Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಮೌಲ್ಯಗಳ ಹಿನ್ನೆಲೆಯಲ್ಲಿ ಕಲೆ ಮತ್ತು ಸಾಹಿತ್ಯ

Thursday, 15.06.2017, 3:02 AM       No Comments

ಸಾಹಿತ್ಯ-ಕಲೆಗಳ ಸ್ವರೂಪದಲ್ಲೇ ಸಹೃದಯನನ್ನು ನಿರ್ಮಮಗೊಳಿಸುವ, ಅಂತರಂಗವನ್ನು ಪರಿಷ್ಕರಿಸುವ, ಆಧ್ಯಾತ್ಮಿಕ ಸಂಸ್ಕಾರ ಉಂಟುಮಾಡುವ ಗುಣವೊಂದು ಅಂತರ್ಗತವಾಗಿದೆ. ಈ ಪರಿಪಾಕಕ್ಕೆ ಸಾಹಿತ್ಯ-ಕಲೆಗಳನ್ನು ಸಜ್ಜುಗೊಳಿಸಬೇಕಾದುದು ನಿರ್ವತೃವಿನ ಜವಾಬ್ದಾರಿ. ಅದರ ಸ್ವೀಕಾರಕ್ಕೆ ತಕ್ಕಂತೆ ತನ್ನ ಆಂತರ್ಯವನ್ನು ಸಂಸ್ಕರಿಸಿಕೊಳ್ಳಬೇಕಾದುದು ಸಹೃದಯನ ಕರ್ತವ್ಯ. ಇವೆರಡರ ಪವಿತ್ರ ಸಂಧಿಯಲ್ಲಿ ಮಾತ್ರ ಸಾಹಿತ್ಯ-ಕಲೆಗಳ ಪರಮಮೌಲ್ಯಗಳ ಅವತರಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಅವಲೋಕಿಸುವ ಬರಹವಿದು.

| ಎಚ್.ಎನ್. ಮುರಳೀಧರ

ಕಲೆ ಮತ್ತು ಸಾಹಿತ್ಯಗಳು ಮಾನವನ ಸಾಂಸ್ಕೃತಿಕ ಜಗತ್ತಿಗೆ ಸಂಬಂಧಿಸಿದವು. ಪ್ರಕೃತಿಯನ್ನು ಪರಿಷ್ಕಾರಗೊಳಿಸುವುದು ಸಂಸ್ಕೃತಿ. ಈ ಕೆಲಸವನ್ನು ಕಲೆ ಮತ್ತು ಸಾಹಿತ್ಯಗಳು ಒಂದು ವಿಶಿಷ್ಟವಾದ ರೀತಿಯಲ್ಲಿ ನಿರ್ವಹಿಸುತ್ತವೆ. ಇದರ ಕೆಲವು ಅಂಶಗಳನ್ನು ಸ್ಥೂಲವಾಗಿ ಅವಲೋಕಿಸಬಹುದು.

