Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಮುಸ್ಲಿಮರನ್ನು ಹೆದರಿಸಲು ರಾಜಕೀಯದಾಟ

Monday, 21.08.2017, 3:00 AM       No Comments

ದೇಶದ ಇತಿಹಾಸವನ್ನೊಮ್ಮೆ ತಿರುವಿ ಹಾಕಿದರೆ ಅದೆಷ್ಟೋ ಮುಸ್ಲಿಂ ನಾಯಕರು ರಾಷ್ಟ್ರಪತಿ, ಉಪರಾಷ್ಟ್ರಪತಿ ಮುಂತಾದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದನ್ನು ಕಾಣಬಹುದು. ಹೀಗಿರುವಾಗ ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು ಎಂದು ಹೇಳಿರುವ ಅನ್ಸಾರಿಯವರ ಮಾತನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಅವರಲ್ಲಿ ಇಂಥ ಕಲ್ಪನೆ ಹುಟ್ಟಿಕೊಂಡಿದ್ದಾದರೂ ಏತಕ್ಕೆ? ಮುಸ್ಲಿಮರನ್ನು ಹೆದರಿಸಲು ರಾಜಕೀಯದಾಟ

ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು ಎಂಬ ವಿಚಾರ ಈ ಹಿಂದೆಯೇ ಸಾಕಷ್ಟು ಬಾರಿ ಚರ್ಚೆಗೊಳಗಾಗಿತ್ತು. ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಆದರೆ ಉಪರಾಷ್ಟ್ರಪತಿ ಸ್ಥಾನದಲ್ಲಿರುವವರೊಬ್ಬರು ಅಧಿಕಾರಾವಧಿಯ ಕೊನೇಗಾಲದಲ್ಲಿ ಇಂತಹ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದರೆ ಇದು ಆತಂಕಕಾರಿ ವಿಚಾರವಲ್ಲವೇ? ದೇಶದ ಉಪರಾಷ್ಟ್ರಪತಿಯಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ವ್ಯಕ್ತಿ ಅಧಿಕಾರವಧಿಯ ಅಂತಿಮ ಘಟ್ಟದಲ್ಲಿ ಭಾರತೀಯತೆಯನ್ನು ಮುಸ್ಲಿಮೀಯತೆಯೊಂದಿಗೆ ಎಳೆದು ತಂದು ಜನರ ಮನಸ್ಸಿನಲ್ಲಿ ಪ್ರಶ್ನೆಯೊಂದನ್ನು ಹುಟ್ಟುಹಾಕಿದ್ದಾರೆ. ಹೌದು ಇಂತಹ ಅನಾಹುತಕಾರಿ ಕೆಲಸ ಮಾಡಿರುವುದು ಹಮೀದ್ ಅನ್ಸಾರಿ. ಅವರು ತಮ್ಮ ವಿದಾಯ ಭಾಷಣದಲ್ಲಿ ಇಂತಹ ಮಾತು ಹೇಳಿಲ್ಲ ಎನ್ನುವುದೇನೊ ನಿಜ. ಆದರೆ, ಟಿವಿ ಕಾರ್ಯಕ್ರಮದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನ್ಸಾರಿ, ‘ಮುಸ್ಲಿಮರು ಭಾರತದಲ್ಲಿ ಅಸುರಕ್ಷಿತರು ಎಂಬ ಭಾವನೆ ಹೊಂದಿರುವುದು ನಿಜ’ ಎಂದು ಒಪ್ಪಿಕೊಂಡಿದ್ದರು. ಆದರೆ ಅನ್ಸಾರಿ ಮಾತು ಎಷ್ಟು ಪೂರಕ? ಇದನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ಮುಸ್ಲಿಮರು ಭಾರತದಲ್ಲಿ ಅಸುರಕ್ಷಿತರು ಎಂಬ ಭಾವನೆ ಅವರಲ್ಲಿ ಹುಟ್ಟಿಕೊಂಡಿರುವುದು ನಿಜವೇ ಆಗಿದ್ದರೆ, ಅವರಿಂದ ಕೆಲವು ವಿಚಾರಗಳ ಬಗ್ಗೆ ಸ್ಪಷ್ಟೀಕರಣವನ್ನು ಕೇಳಲು ಬಯಸುತ್ತೇನೆ.

