Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಮೃದುಭಾಷಿಗೆ ಮತ್ತೆ ಹೊಣೆ

Sunday, 24.12.2017, 3:02 AM       No Comments

| ಉಮೇಶ್​ಕುಮಾರ್ ಶಿಮ್ಲಡ್ಕ

ರಾಜಕೀಯ ಜಿದ್ದಾಜಿದ್ದಿಯಿಂದ ಕೂಡಿದ್ದ ಗುಜರಾತ್ ಚುನಾವಣೆ ಫಲಿತಾಂಶ 2019ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿದೆ. ಸತತ ಆರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಟ್ಟಿತು. ಕಳೆದ ಅವಧಿಗೆ 115 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈಗ 16 ಸ್ಥಾನಗಳನ್ನು ಕಳೆದುಕೊಂಡಿದೆ. ಇಷ್ಟಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯಾರು ಎಂಬ ವಿಚಾರ ಫಲಿತಾಂಶ ಬಂದು ಮೂರ್ನಾಲ್ಕು ದಿನವಾದರೂ ಇತ್ಯರ್ಥವಾಗಿರಲಿಲ್ಲ. ಹಿಂದಿನ ಅವಧಿಯ ಕೊನೆಯ 14-15 ತಿಂಗಳು ಬಾಕಿ ಇರುವಾಗ ಮುಖ್ಯಮಂತ್ರಿ ಪಟ್ಟಕ್ಕೇರಿದ್ದ ವಿಜಯ್ ರೂಪಾಣಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರೇ ಮುಂದುವರಿಯಲಿದ್ದಾರೆ ಎಂಬ ಮಾಹಿತಿ ಶುಕ್ರವಾರವಷ್ಟೇ ಖಾತ್ರಿಯಾಯಿತು. ಡಿ.26ಕ್ಕೆ ಪ್ರಮಾಣವಚನಕ್ಕೆ ವೇದಿಕೆ ಸಿದ್ಧವಾಗಿದೆ.

