Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :

ಮೌಲ್ಯಮಾಪನದಲ್ಲಿ ತಪ್ಪಾದ್ರೆ ಕಪ್ಪುಪಟ್ಟಿಗೆ

Monday, 19.06.2017, 3:00 AM       No Comments

ಪಿಯುಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಬೇಕಾಬಿಟ್ಟಿಯಾಗಿ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರು ಶೀಘ್ರದಲ್ಲೇ ಕಪ್ಪುಪಟ್ಟಿಗೆ ಸೇರಲಿದ್ದಾರೆ!

ದ್ವಿತೀಯ ಪಿಯು ಮೌಲ್ಯಮಾಪನದಲ್ಲಿ ಅಜಾಗರೂಕತೆಯಿಂದ ಮೌಲ್ಯಮಾಪನ ಮಾಡಿ ಎಡವಟ್ಟಿಗೆ ಕಾರಣರಾದ ಮೌಲ್ಯಮಾಪಕರ ಪಟ್ಟಿ ರೂಪಿಸುತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ತೀರ್ವನಿಸಿದ್ದು, ಹೆಚ್ಚಿನ ತಪ್ಪು ಮಾಡಿರುವ ಮೌಲ್ಯಮಾಪಕರನ್ನು ಕಪ್ಪುಪಟ್ಟಿಗೆ ಸೇರಿಸಲು ನಿರ್ಧರಿಸಿದೆ. ಇದರೊಟ್ಟಿಗೆ ದಂಡ ಶುಲ್ಕ ವಿಧಿಸಿ ಬಡ್ತಿಯನ್ನು ತಡೆಹಿಡಿಯಲು ಮುಂದಾಗಿದೆ.

ಮರು ಮೌಲ್ಯಮಾಪನದ ವೇಳೆ ಉತ್ತರ ಪತ್ರಿಕೆಯಲ್ಲಿ 6ಕ್ಕಿಂತ ಹೆಚ್ಚಿನ ಅಂಕ ವ್ಯತ್ಯಾಸ ಕಂಡುಬಂದಿದ್ದರೆ ಅಂಥ ಮೌಲ್ಯಮಾಪಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ 2017ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕಾಗಿ 15 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1,414 ಉತ್ತರ ಪತ್ರಿಕೆಯಲ್ಲಿ, ಕಳೆದ ವರ್ಷ 1,816 ಉತ್ತರ ಪತ್ರಿಕೆಯಲ್ಲಿ ಅಂಕಗಳ ವ್ಯಾತ್ಯಾಸ ಉಂಟಾಗಿತ್ತು.

 

ಉತ್ತರ ಪತ್ರಿಕೆ ಹಣೆಬರಹ

  • ಮರುಮೌಲ್ಯಮಾಪನಕ್ಕೆ ಬಂದ ಅರ್ಜಿಗಳು- 15,195
  • ಮರುಮೌಲ್ಯಮಾಪನದ ನಂತರ ಬದಲಾವಣೆ ಕಾಣದ ಉತ್ತರ ಪತ್ರಿಕೆ- 12,143
  • 4ಕ್ಕಿಂತ ಹೆಚ್ಚಿನ ಅಂಕಗಳ ವ್ಯತ್ಯಾಸ-438
  • 4ಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸ-502
  • 6ಕ್ಕಿಂತ ಹೆಚ್ಚಿನ ಅಂಕಗಳ ವ್ಯತ್ಯಾಸ- 976
  • 6ಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸ- 263
  • ಅತಿ ಹೆಚ್ಚು ವ್ಯತ್ಯಾಸ ಬಂದ ಅಂಕಗಳು – 48
  • 26ಕ್ಕಿಂತ ಹೆಚ್ಚಿನ ಅಂಕ ವ್ಯತ್ಯಾಸದ ಉತ್ತರ ಪತ್ರಿಕೆ – 15
  • 20ರಿಂದ 24 ಅಂಕಗಳ ವ್ಯತ್ಯಾಸ- 17
  • 15ರಿಂದ 19 ಅಂಕಗಳ ವ್ಯತ್ಯಾಸ- 57
  • 10ರಿಂದ 14 ಅಂಕಗಳ ವ್ಯತ್ಯಾಸ- 202 ಉತ್ತರಪತ್ರಿಕೆಗಳು

 

ಚರ್ಚೆಗೆ ಗ್ರಾಸವಾದ ಸುತ್ತೋಲೆ

ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಅವರ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡವನ್ನು ಈ ಸೌಲಭ್ಯದಿಂದ ದೂರವಿಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜನಾಂಗವನ್ನು ನೇರವಾಗಿ ಕಡೆಗಣಿಸುತ್ತಿದೆ ಎಂಬ ಆರೋಪವೂ ಕೇಳತೊಡಗಿದೆ.

