Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ರಾಜ್ಯಕ್ಕಿಲ್ಲ ಅಭಿವೃದ್ಧಿ ಭಾಗ್ಯ

Friday, 13.10.2017, 3:05 AM       No Comments

ಬೆಂಗಳೂರು: ಚುನಾವಣೆ ಪ್ರಣಾಳಿಕೆ ಈಡೇರಿಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರ್ಕಾರ ಪ್ರಗತಿಪಥದ ಪಯಣದಲ್ಲಿ ಹಿಂದೆ ಬಿದ್ದಿದೆ. ದಕ್ಷಿಣ ರಾಜ್ಯಗಳ ಪೈಕಿ ಆರ್ಥಿಕತೆಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಹೆಮ್ಮೆ ಹೊಂದಿದ್ದರೂ, ಶಿಕ್ಷಣ, ಮೂಲಸೌಕರ್ಯ, ಕೃಷಿ, ಕಾನೂನು ಸುವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೊನೆಯ ಸ್ಥಾನದ ಹಿನ್ನಡೆ ಕಂಡಿದೆ. ಅಭಿವೃದ್ಧಿ ಮಂತ್ರದಂಡದೊಂದಿಗೆ ಮುಂದಿನ ಬಾರಿಯೂ ಚುನಾವಣೆ ಜಯಿಸುತ್ತೇವೆ ಎಂದು ಬೀಗುತ್ತಿರುವ ನಾಯಕರಿಗೆ ಇದು ಕಳವಳಕಾರಿ ಸಂಗತಿಯೇ ಸರಿ. ಅಂದ ಹಾಗೆ ಸರ್ಕಾರದ ಅಂಕಿಅಂಶಗಳೇ ಈ ವಾಸ್ತವ ಚಿತ್ರಣವನ್ನು ತೆರೆದಿಟ್ಟಿವೆ. ಇಂಡಿಯಾ ಟುಡೆ ಆಂಗ್ಲ ವಾರಪತ್ರಿಕೆಯ ‘ರಾಜ್ಯಗಳ ಸ್ಥಿತಿಗತಿ’ ಸರಣಿಯಲ್ಲಿ ಸರ್ಕಾರವೇ ಈ ಸಾಧನೆ, ವೇದನೆಗಳ ಮಾಹಿತಿ ಹಂಚಿಕೊಂಡಿದೆ. ಜಿಎಸ್​ಡಿಪಿಯಲ್ಲಿ ಕುಸಿತವಾಗುತ್ತಿರುವ ಹೊರತಾಗಿಯೂ ರಾಜ್ಯದ ಆರ್ಥಿಕ ಕ್ಷೇತ್ರ ಸುಧಾರಿಸುತ್ತಿದ್ದು, ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ಶಿಕ್ಷಣ, ಮೂಲಸೌಕರ್ಯ, ಕೃಷಿ, ಕಾನೂನು ಸುವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೇರಳ, ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕಿಂತ ಹಿಂದೆ ಬಿದ್ದಿದೆ. ಆರ್ಥಿಕವಾಗಿ ಸುಭದ್ರವಾಗಿದ್ದರೂ ಉಳಿದ ಕ್ಷೇತ್ರಗಳಲ್ಲಿನ ಕುಸಿತ ರಾಜ್ಯ ಸರ್ಕಾರದ ‘ಜನಪ್ರಿಯ’ ಯೋಜನೆಗಳೊಂದಿಗೆ ನಂಟು ಹೊಂದಿರುವುದರಿಂದ ಮುಂದೆ ಆಡಳಿತಕ್ಕೆ ಬರುವವರಿಗೆ ಅಪಾಯ ತಪ್ಪಿದ್ದಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಕೇರಳ ಅಗ್ರ: ಶಿಕ್ಷಣ, ಕೃಷಿ, ಕಾನೂನು ಸುವ್ಯವಸ್ಥೆ, ಆರೋಗ್ಯ ಕ್ಷೇತ್ರದಲ್ಲಿ ಕೇರಳ ಮುಂಚೂಣಿಯಲ್ಲಿದ್ದರೆ, ತೆಲಂಗಾಣ ಶಿಕ್ಷಣದಲ್ಲಿ 2ನೇ ಸ್ಥಾನ, ಮೂಲ ಸೌಕರ್ಯದಲ್ಲಿ ಅಗ್ರಸ್ಥಾನದಲ್ಲಿದೆ. ತಮಿಳುನಾಡು ಕೃಷಿ, ಕಾನೂನು ಸುವ್ಯವಸ್ಥೆ, ಆರ್ಥಿಕತೆ, ಆರೋಗ್ಯ ಕ್ಷೇತ್ರದಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ರಾಜಸ್ವವೂ ಇಳಿಕೆ: 4691, 4172 ಹಾಗೂ 1883 ಕೋಟಿ ರೂ. ಇದ್ದ ರಾಜಸ್ವ ಹೆಚ್ಚುವರಿ ಕಳೆದ ನಾಲ್ಕು ವರ್ಷಗಳಲ್ಲಿ 354, 528, 1789, 1062 ಕೋಟಿ ರೂ.ಗೆ ಇಳಿಕೆಯಾಗಿದೆ. ಮುಂದಿನ ವರ್ಷದಲ್ಲಿ ಇದು ಕೇವಲ 137 ಕೋಟಿ ರೂ. ಆಗಬಹುದು ಎಂದು ಬಜೆಟ್​ನಲ್ಲೇ ಸಿಎಂ ಹೇಳಿದ್ದಾರೆ. ಇನ್ನು ವಿತ್ತೀಯ ಕೊರತೆ ಪ್ರಮಾಣ 12 ಸಾವಿರ ಕೋಟಿ ರೂ. ಹೆಚ್ಚಾಗಿದೆ.

