Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಯಾರು ಹೇಳಿದ್ದು ಕರ್ಣ ಸತ್ತಿದ್ದಾನೆಂದು?

Sunday, 22.10.2017, 3:04 AM       No Comments

| ಎಚ್.ಡುಂಡಿರಾಜ್

ಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೈಗೊಳ್ಳುವ ಜನಪ್ರಿಯ ಕಾರ್ಯಕ್ರಮಗಳಲ್ಲಿ ‘ಅಕ್ರಮ ಸಕ್ರಮ‘ವೂ ಒಂದು. ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುವವರಿಂದ, ಮನೆ ಕಟ್ಟಿಸಿಕೊಂಡವರಿಂದ ಒಂದಷ್ಟು ತೆರಿಗೆ, ದಂಡ ಕಟ್ಟಿಸಿಕೊಂಡು ಆ ಭೂಮಿಯನ್ನು ಅವರ ಹೆಸರಿಗೆ ವರ್ಗಾಯಿಸುವುದೇ ‘ಅಕ್ರಮ ಸಕ್ರಮ‘ ಯೋಜನೆ. ಇದನ್ನು ಆರಂಭಿಸಿದ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎನ್ನುವ ವಿಷಯದಲ್ಲಿ ರಾಜಕೀಯ ಪಕ್ಷಗಳು ಪೈಪೋಟಿ ನಡೆಸುತ್ತವೆ. ಆದರೆ ನನ್ನ ಪ್ರಕಾರ ಅಕ್ರಮ ಸಕ್ರಮ ಯೋಜನೆ ಇಂದು ನಿನ್ನೆಯದಲ್ಲ. ಅದು ದ್ವಾಪರ ಯುಗದಲ್ಲೇ ಇತ್ತು ಅನ್ನುವುದಕ್ಕೆ ಉದಾಹರಣೆ ಈ ಹನಿಗವನ:

ಮದುವೆಯಾಗದ ಹುಡುಗಿ

ಸೂರ್ಯನಿಂದ ಬಸಿರಾಗಿ

ಮುದ್ದಾದ ಮಗುವನ್ನು ಹೆತ್ತು

ಅಪವಾದಕ್ಕೆ ಹೆದರಿ

ಗಂಗೆಗೆ ಅರ್ಪಿಸಿದಳು

ಅಕ್ರಮ ಸಕ್ರಮವಾಯಿತು!

ಕನ್ಯೆಯಾಗಿದ್ದ ಕುಂತಿಗೆ ಸೂರ್ಯನ ಮೂಲಕ ಜನಿಸಿದ ಮಗು ಕರ್ಣ, ಲೋಕದ ದೃಷ್ಟಿಯಲ್ಲಿ ಅಕ್ರಮ ಸಂತಾನ. ಆ ಮಗುವನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಗಂಗಾ ನದಿಯಲ್ಲಿ ತೇಲಿಬಿಡುವ ಮೂಲಕ ಅವಳೇನೋ ತನ್ನ ಅಕ್ರಮ ಚಟುವಟಿಕೆಯನ್ನು ಸಕ್ರಮಗೊಳಿಸಿಕೊಂಡಳು. ಆದರೆ ಇದರಿಂದಾಗಿ ಆ ಕರ್ಣ ಪಾಪ ಬದುಕಿನುದ್ದಕ್ಕೂ ಅನೇಕ ಕಷ್ಟ, ನಷ್ಟಗಳನ್ನು ಎದುರಿಸಬೇಕಾಯಿತು. ತನ್ನದಲ್ಲದ ತಪ್ಪಿಗೆ ನಿಂದನೆ, ಅವಮಾನ ಅನುಭವಿಸುವಂತಾದದ್ದು ಆತನ ದುರ್ದೈವವೇ ಸರಿ. ಕ್ಷತ್ರಿಯ ಮಾತೆಯ ಉದರದಲ್ಲಿ ಜನಿಸಿದ್ದರೂ ಕರ್ಣ ಸೂತಪುತ್ರ ಅನ್ನಿಸಿಕೊಂಡ. ದ್ರೋಣರ ಶಿಷ್ಯನಾಗುವ ಮತ್ತು ಸ್ಪರ್ಧೆಯಲ್ಲಿ ಅರ್ಜುನನೊಡನೆ ಹೋರಾಡಿ ಗೆಲ್ಲುವ ಅವಕಾಶದಿಂದ ವಂಚಿತನಾದ.

