Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಮೊದಲು ಸೇವಾಕ್ಷೇತ್ರ, ಈಗ ಉದ್ಯಮದ ರೂಪ… ಪರಿಣಾಮ?

Sunday, 25.06.2017, 3:01 AM       No Comments

ಭಾರತಕ್ಕೆ ಅಡಿಯಿಟ್ಟ ಬ್ರಿಟಿಷರು, ಭಾರತೀಯರ ಸಾಮಾಜಿಕ ಬದುಕನ್ನು ಪ್ರಭಾವಿಸಲು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಂಥ ಪ್ರಧಾನ ವಲಯಗಳನ್ನು ಆಯ್ದುಕೊಂಡರು. ಶಿಕ್ಷಣಸಂಸ್ಥೆಗಳ ಮೂಲಕ ಎಳೆಯರನ್ನೂ, ಆಸ್ಪತ್ರೆಗಳ ಮೂಲಕ ಹಿರಿಯರನ್ನೂ ಅವರು ಸೆಳೆದಿದ್ದು ಹೀಗೆಯೇ. ಹೀಗಾಗಿ ಒಂದು ಕಾಲಕ್ಕೆ ಒಳ್ಳೆಯ ಶಿಕ್ಷಣಸಂಸ್ಥೆ ಅಥವಾ ಆಸ್ಪತ್ರೆ ಕ್ರಿಶ್ಚಿಯನ್ ಸಂಸ್ಥೆಗಳೇ ಆಗಿದ್ದವು ಎಂಬುದು ಸತ್ಯ.

 

ಮ್ಮ ಬದುಕಿನಲ್ಲಿ ಎರಡು ವಲಯಗಳು ಅತ್ಯಂತ ಮಹತ್ವದ್ದು. ಒಂದು ವೈದ್ಯಕೀಯ, ಮತ್ತೊಂದು ಶಿಕ್ಷಣ. ಮೊದಲನೆಯದು ದೇಹದ ಆರೋಗ್ಯವನ್ನು ಕಾಪಾಡಿದರೆ ಎರಡನೆಯದು ನಮಗೊಂದು ವ್ಯಕ್ತಿತ್ವ ಕಲ್ಪಿಸುವುದು ಮಾತ್ರವಲ್ಲ, ಮನಸ್ಸಿನ ಆರೋಗ್ಯಕ್ಕೆ ಸಹಕಾರಿ. ನಮ್ಮ ಪರಂಪರೆಯಲ್ಲಿ ಮೂಲತಃ ಇವೆರಡೂ ಸೇವಾಕ್ಷೇತ್ರಗಳು. ಗುರು, ವೈದ್ಯ ಇಬ್ಬರಿಗೂ ಸಮಾಜದಲ್ಲಿ ವಿಶೇಷ ಮಾನ್ಯತೆ.

ನಮ್ಮ ಹಳ್ಳಿಯಲ್ಲಿ ಅಜ್ಜಿಯೊಬ್ಬರಿದ್ದರು. ಅವರು ಕಾಮಾಲೆ ರೋಗಕ್ಕೆ ಅಂದರೆ ಜಾಂಡೀಸ್​ಗೆ ಔಷಧ ಕೊಡುತ್ತಿದ್ದರು. ಅವರು ಔಷಧ ಕೊಡುತ್ತಿದ್ದ ರೀತಿ ನನಗೆ ಚೆನ್ನಾಗಿ ನೆನಪಿದೆ. ಇನ್ನೂ ನಸುಕು ಕತ್ತಲಿರುವಾಗಲೇ ಬೆಳಗ್ಗೆ ಬೇಗನೇ ಎದ್ದು ಹತ್ತಿರದ ಗುಡ್ಡಕ್ಕೆ ಒಬ್ಬರೇ ನಡೆದು ಹೋಗುತ್ತಿದ್ದರು. ಅಲ್ಲಿ ಯಾವುದೋ ಗಿಡದ ಎಲೆ, ಮತ್ತೆ ಯಾವುದೋ ಗಿಡದ ಬೇರು ಕಿತ್ತು ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಬಂದು ಹಿತ್ತಲಿನಲ್ಲಿ ಒಬ್ಬರೇ ಏಕಾಂತದಲ್ಲಿ ಚೆನ್ನಾಗಿ ಅರೆದು ಅದರ ರಸ ತೆಗೆಯುತ್ತಿದ್ದರು. ರೋಗಿ ಹಸಿದ ಹೊಟ್ಟೆಯಲ್ಲಿ ಒಂದು ಲೋಟ ಹಸುವಿನ ಹಾಲಿನ ಜತೆ ಬರಬೇಕಿತ್ತು. ಅವರು ಆ ಹಾಲಿನ ಜತೆಗೆ ತಾವು ಅರೆದು ತಯಾರಿಸಿದ್ದ ರಸ ಸೇರಿಸಿ ದೇವರ ಮುಂದಿಟ್ಟು ನಂತರ ರೋಗಿಗೆ ಕುಡಿಯಲು ಕೊಡುತ್ತಿದ್ದರು. ಹೀಗೆ ಒಂದು ವಾರವೋ, ಹತ್ತು ದಿವಸಗಳೋ ಅದನ್ನು ಕುಡಿದರೆ ಖಂಡಿತವಾಗಿಯೂ ಕಾಮಾಲೆ ವಾಸಿಯಾಗುತ್ತಿತ್ತು. ಹೀಗೆ ಔಷಧ ಕೊಡುವಾಗ ಅಜ್ಜಿ ಕಡ್ಡಾಯವಾಗಿ ಎರಡು ನಿಯಮಗಳನ್ನು ಅನುಸರಿಸುತ್ತಿದ್ದರು. ಮೊದಲನೆಯದು ಅವರು ತರುತ್ತಿದ್ದ ಗಿಡಮೂಲಿಕೆ ರಹಸ್ಯವಾಗಿದ್ದು ಯಾರಿಗೂ ಅದನ್ನು ಅವರು ಹೇಳುತ್ತಿರಲಿಲ್ಲ. ಹಾಗೆ ಅದು ಎಲ್ಲರಿಗೂ ಗೊತ್ತಾದರೆ ಗಿಡಮೂಲಿಕೆ ದುರುಪಯೋಗವಾಗುತ್ತದೆಂಬುದು ಅವರ ಅಭಿಪ್ರಾಯ. ಮತ್ತೊಂದು ಔಷಧ ಕೊಟ್ಟಿದ್ದಕ್ಕೆ ಅವರು ಯಾವುದೇ ರೀತಿಯ ಪ್ರತಿಫಲ ಪಡೆಯುತ್ತಿರಲಿಲ್ಲ. ಹಾಗೆ ಪಡೆದರೆ ಔಷಧ ಪರಿಣಾಮ ಬೀರುವುದಿಲ್ಲವೆಂಬುದು ಅವರು ರೂಢಿಸಿಕೊಂಡು ಬಂದಿದ್ದ ನಂಬಿಕೆ. ಗುಡ್ಡದಲ್ಲಿ ಗಿಡಮೂಲಿಕೆ ಸಿಗುತ್ತದೆ. ಅದಕ್ಕೇನೂ ನಾನು ಖರ್ಚು ಮಾಡುವುದಿಲ್ಲ, ಮತ್ತೇಕೆ ಹಣ ಪಡೆಯಬೇಕು? ಇದೊಂದು ರೀತಿ ಸೇವೆ ಎಂಬುದು ಅವರ ನಿಲುವಾಗಿತ್ತು. ಇದು ನಾನು ಚಿಕ್ಕವನಾಗಿದ್ದಾಗ ಕಂಡದ್ದು. ಕೆಲವೊಮ್ಮೆ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಮನೆಯಲ್ಲಿಯೇ ಆಹಾರ ಕ್ರಮದಲ್ಲಿ ಪರಿಹಾರವಿರುತ್ತಿತ್ತು.

ಬ್ರಿಟಿಷರು ಭಾರತಕ್ಕೆ ಬಂದಾಗ ನಮ್ಮ ಸಾಮಾಜಿಕ ಬದುಕಿನಲ್ಲಿ ತಮ್ಮ ಪ್ರಭಾವ ಸ್ಥಾಪಿಸಲು ಈ ಎರಡು ಕ್ಷೇತ್ರಗಳನ್ನೇ ಪ್ರಧಾನವಾಗಿ ಬಳಸಿಕೊಂಡರು. ನಮಗೆ ತಿಳಿವಳಿಕೆ ಬಂದ ದಿನಗಳಲ್ಲಿ ಬಹಳಷ್ಟು ಕಡೆ ಕ್ರಿಶ್ಚಿಯನ್ ಆಸ್ಪತ್ರೆಗಳು ಉತ್ತಮಸೇವೆ ಒದಗಿಸುತ್ತಿದ್ದವು. ಒಂದು ಕಾಲಕ್ಕೆ ಒಳ್ಳೆಯ ಶಿಕ್ಷಣ ಸಂಸ್ಥೆಯಾಗಲೀ, ಒಳ್ಳೆಯ ಆಸ್ಪತ್ರೆಯಾಗಲೀ ಕ್ರಿಶ್ಚಿಯನ್ ಸಂಸ್ಥೆಗಳೇ ಆಗಿದ್ದವು. ಶಿಕ್ಷಣದ ಮೂಲಕ ಎಳೆಯ ಮನಸ್ಸುಗಳನ್ನು, ಆಸ್ಪತ್ರೆಯ ಮೂಲಕ ಹಿರಿಯರನ್ನು ಅವರು ತಮ್ಮತ್ತ ಸೆಳೆಯುತ್ತಿದ್ದರು. ಕೆಲ ಸರ್ಕಾರಿ ಆಸ್ಪತ್ರೆಗಳಲ್ಲೂ ಉಚಿತ ವೈದ್ಯಕೀಯ ನೆರವು ದೊರೆಯುತ್ತಿತ್ತು. ಬಾಟಲಿ ಹಿಡಿದು ಹೋದರೆ ಬಣ್ಣಬಣ್ಣದ ನೀರಿನಂತಹ ಔಷಧ ತುಂಬಿ ಕಳಿಸುತ್ತಿದ್ದರು. ಎಷ್ಟರಮಟ್ಟಿಗೆ ಗುಣವಾಗುತ್ತಿತ್ತೋ! ಆ ಕಾಲದಲ್ಲೇ ಅಲೊಪಥಿ ವೈದ್ಯರ ಕ್ಲಿನಿಕ್​ಗಳು ಆರಂಭವಾದವು. ಎಂಟಾಣೆ ಡಾಕ್ಟರೆಂದು ಆ ಕಾಲದಲ್ಲಿ ಒಬ್ಬರು ವೈದ್ಯರು ನಮ್ಮ ಕಡೆ ಪ್ರಸಿದ್ಧರಾಗಿದ್ದುದು ನೆನಪು.

