನತು: ಘಟನೆಗೆ ಸಂಬಂಧಿಸಿದಂತೆ ಪಿಡಿಒ ಕೆ. ಇಮ್ರಾಪುರ ಅವರನ್ನು ಅಮಾನತುಗೊಳಿಸಿ ತಹಸೀಲ್ದಾರ್ ಪ್ರಭು ವಾಲಿ ಆದೇಶ ಹೊರಡಿಸಿದ್ದಾರೆ. ಶುಕ್ರವಾರ ಗ್ರಾಮಕ್ಕೆ ಆಗಮಿಸಿದ್ದ ಪಿಡಿಒ ಅವರನ್ನು ಗ್ರಾಮಸ್ಥರು ತರಾಟೆ ತೆಗೆದು ಕೊಂಡಿದ್ದರು. ಆರೋಗ್ಯ ಇಲಾಖೆ ಅಧಿಕಾರಿ ಪಾಂಡುರಂಗ ಕಬಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದರು. ತಹಸೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳು ಗ್ರಾಮದಲ್ಲೇ ಠಿಕಾಣಿ ಹೂಡಿದ್ದಾರೆ.

ಅನೈರ್ಮಲ್ಯ: ಇಡೀ ನಾಗರಸಕೊಪ್ಪ ಗ್ರಾಮವೇ ಗಬ್ಬೆದ್ದು ನಾರುತ್ತಿದೆ. ಸರ್ಕಾರಿ ಶಾಲೆ ಸುತ್ತಲೂ ದುರ್ವಾಸನೆ ಹರಡಿದೆ. ರಸ್ತೆಗಳೆಲ್ಲ ಕೆಸರುಗದ್ದೆಗಳಂತಾಗಿವೆ. ಸಮರ್ಪಕ ಚರಂಡಿ ಇಲ್ಲದ ಕಾರಣ ಕಲುಷಿತ ನೀರು ರಸ್ತೆಯಲ್ಲೇ ಹರಿಯುತ್ತದೆ.

 

ನಾಗರಸಕೊಪ್ಪದಲ್ಲಿ ಮೃತಪಟ್ಟವರು ಸರ್ಕಾರಿ ಆಸ್ಪತ್ರೆಯ ಬದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಾಗಾಗಿ ಖಚಿತವಾಗಿ ಡೆಂಘೆಗೆ ಮೃತಪಟ್ಟಿದ್ದಾರೆ ಎಂದು ಹೇಳಲಾಗದು. ವರದಿ ತರಿಸಿ ಪರಿಶೀಲಿಸಲಾಗುತ್ತದೆ.

| ಡಾ. ಅರುಂಧತಿ ಕುಲಕರ್ಣಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

Leave a Reply

Your email address will not be published. Required fields are marked *

Back To Top