ಸರ್ಕಾರದ ನಿರೀಕ್ಷೆ ಏನಿದೆ?: ಸರ್ಕಾರದ ವಿತ್ತೀಯ ಯೋಜನೆ ಪ್ರಕಾರ 2016-17ನೇ ಸಾಲಿನ ಮೌಲ್ಯವರ್ಧನೆಯಲ್ಲಿ (ಜಿವಿಎ) ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯ ಶೇ.4.4, ಉತ್ಪಾದನಾ ವಲಯದಲ್ಲಿ ಶೇ.7.7, ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಬಳಕೆ ಸೇವೆಗಳ ವಲಯದಲ್ಲಿ ಶೇ.6.6, ನಿರ್ಮಾಣ ವಲಯದಲ್ಲಿ ಶೇ.3.1, ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಸಂಪರ್ಕ, ಪ್ರಸಾರ ಸೇವೆಗಳಿಗೆ ಸಂಬಂಧಿಸಿದ ಸೇವೆಗಳಲ್ಲಿ ಶೇ.7.3 ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳಲ್ಲಿ ಶೇ.6.5 ಮತ್ತು ಸಾರ್ವಜನಿಕ ಆಡಳಿತ, ರಕ್ಷಣೆ, ಇತರೆ ಸೇವೆಗಳಲ್ಲಿ ಶೇ.11.2 ಬೆಳವಣಿಗೆ ಸಾಧ್ಯತೆ ಇದೆ. ಆದರೆ ಅದು ನಿರೀಕ್ಷೆಯಷ್ಟೆ. ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಎಚ್ಚರಿಸುತ್ತಲೇ ಇದ್ದಾರೆ ಅಧಿಕಾರಿಗಳು

ರಾಜ್ಯ ಸಾಗುತ್ತಿರುವ ದಾರಿಯ ಬಗ್ಗೆ ಅಧಿಕಾರಿಗಳು ಆಳುವ ನಾಯಕರನ್ನು ಪದೇಪದೆ ಎಚ್ಚರಿಸುತ್ತಲೇ ಇರುವುದು ವಿವಿಧ ವರದಿಗಳಲ್ಲಿ ಉಲ್ಲೇಖವಾಗಿದೆ. ಆರ್ಥಿಕ ವರ್ಷ 2017-18ರಲ್ಲಿ ರಾಜ್ಯಕ್ಕೆ ಮೂರು ಅತಿ ಹೆಚ್ಚಿನ ಸಹಾಯಧನ ವಲಯಗಳೆಂದರೆ ಇಂಧನ, ವಸತಿ ಮತ್ತು ಆಹಾರ. ಇಂಧನ ಸಹಾಯಧನ ಯೋಜನೆ ಮಾರ್ಪಡಿಸುವ ಅಗತ್ಯ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ರೈತರಿಗೆ ನೇರ ನಗದು ವರ್ಗಾವಣೆ ವಿಧಾನ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಸಾಮಾಜಿಕ ವಲಯದ ವೆಚ್ಚ ಆರ್ಥಿಕ ವಲಯದ ವೆಚ್ಚವನ್ನು ಮೀರಿಸಿದೆ ಎಂದು ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ಹೇಳಲಾಗಿದೆ.