ಸಮಾಜ ಕಲ್ಯಾಣ ಇಲಾಖೆ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿ ಮೊತ್ತವನ್ನೂ ನಿಗದಿಪಡಿಸಿದೆ. ಇವರಿಗಿಂತ ಹೆಚ್ಚಿನ ಅಂಕ ಗಳಿಸಿದವರಿದ್ದರೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅಥವಾ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಪೋತ್ಸಾಹ ಧನ ಲಭ್ಯವಾಗುವುದಿಲ್ಲ.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ.60ರಿಂದ ಶೇ.74.99 ಹಾಗೂ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಎರಡು ಹಂತದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಶೇ.60 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 7 ಸಾವಿರ ರೂ. ಹಾಗೂ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 15 ಸಾವಿರ ರೂ. ಪ್ರೋತ್ಸಾಹ ಧನ ಸಿಗಲಿದೆ. ಇದಕ್ಕೆ ವಿದ್ಯಾರ್ಥಿಗಳು ಮಲ್ಲೇಶ್ವರದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯನ್ನು ಸಂರ್ಪಸಬಹುದಾಗಿದೆ. ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದವರಿಗೆ 20 ಸಾವಿರ ರೂ, ಪದವಿಗೆ 25 ಸಾವಿರ ರೂ, ಹಾಗೂ ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂಎಸ್ಸಿ, ಎಂ.ಕಾಂ, ಎಂಬಿಎ, ಎಂಸಿಎ, ಎಂಎಫ್​ಎ, ಕೃಷಿ, ಇಂಜಿನಿಯರಿಂಗ್, ವೈದ್ಯಕೀಯ, ಪಶುವೈದ್ಯಕೀಯ ಸೇರಿ ಇತರ ಕೋರ್ಸ್​ಗಳ ವಿದ್ಯಾರ್ಥಿಗಳಿಗೆ 35 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದ್ದು, ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಆಯಾ ಜಿಲ್ಲೆಯ ಜಂಟಿ- ಉಪ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂರ್ಪಸಬಹುದು. ಇನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 1 ರಿಂದ 5ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ನೀಡಲಿದ್ದು, ಇಂತಹ ವಿದ್ಯಾರ್ಥಿಗಳು ಆಯುಕ್ತರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ, ಬಹುಮಹಡಿ ಕಟ್ಟಡ ಕೇಂದ್ರ ಕಚೇರಿ, ಬೆಂಗಳೂರು ಇವರನ್ನು ಸಂರ್ಪಸಬಹುದು. ಹೆಚ್ಚಿನ ಮಾಹಿತಿಗೆ ಡಿಡಿಡಿ.ಠಡಿ.kಚ್ಟ.ಜ್ಚಿ.ಜ್ಞಿ ನೋಡಬಹುದು.

 

