Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಮುತ್ತಿನಹಾರ ಹೂಮಾಲೆಗೆ ಹೆದರಿದ್ದೇಕೆ?

Wednesday, 05.07.2017, 3:05 AM       No Comments

ಸೈನಿಕರನ್ನು ಜಮಾಯಿಸುವ ಮೂಲಕ ಗಡಿಯಲ್ಲಿ ಚೀನಾ ಸಮರೋನ್ಮಾದ ಪ್ರದರ್ಶಿಸುತ್ತಿದೆ. ಮಾನಸ ಸರೋವರ ಯಾತ್ರೆಗೆ ತಡೆಯೊಡ್ಡಿದೆ. ಐದೇ ವರ್ಷಗಳ ಹಿಂದೆ ಭಾರತದೊಂದಿಗೆ ಸಂಬಂಧ ಕುದುರಿಸುವ ಮಾತಾಡುತ್ತಿದ್ದ ಚೀನಾ, ಈಗ ಏಕಾಏಕಿ ಹೀಗೆ ನಡೆದುಕೊಳ್ಳಲು ಬಲವಾದ ಕಾರಣಗಳೇ ಇವೆ.

 ಕಳೆದ ಐದು ವರ್ಷಗಳಲ್ಲಿ ಭಾರತದ ಬಗೆಗಿನ ಚೀನೀ ನೀತಿ ಸಂಪೂರ್ಣವಾಗಿ ಬದಲಾಗಿಹೋಗಿದೆ. 2012ರಲ್ಲಿ ಭಾರತದೊಂದಿಗೆ ತಾನಷ್ಟೇ ಅಲ್ಲ, ಪಾಕಿಸ್ತಾನ ಸಹ ಸಂಬಂಧಗಳನ್ನು ಸುಧಾರಿಸಿಕೊಳ್ಳುವಂತಹ ನಿಲುವುನೀತಿಗಳನ್ನು ತಳೆದಿದ್ದ ಚೀನಾ ಈಗ ಪಾಕಿಸ್ತಾನವನ್ನು ನಮ್ಮತ್ತ ಛೂ ಬಿಡುತ್ತಿರುವುದಷ್ಟೇ ಅಲ್ಲ, ತಾನೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಹೀಗೇಕಾಯಿತು? ಅರ್ಧದಶಕದಲ್ಲಿ ಏನೇನಾಗಿಹೋಗಿದೆ? ಬನ್ನಿ, ನಿಮ್ಮನ್ನು ಕಾಲದ ರೋಲರ್​ಕೋಸ್ಟರ್​ನಲ್ಲಿ ಕೂರಿಸಿ ಕಳೆದೈದು ವರ್ಷಗಳ ದ್ವಿಪಕ್ಷೀಯ ಸಂಬಂಧಗಳ ಮೇಲುಕೆಳಗಾಟವನ್ನು ಪರಿಚಯಿಸುತ್ತೇನೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಚೀನಾವನ್ನು ಅರಬ್ಬೀ ಸಮುದ್ರಕ್ಕೆ ಜೋಡಿಸುವ ರಸ್ತೆ ಹಾಗೂ ರೈಲು ಮಾರ್ಗಗಳನ್ನು ನಿರ್ವಿುಸಲು ಚೀನಾ ಆರಂಭಿಸಿದ್ದು 2007-08ರ ಸುಮಾರಿಗೆ. ಈ ಯೋಜನೆಗಳು ಯಶಸ್ವಿಯಾಗಿ ಪೂರ್ಣವಾಗಲು ಕೊನೇಪಕ್ಷ ಹನ್ನೆರಡು-ಹದಿನೈದು ವರ್ಷಗಳು ಹಿಡಿಯುವುದಿತ್ತು. ಅಲ್ಲಿಯವರೆಗೆ ಮತ್ತು ಆನಂತರ ಪಾಕಿಸ್ತಾನದ ಭೌಗೋಳಿಕ ನಕ್ಷೆ ಹಾಗೂ ಆಂತರಿಕ ರಾಜಕಾರಣ ಬದಲಾಗದೇ ಇದ್ದರೆ ಮಾತ್ರ ತಾನು ಯಶಸ್ವಿಯಾಗಿ ರೈಲುಹಾದಿ ನಿರ್ವಿುಸಿ ಅದರ ಫಲವನ್ನು