Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ        ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆಶಿ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕ ನೇಮಕ        ಅಮೆರಿಕ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ಶಾಕ್​        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಸಂಗ್ರಹ​-ಸ್ಯಾಂಡಲ್​​​ವುಡ್​​​​ ದಾಖಲೆಗಳೆಲ್ಲ ಪೀಸ್​ ​​       
Breaking News

ಮೌನಕ್ರಾಂತಿಗೆ ಮುನ್ನುಡಿ ಬರೆದ ಮಠ

Thursday, 07.12.2017, 3:03 AM       No Comments

| ಪ್ರಶಾಂತ್ ರಿಪ್ಪನ್​ಪೇಟೆ

ಕರ್ನಾಟಕದ ಧಾರ್ವಿುಕ ಪರಂಪರೆಯ ಶ್ರೀಮಂತಿಕೆಗೆ ಕಾರಣ ಇಲ್ಲಿನ ಮಠಗಳು. ದೇಶದ ದಾರ್ವಿುಕ ಇತಿಹಾಸದಲ್ಲೇ ಅತಿ ಹೆಚ್ಚು ಸಂತ ಮಹಾಂತರನ್ನು ನೀಡಿದ ಕೀರ್ತಿ ಕರ್ನಾಟಕಕ್ಕಿದೆ. ಆಚಾರ್ಯಪರಂಪರೆ, ಶರಣಪರಂಪರೆ, ದಾಸಪರಂಪರೆಗಳು ವಿಶಿಷ್ಟವಾದ ಸಾಹಿತ್ಯದ ಮೂಲಕ ನಾಡಿನ ಅಧ್ಯಾತ್ಮದ ಅಭಿರುಚಿಯನ್ನು ಹೆಚ್ಚಿಸಿವೆ. ಇಂತಹ ಧರ್ಮಪರಂಪರೆಯನ್ನು ಮುನ್ನಡೆಸುತ್ತಿರುವ ಮಠಗಳಲ್ಲಿ ಮೌನವಾಗಿಯೇ ಕ್ರಾಂತಿಯನ್ನು ಮಾಡುತ್ತಿದೆ ಮುತ್ತತ್ತಿ ಹಿರೇಮಠ.

ಘಟಪ್ರಭಾ ಮತ್ತು ಕೃಷ್ಣಾ ನದಿಗಳ ಸಂಗಮಸ್ಥಾನದಲ್ಲಿರುವ ಮುತ್ತತ್ತಿ ಹಿರೇಮಠವು ಕಳೆದ ಎರಡು ಶತಮಾನಗಳಿಗಿಂತ ಹೆಚ್ಚು ಕಾಲದಿಂದ ಇಲ್ಲಿನ ಜನರ ಆಧ್ಯಾತ್ಮಿಕ ಹಸಿವನ್ನು ನೀಗಿಸುತ್ತ, ಜಾತಿ, ಮತ, ಪಂಥವೆನ್ನದೆ ಸರ್ವರ ಗೌರವ ಆದರಗಳಿಗೆ ಪಾತ್ರವಾಗಿದೆ. ಈ ಮಠದ ಗುರುಪರಂಪರೆಯಲ್ಲಿ ನಾಲ್ಕು ಜನ ತಪಸ್ವಿಗಳು ಆಗಿಹೋಗಿದ್ದಾರೆ. ಆ ಎಲ್ಲ ಲಿಂಗೈಕ್ಯ ಶ್ರೀಗಳು ತಮ್ಮ ತಮ್ಮ ಕಾಲದಲ್ಲಿ ವಿಶೇಷ ತಪೋನುಷ್ಠಾನ ಕೈಗೊಂಡು, ಧಾರ್ವಿುಕ ಕ್ರಾಂತಿಯನ್ನು ಮಾಡಿದ ಇತಿಹಾಸವಿದೆ. ಸಂದರ್ಭ ಬಂದಾಗ ತಮ್ಮಲ್ಲಿನ ಅಂತಃಶಕ್ತಿಯನ್ನು ಪ್ರಕಟಗೊಳಿಸಿ ಬಾಹ್ಯಜಗತ್ತನ್ನು ಚಕಿತಗೊಳಿಸಿದ್ದಾರೆ.

