Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ರಕ್ಷಣಾ ಸ್ವಾವಲಂಬನೆಯತ್ತ ಹೆಜ್ಜೆ

Wednesday, 02.08.2017, 3:05 AM       No Comments

ಒಂದು ದೇಶ ಮಹಾನ್ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮಿಲಿಟರಿ ಶಕ್ತಿಯೇ ಪ್ರಮುಖ ಆಧಾರ. ಇತಿಹಾಸವನ್ನು ಮೆಲುಕು ಹಾಕುವುದಿದ್ದರೆ, ಭಾರತೀಯ ರಕ್ಷಣಾ ಉದ್ದಿಮೆಗೆ 200 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಬಂದೂಕುಗಳು ಹಾಗೂ ಸಿಡಿಗುಂಡುಗಳ ಉತ್ಪಾದನೆಗಾಗಿ ಶಸ್ತ್ರಾಸ್ತ್ರ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಈಗ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯೆಡೆಗೆ ಹೆಜ್ಜೆ ಇರಿಸುವುದಕ್ಕೆ ಸಕಾಲ ಎಂಬ ಹಿನ್ನೆಲೆಯಲ್ಲೊಂದು ಅವಲೋಕನ.

| ಅರುಣ್ ಜೇಟ್ಲಿ

ಮಹಾನ್ ಶಕ್ತಿಯಾಗಲು ಹಂಬಲಿಸುವ ದೇಶವೊಂದು ರಕ್ಷಣಾ ಸಾಧನಗಳ ಆಯಾತದ ಮೇಲಿನ ಅವಲಂಬನೆಯನ್ನು ಮುಂದುವರಿಸುವುದು ಸಾಧ್ಯವೇ ಮತ್ತು ತನ್ನ ದೇಶಿ ರಕ್ಷಣಾ ಉತ್ಪಾದನೆಯ ಅಭಿವೃದ್ಧಿ ಅಥವಾ ರಕ್ಷಣಾ ಉದ್ದಿಮೆ ತಳಹದಿಯನ್ನು ಕಡೆಗಣಿಸುವುದು ಸಾಧ್ಯವೆ? ಖಂಡಿತ ಸಾಧ್ಯವಿಲ್ಲ. ದೇಶಿ ರಕ್ಷಣಾ ಉತ್ಪಾದನೆ ಅಥವಾ ರಕ್ಷಣಾ ಉದ್ದಿಮೆ ತಳಹದಿ ದೇಶದ ದೀರ್ಘಾವಧಿಯ ಕಾರ್ಯತಂತ್ರ ಯೋಜನೆಯ ಅಗತ್ಯ ಅಂಶಗಳು. ಆಯಾತದ ಮೇಲಿನ ಹೆಚ್ಚಿನ ಅವಲಂಬನೆ, ಕಾರ್ಯತಂತ್ರ ನೀತಿ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತ ನಿರ್ವಹಿಸಬೇಕಾದ ಪಾತ್ರದ ದೃಷ್ಟಿಯಿಂದ ಮಾತ್ರ ತೊಡಕೆನಿಸುವ ಸಂಗತಿಯಲ್ಲ. ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಯ ಹಿನ್ನೆಲೆಯಲ್ಲಿ ಆರ್ಥಿಕ ದೃಷ್ಟಿಕೋನದಿಂದಲೂ ಗಂಭೀರ ಕಾಳಜಿಯ ವಿಷಯ. ಶಕ್ತಿಯ ಎಲ್ಲ ಅಂಶಗಳು ಮಹಾನ್ ಶಕ್ತಿಯನ್ನು ರೂಪಿಸುವುದಿದ್ದರೂ ಒಂದು ದೇಶ ಮಹಾನ್ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮಿಲಿಟರಿ ಶಕ್ತಿಯೇ ಪ್ರಮುಖ ಆಧಾರ. ಇತಿಹಾಸವನ್ನು ಮೆಲುಕು ಹಾಕುವುದಿದ್ದರೆ, ಭಾರತೀಯ ರಕ್ಷಣಾ ಉದ್ದಿಮೆಗೆ 200 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಬಂದೂಕುಗಳು ಹಾಗೂ ಸಿಡಿಗುಂಡುಗಳ ಉತ್ಪಾದನೆಗಾಗಿ ಶಸ್ತ್ರಾಸ್ತ್ರ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಅಂತಹ ಮೊದಲ ಕಾರ್ಖಾನೆ ಕೋಸಿಪೋರ್​ನಲ್ಲಿ 1801ರಲ್ಲಿ ಅಸ್ತಿತ್ವಕ್ಕೆ ಬಂತು. ಸ್ವಾತಂತ್ರ್ಯ ಪೂರ್ವದಲ್ಲಿ ಒಟ್ಟು 18 ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಸದ್ಯ ದೇಶದ ವಿವಿಧೆಡೆ 41 ಶಸ್ತ್ರಾಸ್ತ್ರ ಕಾರ್ಖಾನೆಗಳು ಹಾಗೂ ರಕ್ಷಣಾ ಉತ್ಪಾದನೆಗೆ ಸಂಬಂಧಿಸಿದ 9 ಸಾರ್ವಜನಿಕ ವಲಯದ ಉದ್ದಿಮೆಗಳಿವೆ. 200ಕ್ಕೂ ಹೆಚ್ಚು ಖಾಸಗಿ ವಲಯದ ಪರವಾನಗಿ ಹೊಂದಿದ ಕಂಪನಿಗಳು ಮತ್ತು ಕೆಲವು ಸಾವಿರ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳು, ಬೃಹತ್ ಉತ್ಪಾದಕರು ಹಾಗೂ ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ 50ಕ್ಕೂ ಹೆಚ್ಚು ಪ್ರಯೋಗಾಲಯಗಳು ಕೂಡ ದೇಶದ ಸಮಗ್ರ ರಕ್ಷಣಾ ಉತ್ಪಾದನಾ ರಂಗದ ಭಾಗವಾಗಿವೆ.