ನಾನು ಬೆಂಗಳೂರಿಗೆ ಬಂದದ್ದು ಕಳೆದ ಶತಮಾನದ ಅರವತ್ತರ ದಶಕದಲ್ಲಿ. ಆಗ ಪ್ರತಿ ಬಡಾವಣೆಯಲ್ಲೂ ಕೆಲವು ಪ್ರಖ್ಯಾತ ವೈದ್ಯರಿದ್ದರು. ಅವರ ಕ್ಲಿನಿಕ್​ಗಳಲ್ಲಿ ಸದಾ ಜನಜಂಗುಳಿ. ತಡರಾತ್ರಿಯವರೆಗೂ ಅವರ ಕ್ಲಿನಿಕ್ ತೆರೆದಿರುತ್ತಿತ್ತು. ಎಷ್ಟೇ ಜನರಿದ್ದರೂ ಪ್ರತಿಯೊಬ್ಬರನ್ನೂ ಹೆಸರು ಹಿಡಿದು ಮಾತನಾಡಿಸಿ, ಕುಟುಂಬದ ಇತರರ ಬಗ್ಗೆಯೂ ಕೇಳಿ ಔಷಧ ಕೊಡುತ್ತಿದ್ದರು. ರೋಗಿಗೂ ವೈದ್ಯರಿಗೂ ಆಪ್ತಸಂಬಂಧವಿತ್ತು. ಫೀಸು ತೆಗೆದುಕೊಂಡರೂ ಅದನ್ನೂ ಮೀರಿದ ಬಾಂಧವ್ಯವಿದ್ದು, ಅವರ ಬಳಿ ಹೋದರೆ ವಾಸಿಯಾಗುತ್ತದೆ ಎಂಬ ನಂಬಿಕೆಯಿತ್ತು. ಇದನ್ನೇ ಜನ ಡಾಕ್ಟರರ ‘ಕೈಗುಣ’ ಎಂದು ಹೇಳುತ್ತಿದ್ದರು. ಅವರ ಕೈಗುಣ ಒಳ್ಳೆಯದು ಎಂಬ ನಂಬಿಕೆಯೇ ಕೆಲವೊಮ್ಮೆ ಕೆಲಸ ಮಾಡುತ್ತಿತ್ತು.

ನಂಬಿಕೆಯ ಒಂದು ಪ್ರಸಂಗ ನೆನಪಾಗುತ್ತಿದೆ- ಹಳ್ಳಿಯ ಒಬ್ಬ ರೈತ ಪಟ್ಟಣದ ಡಾಕ್ಟರರ ಬಳಿ ಬರುತ್ತಾನೆ. ಡಾಕ್ಟರು ಅವನನ್ನು ಪರೀಕ್ಷಿಸಿ ಚೀಟಿಯಲ್ಲಿ ಸಲಹೆಯನ್ನು ಬರೆದುಕೊಟ್ಟು, ಪ್ರತಿನಿತ್ಯ ಮೂರುಸಲ ಮೂರು ದಿನ ತೆಗೆದುಕೊಳ್ಳಲು ಹೇಳುತ್ತಾರೆ. ಸರಿ, ಆತ ಮನೆಗೆ ಹೋಗಿ ಆ ಚೀಟಿಯನ್ನು ಸಮನಾಗಿ ಒಂಭತ್ತು ಭಾಗ ಮಾಡಿ ಮೂರು ದಿನ ಆ ಚೀಟಿಯ ಚೂರುಗಳನ್ನೇ ಅಗಿದು ನುಂಗುತ್ತಾನೆ. ಮೂರು ದಿನಗಳ ನಂತರ ಡಾಕ್ಟರ ಬಳಿ ಮರುಪರಿಶೀಲನೆಗೆ ಬರುತ್ತಾನೆ. ಡಾಕ್ಟರು ಹಿಂದೆ ಬರೆದುಕೊಟ್ಟ ಚೀಟಿ ಕೇಳುತ್ತಾರೆ. ಆ ರೈತ ತಾನು ಮಾಡಿದ್ದನ್ನು ಹೇಳುತ್ತಾನೆ. ಡಾಕ್ಟರು ಅವನನ್ನು ತಮಾಷೆ ಮಾಡುವುದಿಲ್ಲ. ಬದಲಾಗಿ ಪರೀಕ್ಷಿಸುತ್ತಾರೆ. ಆತನ ರೋಗ ವಾಸಿಯಾಗಿರುತ್ತದೆ! ಇದು ನಡೆಯಿತೋ ಇಲ್ಲವೋ ಎಂಬುದು ಮುಖ್ಯವಲ್ಲ. ಆ ಕಾಲದಲ್ಲಿ ಡಾಕ್ಟರ ಬಗೆಗೆ ಈ ರೀತಿಯ ನಂಬಿಕೆ ಇತ್ತು ಎಂದು ಹೇಳಲು ಈ ಕತೆ ಹುಟ್ಟಿಕೊಂಡಿರಬೇಕು. ಕತೆ ಸೃಷ್ಟಿಯಾಗುವುದೇ ಹೀಗೆ. ಕತೆಯ ವಸ್ತು ಮುಖ್ಯವಲ್ಲ, ಅದರ ಆಶಯವನ್ನು ನಾವು ಗಮನಿಸಬೇಕು. ಜನಪದರಲ್ಲಿ ಆಗ ಇಂತಹ ಅನೇಕ ಕತೆಗಳು ಪ್ರಚಲಿತದಲ್ಲಿದ್ದವು.

