Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಮೂರು ದಶಕಗಳಲ್ಲಿ ಪಶ್ಚಿಮಘಟ್ಟ ಅರಣ್ಯ ಪ್ರದೇಶ ತೀವ್ರ ಕ್ಷೀಣ

Thursday, 14.09.2017, 3:03 AM       No Comments

| ವೇಣುವಿನೋದ್ ಕೆ.ಎಸ್.

ಮಂಗಳೂರು: ಕಾಡು ನಾಶವಾಗುತ್ತಿದೆ ಎಂಬುದು ಸಾಮಾನ್ಯ ಮಾತು. ಆದರೆ ಇದು ಆಡುಮಾತಾಗಿ ಉಳಿಯದೆ ವೈಜ್ಞಾನಿಕವಾಗಿ ದೃಢಪಟ್ಟಿದೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ ಡಾ.ಟಿ.ವಿ. ರಾಮಚಂದ್ರ ನೇತೃತ್ವದ ತಂಡ ಪಶ್ಚಿಮ ಘಟ್ಟದಲ್ಲಿ ನಡೆಸಿದ ಅಧ್ಯಯನ ಸದಾ ಹಸಿರಿನ ಕಾಡು ಮತ್ತು ಎಲೆ ಉದುರಿಸುವ ಕಾಡು, ಅತಿಯಾದ ‘ಅಭಿವೃದ್ಧಿ ಕಾಮಗಾರಿ’ ಪರಿಣಾಮ ಕುಸಿತ ಕಂಡಿದೆ ಎಂಬುದನ್ನು ವಿವರಿಸಿದೆ.

1973ರಿಂದ 2016ರವರೆಗೆ ಆಗಿರುವ ಬೆಳವಣಿಗೆಗಳನ್ನು ಈ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಇದಕ್ಕಾಗಿ ಕ್ಷೇತ್ರಾಧ್ಯಯನ, ನಕ್ಷೆ, ಜಿಪಿಎಸ್, ಸಿಮ್ಯುಲೇಶನ್ ಇತ್ಯಾದಿ ವಿಧಾನಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಜಗತ್ತಿನ ಜೀವ ವೈವಿಧ್ಯದ 35 ಹಾಟ್​ಸ್ಪಾಟ್​ಗಳಲ್ಲೊಂದಾದ ಪಶ್ಚಿಮ ಘಟ್ಟದಲ್ಲಿ ಬರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ರಾಜೀವ್ ಗಾಂಧಿ ಹುಲಿ ಮೀಸಲು ಪ್ರದೇಶ (ಆರ್​ಟಿಆರ್) ನಾಗರಹೊಳೆ ಮತ್ತು ಬಂಡೀಪುರ ಹುಲಿ ಮೀಸಲು ಪ್ರದೇಶ ಈ ಮೂರು ತಾಣಗಳಲ್ಲಿ ಅಧ್ಯಯನ ಮಾಡಲಾಗಿದೆ.

ಸದಾ ಹಸಿರಿನ ಕಾಡಿಗೆ ಕುತ್ತು: ಅಧ್ಯಯನ ಪ್ರಕಾರ ಮೂರೇ ದಶಕದಲ್ಲಿ ಕುದುರೆಮುಖದ ಸದಾ ಹಸಿರಿನ ಕಾಡು ಶೇ.33.46ರಿಂದ ಶೇ.27.22ಕ್ಕೆ ಕುಸಿದಿದೆ. ಬಂಡೀಪುರದಲ್ಲಿ ಎಲೆ ಉದುರಿಸುವ ಕಾಡು ಶೇ.61.69ರಿಂದ ಶೇ.47.3ಕ್ಕೆ ಇಳಿದಿದೆ. ನಾಗರಹೊಳೆಯಲ್ಲೂ ಎಲೆ ಉದುರಿಸುವ ಕಾಡು ಶೇ.52.72 ರಿಂದ 42.77ಕ್ಕೆ ಬಿದ್ದಿದೆ. ಈ ಮೂರೂ ಪ್ರದೇಶಗಳು ಹುಲಿ, ಆನೆಗಳ ಸಂರಕ್ಷಿತ ಪ್ರದೇಶಗಳು, ಅಲ್ಲದೆ ಪಶ್ಚಿಮ ಘಟ್ಟದ್ದೇ ಆದ ಗಿಡ, ಪ್ರಾಣಿ ಸಂಕುಲಗಳಿಗೆ ಆಶ್ರಯತಾಣಗಳು.

