Friday, 21st September 2018  

Vijayavani

ಮತ್ತೆ ದೇವಸ್ಥಾನಕ್ಕೆ ಹೊರಟ ಸಿಎಂ - ಇಂದು ಸಂಜೆ ಶೃಂಗೇರಿ ಶಾರದಾಂಬೆಯ ದರ್ಶನ - ನಂತರ ಜಗದ್ಗುರಗಳ ಭೇಟಿ        ಕೊಡಗಿನಲ್ಲಿ ತಹಸೀಲ್ದಾರ್ ಮೇಲೆ‌ ಹಲ್ಲೆ ಪ್ರಕರಣ - ಪ್ರಕರಣ ಸಂಬಂಧ 12 ಆರೋಪಿಗಳ ಬಂಧನ        ಸಿಎಂ ದಂಗೆ ಹೇಳಿಕೆಗೆ ಆಕ್ರೋಶ - ಇಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ದೂರು - ಬಿಎಸ್​​ವೈ ನಿವಾಸಕ್ಕೆ ಬಿಗಿ ಭದ್ರತೆ        ಸಂಪುಟ ಸಭೆಯಲ್ಲಿ ಸಿಎಂ ದಂಗೆ ಹೇಳಿಕೆ ಪ್ರಸ್ತಾಪ - ಎಚ್​ಡಿಕೆ ಮಾತಿಗೆ ಹಿರಿಯ ಸಚಿವರಿಂದಲೇ ಆಕ್ಷೇಪ        ಎಸ್. ಗಿರೀಶ್​​ರಿಂದ ಆಪರೇಷನ್ ಕ್ಲೀನ್ - ಸಿಸಿಬಿ ಎಸ್ಪಿಯಾಗಿ ಬಂದ 24 ಗಂಟೆಯಲ್ಲೇ 5 ಸಿಬ್ಬಂದಿ ಎತ್ತಂಗಡಿ        ಬಾಗಲಕೋಟೆಯ ಬನಹಟ್ಟಿಯಲ್ಲೊಬ್ಬ ಪೋಲಿ ಶಿಕ್ಷಕ - ವಿದ್ಯಾರ್ಥಿನಿ ಮೊಬೈಲ್​​​ಗೆ ಐ ಲವ್ ಯೂ ಮೆಸೇಜ್       
Breaking News

ಯುಗಾವತಾರಿಣಿ ಶ್ರೀಮಾತೆ ಶಾರದಾದೇವಿ

Sunday, 30.07.2017, 3:00 AM       No Comments

ಅದು 19ನೇ ಶತಮಾನ. ಉಪನಿಷತ್ ಕಾಲದ ಯಾಜ್ಞವಲ್ಕ್ಯ-ಗಾರ್ಗಿಯರಂತೆ ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣ ಪರಮಹಂಸ- ಶ್ರೀಶಾರದಾದೇವಿಯವರು ಆಧುನಿಕಕಾಲದ ಋಷಿದಂಪತಿಯಾಗಿ ಬಾಳಿದರು. ಶಾರದಾದೇವಿಯವರ ಸಂತಜೀವನವು ಅಮೃತಸ್ಪರ್ಶದಲ್ಲಿ ಔನ್ನತ್ಯವನ್ನು ಪಡೆದು ಎಲ್ಲರಿಗೂ ಆದರ್ಶಪ್ರಾಯವಾಯಿತು.

ಜನನ-ಬಾಲ್ಯ: ಶಾರದಾದೇವಿ ಜನಿಸಿದ್ದು ಕಲ್ಕತ್ತಾದ ಬಾಂಕುರ ಜಿಲ್ಲೆಯ ಜಯರಾಂಬಾಟಿ ಎಂಬ ಹಳ್ಳಿಯಲ್ಲಿ. ಬಡಗಿಗಳೂ ರೈತರೂ ಹೆಚ್ಚಾಗಿದ್ದ ಈ ಹಳ್ಳಿಯಲ್ಲಿ ಎರಡು ಬ್ರಾಹ್ಮಣ ಕುಟುಂಬಗಳಿದ್ದವು. ಒಂದು ಬ್ಯಾನರ್ಜಿ ಮನೆತನ, ಮತ್ತೊಂದು ಮುಖರ್ಜಿ ಮನೆತನ. ರಾಮಚಂದ್ರ ಮುಖರ್ಜಿಗೆ ಮೂವರು ಸೋದರರು. ಈತನ ಹೆಂಡತಿ ಶ್ಯಾಮಸುಂದರ ದೇವಿ. 1853ರ ಡಿಸೆಂಬರ್ 22ರ ಗುರುವಾರ ದಿವ್ಯಶಿಶುವಿನ ಜನನವಾದಾಗ ದಂಪತಿಗೆ ಆನಂದವೋ ಆನಂದ. ಮಗುವಿಗೆ ‘ಠಾಕೂರ್ ಮಣಿ‘ ಎಂದು ಹೆಸರಿಟ್ಟರು. ತಾಯಿ ಮಾತ್ರ ‘ಕ್ಷೇಮಂಕರಿ‘ ಎಂದು ಕರೆಯತೊಡಗಿದಳು. ಕಾಲಕ್ರಮದಲ್ಲಿ ‘ಶಾರದಾಮಣಿದೇವಿ‘ ಎಂಬ ಹೆಸರು ರೂಢಿಗೆ ಬಂದಿತು. ಮುಖರ್ಜಿ ದಂಪತಿಗೆ ಶಾರದೆಯೇ ಮೊದಲ ಸಂತಾನ. ನಂತರ ಹುಟ್ಟಿದವರು ಕಾದಂಬಿನಿ ಎಂಬ ಮಗಳು, ಪ್ರಸನ್ನಕುಮಾರ, ಉಮೇಶಚಂದ್ರ, ಕಾಶೀಕುಮಾರ, ವರಪ್ರಸಾದ, ಅಭಯಾಚರಣ ಎಂಬ ಗಂಡುಮಕ್ಕಳು.