ನನಗೂ ಇಂತಹ ಒಬ್ಬ ಡಾಕ್ಟರಿದ್ದರು. ಆಗವರ ಫೀಸು ಎರಡು ರೂಪಾಯಿಗಳು. ಅವರ ಫೀಸು ಐದು ರೂಪಾಯಿಯಾಗುವಷ್ಟರ ವೇಳೆಗೆ ಅನೇಕ ವರ್ಷಗಳಾಗಿದ್ದವು. ಸರ್ವರೋಗಕ್ಕೂ ಅವರು ಮದ್ದು ಕೊಡುತ್ತಿದ್ದರು. ನಿಜವೆಂದರೆ ವಾಸಿಯಾಗುತ್ತಿತ್ತು. ಡಾಕ್ಟರರ ಫೀಸಿನಂತೆಯೇ ಔಷಧಗಳ ವೆಚ್ಚವೂ ಹೆಚ್ಚಾಗಿರುತ್ತಿರಲಿಲ್ಲ. ಅತ್ಯಂತ ಕಡಿಮೆ ಬೆಲೆಯ ಔಷಧ ಪ್ರಿಸ್ಕ್ರೈಬ್ ಮಾಡುತ್ತಿದ್ದರು. ಆಹಾರದ ಪಥ್ಯ, ವಿಶ್ರಾಂತಿಯ ಬಗ್ಗೆ ಹೆಚ್ಚು ಒತ್ತಿರುತ್ತಿತ್ತು. ಇಂಜೆಕ್ಷನ್ ಕೊಟ್ಟರೆ ಅದೇ ಅಧಿಕ ಖರ್ಚಿನ ಬಾಬ್ತು. ಸ್ಪೆಷಲಿಸ್ಟ್​ಗಳ ಕಲ್ಪನೆಯೇ ನಮಗಿರಲಿಲ್ಲ. ಆಸ್ಪತ್ರೆಗೆ ಸೇರುವುದೆಂದರೆ ಅದು ಭಯಂಕರ ರೋಗವಾಗಿದ್ದಿರಲೇಬೇಕು. ಅದೂ ಸಾರ್ವಜನಿಕ ಆಸ್ಪತ್ರೆ. ಬಹುಮಟ್ಟಿಗೆ ಅವು ಕ್ರಿಶ್ಚಿಯನ್ ಆಸ್ಪತ್ರೆಗಳೇ ಆಗಿದ್ದವು. ಸಾಧಾರಣ ವೆಚ್ಚದಲ್ಲಿ ಒಳ್ಳೆಯ ಸೇವೆ ಸಿಗುತ್ತಿತ್ತು. ನರ್ಸಿಂಗ್​ಹೋಮ್ಳು ಅಪರೂಪ. ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಆಗಲೂ ಈಗಿನಂತೆಯೇ ಇತ್ತು. ಉತ್ತಮ ಕಾರ್ಯನಿರ್ವಹಣೆ ಇದ್ದಂತಿರಲಿಲ್ಲ. ನನ್ನ ತಂದೆ ಸರಿಯಾದ ಟ್ರೀಟ್​ವೆುಂಟ್ ಸಿಗದೆ ಅಸುನೀಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿಯೇ. ಖಾಸಗಿ ಆಸ್ಪತ್ರೆಗೆ ಹೋಗುವಷ್ಟು ಚೈತನ್ಯ ಆಗ ನಮಗಿರಲಿಲ್ಲ.

