Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಮುಕ್ತಾಯವಾಗದಿರಲಿ ಮುಕ್ತ ವಿವಿ ಕತೆ!

Tuesday, 17.10.2017, 3:00 AM       No Comments

| ಡಾ. ಮಂಜುನಾಥ ಬಿ.ಎಚ್

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮುಕ್ತ ವಿವಿಯನ್ನು ಮುಚ್ಚುವುದೇ ಸೂಕ್ತ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರಲ್ಲ, ವಿದ್ಯಾರ್ಥಿಗಳ ಕುರಿತ ಇವರ ಕಾಳಜಿ ಇಷ್ಟೇನಾ? ಈ ಹಗರಣಗಳ ಸೂತ್ರಧಾರರಿಗೆ ಶಿಕ್ಷೆ ಆಗಲೇಬೇಕು. ಆದರೆ ಅದಕ್ಕೂ ಹೆಚ್ಚಿನ ಮಹತ್ವ ನೊಂದ, ನೋವುಂಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿರಬೇಕು.

ಕೆಲವು ದಿನಗಳ ಹಿಂದೆ ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದೆ. ಶ್ರೀರಂಗಪಟ್ಟಣದ ಬಳಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಫಲಕಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಕಾರಿನಿಂದಿಳಿದು ಪ್ರತಿಭಟನೆಯ ಕುರಿತು ಮಾಹಿತಿ ಕೇಳಿದೆ. ಸಂಘಟನೆಯ ನೂರಾರು ವಿದ್ಯಾರ್ಥಿಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್​ಒಯು) ವಿದ್ಯಾರ್ಥಿಗಳು ವಿವಿಯ ಉಳಿವಿಗಾಗಿ ನಡೆಸುತ್ತಿದ್ದ ರ್ಯಾಲಿಯಾಗಿತ್ತದು. ಉತ್ತಮ ಉದ್ದೇಶದಿಂದ ನಡೆಯುತ್ತಿದ್ದ ಪ್ರತಿಭಟನಾ ನಡಿಗೆಗೆ ನೈತಿಕ ಬೆಂಬಲ ಸೂಚಿಸಿ ಅವರೊಡನೆ ಕೆಲ ಹೆಜ್ಜೆ ಹಾಕಿದೆ.

ಎರಡು ದಿನಗಳ ಬಳಿಕ ದಿನಪತ್ರಿಕೆಯಲ್ಲಿ ವರದಿಯೊಂದನ್ನು ನೋಡಿ ಹೌಹಾರಿಬಿಟ್ಟೆ. ಮುಕ್ತ ವಿವಿ ವಿದ್ಯಾರ್ಥಿ ನಂದೀಶ್ ಎಂಬ ಪ್ರತಿಭಾವಂತ ಯುವಕ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿದ್ದ. ಮಳವಳ್ಳಿ ತಾಲೂಕಿನ ಆತ 2014ರಲ್ಲಿ ಕೆಎಸ್​ಒಯುನಲ್ಲಿ ಸ್ನಾತಕೋತ್ತರ ಪದವಿಗಾಗಿ ಪ್ರವೇಶ ಪಡೆದಿದ್ದರು. ಪ್ರಥಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ನಂದೀಶ್, ಉಪನ್ಯಾಸಕ ಹುದ್ದೆಗಾಗಿ ರಾಜ್ಯ ಸರ್ಕಾರ ನಡೆಸುವ ಕೆ-ಸೆಟ್ ಪರೀಕ್ಷೆಯನ್ನು ಬರೆದು, ಉತ್ತೀರ್ಣರೂ ಆಗಿದ್ದರು. ಆದರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) 2013ರಿಂದ ವಿವಿಧ ಕೋರ್ಸಗಳ ಮಾನ್ಯತೆಯನ್ನು ರದ್ದುಗೊಳಿಸಿಬಿಟ್ಟಿತ್ತು. ಇತ್ತ ಕೆ-ಸೆಟ್ ಪರೀಕ್ಷೆ ಉತ್ತೀರ್ಣರಾದರೂ, ಸ್ನಾತಕೋತ್ತರ ಅಧ್ಯಯನ ಮಾಡಿದ್ದರೂ ನಂದೀಶರಂತಹ ಸಾವಿರಾರು ವಿದ್ಯಾರ್ಥಿಗಳ ಪ್ರಮಾಣಪತ್ರಕ್ಕೆ ಬೆಲೆಯೇ ಇಲ್ಲದಂತಾಯಿತು.

