Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ರಾಜಕಾರಣಿಗಳಿಗೆ ಬೇಕಿದೆ ನಿಯತ ವ್ಯಾಯಾಮ!

Monday, 16.01.2017, 4:00 AM       No Comments

| ಡಾ. ಮಂಜುನಾಥ ಬಿ.ಎಚ್.

ಹಕಾರ ಹಾಗೂ ಸಕ್ಕರೆ ಖಾತೆ ಸಚಿವ ಮಹದೇವ ಪ್ರಸಾದರ ಅಂತಿಮ ದರ್ಶನಕ್ಕೆ ಗುಂಡ್ಲುಪೇಟೆಗೆ ಬಿಜೆಪಿ ನಾಯಕರು, ಕಾರ್ಯಕರ್ತರೊಡನೆ ಹೋಗಿ ವಾಪಸಾಗುತ್ತಿದ್ದೆ. ಜತೆಯಿದ್ದ ನಾಯಕರು, ‘ಮಹದೇವ ಪ್ರಸಾದರದು ಹೋಗುವ ವಯಸ್ಸಲ್ಲ; ಸಜ್ಜನ ರಾಜಕಾರಣಿ, ಸಹೃದಯಿ. ಆದ್ದರಿಂದಲೇ ನೋವಿಲ್ಲದೆ, ನಿದ್ದೆಯಲ್ಲೇ ಮೃತಪಟ್ಟರೇನೋ!’ ಎಂದರು.

ಆ ಮಾತುಗಳು ನನ್ನನ್ನು ಚಿಂತನೆಗೆ ಹಚ್ಚಿದವು. ರಾಜಕಾರಣಿಯಾದರೂ, ನಾನು ವೈದ್ಯನಾಗಿ ಪ್ರವರ್ಧಮಾನಕ್ಕೆ ಬಂದವನು. ವೈದ್ಯಕೀಯ ಪರಿಭಾಷೆಯಲ್ಲಿ ಇಂತಹ ಸಾವನ್ನು ‘ಸೈಲೆಂಟ್ ಎಂ.ಐ.’ ಎಂಬುದಾಗಿ ಹೇಳುತ್ತೇವೆ. ‘ಮಯೋಕಾರ್ಡಿಯಲ್ ಇನ್​ಫಾರ್ಕ್ಷನ್’ ಎಂಬ ಈ ಹಂತದಲ್ಲಿ ಹೃದಯಕ್ಕೆ ರಕ್ತದ ಸರಬರಾಜು ಕಡಿಮೆಯಾಗುತ್ತದೆ.

ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಹಲವು ವರ್ಷಗಳ ಬಳಿಕ ನ್ಯೂರೋಪತಿ ಎಂಬ ಸಮಸ್ಯೆ ಉಂಟಾಗುತ್ತದೆ. ಅದು ಹೃದಯ ಸಂಬಂಧಿತ ನರಗಳಿಗೆ ಬಾಧಿಸಿದರೆ, ಹೃದಯಕ್ಕೆ ರಕ್ತದ ಕೊರತೆ ಉಂಟಾಗುತ್ತದೆ. ಹೃದಯಕ್ಕುಂಟಾಗುವ ನೋವೂ ನಮಗೆ ತಿಳಿಯುವುದಿಲ್ಲ. ಅದನ್ನೇ ‘ನೋವಿಲ್ಲದ ಮರಣ’ ಎನ್ನುತ್ತಾರೆ ಜನ. ರಾಜಕಾರಣಿಗಳ ಜೀವನ ಎಲ್ಲರಂತಲ್ಲ. ಬೆಳಗ್ಗೆ ಬೇಗ ಎದ್ದು ಜಾಗಿಂಗ್ ಮುಗಿಸಿ, ಚೆನ್ನಾಗಿ ಉಪಾಹಾರ ಸೇವಿಸಿ, ಕೆಲಸಮಾಡಿ, ಮಧ್ಯಾಹ್ನ ಆರೋಗ್ಯಕರ ಊಟಮಾಡಿ, ಸ್ವಲ್ಪ ವಿಶ್ರಾಂತಿ ಪಡೆದು, ಸಂಜೆ ಬೇಗ ಮನೆಗೆ ಹೋಗಿ ಕುಟುಂಬದೊಡನೆ ಒಡನಾಟ, ಊಹೂಂ! ಇಂತಹ ಯಾವುದೇ ಸುಂದರ ಕ್ಷಣಗಳನ್ನು ಕಳೆಯುವುದರಿಂದ ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳು ವಂಚಿತರಾಗುತ್ತಿದ್ದಾರೆ. ಸಮಾಜಸೇವೆಗಾಗಿ ರಾಜಕೀಯ ಪ್ರವೇಶಿಸುವ ನಾಯಕರು, ರಾಜಕಾರಣದ ಮಧ್ಯೆ ತಮ್ಮ ‘ದೇಹಕಾರಣ’ವನ್ನು ಗಮನಿಸುವಲ್ಲಿ ವಿಫಲರಾಗುತ್ತಾರೆ. ಅಷ್ಟೈಶ್ವರ್ಯವನ್ನೂ ಮೀರಿದ್ದು ಆರೋಗ್ಯ; ಅದೇ ಕೈಕೊಟ್ಟರೆ ಏನು ತಾನೆ ಸಾಧಿಸಲಾದೀತು? ಮನುಷ್ಯರ ಜೀವಿತಾವಧಿ 70-80 ವರ್ಷ ಎಂದಾದರೆ, ರಾಜಕಾರಣಿಗಳದ್ದು 50-60 ವರ್ಷಗಳಿಗೇ ಕುಸಿಯುತ್ತಿದೆ.