ಆಡಳಿತ ವಿರೋಧಿ ಅಲೆ, ಪಟೇಲ್ ಸಮುದಾಯದವರ ವಿರೋಧ ಇವೆಲ್ಲವುಗಳ ನಡುವೆ ಚುನಾವಣೆ ಘೋಷಣೆಯಾದಾಗ ಅದರ ಲಾಭ ಪಡೆಯಲೆತ್ನಿಸಿದ್ದು ಕಾಂಗ್ರೆಸ್. ಆನಂದಿಬೆನ್ ನಂತರ 2016ರ ಆಗಸ್ಟ್ 7ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವಿಜಯ್ ರೂಪಾಣಿ ಮೃದುಭಾಷಿ. ಒಂದು ವರ್ಷ ಕಾಲ ಸದ್ದಿಲ್ಲದೇ ನಿಭಾಯಿಸಿದ ಅವರ ಹೆಸರು ಚುನಾವಣಾ ಪ್ರಚಾರದ ವೇಳೆ ಹೆಚ್ಚು ಸದ್ದು ಮಾಡಲಿಲ್ಲ. ರಾಜ್​ಕೋಟ್ ಪಶ್ಚಿಮ ಕ್ಷೇತ್ರದಲ್ಲಿ ರೂಪಾಣಿ ಕಣಕ್ಕೆ ಇಳಿದಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್​ನ ಇಂದ್ರಾನಿಲ್ ರಾಜ್ಯಗುರು ವಿರುದ್ಧ 53,755 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಇಷ್ಟಾಗ್ಯೂ, ಬಿಜೆಪಿಗೆ ಕಳೆದ ಅವಧಿಯಲ್ಲಿ ಗೆದ್ದಷ್ಟು ಸ್ಥಾನಗಳನ್ನು ಉಳಿಸಿಕೊಳ್ಳಲಾಗದ ಕಾರಣ ರೂಪಾಣಿ ಮುಖ್ಯಮಂತ್ರಿಯಾಗಿ ಮುಂದುವರಿಯುವರೇ ಎಂಬ ಸಂದೇಹ ಕಾಡಿತ್ತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠ ಕಾರ್ಯಕರ್ತರಾದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಒಂದು ವರ್ಷದ ಅವಧಿಯಲ್ಲಿ ಸದ್ದಿಲ್ಲದೇ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ಮತ್ತು ಆರೆಸ್ಸೆಸ್ ನಿಷ್ಠೆ, ಷಾ ಆಪ್ತತೆ ಅವರನ್ನು ಮತ್ತೆ ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರಿಯುವಂತೆ ಮಾಡಿತು. ಒಟ್ಟಾರೆ ಕಳೆದ ಮೂರು ವರ್ಷಗಳ ಗುಜರಾತ್ ಆಳ್ವಿಕೆ ಗಮನಿಸಿದರೆ, ಆನಂದಿ ಬೆನ್ ಪಟೇಲ್ ಆಳ್ವಿಕೆಯ ವೇಳೆ ಗುಜರಾತ್​ನ ಮೇಲಿದ್ದ ಬಿಜೆಪಿ ಹಿಡಿತ ಸ್ವಲ್ಪ ಸಡಿಲಗೊಂಡಿತು. ಅದಕ್ಕೆ ಕಾರಣಗಳು ಅನೇಕ. ಪಟೇಲ್ ಸಮುದಾಯದ ಪ್ರತಿಭಟನೆ, ಅದಾಗಿ 2016ರ ಜುಲೈ ಕೊನೆಯಲ್ಲಿ ಗೋವಿನ ವಿಚಾರದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣವೂ ಹಿನ್ನಡೆ ಉಂಟುಮಾಡಿತು. ಏತನ್ಮಧ್ಯೆ ಆನಂದಿ ಬೆನ್ ಮಕ್ಕಳ ವಹಿವಾಟೂ ವಿವಾದಕ್ಕೀಡಾಯಿತು. ಹೀಗೆ, ಆನಂದಿ ಬೆನ್ ರಾಜೀನಾಮೆ ಬಳಿಕ ವಿಜಯ್ ರೂಪಾಣಿ ಮುಖ್ಯಮಂತ್ರಿಯಾದರು. ಪಟೇಲ್ ಸಮುದಾಯದವರ ಅಸಹನೆ, ಬಣ ರಾಜಕೀಯ ಹೆಚ್ಚಾಗಿದ್ದು ಬಿಜೆಪಿ ವರಿಷ್ಠರ ಪಾಲಿಗೆ ತಲೆನೋವಾಗಿತ್ತು. ಇವನ್ನೆಲ್ಲ ಶಮನಗೊಳಿಸಿ ಸೂಕ್ತ ವಾರಸುದಾರರನ್ನು ಆಯ್ಕೆ ಮಾಡಬೇಕು ಎಂದಾಗ ಅಮಿತ್ ಷಾ ಕಣ್ಣಿಗೆ ಕಾಣಿಸಿದ್ದು ಜೈನ(ಬನಿಯಾ) ಸಮುದಾಯದ ವಿಜಯ್ ರೂಪಾಣಿ. ಪಟೇಲ್ ಮೀಸಲಾತಿ ಹೋರಾಟವನ್ನು ತಣ್ಣಗಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು ಅವರು. ಪರಿಣಾಮ, ಎಲ್ಲರ ನಿರೀಕ್ಷೆ, ರಾಜಕೀಯ ಲೆಕ್ಕಾಚಾರಗಳಿಗೆ ವ್ಯತಿರಿಕ್ತವಾಗಿ ವಿಜಯ್ ರೂಪಾಣಿ ಇದೀಗ ಸೌರಾಷ್ಟ್ರ ಪ್ರದೇಶದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಸೌಮ್ಯ ಸ್ವಭಾವ, ಸಾಮಾನ್ಯ ಕಾರ್ಯಕರ್ತರೊಡನೆ ಬೆರೆಯುವ ಸರಳತೆ, ಜನರ ನಾಡಿಮಿಡಿತವನ್ನು ಅರಿತು ಕೂಡಲೇ ಸ್ಪಂದಿಸುವ ಗುಣ ಇವೆಲ್ಲವೂ ಅವರ ರಾಜಕೀಯ ಬದುಕಿನ ತಳಹದಿಯನ್ನು ಗಟ್ಟಿಗೊಳಿಸಿವೆ.