ನಂಜನಗೂಡಿನ ರೂಪಶ್ರೀ ಎಂಬ ವಿದ್ಯಾರ್ಥಿನಿ ಕೆಎಸ್​ಒಯುಗೆ ಬಿಎ ಪದವಿಗಾಗಿ 2013ರಲ್ಲಿ ಪ್ರವೇಶ ಪಡೆದಿದ್ದರು. ಬಿಎ ಪದವಿಯ ಬಳಿಕ ಮೈಸೂರಿನ ಕಾಲೇಜೊಂದರಲ್ಲಿ ಎಲ್​ಎಲ್ ಬಿ ಪದವಿಗೆ ದಾಖಲಾದರು. ಆದರೆ ಆಕೆಯ ಪದವಿ ಯುಜಿಸಿಯಿಂದ ಮಾನ್ಯತೆ ಹೊಂದಿಲ್ಲ ಎಂಬ ಕಾರಣಕ್ಕೆ ಆಕೆಯ ದಾಖಲಾತಿ ನಿರಾಕರಿಸಲ್ಪಟ್ಟಿತು. ಇದರಿಂದ ವಿಚಲಿತರಾದ ರೂಪಶ್ರೀ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯ, 2013ರ ಬಳಿಕ ಯುಜಿಸಿ ಮಾನ್ಯತೆ ಇಲ್ಲದಿದ್ದರೂ ಮಾನ್ಯತೆ ಇದೆ ಎಂಬಂತೆ ತಪ್ಪು ಮಾಹಿತಿ ನೀಡಿದ್ದು ತಪ್ಪು ಎಂದು ತೀರ್ಪಿತ್ತ ನ್ಯಾಯಾಲಯ, ಆಕೆಗೆ ಪರಿಹಾರವಾಗಿ 2 ಲಕ್ಷ ರೂಪಾಯಿ ನೀಡುವಂತೆ ಆದೇಶಿಸಿತು. ಆಕೆಗೆ ಪರಿಹಾರ ಧನ ಇನ್ನೂ ಲಭಿಸಿಲ್ಲ, ಪದವಿಗಂತೂ ಬೆಲೆಯೇ ಇಲ್ಲ.

ಇಂತಹ ಸಾವಿರಾರು ನಂದೀಶರು, ರೂಪಾರ ಭವಿಷ್ಯ ಅವರದಲ್ಲದ ತಪ್ಪಿಗೆ ಗಂಡಾಂತರಕ್ಕೆ ಸಿಲುಕಿದೆ. ವಿದ್ಯಾರ್ಥಿಗಳ ರಕ್ಷಣೆಗೆ ಧಾವಿಸಬೇಕಾಗಿದ್ದ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆಗಳಂತೂ ಮುಕ್ತ ವಿವಿಯನ್ನು ಮುಚ್ಚುವುದೊಂದೇ ನಮ್ಮ ಮುಂದುಳಿದಿರುವ ಆಯ್ಕೆ ಎಂಬಂತಹಮಾತುಗಳನ್ನೂ ಆಡಿದ್ದಾರೆ!

ಬಡತನ, ಮನೆಯವರ ನಿರಾಸಕ್ತಿ ಮತ್ತಿತರ ಕಾರಣದಿಂದ ಉನ್ನತ ಶಿಕ್ಷಣದಿಂದ ವಂಚಿತರಾದವರಿಗಾಗಿ 1996ಲ್ಲಿ ’ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಘೊಷವಾಕ್ಯವನ್ನಿಟ್ಟುಕೊಂಡು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು. ಬಿಎ, ಬಿಕಾಂ, ಎಂಎ ಹಾಗೂ ಎಂಕಾಂ ಪದವಿಗಳನ್ನು ದೂರಶಿಕ್ಷಣದ ಮೂಲಕ ಕೆಎಸ್​ಒಯು ಒದಗಿಸುತ್ತಿತ್ತು. ಉನ್ನತ ಶಿಕ್ಷಣಕ್ಕಾಗಿ ಪ್ರತಿದಿನದ ತರಗತಿಗಳಿಗೆ ಹೋಗಲಸಾಧ್ಯವಾದ ಯುವಕರಿಗಾಗಿ ಹಾಗೂ ಯೌವನ ಕಾಲದಲ್ಲಿ ಉನ್ನತ ಶಿಕ್ಷಣ ಪಡೆಯಲಾಗದೆ ಜ್ಞಾನದಾಹಕ್ಕಾಗಿ ಓದಬಯಸುವವರಿಗೆ ಸೂಕ್ತ ವೇದಿಕೆಯಾಗಿತ್ತು ಈ ಮುಕ್ತ ವಿಶ್ವವಿದ್ಯಾಲಯ.

ಆದರೆ ಬರುಬರುತ್ತಾ ವಿವಿಯ ಸ್ಥಿತಿಗತಿ ಬದಲಾಗುತ್ತಾ ಹೋಯಿತು. ಯುಜಿಸಿ, ಹಿಂದಿನ ದೂರ ಶಿಕ್ಷಣ ಮಂಡಳಿ(ಡೆಕ್), ಮಾನವ ಸಂಪನ್ಮೂಲ ಮಂತ್ರಾಲಯ ಮತ್ತು ಇತರ ನಿಯಂತ್ರಕ ಸಂಸ್ಥೆಗಳ ನಿಯಮಗಳನ್ನು ಮೀರಿ ಮುಕ್ತ ವಿವಿ ತನ್ನ ವ್ಯಾಪ್ತಿಯನ್ನು ದಾಟಿ, ವಿವಿಧ ಕೋರ್ಸ್​ಗಳನ್ನು (ಖಛ್ಚಿಜ್ಞಜ್ಚಿಚ್ಝ /Mಛಿಛಜ್ಚಿಚ್ಝ /ಕಚ್ಟಚಞಛಿಛಜ್ಚಿಚ್ಝ /ಘ್ಠ್ಟಜ್ಞಿಜ, ಅಖಿಖಏ ಇಟ್ಠ್ಟಛಿಠ, ಛಿಠ್ಚಿ,) ರಾಜ್ಯದಲ್ಲಿ ಹಾಗೂ ಪ್ರಾದೇಶಿಕ ವ್ಯಾಪ್ತಿ ಮೀರಿ ಹೊರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಖಾಸಗಿ ಪಾಲುದಾರಿಕೆ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆರಂಭಿಸಿಬಿಟ್ಟಿತು. ಶುದ್ಧಜ್ಞಾನದ ಪ್ರಸಾರಕ್ಕಾಗಿ ಸ್ಥಾಪಿತವಾದ ವಿವಿ ಆಡಳಿತಗಾರರ, ಅಧಿಕಾರಿಗಳ ಹಣದ ದಾಹಕ್ಕೆ ಅಭಿವೃದ್ಧಿಯ ಹೆಸರಿನ ಕೊಡಲಿ ಏಟನ್ನು ತಿನ್ನತೊಡಗಿತು.