ಒಮ್ಮೆ ತಾಯಿ ಪುಟ್ಟ ಶಾರದೆಯನ್ನು ಪಕ್ಕದ ನಿಹೋರ್ ಗ್ರಾಮದ ಶಾಂತಿನಾಥ ದೇವಸ್ಥಾನದ ಜಾತ್ರೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಒಬ್ಬಾಕೆ ಶಾರದೆಯನ್ನು ಮಡಿಲಲ್ಲಿ ಕೂರಿಸಿಕೊಂಡು ಅಲ್ಲಿದ್ದ ಹುಡುಗರನ್ನು ತೋರಿಸುತ್ತ ‘ನೀನು ಯಾರನ್ನು ಮದುವೆಯಾಗುತ್ತಿ?‘ ಎಂದಾಗ ‘ಅವರನ್ನು‘ ಎಂದು ಸ್ವಲ್ಪ ದೂರದಲ್ಲಿದ್ದ ಶ್ರೀರಾಮಕೃಷ್ಣರನ್ನು ತೋರಿಸಿದ್ದು ಒಂದು ವಿಶೇಷ ಘಟನೆ. ರಾಮಕೃಷ್ಣರ ತಂದೆ-ತಾಯಿ ಹುಡುಗಿಯನ್ನು ಆರಿಸಲು ಯತ್ನಿಸುತ್ತಿದ್ದಾಗ ‘ಜಯರಾಂಬಾಟಿಯಲ್ಲಿ ನನಗಾಗಿ ಮೀಸಲಾದ ಹುಡುಗಿ ಇದ್ದಾಳೆ‘ ಎಂದು ರಾಮಕೃಷ್ಣರೇ ಸೂಚಿಸಿದ್ದರಂತೆ. ಅಂದಿನ ನಿಲುವಳಿಯಂತೆ 5 ವರ್ಷದ ಶಾರದೆಗೂ 23 ವರ್ಷದ ರಾಮಕೃಷ್ಣರಿಗೂ ಮದುವೆಯಾಯಿತು. ವಧು-ವರ ಇಬ್ಬರ ಮನೆಯವರೂ ಬಡವರೇ ಆಗಿದ್ದರಿಂದ ಮದುವೆ (ಮೇ 1859) ಸರಳವಾಗೇ ನಡೆಯಿತು. ರಾಮಕೃಷ್ಣರ ಜತೆ ಶಾರದೆ ಕಾಮಾರಪುಕುರದಲ್ಲಿ ಕೆಲಕಾಲ ಇದ್ದರು. ಶಾರದೆಗೆ 7 ವರ್ಷ ತುಂಬಿದಾಗ, ಸಂಪ್ರದಾಯದಂತೆ ಮಾವನಮನೆಯಲ್ಲಿ ಕೆಲದಿನ ಇರಲು ರಾಮಕೃಷ್ಣರು ಹೋದರು. ಆಮೇಲೆ ರಾಮಕೃಷ್ಣರು ಕಾಮಾರಪುಕುರಕ್ಕೆ ಬಂದು ದಕ್ಷಿಣೇಶ್ವರಕ್ಕೆ ಹಿಂತಿರುಗಿದರು.

ಇತ್ತ ಶಾರದೆ ತಾಯಿಯಿಂದ ಎಲ್ಲ ಮನೆಗೆಲಸಗಳನ್ನು ಕಲಿಯುತ್ತಿದ್ದಳು, ಹಳ್ಳಿಯ ಎಲ್ಲರಂತೆ ಸಾಮಾನ್ಯಳಾಗಿ ಬೆಳೆಯುತ್ತಿದ್ದಳು. 1864ರಲ್ಲಿ ಬಂಗಾಳಕ್ಕೆ ಭೀಕರ ಬರ ಅಪ್ಪಳಿಸಿತು. ತುಂಡುಜಮೀನಿನಲ್ಲಿ ಬರುವ ಅಷ್ಟೋಇಷ್ಟೋ ಬೆಳೆ, ಪೌರೋಹಿತ್ಯದಿಂದ ಕೊಂಚ ಸಂಪಾದನೆ, ಜನಿವಾರ ತಯಾರಿಕೆಯಿಂದ ಬರುತ್ತಿದ್ದ ಪುಡಿಗಾಸು- ಇಷ್ಟರಿಂದಲೇ ಮುಖರ್ಜಿ ಕುಟುಂಬ ನಿರ್ವಹಣೆ ಆಗಬೇಕಿತ್ತು. ಶಾರದೆ ಬಲು ಗಂಭೀರೆ. ಓರಗೆಯ ಹುಡುಗಿಯರ ಹುಡುಗಾಟಿಕೆಗಳು ಶಾರದೆಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಗೆಳತಿಯರು ಜಗಳವಾಡಿದರೆ ರಾಜಿ ಮಾಡಿಸುವ ಕೆಲಸವನ್ನಷ್ಟೇ ಅವಳು ಮಾಡುತ್ತಿದ್ದಳು. ತಮ್ಮಂದಿರನ್ನು ನೋಡಿಕೊಳ್ಳುವುದರಲ್ಲೇ ಅವಳ ಹೆಚ್ಚಿನ ಸಮಯ ಸರಿದುಹೋಗುತ್ತಿತ್ತು. ತಮ್ಮಂದಿರ ಜತೆ ತಾನೂ ಶಾಲೆಗೆ ಹೋಗಿ ಕಲಿಯಲು ಯತ್ನಿಸಿದ್ದುಂಟು. ‘ವಿದ್ಯಾಭ್ಯಾಸವೆಂದರೆ ಕೇವಲ ಓದು-ಬರಹಗಳಲ್ಲ; ಹೃದಯ-ಬುದ್ಧಿಗಳ ಪೂರ್ಣ ವಿಕಸನವೇ ನಿಜವಾದ ವಿದ್ಯಾಭ್ಯಾಸ‘ ಎಂಬ ಅರಿವು ಅದು ಹೇಗೋ ಚಿಕ್ಕಂದಿನಲ್ಲೇ ಶಾರದೆಯಲ್ಲಿ ಮೈಗೂಡಿತ್ತು!

