Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ರಫ್ಸಂಜಾನಿ ನಿಧನ ಇರಾನ್​ಗೆ ತುಂಬಲಾಗದ ನಷ್ಟ

Wednesday, 18.01.2017, 5:00 AM       No Comments

ರಫ್ಸಂಜಾನಿಯವರ ನಿಧನದ ದುಷ್ಪರಿಣಾಮ ಇದೇ ಆಗಸ್ಟ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮೇಲಾಗುವುದು ಖಂಡಿತ. ಅವರ ಬೆಂಬಲವಿಲ್ಲದ ಉದಾರವಾದಿ ಅಧ್ಯಕ್ಷ ರೂಹಾನಿಯವರ ಭವಿಷ್ಯ ಗೊಂದಲಮಯವಾಗಿದೆ. ಜತೆಗೇ ಅಲಿ ಖಮೇನೀಯವರ ಉತ್ತರಾಧಿಕಾರಿಯನ್ನು ಹುಡುಕುವ ಕಷ್ಟಕ್ಕೂ ಇರಾನ್ ಈಡಾಗುವ ಸಾಧ್ಯತೆ ಇದೆ.

ಇರಾನ್​ನ ಮಾಜಿ ಅಧ್ಯಕ್ಷ ಅಕ್ಬರ್ ಹಶೇಮಿ ರಫ್ಸಂಜಾನಿ ಎಂಬತ್ತೆರಡನೆಯ ವಯಸ್ಸಿನಲ್ಲಿ ಇದೇ ಜನವರಿ 8ರಂದು ನಿಧನರಾದರು. ರಫ್ಸಂಜಾನಿಯವರ ಬದುಕಿನ ಉತ್ತರಾರ್ಧ ಸಮಕಾಲೀನ ಇರಾನೀ ಇತಿಹಾಸದ ಜತೆ ಬಿಡಿಸಲಾಗದಂತೆ ತಳುಕು ಹಾಕಿಕೊಂಡಿದೆ. ಅವರ ಹೆಗ್ಗಳಿಕೆಯೆಂದರೆ ಆಂತರಿಕ ರಾಜಕಾರಣದಲ್ಲಿ ಮೂಲಭೂತವಾದಿಗಳು ಮತ್ತು ಉದಾರವಾದಿಗಳ ನಡುವೆ ಸಮತೋಲನ ಕಾಯ್ದುಕೊಂಡು ಎರಡೂ ಗುಂಪುಗಳ ನಡುವೆ ವಿನಾಶಕಾರಿ ಘರ್ಷಣೆಗಳನ್ನು ತಪ್ಪಿಸಿದ ಬುದ್ಧಿವಂತಿಕೆಯನ್ನು ತೋರಿದ ರಫ್ಸಂಜಾನಿ ವಿದೇಶ ನೀತಿಗೆ ಬಂದರೆ ಅನುಕೂಲಕರ ಸನ್ನಿವೇಶಗಳಲ್ಲಿ ಹುಮ್ಮಸ್ಸಿನಿಂದ ಮುನ್ನುಗ್ಗುವ, ಪ್ರತಿಕೂಲ ಸನ್ನಿವೇಶದಲ್ಲಿ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವ ವಾಸ್ತವವಾದಿ ನಿಲುವಿನಿಂದ ಶೀತಲ ಸಮರೋತ್ತರ ಕಾಲದಲ್ಲಿ ತಮ್ಮ ದೇಶಕ್ಕೆ ಸ್ಥಾನಮಾನಗಳನ್ನೂ, ಅನುಕೂಲತೆಗಳನ್ನೂ ಗಳಿಸಿಕೊಡಲು ನಿಷ್ಠೆಯಿಂದ ಶ್ರಮಿಸಿದ್ದು. ರಫ್ಸಂಜಾನಿಯವರ ಬಗೆಗಿನ ಈ ಚಿತ್ರಣ ಮನದಟ್ಟಾಗಬೇಕಾದರೆ ಕಳೆದ ಸರಿಸುಮಾರು ನಾಲ್ಕು ದಶಕಗಳಲ್ಲಿ ಇರಾನ್ ಸಾಗಿಬಂದತ್ತ ಒಮ್ಮೆ ಪರಿಶೀಲನಾತ್ಮಕ ನೋಟ ಹರಿಸಬೇಕು.

ಫೆಬ್ರವರಿ 1979ರ ಇಸ್ಲಾಮಿಕ್ ಕ್ರಾಂತಿಯ ಮೂಲಕ ಧರ್ಮಗುರು ಆಯತೊಲ್ಲಾ ರುಹೊಲ್ಲಾ ಖೊಮೇನಿ ಆಧುನಿಕ ಇರಾನ್​ನ ಧಾರ್ವಿುಕ, ಸಾಮಾಜಿಕ ಹಾಗೂ ರಾಜಕೀಯ ದಿಕ್ಕುದೆಸೆಯನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟದ್ದು ಈಗ ಇತಿಹಾಸ. ಖೊಮೇನಿಯವರ ಎಲ್ಲ ಕಾರ್ಯಗಳಲ್ಲೂ ಅವರ ಬಲಗೈ ಬಂಟನಾಗಿ ಕೆಲಸ ಮಾಡಿದ್ದು ಇದೇ ರಫ್ಸಂಜಾನಿ. ‘ರಫ್ಸಂಜಾನಿ ಜೀವಂತವಾಗಿರುವವರೆಗೂ ಕ್ರಾಂತಿ ಜೀವಂತವಾಗಿರುತ್ತದೆ’ ಎಂದು ಖೊಮೇನಿ ಘೊಷಿಸಿದ್ದು ರಫ್ಸಂಜಾನಿ ಮೇಲೆ ಆ ಮೂಲಭೂತವಾದಿ ಕ್ರಾಂತಿನೇತಾರನಿಗಿದ್ದ ಅಭಿಮಾನ, ವಿಶ್ವಾಸಕ್ಕೆ ಅತ್ಯುತ್ತಮ ಉದಾಹರಣೆ.

ತನ್ನ ನಾಯಕನ ಮಾತಿಗೆ ತಕ್ಕ ಹಾಗೇ ರಫ್ಸಂಜಾನಿ ನಡೆದುಕೊಂಡಿದ್ದರು. ಇಸ್ಲಾಮಿಕ್ ಕ್ರಾಂತಿ, ನಂತರದ ಕುಸಿದ ಸೇನಾಸಾಮರ್ಥ್ಯ ಪರಿಣಾಮವಾಗಿ ರಕ್ಷಣೆಯ ದೃಷ್ಟಿಯಿಂದ ದಯನೀಯ ಸ್ಥಿತಿಯಲ್ಲಿದ್ದ ಇರಾನ್ ಮೇಲೆ ನೆರೆಯ ಬಲಾಢ್ಯ ಇರಾಕ್​ನ ಮಹತ್ವಾಕಾಂಕ್ಷಿ ನೇತಾರ ಸದ್ದಾಂ ಹುಸೇನ್ ಸೆಪ್ಟೆಂಬರ್ 1980ರಲ್ಲಿ ಕಾಲು ಕೆರೆದು ಯುದ್ಧಕ್ಕೆ ಬಂದದ್ದು ನಿಮಗೆ ನೆನಪಿರಬಹುದು. ಇರಾಕಿ ದಾಳಿ ಅದೆಷ್ಟು ಉಗ್ರವಾಗಿತ್ತೆಂದರೆ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಇರಾನ್​ನ ಎರಡು ಅತಿ ದೊಡ್ಡ ಬಂದರುಗಳು ಮತ್ತು ತೈಲ ಪರಿಷ್ಕರಣ ಕೇಂದ್ರಗಳಾದ ಅಬದಾನ್ ಮತ್ತು ಖೊರ್ರಾಂಶಹರ್ ಇರಾಕಿ ಸೇನೆಯ ವಶವಾದವು. ಮಾಜಿ ಅರಸ ಶಾ ಆಸ್ಥೆಯಿಂದ ಕಟ್ಟಿ ಬೆಳೆಸಿದ್ದ ಇರಾನೀ ಸೇನೆಯನ್ನು ಮೂಲಭೂತವಾದಿಗಳು ಕಡೆಗಣಿಸಿದ್ದರ ಪರಿಣಾಮ ಇದು. ಇದರ ಜತೆ ವಿದೇಶನೀತಿಯಲ್ಲೂ ಇರಾನ್​ಗೆ ಹಿನ್ನಡೆ. ಇಸ್ಲಾಮಿಕ್ ಕ್ರಾಂತಿ, ಅದರಿಂದುದುದಿಸಿದ ಉಗ್ರ ಪಶ್ಚಿಮ ಹಾಗೂ ಕಮ್ಯೂನಿಸ್ಟ್ ವಿರೋಧಿ ನೀತಿಗಳಿಂದಾಗಿ ಅಮೆರಿಕ ಹಾಗೂ ಸೋವಿಯೆತ್ ಯೂನಿಯನ್​ಗಳೆರಡೂ ಇರಾನ್ ವಿರುದ್ಧ ಸದ್ದಾಂ ಹುಸೇನ್​ನ ಬೆನ್ನಿಗೆ ನಿಂತಿದ್ದವು. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ಪ್ರಾರಂಭಿಕ ಹೊಡೆತಗಳನ್ನು ತಾಳಿಕೊಂಡು, ನಿಧಾನವಾಗಿ ಶಕ್ತಿಗೂಡಿಸಿಕೊಂಡು ಇರಾನೀ ಸೇನೆಯನ್ನು ವಿಜಯದ ಹಾದಿಯತ್ತ ಕೊಂಡೊಯ್ದದ್ದು ಚತುರ ರಫ್ಸಂಜಾನಿ. ಅವರ ಮಾರ್ಗದರ್ಶನದಲ್ಲಿ ಇರಾನಿ ಸೇನೆ ಅದೆಷ್ಟು ಪ್ರಬಲವಾಯಿತೆಂದರೆ ಅಮೆರಿಕ ಹಾಗೂ ಸೋವಿಯೆತ್ ಬೆಂಬಲವಿಲ್ಲದೇ ಸದ್ದಾಂ ತನ್ನ ಗದ್ದುಗೆಯನ್ನೂ, ರಣರಂಗದಲ್ಲಿ ತನ್ನ ದೇಶದ ಮಾನವನ್ನೂ ಉಳಿಸಿಕೊಳ್ಳುವುದು ಅಸಾಧ್ಯ ಎಂಬ ಸ್ಥಿತಿ ನಿರ್ವಣವಾಯಿತು.

ಬದಲಾದ ಪರಿಸ್ಥಿತಿಗಳು: ಅದೇ ಕಾಲಕ್ಕೆ ಖೊಮೇನಿ ತನ್ನ ದೇಶಕ್ಕೆ ಇಸ್ಲಾಮಿಕ್ ಜಗತ್ತಿನ ನಾಯಕತ್ವ ದೊರಕಿಸಿಕೊಡಲು ಸೌದಿ ಅರೇಬಿಯಾ ಜತೆ ಸೈದ್ಧಾಂತಿಕ ಸಮರಕ್ಕಿಳಿದರು. ಸುನ್ನಿ ಪ್ರಾಬಲ್ಯದ ಇಸ್ಲಾಮಿಕ್ ಜಗತ್ತಿನಲ್ಲಿ ಶಿಯಾ ಇರಾನ್​ಗೆ ಮನ್ನಣೆ ಸಿಗದಿದ್ದಾಗ ಖೊಮೇನಿ ಹಿಡಿದ ಮಾರ್ಗವೆಂದರೆ ಉಗ್ರ ಇಸ್ರೇಲ್-ವಿರೋಧಿ ನೀತಿ. ಆ ಮೂಲಕ ಸರ್ಕಾರಗಳಲ್ಲದಿದ್ದರೂ, ಮುಸ್ಲಿಂ ಜಗತ್ತಿನ ಜನತೆಯ ಪ್ರೀತಿವಿಶ್ವಾಸ, ಬೆಂಬಲ ಗಳಿಸಿಕೊಳ್ಳುವುದು ಖೊಮೇನಿಯ ಆಶಯ ವಾಗಿತ್ತು. ತನ್ನೀ ನೀತಿಯ ಅಂಗವಾಗಿಯೇ ಲೆಬನಾನ್​ನಲ್ಲಿ ಹೆಜ್ಬೊಲ್ಲಾ, ಪ್ಯಾಲೆಸೆôನ್​ನಲ್ಲಿ ಹಮಸ್ ಸೇರಿದಂತೆ ಕೆಲವು ಪ್ರಮುಖ ಇಸ್ರೇಲ್-ವಿರೋಧಿ ಭಯೋತ್ಪಾದಕ ಸಂಘಟನೆಗಳಿಗೆ ಖೊಮೇನಿಯವರ ಇರಾನ್ ಬೆಂಬಲ ನೀಡತೊಡಗಿತು. ಆದರೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಆಗತೊಡಗಿತು. ಶೀತಲ ಸಮರದ ಅಂತ್ಯ ಸನ್ನಿಹಿತವೆನಿಸಿದ್ದ ಆ ದಿನಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಉತ್ಕರ್ಷ ಸಹಜವಾಗಿಯೇ ಜಗತ್ತಿನ ಪ್ರೀತಿ ಗಳಿಸಲಿಲ್ಲ. ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ಖೊಮೇನಿ ತಯಾರಿರಲಿಲ್ಲ. ಆಗ ಪರಿಸ್ಥಿತಿಯನ್ನು ಕೈಗೆ ತೆಗೆದುಕೊಂಡದ್ದು ರಫ್ಸಂಜಾನಿ. ಅವರ ಅದೃಷ್ಟವೋ ಎಂಬಂತೆ ಅವರು ರಾಷ್ಟ್ರಾಧ್ಯಕ್ಷರಾಗುವುದಕ್ಕೆ ಎರಡೇ ತಿಂಗಳ ಮೊದಲು ಖೊಮೇನಿ ನಿಧನರಾದರು. ಅವರ ಉತ್ತರಾಧಿಕಾರಿ ಆಲೀ ಖಮೆನೀಯವರನ್ನು ನಿಭಾಯಿಸುವುದು ರಫ್ಸಂಜಾನಿಯವರಿಗೆ ಕಷ್ಟವೇನೂ ಆಗಲಿಲ್ಲ. ಪರಿಣಾಮವಾಗಿ, ರಫ್ಸಂಜಾನಿ ಅಧ್ಯಕ್ಷರಾಗಿದ್ದ ಮುಂದಿನ 8 ವರ್ಷಗಳಲ್ಲಿ ಇರಾನ್​ನ ವಿದೇಶನೀತಿಯಲ್ಲಿ ಬದಲಾವಣೆ ಕಂಡುಬಂದು ಅದರ ಅಂತಾರಾಷ್ಟ್ರೀಯ ಸಂಬಂಧಗಳೂ ಸುಧಾರಣೆಗೊಂಡವು. ಶೀತಲ ಸಮರೋತ್ತರ ಕಾಲದಲ್ಲಿ ಬದಲಾದ ಅಮೆರಿಕದ ನೀತಿಯಿಂದಾಗಿ ರಾಜಕೀಯ, ಆರ್ಥಿಕ ಉದಾರತೆ ಮುಂಚೂಣಿಗೆ ಬಂದು ಜಗತ್ತಿನಾದ್ಯಂತ ನಿರಂಕುಶ ಪ್ರಭುತ್ವಗಳು ಪ್ರಬಲ ವಿರೋಧವನ್ನೆದುರಿಸತೊಡಗಿದ ಆ ದಿನಗಳಲ್ಲಿ ಇರಾನ್​ಗೆ ರಫ್ಸಂಜಾನಿಯವರಂತಹ ವಾಸ್ತವವಾದಿ ಅಧ್ಯಕ್ಷ ದೊರೆತದ್ದು ಆ ದೇಶದ ಅದೃಷ್ಟ.

ಧರ್ಮಗುರುವಿಗೆ ಪರಮೋಚ್ಚ ಅಧಿಕಾರ: ಇರಾನ್​ನ ಸಂವಿಧಾನದ ಪ್ರಕಾರ ರಾಷ್ಟ್ರಾಧ್ಯಕ್ಷರನ್ನು ಜನತೆ ಚುನಾಯಿಸಿದರೂ ರಾಷ್ಟ್ರದ ‘ಎಲ್ಲ’ ವ್ಯವಹಾರಗಳ ಮೇಲೆ ಹಿಡಿತವಿರುವುದು ಪರಮೋಚ್ಚ ನಾಯಕ ಎಂದು ಕರೆಸಿಕೊಳ್ಳುವ ಹಿರಿಯ ಧರ್ಮಗುರುವಿಗೆ. ಈ ಉಚ್ಚ ನಾಯಕನನ್ನು ಆಯ್ಕೆ ಮಾಡುವುದು ‘ಪಂಡಿತರ ಸದನ’ ಎಂಬ ಹೆಸರಿನ ಧರ್ಮಗುರುಗಳ ಒಂದು ಸಮಿತಿ. ಒಟ್ಟಿನಲ್ಲಿ ಇರಾನ್​ನ ರಾಜಕೀಯ, ಧಾರ್ವಿುಕ ಹಾಗೂ ಸಾಮಾಜಿಕ ಬದುಕನ್ನು ರೂಪಿಸುವುದು ಪರಮೋಚ್ಚ ನಾಯಕ, ಪಂಡಿತರ ಸದನ ಹಾಗೂ ರಾಷ್ಟ್ರಾಧ್ಯಕ್ಷ. ಜನತೆಯಿಂದ ಆಯ್ಕೆಯಾದರೂ ಪರಮೋಚ್ಚ ನಾಯಕ ಮತ್ತು ಪಂಡಿತರ ಸದನದ ಸಹಕಾರ, ಬೆಂಬಲದೊಂದಿಗೇ ರಾಷ್ಟ್ರಾಧ್ಯಕ್ಷ ಆಡಳಿತ ನಡೆಸಬೇಕು. ಪಂಡಿತರ ಸದನದ ಪ್ರಭಾವೀ ಸದಸ್ಯರಾಗಿದ್ದ ರಫ್ಸಂಜಾನಿ ತಮ್ಮ ಇದುವರೆಗಿನ ಅನುಭವಗಳ, ಜ್ಞಾನದ ಆಧಾರದ ಮೇಲೆ ತಮ್ಮ ನಂತರದ ಮೂವರು ಅಧ್ಯಕ್ಷರುಗಳಿಗೆ ಮಾರ್ಗದರ್ಶಕರಾದರು. ಅಧ್ಯಕ್ಷರ ಯೋಜನೆಗಳು ದೇಶದ ಹಿತಕ್ಕೆ ಸಹಕಾರಿ ಎಂದು ಕಂಡುಬಂದರೆ ಅವರ ಪರವಾಗಿ ನಿಲ್ಲಲು, ಅವರಿಗೆ ಎಲ್ಲೆಡೆಯಿಂದ ಬೆಂಬಲ ದೊರಕಿಸಿಕೊಡಲು ರಫ್ಸಂಜಾನಿ ಹಿಂಜರಿಯುತ್ತಿರಲಿಲ್ಲ. ಈ ಬಗೆಯಲ್ಲೇ ಸ್ವತಃ ಅಣುಭೌತವಿಜ್ಞಾನಿಯಾಗಿದ್ದ ಅಧ್ಯಕ್ಷ ಮಹ್ಮೂದ್ ಅಹ್ಮದಿಜೆಜಾದ್ (2005-13) ತಮ್ಮ ಮಹತ್ವಾಕಾಂಕ್ಷೆಯ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ರಫ್ಸಂಜಾನಿಯವರ ಬೆಂಬಲ ಗಳಿಸಿಕೊಂಡದ್ದು. ಆದರೆ, ಅಣ್ವಸ್ತ್ರ ಕಾರ್ಯಯೋಜನೆಗಳಿಗೆ ಎಲ್ಲೆಡೆಯಿಂದ ವಿರೋಧ ಬಂದಾಗ ತಮ್ಮ ರಾಷ್ಟ್ರ ತಪ್ಪು ಹೆಜ್ಜೆ ಇಡುತ್ತಿದೆ ಎಂದು ರಫ್ಸಂಜಾನಿ ಅರಿತು ಅಹ್ಮದಿನೆಜಾದ್​ರ ತಲೆಯಲ್ಲಿ ವಿವೇಕ ತುಂಬಲು ಯತ್ನಿಸಿದರು. ಆದರೆ ಹೊರಗಿನ ವಿರೋಧಕ್ಕೆ, ರಫ್ಸಂಜಾನಿಯವರ ಬುದ್ಧಿಮಾತಿಗೆ ಅಧ್ಯಕ್ಷ ಅಹ್ಮದಿನೆಜಾದ್ ಪ್ರತಿಕ್ರಿಯಿಸಿದ್ದು ನಕಾರಾತ್ಮಕವಾಗಿ. ‘ಎಲ್ಲ ಇರಾನೀಯರು ಸತ್ತರೂ ಸರಿಯೇ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಅಣುಯುದ್ಧಕ್ಕೆ ನಾವು ಸಿದ್ಧ’ ಎಂದವರು ಘೊಷಿಸಿದರು. ಈ ಘೊಷಣೆಯನ್ನು ಪರಮೋಚ್ಚ ನಾಯಕ, ಧರ್ಮಗುರು ಆಯತೊಲ್ಲಾ ಅಲಿ ಮಹಮದ್ ಖಮೆನೀ ಪುನರುಚ್ಚರಿಸಿದಾಗ ಅಹ್ಮದಿಜೆಜಾದ್ ಮತ್ತಷ್ಟು ಉತ್ತೇಜಿತಗೊಂಡು ಅಣ್ವಸ್ತ್ರ ಯೋಜನೆಯನ್ನು ತೀವ್ರಗೊಳಿಸಿದರು. ರಫ್ಸಂಜಾನಿಯವರ ಆತಂಕವನ್ನು ನಿಜಗೊಳಿಸುವಂತೆ ಅಮೆರಿಕ, ಯುರೋಪಿಯನ್ ಒಕ್ಕೂಟ, ವಿಶ್ವಸಂಸ್ಥೆಗಳು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದವು. ಆದರೆ ಹಿಂದೆಗೆಯಲು ಅಹ್ಮದಿನೆಜಾದ್ ತಯಾರಿರಲಿಲ್ಲ. ಅಷ್ಟೇ ಅಲ್ಲ, ಆಳ್ವಿಕೆಯ ಅಂತ್ಯ ಹತ್ತಿರವಾಗುತ್ತಿದ್ದಂತೇ ಅವರು ಮತ್ತೊಂದು ಸ್ವಹಿತಾಘಾತಕ ದುಸ್ಸಾಹಸಕ್ಕೆ ಮುಂದಾದರು.