ಜಾತಿಯ ಕಾರಣದಿಂದಾಗಿ ತನಗೆ ಪರಶುರಾಮರ ಯುನಿವರ್ಸಿಟಿಯಲ್ಲಿ ಸೀಟು ಸಿಗುವುದಿಲ್ಲ ಎನ್ನುವುದು ಕರ್ಣನಿಗೆ ಗೊತ್ತಿತ್ತು. ಅದಕ್ಕಾಗಿ ಆತ ಒಂದು ಉಪಾಯ ಮಾಡಿದ. ಪ್ರವೇಶ ಪರೀಕ್ಷೆಗೆ ಹೋಗುವಾಗ ಬ್ರಾಹ್ಮಣನ ವೇಷ ಹಾಕಿಕೊಂಡು ಸೀಟು ಗಿಟ್ಟಿಸಿಕೊಂಡ. ಶ್ರದ್ಧೆಯಿಂದ ಅಭ್ಯಾಸ ಮಾಡಿ, ಉತ್ತಮ ನಡತೆಯಿಂದ ಗುರುಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರನಾದ. ಬಿಲ್ಲು ವಿದ್ಯೆಯ ರಹಸ್ಯಗಳನ್ನು ಕಲಿತ. ಹಲವು ದಿವ್ಯಾಸ್ತ್ರಗಳನ್ನು ಸಂಪಾದಿಸಿದ. ಗುರು ಪರಶುರಾಮರೊಂದಿಗೆ ಕರ್ಣ ಎಂಥಾ ಆಪ್ತ ಸಂಬಂಧ ಹೊಂದಿದ್ದನೆಂದರೆ, ಗುರುಗಳು ನಿದ್ರಿಸುವುದಕ್ಕೆ ಬೇರೆಲ್ಲ ಶಿಷ್ಯರನ್ನು ಬಿಟ್ಟು ಕರ್ಣನ ತೊಡೆಯನ್ನೆ ತಲೆದಿಂಬು ಮಾಡಿಕೊಂಡರು. ಈಗಲೂ ಕಾಲೇಜುಗಳಲ್ಲಿ ಗುರು ಶಿಷ್ಯರ ನಡುವೆ ಒಳ್ಳೆಯ ಸಂಬಂಧ ಇರುತ್ತದೆ. ನಿದ್ರಿಸುವ ದೃಶ್ಯವೂ ಸರ್ವೆಸಾಮಾನ್ಯ. ಆದರೆ ಒಂದು ವ್ಯತ್ಯಾಸವಿದೆ. ಅದು ಏನೆಂಬುದನ್ನು ಈ ಹನಿಗವನ ಹೇಳುತ್ತದೆ:

ಮಹಾಭಾರತದಲ್ಲಿ ಶಿಷ್ಯ

ಕರ್ಣನ ತೊಡೆಯ ಮೇಲೆ

ಗುರುಗಳು ಮಲಗಿದ್ದರು.

ಕಾಲೇಜುಗಳಲ್ಲಿ ಈಗ

ಗುರುಗಳು ಪಾಠ ಮಾಡುವಾಗ

ಶಿಷ್ಯರು ನಿದ್ರಿಸುವರು!