ಮಠದ ಕರ್ತೃಗಳಾದ ಶ್ರೀ ಶಿವಯೋಗೀಶ್ವರರು ಒಮ್ಮೆ ವಿಜಯಪುರದ ಹಾಸಪೀರ್ ದರ್ಗಾದ ಬಳಿ ಕುಳಿತು ಶಿವಯೋಗದಲ್ಲಿ ಮಗ್ನರಾಗಿದ್ದರು. ಆಗ ಅಲ್ಲಿಗೆ ಬಂದ ದರ್ಗಾದ ಮುಲ್ಲಾ; ಇದು ಮಸೀದಿಯ ಸ್ಥಳ. ಇಲ್ಲಿ ಪೂಜೆ ಮಾಡಬಾರದೆಂದು ತಾಕೀತು ಮಾಡಿದರು. ಆಗ ಶಿವಯೋಗೀಶ್ವರರು ಮಸೀದಿಯಲ್ಲಿ ಮಹಾದೇವನ ಲಿಂಗವನ್ನು ಪ್ರತ್ಯಕ್ಷ ಮಾಡಿ ತೋರಿಸಿದರು. ಆಗ ತಪ್ಪಿನ ಅರಿವಾದ ಮುಲ್ಲಾ ಶರಣಾದರು. ಹೀಗೆ ಶ್ರೀ ಶಿವಯೋಗೀಶ್ವರರಿಂದ ಆರಂಭವಾದ ಮುತ್ತತ್ತಿ ಹಿರೇಮಠವು ಶ್ರೀಶೈಲ ಪೀಠದ ಶಾಖಾಮಠವಾಗಿದ್ದು, ಅವರ ನಂತರ ಬಂದ ಎಲ್ಲ ಪೂಜ್ಯರು ಸಹ ತಪಸ್ವಿಗಳಾಗಿ ಈ ಭಾಗದ ಭಕ್ತರ ಧರ್ಮದಾಹವನ್ನು ತಣಿಸಿದ್ದಾರೆ. ಶ್ರೀ ಮಹಾಂತಸ್ವಾಮಿಗಳು ತುಂಬಿ ಹರಿಯುವ ಕೃಷ್ಣೆ – ಘಟಪ್ರಭೆ ನದಿಯ ಮೇಲೆ ಕಂಬಳಿಯನ್ನು ಹಾಸಿಕೊಂಡು ದಡವನ್ನು ಸೇರುತ್ತಿದ್ದರು. ನಂತರ ಪೀಠವನ್ನೇರಿದ ಶ್ರೀಬಸಯ್ಯ ಸ್ವಾಮಿಗಳು ಸಹ ಪವಾಡ ಪುರುಷರಾಗಿದ್ದು, ಕಾಲಿಗೆ ಸರ್ಪವನ್ನು ಸುತ್ತಿಕೊಂಡು ಓಡಾಡುತ್ತಿದ್ದರು.

ಸಾಮರಸ್ಯ ಮತ್ತು ಸೌಹಾರ್ದತೆಗೆ ನಿರಂತರ ಸೇವೆ ಗೈದ ಶ್ರೀಮಠದ ನಾಲ್ಕನೇ ಸ್ವಾಮೀಜಿ ಶ್ರೀಮಹಾಂತ ಶಿವಯೋಗಿಗಳು ಕಾಶಿಪಂಡಿತರು, ಆಯುರ್ವೇದ ತಜ್ಞರು

ಹಾಗೂ ವಾಕ್ ಸಿದ್ಧಿಪುರುಷರಾಗಿದ್ದರು. ಬರದ ನಾಡು ಬಯಲುಸೀಮೆಯಲ್ಲಿ ಹಲವಾರು ಬಾರಿ ಅನುಷ್ಠಾನ ಕೈಗೊಂಡು ಮಳೆ ತರಿಸಿದ್ದು, ಇಸ್ಲಾಂ ಬಂಧುಗಳ ಉರುಸ್ ಹಬ್ಬದಲ್ಲಿ ಉರಿಯುವ ಬೆಂಕಿಯಲ್ಲಿ ಬೆಣ್ಣೆ ಮತ್ತು ಹೂವನ್ನು ಹಾಕಿ ಹೊರತೆಗೆದಿದ್ದರು. ಅವರ ತಪಃಸಿದ್ಧಿಯನ್ನು ಕಣ್ಣಾರೆ ಕಂಡ ಹಿರಿಯರು ಇಂದಿಗೂ ನೆನೆದು ಗೌರವ ಸಲ್ಲಿಸುತ್ತಾರೆ. ಶ್ರೀ ಮಹಾಂತ ಶಿವಯೋಗಿಗಳ ಕರಕಮಲ ಸಂಜಾತರಾದ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಅಧ್ಯಕ್ಷ ಸ್ಥಾನವನ್ನಲಂಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಸದ್ಯ ಶ್ರೀಮಠದಲ್ಲೀಗ ಪಟ್ಟಾಧಿಕಾರದ ರಜತಮಹೋತ್ಸವ ಸಂಭ್ರಮ.