ನಲಿ-ಕಲಿಗೆ ಹೊಸ ರೂಪ

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿರುವ ‘ನಲಿ-ಕಲಿ’ಗೆ ಹೊಸ ರೂಪ ನೀಡುವ ಮೂಲಕ ‘ಕಲಿಕೆಗೆ’ ಹೆಚ್ಚಿನ ಪ್ರಾಮುಖ್ಯತೆ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈಗಾಗಲೇ ಆಟದ ಮೂಲಕ ಪಾಠವನ್ನು ಹೇಳಿಕೊಡುತ್ತಿರುವ ಶಿಕ್ಷಣ ಇಲಾಖೆ ಹೊಸ ವಿನ್ಯಾಸದ ಮೂಲಕ ಮಕ್ಕಳಿಗೆ ಮತ್ತಷ್ಟು ಚಟುವಟಿಕೆ ಸೇರಿಸಿ ಕಲಿಯಲು ಒತ್ತು ನೀಡಲಿದೆ. ಬಳಪದ ಬದಲಿಗೆ ‘ಪೆನ್’ ನೀಡುವ ಮೂಲಕ ಮಕ್ಕಳಲ್ಲಿ ಬರವಣಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಹಿಂದೆ ಶಾಲೆಯಲ್ಲಿ ‘ವಾಲ್ ಸ್ಲೇಟ್’ ಎಂಬ ಚಿಂತನೆಯಡಿ ಮಕ್ಕಳಿಗೆ ಕೇವಲ ಸ್ಲೇಟ್ ಮೇಲೆ ಬರೆಯಿಸುವುದರ ಬದಲಾಗಿ ಗೋಡೆಗಳನ್ನೇ ಸ್ಲೇಟ್​ಗಳಾಗಿ ಮಾರ್ಪಾಡು ಮಾಡುವ ಮೂಲಕ ಗೋಡೆಬರಹಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ವಿದ್ಯಾರ್ಥಿಗಳು ಗೋಡೆ ಮೇಲೆ ಸುಲಭವಾಗಿ ಬರೆದರೂ ನೋಟ್​ಪುಸ್ತಕದಲ್ಲಿ ಬರೆಯುವುದಕ್ಕೆ ಕಷ್ಟಪಡುತ್ತಿದ್ದರು. ಹೀಗಾಗಿ ಈ ಹಳೆಯ ಕಾನ್ಸೆಪ್ಟ್​ಗೆ ವಿದಾಯ ಹೇಳುವ ಮೂಲಕ ಈ ವರ್ಷದಿಂದ ಪೆನ್ ಬಳಕೆಗೆ ಸೂಚಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳು ಅಭ್ಯಾಸ ಪುಸ್ತಕಗಳಲ್ಲಿ ಪೆನ್ ಬಳಕೆ ಮಾಡಬೇಕಿದೆ. 360 ಚಟುವಟಿಕೆಗಳನ್ನು 260ಕ್ಕೆ ಇಳಿಸಲಾಗಿದ್ದು, ‘ರೇಡಿಯೋ ಪಾಠ’ಕ್ಕೆ ಕೋಕ್ ನೀಡಲಾಗಿದೆ. 400 ಸರ್ಕಾರಿ ಶಾಲೆಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ ನಲಿ-ಕಲಿ ಬಹುತೇಕ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲವೆಂಬ ಮಾಹಿತಿ ಹೊರಬಿತ್ತು. ಈ ಹಿನ್ನೆಲೆಯಲ್ಲಿ ಇದರ ಅನುಷ್ಠಾನ ಮತ್ತು ನಿರ್ವಹಣೆಗೆ ಪ್ರತ್ಯೇಕ ಟೂಲ್ ರಚಿಸಲಾಗಿದೆ.

 

ಏನಿದು ನಲಿ-ಕಲಿ?

ವಿದ್ಯಾರ್ಥಿಗಳಿಗೆ ಆಟದ ಮೂಲಕ ಪಾಠ ಹೇಳಿಕೊಡುವ ಉದ್ದೇಶದಿಂದ 1995ರಲ್ಲಿ ಎಚ್.ಡಿ.ಕೋಟೆಯಲ್ಲಿ ಇದನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಯಿತು. ನಂತರ 2007-08ರಲ್ಲಿ 30 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳಲ್ಲಿ ಜಾರಿಗೆ ತಂದು 2009ರಿಂದ 1ರಿಂದ 3ನೇ ತರಗತಿಯ ಮಕ್ಕಳಿಗೆ ನಲಿ-ಕಲಿ ಜಾರಿ ಮಾಡಲಾಯಿತು.

 