ಮನುಷ್ಯನು ಬದುಕಿರುವುದು ಪ್ರಾಕೃತಿಕ ಜಗತ್ತಿನಲ್ಲಿ. ಇದನ್ನು ‘ಭವ’ ಎಂದು ಕರೆಯಲಾಗಿದೆ. ಭವದ ಜಗತ್ತು ‘ಸ್ವ-ಅರ್ಥ’ದ ಜಗತ್ತೂ ಹೌದು. ಸ್ವ-ಅರ್ಥವೆಂದರೆ ತನಗಾಗಿ. ಈ ದೃಷ್ಟಿಯಿಂದ ಭವದ ಜಗತ್ತು ಕಟ್ಟಿಹಾಕುವ ಜಗತ್ತೂ ಹೌದು. ಇದರಿಂದ ಬಿಡುಗಡೆ ಬೇಕೆಂದರೆ ಭವವು ಭಾವವಾಗಿ, ಭಾವವು ರಸಸ್ತರಕ್ಕೇರಬೇಕು. ಈ ಪಾಕವು ಸಿದ್ಧಿಸುವುದು ಕಲೆ ಮತ್ತು ಸಾಹಿತ್ಯಗಳ ನಿರ್ವಿುತಿಯಲ್ಲಿ. ಅವು ಒಂದು ಕಡೆಯಿಂದ ಪಂಚೇಂದ್ರಿಯಗಳನ್ನೂ ಇನ್ನೊಂದು ಕಡೆಯಿಂದ ಪಂಚಭೂತಗಳನ್ನೂ ಬಳಸಿಕೊಳ್ಳುತ್ತವೆ. ಆದರೆ ಒಂದು ವಿಶಿಷ್ಟವಾದ ಸಂಯೋಜನೆಯಲ್ಲಿ ಅವೆಲ್ಲವನ್ನೂ ಹದಗೊಳಿಸಿ ಉನ್ನತೀಕರಿಸುತ್ತವೆ. ಉನ್ನತೀಕರಿಸುವುದೆಂದರೆ ಉದಾತ್ತೀಕರಿಸುವುದು ಕೂಡ. ಸಾಹಿತ್ಯ-ಕಲೆಗಳ ಅನುಸಂಧಾನದಿಂದ ದೊರೆಯುವ ಅನುಭವವನ್ನು ನಮ್ಮ ಮೀಮಾಂಸಕರು ‘ರಸಾನುಭವ’ ಎಂದು ಕರೆದರು. ಈ ರಸಾನುಭವವು ಒಳಗೊಳ್ಳುವ ಲೋಕೋತ್ತರವಾದ ಒಂದು ಲಕ್ಷಣವನ್ನು ಅನುಲಕ್ಷಿಸಿ ಅದನ್ನು ‘ಬ್ರಹ್ಮಾನಂದ ಸಹೋದರ’ ಎಂದು ಕರೆಯುವವರೆಗೂ ಹೋದರು.

ರಸಿಕ, ರಸಿಕತೆ ಮೊದಲಾದ ಪದಗಳನ್ನು ನಮ್ಮ ಜನರ ಬಾಯಲ್ಲಿ ಆಗಾಗ ಕೇಳುತ್ತಿರುತ್ತೇವೆ. ವ್ಯಕ್ತಿಯ ಗುಣವಿಶೇಷವನ್ನು ಸೂಚಿಸಲು ಈ ಪದಗಳನ್ನು ಸಾಮಾನ್ಯವಾಗಿ ಬಳಸುವುದುಂಟು. ಈ ಪದಗಳು ಮೂಲತಃ ಕಲಾನುಭವದ ಪರಿವಲಯಕ್ಕೆ ಸೇರಿದವುಗಳಾದರೂ ಕೂಡ ಸಾಮಾನ್ಯ ಬಳಕೆಯಲ್ಲಿಯೂ ಇವು ನಿರ್ದಿಷ್ಟ ಅರ್ಥಛಾಯೆಗಳೊಂದಿಗೆ ಬಳಕೆಯಾಗುತ್ತವೆ. ನಮ್ಮ ಜನ ಸಾಮಾನ್ಯವಾಗಿ ರಸಿಕನೆಂದು ಕರೆಯುವ ವ್ಯಕ್ತಿಯ ರೂಪುರೇಷೆಗಳನ್ನು ನಾವೊಂದಿಷ್ಟು ಕಲ್ಪಿಸಿಕೊಂಡಲ್ಲಿ, ಆತನಲ್ಲಿ ಸುಖಾಭಿಲಾಷೆ, ಭೋಗಾಕಾಂಕ್ಷೆಗಳು ಸೇರಿಕೊಂಡಿರುವಂತೆ ಈ ಪದದ ಪ್ರಯೋಗವಾಗುವುದನ್ನು ಗಮನಿಸಬಹುದು. ನಮ್ಮ ‘ಮಹಾರಸಿಕ’ ಎಂಬ ಪ್ರಯೋಗವಂತೂ ಸ್ಪಷ್ಟವಾಗಿ ವ್ಯಕ್ತಿಯ ಸ್ತ್ರೀಲೋಲುಪತೆಯನ್ನೇ ನಿರ್ದೇಶಿಸುವಂತೆ ಬಳಕೆಯಾಗುತ್ತದೆ. ಹಾಗಾದರೆ ಇಂತಹ ವ್ಯಕ್ತಿ ಮಾತ್ರವೇ ರಸಿಕನೆ? ಭೋಗಲೋಲುಪತೆಯೇ ರಸಿಕತೆಯ ಪ್ರಧಾನ ಲಕ್ಷಣವೆ? ಈ ಬಗೆಗೆ ಒಂದಿಷ್ಟು ಆಲೋಚಿಸುವುದು ಅಗತ್ಯ.

