Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ರಾಘವೇಂದ್ರ ಗುರುರಾಯರ ಸೇವಿಸಿರೋ, ಸೌಖ್ಯದಿ ಜೀವಿಸಿರೋ

Thursday, 14.09.2017, 3:00 AM       No Comments

ಹಾಮಹಿಮರಾದ ಶ್ರೀ ಜಗನ್ನಾಥದಾಸರಿಂದ ‘ಶ್ರೀದವಿಠ್ಠಲ’ ಎಂಬ ಅಂಕಿತವನ್ನು ಪಡೆದ ಖರ್ಜಗಿಯ ದಾಸಪ್ಪನವರು ಸರಳ ಹಾಗೂ ಸುಂದರವಾದ ಹರಿದಾಸಕೃತಿಗಳನ್ನು ಹರಿ-ವಾಯು-ಗುರುಗಳ ಪರವಾಗಿ ರಚಿಸಿ 81 ವರ್ಷಗಳ ಸಂತೃಪ್ತ ಬದುಕನ್ನು ಕಂಡು 18ನೇ ಶತಮಾನದ ಭಕ್ತಿಭಂಡಾರಿಗಳಾಗಿದ್ದರು. ಅನೇಕರು ಇವರನ್ನು ಖರ್ಜರಿದಾಸರೆಂತಲೂ ಶ್ರೀದವಿಠ್ಠಲದಾಸರೆಂತಲೂ ಕರೆಯುತ್ತಿದ್ದರು. ವಿಭಿನ್ನವಾದ ‘ಸುರುಶ್ರುತವೀಣೆ’ ಎಂದೇ ಕರೆಯಲ್ಪಡುತ್ತಿದ್ದ ಭೃಂಗಿತಂಬೂರಿಯು ಜಗನ್ನಾಥದಾಸರ ಬಳಿಯಲ್ಲಿ ಇರುತ್ತಿತ್ತು. ಆದರೆ ಅವರು ಅದನ್ನು ತಮ್ಮ ಪ್ರಿಯಶಿಷ್ಯರಾಗಿದ್ದ ಶ್ರೀದವಿಠ್ಠಲದಾಸರಿಗೆ ಅನುಗ್ರಹಿಸಿದ್ದರು. ಪ್ರಸ್ತುತ ಈ ವೀಣೆಯು ಹರಿದಾಸವಿದ್ವಾಂಸರಾದ ಸತ್ಯನಾರಾಯಣಾಚಾರ್ ಎನ್ನುವವರ ಬಳಿಯಲ್ಲಿದ್ದು, ಅದು ಅವರಿಗೆ ದಾವಣಗೆರೆಯಲ್ಲಿ ಶ್ರೀರಾಘವೇಂದಸ್ವಾಮಿಗಳ ಅನುಗ್ರಹದಿಂದ ದೊರೆಯಿತೆಂದು ತಿಳಿದುಬಂದಿದೆ. ಅಂತೂ ಇದು 1750ರ ಕಾಲಕ್ಕೆ ಸೇರಿದ್ದೆಂದು ಸುಲಭವಾಗಿ ಹೇಳಬಹುದು.

ಹೊಸಪೇಟೆಯ ದಾಸರಾದ ಶ್ರೀದವಿಠ್ಠಲದಾಸರೇ ಜಗನ್ನಾಥದಾಸರ ಹರಿಕಥಾಮೃತಸಾರಕ್ಕೆ ಫಲಶ್ರುತಿಯನ್ನು ಬರೆದಿದ್ದಾರೆ. ಇದಲ್ಲದೆ ಇನ್ನೂ 64ಕ್ಕೂ ಮಿಗಿಲಾದ ಕೃತಿಗಳನ್ನಿವರು ರಚಿಸಿರುವುದಾಗಿ ದಾಸಸಾಹಿತಿಗಳ ಅಂಬೋಣ. ಸತ್ಯಬೋಧತೀರ್ಥರು ಹಾಗೂ ಪ್ರಾಣೇಶದಾಸರು ಇವರ ಸಮಕಾಲೀನರು. ಶ್ರೀದವಿಠ್ಠಲದಾಸರ ಸಹೋದರಿಯ ಮಗನಾಗಿದ್ದ ರಮಾಪತಿದಾಸರೂ ಹರಿದಾಸಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನಿತ್ತಿದ್ದಾರೆ. ಶ್ರೀದವಿಠ್ಠಲದಾಸರು ಕ್ರಿ.ಶ. 1825ರ ಆಷಾಢ ಶುಕ್ಲ ಏಕಾದಶಿಯಂದು ಇಹಲೋಕವ್ಯಾಪಾರವನ್ನು ಮುಗಿಸಿದರು.