ನಲಿ-ಕಲಿ ಪುಸ್ತಕ ತಲುಪಿಲ್ಲ

ನಲಿ-ಕಲಿ ಸಮಗ್ರ ಪರಿಷ್ಕರಣೆ ಕಾರ್ಡ್​ಗಳು ಪರಿಷ್ಕರಣೆ ಹಂತದಲ್ಲಿದ್ದೂ ಸಂಪೂರ್ಣ ಮುದ್ರಣಗೊಂಡಿಲ್ಲ. ಹೀಗಾಗಿ ಜೂನ್ ಮೊದಲ ವಾರದಲ್ಲಿ ಶಾಲೆಗಳಿಗೆ ತಲುಪಬೇಕಾದ ಪುಸ್ತಕಗಳು ಇನ್ನೂ ಒಂದು ತಿಂಗಳು ವಿಳಂಬವಾಗಲಿದೆ. ಈ ಮುದ್ರಣದ ಜವಾಬ್ದಾರಿಯನ್ನು ಕರ್ನಾಟಕ ಪಠ್ಯಪುಸ್ತಕ ಸಂಘ(ಕೆಟಿಬಿಎಸ್)ವಹಿಸಿದ್ದು, ಮುದ್ರಣಕ್ಕೆ ನೀಡಿದೆ. ಆದರೆ, ಶಾಲಾ ಪಠ್ಯಪುಸ್ತಕ ಮುದ್ರಣ ಹಂತದಲ್ಲಿರುವುದರಿಂದ ನಲಿ-ಕಲಿ ಪುಸ್ತಕಗಳ ಮುದ್ರಣ ತಡವಾಗಲಿದೆ ಎಂದು ತಿಳಿದು ಬಂದಿದೆ.

 

ಅಂಗವಿಕಲ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಕರು

 

ತಮ್ಮ ಬಗ್ಗೆ ಯಾರೂ ಕಾಳಜಿ ವಹಿಸಲ್ಲ, ಸರ್ಕಾರಿ ಸೌಲಭ್ಯಗಳೆಲ್ಲ ನಮಗೆ ಸಿಗಲ್ಲ ಎಂದು ಇನ್ಮುಂದೆ ಅಂಗವಿಕಲ ವಿದ್ಯಾರ್ಥಿಗಳು ಕೊರಗಬೇಕಿಲ್ಲ. ಇಂಥ ಮಕ್ಕಳ ಬೆಳವಣಿಗೆ ಜತೆಗೆ ಸಮನ್ವಯ ಶಿಕ್ಷಣ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಸರ್ವಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯಾದ್ಯಂತ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ನಿಯೋಜಿಸಲು ಮುಂದಾಗಿದೆ. ಸರ್ಕಾರ ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದೆ. ವಿವಿಧ ಪರಿಕರಗಳ ವಿತರಣೆ ಜತೆಗೆ ಆರೋಗ್ಯ ತಪಾಸಣೆ ಶಿಬಿರ, ಕಲಿಕಾ ಶಿಬಿರಗಳನ್ನು ನಡೆಸುತ್ತಿದೆ. ಅವುಗಳೆಲ್ಲ ಅಂಗವಿಕಲ ಮಕ್ಕಳಿಗೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆ ಸೃಜಿಸಿ 816 ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಧಾರವಾಡ, ಬೆಂಗಳೂರು, ಮೈಸೂರು, ಕಲಬುರಗಿ ವಿಭಾಗಗಳ 34 ಶೈಕ್ಷಣಿಕ ಜಿಲ್ಲೆಗಳಲ್ಲಿರುವ 204 ವಲಯಗಳಲ್ಲಿ ತಲಾ ನಾಲ್ವರಂತೆ (ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗಕ್ಕೆ ಇಬ್ಬಿಬ್ಬರು) 816 ಶಿಕ್ಷಕರನ್ನು ಎರಡು ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ ನಿಯೋಜಿಸಲಾಗುತ್ತಿದೆ. ಜೂನ್ 1ಕ್ಕೆ ಅನ್ವಯವಾಗುವಂತೆ ಈ ಆದೇಶ ಜಾರಿಗೆ ಬರಲಿದೆ.

 