ಈ ಖಾಸಗಿ ಪಾಲುದಾರಿಕೆ ಸಂಸ್ಥೆಗಳು ತಮ್ಮ ಅಡಿಯಲ್ಲಿ ಉಪ ಪಾಲುದಾರಿಕೆ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ನಿಯಮಬಾಹಿರವಾಗಿ ವಿಶ್ವವಿದ್ಯಾನಿಲಯದ ಅನುಮತಿಯೊಂದಿಗೆ ರಾಜ್ಯದಲ್ಲಿ ಹಾಗೂ ಪ್ರಾದೇಶಿಕ ವ್ಯಾಪ್ತಿ ಮೀರಿ ಹೊರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಸುಮಾರು 4500ಕ್ಕೂ ಹೆಚ್ಚು ಶೈಕ್ಷಣಿಕ ಶಾಖೆಗಳನ್ನು ತೆರೆದು ವಿವಿಧ ಕೋರ್ಸಗಳಿಗೆ ಪ್ರವೇಶ ನೀಡತೊಡಗಿದವು. 2011ರಲ್ಲಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಯುಜಿಸಿ ಮಾನ್ಯತೆಗೆ ತೊಂದರೆಯಾಗುವುದರಿಂದ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವುದೇ ಶಾಖೆಗಳನ್ನು ತೆರೆಯುವಂತಿಲ್ಲ ಎಂದು ನಿರ್ದೇಶಿಸಿದರೂ ಆಗ ವಿವಿ ಆಡಳಿತದಲ್ಲಿದ್ದ ದಪ್ಪಕಿವಿಗಳಿಗೆ ಅದು ನಾಟಲೇ ಇಲ್ಲ.

ಮುಕ್ತ ವಿವಿ ಮಾನ್ಯತೆಯ ಅವಧಿ 2013ರಲ್ಲಿ ಅಂತ್ಯಗೊಂಡಿತು. ಅದಾದ ಮೇಲೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮಾನ್ಯತೆಗಾಗಿ ಕೋರಿ ಅರ್ಜಿಯನ್ನು ಸಲ್ಲಿಸುವ ಗೋಜಿಗೇ ಹೋಗದೆ, ಅಂದಿನ ಡೆಕ್ ಮತ್ತು ಯುಜಿಸಿಯಿಂದ ಹಲವಾರು ಬಾರಿ ಮಾನ್ಯತೆ ನವೀಕರಣಗೊಳಿಸಿಕೊಳ್ಳುವಂತೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಾನ್ಯತೆ ಮುಕ್ತಾಯಗೊಂಡ ಬಳಿಕವೂ 2014, 2015ರಲ್ಲೂ ಕೋರ್ಸಗಳನ್ನು ಮುಂದುವರಿಸಿ ವಿದ್ಯಾರ್ಥಿಗಳ ಭವಿಷ್ಯದೊಡನೆ ಚೆಲ್ಲಾಟವಾಡತೊಡಗಿತು. ಉನ್ನತ ವಿದ್ಯಾಭ್ಯಾಸ ತಮ್ಮ ಭವಿಷ್ಯವನ್ನು ಸುಂದರಗೊಳಿಸಬಹುದೆಂದು ಆಸೆಪಟ್ಟ ವಿದ್ಯಾರ್ಥಿಗಳ ಇಂದಿನ ಪಾಡಿಗೆ, ಅವರ ಭವಿಷ್ಯದ ಆತಂಕಕ್ಕೆ ಹೊಣೆ ಹೊರುವವರು ಯಾರು?