ಕ್ರಮೇಣ ಪರಿಸ್ಥಿತಿ ಬದಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾದವು. ವೈದ್ಯಕೀಯ ಶಿಕ್ಷಣ ಪಡೆದವರ ಸಂಖ್ಯೆ ಜಾಸ್ತಿಯಾಯಿತು. ಹೊಸ ಹೊಸ ಸಂಶೋಧನೆಗಳಾದವು. ವೈದ್ಯಕೀಯ ಸೌಲಭ್ಯದ ಪರಿಕಲ್ಪನೆಯೇ ಬದಲಾಯಿತು. ನರ್ಸಿಂಗ್​ಹೋಮ್ಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಜನರಲ್ ಫಿಸಿಷಿಯನ್​ಗಳಿಗಿಂತ ಸ್ಪೆಷಲಿಸ್ಟ್​ಗಳಿಗೆ ಹೆಚ್ಚಿನ ಪ್ರಾಮುಖ್ಯ ಬಂದಿತು. ಕೇವಲ ಎಂ.ಬಿ.ಬಿ.ಎಸ್ ಮಾಡಿಕೊಂಡವರಿಗೆ ಬೆಲೆ ಇಲ್ಲದಂತಾಯಿತು. ಒಂದು ಕಾಲಕ್ಕೆ ಎಲ್.ಎಂ.ಪಿ.ಗಳೇ ಪ್ರಸಿದ್ಧರಾಗಿರುತ್ತಿದ್ದುದು ಇತಿಹಾಸವಾಯಿತು. ಎಂ.ಡಿ. ಅನಿವಾರ್ಯವಾಯಿತು. ಪರಿಣಾಮವಾಗಿ ಎಂ.ಡಿ. ಸೀಟುಗಳು ತುಟ್ಟಿಯಾದವು, ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗತೊಡಗಿದವು. ವೈದ್ಯಕೀಯ ಕ್ಷೇತ್ರ ಬಂಡವಾಳಶಾಹಿಗಳ ಪಾಲಾಯಿತು. ಹಣ ಹೂಡಿದವರು ಮತ್ತೆ ಅದನ್ನು ಪಡೆಯುವುದು ಮಾತ್ರವಲ್ಲ, ಹಾಕಿದ ಬಂಡವಾಳಕ್ಕೆ ಲಾಭ ಬರದಿದ್ದರೆ ಹೇಗೆ?

ಇತ್ತೀಚಿನ ಒಂದು ಉದಾಹರಣೆ- ನನ್ನ ಪರಿಚಿತರ ಮನೆಯಲ್ಲಿ ನಡೆದ ಘಟನೆ. ಏಳೆಂಟು ವರ್ಷದ ಮಗು ಶಾಲೆಗೆ ಹೋಗಿತ್ತು. ಅದೊಂದು ಪ್ರತಿಷ್ಠಿತ ಶಾಲೆ. ಲಕ್ಷಾಂತರ ರೂಪಾಯಿ ದೇಣಿಗೆ ಪಡೆಯುವಂಥದು. ಶಾಲೆಯ ಪ್ರತಿಷ್ಠೆಯೆಂದರೆ ಈಗ ಅದೇ ತಾನೇ…?! ಶ್ರೀಮಂತ ಮಕ್ಕಳಿಗೆ ಮಾತ್ರ ಅಲ್ಲಿ ಪ್ರವೇಶ. ಫೈವ್​ಸ್ಟಾರ್ ಫೆಸಿಲಿಟಿ ಇದೆ ಎಂಬುದು ಆ ಶಾಲೆಯ ಹೆಗ್ಗಳಿಕೆ. ಒಂದು ಬೆಳಗ್ಗೆ ಶಾಲೆಯಿಂದ ಮಗುವಿನ ತಂದೆಗೆ ದೂರವಾಣಿ ಕರೆಬಂತು. ಮಗು ಹೊಟ್ಟೆನೋವಿನಿಂದ ನರಳುತ್ತಿದೆ, ಬೇಗ ಶಾಲೆಗೆ ಬನ್ನಿ ಎಂಬುದು ಕರೆಯ ಸಾರಾಂಶ. ಆ ತಂದೆ ದೊಡ್ಡ ಕಂಪನಿಯ ಜವಾಬ್ದಾರಿ ಹುದ್ದೆಯಲ್ಲಿರುವಂಥವನು, ನನ್ನ ಗೆಳೆಯನ ಮಗ, ಕರೆ ಬಂದ ತಕ್ಷಣ ಹೋಗಲು ಸಾಧ್ಯವೇ? ಆತ ತನ್ನ ಸಹಾಯಕನಿಗೆ ಸೂಚಿಸಿದ. ಆತ ತನ್ನ ಸಹಾಯಕನನ್ನು ಮನೆಗೆ ಕಳುಹಿಸಿದ. ಮಗುವಿನ ತಾಯಿಯೂ ಉದ್ಯೋಗಿ. ಅವಳಿಗೂ ಬಿಡುವೆಲ್ಲಿ್ಲುತ್ತದೆ? ಅಷ್ಟರಲ್ಲಿ ಮಗ ಮನೆಯಲ್ಲಿದ್ದ ತನ್ನ ಅಪ್ಪನಿಗೆ ತಿಳಿಸಿ ಹೊರಡಲು ಸಿದ್ಧವಾಗಿರಲು ಸೂಚಿಸಿದ್ದ. ತಾತ ಮರಿ ಸಹಾಯಕನ ಜತೆ ಮಗುವಿನ ರಕ್ಷಣೆಗೆ ಧಾವಿಸಿಬಂದರು. ಮನೆಯಲ್ಲಿದ್ದ ಅಜ್ಜಿ, ‘ಮಗು ನೆನ್ನೆ ಏನೇನೋ ತಿಂದಿತ್ತು. ಅಜೀರ್ಣವಾಗಿರಬಹುದು, ಮಗು ಟಾಯ್ಲೆಟ್​ಗೆ ಹೋದರೆ ಸರಿಹೋಗಬಹುದು’ ಎಂದು ಹೇಳಿದರು. ಅದನ್ನು ಕೇಳಿಸಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಅಷ್ಟರಲ್ಲಿ ಫೋನಿನಲ್ಲಿಯೇ ಮಾತನಾಡಿ ಮಗುವನ್ನು ನರ್ಸಿಂಗ್​ಹೋಮ್ೆ ಸೇರಿಸಲಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಮಗುವಿನ ತಂದೆ ತಾಯಿ ಎಲ್ಲರೂ ಬಂದರು. ‘ಎಷ್ಟು ಖರ್ಚಾದರೂ ಪರವಾಗಿಲ್ಲ, ಮಗುವಿಗೆ ಏನೂ ತೊಂದರೆಯಾಗಬಾರದು’ ಎಂಬ ತಂದೆಯ ಮಾತು ಡಾಕ್ಟರರಿಗೆ ತಾಕಿತು. ಎಲ್ಲ ರೀತಿಯ ಪರೀಕ್ಷೆಗಳೂ ನಡೆದವು. ಯಾವ ರೀತಿಯ ರಿಸ್ಕ್ ತೆಗೆದುಕೊಳ್ಳಬಾರದಲ್ಲ! ಕೆಲ ಹೊತ್ತಿನಲ್ಲಿ ಮಗು ಮಲವಿಸರ್ಜನೆ ಮಾಡಿ ಮಂದಹಾಸ ಬೀರಿತು. ಎಲ್ಲರ ಮುಖದಲ್ಲೂ ನಿರಾಳನಗೆ. ಮುನ್ನೆಚ್ಚರಿಕೆ ಕಾರಣವಾಗಿ ಸಂಜೆಯವರೆಗೂ ಮಗು ಆಸ್ಪತ್ರೆಯಲ್ಲಿಯೇ ಇತ್ತು. ಸಂಜೆ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದರು. ನರ್ಸಿಂಗ್​ಹೋಮ್ ಬಿಲ್ ಹತ್ತು ಸಾವಿರ ದಾಟಿತ್ತು. ಪರವಾಗಿಲ್ಲ! ಮಗುವಿಗೇನೂ ತೊಂದರೆಯಾಗಲಿಲ್ಲವಲ್ಲ! ಮನೆಗೆ ಬಂದಾಗ ಅಜ್ಜಿ ವಿಷಯವೆಲ್ಲಾ ಕೇಳಿ ‘ಮಗು ಮಲ ವಿಸರ್ಜಿಸಲು ಹತ್ತು ಸಾವಿರವೇ? ಹರಳೆಣ್ಣೆ ಕುಡಿಸಿದ್ದರಾಗಿತ್ತು’ ಎಂದದ್ದು ಯಥಾಪ್ರಕಾರ ಯಾರಿಗೂ ಕೇಳಿಸಲಿಲ್ಲ.

ಇದು ಇಂದಿನ ನಮ್ಮ ಆರೋಗ್ಯ ಕ್ಷೇತ್ರದ ಸ್ವರೂಪ. ಅತ್ಯುನ್ನತ ಮಟ್ಟದ ಎಲ್ಲ ಸೌಕರ್ಯಗಳೂ ಈಗ ದೊರೆಯುತ್ತವೆ- ನಾವೆಲ್ಲ ಚಿರಂಜೀವಿಗಳಾಗಬಹುದಾದಷ್ಟು! ಆದರೆ ಅದಕ್ಕೆ ತಗಲುವ ವೆಚ್ಚ? ಇಂದು ನೀವು ಸುಮ್ಮನೆ ಯಾವುದೋ ನೋವೆಂದು ಡಾಕ್ಟರ ಬಳಿ ಹೋದರೆ ಸಾಕು, ಮೊದಲಿಗೇ ಅವರು ಒಂದು ದೊಡ್ಡಪಟ್ಟಿ ಕೊಟ್ಟು ಈ ಎಲ್ಲ ಪರೀಕ್ಷೆಗಳನ್ನೂ ಮಾಡಿಸಿಕೊಂಡು ಬನ್ನಿ ಎಂದು ಹೇಳುತ್ತಾರೆ. ಆ ಪರೀಕ್ಷೆಗಳಿಗೇ ನಿಮಗೆ ನೂರಾರು ರೂಪಾಯಿಗಳು ಖರ್ಚಾಗುತ್ತವೆ. ನಂತರ ಅದನ್ನು ಪರಿಶೀಲಿಸಿ ನಿಮ್ಮ ಈ ರಿಪೋರ್ಟನ್ನು ಒಮ್ಮೆ ತಜ್ಞರಿಗೆ ತೋರಿಸುವುದು ಒಳ್ಳೆಯದು ಎಂದು ಸಲಹೆ ನೀಡುತ್ತಾರೆ. ತಜ್ಞರೆಂದರೆ ಒಬ್ಬರೇ ಅಲ್ಲ. ದೇಹದ ಒಂದೊಂದು ಅವಯವಕ್ಕೆ ಒಬ್ಬರು ತಜ್ಞರು. ಇತ್ತೀಚೆಗೆ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಲು ನೇತ್ರತಜ್ಞರ ಬಳಿಗೆ ಹೋಗಿದ್ದ ನನ್ನ ಗೆಳೆಯರೊಬ್ಬರು ಆ ಪ್ರಸಂಗವನ್ನು ತಮಾಷೆಯಾಗಿ ವಿವರಿಸುತ್ತಿದ್ದರು. ಅವರಿಗೆ ಎರಡೂ ಕಣ್ಣುಗಳ ಸಮಸ್ಯೆಯಿತ್ತು. ಡಾಕ್ಟರು ಎಡಗಣ್ಣನ್ನು ಮಾತ್ರ ಪರೀಕ್ಷಿಸಿದರಂತೆ. ಇನ್ನೊಂದು ಕಣ್ಣನ್ನು ಪರೀಕ್ಷಿಸಲು ಮತ್ತೊಬ್ಬ ಡಾಕ್ಟರನ್ನು ಸೂಚಿಸಿದರಂತೆ. ಯಾಕೆಂದು ಕೇಳಿದಾಗ ಅವರು ‘ನಾನು ಎಡಗಣ್ಣಿನ ಸ್ಪೆಷಲಿಸ್ಟ್, ಬಲಗಣ್ಣನ್ನು ಪರೀಕ್ಷಿಸಲು ಇನ್ನೊಬ್ಬರು ಸ್ಪೆಷಲಿಸ್ಟ್ ಇದ್ದಾರೆ’ ಎಂದರಂತೆ. ಇದನ್ನು ಕೇಳಿ ನೀವು ನಗುತ್ತೀರಿ ಎಂದು ನಾನು ಬಲ್ಲೆ. ಆದರೆ ನಮ್ಮ ಪರಿಸ್ಥಿತಿ ಹೀಗೆಯೇ ಇದೆ. ಈಗ ನಮ್ಮ ಆರೋಗ್ಯ ಹದಗೆಟ್ಟರೆ ಈ ‘ಪರೀಕ್ಷೆ’ಗಳಿಂದ ಪಾರಾಗಿ ‘ಏನೂ ಸಮಸ್ಯೆಯಿಲ್ಲ’ ಎಂದು ರಿಪೋರ್ಟ್ ಪಡೆಯುವುದು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತಲೂ ಕಷ್ಟಕರವಾದದ್ದು. ನಂತರ ಡಾಕ್ಟರು ಕೊಡುವ ಔಷಧಗಳ ಉದ್ದಪಟ್ಟಿ. ಈ ಮಾತ್ರೆ ತೆಗೆದುಕೊಳ್ಳಲೇಬೇಕು. ಆದರೆ ಅದರಿಂದ ಮತ್ತೇನೋ ಸಮಸ್ಯೆ ಉದ್ಭವಿಸುತ್ತದೆ. ಅದರ ‘ಸೈಡ್ ಎಫೆಕ್ಟ್’ ತಡೆಯಲು ಮತ್ತೊಂದು ಮಾತ್ರೆ. ಇವೆರಡೂ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಶಕ್ತಿಹೀನತೆ ಉಂಟಾಗುತ್ತದೆ. ಚೇತರಿಸಿಕೊಳ್ಳಲು ಮಗದೊಂದು ಮಾತ್ರೆ. ಹೀಗೆ ಮಾತ್ರೆಗಳ ಪಟ್ಟಿ ಬೆಳೆಯುತ್ತದೆ. ಇದೆಲ್ಲಾ ಅಗತ್ಯವೇ? ಖಂಡಿತಾ ಅಗತ್ಯ, ರೋಗಿಗಲ್ಲ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಗಳಿಗೆ.