ಜಗನ್ಮಾತೃತ್ವ: ಬಡತನ, ಗೃಹಕೃತ್ಯಗಳಿಂದಾಗಿ ವಿದ್ಯಾಭ್ಯಾಸ ನಡೆಯಲಿಲ್ಲವಾದರೂ, ಶಾರದೆಗೆ ಓದಿನಲ್ಲಿ ಕುಂದದ ಆಸಕ್ತಿ. ರಾಮಕೃಷ್ಣರ ಅಣ್ಣನ ಮಗಳು ಲಕ್ಷ್ಮಿಯಿಂದಾಗಿ ಕಾಗುಣಿತಾಭ್ಯಾಸ ಮಾಡಿದ್ದುಂಟು. ರಾಮಾಯಣ ಮುಂತಾದ ಪುಸ್ತಕ ಓದಲು ಇದರಿಂದ ಸಾಧ್ಯವಾಯಿತು. ಆದರೆ, ಬರಹ ಅಷ್ಟಕಷ್ಟೆ. ಶಾರದೆಗೆ 14 ವರ್ಷವಾಯಿತು. ರಾಮಕೃಷ್ಣರು 7 ವರ್ಷಗಳ ನಂತರ ಕಾಮಾರಪುಕುರಕ್ಕೆ ಬಂದರು. ಅವರು ಅಲ್ಲಿರುವಾಗ್ಗೆ ಪತ್ನಿಯ ವ್ಯಕ್ತಿತ್ವ ನಿರ್ವಣದಲ್ಲಿ ಮಗ್ನರಾದರು. ತಮ್ಮ ಅಲೌಕಿಕ ಪ್ರೇಮದಿಂದ ಆಕೆಯ ಹೃದಯ ಗೆದ್ದರು, ತಾವು ಗಳಿಸಿದ್ದ ದಿವ್ಯಾನುಭವಗಳನ್ನು ಧಾರೆಯೆರೆದರು. ದಿನನಿತ್ಯದ ಲೌಕಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಗಾಢತೆ ಮತ್ತು ಎಚ್ಚರಿಕೆಯನ್ನು ಶಾರದೆಯ ವ್ಯಕ್ತಿತ್ವದಲ್ಲಿ ರೂಪಿಸುತ್ತ ಹೋದರು. ಲೋಕದೃಷ್ಟಿಯಲ್ಲಿ ರಾಮಕೃಷ್ಣರ ಧರ್ಮಪತ್ನಿಯಾಗಿದ್ದರೂ, ಪತಿಯ ನಿಷ್ಠಾವಂತ ಶಿಷ್ಯೆಯಾದಳು ಶಾರದೆ. ರಾಮಕೃಷ್ಣರು ಆಕೆಯನ್ನು ಸಹಧರ್ಮಚಾರಿಣಿಯಾಗಿ ರೂಪಿಸಿದರು. ರಾಮಕೃಷ್ಣರ ಆಧ್ಯಾತ್ಮಿಕ ಶಿಕ್ಷಣದಲ್ಲಿ ಕಾಮ-ಕಾಂಚನ ತ್ಯಾಗವೇ ಪ್ರಮುಖ. ಇಂಥ ತ್ಯಾಗಕ್ಕೆ ಪತ್ನಿಯ ಮನಸ್ಸನ್ನು ಸಿದ್ಧಗೊಳಿಸಿದರು. ಆದರೂ ತಾಯಿಯಾಗಬೇಕೆಂಬುದು ಹೆಣ್ಣಿನ ಸಹಜ ಹಂಬಲವಲ್ಲವೇ? ಪತ್ನಿಯ ಸಂತಾನಾಭಿಲಾಷೆಯನ್ನು ಬೇರುಸಹಿತ ಕಿತ್ತೊಗೆಯಲು ಸಜ್ಜಾದರು. ಶಿಸ್ತಿನ ಜೀವನದ ರಾಮಕೃಷ್ಣರು ಸದಾ ಧ್ಯಾನದಲ್ಲೇ ಇದ್ದರೂ ಲೋಕದ ನಡಾವಳಿಗಳಂತೆ ನಡೆದುಕೊಂಡವರೇ; ಹೀಗಾಗಿ ಶಾರದೆಯನ್ನು ಸಂತೋಷವಾಗಿಡಲು ಯತ್ನಿಸುತ್ತಿದ್ದರು. ಶಾರದೆ ಕಾಲಕ್ರಮೇಣ ಬಾಹ್ಯ ಗೌಜು-ಗದ್ದಲಗಳಿಂದ ಹೊರಬಂದು ಅಂತಮುಖಿಯಾದಳು. ತಾನು-ತನ್ನ ಕುಟುಂಬ ಎಂಬ ಸಂಕುಚಿತ ಬುದ್ಧಿ ಹಿಂದೆ ಸರಿದು, ಸರ್ವರನ್ನೂ ವಾತ್ಸಲ್ಯದಿಂದ ಕಾಣುವ ನಿಸ್ವಾರ್ಥಭಾವ ಬೆಳೆಯಿತು. ರಾಮಕೃಷ್ಣರ ದಿವ್ಯಪ್ರಭಾವದಿಂದ ಶಾರದೆ ಸಾಕ್ಷಾತ್ ಕರುಣಾರೂಪಿಣಿಯೇ ಆದಳು.