ಮುಳುವಾದ ಭಯೋತ್ಪಾದನಾ ಮಾರ್ಗ: ತನ್ನ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಪಶ್ಚಿಮದ ರಾಷ್ಟ್ರಗಳು, ಮುಖ್ಯವಾಗಿ ಅಮೆರಿಕ ಒಡ್ದಿದ ತಡೆಗೆ ಪ್ರತಿಯಾಗಿ ಮುಸ್ಲಿಂ ಜಗತ್ತಿನ ಬೆಂಬಲ ಗಳಿಸಲು ಅಹ್ಮದಿನೆಜಾದ್ ಸರ್ಕಾರ 2012ರಲ್ಲಿ ಇಸ್ರೇಲ್ ವಿರುದ್ಧ ಭಯೋತ್ಪಾದನಾ ಮಾರ್ಗ ಹಿಡಿಯಿತು. ಆ ವರ್ಷದ ಆರಂಭದ ತಿಂಗಳುಗಳಲ್ಲಿ ಏಷ್ಯಾದ ಅರ್ಧ ಡಜನ್ ದೇಶಗಳಲ್ಲಿ ಇಸ್ರೇಲಿ ಹಿತಾಸಕ್ತಿಗಳ ವಿರುದ್ಧ ಭಯೋತ್ಪಾದನಾ ಕೃತ್ಯಗಳಿಗೆ ಅಥವಾ ಅದರ ವಿಫಲಯತ್ನಕ್ಕೆ ಇರಾನ್ ಕಾರಣವಾಯಿತು. ಫೆಬ್ರವರಿ 13ರಂದು ದೆಹಲಿಯಲ್ಲಿ ಇಸ್ರೇಲಿ ರಾಜತಂತ್ರಜ್ಞೆಯೊಬ್ಬರ ಕಾರ್ ಮೇಲೆ ನಡೆದ ದಾಳಿ, ಅದೇ ದಿನ ಜಾರ್ಜಿಯಾದ ರಾಜಧಾನಿ ತಿಬಿಲೀಸಿಯಲ್ಲಿ ಇಸ್ರೇಲೀ ದೂತಾವಾಸದ ವಾಹನವೊಂದರ ಕೆಳಗೆ ಅಡಗಿಸಿಟ್ಟಿದ್ದ ಗ್ರೆನೇಡ್, ಅದರ ಮರುದಿನ ಥಾಯ್ಲೆಂಡ್​ನ ಬ್ಯಾಂಕಾಕ್​ನಲ್ಲಿ ತನ್ನದೇ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದ ಇರಾನೀ ಭಯೋತ್ಪಾದಕ ಮತ್ತು ಈ ಹಂಚಿಕೆಗೆ ಸಂಬಂಧಿಸಿದಂತೆ ಥಾಯ್ಲೆಂಡ್ ಮತ್ತು ಮಲೇಷ್ಯಾದಲ್ಲಿ ಸೆರೆಸಿಕ್ಕ ಮತ್ತಿಬ್ಬರು ಇರಾನೀಯರು, ಮಾರ್ಚ್ 15ರಂದು ಅಜರ್​ಬೈಜಾನ್​ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಹಿತಾಸಕ್ತಿಗಳ ಮೇಲೆ ದಾಳಿಯೆಸಗಲು ಯೋಜನೆ ರೂಪಿಸುತ್ತಿದ್ದ ಆರೋಪದ ಮೇಲೆ ಬಂಧಿತರಾದ ಮೂವತ್ತೆರಡು ಇರಾನೀಯರು ಇರಾನ್​ನ ಈ ಹೊಸ ರೂಪಕ್ಕೆ ಸಾಕ್ಷಿಯಾದರು.