2000ನೇ ಇಸವಿವರೆಗೆ ನಮ್ಮ ಬಹುತೇಕ ಪ್ರಮುಖ ರಕ್ಷಣಾ ಸಾಧನಗಳು ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಗಳು ಆಮದಾಗುತ್ತಿದ್ದವು ಅಥವಾ ದೇಶದಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿ ಅಥವಾ ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳಲ್ಲಿ ಪರವಾನಗಿ ಉತ್ಪಾದನೆಯಡಿ ತಯಾರಾಗುತ್ತಿದ್ದವು. ದೇಶದ ಏಕೈಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ಈ ವಲಯದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಸಕ್ರಿಯ ಕೊಡುಗೆ ನೀಡಿದ್ದಲ್ಲದೆ, ದೇಶಿ ಉತ್ಪಾದನೆಯ ಪ್ರಯತ್ನಗಳಿಗೆ ಪೂರಕವಾಗಿ ಸಾಕಷ್ಟು ಬೆಂಬಲ ನೀಡಿತು. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ಡಿಆರ್​ಡಿಒ ಮತ್ತು ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳ ಪ್ರಯತ್ನಗಳ ಫಲವಾಗಿ ದೇಶ ಬಹುತೇಕ ಎಲ್ಲ ಬಗೆಯ ರಕ್ಷಣಾ ಸಾಧನಗಳು ಹಾಗೂ ವ್ಯವಸ್ಥೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದುವಂತಾಯಿತು.

ಇಂದು ಸ್ಥೂಲ ವಿಶ್ಲೇಷಣೆಯ ಪ್ರಕಾರ, ನಮ್ಮ ಒಟ್ಟಾರೆ ರಕ್ಷಣಾ ಖರೀದಿಯಲ್ಲಿ ಶೇಕಡ 40 ಭಾಗ ದೇಶಿ ಉತ್ಪಾದನೆಯಾಗಿದೆ. ಕೆಲವೊಂದು ಪ್ರಮುಖ ವಲಯಗಳಲ್ಲಿ ಗಮನಾರ್ಹ ಮಟ್ಟದಲ್ಲಿ ದೇಶಿ ಉತ್ಪಾದನೆ ಸಾಧ್ಯವಾಗಿದೆ. ಉದಾಹರಣೆಗೆ ಟಿ-90 ಟ್ಯಾಂಕ್ ಶೇಕಡ 74 ದೇಶೀಕರಣಗೊಂಡಿದೆ. ಇನ್​ಫೆಂಟ್ರಿ ಯುದ್ಧ ವಿಮಾನ(ಬಿಎಂಪಿ ಐಐ) ಶೇಕಡ 97, ಸುಖೋಯ್ 30 ಸಮರ ವಿಮಾನ ಶೇ.58 ಹಾಗೂ ಕೊಂಕುರ್ಸ್ ಕ್ಷಿಪಣಿ ಶೇ.90 ದೇಶೀಯವೆನಿಸಿವೆ. ಪರವಾನಗಿ ಉತ್ಪಾದನೆಯಡಿ ರಕ್ಷಣಾ ಸಾಧನಗಳ ದೇಶೀಕರಣ ಮಾತ್ರವಲ್ಲದೆ ನಮ್ಮದೇ ಆದ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಕೆಲವೊಂದು ಪ್ರಮುಖ ವ್ಯವಸ್ಥೆಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವಲ್ಲಿಯೂ ನಾವು ಯಶ ಕಂಡಿದ್ದೇವೆ. ಅವುಗಳಲ್ಲಿ ಆಕಾಶ್ ಕ್ಷಿಪಣಿ ವ್ಯವಸ್ಥೆ, ಸುಧಾರಿತ ಹಗುರ ಹೆಲಿಕಾಪ್ಟರ್​ಗಳು, ಲಘು ಸಮರ ವಿಮಾನಗಳು, ಪಿನಾಕ ರಾಕೆಟ್​ಗಳು, ವಿವಿಧ ಪ್ರಕಾರಗಳ ಸೆಂಟ್ರಲ್ ಅಕ್ವಿಸಿಶನ್ ರಾಡಾರ್​ಗಳು, ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡಾರ್​ಗಳು, ಯುದ್ಧಭೂಮಿ ಕಣ್ಗಾವಲು ರಾಡಾರ್​ಗಳು ಸೇರಿವೆ. ಈ ವ್ಯವಸ್ಥೆಗಳು ಶೇ.50-60ಕ್ಕಿಂತ ಹೆಚ್ಚು ಭಾಗ ದೇಶಿ ಅಂಶಗಳನ್ನು ಕೂಡ ಹೊಂದಿವೆ.