ರಾಮಕೃಷ್ಣರು ಅದ್ವೈತ ಸಾಕ್ಷಾತ್ಕಾರ ಪಡೆದದ್ದು ಗುರು ತೋತಾಪುರಿಯವರಿಂದ. ತ್ಯಾಗ-ವೈರಾಗ್ಯ-ವಿವೇಕ- ಜ್ಞಾನಗಳು ಯಾರಲ್ಲಿ ಪರಿಪೂರ್ಣವಾಗಿರುತ್ತವೋ ಅಂಥವರು ಪತ್ನಿ ಬಳಿಯಲ್ಲಿದ್ದರೂ ಪರಬ್ರಹ್ಮದಲ್ಲೇ ಮನಸ್ಸುಳ್ಳವರಾಗಿರುತ್ತಾರೆ. ಇವರಿಬ್ಬರು ದಾಂಪತ್ಯಜೀವನದ ನೂತನ ಮೌಲ್ಯವನ್ನು ಆವಿಷ್ಕರಿಸಿ ಜಗತ್ತಿಗೆ ತೋರಿಸಿಕೊಟ್ಟರು. ಒಮ್ಮೆ ರಾಮಕೃಷ್ಣರು ‘ನನ್ನ ಪತ್ನಿಯಾದ ನಿನಗೆ ನನ್ನ ಮೇಲೆ ಹಕ್ಕಿದೆ. ನಿನಗೆ ನನ್ನನ್ನು ಪ್ರಾಪಂಚಿಕ ಜೀವನಕ್ಕೆ ಎಳೆಯುವ ಮನಸ್ಸಿದೆಯೆ?‘ ಎಂದು ಕೇಳಿದರು. ‘ನಾನೇಕೆ ಹಾಗೆ ಮಾಡಲಿ? ನಾನು ಬಂದಿರುವುದು ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ನೆರವಾಗಲು‘- ತಕ್ಷಣವೇ ಘನವಾದ ಉತ್ತರ ಬಂದಿತು. ರಾಮಕೃಷ್ಣರ ಪರಿಪೂರ್ಣ ದಿವ್ಯಜೀವನಕ್ಕೆ ದೇಹಬುದ್ಧಿಯನ್ನು ಬಿಟ್ಟು ಆತ್ಮಭಾವ ನೆಲೆಗೊಳಿಸಿದ ಯಶಸ್ಸು ಶಾರದಾದೇವಿಯವರಿಗೆ ಸಲ್ಲುತ್ತದೆ!

1873ರ ಜೂನ್ 5. ಫಲಹಾರಿಣೀ ಕಾಳಿಪೂಜೆಯ ಪವಿತ್ರದಿನವಾದ ಅಂದು ದಕ್ಷಿಣೇಶ್ವರ ಉತ್ಸವದ ಅಂಗವಾಗಿ ಸಿಂಗಾರಗೊಂಡಿತ್ತು. ಎಲ್ಲೆಲ್ಲೂ ನಾಮಸಂಕೀರ್ತನೆಯ ಸಂಭ್ರಮ. ರಾಮಕೃಷ್ಣರು ಜಗನ್ಮಾತೆಯ ಪೂಜೆಗೆ ಅಣಿಮಾಡಿಕೊಳ್ಳುತ್ತಿದ್ದರು. ಆದರೆ, ಗರ್ಭಗುಡಿಯಲ್ಲಲ್ಲ; ತಮ್ಮ ಕೋಣೆಯಲ್ಲೇ! ಪೂಜ್ಯ-ಪೂಜಕರಲ್ಲದೆ ಅಲ್ಲಿ ಯಾರಿಗೂ ಪ್ರವೇಶವಿರಲಿಲ್ಲ. ಪೂಜೆ ಪ್ರಾರಂಭವಾಯಿತು. ಆಚಮನಾದಿ ಶುದ್ಧಿಕಾರ್ಯದ ನಂತರ, ಪೂಜಾಪೀಠದ ಮೇಲೆ ಕುಳಿತುಕೊಳ್ಳುವಂತೆ ಹೆಂಡತಿಗೆ ಸಂಜ್ಞೆ ಮಾಡಿದರು. ಆಕೆ ರಾಮಕೃಷ್ಣರೆದುರು ಕುಳಿತರು. ಶಾರದಾದೇವಿಯರ ಅಂಗಪ್ರತ್ಯಂಗವನ್ನು ಮಂತ್ರಪೂರ್ವಕ ನ್ಯಾಸ ಮಾಡಿ ಜಗನ್ಮಾತೆಯನ್ನು ತಾದಾತ್ಮ್ಯಗೊಳಿಸಿದರು. ಶಾರದಾದೇವಿ ಸಂಪೂರ್ಣ ಸಮಾಧಿಸ್ಥರಾದರು. ನಡುರಾತ್ರಿ ಕಳೆಯಿತು, ಬಹಿಮುಖರಾದರು. ರಾಮಕೃಷ್ಣರಿಗೆ ಮನಸ್ಸಿನಲ್ಲೇ ನಮಸ್ಕರಿಸಿ ತಮ್ಮ ವಾಸಸ್ಥಳವಾದ ನಹಬತ್ ಖಾನೆಯತ್ತ ತೆರಳಿದರು. ರಾಮಕೃಷ್ಣರ ಆಧ್ಯಾತ್ಮಿಕ ಸಾಧನೆ ಸಂಪನ್ನಗೊಂಡು, ದೇವ-ಮಾನವತ್ವವು ಪರಿಪೂರ್ಣ ಅಭಿವ್ಯಕ್ತಿ ಪಡೆಯಿತು. ಶಾರದಾದೇವಿಯವರು ಜಗನ್ಮಾತೃತ್ವಕ್ಕೇರಿದರು.