ಬಾರದ ಕಲಿಕಾ ಸಾಮಗ್ರಿ

ಮಕ್ಕಳು ನಲಿಯುತ್ತಾ ಕಲಿಯಬೇಕು ಎಂಬ ಸರ್ಕಾರದ ಆಶಯಕ್ಕೆ ಶಿಕ್ಷಣ ಇಲಾಖೆಯಿಂದಲೇ ತಣ್ಣೀರು ಬಿದ್ದಿದೆ. 1-3ನೇ ತರಗತಿ ವಿದ್ಯಾರ್ಥಿಗಳಿಗೆ ಇರುವ ನಲಿ-ಕಲಿ ಯೋಜನೆಯಡಿ 2 ವರ್ಷಗಳಿಂದ ಕಲಿಕಾ ಸಾಮಗ್ರಿಗಳೇ ವಿತರಣೆಯಾಗಿಲ್ಲ. 1-3ನೇ ತರಗತಿಗಳ ವಿದ್ಯಾರ್ಥಿಗಳಿಗೆ ನಲಿ-ಕಲಿ ಕಾರ್ಯಕ್ರಮ ಅನುಷ್ಠಾನಕ್ಕಾಗಿ ನಲಿ-ಕಲಿ ಕಾರ್ಡ್​ಗಳು, ಪ್ರಗತಿ ನೋಟ, ಜಿಲ್ಲಾದರ್ಶನ ಪುಸ್ತಕ, ಹವಾಮಾನ ನಕ್ಷೆ ಮತ್ತಿತರ ಕಲಿಕಾ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತದೆ. ಆದರೆ, 2016-17, 2017-18ನೇ ಸಾಲಿನಲ್ಲಿ ಸರಬರಾಜು ಮಾಡಬೇಕಿದ್ದ ನಲಿ-ಕಲಿ ಕಾರ್ಡ್​ಗಳು, ಪ್ರಗತಿ ನೋಟ, ಹವಾಮಾನ ನಕ್ಷೆ ಮತ್ತಿತರ ಕಲಿಕಾ ಸಾಮಗ್ರಿಗಳು ಈವರೆಗೆ ತಲುಪಿಲ್ಲ. ಹಾಗಾಗಿ, ಶಿಕ್ಷಕರು ನಲಿ-ಕಲಿ ತರಗತಿಗಳನ್ನು ಸಮರ್ಪಕವಾಗಿ ನಡೆಸಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲವೆಡೆ ಶಿಕ್ಷಕರು ಹಳೆಯ ಕಲಿಕಾ ಸಾಮಗ್ರಿಗಳನ್ನೇ ನಕಲು ಮಾಡಿಸಿ ಹೇಳಿಕೊಡುತ್ತಿದ್ದರೆ, ಮತ್ತೆ ಕೆಲವಡೆ ಪುನರ್ಬಳಕೆ ಮಾಡಲಾಗದ ಸ್ಥಿತಿಗೆ ತಲುಪಿದ್ದರಿಂದ ತರಗತಿಗಳೇ ಸ್ಥಗಿತಗೊಂಡಿವೆ.

 

ಎರಡು ವರ್ಷಗಳಿಂದ ನಲಿ-ಕಲಿ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಕಲಿಕಾ ಸಾಮಗ್ರಿ ಬಂದಿಲ್ಲ. ಈಚೆಗೆ ಸರ್ವಶಿಕ್ಷಣ ಅಭಿಯಾನದ ಯೋಜನಾಧಿಕಾರಿಗಳ ಕಚೇರಿಯಿಂದ ಸುತ್ತೋಲೆ ಬಂದಿದ್ದು, ಜುಲೈ ತಿಂಗಳೊಳಗಾಗಿ ಸಾಮಗ್ರಿ ವಿತರಿಸುವುದಾಗಿ ಹೇಳಲಾಗಿದೆ.

| ಎಲ್.ಸಿ.ಮಾಚಕನವರ ನೋಡಲ್ ಅಧಿಕಾರಿ (ನಲಿ-ಕಲಿ ಕಾರ್ಯಕ್ರಮ), ಡಯಟ್, ಬೆಳಗಾವಿ

 

ಕಾರ್ಯಗಳೇನು?