ಪ್ರಸ್ತುತ ಮುಕ್ತ ವಿವಿ ಆಡಳಿತ ಮಂಡಳಿ ಯುಜಿಸಿ ಮಾನ್ಯತೆಗಾಗಿ ತಾನು ಮಾಡಬೇಕಾದ ಕೆಲಸಗಳನ್ನು ನಿಷ್ಠೆಯಿಂದಲೇ ಮಾಡುತ್ತಿದೆ; ಯುಜಿಸಿ ತಜ್ಞರ ಸಮಿತಿ ಸೂಚಿಸಿದ ಪರಿಹಾರ ಕ್ರಮಗಳನ್ನು ಈಗಾಗಲೇ ಅನುಷ್ಠಾನಕ್ಕೆ ತಂದಿದೆ; ಯುಜಿಸಿಗೆ ಅಗತ್ಯ ದಾಖಲಾತಿಗಳನ್ನೂ ಸಲ್ಲಿಸಿದೆ. ಇಷ್ಟಾದರೂ ಯುಜಿಸಿ ಮಾನ್ಯತೆ ನವೀಕೃತವಾಗುವ ಲಕ್ಷಣಗಳೇ ಕ್ಷೀಣವಾಗಿವೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮುಕ್ತ ವಿವಿಯನ್ನು ಮುಚ್ಚುವುದೇ ಸೂಕ್ತ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರಲ್ಲ, ವಿದ್ಯಾರ್ಥಿಗಳ ಕುರಿತ ಇವರ ಕಾಳಜಿ ಇಷ್ಟೇನಾ? ಈ ಹಗರಣಗಳ ಸೂತ್ರಧಾರರಿಗೆ ಶಿಕ್ಷೆ ಆಗಲೇಬೇಕು. ಆದರೆ ಅದಕ್ಕೂ ಹೆಚ್ಚಿನ ಮಹತ್ವ ನೊಂದ, ನೋವುಂಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿರಬೇಕು.

ಒಂದು ವೇಳೆ ವಿವಿಗೆ ಮಾನ್ಯತೆ ಸಿಕ್ಕರೂ, ಅಥವಾ ಬೇರೆ ಹೆಸರಿನಲ್ಲಿ ವಿಶ್ವ ವಿದ್ಯಾಲಯವನ್ನು ನಡೆಸಿದರೂ ಪ್ರಸ್ತುತ ಸಮಸ್ಯೆ ಎದುರಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಏನು ಮಾಡಬೇಕು? ಅವರ ಶ್ರಮ, ಹಣ, ಸಮಯ ಇವ್ಯಾವುದಕ್ಕೂ ಕಿಲುಬು ಕಾಸಿನ ಬೆಲೆಯೂ ಇಲ್ಲವೇ ಹಾಗಾದರೆ? ಪ್ರತಿಭಾವಂತ ವಿದ್ಯಾರ್ಥಿಗಳು ರೋಸಿಹೋಗಿ ದಯಾಮರಣ ಯಾಚಿಸುವಾಗಲೂ ಚಕಾರವೆತ್ತದ ಸರ್ಕಾರ, ಉನ್ನತ ಶಿಕ್ಷಣ ಇಲಾಖೆಯಾದರೂ ಏಕೆ ಬೇಕು? ಯುಜಿಸಿ, ಕೇಂದ್ರ ಸರ್ಕಾರಕ್ಕೆ ಬರಿಯ ಪತ್ರ ಬರೆಯುವುದಷ್ಟೇ ಉನ್ನತ ಶಿಕ್ಷಣ ಇಲಾಖೆಯ ಕೆಲಸವಲ್ಲ. ಯುಜಿಸಿಯೊಡನೆ ನಿರಂತರ ರ್ಚಚಿಸಿ, ವಿವಿಯಲ್ಲಿ ಅನುಷ್ಠಾನಕ್ಕೆ ತಂದಿರುವ ಪಠ್ಯಕ್ರಮ, ನಿಯಮಾವಳಿಗಳ ಬದಲಾವಣೆಗಳನ್ನು ಮನದಟ್ಟು ಮಾಡುವ ಜವಾಬ್ದಾರಿಯನ್ನೂ ಇಲಾಖೆ ಹೊರಬೇಕಿದೆ.

