Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಮುಂಬೈ ಇಂಡಿಯನ್ಸ್​ಗೆ ಸತತ 5ನೇ ಜಯ

Friday, 21.04.2017, 3:00 AM       No Comments

ಇಂದೋರ್: ಭರ್ಜರಿ ಫಾರ್ಮ್​ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್​ಮನ್​ಗಳ ಸ್ಪೋಟಕ ಆಟದ ಫಲವಾಗಿ ಐಪಿಎಲ್-10ರಲ್ಲಿ ಗೆಲುವಿನ ಓಟ ಮುಂದುವರಿದಿದೆ. ಹಾಶಿಂ ಆಮ್ಲ (104* ರನ್, 60 ಎಸೆತ, 8 ಬೌಂಡರಿ, 6 ಸಿಕ್ಸರ್) ಶತಕ ನಿರ್ವಹಣೆ ನಡುವೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 8 ವಿಕೆಟ್​ಗಳಿಂದ ಮುಂಬೈಗೆ ಶರಣಾಯಿತು.

ಹೋಳ್ಕರ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್ ಆರಂಭಿಕ ಹಾಶಿಂ ಆಮ್ಲ ಸೊಗಸಾದ ಶತಕ ಹಾಗೂ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ (40 ರನ್, 18 ಎಸೆತ, 4 ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ತಂಡ 4 ವಿಕೆಟ್​ಗೆ 198 ರನ್ ಗಳಿಸಿತು. ಪ್ರತಿಯಾಗಿ ಮುಂಬೈ ತಂಡ 15.3 ಓವರ್​ಗಳಲ್ಲೇ 2 ವಿಕೆಟ್​ಗೆ 199 ರನ್ ಗಳಿಸಿ ಸತತ 5ನೇ ಗೆಲುವಿನ ನಗೆ ಬೀರಿತು. ಅತ್ತ ಪಂಜಾಬ್ ತಂಡ ಸತತ 4ನೇ ಸೋಲು ಎದುರಿಸಿತು.

ಪಂಜಾಬ್ ಉತ್ತಮ ಆರಂಭ: ಆರಂಭಿಕರಾದ ಶಾನ್ ಮಾರ್ಷ್ (26) ಹಾಗೂ ಆಮ್ಲ ಪಂಜಾಬ್​ಗೆ ಉತ್ತಮ ಬುನಾದಿ ಹಾಕಿದರು. ಈ ಜೋಡಿ 35 ಎಸೆತಗಳಲ್ಲಿ 45 ರನ್ ಕಲೆಹಾಕಿತು. ನಂತರ ಬಂದ ವೃದ್ಧಿಮಾನ್ ಸಾಹ (11) ನಿಧಾನ ಗತಿಯ ಬ್ಯಾಟಿಂಗ್ ಮಾಡಿದರೂ ಮತ್ತೊಂದು ತುದಿಯಲ್ಲಿದ್ದ ಆಮ್ಲ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. 2ನೇ ವಿಕೆಟ್​ಗೆ 34 ರನ್ ಕಲೆಹಾಕಿದ ಸಾಹ, 11ನೇ ಓವರ್​ನಲ್ಲಿ ಕೃನಾಲ್ ಪಾಂಡ್ಯ ಎಸೆತಕ್ಕೆ ಬೌಲ್ಡ್ ಆದರು.