ವಿಶೇಷ ಸಂಪನ್ಮೂಲ ಶಿಕ್ಷಕರು ತಮ್ಮ ಬ್ಲಾಕ್​ಗಳಲ್ಲಿರುವ ಅಂಗವಿಕಲ ಮಕ್ಕಳ ಸಮೀಕ್ಷೆ ಮಾಡಿ ವಿವಿಧ ನ್ಯೂನತೆಗಳುಳ್ಳ ಮಕ್ಕಳ ಪಟ್ಟಿ ಸಿದ್ಧಪಡಿಸುತ್ತಾರೆ. ವೈಯಕ್ತಿಕ ಶೈಕ್ಷಣಿಕ ಯೋಜನೆ ರೂಪಿಸುತ್ತಾರೆ. ತಮ್ಮ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗೆ ಭೇಟಿ ಕೊಟ್ಟು ಮಕ್ಕಳ ಸಮಸ್ಯೆ ಆಲಿಸುವ ಜತೆಗೆ, ಕೆಲಹೊತ್ತು ಕಾರ್ಯನಿರ್ವಹಿಸುತ್ತಾರೆ. ಬೋಧನಾ ಕ್ರಮ, ಇತರೆ ಮಕ್ಕಳೊಂದಿಗೆ ಬೆರೆಯುವುದು, ಕೌಶಲಾಭಿವೃದ್ಧಿ, ಹಲವು ಚಟುವಟಿಕೆಗಳ ಆಯೋಜನೆ ಜತೆಗೆ, ಮುಖ್ಯ ಶಿಕ್ಷಕರು, ಸಾಮಾನ್ಯ ಶಿಕ್ಷಕರು ಮತ್ತು ಪೋಷಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಉಚಿತ ಮೌಲ್ಯಾಂಕನ ಶಿಬಿರ, ಸಾಧನಾ ಸಲಕರಣೆಗಳ ವಿತರಣೆ ಶಿಬಿರ, ತರಬೇತಿ, ಫಿಜಿಯೋಥೆರಪಿ, ವಿಶ್ವ ಅಂಗವಿಕಲ ದಿನಾಚರಣೆ, ಪ್ರಕೃತಿ ಅಧ್ಯಯನ, ಸಾಹಸ ಶಿಬಿರ ಮುಂತಾದ ಕಾರ್ಯತಂತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎನ್​ಜಿಒಗಳ ಸಹಕಾರದೊಂದಿಗೆ ಸಮನ್ವಯ ಶಿಕ್ಷಣ ಅನುಷ್ಠಾನದ ಜವಾಬ್ದಾರಿ ಹೊರುತ್ತಾರೆ ಎನ್ನುತ್ತಾರೆ ಸರ್ವಶಿಕ್ಷಣ ಅಭಿಯಾನದ ಬೆಳಗಾವಿ ಜಿಲ್ಲೆ ಯೋಜನಾ ಸಮನ್ವಯಾಧಿಕಾರಿ ಮತ್ತು ಡಿಡಿಪಿಐ ಎ.ಬಿ.ಪುಂಡಲೀಕ.

 

ಕಲಿಸಲು ಹೆಣಗಾಟ

‘‘ನಮ್ಮ ಶಾಲೆಗೆ ಎರಡು ವರ್ಷಗಳಿಂದ ಯಾವುದೇ ಕಲಿಕಾ ಸಾಮಗ್ರಿ ಬಂದಿಲ್ಲ. 1ನೇ ತರಗತಿಯ ಕನ್ನಡ, ಗಣಿತ ಪಠ್ಯಪುಸ್ತಕ ಬಂದಿದ್ದು, ಪರಿಸರ ಅಧ್ಯಯನ, ಇಂಗ್ಲಿಷ್ ಪಠ್ಯಪುಸ್ತಕ ಬಂದಿಲ್ಲ. 2 ಮತ್ತು 3ನೇ ತರಗತಿಗಳ ಇಂಗ್ಲಿಷ್ ಪಠ್ಯಪುಸ್ತಕಗಳು ಪೂರೈಕೆ ಆಗಿಲ್ಲ. ಹಾಗಾಗಿ, ಪೂರೈಕೆಯಾಗಿರುವ ಕೆಲ ಪಠ್ಯಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ತರಗತಿ ನಡೆಸುತ್ತಿದ್ದೇವೆ. ಕಲಿಕಾ ಸಾಮಗ್ರಿಗಳೇ ಇಲ್ಲದ್ದರಿಂದ ನಲಿ-ಕಲಿ ತರಗತಿ ನಡೆಸುವುದು ಕಷ್ಟವಾಗುತ್ತಿದೆ’’ ಎನ್ನುತ್ತಾರೆ ಬೆಳಗಾವಿಯ ವಡಗಾವಿಯ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಸಂಖ್ಯೆ 5ರ ಶಿಕ್ಷಕಿಯರಾದ ಗಿರಿಜಾ ಮನ್ನಿಕೇರಿ ಮತ್ತು ಆರ್.ಡಿ.ಕೋರಿ.

Leave a Reply

Your email address will not be published. Required fields are marked *

Back To Top