ದೇಶದ ಕೆಲವೇ ಸರ್ಕಾರಿ ಮುಕ್ತ ವಿವಿಗಳಲ್ಲಿ ರಾಜ್ಯದ ಕೆಎಸ್​ಒಯು ಸಹ ಪ್ರಮುಖವಾದುದು. ನಾಲ್ವಡಿ ಕೃಷ್ಣರಾಜ ಒಡೆಯರರ ದೂರದೃಷ್ಟಿಯ ಫಲವಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರು ಶೈಕ್ಷಣಿಕ ಕ್ರಾಂತಿಯ ತಾಣವಾಗಿಯೂ ಗುರುತಿಸಲ್ಪಟ್ಟಿತು. ಮೈಸೂರಿನಲ್ಲೇ ಮಾನಸ ಗಂಗೋತ್ರಿ ಸನಿಹದಲ್ಲಿ ಸರ್ವಸಜ್ಜಿತ ಮುಕ್ತ ವಿಶ್ವವಿದ್ಯಾಲಯ ಇರುವುದು ನಗರಕ್ಕೆ ಶೋಭೆಯೇ ಆಗಿತ್ತು. ಈ ಎಲ್ಲಾ ಕಾರಣಗಳಿಂದ ವಿದ್ಯೆಯ ಹಸಿವುಳ್ಳವರಿಗೆ ಮೈಸೂರಿನಲ್ಲಿ ನಿತ್ಯವೂ ವಿದ್ಯಾದಾಸೋಹವೇ ನಡೆಯುತ್ತಿತ್ತು.

ಆದರೆ ಇಂದಿನ ಪರಿಸ್ಥಿತಿ ಕಂಡರೆ ಶಿಕ್ಷಣದ ಕುರಿತಾದ ಉದಾತ್ತ ಯೋಚನೆ, ಯೋಜನೆಗಳು ವಿಶ್ವವಿದ್ಯಾಲಯದ ಆಡಳಿತಗಾರರಿಗೆ, ಉನ್ನತ ಶಿಕ್ಷಣ ಇಲಾಖೆಗೆ ಇಲ್ಲವೇನೋ ಎನಿಸುತ್ತದೆ. ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಕೆಲ ಖಾಸಗಿ ವಿವಿಗಳು, ಡೀಮ್ಡ್ ವಿವಿಗಳು ಇಂತಹ ಅಪದ್ಧಕ್ಕೆ ಎಡೆ ಮಾಡಿಕೊಡುವುದೂ ಉಂಟು. ಆದರೆ ಸರಕಾರೀ ಸಂಸ್ಥೆಯಾದ ಕೆಎಸ್​ಒಯುನಲ್ಲಿ ನಡೆದ ಅಕ್ರಮ ಮಾತ್ರ ದುರಂತ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲಾದರೂ ವಿವಿ ಉಳಿಸಿಕೊಳ್ಳುವ ಕಾರ್ಯ ಸರ್ಕಾರದಿಂದ ನಡೆಯಬೇಕಿದೆ. ಆದರೆ ಸರಕಾರವೇ ಮುಕ್ತ ವಿವಿಗೆ ಬೀಗ ಜಡಿಯುವ ಯತ್ನ ನಡೆಸುತ್ತಿರುವುದು ವಿವಿಯನ್ನು ಇಂದಿನ ಪರಿಸ್ಥಿತಿಗೆ ತಂದ ಭ್ರಷ್ಟರನ್ನು ರಕ್ಷಿಸಲು ನಡೆಸುತ್ತಿರುವ ವ್ಯವಸ್ಥಿತ ಹುನ್ನಾರದಂತೆಯೇ ಜನರ ಕಣ್ಣಿಗೆ ಭಾಸವಾಗುತ್ತಿದೆ!

(ಲೇಖಕರು ಸಾಮಾಜಿಕ ಕಾರ್ಯಕರ್ತರು, ತಜ್ಞವೈದ್ಯರು)

Leave a Reply

Your email address will not be published. Required fields are marked *

Back To Top