ಅನುಭವಿಸಲು ಸಾಧ್ಯ ಎಂದೂ ಚೀನಾ ಅರಿತಿತ್ತು. ಆದರೆ 2010ರ ದಶಕ ಆರಂಭವಾಗುತ್ತಿದ್ದಂತೇ ಪಾಕಿಸ್ತಾನದ ಆಂತರಿಕ ಸ್ಥಿತಿ ಚೀನಾಗೆ ಆತಂಕ ಹುಟ್ಟಿಸತೊಡಗಿತು. ಖೈಬರ್-ಫಕ್ತೂನ್​ಖ್ವಾ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಪಾಕ್ ಸೇನೆಯ ಜತೆ ಘರ್ಷಣೆಗಿಳಿದರು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅಗಾಧ ಭಂಡಾರ ಬಲೂಚಿಸ್ತಾನದಲ್ಲಿನ ಪ್ರತ್ಯೇಕತಾ ಸಂಗ್ರಾಮ ಸೇನೆಯನ್ನೂ, ರಾಷ್ಟ್ರನಾಯಕರನ್ನೂ ಕಂಗೆಡಿಸತೊಡಗಿತು. ಇದು ಸಾಲದು ಎಂಬಂತೆ ಪಾಕಿಸ್ತಾನೀ ಸೇನೆಯಲ್ಲೇ ಬಿರುಕುಗಳು ಕಾಣಿಸಿಕೊಂಡು ಗಣನೀಯ ಸಂಖ್ಯೆಯ ಸೈನಿಕರು ತಾಲಿಬಾನಿಗಳತ್ತ ಸಹಾನುಭೂತಿ ತೋರುವ ಮೂಲಕ ಸೇನೆಯ ಕಾದುವ ಸಾಮರ್ಥ್ಯವನ್ನು ಬಹಳಷ್ಟು ಕುಂದಿಸಿಬಿಟ್ಟರು. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಭಾರತದೊಂದಿಗೆ ಮತ್ತೊಂದು ಯುದ್ಧವಾದರೆ ಅದರಲ್ಲಿ ಬಳಕೆಯಾಗುವ ಅಸ್ತ್ರಗಳ ಆಧಾರದ ಮೇಲೆ ಎರಡು ವಿಭಿನ್ನ ಪರಿಣಾಮಗಳನ್ನು ಮುಂಗಾಣಬಹುದಾಗಿತ್ತು. ಒಂದು- ಅಣ್ವಸ್ತ್ರಗಳು ಬಳಕೆಯಾದರೆ ಅದು ಪಾಕಿಸ್ತಾನಕ್ಕೆ ಹೆಚ್ಚು ಮಾರಕವಾಗಿ ಅದರ ಭೌಗೋಳಿಕ ಮೇಲ್ಮೈಲಕ್ಷಣ ಬದಲಾಗುವುದು ನಿಶ್ಚಯ. ಎರಡು- ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಯುದ್ಧವೇ ನಡೆದರೆ ಅದರಲ್ಲಿ ಪಾಕಿಸ್ತಾನೀ ಸೇನೆ ಸೋತು ಅದು ಆ ದೇಶದ ರಾಜಕೀಯದ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುವುದು ನಿಶ್ಚಿತ. ಹಾಗಾಗುತ್ತಿದ್ದಂತೇ ಇಸ್ಲಾಮಿಕ್ ಮೂಲಭೂತವಾದಿಗಳ ಕೈ ಮೇಲಾಗುತ್ತದೆ ಮತ್ತು ಸಿಂಧ್ ಹಾಗೂ ಬಲೂಚಿಸ್ತಾನಗಳಲ್ಲಿ ಪ್ರತ್ಯೇಕತೆಗೆ ಭಾರೀ ಕುಮ್ಮಕ್ಕು ಸಿಕ್ಕಿ ಅವು ಸ್ವತಂತ್ರಗೊಳ್ಳುವುದಕ್ಕೆ ದಾರಿ ಸುಗಮವಾಗುತ್ತದೆ. ಸ್ವತಂತ್ರ ಸಿಂಧ್ ಮತ್ತು ಬಲೂಚಿಸ್ತಾನಗಳು ತಮ್ಮ ಆರ್ಥಿಕ, ಸಾಮರಿಕ, ಒಟ್ಟಾರೆ ಅಸ್ತಿತ್ವದ ಅಗತ್ಯಗಳಿಗಾಗಿ ಭಾರತವನ್ನು ಅವಲಂಬಿಸುತ್ತವೆ, ಅಂದರೆ ನವದೆಹಲಿಯ ಪ್ರಭಾವಕ್ಕೊಳಗಾಗುತ್ತವೆ. ಒಂದುವೇಳೆ ಸಿಂಧ್ ಮತ್ತು ಬಲೂಚಿಸ್ತಾನ ಸ್ವತಂತ್ರವಾಗದೇ, ಪಾಕಿಸ್ತಾನದ ಭೌಗೋಳಿಕ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗದಿದ್ದರೂ ಆ ದೇಶದ ರಾಜಕೀಯ ವ್ಯವಸ್ಥೆ ಮೂಲಭೂತವಾದಿಗಳ ಕೈ ಸೇರುವುದು ನಿಶ್ಚಿತ. ಈ ಎರಡರಲ್ಲಿ ಒಂದು ಘಟಿಸಿದರೂ ಪಾಕ್ ನೆಲದ ಮೂಲಕ ಅರಬ್ಬೀ ಸಮುದ್ರ ತಲುಪುವ ತನ್ನ ಕನಸು ಶವಪೆಟ್ಟಿಗೆ ಸೇರಿದಂತೇ ಎಂದು ಅರಿಯಲು ಚಾಣಾಕ್ಷ ಚೀನೀಯರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಇದಲ್ಲದೇ ಇನ್ನೊಂದು ಗಂಡಾಂತರವನ್ನೂ ಚೀನೀಯರು ಎದುರು ನೋಡತೊಡಗಿದರು. ಪಾಕಿಸ್ತಾನದಲ್ಲಿ ಮೂಲಭೂತವಾದಿಗಳ ಕೈಮೇಲಾದರೆ ಪಶ್ಚಿಮ ಚೀನಾದ ಉಯ್ಘರ್ ಝಿನ್​ಜಿಯಾಂಗ್ ಪ್ರಾಂತ್ಯದ ಮುಸ್ಲಿಂ ಉಗ್ರಗಾಮಿಗಳಿಗೆ ಪಾಕಿಸ್ತಾನದ ಬೆಂಬಲ ದೊರೆತು ಆ ಪ್ರಾಂತ್ಯ ಹೊತ್ತಿ ಉರಿಯತೊಡಗುತ್ತದೆ. ಅಂದರೆ ಡ್ರ್ಯಾಗನ್​ನ ಅಂಡಿಗೇ ಬೆಂಕಿ ಬಿತ್ತು ಎಂದರ್ಥ.

ಇಂತಹ ಯಾವುದೇ ಮರ್ವಘಾತ, ಅನಾಹುತಗಳು ಘಟಿಸದಂತೆ ನೋಡಿಕೊಳ್ಳಲು ಬೀಜಿಂಗ್​ನ ದೂರಗಾಮಿ ಯೋಜನೆಯ ಮೊದಲ ಹಂತವಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧವಾಗದಂತೆ ನೋಡಿಕೊಳ್ಳಲೇಬೇಕು ಎಂದು ಚಾಲಾಕೀ ಚೀನೀಯರು ಅರಿತ ಪರಿಣಾಮವಾಗಿ ಭಾರತದೊಂದಿಗೆ ಯಾವುದೇ ತಕರಾರು ಸೃಷ್ಟಿಸಿಕೊಳ್ಳದೇ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಬೇಕೆಂದು ಚೀನೀಯರು ಪಾಕಿಸ್ತಾನಕ್ಕೆ ಒತ್ತಾಯಿಸತೊಡಗಿದರು. ಆ ಸಮಯದಲ್ಲಿ ದೆಹಲಿಯಲ್ಲಿದ್ದ ಮನಮೋಹನ್ ಸಿಂಗ್ ಸರ್ಕಾರಕ್ಕೆ ತನ್ನ ಈ ಹಂಚಿಕೆಗಳು ಅರ್ಥವಾಗುವುದೂ ಇಲ್ಲ, ಪರಿಣಾಮವಾಗಿ ಭಾರತ ತನ್ನ ವಿರುದ್ಧ ಯಾವುದೇ ಮಹತ್ವಾಕಾಂಕ್ಷೆಯ ಯೋಜನೆಗಳನ್ನೂ ರೂಪಿಸುವುದಿಲ್ಲ ಎಂದು ಚೀನೀಯರು ನೆಮ್ಮದಿಯಾಗಿದ್ದರು. ಹೀಗಾಗಿಯೇ, 2013ರ ಮಾರ್ಚ್ 17ರಂದು ಚೀನೀ ಅಧ್ಯಕ್ಷಗಾದಿಗೇರಿದ ಮಹಾನ್ ಕುಟಿಲ ಕ್ಸಿ ಜಿನ್​ಪಿಂಗ್ ಇತರ ದೇಶಗಳ ಬಗೆಗೆಲ್ಲಾ ಹೊಸ ನೀತಿ ರೂಪಿಸತೊಡಗಿದರೂ ಭಾರತದ ಬಗ್ಗೆ ಮಾತ್ರ ಹಳೆಯ ನೀತಿಯನ್ನೇ ಅಂದರೆ ಸದ್ಭಾವನೆ ಹಾಗೂ ಸಹಬಾಳ್ವೆಯನ್ನು ವೃದ್ಧಿಸುವ ನೀತಿಯನ್ನೇ ಮುಂದುವರಿಸುವುದಾಗಿ ಎರಡೇ ದಿನಗಳಲ್ಲಿ ಅಂದರೆ ಮಾರ್ಚ್ 19ರಂದು ಘೊಷಿಸಿದರು. ಇನ್ನೊಂದು ವರ್ಷದಲ್ಲಿ ದೆಹಲಿಯಲ್ಲಿ ಸರ್ಕಾರ ಬದಲಾಗಬಹುದು ಎಂದು ಆ ಚಾಣಾಕ್ಷನೂ ಅರಿಯಲಾಗಲಿಲ್ಲ. (ಭಾರತದ ಚಾಣಾಕ್ಷರಿಗೂ ಅರಿವಾಗಲಿಲ್ಲ, ಬಿಡಿ)

ಮೇ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೂ ಅಧ್ಯಕ್ಷ ಜಿನ್​ಪಿಂಗ್ ಭಾರತದಿಂದ ಅಪಾಯವನ್ನೇನೂ ಎದುರುನೋಡಲಿಲ್ಲ. ಅದಕ್ಕೆ ಕಾರಣ ರಾಷ್ಟ್ರನಾಯಕನಾಗಿ ಮೋದಿಯವರ ನಿಜವಾದ ಸಾಮರ್ಥ್ಯದ ಸುಳಿವು ಜಿನ್​ಪಿಂಗ್​ರಿಗೆ ಸಿಗದಿದ್ದುದರ ಜತೆಗೇ ಚೀನಾದ ನೆರೆಹೊರೆಯಲ್ಲಿ ಘಟಿಸತೊಡಗಿದ ಬೆಳವಣಿಗೆಗಳೂ ಅವರ ಗಮನವನ್ನು ಭಾರತದಿಂದ ದೂರ ಒಯ್ದವು. ಪೂರ್ವ ಚೀನಾ ಸಮುದ್ರದಲ್ಲಿರುವ ಸೆಂಕಾಕು ದ್ವೀಪಗಳ ಕುರಿತಾಗಿ ಜಪಾನ್ ಜತೆಗೆ ಎದ್ದಿದ್ದ ವಿವಾದ ಹಾಗೂ ಉತ್ತರ ಕೊರಿಯಾದ ಶಾಂತಿವಿರೋಧಿ ನೀತಿಗಳಿಂದಾಗಿ ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಹೆಚ್ಚಾಗತೊಡಗಿದ ಅಮೆರಿಕನ್ ಸೇನಾ ಹಾಜರಿ ಜಿನ್​ಪಿಂಗ್​ರ ವಿದೇಶನೀತಿಯ ಪ್ರಮುಖ ಕಾಳಜಿಗಳಾದವು. ಹೀಗಾಗಿ ಭಾರತದ ಜತೆ ಸಾಮರಸ್ಯ ಕಾಪಾಡಿಕೊಳ್ಳಲು ಜಿನ್​ಪಿಂಗ್ ಹೆಚ್ಚಿನ ಉತ್ಸುಕತೆ ತೋರತೊಡಗಿದರು. ಒಂದುಹಂತದಲ್ಲಿ, ಗಡಿಸಮಸ್ಯೆಯ ಬಗೆಗೂ ಅವರು ಮೃದುಧೋರಣೆ ತೋರತೊಡಗಿದರು.