ಅನ್ಸಾರಿಯವರ ಈ ಹೇಳಿಕೆಯನ್ನು ಯಾರಾದರೂ ವಿರೋಧಿಸುತ್ತಾರೆ ಎಂದಾದರೆ ಅದರಲ್ಲಿ ಮುಸ್ಲಿಮರೇ ಮುಂಚೂಣಿಯಲ್ಲಿರಬೇಕು. ಮತ್ತು ಅನ್ಸಾರಿಯ ಹೇಳಿಕೆ ಅವರ ವ್ಯಕ್ತಿಗತ ಅಸುರಕ್ಷತೆ ಭಾವನೆಗೆ ಸಂಬಂಧಿಸಿದ ಹೇಳಿಕೆಯಾಗಿದೆ ಎಂದು ಹೇಳಬೇಕು. ಯಾವ ದೇಶದಲ್ಲಿ 15 ಕೋಟಿಗಿಂತಲೂ ಹೆಚ್ಚು ಮುಸ್ಲಿಮರಿದ್ದಾರೋ, ಯಾವ ರಾಷ್ಟ್ರದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾದೀಶ, ವಾಯು ಸೇನೆಯ ಮುಖ್ಯಸ್ಥ, ಮುಖ್ಯ ಚುನಾವಣಾ ಅಧಿಕಾರಿ ಮುಂತಾದ ಸಾವಿರಾರು ನಿರ್ಣಾಯಕ ಹುದ್ದೆಗಳನ್ನು ನಿರ್ವಹಿಸಿದ, ಪೊಲೀಸ್ ಸೇನೆ ಸೇರಿ ಹಲವು ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸಿರುವ ಮುಸ್ಲಿಮರಿರುವಾಗ, ಇತ್ತ ಬಾಲಿವುಡ್​ನಲ್ಲಿ ತಮ್ಮ ಉಪಸ್ಥಿತಿಯಿಂದ ಅದನ್ನು ‘ಖಾನ್​ವುಡ್’ ಎಂದು ಕರೆಯುವ ಮಟ್ಟಕ್ಕೆ ಪ್ರಭಾವಿಗಳಿರುವಾಗ, ಅಂತಹ ದೇಶದಲ್ಲಿ ಮುಸ್ಲಿಮರು ಅಸುರಕ್ಷಿತರು ಎಂದರೆ ಅದು ಆತ್ಮವಂಚನೆಯಲ್ಲದೆ ಇನ್ನೇನಾಗಲು ಸಾಧ್ಯ.

ಹಮೀದ್ ಅನ್ಸಾರಿಯವರೂ ಆ ರೀತಿ ಹೇಳಿಕೆ ನೀಡುವ ಮೂಲಕ ಈ ಆತ್ಮವಂಚನೆಯ ಕೆಲಸವನ್ನೇ ಮಾಡಿದ್ದಾರೆ. ನಾನು ಅವರನ್ನು ಯಾವತ್ತೂ ಓರ್ವ ವಿದ್ವಾನ್ ಆಗಿ, ಮತಬೇಧ ಮತ್ತು ಮನಭೇದಗಳನ್ನು ಮೆಟ್ಟಿನಿಂತ ಸಿದ್ಧಾಂತ ನಿಷ್ಠ ಭಾರತೀಯನನ್ನಾಗಿ ನೋಡುವ ಪ್ರಯತ್ನ ಮಾಡಿದ್ದೆ. ಆದರೆ ದೇಶದ ಉಪರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿಯುವ ದಿನ ಉದಾರ ಮನೋಭಾವದ ಸಂದೇಶ ನೀಡುವ ಬದಲಾಗಿ ಸಂಕೀರ್ಣ, ಮತೀಯ ಮತ್ತು ಸಾಂಪ್ರದಾಯಿಕ ರಾಜನೀತಿಗೆ ಸಂಬಂಧಿಸಿದ ಹೇಳಿಕೆ ನೀಡಿದರೆ ಅದನ್ನು ನಮ್ಮ ಈ ದೇಶಕ್ಕೆ ಮಾಡುತ್ತಿರುವ ಮೋಸ ಎಂದೇ ಹೇಳಬೇಕಷ್ಟೆ. ಅವರೊಬ್ಬ ಮುಸ್ಲಿಮರಾಗಿದ್ದ ಹೊರತಾಗಿಯೂ ಯಾವ ದೇಶ ಅವರಿಗೆ ಜೀವನದ ಉನ್ನತ ಪದವಿ ಮತ್ತು ಗೌರವ ನೀಡಿತ್ತೋ, ಆ ದೇಶದಲ್ಲಿ ತಮ್ಮ ಧರ್ಮೀಯರು ಅಸುರಕ್ಷತೆ ಭಾವನೆ ಹೊಂದಿದ್ದಾರೆ ಎಂದರೆ ಹೇಗೆ ನಂಬಲು ಸಾಧ್ಯ?