ಯಾಕೆ ಕುಸಿತ?: ಪಶ್ಚಿಮ ಘಟ್ಟದಲ್ಲಿ ನಡೆಯುವ ರಸ್ತೆ ಕಾಮಗಾರಿಗಳು, ಡ್ಯಾಮ್ಳು, ಕೃಷಿ/ ತೋಟಗಾರಿಕೆಗಾಗಿ ಕಾಡು ಅತಿಕ್ರಮಣ, ಕಾಡುಮೃಗಗಳ ಬೇಟೆ, ಆಕ್ರಮಿಸುವ ಕಳೆ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ… ಹೀಗೆ ಪಟ್ಟಿ ಮಾಡಿದ್ದಾರೆ ವಿಜ್ಞಾನಿಗಳು. ಕುದುರೆ ಮುಖದಲ್ಲಿ 1973ರಲ್ಲಿ ತೋಟಗಾರಿಕೆ ಶೇ.20.79 ಇದ್ದುದು 2016ರಲ್ಲಿ ಶೇ.25.27ಕ್ಕೆ ಏರಿಕೆಯಾಗಿದೆ. ನಾಗರಹೊಳೆ ಭಾಗದಲ್ಲಿ ಕೃಷಿ 1973ರಲ್ಲಿ ಶೇ.22.46 ಇದ್ದುದು ಶೇ.28.75ಕ್ಕೆ ಏರಿದೆ. ಬಂಡೀಪುರದಲ್ಲಿ 1973ರಲ್ಲಿ ಶೇ.25 ಇದ್ದ ಕೃಷಿ ಶೇ.17.77(2016)ಕ್ಕೆ ಇಳಿದಿದೆಯಾದರೂ ಅದೇ ವೇಳೆ ತೋಟಗಾರಿಕೆ ಶೇ 6.87ರಿಂದ ಶೇ 25.8ಕ್ಕೆ ಏರಿದೆ.

ತಾಪಮಾನದಲ್ಲೂ ಏರಿಕೆ: 1992ರಲ್ಲಿ ಕುದುರೆಮುಖ ಭೂಪ್ರದೇಶದ ಸರಾಸರಿ ತಾಪಮಾನ 27.96 ಡಿಗ್ರಿ ಸೆಲ್ಸಿಯಸ್ ಇದ್ದರೆ 2016ರಲ್ಲಿ ಇದು 32.61ಕ್ಕೆ ಏರಿಕೆಯಾಗಿದೆ. ಅರಣ್ಯ ನಾಶದಿಂದ ಸೂರ್ಯ ಕಿರಣಗಳು ಹೆಚ್ಚು ಪ್ರಮಾಣದಲ್ಲಿ ಕಾಡಿನ ಮಧ್ಯೆ ಭೂಮಿಗೆ ತಲುಪುತ್ತಿವೆ. ನಾಗರಹೊಳೆಯ ತಾಪಮಾನ 28ರಿಂದ 38 ಡಿಗ್ರಿ ಸೆಲ್ಸಿಯಸ್ ತಲಪಿರುವುದು ಸಹಜ ಅರಣ್ಯ ಕಡಿದು ಸಾಗುವಾನಿ, ನೀಲಗಿರಿ ತೋಪು ಬೆಳೆಸಿದ್ದರಿಂದ ಎಂಬುದು ತಜ್ಞರ ವಿವರಣೆ.

ಈ ಅಧ್ಯಯನ ನಡೆಸಿದವರು ಬೆಂಗಳೂರಿನ ಐಐಎಸ್ಸಿ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ. ಪಶ್ಚಿಮ ಘಟ್ಟದ ಬಗ್ಗೆ ನಿರಂತರ ಅಧ್ಯಯನ ನಡೆಸಿಕೊಂಡು ಬಂದವರು.

ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ

ವಿಜ್ಞಾನಿಗಳು ಈಗಿನ ಪರಿಸ್ಥಿತಿ ಆಧರಿಸಿ ಮುಂದಿನ 10 ವರ್ಷದ ಸಿಮ್ಯುಲೇಶನ್ ಅಧ್ಯಯನ ಮಾಡಿದ್ದು, ಕುದುರೆ ಮುಖದ ಶೇ.27.22 ಸದಾ ಹಸಿರಿನ ಅರಣ್ಯ 2026ರ ವೇಳೆಗೆ ಶೇ.23ಕ್ಕೆ ಕುಸಿಯಬಹುದು ಎಂದು ತಿಳಿಸಿದ್ದಾರೆ. ನಾಗರಹೊಳೆಯಲ್ಲಿರುವ ಎಲೆ ಉದುರಿಸುವ ಕಾಡುಗಳ ಪ್ರಮಾಣ ಶೇ.47ರಿಂದ 40ಕ್ಕೆ ಇಳಿಯುವ ಸಾಧ್ಯತೆ ಇದೆ.

 

ಈಗಿರುವ ಪರಿಸ್ಥಿತಿಯನ್ನು ನಮ್ಮ ಅಧ್ಯಯನ ವಿವರಿಸಿದೆ. ಇದನ್ನು ಸರ್ಕಾರಗಳು ಅರ್ಥೈಸಿಕೊಂಡು ಅರಣ್ಯ ಸಂರಕ್ಷಣೆಯನ್ನು ಸರಿಯಾದ ರೀತಿಯಲ್ಲಿ ಕೈಗೊಳ್ಳದಿದ್ದರೆ ಅಮೂಲ್ಯ ಪಶ್ಚಿಮಘಟ್ಟದ ಜೀವವೈವಿಧ್ಯತೆಗೆ ಧಕ್ಕೆಯಾಗಲಿದೆ.

| ಡಾ.ಟಿ.ವಿ.ರಾಮಚಂದ್ರ ವಿಜ್ಞಾನಿ

Leave a Reply

Your email address will not be published. Required fields are marked *

Back To Top