ರೂಪಾಣಿ ಮೂಲತಃ ಮ್ಯಾನ್ಮಾರಿನ ರಂಗೂನ್(ಪ್ರಸ್ತುತ ಯಾಂಗೂನ್)ನವರು. ಅವರು ಹುಟ್ಟಿದ್ದು 1956ರ ಆಗಸ್ಟ್ 2ರಂದು. ತಂದೆ ರಮಣಿಕ್​ಲಾಲ್, ತಾಯಿ ಮಾಯಾ ಬೆನ್. ಪತ್ನಿ ಅಂಜಲಿ ರೂಪಾನಿ. ಒಬ್ಬ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.

ಶಿಕ್ಷಣ ಮತ್ತು ರಾಜಕೀಯ ಬದುಕಿನ ಬಗ್ಗೆ ಹೇಳುವುದಾದರೆ, ಅವರು ಶಾಲಾ ದಿನಗಳಿಂದಲೇ ಆರೆಸ್ಸೆಸ್ ಶಾಖೆಗಳಿಗೆ ಹೋಗುತ್ತಿದ್ದರು. ಸೌರಾಷ್ಟ್ರ ವಿಶ್ವವಿದ್ಯಾಲಯದಿಂದ ಬಿ.ಎ. ಹಾಗೂ ಎಲ್​ಎಲ್​ಬಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾರ್ವಜನಿಕ ಜೀವನ ಆರಂಭಿಸಿದರು. ಸಂಘದ ಪ್ರಚಾರಕರಾಗಿ ತೊಡಗಿಸಿಕೊಂಡು ಬಳಿಕ ಬಿಜೆಪಿ ಸೇರ್ಪಡೆಗೊಂಡು ಹಲವು ಸಂಘಟನಾ ಹೊಣೆಗಾರಿಕೆ ನಿಭಾಯಿಸಿದರು, 2014ರ ಆಗಸ್ಟ್​ನಲ್ಲಿ ವಜುಭಾಯ್ ವಾಲಾ ಕರ್ನಾಟಕದ ರಾಜ್ಯಪಾಲರಾಗಿ ನಿಯುಕ್ತರಾದಾಗ ಅವರಿಂದ ತೆರವಾದ ರಾಜ್​ಕೋಟ್​ನ ವಿಧಾನಸಭಾ ಕ್ಷೇತ್ರದ ಉಪಚುನಾವಣೆ(2014 ಅಕ್ಟೋಬರ್ 19)ಗೆ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದರಲ್ಲದೆ, ಆನಂದಿ ಬೆನ್ ಪಟೇಲ್ ಸಂಪುಟದಲ್ಲಿ ಸಾರಿಗೆ, ಜಲ ವಿತರಣೆ, ಕಾರ್ವಿುಕ ಹಾಗೂ ಉದ್ಯೋಗ ಖಾತೆಗಳ ಹೊಣೆ ಹೊತ್ತಿದ್ದರು.

ಈಗ ಮುಖ್ಯಮಂತ್ರಿಯಾಗಿ ಮುಂದುವರಿಯುವ ಅವಕಾಶ ಸಿಕ್ಕಿದ ಕಾರಣ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸಂಘಟನೆಯನ್ನು ಆಡಳಿತ ಸಾಧನೆ ಮೂಲಕ ಇನ್ನಷ್ಟು ಗಟ್ಟಿಗೊಳಿಸಬೇಕಾದ ಹೊಣೆಗಾರಿಕೆಯೂ ರೂಪಾಣಿ ಹೆಗಲೇರಿದೆ.

Leave a Reply

Your email address will not be published. Required fields are marked *

Back To Top