Friday, 24th March 2017  

Vijayavani

ರಂಗೇರುತ್ತಿದೆ ಉಪಚುನಾವಣಾ ಕಣ

Monday, 20.03.2017, 8:35 AM       No Comments
Quick Summary

| ಪ್ರತಾಪ್ ಟಿ.ಕೋಡಿನರಸೀಪುರ ನಂಜನಗೂಡು :ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿ ಪರಿಣಮಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಏ.9ರಂದು ನಡೆಯುವ ಮತದಾನಕ್ಕೆ ಈಗಿನಿಂದಲೇ ರಣತಂತ್ರಗಳನ್ನು ರೂಪಿಸುತ್ತಿರುವ ಕೈ ಹಾಗೂ ಕಮಲ ಪಡೆಗಳು ಶತಾಯ ಗತಾಯ ಗೆಲ್ಲಲೇ ಬೇಕೆಂಬ ಜಿದ್ದಿಗೆ ಬಿದ್ದಿದ್ದು, ಎರಡು ಪಕ್ಷಗಳ ನಾಯಕರು ಆರೋಪ, ಪ್ರತ್ಯಾರೋಪ ಸುರಿಮಳೆಗೈಯುವ ವೇದಿಕೆಯಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರ ಮಾರ್ಪಾಡಾಗಿದೆ. ಗ್ರಾ.ಪಂ. ಕೇತ್ರಕ್ಕೊಬ್ಬ ಶಾಸಕ!: ಆಡಳಿತರೂಢ ಕಾಂಗ್ರೆಸ್ ಪ್ರತಿ […]

| ಪ್ರತಾಪ್ ಟಿ.ಕೋಡಿನರಸೀಪುರ

ನಂಜನಗೂಡು :ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿ ಪರಿಣಮಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಏ.9ರಂದು ನಡೆಯುವ ಮತದಾನಕ್ಕೆ ಈಗಿನಿಂದಲೇ ರಣತಂತ್ರಗಳನ್ನು ರೂಪಿಸುತ್ತಿರುವ ಕೈ ಹಾಗೂ ಕಮಲ ಪಡೆಗಳು ಶತಾಯ ಗತಾಯ ಗೆಲ್ಲಲೇ ಬೇಕೆಂಬ ಜಿದ್ದಿಗೆ ಬಿದ್ದಿದ್ದು, ಎರಡು ಪಕ್ಷಗಳ ನಾಯಕರು ಆರೋಪ, ಪ್ರತ್ಯಾರೋಪ ಸುರಿಮಳೆಗೈಯುವ ವೇದಿಕೆಯಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರ ಮಾರ್ಪಾಡಾಗಿದೆ.

ಗ್ರಾ.ಪಂ. ಕೇತ್ರಕ್ಕೊಬ್ಬ ಶಾಸಕ!: ಆಡಳಿತರೂಢ ಕಾಂಗ್ರೆಸ್ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಬ್ಬ ಸಚಿವ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಮಟ್ಟಕ್ಕೊಬ್ಬ ಶಾಸಕರನ್ನು ನಿಯೋಜಿಸುತ್ತಿದೆ. ಪ್ರತಿತಂತ್ರವಾಗಿ ಇತ್ತ ಬಿಜೆಪಿ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಬ್ಬ ಮಾಜಿ ಸಚಿವ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರನ್ನು ಪ್ರಚಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 10 ದಿನ ಕ್ಷೇತ್ರದಲ್ಲಿ ಕ್ಯಾಂಪೇನ್ ಮಾಡುವ ಮೂಲಕ ಮತಬೇಟೆಗೆ ಮುಂದಾಗಿರುವುದರಿಂದ ಉಪಚುನಾವಣಾ ಕಾವು ರಂಗೇರುವುದು ದಟ್ಟವಾಗಿದೆ.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಗಳ ಪಟ್ಟಿಯನ್ನು ಪ್ರಚಾರದ ವೇಳೆ ಬಿಡುಗಡೆ ಮಾಡುತ್ತೇನೆ. ಮುಖ್ಯಮಂತ್ರಿ, ಸಚಿವರು ತಾಕತ್ತಿದ್ದರೆ ಸಮರ್ಥನೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಬಹಿರಂಗ ಸವಾಲು ಹಾಕಿರುವ ಬೆನ್ನಲ್ಲೇ, ಬಿಜೆಪಿ ವಿರುದ್ಧವೂ ಬ್ರಹ್ಮಾಸ್ತ್ರ ಹೂಡಲು ಕಾಂಗ್ರೆಸ್ ಪ್ರತಿತಂತ್ರ ರೂಪಿಸುತ್ತಿದೆ. ಬಿಎಸ್​ವೈ ಆರೋಪಗಳಿಗೆ ಉತ್ತರಿಸಲು ಈಗಾಗಲೇ ಸಿದ್ಧತೆ ಕೈಗೊಳ್ಳಲಾಗುತ್ತಿದೆಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಬೃಹತ್ ಕಾರ್ಯಕರ್ತರ ಸಭೆ ನಡೆಸಿ ಉಪಚುನಾವಣೆಯಲ್ಲಿ ಗೆಲುವಿನ ಕಸರತ್ತು ನಡೆಸುತ್ತಿದೆ. ವಿಧಾನಮಂಡಲ ಬಜೆಟ್ ಅಧಿವೇಶನ ಮುಗಿಯುತ್ತಿ ದ್ದಂತೆ ಸಿಎಂ ಸಿದ್ದರಾಮಯ್ಯ, ಸಂಪುಟ ಸಚಿವರು ಉಪ ಚುನಾವಣೆಗೆ ಕಾರ್ಯತಂತ್ರ ಹೆಣೆಯಲು ಮುಂದಾಗಲಿದ್ದಾರೆ.