ಭವತಾರಿಣಿ: ಶಾರದಾದೇವಿಯವರು ಆಗಾಗ್ಗೆ ಕಲ್ಕತ್ತದಿಂದ ಜಯರಾಂಬಾಟಿಗೆ ಬಂದು ಹೋಗುತ್ತಿದ್ದರು. 1873ರ ಅಕ್ಟೋಬರ್​ನಲ್ಲಿ ಬಂದಿದ್ದರು. ಅದಾದ ಮರುವರ್ಷ ತಂದೆ ನಿಧನಹೊಂದಿದರು. ಈ ನಡುವೆ ಶಾರದಾದೇವಿ ವಾಸವಿದ್ದ ನಹಬತ್​ಖಾನೆ ಜಾಗ ಬಂದವರು ಇರಲು ಸಾಕಾಗುತ್ತಿರಲಿಲ್ಲ. ಇದು ಶಂಭುಮಲ್ಲಿಕ್​ನ ಗಮನಕ್ಕೆ ಬಂದು, ಕಾಳೀದೇವಸ್ಥಾನದ ಪಕ್ಕದ ಜಾಗ ಕೊಂಡು ಮನೆಕಟ್ಟಿಸಿದ. ಅಲ್ಲಿಗೆ ಶ್ರೀಮಾತೆ ಸೇವಕಿಯೊಂದಿಗೆ ಬಂದು ವಾಸಮಾಡಲಾರಂಭಿಸಿದರು. ರಾಮಕೃಷ್ಣರು ಇಲ್ಲಿಗೆ ಬಂದು ಊಟಮಾಡಿ ಹೋಗುತ್ತಿದ್ದರು. ಶಾರದಾದೇವಿಯವರು ಪ್ರತಿನಿತ್ಯ ಬೆಳಗ್ಗೆ 3ಕ್ಕೆ ಎದ್ದು ಸ್ನಾನ ಮುಗಿಸಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಜಪ, ಪೂಜೆ ಆದಮೇಲೆ ಅಡುಗೆ ಮಾಡುತ್ತಿದ್ದರು. ರಾಮಕೃಷ್ಣರು ಸ್ನಾನಕ್ಕೆ ಹೋಗುವ ಮೊದಲು ಅವರ ಮೈಗೆ ಎಣ್ಣೆ ಹಚ್ಚುತ್ತಿದ್ದರು. ಹನ್ನೊಂದರ ನಂತರ ಊಟ. ಆಮೇಲೆ ಎಲೆ-ಅಡಕೆ ಕೊಡುತ್ತಿದ್ದರು. ರಾಮಕೃಷ್ಣರು ಊಟದ ವೇಳೆ ಭಾವಸಮಾಧಿಗೆ ಹೋಗದಿರುವಂತೆ ನೋಡಿಕೊಳ್ಳಬೇಕಿತ್ತು. ರಾಮಕೃಷ್ಣರ ಊಟದ ನಂತರ ಶ್ರೀಮಾತೆ ಸ್ವಲ್ಪ ಏನನ್ನಾದರೂ ಸೇವಿಸಿ ದೇವರನಾಮ ಹಾಡಿಕೊಳ್ಳುತ್ತಿದ್ದರು. ಸ್ವಲ್ಪ ವಿಶ್ರಾಂತಿಯ ನಂತರ, ಮನೆಗೆಲಸಗಳನ್ನು ಮುಗಿಸುತ್ತಿದ್ದರು. ಸಂಜೆ ಒದ್ದೆಬಟ್ಟೆಯಿಂದ ಮೈ ಒರೆಸಿಕೊಂಡು ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ನಂತರ ರಾತ್ರಿ ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಿದ್ದರು. ಅದಾದ ಸ್ವಲ್ಪ ಹೊತ್ತಿಗೆ ಶಯನ. ಇದು ದಿನಚರಿಯಾಗಿತ್ತು.

ರಾಮಕೃಷ್ಣರ ಶಿಷ್ಯಬಳಗ ಬೆಳೆಯಿತು. ಶಾರದಾನಂದ, ವಿವೇಕಾನಂದ, ಬ್ರಹ್ಮಾನಂದರು ರಾಮಕೃಷ್ಣರ ಆಧ್ಯಾತ್ಮಿಕ ಔನ್ನತ್ಯವನ್ನು ಲೋಕಕ್ಕೆ ಸಾರಲು ಸಿದ್ಧರಾದರು. ದಕ್ಷಿಣೇಶ್ವರಕ್ಕೆ ಜನ ಬರಲಾರಂಭಿಸಿದರು. 1886ರ ಆಗಸ್ಟ್ 15ರಂದು ರಾಮಕೃಷ್ಣರ ದೇಹತ್ಯಾಗದ ದಿನ ಬಂದಿತು. ಮಧ್ಯಾಹ್ನದ ವೇಳೆಗೆ ಶಾರದಾದೇವಿ ಬಂದರು. ಅವರಿಗೆ ‘ಓ ಬಂದೆಯಾ! ನೋಡು, ಸಾಗರದಾಚೆಗಿನ ಯಾವುದೋ ಜಾಗಕ್ಕೆ ಹೋಗುತ್ತಿರುವಂತೆ ಅನ್ನಿಸುತ್ತಿದೆ‘ ಎಂದಾಗ ಶಾರದಾದೇವಿಯವರ ಕಣ್ಣಂಚಿನಿಂದ ನೀರು ಜಿನುಗಿತು. ‘ಚಿಂತಿಸುವ ಅಗತ್ಯವಿಲ್ಲ, ನಿನ್ನ ಜೀವನ ಈಗಿನಂತೆಯೇ ನಡೆಯುತ್ತದೆ; ನರೇಂದ್ರಾದಿಗಳೆಲ್ಲ ನೋಡಿಕೊಳ್ಳುತ್ತಾರೆ‘ ಎಂದರು. ಹಗಲು ಕಳೆದು ರಾತ್ರಿಯಾಯಿತು. ‘ಹರಿಃ ಓಂ ತತ್​ಸತ್‘ ಎನ್ನುತ್ತ ಸಮಾಧಿಸ್ಥರಾದರು. ಮಧ್ಯರಾತ್ರಿ ಹೊತ್ತಿಗೆ ಎಚ್ಚೆತ್ತು ಗಂಜಿಯನ್ನು ಕುಡಿದರು. ರಾಮಕೃಷ್ಣರ ಪಾದಗಳನ್ನು ನರೇಂದ್ರ ಮಡಿಲಲ್ಲಿರಿಸಿಕೊಂಡಿದ್ದರು. 1886ರ ಆಗಸ್ಟ್ 16ರ ರಾತ್ರಿ ಒಂದು ಗಂಟೆ ಎರಡು ನಿಮಿಷಕ್ಕೆ ರಾಮಕೃಷ್ಣರ ನಿರ್ಯಾಣವಾಯಿತು. ‘ಅಮ್ಮಾ ಕಾಳಿ! ನಾನೇನು ಮಾಡಿದೆ ಅಂತ ನನ್ನನ್ನು ಬಿಟ್ಟು ಹೋದೆ‘ ಎಂದು ಉದ್ಗರಿಸಿದ ಶಾರದಾದೇವಿ ಸ್ಥಿರಚಿತ್ತರಾದರು. ಅವರಿಗೀಗ ವೈಧವ್ಯ. ಹಿಂದೂ ಸಂಪ್ರದಾಯದಂತೆ ಆಭರಣಗಳನ್ನು ಕಳಚಿದರು. ಚಿನ್ನದ ಬಳೆ, ತಾಳಿ ಬಿಚ್ಚಲು ಹೋದಾಗ ರಾಮಕೃಷ್ಣರು ಕಾಣಿಸಿಕೊಂಡು ‘ಯಾಕೆ? ನಾನೇನು ಮರಣ ಹೊಂದಿದ್ದೇನೆಯೆ? ಆ ಕೋಣೆಯಿಂದ ಈ ಕೋಣೆಗೆ ಬಂದಿದ್ದೇನೆ ಅಷ್ಟೆ‘ ಎಂದರು.

