Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಮುದ್ದು ಆಕಾಂಕ್ಷಾ ಪೆದ್ದು ಆದಾಗ ..

Thursday, 14.09.2017, 3:04 AM       No Comments

2015ರಲ್ಲಿ ತೆರೆಕಂಡ ‘ಆರ್​ಎಕ್ಸ್ ಸೂರಿ’ ಸಿನಿಮಾದಲ್ಲಿ ಸಾಮಾನ್ಯ ಕುಟುಂಬದ ಹುಡುಗಿಯ ಪಾತ್ರ ಮಾಡಿದ್ದ ಆಕಾಂಕ್ಷಾ ಇದೀಗ ‘ಕ್ರ್ಯಾಕ್’ ಆಗಿದ್ದಾರೆ. ಅರ್ಥಾತ್, ವಿನೋದ್ ಪ್ರಭಾಕರ್ ನಟನೆಯ ‘ಕ್ರ್ಯಾಕ್’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ಮೂರು ಸಿನಿಮಾಗಳು ಈ ನಟಿಮಣಿಯ ಕೈಯಲ್ಲಿವೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರು ನಾಲ್ಕು ಮಕ್ಕಳನ್ನು ದತ್ತು ಪಡೆದು ಸಲಹುತ್ತಿದ್ದಾರೆ. ಜತೆಗೆ ಸಿನಿಮಾರಂಗದ ಮುಂದಿನ ಪ್ಲ್ಯಾನ್​ಗಳ ಬಗ್ಗೆಯೂ ಮಾತನಾಡಿದ್ದಾರೆ.

| ಮಂಜು ಕೊಟಗುಣಸಿ ಬೆಂಗಳೂರು

‘ಕ್ರ್ಯಾಕ್’ ಸಿನಿಮಾದಲ್ಲಿ ಯಾರು ಕ್ರ್ಯಾಕ್?

– ಹಹ್ಹಹ್ಹ.. ಸಿನಿಮಾ ನೋಡಿ. ನಾನಿಲ್ಲಿ ತುಂಬ ಮೃದು ಸ್ವಭಾವದ ಹುಡುಗಿ, ಪೆದ್ದು ಅನ್ನಬಹುದು. ಹಿಂದಿನ ‘ಆರ್​ಎಕ್ಸ್ ಸೂರಿ’ ಚಿತ್ರದಲ್ಲಿ ನಾನು ಕಾಣಿಸಿಕೊಂಡ ರೀತಿಯೇ ಬೇರೆ, ಇಲ್ಲಿಯ ಪಾತ್ರವೇ ಬೇರೆ. ಎರಡೂ ಪಾತ್ರಗಳಿಗೆ ಬಹಳಷ್ಟು ವ್ಯತ್ಯಾಸವಿದೆ. ‘ಜಲ್ಸಾ’ ಸಿನಿಮಾದಲ್ಲಿ ಪತ್ರಕರ್ತೆಯಾದ್ದೆ. ಇಲ್ಲಿ ನನಗೆ ಇಷ್ಟವೆನಿಸುವ ಒಂದೊಳ್ಳೆಯ ಪಾತ್ರ ಮಾಡಿದ್ದೇನೆ.

ಈ ಚಿತ್ರಕ್ಕೆ ನೀವು ಆಯ್ಕೆಯಾಗಿದ್ದು ಹೇಗೆ?

‘ಕ್ರ್ಯಾಕ್’ ಸಿನಿಮಾ ಆಡಿಷನ್ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಎಂದಿನಂತೆ ನಾನೂ ಆಡಿಷನ್​ಗೆ ಹೋಗಿದ್ದೆ. ಒಂದೇ ಪಾತ್ರವನ್ನು ಮೂರು ವಿಭಿನ್ನ ರೀತಿಯಲ್ಲಿ ನಟಿಸಬೇಕಿತ್ತು. ಅದೇ ರೀತಿ ನನ್ನ ನಟನೆ ಒಪ್ಪಿಸಿದೆ. ‘ಸಿನಿಮಾ ಕಥೆಗೆ ಈ ಮುಖ ಸೂಟ್ ಆಗುತ್ತೆ’ ಅಂತ ನಿರ್ದೇಶಕರು ಮೊದಲೇ ಹೇಳಿದ್ದರು. ಆಡಿಷನ್ ಬಳಿಕ ಎಲ್ಲವೂ ಪಕ್ಕಾ ಆಯಿತು.

ಮೊದಲ ಬಾರಿಗೆ ವಿನೋದ್ ಪ್ರಭಾಕರ್ ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು?

