Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಯಶಸ್ಸಿನ ಸಾಮೀಪ್ಯ..!

Saturday, 16.12.2017, 3:02 AM       No Comments

| ವಿ.ಪಿ. ಹೆಗಡೆ (ವೈಶಾಲಿ)

ದಾರ್ಶನಿಕರೊಬ್ಬರು ಯಶಸ್ಸನ್ನು ನಮ್ಮ ನಿತ್ಯದ ಆಹಾರಕ್ಕೆ ಹೋಲಿಸಿದ್ದಾರೆ. ಯಶಸ್ಸಿನ ಕುರಿತು ಅವರು ಪಾಠ ಮಾಡುತ್ತ ಶಿಷ್ಯನ ಬಾಯಿಗೆ ಅತಿ ಹತ್ತಿರದಲ್ಲಿ ವಸ್ತುವೊಂದನ್ನು ಹಿಡಿದು ‘ಇದರ ರುಚಿ ಹೇಳಬಲ್ಲೆಯಾ?’ ಎಂದು ಕೇಳಿದರು. ಆದರೆ ಅವನಿಗದು ಸಾಧ್ಯವಾಗಲಿಲ್ಲ. ಆ ವಸ್ತುವನ್ನು ತಿನ್ನಲು ಕೊಟ್ಟು ‘ಹೇಗಿದೆ ಹೇಳು’ ಅಂದರು. ‘ಆಹಾ! ತುಂಬ ಸ್ವಾದಿಷ್ಟವಾಗಿದೆ’ ಎಂದನಾತ. ಅದನ್ನು ತಿಂದು ಮುಗಿಸಿ ನುಂಗಿದ ಮೇಲೆ ‘ಈಗ ಆ ವಸ್ತು ಬಾಯಲ್ಲಿಲ್ಲವಲ್ಲ, ಅದೇ ರುಚಿ ಬಾಯಲ್ಲುಳಿಯಿತಾ?’ ಎಂದು ಅವರು ಕೇಳಿದಾಗ ‘ಇಲ್ಲ’ ಎಂಬುದು ಆತನ ಉತ್ತರವಾಗಿತ್ತು.

ಯಶಸ್ಸು ಕೂಡ ಹೀಗೆಯೇ; ನಾಲಿಗೆಯ ಮೇಲಿರುವ ಎರಡು ಕ್ಷಣಗಳ ಖುಷಿಯನ್ನೇ ಯಶಸ್ಸು ಅಂದುಕೊಂಡರೆ ಅದರ ನಿರಂತರತೆಗೆ ಪೂರ್ವತಯಾರಿ, ಶ್ರಮ, ಸಮಯ ಎಲ್ಲ ಎಷ್ಟೊಂದು ಬೇಕಲ್ಲವೇ! ಸಂಪೂರ್ಣ ಯಶಸ್ಸು ಅನ್ನೋದು ಬಹುಶಃ ಇಲ್ಲ, ಯಶಸ್ಸಿಗೊಂದು ನಿರ್ದಿಷ್ಟ ವ್ಯಾಖ್ಯೆ ಇಲ್ಲ. ಯಶಸ್ಸು ಹತ್ತಿರದಲ್ಲಿದೆ, ಕಾಣುತ್ತಿದೆ ಅನ್ನುವ ಹಂತವೇ ಎಲ್ಲಕ್ಕಿಂತ ಶ್ರೇಷ್ಠ ಕಾಲ ಎಂಬುದು ದಾರ್ಶನಿಕರ ಮಾತು.

ಹಣವನ್ನೇ ಯಶಸ್ಸು ಅಂದುಕೊಂಡವರ ಸಂಖ್ಯೆ ಸಾಕಷ್ಟಿದೆ. ಹಣವೇ ಎಲ್ಲವೂ ಅಲ್ಲ ಅನ್ನುವುದು ಯಾವುದೇ ಶ್ರೀಮಂತನನ್ನು ನೋಡಿದರೂ ತಿಳಿಯುವ ವಿಚಾರ. ಕಲೆ, ಸಾಹಿತ್ಯ, ರಾಜಕೀಯ ಇತ್ಯಾದಿ ಯಾವ ಕ್ಷೇತ್ರದಲ್ಲಿ ನೋಡಿದರೂ ಸಂಪೂರ್ಣ ಯಶಸ್ವಿ ಅನ್ನಿಸಿಕೊಂಡವರು ಸಿಗುವುದಿಲ್ಲ.