ಭಗವತ್ಸಾನ್ನಿಧ್ಯವನ್ನು ಪಡೆಯುವುದೇ ನಿಜವಾದ ಸುಖ, ಇತರೆ ಎಲ್ಲವೂ ಅಸ್ಥಿರವಾದ ಸುಖ. ಟೀಕಾರಾಯರು ತಮ್ಮ ವಿಷಮಪದವಾಕ್ಯಾರ್ಥವಿವೃತಿಯಲ್ಲಿ ‘ಕುಪಿತಾಹಿಫಣಚ್ಛಾಯಾ ಸಮೀಕೃತ್ಯಾಪರಂ ಸುಖಮ್ ‘ಹಾವಿನ ಹೆಡೆಯ ಕೆಳಗೆ ನೆಳಲನ್ನು ಆಶ್ರಯಸಿದ ಕಪ್ಪೆಯಂತೆ ನಾವೆಲ್ಲರೂ ಈ ಸಾಂಸಾರಿಕ, ಅಶಾಶ್ವತವಾದ ಐಹಿಕ ಸುಖವನ್ನಾಶ್ರಯಿಸಿದ್ದೇವೆ. ಮುಂದೆ ಅದೇ ನಮ್ಮನ್ನು ಕಬಳಿಸುತ್ತದೆ ಎಂಬ ಚಿಂತೆಯಿಲ್ಲದೆ ಮರುಳಾಗಿದ್ದೇವೆ’ ಎಂದಿದ್ದಾರೆ. ಆ ಶಾಶ್ವತಸುಖವನ್ನು ಪಡೆಯಬೇಕಾದರೆ ಅದನ್ನು ದೊರಕಿಸಿಕೊಡುವ ನಿಷ್ಕಾಮನಾಪರರಾದ ಗುರುಗಳ ಅಗತ್ಯತೆಯಿದ್ದು ಶ್ರೀರಾಯರೇ ಆ ಸ್ಥಾನಕ್ಕೆ ಸರಿದೂಗುವ ಗುರುಗಳಾಗಿದ್ದು ಸದಾ ತುಂಗಾತೀದಲ್ಲಿರುವ ವರಮಂಚಾಲೆಯಲ್ಲಿ ಸೀತಾರಾಮನ ಕೈಂಕರ್ಯವನ್ನು ಮಾಡುತ್ತ ಸಕಲವಿಘ್ನಪರಿಹಾರಕವಾದ ಅವನದ್ದೇ ಮತ್ತೊಂದು ರೂಪವಾದ ನರಸಿಂಹರೂಪವನ್ನು ಆರಾಧಿಸುತ್ತಿರುವ ರಾಯರನ್ನು ಸೇವಿಸಿದ ಮನುಜ ಹೇಗೆ ತಾನೆ ಸೌಖ್ಯದಿ ಜೀವಿಸಲಾರ? ಎಂದು ಕೇಳುವರು ದಾಸರು.

ಸುಧೀಂದ್ರತೀರ್ಥರಿಂದ ವೇದಾಂತಸಾಮ್ರಾಜ್ಯದ ದೊರೆಗಳಾಗಿ ಪ್ರತಿಷ್ಠಾಪಿತರಾದ ಗುರುರಾಯರು ದೇಶದಾದ್ಯಂತ ಸುತ್ತಿ ಸತ್ತತ್ವವನ್ನು ಪ್ರಸಾರ ಮಾಡುತ್ತ 18ನೇ ಶತಮಾನದಲ್ಲೇ ದೇಶವಿದೇಶಗಳಲ್ಲಿ ಹೆಸರುವಾಸಿಯಾಗಿದ್ದರು. ಶ್ರೀರಾಮನನ್ನು ಸದಾ ಆಶ್ರಯಿಸಿದ್ದ ಕಾರಣ ಅವನ ಅನುಗ್ರಹದಿಂದ ಅವನಂತೆ ಸರ್ವಜನಹಿತವನ್ನು ಕಾಯುವಲ್ಲಿ, ನಾಸ್ತಿಕ್ಯಾದಿದುರ್ಮತಗಳನ್ನು ಸುಲಭವಾಗಿ ಮಣಿಸುವಲ್ಲಿ ತನ್ಮೂಲಕ ವಿಷ್ಣುಪಾರಮ್ಯವನ್ನು ಎತ್ತಿಹಿಡಿಯುವಲ್ಲಿ ಸಮರ್ಥರಾಗಿರುವರು. ಸಮೀರಾವತಾರಿಗಳಾದ ಶ್ರೀಮನ್ಮಧ್ವಾಚಾರ್ಯರ ತತ್ವವಾದವನ್ನು ಸಂಸ್ಥಾಪಿಸುವಲ್ಲಿ ಯಶಸ್ವಿಗಳಾದ ರಾಯರು ವೃಥಾ ವೈದಿಕಮತವನ್ನು ನಿಂದಿಸುತ್ತಿದ್ದ ನಿಂದಕರನ್ನು ನೀಗಿ, ಜ್ಞಾನಿಗಳಿಂದಲೂ ಪಾಮರರಿಂದಲೂ ಸೇವಿಸಲ್ಪಡುತ್ತಿದ್ದು ಸದಾಚಾರಸಂಪನ್ನರೂ, ಕರುಣಾವರುಣಾಲಯರೂ ಆಗಿದ್ದಾರೆಂದು ಶ್ರೀದವಿಠ್ಠಲದಾಸರು ಹಾಡಿದ್ದಾರೆ.