ಯಾವ ದೇಶದಲ್ಲಿ 5 ಲಕ್ಷ ಹಿಂದೂಗಳನ್ನು ಅವರದ್ದೇ ಸ್ವತಂತ್ರ ರಾಷ್ಟ್ರದಲ್ಲಿ ಶರಣಾರ್ಥಿಗಳನ್ನಾಗಿ ಮಾಡಲಾಗಿದೆಯೋ, ಎಲ್ಲಿ ಲಕ್ಷಗಟ್ಟಲೆ ಹಿಂದೂಗಳು ತಮ್ಮ ಮನೆ ಮತ್ತು ಹಳ್ಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದಕ್ಕೆ ಅವಕಾಶವಿಲ್ಲವೋ, ಎಲ್ಲಿ ಕಾಶ್ಮೀರದಿಂದ ಬಂಗಾಳದವರೆಗೆ ಬಂಗಾಳದಿಂದ ಕೇರಳದವರೆಗೆ ಹಿಂದು ವಿಚಾರಧಾರೆ ಹೊಂದಿರುವ ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತಿದೆಯೋ, ಎಲ್ಲಿ ಹಿಂದುಗಳ ಜನಸಂಖ್ಯೆ ಇಳಿಕೆ ಹಾದಿಯಲ್ಲಿದ್ದು ಮುಸ್ಲಿಮರ ಜನಸಂಖ್ಯೆ ಏರುಗತಿ ಯಲ್ಲಿದೆಯೋ… ಅಲ್ಲಿ ಅಸುರಕ್ಷತೆಯ ಭಾವ ಹಿಂದೂಗಳಲ್ಲಿ ಮೂಡಬೇಕೆ ಅಥವಾ ಮುಸ್ಲಿಮರಲ್ಲಿ ಮೂಡಬೇಕೆ?