ಕುಂದಿದ ವರ್ಚಸ್ಸು: ಇದೆಲ್ಲದರಿಂದಾಗಿ ಇರಾನ್ ಅಂತಾರಾಷ್ಟ್ರೀಯ ರಂಗದಲ್ಲಿ ಮತ್ತಷ್ಟು ಮೂಲೆಗೆ ತಳ್ಳಲ್ಪಟ್ಟಿತು. ಇರಾನಿ ತೈಲದ ಮೇಲೆ ಅವಲಂಬಿತವಾದ ಚೀನಾದಂತಹ ಬೆರಳೆಣಿಕೆಯಷ್ಟು ದೇಶಗಳ ಹೊರತಾಗಿ ನೈಜ ನೇಹಿಗರೇ ಇಲ್ಲದ ಹಾಗೂ ಧಾರ್ವಿುಕ, ರಾಜಕೀಯ ಕಾರಣಗಳಿಂದಾಗಿ ಮುಸ್ಲಿಂ ಜಗತ್ತಿನಲ್ಲೂ ಇರಾನ್ ಅನುಭವಿಸತೊಡಗಿದ ಏಕಾಕಿತನವನ್ನು ಗುರುತಿಸಿದ್ದು ರಫ್ಸಂಜಾನಿ. ಆದರೆ ಅಧ್ಯಕ್ಷ ಅಹ್ಮದಿನೆಜಾದ್ ಬೆನ್ನಿಗೆ ಪರಮೋಚ್ಚ ನಾಯಕ ಅಲೀ ಖಮೆನೀ ನಿಂತಿದ್ದರ ಪರಿಣಾಮವಾಗಿ ರಫ್ಸಂಜಾನಿಯವರ ವಿವೇಕದ ಮಾತುಗಳು ಗಾಳಿಯಲ್ಲಿ ತೂರಿಹೋದವು. ಕೊನೆಗೂ ಅವಕ್ಕೆ ಬೆಲೆ ಬಂದದ್ದು ಆಗಸ್ಟ್ 2013ರಲ್ಲಿ ಹಸನ್ ರೂಹಾನಿ ಅಧ್ಯಕ್ಷರಾಗಿ ಆಯ್ಕೆಯಾದಾಗ. ಅಲ್ಲಿಂದ ಮುಂದಕ್ಕೆ ರಫ್ಸಂಜಾನಿಯವರ ವಾಸ್ತವವಾದಿ, ವಿವೇಕೀ ಮಾತುಗಳು ಸರ್ಕಾರದ ನೀತಿಗಳನ್ನು ಮತ್ತೆ ಪ್ರಭಾವಿಸತೊಡಗಿದವು. ಪರಿಣಾಮವಾಗಿ, ಅಣ್ವಸ್ತ್ರ ಕಾರ್ಯಕ್ರಮಗಳ ಕುರಿತಾಗಿ ಇರಾನೀ ಧೋರಣೆ ಬದಲಾಗತೊಡಗಿ, ಅಮೆರಿಕ ಜತೆ ಮಾತುಕತೆಗೆ ಇರಾನ್ ಮುಂದಾಯಿತು. ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಿಲುಗಡೆಗೆ ತರುವ ಬಗ್ಗೆ ಅಮೆರಿಕ ಮತ್ತು ಅದರ ಐದು ಅಣ್ವಸ್ತ್ರ ಸಹಯೋಗಿಗಳೊಡನೆ ಒಪ್ಪಂದವೊಂದಕ್ಕೆ ನವೆಂಬರ್ 24, 2014ರಂದು ಜಿನೀವಾದಲ್ಲಿ ಸಹಿಹಾಕಿತು. ಒಪ್ಪಂದದ ಪ್ರಕಾರ ಮುಂದಿನ ಆರು ತಿಂಗಳಲ್ಲಿ ಇರಾನ್ ತನ್ನ ರಿಯಾಕ್ಟರ್​ಗಳಲ್ಲಿ ಇಂಟರ್​ನ್ಯಾಷನಲ್ ಆಟಾಮಿಕ್ ಎನರ್ಜಿ ಏಜೆನ್ಸಿಯ ಪರಿಶೀಲನೆಗೆ ಅವಕಾಶ ಮಾಡಿಕೊಡಲು ಹಾಗೂ ಯುರೇನಿಯಂ ಸಂಸ್ಕರಣೆಯನ್ನು ಶೇಕಡ ಇಪ್ಪತ್ತರಷ್ಟಕ್ಕೆ ಇಳಿಸಲು ಒಪ್ಪಿಕೊಂಡಿತು. ಅಧ್ಯಕ್ಷ ರೂಹಾನಿಯವರ ಈ ನಡೆಗಳ ಹಿಂದಿದ್ದದ್ದು ರಫ್ಸಂಜಾನಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇರಾನ್​ನ ಧನಾತ್ಮಕ ನೀತಿಗಳಿಗೆ ಪ್ರತಿಯಾಗಿ ಅದರ ಮೇಲಿನ ಆರ್ಥಿಕ ದಿಗ್ಬಂಧನಗಳು ಒಂದೋಂದಾಗಿ ತೆಗೆಯಲ್ಪಡುತ್ತಿವೆ ಹಾಗೂ ತೈಲ ನಿರ್ಯಾತದಿಂದಾಗಿ ಇರಾನ್​ನ ಗಳಿಕೆ ದಿನೇದಿನೇ ಏರುತ್ತಿದೆ. ಇದು ಇರಾನೀ ಅರ್ಥವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ. ಜತೆಗೆ, ಅಂತಾರಾಷ್ಟ್ರೀಯ ರಂಗದಲ್ಲೂ ಇರಾನ್​ನ ಸ್ಥಾನಮಾನಗಳು, ಪ್ರಾಮುಖ್ಯತೆ ವೃದ್ಧಿಸುತ್ತಿದೆ.

ಇಷ್ಟೆಲ್ಲ ಧನಾತ್ಮಕ ಬೆಳವಣಿಗೆಗಳಿಗೆ ಪ್ರೇರಕವಾದ ರಫ್ಸಂಜಾನಿಯವರ ನಿಧನ ಇರಾನ್​ಗೆ ಅತಿ ದೊಡ್ಡ ನಷ್ಟವೇ ಸರಿ. ಇದರ ದುಷ್ಪರಿಣಾಮ ಇದೇ ಆಗಸ್ಟ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಳ ಮೇಲಾಗುವುದು ಖಂಡಿತ. ಅವರ ಬೆಂಬಲವಿಲ್ಲದ ಉದಾರವಾದಿ ಅಧ್ಯಕ್ಷ ರೂಹಾನಿಯವರ ಭವಿಷ್ಯ ಗೊಂದಲಮಯವಾಗಿದೆ. ಜತೆಗೇ ಅಸ್ವಸ್ಥ ಪರಮೋಚ್ಚ ನಾಯಕ ಅಲಿ ಖಮೇನೀಯವರ ಉತ್ತರಾಧಿಕಾರಿಯನ್ನು ಹುಡುಕುವ ಕಷ್ಟಕ್ಕೂ ಇರಾನ್ ಈಡಾಗುವ ಸಾಧ್ಯತೆ ಇದೆ. ರಫ್ಸಂಜಾನಿಯವರ ಉಗ್ರ ವಿರೋಧಿಯಾದ ಮೂಲಭೂತವಾದಿ ರೆವಲ್ಯೂಷನರಿ ಗಾರ್ಡ್ ಪರಮೋಚ್ಚ ನಾಯಕ ಹಾಗೂ ಅಧ್ಯಕ್ಷ ಸ್ಥಾನಗಳೆರಡನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಅಲ್ಲಿಗೆ ಕಳೆದ ಮೂರು ವರ್ಷಗಳಲ್ಲಾಗಿರುವ ಧನಾತ್ಮಕ ಬೆಳವಣಿಗೆಗಳು ಅಂತ್ಯವಾದಂತೇ. ಈ ಅರ್ಥದಲ್ಲಿ ರಫ್ಸಂಜಾನಿಯವರ ನಿಧನ ಇರಾನ್​ಗೆ ತುಂಬಲಾಗದ ನಷ್ಟವೇ ಸರಿ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top