ನಾಮಪತ್ರ ಸಲ್ಲಿಕೆ ಭರಾಟೆ

ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸೋಮವಾರ ಅಧಿಕೃತವಾಗಿ ಅಖಾಡಕ್ಕೆ ಧುಮುಕುತ್ತಿದ್ದು, ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ ಅವರು ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ ಸೇರಿ ಪಕ್ಷದ ಪ್ರಮುಖ ನಾಯಕರ ಜತೆ ರಾಷ್ಟ್ರಪತಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಸಹ ಸೋಮವಾರವೇ ನಾಮಪತ್ರ ಸಲ್ಲಿಸುತ್ತಿದ್ದು, ಮಧ್ಯಾಹ್ನ 12 ಗಂಟೆಗೆ ಚಿಂತಾಮಣಿ ಗಣಪತಿ ದೇವಾಲಯದಿಂದ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಸಂಸದರಾದ ಶೋಭಾ ಕರಂದ್ಲಾಜೆ, ಬಿ.ಶ್ರೀರಾಮುಲು, ಮಾಜಿ ಸಚಿವರಾದ ವಿ.ಸೋಮಣ್ಣ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ ಪ್ರಮುಖರು ಸಾಥ್ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎರಡು ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಒಂದೇ ದಿನ ನಾಮಪತ್ರ ಸಲ್ಲಿಸುತ್ತಿರುವುದರಿಂದ ಬಲ ಪ್ರದರ್ಶನಕ್ಕೆ ಜೋತು ಬಿದ್ದಂತೆ ಕಾಣುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸಮಾವೇಶಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಗುಂಡ್ಲುಪೇಟೆಯಲ್ಲೂ ಜಿದ್ದಾಜಿದ್ದಿ

ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್. ನಿರಂಜನಕುಮಾರ್ ಕೂಡ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಿರಂಜನಕುಮಾರ್ ಬೆಳಗ್ಗೆ ಸ್ಕಂದಗಿರಿ ಪಾರ್ವತಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಡಿ.ದೇವರಜ ಅರಸು ಕ್ರೀಡಾಂಗಣದಿಂದ ಪಕ್ಷದ ಮುಖಂಡರೊಂದಿಗೆ ಪಾದಯಾತ್ರೆಯಲ್ಲಿ 11.30ಕ್ಕೆ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಗೀತಾ ಶ್ರೀ ವಿಜಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕಾಂಗ್ರೆಸ್ ಕಚೇರಿಯಿಂದ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ತೆರಳಿ 12.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್​ನಿಂದ ಆಡಳಿತ ಯಂತ್ರ ದುರುಪಯೋಗ

ಮೈಸೂರು: ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಮತದಾರರ ಪಡಿತರ ಚೀಟಿಗಳ ಪ್ರತಿಗಳನ್ನು ಪಡೆದುಕೊಂಡು ಹಣ ಹಂಚಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಶ್ರೀನಿವಾಸಪ್ರಸಾದ್ ಬಿಜೆಪಿ ಸೇರ್ಪಡೆಯಿಂದ ಗುಂಡ್ಲುಪೇಟೆ ಕ್ಷೇತ್ರದಲ್ಲೂ ದಲಿತ ಸಮುದಾಯ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದರು.

ಗೌಪ್ಯ ಸಭೆ: ಉಪ ಚುನಾವಣೆ ಗೆಲುವಿಗೆ ರಣತಂತ್ರ ರೂಪಿಸಲು ಬಿ.ಎಸ್.ಯಡಿಯೂರಪ್ಪ ವಿ.ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಜತೆ ಗೌಪ್ಯ ಸಭೆ ನಡೆಸಿದರು.