1886ರ ಆಗಸ್ಟ್ 30ರಂದು ಬೃಂದಾವನ ಯಾತ್ರೆಗೆ ತೆರಳಿದ ಶಾರದಾದೇವಿ ಅಲ್ಲಿ ಒಂದು ವರ್ಷವಿದ್ದರು. ಕ್ರಮೇಣ ಸಮಾಧಾನಗೊಂಡ ಮನಸ್ಸಿನಲ್ಲಿ ಆಧ್ಯಾತ್ಮಿಕ ಆನಂದ ಆವರಿಸಿತು. ಅಲ್ಲಿಂದ ಹರಿದ್ವಾರ, ಜಯಪುರ, ಪ್ರಯಾಗದ ಮೂಲಕ ಕಲ್ಕತ್ತೆಗೆ ಹಿಂದಿರುಗಿದರು. ರಾಮಕೃಷ್ಣರ ಸೂಚನೆಯಂತೆ ಕಾಮಾರಪುಕುರದಲ್ಲಿ ಅವರ ಒಂಟಿಜೀವನ ಶುರುವಾಯಿತು. ಜತೆಗೆ ಬಂದಿದ್ದ ಲಕ್ಷ್ಮಿಯೋಗೀಂದ್ರ, ಗೊಲಾಪ್ ಮಾ ಎಲ್ಲರೂ ಹೊರಟುಬಿಟ್ಟರು. ಕೆಲವೇ ಹಳೆಯ ಪರಿಚಯಸ್ಥರನ್ನು ಬಿಟ್ಟರೆ ಬೇರಾರೂ ಆ ಊರಲ್ಲಿರಲಿಲ್ಲ. ಊಟಕ್ಕೂ ತತ್ವಾರ. ಅನ್ನದೊಂದಿಗೆ ಸೊಪ್ಪನ್ನು ಬೇಯಿಸಿಕೊಂಡು ತಿನ್ನಲಾರಂಭಿಸಿದರು. ಜನರ ಮೌಢ್ಯದಿಂದಾಗಿ ಊರು ನರಕದಂತಿತ್ತು, ಯಾರಿಗೂ ಸಹಾನುಭೂತಿಯಾಗಲಿ ಔದಾರ್ಯವಾಗಲಿ ಇರಲಿಲ್ಲ. ಶಾರದಾದೇವಿಯವರ ಕಷ್ಟಗಳು ಸ್ವಾಮಿ ಶಾರದಾನಂದರಿಗೆ ಹೇಗೊ ತಿಳಿಯಿತು. ಕಾಮಾರಪುಕುರದಲ್ಲಿ 9 ತಿಂಗಳು ಕಳೆದು 1888ರ ಏಪ್ರಿಲ್​ನಲ್ಲಿ ಕಲ್ಕತ್ತೆಗೆ ಬಂದರು. ನಂತರ ಶಾರದಾನಂದರ ಸತತ ಯತ್ನದಿಂದಾಗಿ ಶಾಶ್ವತ ಕಟ್ಟಡ ನಿರ್ವಣಗೊಂಡಿತು. ಇದೇ ವೇಳೆ ವಿವೇಕಾನಂದರು ಅತ್ಯುನ್ನತ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಶಾರದಾದೇವಿಯವರ ಆಶೀರ್ವಾದ ಪಡೆದರು. ರಾಮಕೃಷ್ಣರ ಭಕ್ತರೆಲ್ಲರಿಗೂ ಆಂತರಿಕ ಮಾರ್ಗದರ್ಶನ ಮಾಡುವ ಮಹಾಮಾತೆಯಾದರು ಶ್ರೀಶಾರದಾದೇವಿ.