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕವೂ ದೇಶದ ಉಪರಾಷ್ಟ್ರಪತಿ ಸ್ಥಾನದಲ್ಲಿದ್ದ ವ್ಯಕ್ತಿ ದೇಶದ ನಾಗರಿಕರ ಬಗೆಗೆ ಭಾರತೀಯತೆಯ ದೃಷ್ಟಿಕೋನದಿಂದ ಯೋಚನೆ ಮಾಡಬೇಕೆ ಅಥವಾ ಕೇವಲ ಹಿಂದು ಮುಸಲ್ಮಾನರ ದೃಷ್ಟಿಕೋನದಲ್ಲಿ ನೋಡಬೇಕೆ? ಹಮೀದ್ ಅನ್ಸಾರಿ ಭಾರತದ ಮುಸ್ಲಿಂ ಉಪರಾಷ್ಟ್ರಪತಿಯಾಗಿದ್ದರೆ ಅಥವಾ ಭಾರತೀಯ ಉಪರಾಷ್ಟ್ರಪತಿಯಾಗಿದ್ದರೆ? ಒಂದು ವೇಳೆ ಕೆಲವು ಘಟನೆಗಳ ಕಾರಣದಿಂದ ಮುಸ್ಲಿಮರ ಒಂದು ವರ್ಗಕ್ಕೆ ‘ಅಸುರಕ್ಷಿತ’ ಭಾವ ಕಾಡುತ್ತಿದೆ ಎಂದಾದರೆ, ಹಿಂದುಗಳ ವಿರುದ್ಧ ಆಗುತ್ತಿರುವ ಆಘಾತದ ಚಿಹ್ನೆಯೂ ಅವರಿಗೆ ಅರ್ಥವಾಗಬೇಕಿತ್ತು. ಗೋವನ್ನು ತಾಯಿಗೆ ಸಮಾನವೆಂದು ಕಾಣುವ ಹಿಂದುಗಳ ಮನಸ್ಸಿಗೆ ನೋವುಂಟು ಮಾಡುವ ಉದ್ದೇಶದಿಂದಲೇ ಕಾಶ್ಮೀರದಿಂದ ಕೇರಳದವರೆಗೆ ಗೋವಿನ ಶಿರಚ್ಛೇದ ಮಾಡಿ ಜಾತ್ರೆಯ ರೀತಿಯಲ್ಲಿ ಅದರ ಮೆರವಣಿಗೆ ಮಾಡಲಾಗುತ್ತಿದೆ. ಭಾರಿ ಕಾರ್ಯಕ್ರಮಗಳನ್ನು ಆಯೋಜಿಸಿ ಗೋಮಾಂಸದಿಂದಲೇ ಆಹಾರ ತಯಾರಿಸಿ ತಿನ್ನುತ್ತಿದ್ದರೆ, ಉಪರಾಷ್ಟ್ರಪತಿಯವರಿಗೆ ಸಾಮಾಜಿಕ ಏಕತೆ ಅಥವಾ ಅಸುರಕ್ಷತೆಯ ಚಿಂತೆ ಯಾಕೆ ಕಾಡಲಿಲ್ಲ? ಕಾಶ್ಮೀರದಲ್ಲಿ ಜಿಹಾದಿಗಳು ಹಿಂದುಗಳನ್ನು ಅವಮಾನಿಸಿ ಅವರ ಮೇಲೆ ಅತ್ಯಾಚಾರಗಳನ್ನು ನಡೆಸಿದ್ದರಿಂದ ಅವರು ತಮ್ಮ ಮನೆಗಳಿಂದಲೇ ಹೊರ ನಡೆದು ಜಮ್ಮುವಿನಲ್ಲಿ ಟೆಂಟ್​ಗಳಲ್ಲಿ ನೆಲೆಸುವಂತೆ ಮಾಡಿದರಲ್ಲ, ಆ ಸಂದರ್ಭದಲ್ಲಿ ಅನ್ಸಾರಿಯವರಿಗೆ ಈ ಚಿಂತೆ, ದುಃಖ ಅಥವಾ ಸಂತಾಪ ಯಾಕಾಗಲಿಲ್ಲ? ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ಧಿಕಿ, ಮೊಹಮ್ಮದ್ ಕೈಫ್, ಕತ್ರೀನಾ ಕೈಫ್ ಸೇರಿ ಇನ್ನೂ ಅನೇಕರು ಅದ್ಯಾವ ರೀತಿಯ ಅಸುರಕ್ಷತೆಯನ್ನು ಎದುರಿಸುತ್ತಿದ್ದಾರೆ?

ಎಲ್ಲಿಯವರೆಗೆ ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದರೋ ಅಲ್ಲಿಯವರೆಗೆ ಅವರಿಗೆ ಮುಸ್ಲಿಮರು ಸುರಕ್ಷಿತರಾಗಿ ಕಂಡಿದ್ದರು. ಯಾವಾಗ ಅವರು ಸ್ಥಾನ ತ್ಯಜಿಸಬೇಕಾಯಿತೋ ಆಗ ಅವರಿಗೆ ಮುಸ್ಲಿಮರು ಅಸುರಕ್ಷಿತರಾಗಿ ಕಂಡರು. ಇದ್ಯಾವ ರೀತಿಯ ವರ್ತನೆ?