ಇದಕ್ಕೆಲ್ಲ ಪ್ರಮುಖ ಕಾರಣ ಒತ್ತಡ ಹಾಗೂ ಒತ್ತಡವನ್ನು ನಿರ್ವಹಿಸುವ ರೀತಿ. ರಾಜಕಾರಣಿಗಳ ಆರೋಗ್ಯಕ್ಕೆ ಅತಿದೊಡ್ಡ ಶಾಪವೇ ಒತ್ತಡ. ಹಗಲು-ರಾತ್ರಿ ಎನ್ನದೆ ಕೆಲಸ, ಇದರೊಡನೆ ಕುಡಿತ, ಸಿಗರೇಟು, ಊಟದಲ್ಲಿನ ಏರುಪೇರುಗಳು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿಬಿಡುತ್ತವೆ.

ರಾಜಕಾರಣಿಗಳು ದಿನಕ್ಕೆ ಕನಿಷ್ಟ ಅರ್ಧ ಅಥವಾ 1 ಗಂಟೆ ವಾಕಿಂಗ್, ಜಾಗಿಂಗ್ ಅಥವಾ ಇನ್ನಾವುದೇ ವ್ಯಾಯಾಮದಲ್ಲಿ ನಿರತರಾದರೆ, ದೇಹ ಹಾಗೂ ಮನಸ್ಸಿಗೆ ಒತ್ತಡ ನಿರ್ವಹಿಸುವ ಸಾಮರ್ಥ್ಯ ದಕ್ಕುತ್ತದೆ. ಈ ವ್ಯಾಯಾಮವೇ ನಿಜವಾದ ಜೀವವಿಮೆ, ಆರೋಗ್ಯ ವಿಮೆ. ಇದು ನಮ್ಮ ಆರೋಗ್ಯ ಹಾಗೂ ಜೀವಿತಾವಧಿ ಎರಡನ್ನೂ ಹೆಚ್ಚಿಸುತ್ತದೆ. ಒತ್ತಡ ಪರಿಹಾರಕ್ಕೆಂದೋ, ಕ್ಷಣದ ನೆಮ್ಮದಿಗೆಂದೋ ಸಿಗರೇಟು ಸೇವನೆ, ಕುಡಿತ ಆರಂಭಿಸಿದರೆ ಅದು ನಮ್ಮಿಂದ ಖಂಡಿತ ದಂಡ ಕಟ್ಟಿಸಿಕೊಳ್ಳುತ್ತದೆ. ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಹೃದಯಕ್ಕೆ ರಕ್ತವನ್ನು ಪಂಪು ಮಾಡಲು ಒತ್ತಡ ಸಿಗುತ್ತದೆ ಹಾಗೂ ಹೃದಯ ಚೆನ್ನಾಗಿ ಕೆಲಸ ಮಾಡುತ್ತದೆ. ರಾಜಕಾರಣ ನಮಗೆ ‘ಪ್ಲೆಷರ್’ ನೀಡಬೇಕೇ ಹೊರತು ‘ಪ್ರೆಷರ್’ ಅಲ್ಲವಲ್ಲ! ನಾವು ಆರೋಗ್ಯದಿಂದಿದ್ದರಷ್ಟೇ ಸಮಾಜದ ಆರೋಗ್ಯಕ್ಕೆ ನಮ್ಮಿಂದ ಕೊಡುಗೆ ಸಾಧ್ಯ.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಎಷ್ಟು ರಾಜಕಾರಣಿಗಳು, ಜನರು ಯೋಗವನ್ನು ಪ್ರತಿದಿನದ ಅಭ್ಯಾಸವಾಗಿಸಿಕೊಂಡಿದ್ದಾರೆ? ಖ್ಯಾತ ಬರಹಗಾರ ಪೌಲೋ ಕೊಯೆಲೋ ಹೇಳಿದಂತೆ, ಯಾವುದಾದರೊಂದು ಹವ್ಯಾಸವನ್ನು 21 ದಿನ ನಡೆಸಿದ್ದೇ ಆದಲ್ಲಿ, ಅದು ಜೀವನಪರ್ಯಂತ ಮುಂದುವರಿಯುತ್ತದೆ! ಯೋಗ-ವ್ಯಾಯಾಮಗಳು ಹಾಗೆ ನಮ್ಮಲ್ಲಿ ಮೈಗೂಡಬೇಕು. ದಿನಕ್ಕೆ 18 ಗಂಟೆ ಕಾರ್ಯನಿರ್ವಹಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದಿನದಲ್ಲಿ 20 ನಿಮಿಷ ಆಚರಿಸುವ ‘ಪವರ್ ಯೋಗ’ ಸಂಪೂರ್ಣ ದಿನಕ್ಕೆ ಬೇಕಾದ ಚೈತನ್ಯವನ್ನು ಅವರಿಗೆ ನೀಡುತ್ತದೆ.