ಸ್ವಾಮಿ ವಿವೇಕಾನಂದರು 1897ರ ಮೇ 1ರಂದು ‘ರಾಮಕೃಷ್ಣ ಮಿಷನ್‘ ಎಂಬ ಸಂಸ್ಥೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಬಲರಾಮ ಬೋಸರ ಮನೆಯಲ್ಲಿ ಪ್ರತಿ ಭಾನುವಾರ ಸಭೆ ನಡೆಯುತ್ತಿತ್ತು. ಅದರಲ್ಲಿ ಶಾರದಾದೇವಿ ಭಾಗವಹಿಸುತ್ತಿದ್ದರು. ರಾಮಕೃಷ್ಣರ ಪ್ರತಿಷ್ಠಾಪನೆಗಾಗಿ ಬೇಲೂರು ಎಂಬಲ್ಲಿ ಗಂಗಾನದಿಯ ದಡದ ಮೇಲೆ ವಿಶಾಲ ಜಾಗವನ್ನು ಖರೀದಿಸಲಾಯಿತು. ಸಂನ್ಯಾಸಿಗಳೆಲ್ಲರೂ ಶಾರದಾದೇವಿಯವರನ್ನು ಅಲ್ಲಿಗೆ ಬರಮಾಡಿಕೊಂಡು ಭಕ್ತಿ-ಗೌರವಗಳಿಂದ ಪಾದ ತೊಳೆದರು. ನಂತರ ರಾಮಕೃಷ್ಣರ ಪೂಜೆಯನ್ನು ನೆರವೇರಿಸಿದರು. ಅಲ್ಲಿನ ಜೋಪಡಿಯಲ್ಲಿದ್ದ ಮಾರ್ಗರೇಟ್ ನೋಬೆಲ್ (ಸೋದರಿ ನಿವೇದಿತ) ಬಂದು ನಮಸ್ಕರಿಸಿ ಶಾರದಾದೇವಿಯವರೊಂದಿಗೆ ಸೇರಿಕೊಂಡರು. 1901ನೇ ಇಸವಿಯಲ್ಲಿ ಬೇಲೂರು ಮಠದಲ್ಲಿ ನವರಾತ್ರಿಯ ಶ್ರೀದುರ್ಗಾಪೂಜೆ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದ ಸ್ವಾಮಿ ವಿವೇಕಾನಂದರು, ಈ ಪೂಜಾಸಂಕಲ್ಪವನ್ನು ನೆರವೇರಿಸಿಕೊಡುವಂತೆ ಶಾರದಾದೇವಿಯವರಲ್ಲಿ ವಿನಂತಿಸಿದರು. ಕೆಲದಿನಗಳ ನಂತರ ಜಯರಾಂಬಾಟಿಗೆ ಬಂದ ಶಾರದಾದೇವಿ, ಸೋದರರಿಗೆ ಆಸ್ತಿಯನ್ನು ಪಾಲು ಮಾಡಿಕೊಡುವ ವ್ಯವಸ್ಥೆ ಮಾಡಿದರು. ಕಲ್ಕತ್ತೆಗೆ ಮರಳಿ ಬಂದಾಗ ಶಾರದಾನಂದರು ಹೊಸದಾಗಿ ಕಟ್ಟಿಸಿದ್ದ ‘ಉದ್ಬೋಧನ‘ದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯಾಯಿತು.

ಪ್ರವಾಸ-ನಿರ್ಯಾಣ: ದಕ್ಷಿಣಭಾರತದ ತೀರ್ಥಯಾತ್ರೆಗೆ ಹೊರಟ ಶ್ರೀಮಾತೆಯವರು, ಕೊಥಾರಿನಲ್ಲಿ ಸರಸ್ವತಿಪೂಜೆ ಮಾಡಿ ಹಲವರಿಗೆ ಮಂತ್ರದೀಕ್ಷೆ ನೀಡಿದರು. ಕ್ರೈಸ್ತಮತಕ್ಕೆ ಸೇರಿಕೊಂಡಿದ್ದ ದೇವೇಂದ್ರನಾಥ ಮುಖರ್ಜಿ ಹಿಂದೂಧರ್ಮಕ್ಕೆ ಮರಳಲು ಅಪೇಕ್ಷಿಸಿದ್ದ ವಿಷಯ ಅವರಿಗೆ ತಿಳಿದು, ‘ಸರಸ್ವತಿ ಪೂಜೆಯ ಮುನ್ನಾದಿನ ರಾಧೇಶ್ಯಾಮನ ಮುಂದೆ ಪ್ರಾಯಶ್ಚಿತ್ತ ಮಾಡಿಕೊಂಡ ಬಳಿಕ ಯಜ್ಞೋಪವೀತ ಪಡೆದು ಗಾಯತ್ರಿಮಂತ್ರ ಜಪಿಸಲಿ. ಹೀಗೆ ಮಾಡಿದರೆ ಸ್ವಮತದ ನೆಲೆಯಲ್ಲಿ ನಿಂತಂತೆ ಆಗುತ್ತದೆ‘ ಎಂದರು. ಆತನಿಗೆ ಮಂತ್ರದೀಕ್ಷೆ ಕೊಟ್ಟು ಬಳುವಳಿಯಾಗಿ ಹೊಸಬಟ್ಟೆ ನೀಡಿದರು. ನಂತರ ರೈಲಿನಲ್ಲಿ ಬರ್ಹಾಂಪುರಕ್ಕೆ ಬಂದು, ವಿಶಾಖಪಟ್ಟಣ ದಾಟಿ ಮದರಾಸಿಗೆ ಬಂದರು. ಶ್ರೀಮಾತೆಯವರ ಸ್ವಾಗತಕ್ಕೆ ಸ್ವಾಮಿ ರಾಮಕೃಷ್ಣಾನಂದರೇ ಬಂದಿದ್ದರು. ನಂತರ ಮಧುರೈ ಮೀನಾಕ್ಷಿಯ ದರ್ಶನ ಮಾಡಿ, ಅಲ್ಲಿಂದ ರಾಮೇಶ್ವರಕ್ಕೆ ಬಂದು ಅಭಿಷೇಕ ಮಾಡಿಸಿದರು. ತರುವಾಯ ಧನುಷ್ಕೋಟಿಗೆ ಬಂದು-ಮರಳಿ ಮದರಾಸಿನಿಂದ 1911 ಮಾರ್ಚ್ 24ರಂದು ಬೆಂಗಳೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ಬಂದಾಗ ಭಕ್ತು್ಯತ್ಸಾಹಪೂರ್ಣ ಸ್ವಾಗತವೇ ದೊರಕಿತು. ಅಲ್ಲಿ ಹಲವರಿಗೆ ಮಂತ್ರದೀಕ್ಷೆ ನೀಡಿದ ಶ್ರೀಮಾತೆ, ಮೂರ್ನಾಲ್ಕು ದಿನಗಳ ನಂತರ ಕಲ್ಕತ್ತೆಗೆ ಹಿಂದಿರುಗಿದರು. ಈ ನಡುವೆ ರಾಮಕೃಷ್ಣರ ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತ, ಅಪೇಕ್ಷಿತರಿಗೆ ಮಂತ್ರದೀಕ್ಷೆ ಕೊಡುತ್ತ ಕಲ್ಕತ್ತ, ಜಯರಾಂಬಾಟಿ, ಕಾಮಾರಪುಕುರಗಳಲ್ಲಿ ಓಡಾಡಿಕೊಂಡು ಇರುತ್ತಿದ್ದರು. 1919ರ ಡಿಸೆಂಬರ್. ಆಗ ಶ್ರೀಮಾತೆಯವರಿಗೆ 66 ವರ್ಷ. ಆ ತಿಂಗಳ 13ರಂದು ಜನ್ಮದಿನ ಆಚರಿಸಲು ಎಲ್ಲೆಡೆಯಿಂದ ಬಂದ ಜನ ಸೇರಿದ್ದರು. ತ್ಯಾಗಿಪುತ್ರ ಸ್ವಾಮಿ ಶಾರದಾನಂದರು ಕಳುಹಿಸಿದ್ದ ಸೀರೆ ಉಟ್ಟುಕೊಂಡ ಶ್ರೀಮಾತೆ, ರಾಮಕೃಷ್ಣರ ಪೂಜೆಯನ್ನು ನೆರವೇರಿಸಿದರು.