ಸುತ್ತೂರು ಮಠಕ್ಕೆ ಪ್ರಸಾದ್ : ವಿ.ಶ್ರೀನಿವಾಸ ಪ್ರಸಾದ್ ಭಾನುವಾರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

 ಬಿಜೆಪಿಗೆ ಎಲ್ಲೆಡೆ ಉತ್ತಮ ಬೆಂಬಲವಿದೆ. ಬೆಂಕಿ ಮಹದೇವು ಕುಟುಂಬ ಸದಸ್ಯರನ್ನು ತಾನು ಇದುವರೆಗೆ ಭೇಟಿಯಾಗದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಈ ಬಗ್ಗೆ ಶೋಭಾಕರಂದ್ಲಾಜೆ, ವಿ. ಸೋಮಣ್ಣನವರು ನೋಡಿಕೊಳ್ಳುತ್ತಾರೆ.

| ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿ

ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಉಪಚುನಾವಣೆ ಕಾವು ತೀವ್ರಗೊಳ್ಳುತ್ತಿರುವ ನಡುವೆಯೇ ಕಾಂಗ್ರೆಸ್​ನಿಂದ ಅಧಿಕಾರ ದುರ್ಬಳಕೆಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ನಿಧನದ ಬಳಿಕ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ನಾಲ್ವರು ಅಧಿಕಾರಿಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಚುನಾವಣೆ ಆಯೋಗಕ್ಕೆ ಬಿಜೆಪಿ ಭಾನುವಾರ ದೂರು ನೀಡಿದೆ. ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ, ಕಾರ್ಯದರ್ಶಿ ಎನ್.ಶಂಕರಪ್ಪ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಗುಂಡ್ಲುಪೇಟೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ಕಾರ್ಯದರ್ಶಿ ರಾಮಚಂದ್ರಪ್ಪ, ಡಿಡಿಪಿಐ ಬಸಪ್ಪ, ಜಿಲ್ಲಾ ಪಂಚಾಯಿತಿಯ ಸಹಾಯಕ ಇಂಜಿನಿಯರ್ ಶಿವಮಾದಯ್ಯ ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೇವಣ್ಣ ಕಾಂಗ್ರೆಸ್ ಏಜೆಂಟ್​ಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಈ ನಾಲ್ವರು ಅಧಿಕಾರಿಗಳು 3 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದು, ಚುನಾವಣೆ ನೀತಿ ಸಂಹಿತೆ ಪ್ರಕಾರ 3 ವರ್ಷಕ್ಕಿಂತ ಹೆಚ್ಚು ಸಮಯ ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕಾಗುತ್ತದೆ. ಸುಸೂತ್ರವಾಗಿ ಚುನಾವಣೆ ನಡೆಯಲು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇಂದು ಸರ್ವ ಸಚಿವರ ಸಭೆ

ಬೆಂಗಳೂರು: ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೋಮವಾರ ಸಭೆ ನಡೆಸಲಿದ್ದಾರೆ. ಬಹುತೇಕ ಸಚಿವರು ಸ್ವಕ್ಷೇತ್ರಗಳಿಗೆ ಹೋದ ಕಾರಣ ಭಾನುವಾರ ನಡೆಯಬೇಕಿದ್ದ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಉಭಯ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ರಣತಂತ್ರ ಹಾಗೂ ಉಸ್ತುವಾರಿ ಸಚಿವರ ನೇಮಕಕ್ಕೆ ಸಂಬಂಧಿಸಿ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಂಪುಟದ ಸದಸ್ಯರು ಭಾಗವಹಿಸಲಿದ್ದಾರೆ. ಪ್ರತಿ ಜಿಲ್ಲಾ ಪಂಚಾಯಿತಿಗೊಬ್ಬ ಸಚಿವರು, ಬೂತ್ ಮಟ್ಟಕ್ಕೊಬ್ಬ ಕೆಪಿಸಿಸಿ ಪದಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿಗೊಬ್ಬ ಮುಖಂಡರನ್ನು ಈ ಸಭೆಯಲ್ಲಿ ಉಸ್ತುವಾರಿಯನ್ನಾಗಿ ಮಾಡಲಾಗುತ್ತದೆ. ಇದರ ಜತೆಗೆ ಇವೆರಡು ಕ್ಷೇತ್ರಗಳಲ್ಲಿ ತಲಾ ಒಬ್ಬ ಹಿರಿಯ ಸಚಿವರಿಗೆ ಪ್ರಮುಖ ಜವಾಬ್ದಾರಿಯನ್ನಾಗಿ ನೀಡಲಾಗುತ್ತದೆ.

Leave a Reply

Your email address will not be published. Required fields are marked *

Back To Top