ಆದರೆ ಮುಂದಿನ ದಿನಗಳಲ್ಲಿ ಮೋದಿಯವರ ವಿದೇಶಯಾತ್ರೆಗಳು ಜಿನ್​ಪಿಂಗ್​ರ ಕುತೂಹಲ ಕೆರಳಿಸತೊಡಗಿದವು. ನಮ್ಮಲ್ಲಿನ ಕೆಲ ಅತಿಬುದ್ಧಿವಂತರು (ಅಂದರೆ ಬಾಯಿಬಡುಕ ಅವಿವೇಕಿಗಳು) ಮೋದಿ ಸದಾ ವಿದೇಶದಲ್ಲಿರುತ್ತಾರೆಂದು ಕುಹಕವಾಡುವುದರಲ್ಲೇ ತಮ್ಮ ಜನ್ಮದ ಸಾರ್ಥಕತೆ ಕಾಣುತ್ತಿದ್ದಾರೆ. ವಿದೇಶಗಳಲ್ಲಿ ಮೋದಿ ಏನು ಮಾಡಿದರೆಂದು ಇವರಿಗೆ ಗೊತ್ತಾಗಿಲ್ಲ. ಆದರೆ, ಅದು ಅಧ್ಯಕ್ಷ ಜಿನ್​ಪಿಂಗ್​ರಿಗೆ ಸ್ಪಷ್ಟವಾಗಿ ತಿಳಿದುಹೋಯಿತು! ಎಷ್ಟಾದರೂ ಚೀನೀ ಕಮ್ಯೂನಿಸ್ಟರು ನಮ್ಮಲ್ಲಿನ ಅವಕಾಶವಾದಿ ಎಡಪಂಥೀಯರಿಗಿಂತ ಹೆಚ್ಚು ಕುಶಾಗ್ರಮತಿಗಳು ಹಾಗೂ ರಾಷ್ಟ್ರನಿಷ್ಠರು.

ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಹ ಸಾಕಷ್ಟು ವಿದೇಶ ಸುತ್ತುತ್ತಿದ್ದರು. ಆದರೆ ಯಾಕಾಗಿ ಹೋದರೆಂದು ಯಾರಿಗೂ ಗೊತ್ತಿಲ್ಲ. ಹೋದ ಪುಟ್ಟ ಬಂದ ಪುಟ್ಟ, ಪುಟ್ಟನ ಹೆಜ್ಜೆ ಕಾಣೋದಿಲ್ಲಾ ಎನ್ನುವಂತೆ ಅವರು ಯಾವಾಗ ಹೋದರು, ಯಾವಾಗ ಬಂದರು ಎನ್ನುವುದೂ ಯಾರಿಗೂ ಅಷ್ಟಾಗಿ ನೆನಪಿಲ್ಲ. ನನಗೆ ನೆನಪಾಗುವುದು ಅವರ ಎರಡೇ ಎರಡು ವಿದೇಶಯಾತ್ರೆಗಳು. ಒಂದು- ಈಜಿಪ್ಟ್​ನ ಶಮ್ರ್-ಅಲ್-ಶೇಖ್​ನಲ್ಲಿ ಕಾಶ್ಮೀರದ ಬಗ್ಗೆ ಪಾಕಿಸ್ತಾನೀಯರು ತಮಗನುಕೂಲವಾಗುವಂತೆ ತಯಾರಿಸಿದ ಕರಡನ್ನು ಓದದೇ ಸಹಿ ಹಾಕಿ ನಗೆಪಾಟಲಿಗೀಡಾದದ್ದು, ಇನ್ನೊಂದು- ಮಂಡಿಯ ಶಸ್ತ್ರಚಿಕಿತ್ಸೆಗೆಂದು ಅಮೆರಿಕಾಗೆ ಹೋದದ್ದು. ಈಗ ಮೋದಿಯವರು ವಿದೇಶಗಳಿಗೆ ಹೋದದ್ದರಿಂದ ಕಳೆದ ಮೂರು ವರ್ಷಗಳಲ್ಲಿ ಏನೇನಾಗಿದೆ ಎನ್ನುವುದು ಅಧ್ಯಕ್ಷ ಜಿನ್​ಪಿಂಗ್​ರಿಗೆ ಗೊತ್ತಿದೆ, ನನಗೂ ಗೊತ್ತಿದೆ. ಅದನ್ನು ನಿಮಗೆ ಹೇಳುತ್ತೇನೆ, ಕೇಳಿ.

ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್​ಗಳಲ್ಲಿ ಸೇನಾನೆಲೆಗಳು ಹಾಗೂ ಸಾಮರಿಕ ಸವಲತ್ತುಗಳನ್ನು ಗಳಿಸಿಕೊಂಡು ಭಾರತವನ್ನು ಸುತ್ತುವರಿಯುವಂತಹ ‘ಮುತ್ತಿನ ಹಾರ’ ಎಂದು ಕರೆಯಲ್ಪಡುವ (ನಾನದನ್ನು ‘ಕುಟುಕುಕೊಂಡಿಗಳ ಹಾರ’ ಎನ್ನುತ್ತೇನೆ) ಸೇನಾ ಸರಪಳಿಯನ್ನು ಚೀನಾ ಸ್ಥಾಪಿಸಿದ್ದು ನಿಮಗೆ ಗೊತ್ತಿದೆಯಷ್ಟೇ. ಆ ಸರಪಳಿಯನ್ನು ಕಿತ್ತೊಗೆಯುವುದಲ್ಲದೇ ಅಳಿದುಳಿದ ಚೀನೀ ಕುಟುಕುಕೊಂಡಿಗಳ ಸುತ್ತ ‘ಹೂಮಾಲೆ’ ಎಂಬ ಹೆಸರಿನ ಸೇನಾನೆಲೆಗಳ ಸರಪಳಿಯನ್ನು ನಿರ್ವಿುಸಿ ಚೀನೀಯರನ್ನು ಕಟ್ಟಿ ಹಾಕುವುದು ಮೋದಿ ಮಾಡಹೊರಟ ಕೆಲಸ. ತಮ್ಮ ಸತತ ವಿದೇಶಯಾತ್ರೆಗಳ ಮೂಲಕ ಮೋದಿ ಅದನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ. ಪರಿಣಾಮವಾಗಿ ಹಿಂದಿನ ವಾಜಪೇಯಿ ಸರ್ಕಾರ ಉತ್ತರದ ತಾಜಿಕಿಸ್ತಾನದಲ್ಲಿ ಸ್ಥಾಪಿಸಿದ್ದ, ನಂತರ ಮನಮೋಹನ್ ಸಿಂಗ್ ಸರ್ಕಾರ ನಿರ್ಲಕ್ಷಿಸಿದ್ದ, ವಾಯುನೆಲೆಯನ್ನು ಈಗ ಭಾರತ ಮತ್ತೆ ಕೈಗೆ ತೆಗೆದುಕೊಂಡು ಅಭಿವೃದ್ಧಿಪಡಿಸುತ್ತಿದೆ. ಪಶ್ಚಿಮದ ಖತರ್ ಮತ್ತು ಒಮಾನ್​ಗಳ ಜತೆ ಮನಮೋಹನ್ ಸಿಂಗ್ ಸರ್ಕಾರ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದಗಳನ್ನು ಮತ್ತಷ್ಟು ಪರಿಷ್ಕರಿಸಿ ಆ ದೇಶಗಳಲ್ಲಿ ಭಾರತಕ್ಕೆ ಸೇನಾ ಸವಲತ್ತುಗಳನ್ನು ಮೋದಿ ಗಳಿಸಿಕೊಟ್ಟಿದ್ದಾರೆ. ಪಾಕಿಸ್ತಾನದ ಗ್ವಾಡಾರ್​ಗೆ ಕೇವಲ 70 ಕಿಲೋಮೀಟರ್ ದೂರದಲ್ಲಿ ಇರಾನ್​ನ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಮೋದಿ ಚಾಲನೆ ಕೊಟ್ಟಿದ್ದಾರೆ. ದಕ್ಷಿಣದ ಮೊಝಾಂಬಿಕ್, ಮಡಗಾಸ್ಕರ್, ಹಾಗೂ ಮಾಲ್ಡೀವ್ಸ್ ಗಳಲ್ಲಿಯೂ ಸರ್ವೇಕ್ಷಣಾ ಹಾಗೂ ಸೇನಾ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಸೇಶಲ್ಸ್ ಹಾಗೂ ಮಾರಿಷಸ್​ಗಳಲ್ಲಂತೂ ಒಂದೊಂದು ದ್ವೀಪವನ್ನು ಇಡಿಯಾಗಿ ಪಡೆದುಕೊಂಡು ಅಲ್ಲಿ ಭಾರತದ ಸೇನಾನೆಲೆಗಳನ್ನು ಸ್ಥಾಪಿಸತೊಡಗಿದ್ದಾರೆ! ಇನ್ನು ಪೂರ್ವದತ್ತ ತಿರುಗಿದರೆ ವಿಯೆಟ್ನಾಮ್ ಮತ್ತು ಫಿಜಿಗಳಲ್ಲೂ ಸೇನಾ ಸೌಲಭ್ಯಗಳನ್ನು ಭಾರತಕ್ಕೆ ಗಳಿಸಿಕೊಟ್ಟಿದ್ದಾರೆ, ಜತೆಗೆ ಆಸ್ಟ್ರೇಲಿಯಾ ಮತ್ತು ಜಪಾನ್ ಜತೆಗೆ ಸೇನಾ ಸಹಭಾಗಿತ್ವವನ್ನು ಸ್ಥಾಪಿಸಿದ್ದಾರೆ. ಅಮೆರಿಕಾ ಜತೆ ಇತ್ತೀಚೆಗೆ ವೇಗವಾಗಿ ಹೆಚ್ಚುತ್ತಿರುವ ಸೇನಾಸಹಕಾರದ ಬಗ್ಗೆ ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಟ್ಟಿನಲ್ಲಿ ಹೀಗೆ ತಮ್ಮ ಅಸಾಧಾರಣ ಯೋಜನೆಗಳ ಮೂಲಕ ಮೋದಿ ಚೀನಾವನ್ನು ಸಮರ್ಥವಾಗಿ ಕಟ್ಟಿಹಾಕಿಬಿಟ್ಟಿದ್ದಾರೆ. ಇದರ ಜತೆಗೇ ದಕ್ಷಿಣ ಏಷ್ಯಾದಲ್ಲಿ ಚೀನಾ ಹಿಂದೆ ಗಳಿಸಿದ್ದ ಸೇನಾ ಅನುಕೂಲತೆಗಳನ್ನು ಮೋದಿ ಕಿತ್ತುಕೊಂಡಿದ್ದಾರೆ. ಅವರದನ್ನು ಆರಂಭಿಸಿದ್ದು ಶ್ರೀಲಂಕಾದಲ್ಲಿ ಚೀನಾ ಪರವಾಗಿದ್ದ ಮಹಿಂದ ರಾಜಪಕ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುವಂತೆ, ಭಾರತದ ಮಿತ್ರ ಮೈತ್ರಿಪಾಲ ಸಿರಿಸೇನ ಗೆಲ್ಲುವಂತೆ ಸಂಚುಹೂಡುವ ಮೂಲಕ. ಪರಿಣಾಮವಾಗಿ ಆ ದ್ವೀಪರಾಷ್ಟ್ರದ ಹಂಬನ್​ತೋಟದಲ್ಲಿ ಚೀನಾ ಹಿಂದೆ ಗಳಿಸಿಕೊಂಡಿದ್ದ ಸವಲತ್ತುಗಳಿಗೆ ಈಗ ಸಂಚಕಾರ ಒದಗಿದೆ. ಹಾಗೆಯೇ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್​ನಲ್ಲೂ ಈಗ ಭಾರತ ಚೀನಾಗಿಂತಲೂ ಹೆಚ್ಚು ನೌಕಾಸೇನಾ ಸವಲತ್ತುಗಳನ್ನು ಪಡೆದುಕೊಂಡಿದೆ. ದಕ್ಷಿಣ ಏಷ್ಯಾದ ಈ ಮೂರು ದೇಶಗಳು ಕಳೆದೆರಡು ವರ್ಷಗಳಲ್ಲಿ ಚೀನಾವನ್ನು ದೂರವಿಟ್ಟು ಭಾರತವನ್ನು ಅಪ್ಪಿಕೊಂಡಿವೆ. ಇವುಗಳ ಜತೆಗೇ ಭೂತಾನ್ ಹಾಗೂ ನೇಪಾಳಗಳಲ್ಲಿನ ಭಾರತದ ಸೇನಾ ಸವಲತ್ತುಗಳನ್ನು ಮೋದಿ ಸರ್ಕಾರ ಯುದ್ಧಸನ್ನದ್ಧ ಸ್ಥಿತಿಯಲ್ಲಿರಿಸಿದೆ.