ಸರ್ಕಾರಿ ಸ್ವಾಮ್ಯದ ಉತ್ಪಾದನಾ ಕಂಪನಿಗಳು ಹಾಗೂ ಡಿಆರ್​ಡಿಒ ಮೂಲಕ ಇಷ್ಟೆಲ್ಲ ಪ್ರಗತಿ ಸಾಧಿಸಿದ ಬಳಿಕ ಇದೀಗ ಭಾರತೀಯ ರಕ್ಷಣಾ ಉದ್ಯಮ ವಲಯಕ್ಕೆ ಖಾಸಗಿ ರಂಗವನ್ನು ಸೇರ್ಪಡೆಗೊಳಿಸುವುದರೊಂದಿಗೆ ನಮ್ಮ ರಕ್ಷಣಾ ಉದ್ದಿಮೆ ತಳಹದಿಯನ್ನು ವಿಸ್ತರಿಸಲು ಸಕಾಲವೆನಿಸಿದೆ. 2001ರಲ್ಲಿ ಸರ್ಕಾರ ರಕ್ಷಣಾ ಉತ್ಪಾದನೆಯಲ್ಲಿ ಶೇ.26 ವಿದೇಶಿ ನೇರ ಬಂಡವಾಳ (ಎಫ್​ಡಿಐ) ಹೂಡಿಕೆಯೊಂದಿಗೆ ಖಾಸಗಿ ರಂಗದ ಪ್ರವೇಶಕ್ಕೆ ಅನುವುಮಾಡಿಕೊಟ್ಟಿತು. ಉದ್ದಿಮೆ ರಂಗದ ಪೂರ್ಣ ಕಾರ್ಯಶಕ್ತತೆ ಹಾಗೂ ದೇಶದಲ್ಲಿ ಲಭ್ಯವಿರುವ ಪರಿಣತಿಯನ್ನು ಬಳಸಿಕೊಂಡು ಅಂತಿಮವಾಗಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ನಮ್ಮದೇ ಆದ ರಕ್ಷಣಾ ಉದ್ದಿಮೆ ನೆಲೆಗಟ್ಟನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕಿದೆ. ಖಾಸಗಿ ವಲಯಕ್ಕೆ 2001ರಲ್ಲಿ ಅವಕಾಶ ಕಲ್ಪಿಸಲಾಗಿದ್ದರೂ ರಕ್ಷಣಾ ಉತ್ಪಾದನೆಯಲ್ಲಿ ಅದರ ಪಾಲ್ಗೊಳ್ಳುವಿಕೆ ಕೇವಲ 3-4 ವರ್ಷಗಳ ಹಿಂದೆಯಷ್ಟೆ ಗುರುತರವಾಗಿ ವ್ಯಕ್ತವಾಯಿತು. ಆದರೆ ಬಹುತೇಕ ಅದು ಶಸ್ತ್ರಾಸ್ತ್ರ ಕಾರ್ಖಾನೆಗಳು ಹಾಗೂ ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳಿಗಾಗಿ ಬಿಡಿಭಾಗಗಳ ಉತ್ಪಾದನೆಗೆ ಸೀಮಿತವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಪರವಾನಗಿ ವ್ಯವಸ್ಥೆಯಲ್ಲಿನ ಉದಾರೀಕರಣ ದಿಂದಾಗಿ ವಿವಿಧ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಗೆ 128 ಪರವಾನಿಗೆಗಳನ್ನು ನೀಡಲಾಯಿತು. ಅದಕ್ಕೂ ಹಿಂದಿನ 14 ವರ್ಷಗಳ ಅವಧಿಯಲ್ಲಿ ಕೇವಲ 214 ಪರವಾನಿಗೆಗಳನ್ನು ನೀಡಲಾಗಿತ್ತು.

ರಕ್ಷಣಾ ರಂಗದಲ್ಲಿ ಸರ್ಕಾರ ಮಾತ್ರ ಖರೀದಿದಾರ ಆಗಿರುವುದರಿಂದ ಆಂತರಿಕ ರಕ್ಷಣಾ ಉದ್ಯಮದ ಸ್ವರೂಪ ಮತ್ತು ಪ್ರಗತಿ ಸರ್ಕಾರದ ಖರೀದಿ ನೀತಿಯನ್ನು ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಖರೀದಿ ನೀತಿ ಪರಿಷ್ಕರಿಸಿದ್ದು, ದೇಶೀಯವಾಗಿ ಉತ್ಪಾದಿಸಿದ ಉಪಕರಣಗಳಿಗೆ ಆದ್ಯತೆ ನೀಡಿದೆ. ಜತೆಗೆ ಸಮರ ವಿಮಾನಗಳು, ಹೆಲಿಕಾಪ್ಟರ್​ಗಳು, ಜಲಾಂತರ್ಗಾಮಿ ನೌಕೆಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಇತ್ತೀಚೆಗೆ ಕಾರ್ಯತಂತ್ರ ಭಾಗೀದಾರಿಕೆ ನೀತಿ ಪ್ರಕಟಿಸಿದೆ. ಅದರಂತೆ ಕೆಲವೊಂದು ಭಾರತೀಯ ಕಂಪನಿಗಳು ವಿದೇಶಿ ಮೂಲ ಸಾಧನ ಉತ್ಪಾದಕರ (ಓಇಎಂಗಳು) ಜತೆ ತಂತ್ರಜ್ಞಾನ ವರ್ಗಾವಣೆಯ ಮೂಲಕ ಜಂಟಿ ಸಹಭಾಗಿತ್ವ ಅಥವಾ ಇತರೆ ಬಗೆಯ ಭಾಗೀದಾರಿಕೆ ಹೊಂದಿ ರಕ್ಷಣಾ ಸಾಧನಗಳನ್ನು ಉತ್ಪಾದಿಸಬಹುದು. ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ನೀತಿ-ನಿರ್ಧಾರಗಳು ಫಲಿತಾಂಶ ನೀಡಲಾರಂಭಿಸಿವೆ. 2013-14ರಲ್ಲಿ ಕೇವಲ ಶೇ.47.2 ಸರ್ಕಾರಿ ಖರೀದಿ ಮಾತ್ರ ಭಾರತೀಯ ಕಂಪನಿಗಳಿಂದ ಮಾಡಲಾಗುತ್ತಿತ್ತು. 2016-17ರಲ್ಲಿ ಅದು ಶೇ.60.6ಕ್ಕೆ ಏರಿಕೆಯಾಗಿದೆ.

ದೇಶದೊಳಗೆಯೆ ರಕ್ಷಣಾ ಸಲಕರಣೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಸರಣಿ ನೀತಿ ಮತ್ತು ಪ್ರಕ್ರಿಯೆ ಸುಧಾರಣೆ ಕೈಗೊಂಡಿದೆ. ಆ ಪೈಕಿ ಪರವಾನಗಿ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯ ಉದಾರೀಕರಣ, ವ್ಯವಸ್ಥಿತ ಮಾರ್ಗಸೂಚಿಗಳು, ನಿರ್ಯಾತ ನಿಯಂತ್ರಣ ಪ್ರಕ್ರಿಯೆಗಳ ಸುಧಾರಣೆ ಹಾಗೂ ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವಿನ ಸಮಸ್ಯೆಗಳ ನಿವಾರಣೆ ಮುಂತಾದ ಕ್ರಮಗಳು ಸೇರಿವೆ.

ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳ ಕಾರ್ಯಕ್ಷಮತೆ ಸುಧಾರಣೆಗೂ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂತಹ ಎಲ್ಲ ಉದ್ದಿಮೆಗಳು ಹಾಗೂ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಹೊರಗುತ್ತಿಗೆ ಕೊಡುವುದನ್ನು ಹೆಚ್ಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ದೇಶದೊಳಗೆ ಉತ್ಪಾದನಾ ವಾತಾವರಣದ ಬಲವರ್ಧನೆಗೆ ನೆರವಾಗಲಿದೆ. ರಕ್ಷಣಾ ಉದ್ದಿಮೆಗಳು ಹಾಗೂ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಗೆ ನಿರ್ಯಾತ ಗುರಿ ನಿಗದಿಪಡಿಸಲಾಗಿದೆ ಮತ್ತು ಅವುಗಳ ಖರ್ಚುವೆಚ್ಚ ತಗ್ಗಿಸಿ ಕಾರ್ಯನಿರ್ವಹಣೆ ಚುರುಕುಗೊಳಿಸುವಂತೆಯೂ ಸೂಚಿಸಲಾಗಿದೆ.