ಇರಲಿ ಬಿಡಿ. ಮಹಾಭಾರತದ ಕರ್ಣನ ಕಥೆಯನ್ನು ಮುಂದುವರಿಸೋಣ. ಕರ್ಣನ ತೊಡೆಯ ಮೇಲೆ ಪರಶುರಾಮರು ಮಲಗಿ ಗೊರಕೆ ಹೊಡೆಯುತ್ತಿದ್ದಾಗ ದುಂಬಿಯೊಂದು ಕರ್ಣನನ್ನು ಕಚ್ಚುತ್ತದೆ. ವಿಪರೀತ ನೋವಾದರೂ ಗುರುಗಳಿಗೆ ಎಚ್ಚರವಾಗಬಾರದು ಎಂಬ ಕಾರಣಕ್ಕೆ ಆತ ತುಟಿಕಚ್ಚಿ ನೋವು ಸಹಿಸಿಕೊಳ್ಳುತ್ತಾನೆ. ಆದರೆ ಕರ್ಣನ ತೊಡೆಯಿಂದ ಹರಿದ ರಕ್ತ ಪರಶುರಾಮರ ಮೈಗೆ ತಾಗಿ ಅವರಿಗೆ ಎಚ್ಚರವಾಗುತ್ತದೆ. ಈಗ ಪುರಾಣದಿಂದ ಪುನಃ ವರ್ತಮಾನಕ್ಕೆ ಬರೋಣ. ಒಂದು ವೇಳೆ ಕರ್ಣನ ಜಾಗದಲ್ಲಿ ಇಂದಿನ ಕಾಲೇಜು ವಿದ್ಯಾರ್ಥಿಗಳಿದ್ದಿದ್ದರೆ ಏನು ಮಾಡುತ್ತಿದ್ದರು? ನನ್ನನ್ನು ಕೇಳಿದರೆ ಅವರೂ ಗುರುಗಳಿಗೆ ನಿದ್ರಾಭಂಗವಾಗದಿರಲಿ ಎಂದು ನೋವು ಸಹಿಸಿಕೊಳ್ಳುತ್ತಿದ್ದರು ಅನ್ನುತ್ತೇನೆ. ಗುರುಗಳ ಬಗ್ಗೆ ಅಷ್ಟೊಂದು ಕಾಳಜಿ ಏಕೆ ಎನ್ನುವಿರಾ? ಇದಕ್ಕೆ ಕಾರಣ ಇಗೊಳ್ಳಿ ಇಲ್ಲಿದೆ.

ದುಂಬಿ ಕೊರೆಯುತ್ತಿದ್ದರೂ

ರಕ್ತ ಸುರಿಯುತ್ತಿದ್ದರೂ

ಶಿಷ್ಯ ಸುಮ್ಮನಿದ್ದ ಏಕೆ?

ಗುರುಗಳು ಎದ್ದರೆ

ಪಾಠ ಮಾಡುವರು

ದುಂಬಿಯ ಕೊರೆತವೇ ಓಕೆ!

ಕರ್ಣನದ್ದು ಎಂಥಾ ದುರದೃಷ್ಟ ನೋಡಿ. ಗುರುಗಳ ನಿದ್ರೆ ಹಾಳಾಗಬಾರದೆಂದು ದುಂಬಿಯ ಕಡಿತದ ನೋವು ನುಂಗಿಕೊಂಡದ್ದಕ್ಕೆ ಅವನಿಗೆ ಭಾರೀ ಪ್ರಶಂಸೆ ಸಿಗಬೇಕಾಗಿತ್ತು. ಆದರೆ ಹಾಗಾಗುವುದಿಲ್ಲ. ಇಷ್ಟೊಂದು ನೋವು ಸಹಿಸಿದ್ದಾನೆ ಎಂದರೆ ಈತ ಖಂಡಿತಾ ಬ್ರಾಹ್ಮಣನಲ್ಲ ಎಂಬುದು ಪರಶುರಾಮರಿಗೆ ಖಾತ್ರಿಯಾಗುತ್ತದೆ. ಕೋಪಾವಿಷ್ಟರಾದ ಅವರು ‘ಸುಳ್ಳು ಹೇಳಿದ ತಪ್ಪಿಗೆ ನನ್ನಿಂದ ಕಲಿತ ವಿದ್ಯೆ ನಿನಗೆ ಅತ್ಯಂತ ಅಗತ್ಯವಿರುವಾಗ ನೆನಪಾಗದಿರಲಿ‘ ಎಂದು ಶಾಪ ಕೊಡುತ್ತಾರೆ. ಪರಶುರಾಮರು ಅಂದು ಕರ್ಣನಿಗೆ ಕೊಟ್ಟ ಶಾಪ ಅದೆಷ್ಟು ಶಕ್ತಿಶಾಲಿ ಎಂದರೆ ಈ ಕಲಿಯುಗದಲ್ಲೂ ಅದು ಕೆಲವು ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಅಗತ್ಯವಿರುವಾಗ ಕಲಿತದ್ದೆಲ್ಲ

ಮರೆತು ಸೋತಂತೆ ಆ ಕರ್ಣ

ಯಾರ ಶಾಪವೋ ಪರೀಕ್ಷೆಯಲ್ಲಿ

ನೆನಪೇ ಆಗದು ವ್ಯಾಕರ್ಣ!