‘ರಸ’ ಎಂಬ ಪದ ಮೂಲತಃ ಬಳಕೆಯಾದದ್ದು ದೈನಂದಿನ ಲೋಕಾನುಭವದಿಂದ ಕಲಾನುಭವವನ್ನು ಪ್ರತ್ಯೇಕಿಸುವುದಕ್ಕಾಗಿ. ನಮ್ಮ ಸುತ್ತಲಿನ ದಿನನಿತ್ಯದ ಆಗುಹೋಗುಗಳು ನಮ್ಮ ಮನಸ್ಸಿನ ಮೇಲೆ ಉಂಟುಮಾಡುವ ಪರಿಣಾಮದ ಬಗೆಗಳು ಅಸಂಖ್ಯ. ಅವು ಪ್ರತಿಕ್ಷಣವೂ ನಮ್ಮ ಮನಸ್ಸಿನಲ್ಲಿ ಒಂದಿಲ್ಲೊಂದು ಭಾವವನ್ನು ಏಳಿಸುತ್ತಲೇ ಇರುತ್ತವೆ. ಆದರೆ ನಮ್ಮಲ್ಲಿ ಈ ಭಾವಗಳು ಉದ್ಭವವಾಗಲು ಕಾರಣವಾಗುವ ಸನ್ನಿವೇಶಗಳನ್ನು ಒಂದಿಷ್ಟು ಗಮನಿಸಬೇಕು. ಇದರಿಂದ ನಾವು ಕಂಡುಕೊಳ್ಳುವ ಒಂದು ಸಂಗತಿಯೆಂದರೆ, ಯಾವ ಸನ್ನಿವೇಶಗಳಲ್ಲಿ ನಾವು ನಮ್ಮ ವೈಯಕ್ತಿಕ ಒಲವು-ನಿಲುವುಗಳೊಂದಿಗೆ ಭಾಗವಹಿಸಲು ಸಾಧ್ಯವಾಗುತ್ತದೆಯೋ ಅಂಥವು ಮಾತ್ರ ನಮ್ಮಲ್ಲಿ ಭಾವಗಳನ್ನು ಮೂಡಿಸುತ್ತವೆ. ಈ ಭಾಗವಹಿಸುವಿಕೆ ಸಾಧ್ಯವಾಗದ ಸನ್ನಿವೇಶಗಳು ನಮ್ಮಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲಾಗದೆ ದೂರವೇ ಉಳಿಯುತ್ತವೆ. ಎಂದರೆ ಲೋಕಜೀವನದಲ್ಲಿ ಪ್ರಯೋಜನದ ದೃಷ್ಟಿ ನಮಗೆ ಅತ್ಯಂತ ಸಹಜವಾದುದು. ನಮ್ಮ ಭಾವಪ್ರಪಂಚವೂ ಅನಿವಾರ್ಯವಾಗಿಯೇ ಈ ಪ್ರಯೋಜನದ ದೃಷ್ಟಿಯೊಂದಿಗೆ ಹೆಣೆದುಕೊಂಡಿರುತ್ತದೆ.