ವಿನೋದ್ ಅವರ ಸಿನಿಮಾ ಎಂದ ತಕ್ಷಣ, ಪಕ್ಕಾ ಆಕ್ಷನ್ ಚಿತ್ರವೇ ಆಗಿರುತ್ತದೆ. ಮಾಸ್ ಆಡಿಯನ್ಸ್​ಗೆ ಹೊಂದುವಂತೆ ‘ಕ್ರ್ಯಾಕ್’ ಸಿದ್ಧಗೊಂಡಿದೆ. ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಖುಷಿ ನೀಡಿದೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಸದ್ಯ ಪ್ರೇಕ್ಷಕರು ಸಿನಿಮಾ ನೋಡಿ ಏನು ಹೇಳುತ್ತಾರೆ ಎಂಬ ಕಾತುರಲ್ಲಿದ್ದೇನೆ.

ಹಾಗಾದರೆ, ಚಿತ್ರದ ಬಗ್ಗೆ ನಿಮಗೂ ತುಂಬ ನಿರೀಕ್ಷೆ ಅಂತಾಯ್ತು..?

ಈ ಹಿಂದಿನ ನನ್ನ ಎರಡು ಸಿನಿಮಾಗಳಿಗಿಂತ ‘ಕ್ರ್ಯಾಕ್’ ಹೆಚ್ಚು ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ನಾನು ನಾಯಕಿ ಎಂಬ ಕಾರಣಕ್ಕಾಗಿ ಈ ಮಾತನ್ನು ಹೇಳುತ್ತಿಲ್ಲ. ಚಿತ್ರದಲ್ಲಿ ಕಥೆಯೇ ಹೀರೋ ಆಗಿರುವುದರಿಂದ ನಾವಿಲ್ಲಿ ಕೇವಲ ಪಾತ್ರಧಾರಿಗಳು. ಕಥೆ ಚೆನ್ನಾಗಿರುವುದರಿಂದ ಸಿನಿಮಾ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ. ಅದೇ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬ ಭರವಸೆ ಇದೆ.

ಪ್ರಯೋಗಾತ್ಮಕ ಪಾತ್ರಗಳ ಬಗ್ಗೆ ಒಲವು ಇದೆಯಾ?

ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸಬೇಕು, ಚಾಲೆಂಜಿಂಗ್ ಅನ್ನಿಸುವಂತಹ ಪಾತ್ರ ಮಾಡಬೇಕು ಎಂದು ಪ್ರತಿಯೊಬ್ಬ ನಟ-ನಟಿಗೂ ಆಸೆ ಇರುತ್ತದೆ. ಆ ಪೈಕಿ ನಾನೂ ಒಬ್ಬಳು. ಕಲಾತ್ಮಕ ಸಿನಿಮಾಗಳೆಂದರೆ ನನಗೆ ಇಷ್ಟ. ಯಾಕೆಂದರೆ ಅಂತಹ ಸಿನಿಮಾಗಳಿಗೆ ನಟನೆಯೊಂದೇ ಮಾನದಂಡವಾಗಿರುತ್ತದೆ. ಅವಕಾಶ ಸಿಕ್ಕರೆ ಖಂಡಿತ ನಾನು ನಟಿಸುತ್ತೇನೆ.

ಸೋಲು-ಗೆಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು

ನಾನು ಈ ಎರಡನ್ನೂ ಒಂದೇ ರೀತಿ ಸ್ವೀಕರಿಸುತ್ತೇನೆ. ಸೋಲು ಇದ್ದ ಕಡೆ ಗೆಲುವು, ಗೆಲುವು ಇದ್ದ ಕಡೆ ಸೋಲು ಇದ್ದೇ ಇರುತ್ತದೆ. ಹೀಗಾಗಿ ನನಗೆ ಇವೆರಡರ ಬಗ್ಗೆ ತುಂಬ ಗೌರವವಿದೆ. ಗೆಲುವು ಮೆಟ್ಟಿಲಾದರೆ, ಸೋಲು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪ್ರಯತ್ನಿಸು, ಮುನ್ನುಗ್ಗು ಎನ್ನುತ್ತದೆ. ಸದ್ಯ ಈ ಎರಡನ್ನೂ ನಾನು ಸಿನಿಮಾರಂಗದಲ್ಲಿ ಕಂಡಿದ್ದೇನೆ.

 

ಬೇರೆ ಯಾವೆಲ್ಲ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೀರಿ?

‘ಬದ್ರಿ ವೆಡ್ಸ್ ಮಧುಮತಿ’ ಚಿತ್ರದ ಅರ್ಧದಷ್ಟು ಶೂಟಿಂಗ್ ಮುಗಿದಿದೆ. ‘ಕರ್ವ-2’ ಚಿತ್ರಕ್ಕೂ ಒಪ್ಪಿಕೊಂಡಿದ್ದೇನೆ. ಮೊದಲಿಂದಲೂ ಹಾರರ್ ಸಿನಿಮಾದಲ್ಲಿ ನಟಿಸಬೇಕೆಂದುಕೊಂಡಿದ್ದೆ. ಅಂಥ ಅವಕಾಶ ‘ಕರ್ವ-2’ ಮೂಲಕ ಸಿಕ್ಕಿದೆ. ಇತ್ತೀಚೆಗೆ ಯೋಗೇಶ್ ಅವರ ‘ಲಂಬೋದರ’ ಸಿನಿಮಾದ ಮುಹೂರ್ತವೂ ಮುಗಿದಿದೆ. ಆ ಚಿತ್ರದಲ್ಲೂ ನಾನಿದ್ದೇನೆ.

ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸುವ ಆಸೆ ಇದೆಯೇ?

ನಾನು ಕನ್ನಡದವಳಲ್ಲ. ನಮ್ಮದು ಮೂಲ ಗುಜರಾತ್. ಆರು ವರ್ಷದ ಹಿಂದೆ ಬೆಂಗಳೂರಿಗೆ ಬಂದವಳು. ಸಿನಿಮಾ ನಟಿ ಆಗುವ ಕನಸು ನನ್ನದಾಗಿರಲಿಲ್ಲ. ಹೇಗೋ ಒಂದಕ್ಕೊಂದು ಕೂಡಿಕೊಂಡು ನಟಿಯಾದೆ. ಅದೇ ರೀತಿ ಕನ್ನಡದಲ್ಲಿ ನನಗೆ ಒಳ್ಳೆಯ ಆಫರ್​ಗಳನ್ನು ನೀಡಿದ್ದಾರೆ. ಅದೇ ರೀತಿ ಬೇರೆ ಭಾಷೆಯಲ್ಲೂ ನಟಿಸಬೇಕೆಂದುಕೊಂಡಿದ್ದೇನೆ. ಸದ್ಯಕ್ಕೆ ಆ ರೀತಿಯ ಆಫರ್​ಗಳು ಬಂದಿಲ್ಲ. ಬಂದರೆ ಖಂಡಿತ ನಟಿಸುತ್ತೇನೆ. ಒಟ್ಟು ಐದು ಭಾಷೆಯಲ್ಲಿ ನಟಿಸಬೇಕೆಂಬ ಕನಸು ನನ್ನದು. ಅದನ್ನು ಈಡೇರಿಸಿಕೊಳ್ಳುತ್ತೇನೆ.

ಸಿನಿಮಾ ಜತೆಗೆ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದೀರಿ. ಹೇಗೆ ನಡೆಯುತ್ತಿದೆ ಕೆಲಸ?

ಹೌದು, ಈ ವಿಷಯವನ್ನು ಎಲ್ಲಿಯೂ ಹೇಳಿಕೊಳ್ಳಬಾರದು ಎಂದುಕೊಂಡಿದ್ದೆ. ಅಂದ್ಹಾಗೆ, 5ರಿಂದ 13 ವರ್ಷದೊಳಗಿನ ನಾಲ್ವರು ಮಕ್ಕಳನ್ನು ದತ್ತು ಪಡೆದಿದ್ದೇನೆ. ಅವರ ಪೂರ್ತಿ ಜವಾಬ್ದಾರಿ ನನ್ನದು. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನವರ ಆರೈಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಈ ರೀತಿ ಮಾಡುವುದರಿಂದ ನನಗೆ ಹೆಚ್ಚು ಖುಷಿ ಸಿಗುತ್ತದೆ. ಸಿನಿಮಾದ ಜತೆಗೆ ನನ್ನ ಸಣ್ಣ ಪುಟ್ಟ ಕೆಲಸಗಳನ್ನೂ ಮುಂದುವರಿಸಿಕೊಂಡು ಹೋಗುತ್ತೇನೆ.

ಹಾಗಾದರೆ ಗುಜರಾತಿ ಸಿನಿಮಾ ನಂಟಿದೆಯೇ?

ಹಾಗೇನಿಲ್ಲ.. ಅಲ್ಲಿನ ಸಿನಿಮಾಗಳೇ ಬೇರೆ, ಸದ್ಯ ನಾನು ತೊಡಗಿಸಿಕೊಂಡಿರುವ ಚಿತ್ರಗಳೇ ಬೇರೆ. ಅಲ್ಲಿಯ ಸಿನಿಮಾಗಳಿಗೆ ಇಲ್ಲಿಯ ಚಿತ್ರಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ದಕ್ಷಿಣ ಭಾರತದಲ್ಲಿ ಸಿನಿಮಾ ಕ್ಷೇತ್ರಕ್ಕಿರುವ ಪ್ರೋತ್ಸಾಹ ಗುಜರಾತ್​ನಲ್ಲಿ ಕಡಿಮೆ. ಹೀಗಾಗಿ ಕನ್ನಡದ ನಟಿಯಾಗಿರುವುದಕ್ಕೆ ನನಗೆ ತೃಪ್ತಿ ಇದೆ.

Leave a Reply

Your email address will not be published. Required fields are marked *

Back To Top