ಶ್ರೀಗಳು ಸಾಗಿ ಬಂದ ದಾರಿ

ವೇ.ಮೂ. ಈರಸಂಗಯ್ಯ ಮತ್ತು ಶರಣೆ ಬಸಮ್ಮನವರ ಪುಣ್ಯಸಂಜಾತರಾಗಿ 1964ರ ಆಗಸ್ಟ್ 21ರಂದು ಜನಿಸಿದ ಪೂಜ್ಯರ ಪೂರ್ವಾಶ್ರಮದ ಹೆಸರು ಶಿವಲಿಂಗಯ್ಯ. ನೂಲ ಹುಣ್ಣಿಮೆಯಂದು ಜನಿಸಿದ ಶ್ರೀಗಳು ಸದಾ ಸಹೋದರತೆಯನ್ನು ಪ್ರತಿಪಾದಿಸುತ್ತ ಗ್ರಾಮೀಣ ಭಾಗದಲ್ಲಿದ್ದುಕೊಂಡು ಸರ್ವಜನಾಂಗದ ಗೌರವ ಗಳಿಸಿಕೊಂಡಿದ್ದಾರೆ. ಮುತ್ತತ್ತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ನಂತರ ಆಗಮ, ವೇದ, ಸಂಸ್ಕೃತಾಭ್ಯಾಸಕ್ಕಾಗಿ ಪ್ರಸಿದ್ಧ ಶ್ರೀಶಿವಯೋಗ ಮಂದಿರದಲ್ಲಿ ಸೇರ್ಪಡೆಯಾಗಿ ಅಲ್ಲಿಂದ ಪದವಿ ಶಿಕ್ಷಣಕ್ಕಾಗಿ ಹುಬ್ಬಳ್ಳಿಯ ಮೂರುಸಾವಿರ ಮಠದ ಆಶ್ರಯ ಪಡೆಯುತ್ತಾರೆ. ಮುಂದೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಮಹಂತರ ಮಠಕ್ಕೆ ಬಂದು ಉನ್ನತ ಅಧ್ಯಯನವನ್ನು ಪೂರೈಸಿ ಮುತ್ತತ್ತಿ ಹಿರೇಮಠದಲ್ಲಿ ತಮ್ಮ ಧರ್ಮಕಾರ್ಯವನ್ನು ಮುಂದುವರೆಸಿದ್ದಾರೆ. ಲಿಂಗೈಕ್ಯ ಮಹಾಂತ ಶಿವಯೋಗಿಗಳ ಆಶೀರ್ವಾದ ಮತ್ತು ಸದ್ಭಕ್ತರ ಆಶಯದಂತೆ 1992ರಲ್ಲಿ ಮುತ್ತತ್ತಿ ಹಿರೇಮಠದ ಅಧಿಕಾರ ವಹಿಸಿಕೊಂಡ ಪೂಜ್ಯರು ಕಳೆದ 25 ವರ್ಷಗಳಿಂದ ನಿರಂತರವಾಗಿ ಧರ್ಮಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ 75 ದಿನಗಳ ಕಠೋರ ತಪೋನುಷ್ಠಾನವನ್ನು ಐದು ಬಾರಿ ಕೈಗೊಂಡಿದ್ದಾರೆ. ಮೂಲ ಮುತ್ತತ್ತಿ ಹಿರೇಮಠ ಹಾಗೂ ಕುಮಟಗಿ ಶಾಖಾಮಠಗಳೆರಡನ್ನು ಸಮಾಜಮುಖಿಯಾಗಿ ಅಭಿವೃದ್ಧಿಪಡಿಸಿದ್ದಾರೆ.

ಶಿವಾಚಾರ ಸಂಪನ್ನರು, ಶಕ್ತಿವಿಶಿಷ್ಟಾದ್ವೆ ೖತ ಸಿದ್ಧಾಂತ ಪ್ರತಿಪಾದಕರಾದ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮಿಗಳ ಪಟ್ಟಾಧಿಕಾರದ ರಜತ ಮಹೋತ್ಸವವನ್ನು ಸಮಸ್ತ ಸದ್ಭಕ್ತರು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಈಗಾಗಲೇ ಡಿ. 1ರಿಂದ ಶ್ರೀಮಠದಲ್ಲಿ ‘ಶ್ರೀಶೈಲ ಮಹಾತ್ಮೆ’ ಪುರಾಣ ಪ್ರವಚನ ಆರಂಭಗೊಂಡಿದ್ದು, 10-11ರಂದು ವಿವಿಧ ಧಾರ್ವಿುಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

10ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ, ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ ನಡೆಯಲಿದೆ. 11ರಂದು ರಜತ ಮಹೋತ್ಸವದ ಸವಿನೆನಪಿಗೆ 25 ಮಹಾಸ್ವಾಮಿಗಳ ಮಂಟಪಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ನಂತರ

ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಮತ್ತು ಧರ್ಮಸಮಾರಂಭ ನಡೆಯಲಿದೆ. ಅದೇ ದಿನ ಸಂಜೆ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮಿಗಳ ತುಲಾಭಾರ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ. ನಾಡಿನ ಹಲವಾರು ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು ಸಾವಿರಾರು ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

(ಲೇಖಕರು ಹಿರಿಯ ವಿದ್ವಾಂಸರು, ಸಾಂಸ್ಕೃತಿಕ ಚಿಂತಕರು

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top