ನಾವಿನ್ನು ಕಲಾನುಭವದ ಜಗತ್ತಿಗೆ ಬರೋಣ. ಕಲೆಯ ಜಗತ್ತನ್ನು ನಾವು ಪ್ರಯೋಜನದ ದೃಷ್ಟಿಯೊಂದಿಗೆ ಪ್ರವೇಶಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಅದು ಕಾಲ-ದೇಶಗಳಿಂದ ವಿಮುಕ್ತವಾದುದು. ಕಾಳಿದಾಸನ ‘ಶಾಕುಂತಲ’ವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಲೋಕವ್ಯಕ್ತಿಯಾಗಿ ಶಕುಂತಲೆ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ, ನಿರ್ದಿಷ್ಟ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇದ್ದಿರಬಹುದು ಅಥವಾ ಇಲ್ಲದಿರಬಹುದು. ಆದರೆ ಇದೇ ಶಕುಂತಲೆ ಕಲೆಯ ಜಗತ್ತಿಗೆ ಬಂದು ಒಂದು ಪಾತ್ರವಾಗಿ ಪರಿಣಮಿಸಿದಾಗ, ಎಲ್ಲ ಕಾಲಗಳಲ್ಲಿಯೂ ಎಲ್ಲ ದೇಶಗಳಲ್ಲಿಯೂ ಇರುವ ಶಕುಂತಲೆಯರ ಪ್ರಾತಿನಿಧಿಕ ರೂಪವನ್ನು ಪಡೆದುಕೊಳ್ಳುತ್ತಾಳೆ. ಇದನ್ನೇ ನಮ್ಮ ಕಾವ್ಯಮೀಮಾಂಸಕರು ‘ಸಾಧಾರಣೀಕರಣ’ ಎಂಬ ಹೆಸರಿನಿಂದ ಕರೆಯುವುದು. ಈ ಬಗೆಯ ಸಾಧಾರಣೀಕರಣದ ಸಂದರ್ಭದಲ್ಲಿ ಸಾಮಾಜಿಕನಲ್ಲಿ ಏರ್ಪಡುವ

ಮನಃಸ್ಥಿತಿ ಬಹು ವಿಲಕ್ಷಣವಾದುದು. ಆತ ಈ ಕಲೆಯ ಜಗತ್ತಿನ ಶಕುಂತಲೆಯನ್ನು ಕಂಡು, ‘ಈಕೆ ನನಗೆ ಯಾವ ರೀತಿಯಲ್ಲೂ ಸಂಬಂಧಪಡುವ ವ್ಯಕ್ತಿಯೇ ಅಲ್ಲ’ ಎಂದು ನಿರ್ಲಿಪ್ತನಾಗುವುದೂ ಇಲ್ಲ; ‘ಈಕೆಯೇ ನಿಜವಾಗಿ ಶಕುಂತಲೆ: ನನಗೆ ವೈಯಕ್ತಿಕವಾಗಿ ಸಂಬಂಧಪಟ್ಟವಳು’ ಎಂದು ಅನುರಕ್ತನಾಗುವುದೂ ಇಲ್ಲ. ಈ ಎರಡೂ ಅತಿಗಳಿಂದ ಹೊರತಾದ ಒಂದು ಅಂತರದಲ್ಲಿ, ಪ್ರಯೋಜನದ ದೃಷ್ಟಿಯಿಂದ ದೂರವಾಗಿ, ಆತ ಕಲೆಯ ಜಗತ್ತನ್ನು ಆಸ್ವಾದಿಸುತ್ತಾನೆ. ಇಲ್ಲಿ ಕಲೆಯ ಜಗತ್ತು ಸಾಮಾಜಿಕನಲ್ಲಿ ಭಾವಗಳನ್ನು ಉದ್ದೀಪನಗೊಳಿಸುತ್ತದೆ. ಆದರೆ ಈ ಭಾವಗಳಿಗೆ ಕಾರಣವಾದ ಕಲೆಯ ಜಗತ್ತು ಸಾಧಾರಣೀಕರಣಗೊಂಡಿರುವುದರಿಂದ ಸಾಮಾಜಿಕನ ಭಾವವೂ ಸಾಧಾರಣೀಕರಣಗೊಳ್ಳುತ್ತದೆ. ಇದನ್ನೇ ನಮ್ಮ ಕಾವ್ಯಮೀಮಾಂಸಕರು ‘ರಸಾನುಭವ’ ಎಂದು ಕರೆದಿರುವುದು. ಲೌಕಿಕ ಭಾವಗಳು ಯಾವಾಗಲೂ ವ್ಯಾವಹಾರಿಕವಾಗಿ ಕಾರ್ಯಾಪೇಕ್ಷಿಗಳಾದರೆ, ರಸವು ಮಾತ್ರ ತನ್ನ ವಿಲಕ್ಷಣ ಸ್ವರೂಪವೇ ಕಾರಣವಾಗಿ, ಎಂದೂ ಕಾರ್ಯಾಪೇಕ್ಷಿಯಾಗದೆ ಆಸ್ವಾದದಲ್ಲಿ ಮಾತ್ರ ಪರ್ಯವಸಾನಗೊಳ್ಳುತ್ತದೆ. ಆದ್ದರಿಂದಲೇ ರಸಾನುಭವವನ್ನು ‘ಬ್ರಹ್ಮಾನಂದ ಸಹೋದರ’ ಎಂದು ಕರೆಯುವವರೆಗೂ ನಮ್ಮ ಕಾವ್ಯಮೀಮಾಂಸಕರು ಹೋಗಿದ್ದಾರೆ.