ಸದಾ ಮಂತ್ರಾಲಯದಲ್ಲೇ ಇದ್ದರೂ ಭಕ್ತರು ಕರೆದಲ್ಲಿಗೆ ಕೂಡಲೇ ಹಾಜರಾಗುವ ಈ ರಾಘಪ್ಪನು ತಮ್ಮ ದರುಶನಮಾತ್ರದಿಂದಲೇ ಮಹಾಸಂಕಷ್ಟಗಳನ್ನು ಪರಿಹರಿಸಿ ಎಲ್ಲರಿಗೂ ‘ನಮ್ಮ’ ಗುರುಗಳಾಗಿದ್ದಾರೆ. ಮಂಚಾಲೆಗೆ ಆಗಾಗ್ಯೆ ಹೋಗಲಾಗದಿದ್ದರೂ ಅವರ ವೃಂದಾವನಗತವಾದ ಮೃತ್ತಿಕೆ ಹಾಗೂ ತೀರ್ಥಸೇವನೆಯಿಂದ ಮುಕ್ತಿಗೆ ಕೊಂಡೊಯ್ಯುವ ಮಹಾಕರುಣಿ ಗುರುರಾಜರು. ಇವರೇನು ಮಹಾ? ಇವರ ಸಹವಾಸ ನಮಗೇಕೆ? ಎಂದೆಲ್ಲ ಬಗೆದು ಬೀದಿ ಸುತ್ತುವ ಜನರು ನಿಜಕ್ಕೂ ಮಂದಭಾಗ್ಯರು, ಪಾಪಾತ್ಮರೇ ಸರಿ. ಏಕೆಂದರೆ ಹಿಂದೆ ನರಸಿಂಹದೇವರೇ ಇವರನ್ನು ತಮ್ಮೊಡನೆ ವೈಕುಂಠಕ್ಕೆ ಕರೆದಾಗಲೂ ಹೋಗದೆ ನಮಗಾಗಿ, ನಮ್ಮ ಉದ್ಧಾರಕ್ಕಾಗಿ ಇಲ್ಲೇ ಉಳಿದುಕೊಂಡ ಗುರುಗಳನ್ನು, ಅವರ ಕಾರುಣ್ಯವನ್ನು ಪಡೆದುಕೊಳ್ಳುವಲ್ಲಿ ನಾವು ಯತ್ನಿಸದಿದ್ದರೆ ನಷ್ಟ ಯಾರಿಗೆ? ಎಂದು ಪ್ರಶ್ನಿಸುವರು ದಾಸವರ್ಯರು.

ರಾಯರನ್ನು ಪೂಜಿಸುವಾಗ ಗೋಪಾಲದಾಸರಾದಿಯಾಗಿ ಎಲ್ಲರೂ ತಿಳಿಸಿದಂತೆ ಅವರ ಹೃದಯಕಮಲದಲ್ಲಿ ಸರ್ವದಾ ನೆಲೆಸಿರುವ ಭಗವಂತನನ್ನು ಕಾಣುವ ಪ್ರಯತ್ನಮಾಡಬೇಕು ನಾವು. ಅವನ ಸುಸನ್ನಿಧಾನಪಾತ್ರರಾಗಿದ್ದಾರೆ ಗುರುರಾಯರು. ಹೀಗಾಗಿ ಇವರಿಗೆ ಅರ್ಪಿಸಿದ ಸಕಲಸ್ತುತಿಗಳೂ ಸಾಕ್ಷಾತ್ ಭಗವಂತನಿಗೆ ಸಲ್ಲುವುದು. ಸುಲಭವಾಗಿ ದೊರೆಯುವ ಇಂತಹ ಗುರುಗಳ ಪಾದವನ್ನು ಸ್ಮರಿಸದೆ ಅಲ್ಲಲ್ಲಿ ತನ್ನ ಉದ್ಧಾರಕರನ್ನು ಹುಡುಕುತ್ತಾ ಹೊರಟಿರುವ ಮಾನವನು ಪಾಪಿಷ್ಠನಲ್ಲದೆ ಇನ್ನೇನು? ಎಂದಿರುವ ದಾಸವರ್ಯರು ರಾಯರೇ ನಮಗೆ ಲೌಕಿಕ-ಪಾರತ್ರಿಕ ಸುಖಗಳನ್ನೆಲ್ಲ ಕೊಟ್ಟು ಕಾಪಾಡುವ ಕಾಮಧೇನು ಎಂದು ಕೊಂಡಾಡಿದ್ದಾರೆ.

(ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ:[email protected],
[email protected])

 

 

Leave a Reply

Your email address will not be published. Required fields are marked *

Back To Top