ಕರ್ಣನ ದುರದೃಷ್ಟದ ಸರಣಿ ಇಲ್ಲಿಗೆ ಮುಗಿಯುವುದಿಲ್ಲ. ಹೆತ್ತ ತಾಯಿ ಕುಂತಿಯೂ ಅವನ ಪಾಲಿಗೆ ಶಾಪವಾಗುತ್ತಾಳೆ. ಹಸುಗೂಸಾಗಿದ್ದ ಕರ್ಣನನ್ನು ಗಂಗೆಯಲ್ಲಿ ತೇಲಿ ಬಿಡುವಾಗ ನೆನಪಾಗದ ಕರುಳ ಸಂಬಂಧವನ್ನು ಆಕೆ ಪಾಂಡವರ ಪರವಾಗಿ ಮಾತನಾಡಲು ಬರುವಾಗ ಬಳಸಿಕೊಳ್ಳುತ್ತಾಳೆ. ಹೆತ್ತಬ್ಬೆಯ ಬೇಡಿಕೆಗೆ ಇಲ್ಲವೆನ್ನಲಾಗದ ಕರ್ಣ ಒಮ್ಮೆ ತೊಟ್ಟ ಬಾಣ ಇನ್ನೊಮ್ಮೆ ತೊಡಲಾರೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಈ ಸಂದರ್ಭದಲ್ಲಿ ನನಗೆ ಅನ್ನಿಸಿದ್ದು ಹೀಗೆ:

ಅಂದು ಕರ್ಣ ಹೇಳಿದ್ದು-

ಒಮ್ಮೆ ತೊಟ್ಟ ಬಾಣ

ಇನ್ನೊಮ್ಮೆ ತೊಡಲಾರೆ.

ಇಂದಿನ ಮಹಿಳೆಯರು

ಹೇಳುವುದೂ ಅದೇ-

ಒಮ್ಮೆ ಉಟ್ಟ ಸೀರೆ

ಇನ್ನೊಮ್ಮೆ ಉಡಲಾರೆ!

ಈ ಸಮಸ್ಯೆಯಿಂದಾಗಿ ಹೆಂಗಸರು ಯಾವುದಾದರೂ ಸಮಾರಂಭಕ್ಕೆ ಹೊರಟಾಗ ಉಡಲು ಸೀರೆಯೇ ಇಲ್ಲ ಎಂದು ದೂರುತ್ತಾರೆ. ಮನೆಗೆ ಬಂದ ಮೇಲೆ ಸೀರೆ ಇಡಲು ಬೀರುವಿನಲ್ಲಿ ಜಾಗವಿಲ್ಲ ಎಂದು ಗೊಣಗುತ್ತಾರೆ.

ಕುಂತಿ ಮಾತ್ರವಲ್ಲ, ಸಾಕ್ಷಾತ್ ದೇವೇಂದ್ರನೂ ಕರ್ಣನ ಹತ್ತಿರ ಬೇಡಲು ಬರುತ್ತಾನೆ. ತನ್ನ ಬಳಿಗೆ ಬ್ರಾಹ್ಮಣನ ವೇಷದಲ್ಲಿ ಬಂದು ಕವಚ ಕುಂಡಲವನ್ನು ದಾನ ಮಾಡುವಂತೆ ಕೇಳುತ್ತಿರುವವನು ಇಂದ್ರ ಎಂದು ಗೊತ್ತಾದರೂ ಕರ್ಣ ಪ್ರಾಣಾಪಾಯವನ್ನು ಲೆಕ್ಕಿಸದೆ ದಾನ ಮಾಡುತ್ತಾನೆ. ಜೀವಕ್ಕಿಂತ ದಾನವೇ ಪ್ರಧಾನ ಎಂಬುದು ಕರ್ಣನ ಧೋರಣೆ. ಆದ್ದರಿಂದಲೇ ಆತ ದಾನಶೂರ ಅನಿಸಿಕೊಂಡಿದ್ದಾನೆ. ಈ ವಿಷಯದಲ್ಲಿ ನಮ್ಮ ದೇಶದ ಜನ ಸಾಮಾನ್ಯರು ಕರ್ಣನಿಗೆ ಸರಿಸಾಟಿ ಅನ್ನಬಹುದು. ಅದು ಹೇಗೆಂಬುದನ್ನು ತಿಳಿಯಲು ಈ ಹನಿಗವನವನ್ನು ಓದುವಂಥವರಾಗಿ:

ಮಹಾಭಾರತದ ರಾಧೇಯ

ದಾನಶೂರ

ಇಂದಿನ ಬಡ ಭಾರತೀಯ

ಮತ-ದಾನಶೂರ!

ಒಮ್ಮೆ ಮತ ನೀಡಿ ಗೆಲ್ಲಿಸಿದರೆ, ನಮ್ಮ ನಾಯಕರು ಮತ್ತೆ ಐದು ವರ್ಷ ಅತ್ತ ಸುಳಿಯುವುದಿಲ್ಲವೆಂದು ಗೊತ್ತಿದ್ದರೂ ನಿಷ್ಠೆಯಿಂದ ಮತ ದಾನ ಮಾಡುವವರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಕರ್ಣನಿಗೆ ಹುಟ್ಟಿದ ಕೂಡಲೇ ಹೆತ್ತ ತಾಯಿ ಕೈ ಕೊಟ್ಟಳು. ವಿದ್ಯಾಭ್ಯಾಸಕ್ಕೆ ಹೋದಾಗಲೂ ಅದೃಷ್ಟ ಕೈ ಕೊಟ್ಟಿತು. ಅರ್ಜುನನ ಜೊತೆಗಿನ ನಿರ್ಣಾಯಕ ಯುದ್ಧದ ಸಂದರ್ಭದಲ್ಲಿ ಸಾರಥಿ ಶಲ್ಯ ಕೈ ಕೊಟ್ಟ. ರಥವೂ ಕೈ ಕೊಟ್ಟಿತು. ಅಂದ ಹಾಗೆ ವೃತ್ತಿಯಿಂದ ಬ್ಯಾಂಕರನಾಗಿದ್ದ ನನಗೆ, ಪ್ರಸಿದ್ಧ ಉದ್ಯಮಿಯೊಬ್ಬರು ಹಲವು ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಪಡೆದು ಅದನ್ನು ತೀರಿಸದೆ ವಿದೇಶಕ್ಕೆ ಹಾರಿದಾಗ ಕರ್ಣನ ಸಾರಥಿ ನೆನಪಾಗಿ-

ಕರ್ಣನಿಗೆ ಕೈ ಕೊಟ್ಟ ಶಲ್ಯ

ಬ್ಯಾಂಕುಗಳಿಗೆ ಕೈ ಕೊಟ್ಟ ಮಲ್ಯ!

ಎಂದು ಎರಡು ಸಾಲಿನ ಚುಟುಕು ಬರೆದಿದ್ದೆ.

ಮಹಾಭಾರತದಲ್ಲಿ ಅಸಂಖ್ಯಾತ ಪಾತ್ರಗಳಿವೆ. ಅವುಗಳಲ್ಲಿ ನಮ್ಮನ್ನು ಅತ್ಯಂತ ಹೆಚ್ಚು ಕಾಡುವ ಪಾತ್ರವೆಂದರೆ ಕರ್ಣ ಅನ್ನಬಹುದು. ನಮ್ಮನ್ನಷ್ಟೇ ಅಲ್ಲ ಆದಿಕವಿ ಪಂಪನನ್ನೂ ಕರ್ಣ ಗಾಢವಾಗಿ ಕಾಡಿದ್ದಾನೆ. ಆದ್ದರಿಂದಲೇ ಅವನು ‘ಮಹಾಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡಿ. ನೆನೆವುದಾದರೆ ಒಂದೇ ಚಿತ್ತದಲ್ಲಿ ಕರ್ಣನನ್ನು ನೆನೆಯಿರಿ‘ ಅಂದದ್ದು. ‘ಕರ್ಣರಸಾಯನಮಲ್ತೆ ಭಾರತಂ‘ ಎಂದು ಪಂಪ ಪನ್ ಮಾಡಿದ್ದೂ ಇದೇ ಕಾರಣಕ್ಕೆ. ಎಲ್ಲರ ಮುಖದಲ್ಲೂ ಕಣ್ಣು ಮುಂದೆ ಇರುತ್ತದೆ ಮತ್ತು ಕಿವಿ ಅಥವಾ ಕರ್ಣ ಹಿಂದೆ ಇರುತ್ತದೆ. ಆದರೆ ಪಂಪ ಭಾರತ ಓದಿದರೆ ಕರ್ಣ ಕಣ್ಣಮುಂದೆ ಬರುತ್ತಾನೆ.