ಇಲ್ಲಿಯವರೆಗಿನ ವಿವೇಚನೆಯಿಂದ ಸ್ಪಷ್ಟವಾಗುವ ಒಂದು ಅಂಶವೆಂದರೆ ರಸಾನುಭವದ ಸ್ವರೂಪದಲ್ಲಿನ ಅಭೌತಿಕತೆ ಅಥವಾ ಇಂದ್ರಿಯದೂರತೆ. ಲೌಕಿಕವಾದ ಪ್ರಾಯೋಜನಿಕ ದೃಷ್ಟಿಯಿಂದ ಪಾರಾಗಿ ತಮ್ಮ ಭಾವಗಳನ್ನು ಸಾಧಾರಣೀಕರಿಸಿಕೊಳ್ಳದ ಯಾರೂ ರಸಾನುಭವಕ್ಕೆ ಪಾತ್ರರಾಗಲಾರರು. ಈ ಅರ್ಥದಲ್ಲಿಯೇ ರಸಿಕರೆಂದೂ ಕರೆಸಿಕೊಳ್ಳಲಾರರು. ಸ್ಥೂಲಗಳಿಂದ ಸೂಕ್ಷ್ಮಗಳ ಕಡೆಗೆ ಏರಬಲ್ಲ ಸಂಸ್ಕಾರ ಈ ರಸಿಕತೆಯ ಪ್ರಧಾನ ಲಕ್ಷಣ. ಈ ದೃಷ್ಟಿಯಿಂದ ನೋಡಿದಾಗ ದಿನಬಳಕೆಯ ಅರ್ಥದಲ್ಲಿ ರಸಿಕನೆಂದು ಕರೆಯಿಸಿಕೊಳ್ಳುವ ವ್ಯಕ್ತಿಯಲ್ಲಿ ಈ ರಸಿಕತೆಯ ನೆರಳು ಕೂಡ ಇರಲಾರದೆಂಬುದು ನಮಗೆ ಸ್ಪಷ್ಟವಾಗುತ್ತದೆ.