ಶ್ರೀಮಾತೆಯವರ ಆರೋಗ್ಯ ಕೆಲ ದಿನಗಳಿಂದ ಚೆನ್ನಾಗಿರಲಿಲ್ಲ. ಉತ್ಸವದ ಆಯಾಸವೂ ಸೇರಿ ಜ್ವರ ಮರುಕಳಿಸಿತು. ಈ ವಿಷಯ ಶಾರದಾನಂದರಿಗೆ ತಿಳಿದು ಕಲ್ಕತ್ತೆಗೆ ಬರಲು ಕೋರಿದರು. 1912ರ ಫೆ. 24ರಂದು ಕಲ್ಕತ್ತೆಗೆ ತೆರಳಿ, 27ರಂದು ‘ಉದ್ಬೋಧನ’ಕ್ಕೆ ತಲುಪಿದರು. ಹೋಮಿಯೋಪಥಿ ವೈದ್ಯರಿಂದ ಚಿಕಿತ್ಸೆ ನಡೆಯಿತು. ಜ್ವರ ಎರಡೆರಡು ದಿನಕ್ಕೆ ಮರುಕಳಿಸಲಾರಂಭಿಸಿತು. ಒಂದೂವರೆ ತಿಂಗಳು ಚಿಕಿತ್ಸೆ ನಡೆದರೂ ಸುಧಾರಣೆ ಕಾಣಲಿಲ್ಲ. ಅವರಿಗೆ ಕಪ್ಪುಜ್ವರ (ಕಾಲಾ ಅಜರ್) ಬಂದಿರುವುದು ತರುವಾಯದಲ್ಲಿ ಗೊತ್ತಾಯಿತು. ಶ್ರೀಮಾತೆಯ ಮನಃಸ್ಥಿತಿ ಕ್ರಮೇಣ ಬದಲಾಗತೊಡಗಿತು, ಯಾರ ಸಹವಾಸವೂ ಬೇಕೆನ್ನಿಸುತ್ತಿರಲಿಲ್ಲ. ಕಾಯಿಲೆ ಉಲ್ಬಣಿಸಿ ಕೈಕಾಲು ಊದಿದವು, ಹಾಸಿಗೆಯಿಂದ ಏಳಲೂ ಆಗದಾಯಿತು. ಮಾತು ಕಡಿಮೆಯಾಯಿತು. ಅಂದು 1920ರ ಜುಲೈ 21. ರಾತ್ರಿ ಒಂದೂವರೆ ಗಂಟೆಗೆ ಶ್ರೀಮಾತೆಯವರು ನಾಲ್ಕಾರುಬಾರಿ ದೀರ್ಘಶ್ವಾಸ ಬಿಟ್ಟು ಮಹಾಸಮಾಧಿಯಲ್ಲಿ ಮಗ್ನರಾದರು. ಕಾಯಿಲೆಯ ಚಿಹ್ನೆಗಳು ಮರೆಯಾದುವು. ಮುಖಮಂಡಲ ಜ್ಯೋತಿರ್ಮಯವಾಯಿತು. ನಿರ್ಯಾಣದ ಸುದ್ದಿ ಹರಡಿತು. ಬೇಲೂರು ಮಠದ ಸಾಧುಗಳೆಲ್ಲ ಉದ್ಬೋಧನಕ್ಕೆ ಧಾವಿಸಿದರು. ಮರುದಿನ ಬೆಳಗ್ಗೆ ಕಳೇಬರವನ್ನು ಶ್ರೀಗಂಧ-ಪುಷ್ಪಗಳಿಂದ ಅಲಂಕರಿಸಿ ಬೇಲೂರು ಮಠದ ಗಂಗಾತೀರಕ್ಕೆ ತರಲಾಯಿತು. ಕಳೇಬರಕ್ಕೆ ಸ್ವಾಮಿ ಶಾರದಾನಂದರು ಅಗ್ನಿಸ್ಪರ್ಶ ಮಾಡಿದರು. ಚಿತಾಭಸ್ಮವನ್ನು ಬೇಲೂರು ಮಠದಲ್ಲಿ ಇರಿಸಲಾಯಿತು.

ಶಾರದಾದೇವಿಯವರು ರಾಮಕೃಷ್ಣರಂತೆ ಸಂತರಾಗೇ ಬದುಕಿದರು, ಸರಳತೆಗೆ ಪ್ರಾಧಾನ್ಯ ನೀಡಿದರು. ‘ಜಗತ್ತಿನಲ್ಲಿ ಪರಕೀಯರೆಂಬುವರು ಯಾರೂ ಇಲ್ಲ; ಇಡೀ ಜಗತ್ತೆ ನನ್ನದು’ -ಹೀಗೆಂದು ಹೇಳುತ್ತ ಉದಾತ್ತ ಆಧ್ಯಾತ್ಮಿಕ ಬದುಕನ್ನು ನಡೆಸಿದರು. ಶ್ರೀಮಾತೆ ಮಹಾಸಮಾಧಿಗೊಂಡು ಇಲ್ಲಿಗೆ 97 ವರ್ಷಗಳು ಕಳೆದಿವೆ. ಶ್ರೀಮಾತೆ ಸರಳತೆಯಿಂದ ದಿವ್ಯತೆಯೆಡೆಗೆ ನಡೆದ ಅಪೂರ್ವ ಭವತಾರಿಣಿ!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

 

Leave a Reply

Your email address will not be published. Required fields are marked *

Back To Top