ನಮ್ಮ ರಕ್ಷಣಾ ಹಡಗುಕಟ್ಟೆಗಳು ಹಡಗುನಿರ್ವಣದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ದೇಶೀಕರಣ ಮಾಡಿವೆ. ನೌಕಾಪಡೆ ಮತ್ತು ಕರಾವಳಿ ಕಾವಲುಪಡೆ ತಮ್ಮ ಹಡಗುಗಳ ನಿರ್ವಣಕ್ಕೆ ಭಾರತೀಯ ಹಡಗುಕಟ್ಟೆಗಳಿಗೆ ಬೇಡಿಕೆ ಸಲ್ಲಿಸುತ್ತಿವೆ. ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳಲ್ಲಿ ಹೆಚ್ಚಿನ ಉತ್ತರದಾಯಿತ್ವ ತರಲು ಹಾಗೂ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಲು ನಿಧಾನಕ್ಕೆ ಬಂಡವಾಳ ವಾಪಸಾತಿ ಬಗ್ಗೆಯೂ ಚಿಂತಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳು ಹಾಗೂ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯ ಉತ್ಪಾದನಾ ಮೌಲ್ಯ ಶೇ.28 ಹಾಗೂ ಉತ್ಪಾದಕತೆ ಶೇ.38 ಹೆಚ್ಚಿದೆ.

ನಾವೀಗ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹಾದಿಯಲ್ಲಿನ ಪಯಣದಲ್ಲಿ ನಿರ್ಣಾಯಕ ಹಾಗೂ ಮಹತ್ವದ ಘಟ್ಟದಲ್ಲಿದ್ದೇವೆ. ಸ್ವಾತಂತ್ರ್ಯ ಬಳಿಕ ನಾವು ಆಯಾತದಿಂದ ಆರಂಭಿಸಿ, ಕ್ರಮೇಣ 70, 80 ಮತ್ತು 90ರ ದಶಕಗಳಲ್ಲಿ ಪರವಾನಿಗೆಯಡಿ ಉತ್ಪಾದನೆಗೆ ಮುಂದಾದೆವು. ಈಗ ದೇಶಿ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯತ್ತ ಸಾಗುತ್ತಿದ್ದೇವೆ. ಅಟೊಮೊಬೈಲ್, ಕಂಪ್ಯೂಟರ್ ತಂತ್ರಾಂಶ, ಭಾರೀ ಎಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಂತೆ ಭಾರತೀಯ ರಕ್ಷಣಾ ಉದ್ಯಮವೂ ನಿರಂತರ ನೀತಿ ಸುಧಾರಣೆ ಹಾಗೂ ಪರಿಣಾಮಕಾರಿ ಆಡಳಿತಾತ್ಮಕ ಪ್ರಕ್ರಿಯೆಯ ಮೂಲಕ ಪ್ರಮುಖ ರಕ್ಷಣಾ ಸಾಧನಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಮಹತ್ವದ ಪ್ರಗತಿ ಸಾಧಿಸುವ ವಿಶ್ವಾಸವಿದೆ. ಸುಧಾರಣಾ ಪ್ರಕ್ರಿಯೆ ಮತ್ತು ವ್ಯಾಪಾರ ವ್ಯವಸ್ಥೆಯ ಸರಳೀಕರಣ ಚಾಲ್ತಿಯಲ್ಲಿರುತ್ತವೆ. ಈ ವಲಯದ ಪ್ರಗತಿ ಮತ್ತು ಸುಸ್ಥಿರತೆಗೆ ಅಗತ್ಯವಿರುವ ವಾತಾವರಣ ನಿರ್ವಿುಸಲು ಸರ್ಕಾರ ಮತ್ತು ಉದ್ದಿಮೆ ರಂಗ ಜತೆಗೂಡಿ ಕಾರ್ಯನಿರ್ವಹಿಸಬೇಕಿದೆ. ಇದು ರಾಷ್ಟ್ರೀಯ ಸುರಕ್ಷತೆಯ ದೀರ್ಘಾವಧಿಯ ಆಶಯಕ್ಕೆ ಪೂರಕವಾಗಿರುತ್ತದೆ.

(ಲೇಖಕರು ರಕ್ಷಣಾ, ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರು )

Leave a Reply

Your email address will not be published. Required fields are marked *

Back To Top