ಸಾಮಾಜಿಕನ ಭಾವವನ್ನು ಸಾಧಾರಣೀಕರಣಗೊಳಿಸಿ ರಸದ ಮಟ್ಟಕ್ಕೆ ಎತ್ತಲು ಕಾರಣವಾಗುವ ಕಲಾಜಗತ್ತಿನ ಸಂಗತಿಗಳನ್ನು ನಮ್ಮವರು ‘ವಿಭಾವ’ಗಳೆಂದು ಕರೆದಿದ್ದಾರೆ. ‘ಭಾವತ್ವ’ವನ್ನು ನಿರಂತರವಾಗಿ ‘ರಸತ್ವ’ಕ್ಕೆ ತೆಗೆದುಕೊಂಡು ಹೋಗುವುದೇ ವಿಭಾವಗಳ ಕೆಲಸ. ಆದರೆ ಇಂದು ನಮ್ಮ ಸುತ್ತ ಕಲೆಯ ಹೆಸರಿನಲ್ಲಿ ಪ್ರವೇಶ ಪಡೆಯುವ ಹಲವು ಹದಿನೆಂಟು ಸಂಗತಿಗಳು ಸಾಮಾಜಿಕನನ್ನು ಭಾವತ್ವದ ಮಟ್ಟದಲ್ಲಿ ಹಿಡಿದಿಡುವುದನ್ನೇ ಉದ್ದೇಶವಾಗಿರುವಂತೆ ರೂಪುಗೊಳ್ಳುವುದನ್ನು ಕಾಣಬಹುದು. ಸೂಕ್ಷ್ಮತೆಯಿಂದ ಸ್ಥೂಲಕ್ಕೆ ಎಳೆದು ತರುವುದರ ಮೂಲಕವೇ ಜನಪ್ರಿಯವಾಗಲೆಳಸುವ ತಂತ್ರದ ಒಂದು ಭಾಗವಾಗಿ ಇದನ್ನು ಗುರುತಿಸಲು ಸಾಧ್ಯವಿದೆ. ಕಲೆಯ ಜಗತ್ತು ವ್ಯಾವಹಾರಿಕ ಜಗತ್ತಿನ ಪರ್ಯಾಯ ರೂಪ ಮಾತ್ರವೇ ಆದಾಗ ಭಾವೋದ್ರೇಕವೇ ರಸಾನುಭವವೋ ರಸಿಕತೆಯ ದ್ಯೋತಕವೋ ಆಗದೆ ಹೋಗಲಾರದು. ಹೀಗಾಗಿ ರಸಾನುಭವದ ಪರಿಕಲ್ಪನೆ ಕಲಾನುಭವದ ಸ್ವರೂಪವನ್ನು ವಿವರಿಸುವುದರೊಂದಿಗೆ ಕಲಾಪ್ರಕಾರಗಳ ಜವಾಬ್ದಾರಿಯನ್ನೂ ನಿರ್ದೇಶಿಸುವುದರಿಂದ ಅದನ್ನು ತುಂಬ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸಾಹಿತ್ಯ-ಕಲೆಗಳ ಸ್ವರೂಪದಲ್ಲೇ ಸಹೃದಯನನ್ನು ನಿರ್ಮಮಗೊಳಿಸುವ, ಆತನ ಅಂತರಂಗವನ್ನು ಪರಿಷ್ಕರಿಸುವ, ಆಧ್ಯಾತ್ಮಿಕ ಸಂಸ್ಕಾರವನ್ನು ಉಂಟುಮಾಡುವ ಗುಣವೊಂದು ಅಂತರ್ಗತವಾಗಿದೆ. ಈ ಪರಿಪಾಕಕ್ಕೆ ಸಾಹಿತ್ಯ-ಕಲೆಗಳನ್ನು ಸಜ್ಜುಗೊಳಿಸಬೇಕಾದುದು ನಿರ್ವತೃವಿನ ಜವಾಬ್ದಾರಿ. ಅದರ ಸ್ವೀಕಾರಕ್ಕೆ ತಕ್ಕಂತೆ ತನ್ನ ಆಂತರ್ಯವನ್ನು ಸಂಸ್ಕರಿಸಿಕೊಳ್ಳಬೇಕಾದುದು ಸಹೃದಯನ ಕರ್ತವ್ಯ. ಇವೆರಡರ ಪವಿತ್ರ ಸಂಧಿಯಲ್ಲಿ ಮಾತ್ರ ಸಾಹಿತ್ಯ-ಕಲೆಗಳ ಪರಮಮೌಲ್ಯಗಳ ಅವತರಣವಾಗಲು ಸಾಧ್ಯ.

(ಪ್ರತಿಕ್ರಿಯಿಸಿ: ([email protected], [email protected])

 

 

Leave a Reply

Your email address will not be published. Required fields are marked *

Back To Top