ಈಗ ವೈದ್ಯಕೀಯ ಕ್ಷೇತ್ರ ಒಂದು ದೊಡ್ಡಜಾಲ. ಅದರ ಒಂದು ತುದಿಯಲ್ಲಿ ಬಡಪಾಯಿ ರೋಗಿಯಿದ್ದರೆ ಮತ್ತೊಂದು ತುದಿಯಲ್ಲಿ ಸಾವಿರಾರು ಕೋಟಿ ಹೂಡಿರುವ ಬಂಡವಾಳಶಾಹಿ ವ್ಯವಸ್ಥೆ ಇದೆ. ಡಾಕ್ಟರೆಂಬುವವರು ಈ ವ್ಯವಸ್ಥೆಯ ಒಂದು ಪಾತ್ರವಷ್ಟೆ. ಕಣ್ಣಿಗೆ ಕಾಣಿಸುವ ಪಾತ್ರ. ಆದರೆ ತೆರೆಮರೆಯಲ್ಲಿ ವಿಶ್ವವ್ಯಾಪಿಯಾದ ಬೃಹತ್ ವ್ಯವಸ್ಥೆಯಿದೆ. ನಮಗೆ ಯಾವ ಪರೀಕ್ಷೆ ಮಾಡಬೇಕು, ಯಾವ ಔಷಧ ಕೊಡಬೇಕು, ಯಾವ ಕಂಪನಿಯ ಔಷಧ ಕೊಡಬೇಕು, ಯಾವ ಆಪರೇಷನ್ ಆಗಬೇಕು, ಎಷ್ಟು ದಿನ ಆಸ್ಪತ್ರೆಯಲ್ಲಿರಬೇಕು ಇವೆಲ್ಲವನ್ನೂ ನಿರ್ಧರಿಸುವವರು ನಮ್ಮನ್ನು ನೋಡಿಕೊಳ್ಳುತ್ತಿರುವ ಡಾಕ್ಟರಲ್ಲ, ಅವರ ಮೂಲಕ ಈ ವ್ಯವಸ್ಥೆಯ ಹಿಂದಿರುವ ಸೂತ್ರಧಾರಿ ಬಂಡವಾಳಶಾಹಿಗಳು. ಅವರಾಡಿಸಿದಂತೆ ಡಾಕ್ಟರು ಆಡುತ್ತಾರೆ. ಹಾಗೆ ನೋಡಿದರೆ ವೈದ್ಯರೂ ಒಂದು ರೀತಿ ಅಸಹಾಯಕರು ಅನ್ನಿಸುತ್ತದೆ. ಡಾಕ್ಟರರನ್ನೇ ದೂರುವುದರಲ್ಲಿ ಅರ್ಥವಿಲ್ಲ. ಬಹುಪಾಲು ವೈದ್ಯರು ಮಾನವೀಯ ಗುಣವುಳ್ಳವರಿದ್ದಾರೆ. ನಮ್ಮ ದಿನನಿತ್ಯದ ಬದುಕಿನಲ್ಲಿ ಅವರು ವಹಿಸುತ್ತಿರುವ ಜವಾಬ್ದಾರಿಯುತ ಪಾತ್ರವನ್ನು ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅವರೂ ಅನಿವಾರ್ಯವೆಂಬಂತೆ ಪಾಲುದಾರರಾಗುತ್ತಿದ್ದಾರೆ.

ಇತ್ತೀಚೆಗೆ ನಮ್ಮ ಆಸ್ಪತ್ರೆಗಳಲ್ಲಿನ ರಗಳೆಗಳ ಉದಾಹರಣೆಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ರಾಜಕೀಯ ಕೃಪಾಪೋಷಿತ ಕಾರ್ಪೇರೇಟ್ ವಲಯದ ಕಬಂಧಬಾಹು ಇಲ್ಲಿಯೂ ತನ್ನ ಕೈಚಾಚಿದೆ. ಪರಿಣಾಮ ಕುರುಡು ಕಾಂಚಾಣ ತನ್ನ ಕಾಲಿಗೆ ಸಿಕ್ಕವರನ್ನೆಲ್ಲ ತುಳಿಯುತ್ತಲಿದೆ. ಇವೆಲ್ಲದರ ನಡುವೆ ನಮ್ಮ ಬಡರೈತನೂ ಸೇರಿದಂತೆ ನಾವೆಲ್ಲರೂ ಆರೋಗ್ಯ ವಲಯಕ್ಕೆಂದೇ ಕಟ್ಟುತ್ತಿರುವ ಕೋಟ್ಯಂತರ ರೂಪಾಯಿಗಳ ತೆರಿಗೆಹಣ ಯಾರ ಜೇಬು ಸೇರುತ್ತಿದೆ? ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಿದರೆ ಖಾಸಗಿ ವಲಯದ ಶೋಷಣೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾದೀತು. ಆದರೆ ಅದು ಸಾಧ್ಯವೇ? ಖಾಸಗಿ ಆಸ್ಪತ್ರೆಯಿರಲಿ, ಸರ್ಕಾರಿ ಆಸ್ಪತ್ರೆಯಿರಲಿ ನರಳುತ್ತಿರುವವರು ಸಾಮಾನ್ಯ ಜನತೆ. ಸಂಬಂಧಪಟ್ಟ ಎಲ್ಲರೂ ಜೀವದ ಜತೆ ಚೆಲ್ಲಾಟವಾಡದೆ ಮಾನವೀಯತೆಯ ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂಬುದು ಜನಸಾಮಾನ್ಯರ ಪರವಾಗಿ ನಾವು ಮಾಡಿಕೊಳ್ಳಬಹುದಾದ ಮನವಿ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top