ಬಹು ಎತ್ತರದ ಹಿಮಾಲಯ ಏರುವ ಗುರಿಯೇ ಖುಷಿ. ಏರುವಾಗ ಎದುರಾಗುವ ಅಡೆತಡೆಗಳೇ ಮುಂದಿನ ಯಶಸ್ಸಿಗೆ ಇಂಧನ. ಇನ್ನೇನು ಕೆಲವೇ ಹೆಜ್ಜೆಗಳಿವೆ ಅನ್ನುವ ಹಂತ ಸಂತೋಷದ ಪರಮಾವಧಿ. ತುತ್ತತುದಿಗೆ ಕಾಲಿಟ್ಟ ಕ್ಷಣವೇ ‘ಮುಂದೇನು….?’ ಎಂಬ ಚಿಂತನೆ ಶುರುವಾಗುತ್ತದೆ. ಮುಗಿಯಿತಲ್ಲ, ಇನ್ನೇನಿದೆ? ಹೆಚ್ಚೆಂದರೆ ಆ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲವು ನಿಮಿಷಗಳನ್ನಷ್ಟೇ ಕಳೆಯಲು ಸಾಧ್ಯ. ಆ ಅನುಭವದ ಮೂಟೆಯೊಂದಿಗೆ ಇಳಿಯಲೇಬೇಕಲ್ಲ…..

ಡಾ. ಶಿವರಾಮ ಕಾರಂತರು ಅತ್ಯಂತ ಜನಪ್ರಿಯ, ಯಶಸ್ವಿ ಲೇಖಕರಲ್ಲೊಬ್ಬರು. ಅವರನ್ನೊಮ್ಮೆ ಸಂದರ್ಶನದಲ್ಲಿ ‘ಅತ್ಯಂತ ಯಶಸ್ವಿ ಅನ್ನಬಹುದಾದ ನಿಮ್ಮ ಕೃತಿ ಯಾವುದು?’ ಎಂದು ಕೇಳಲಾಯ್ತು. ಅದಕ್ಕವರು ತುಂಬ ಮಾರ್ವಿುಕವಾಗಿ ‘ಅದನ್ನಿನ್ನೂ ನಾನು ಬರೆಯಬೇಕಾಗಿದೆ’ ಎಂದುತ್ತರಿಸಿದರು. ಬಹುಶಃ ಇದು ಎಲ್ಲ ಪ್ರತಿಭಾನ್ವಿತರ ಪ್ರಾತಿನಿಧಿಕ ಅನಿಸಿಕೆಯೂ ಹೌದು.

ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಬೆಳಕಿನ ಬುಡ್ಡೆಯನ್ನು (ಬಲ್ಬ್) ಕಂಡುಹಿಡಿಯುವ ಮುನ್ನ ಅದೆಷ್ಟೋ ಕತ್ತಲಿನ ರಾತ್ರಿಗಳಲ್ಲಿ ಕೆಲಸಮಾಡಿ ಹತಾಶನಾಗಿದ್ದರೂ ವಿಶ್ವಾಸ ಬಿಡಲಿಲ್ಲ. ಸಾವಿರ ಪ್ರಯೋಗಗಳ ನಂತರವೇ ಬೆಳಕು ಕಂಡಿದ್ದು. ಆ ಹಂತವೇ ಅತ್ಯಂತ ಖುಷಿ ಕೊಟ್ಟಿದ್ದು ಎಂದು ಅವರು ಒಂದೆಡೆ ಬರೆದುಕೊಂಡಿದ್ದಾರೆ!

ಸ್ವರ್ಗಕ್ಕೆ ಮೂರೇ ಗೇಣು ಇರುವಾಗ ಇರುವ ಹಿಗ್ಗು ಅಲ್ಲಿಗೆ ತಲುಪಿದಾಗ ಕಮ್ಮಿಯಾಗಲು ತೊಡಗುತ್ತದೆ!

(ಲೇಖಕರು ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *

Back To Top