ರಾಜಕಾರಣದಲ್ಲಿ ತೊಡಗಿಸಿಕೊಂಡ ಬಳಿಕ ನಾನು ಹಲವು ಒತ್ತಡದ ಸಂದರ್ಭಗಳನ್ನು, ಸಮಯ ಸಿಗುತ್ತಿಲ್ಲ ಎಂಬ ಕ್ಷಣಗಳನ್ನೂ ಕಂಡಿದ್ದೇನೆ. ಆದರೆ ಒಂದು ಗಂಟೆಯ ವ್ಯಾಯಾಮ, ಜಾಗಿಂಗ್ ಇಡೀ ದಿನದ ಉಲ್ಲಾಸವನ್ನು ಒದಗಿಸುತ್ತದೆ ಎಂಬುದನ್ನು ಸ್ವತಃ ಅನುಭವಿಸಿದ್ದೇನೆ. ಪಕ್ಷಾತೀತವಾಗಿ ರಾಜಕಾರಣಿಗಳು ತಮಗನುಕೂಲವಾದಂತೆ ಯೋಗ, ವ್ಯಾಯಾಮ, ವಾಕಿಂಗ್, ಜಾಗಿಂಗ್ ನಡೆಸಿದರೆ ಆರೋಗ್ಯ ಹಿಡಿತದಲ್ಲಿರುತ್ತದೆ. ರಾಜಕಾರಣಿಗಳಿಗೆ ಆರೋಗ್ಯ ಪರಿಶೀಲನೆಗೆ ಸಾಕಷ್ಟು ಆಧುನಿಕ ಸೌಲಭ್ಯ, ಅವಕಾಶಗಳಿದ್ದು ಅವನ್ನು ಉಪಯೋಗಿಸಿಕೊಳ್ಳಬೇಕಿದೆ. ರಾಜಕಾರಣಿಗಳೆಂದರೆ ಮುಖ ಗಂಟಿಕ್ಕಿದ, ದೊಡ್ಡ ಹೊಟ್ಟೆಯ, ಉಲ್ಲಾಸವಿಲ್ಲದ ವ್ಯಕ್ತಿಗಳೆಂದು ಜನತೆ ಪರಿಗಣಿಸಿರುವುದೂ ಸುಳ್ಳಾಗಿ, ‘ಸ್ಲಿಮ್ – ಟ್ರಿಮ್ ಆಗಿರುವವರು, ಮಾದರಿ ವ್ಯಕ್ತಿತ್ವದವರು ನಾವಾಗಲು ಸಾಧ್ಯ.

ಕೆಲ ದಿನಗಳ ಹಿಂದೆ ಒಂದು ಲೇಖನವನ್ನು ಓದಿದ್ದೆ. ವಿಪರೀತ ಒತ್ತಡ ಹಾಗೂ ವಿಶ್ರಾಂತಿಯ ಕೊರತೆಯಿಂದ ವೈದ್ಯರ ಸರಾಸರಿ ಆಯಸ್ಸು ಹಿಂದಿಗಿಂತ ಹತ್ತು ವರ್ಷ ಕಡಿಮೆಯಾಗಿದೆಯಂತೆ! ಓರ್ವ ವೈದ್ಯ ಮತ್ತು ರಾಜಕಾರಣಿಯಾಗಿ ಇದನ್ನು ‘ಎಚ್ಚರಿಕೆಯ ಗಂಟೆ’ಯಾಗಿ ಪರಿಗಣಿಸಿ ಆರೋಗ್ಯದೆಡೆಗೆ ಗಮನ ಹರಿಸಬೇಕೆಂದಿರುವೆ. ಅಷ್ಟಕ್ಕೂ ಸಮಾಜದ ಭಾಗವಾಗಿರುವ ನಮ್ಮ ಆರೋಗ್ಯದ ಸೇವೆ ನಮ್ಮ ಕರ್ತವ್ಯವೇ ತಾನೇ!

(ಲೇಖಕರು ಮೈಸೂರಿನಲ್ಲಿ ವೃತ್ತಿನಿರತ ವೈದ್ಯರು)

Leave a Reply

Your email address will not be published. Required fields are marked *

Back To Top