ಮುಸ್ಲಿಮರಿಗೆ ಅಬ್ದುಲ್ ಕಲಾಂರ ದಾರಿಯಲ್ಲಿ ಕೊಂಡೊಯ್ಯುವಂತಹ ನಾಯಕರು ಬೇಕಾಗಿದ್ದಾರೆ. ಜಿನ್ನಾರ ದಾರಿಯಲ್ಲಿ ಕೊಂಡೊಯ್ಯುವವರಲ್ಲ. ಅವರಿಗೆ ಉತ್ತಮ ಶಿಕ್ಷಣ, ಸ್ವಾಸ್ಥ್ಯ ಅಭಿವೃದ್ಧಿಯ ಹಾದಿ ಮತ್ತು ಸ್ವಾಭಿಮಾನಿ ಭಾರತೀಯತೆಯ ದಾರಿ ಬೇಕಾಗಿದೆ. ಬಡತನಕ್ಕೆ ಯಾವುದೇ ಮತವಿರುವುದಿಲ್ಲ. ಯಾವಾಗ ಹೊಟ್ಟೆ ಹಸಿಯುತ್ತದೆಯೋ ಆ ಹಸಿವಿಗೆ ಹಿಂದೂ ಮುಸಲ್ಮಾನ ಎನ್ನುವುದು ಇರುವುದಿಲ್ಲ. ಗಂಗೆ ತನ್ನ ತೀರದಲ್ಲಿ ನೆಲೆಸಿರುವ ಜನರಲ್ಲಿ ಅವರ ಮತ ಯಾವುದೆಂದು ಕೇಳಿ ನೀರು ನೀಡುವುದಿಲ್ಲ. ಗಂಗೆಯ ನೀರು ಹಿಂದು ಮತ್ತು ಮುಸ್ಲಿಮರಿಬ್ಬರಿಗೂ ಸಮಾನವಾಗಿ ಸಿಗುತ್ತದೆ.

ಮುನಾವ್ವರ್ ಸಾಹೇಬ್ ಬರೆದಿರುವ ಕವಿತೆಯ ಈ ವಾಕ್ಯಗಳಲ್ಲಿ ಅದೆಷ್ಟು ಅರ್ಥವಿದೆ. ಭಾರತ ಮಾತೆಯ ಬಗ್ಗೆ ತಮ್ಮ ಕವಿತೆಯಲ್ಲಿ ಹೇಳಿರುವ ಮಾತಿದು,‘ನಿನ್ನ  ಎದುರಲ್ಲಿ ತಾಯಿಯೂ ಚಿಕ್ಕಮ್ಮನಂತೆ ಕಾಣುತ್ತಾಳೆ. ನಿನ್ನ ಮಡಿಲಲ್ಲಿ ಗಂಗಾ ಮಾತೆ ಖುಷಿಕೊಡುತ್ತಾಳೆ’ ( ಕವಿತೆಯ ಈ ಸಾಲುಗಳನ್ನು ಓರ್ವ ಮುಸ್ಲಿಂ ಕವಿ ಬರೆದಿದ್ದಾನೆಂದು ನಮೂದಿಸಿಲ್ಲ. ನನ್ನ ಪಾಲಿಗೆ ಆತ ಓರ್ವ ಸಹೃದಯಿ ಭಾರತೀಯ)

ಮುಸಲ್ಮಾನರು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆಂದು ಹೇಳಿಕೊಳ್ಳುತ್ತಿರುವ ಮುಸ್ಲಿಂ ನಾಯಕರು ವೈಭವೋಪೇತ ಜೀವನ ನಡೆಸುತ್ತಿದ್ದಾರೆ. ಸನ್ಮಾನಿತರಾಗುತ್ತಿದ್ದಾರೆ. ಆದರೆ ಇಂತಹ ನಾಯಕರು ಮುಸ್ಲಿಂ ಸಮುದಾಯದವರಿಗಾಗಿ ಏನು ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ? ಭಾರತದಲ್ಲಿರುವ ಎಲ್ಲರನ್ನು, ಎಲ್ಲ ಮತಧರ್ಮಗಳನ್ನು ಅನುಸರಿಸುತ್ತಿರುವವರನ್ನು ಒಂದೇ ಎಂದು ಕಂಡು, ನಾಗರಿಕರ ಸುಖ

ದುಃಖಗಳ ಬಗ್ಗೆ ಹಿಂದುಸ್ತಾನದ ನಾಯಕನಾಗಿ ನೋಡುವ ಮತ್ತು ಬಶರತ್ ಅಹ್ಮದ್ ಆಗಿರಲಿ, ಭಾರತ ಕುಮಾರ ಆಗಿರಲಿ ಇವರಿಬ್ಬರ ದುಃಖವನ್ನು ಸಮಾನವಾಗಿ ಕಾಣುವ ಮುಸ್ಲಿಂ ನಾಯಕರು ಇದ್ದಾರೆಯೇ?

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

 

Leave a Reply

Your email address will not be published. Required fields are marked *

Back To Top