ಕುಸಿತದ ಹಾದಿ

ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗೇರಿದ ವರ್ಷ ರಾಜ್ಯದ ಜಿಎಸ್​ಡಿಪಿ ಶೇ.10.5ರಲ್ಲಿತ್ತು. ಆದರೆ ಪ್ರಸಕ್ತ ಸಾಲಿಗೆ ಇದು ಶೇ.6.9ಕ್ಕೆ ಕುಸಿದಿದೆ. ದೇಶದ ಜಿಡಿಪಿಗಿಂತ ರಾಜ್ಯದ ಜಿಎಸ್​ಡಿಪಿ ಹೆಚ್ಚಿರುವುದು ಕರ್ನಾಟಕದ ಹೆಮ್ಮೆಯಾಗಿತ್ತು. ಆದರೆ ಈ ಬಾರಿ ಕರ್ನಾಟಕವನ್ನು ದೇಶದ ಜಿಡಿಪಿ ಹಿಂದೆ ಹಾಕಿ ಶೇ.7.1ರ ಪ್ರಮಾಣದಲ್ಲಿ ಅಭಿವೃದ್ಧಿ ದರ ಸಾಧಿಸಿದೆ. ಕಳೆದ 6 ವರ್ಷಗಳಿಂದ ರಾಜ್ಯದಲ್ಲಿ ಸತತ ಬರಗಾಲ ಕಾಡುತ್ತಿದೆ. ಇದರಿಂದ ಕೃಷಿ ವಲಯದಿಂದ ದೊಡ್ಡ ಪ್ರಮಾಣದ ಬೆಳವಣಿಗೆ ನಿರೀಕ್ಷಿಸುವುದು ಅಸಾಧ್ಯ. ಕೃಷಿ ವಲಯವು ಸರ್ಕಾರದ ಪ್ರಯತ್ನದ ಜತೆಗೆ ಹವಾಮಾನದ ಮೇಲೂ ನಿಂತಿದೆ. ಆದರೆ ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿನ ಬೆಳವಣಿಗೆಯಲ್ಲಿ ದೊಡ್ಡ ಪ್ರಮಾಣದ ಕುಸಿತವಾಗಿರುವುದು ರಾಜ್ಯ ಸರ್ಕಾರಕ್ಕೆ ಸವಾಲಿನ ವಿಚಾರವಾಗಿದೆ. ಈ ಅವಧಿಯಲ್ಲೇ ದೇಶದಲ್ಲಿ ಅತಿ ಹೆಚ್ಚು ಬಂಡವಾಳ ಆಕರ್ಷಿಸಿದ ರಾಜ್ಯ ಎಂಬ ಹಿರಿಮೆಗೆ ಪಾತ್ರವಾದರೂ ಕೈಗಾರಿಕೆ ಬೆಳವಣಿಗೆ 2.2 ಹಾಗೂ ಸೇವಾ ವಲಯದ ಅಭಿವೃದ್ಧಿ 8.5ಕ್ಕೆ ಕುಸಿದಿದೆ. ಕೃಷಿ ವಲಯ ಕೂಡ 7.2ರಿಂದ 1.5ಕ್ಕೆ ಕುಸಿದಿದೆ. ಸಿದ್ದರಾಮಯ್ಯ ಸರ್ಕಾರ ರಚನೆಯಾದ ಸಂದರ್ಭದ ಬೆಳವಣಿಗೆಯ ದರ ಹೋಲಿಸಿದರೆ ಕೈಗಾರಿಕೆಯಲ್ಲಿ 6, ಕೃಷಿಯಲ್ಲಿ 5.7 ಹಾಗೂ ಸೇವಾ ವಲಯದಲ್ಲಿ 2.5ರಷ್ಟು ಕುಸಿತ ಕಂಡಿದೆ.

ಸಮ್ಮಿಶ್ರ ಸರ್ಕಾರದ ಅವಧಿ ಬೆಸ್ಟ್

ಸರ್ಕಾರವಾರು ಅವಲೋಕಿಸುವುದಾದರೆ 10 ವರ್ಷದ ಹಿಂದಿದ್ದ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ ಈಗ ಇಲ್ಲ. 2 ಜಾಗತಿಕ ಆರ್ಥಿಕ ಕುಸಿತ ಬಂದು ಹೋದ ನಂತರ ಕರ್ನಾಟಕದ ಪರಿಸ್ಥಿತಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸುಧಾರಿಸಿಲ್ಲ. 1995-1996 ಅವಧಿಯಲ್ಲಿ ಜನತಾ ಸರ್ಕಾರವಿದ್ದಾಗ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ 9.1ರಷ್ಟಿತ್ತು. ನಂತರ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ 10.2ರಷ್ಟು ಮುಟ್ಟಿತ್ತು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುವುದು ಬಿಟ್ಟು ದುಡ್ಡು ಹೊಡೆಯುವ ಗುತ್ತಿಗೆದಾರರಂತೆ ಕೆಲಸ ಮಾಡಿದರೆ ರಾಜ್ಯ ಹೇಗೆ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ? ಅಧಿಕಾರಿಗಳಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯೊಡುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ಲೆಕ್ಕ ಬರೆಯಲು ಸೀಮಿತಗೊಳಿಸಲಾಗಿದೆ.

| ಗೋ.ಮಧುಸೂದನ್ ಬಿಜೆಪಿ ವಕ್ತಾರ

Leave a Reply

Your email address will not be published. Required fields are marked *

Back To Top