ತಾಳಮದ್ದಲೆಯ ಅರ್ಥಧಾರಿಗಳಿಗೆ ಮತ್ತು ಯಕ್ಷಗಾನದಲ್ಲಿ ವೇಷ ಹಾಕುವವರಿಗೆ ಕೂಡಾ ಕರ್ಣ ಅತ್ಯಂತ ಪ್ರಿಯವಾದ ಪಾತ್ರ. ಈಚೆಗೆ ನಮ್ಮನ್ನು ಅಗಲಿದ ಯಕ್ಷಲೋಕದ ಹೆಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರುವವರೆಗೂ ಬಣ್ಣ ಹಚ್ಚಿ ಕುಣಿಯುವುದನ್ನು ಬಿಟ್ಟಿರಲಿಲ್ಲ. ವಿದ್ಯುನ್ಮಾಲಿ, ಶಂತನು ಪಾತ್ರ ಮಾಡಿದ್ದ ಅವರು ಮುಂದಿನ ಆಟದಲ್ಲಿ ಕರ್ಣನ ಪಾತ್ರ ಮಾಡುತ್ತೇನೆ ಅಂದಿದ್ದರಂತೆ. ಆದರೆ ಇಲ್ಲೂ ಕರ್ಣನಿಗೆ ದುರದೃಷ್ಟ ಕಾಡಿತು! ಚಿಟ್ಟಾಣಿಯವರ ಕೊನೆಯ ವೇಷ ಎಂದು ಇತಿಹಾಸದಲ್ಲಿ ದಾಖಲಾಗುವ ಅವಕಾಶ ಕರ್ಣನಿಗೆ ಸಿಗಲಿಲ್ಲ. ಅಂತ್ಯಸಂಸ್ಕಾರಕ್ಕೆ ಮುನ್ನ ಚಿಟ್ಟಾಣಿಯವರ ಪಾರ್ಥಿವ ಶರೀರಕ್ಕೆ ಕರ್ಣನ ಮುಖ ವರ್ಣಿಕೆ ಬರೆದದ್ದು ಆತನಿಗೆ ಸಂದ ಸಮಾಧಾನಕರ ಬಹುಮಾನ ಅನ್ನಬಹುದು.

ಮುಗಿಸುವ ಮುನ್ನ: ಮಹಾಭಾರತದ ಕಥೆಯ ಪ್ರಕಾರ ಯುದ್ಧದಲ್ಲಿ ಕರ್ಣ ಅರ್ಜುನನಿಂದ ಹತನಾಗುತ್ತಾನೆ. ಆದರೆ ನನ್ನ ಮನಸ್ಸು ಕರ್ಣ ಸತ್ತಿಲ್ಲ ಅನ್ನುತ್ತಿದೆ. ಯಾಕೆ ಗೊತ್ತೇ?

ಯಾರು ಹೇಳಿದ್ದು

ಕರ್ಣ ಸತ್ತಿದ್ದಾನೆಂದು?

ಹುಟ್ಟುತ್ತಲೇ ಇದ್ದಾನೆ ಮತ್ತೆ ಮತ್ತೆ

ಪತ್ರಿಕೆಯಲ್ಲಿ ಇತ್ತೀಚೆಗೆ

ಬಂದಿತ್ತು ಸುದ್ದಿ

ತೊಟ್ಟಿಯಲ್ಲಿ ಹಸುಗೂಸು ಪತ್ತೆ!

(ಲೇಖಕರು ಕವಿ ಹಾಗೂ ನಾಟಕಕಾರರು, ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top