ಹೀಗೆ ಹಿಂದೂ ಮಹಾಸಾಗರದಲ್ಲಿ ಚೀನಾದ ‘ಮುತ್ತಿನ ಹಾರ’ದ ಸುತ್ತಲೂ ಬಲಿಷ್ಠ ‘ಹೂಹಾರ’ವನ್ನು ನಿರ್ವಿುಸಿ ಆ ದೇಶದ ಕೈಗಳನ್ನು ಕಟ್ಟಿಹಾಕಿರುವ ಮೋದಿ ಸಹಜವಾಗಿಯೇ ಜಿನ್​ಪಿಂಗ್​ರ ಕಣ್ಣು ಕೆಂಪಗಾಗಿಸಿದ್ದಾರೆ. ಮೋದಿಯವರ ಹುಮ್ಮಸ್ಸನ್ನು ತಗ್ಗಿಸಿ ಅವರು ಚೀನಾದ ಯೋಜನೆಗಳಿಗೆಲ್ಲಾ ಕಲ್ಲು ಹಾಕದಂತೆ ಎಚ್ಚರಿಸಲು ಜಿನ್​ಪಿಂಗ್ ಎರಡು ಹಂತದ ಯೋಜನೆಯನ್ನು ರೂಪಿಸಿದರು. ಮೊದಲನೆಯ ಹಂತದಲ್ಲಿ ಭಾರತವನ್ನು ದಕ್ಷಿಣ ಏಷ್ಯಾದ ಎಲ್ಲೆಯೊಳಗೇ ಕಟ್ಟಿಹಾಕುವ ತನ್ನ ಲಾಗಾಯ್ತಿನ ತಂತ್ರದಂತೆ ಪಾಕಿಸ್ತಾನವನ್ನು ಭಾರತದ ವಿರುದ್ಧ ಛೂ ಬಿಟ್ಟರು. ಅದರಂತೆ ಪಾಕಿಸ್ತಾನ ಗಡಿತಂಟೆ ಆರಂಭಿಸಿತೇನೋ ನಿಜ. ಆದರೆ ಭಾರತ ಉಗ್ರ ಪ್ರತಿಕ್ರಿಯೆ ತೋರಿದ್ದರಿಂದ ಪಾಕಿಸ್ತಾನ ತಣ್ಣಗಾಗಿಹೋಗಿದೆ. ಪರಿಣಾಮವಾಗಿ ಜಿನ್​ಪಿಂಗ್ ತಮ್ಮ ಯೋಜನೆಯ ಎರಡನೆಯ ಹಂತವನ್ನು ಜಾರಿಗೊಳಿಸುವ ಒತ್ತಡಕ್ಕೊಳಗಾಗಿದ್ದಾರೆ. ಅದೆಂದರೆ ಭಾರತವನ್ನು ನೇರವಾಗಿ ಹೆದರಿಸುವುದು. ಪ್ರಸಕ್ತ ದೊಕ್ಲಮ್ ಬಿಕ್ಕಟ್ಟಿನ ಮೂಲ ಇದು. ಈ ಪ್ರಕರಣ ಎತ್ತಿ ತೋರುತ್ತಿರುವುದು ಚೀನೀಯರ ಚಾಣಾಕ್ಷತೆಗಿಂತಲೂ ಮೋದಿಯವರ ನಡೆಗಳಿಂದಾಗಿ ಅಧ್ಯಕ್ಷ ಜಿನ್​ಪಿಂಗ್ ಅವರಲ್ಲುಂಟಾಗಿರುವ ಹತಾಶೆಯನ್ನು. ಇದರ ವಿವರವಾದ ವಿಶ್ಲೇಷಣೆ ಮುಂದಿನವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top