ಸಿಡಿದ ಮ್ಯಾಕ್ಸ್​ವೆಲ್

ಸಾಧಾರಣ ಮೊತ್ತದತ್ತ ಪಂಜಾಬ್ ತಂಡ ಮುಖಮಾಡಿದ್ದ ವೇಳೆ ಮ್ಯಾಕ್ಸ್​ವೆಲ್ ಬಿರುಸಿನ ಬ್ಯಾಟಿಂಗ್ ಮೂಲಕ ಮೊತ್ತ ಹಿಗ್ಗಿಸಿದರು. ಸರಾಸರಿ 7ರಂತೆ ಇದ್ದ ತಂಡದ ಮೊತ್ತವನ್ನು ಏಕಾಏಕಿ 10ಕ್ಕೆ ಏರಿಸಿದರು. 15ನೇ ಓವರ್ ಎಸೆತದ ಮೆಕ್ಲೀನಘನ್ ಓವರ್​ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸೇರಿದಂತೆ 28 ರನ್ ಕಲೆಹಾಕುವ ಮೂಲಕ ಬೃಹತ್ ಮೊತ್ತಕ್ಕೆ ಮುನ್ನುಡಿ ಬರೆದರು. 16ನೇ ಓವರ್ ಎಸೆದ ಮಾಲಿಂಗ ಓವರ್​ನಲ್ಲಿ ಆಮ್ಲ-ಮ್ಯಾಕ್ಸ್​ವೆಲ್ ಜೋಡಿ 22ರನ್ ಸಿಡಿಸಿತು. ಕೇವಲ 2 ಓವರ್​ಗಳಲ್ಲೇ (28, 22 ರನ್) ಪಂಜಾಬ್ 50ರನ್ ಕಲೆಹಾಕಿತು. ಮಾಲಿಂಗ ಎಸೆತದಲ್ಲೇ ಆಮ್ಲ ಒಟ್ಟಾರೆ 51 ರನ್ ಕಸಿದರು. ಇದು ಐಪಿಎಲ್ ಪಂದ್ಯದಲ್ಲಿ ಒಬ್ಬ ಬೌಲರ್ ವಿರುದ್ಧ ಬ್ಯಾಟ್ಸ್ ಮನ್ ಕಸಿದ 2ನೇ ಗರಿಷ್ಠ ರನ್. ಉಮೇಶ್ ಯಾದವ್ ಎಸೆತದಲ್ಲಿ ಕೊಹ್ಲಿ 52 ರನ್ ಕಸಿದಿರುವುದು ಐಪಿಎಲ್ ದಾಖಲೆ.

ಪಂಜಾಬ್ ತಂಡದ ಬೃಹತ್ ಮೊತ್ತ ಮುಂಬೈ ಬ್ಯಾಟ್ಸ್​ಮನ್​ಗಳ ಪಾಲಿಗೆ ಯಾವುದೇ ಸವಾಲು ಎನಿಸಲಿಲ್ಲ. ಆರಂಭಿಕರಾದ ಪಾರ್ಥಿವ್ ಪಟೇಲ್ (37 ರನ್, 18 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಜೋಸ್ ಬಟ್ಲರ್ (77ರನ್, 37 ಎಸೆತ, 7 ಬೌಂಡರಿ, 5 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಭರ್ಜರಿ ಮುನ್ನುಡಿ ಬರೆಯಿತು. ಈ ಜೋಡಿ ಮೊದಲ ವಿಕೆಟ್​ಗೆ 35ಎಸೆತಗಳಲ್ಲಿ 81 ರನ್ ಕಲೆಹಾಕಿತು. ಪಾರ್ಥಿವ್ ಪಟೇಲ್ ನಿರ್ಗಮನದ ಬಳಿಕ ಬಟ್ಲರ್​ಗೆ ಜತೆಯಾದ ನಿತೀಶ್ ರಾಣಾ (62* ರನ್, 34 ಎಸೆತ, 7 ಸಿಕ್ಸರ್) 2ನೇ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು. 2ನೇ ವಿಕೆಟ್​ಗೆ ಈ ಜೋಡಿ 85 ರನ್ ಗಳಿಸಿ ಬೇರ್ಪಟ್ಟಿತು. ಸರಾಸರಿ 10ರಂತೆ ರನ್​ಕಲೆಹಾಕಿದ ಮುಂಬೈ ಬ್ಯಾಟ್ಸ್​ಮನ್​ಗಳು ಪಂಜಾಬ್ ಬೌಲರ್​ಗಳ ಪಾಲಿಗೆ ದುಸ್ವಪ್ನವಾದರು. ಬಟ್ಲರ್ ನಿರ್ಗಮನದ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಸಿಕ್ಕ 4 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿದಂತೆ 15 ರನ್​ಗಳಿಸಿ, 27ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಮ್ಲ-ಮ್ಯಾಕ್ಸ್​ವೆಲ್ ರನ್​ಹೊಳೆ

ಮ್ಯಾಕ್ಸ್​ವೆಲ್ ಆಗಮನಕ್ಕೂ ಮೊದಲು, 11 ಓವರ್​ಗಳ ಅಂತ್ಯಕ್ಕೆ 80 ರನ್ ಗಳಿಸಿದ್ದ ಪಂಜಾಬ್ ಸಾಧಾರಣ ಮೊತ್ತ ಪೇರಿಸುವುದೇ ದುಸ್ತರವಾಗಿತ್ತು. ಸಾಹ ನಿರ್ಗಮನದ ಬಳಿಕ ಆಮ್ಲ ಜತೆಯಾದ ಮ್ಯಾಕ್ಸ್​ವೆಲ್ ಇನಿಂಗ್ಸ್ ದಿಕ್ಕನ್ನೇ ಬದಲಿಸಿದರು. ಈ ಜೋಡಿ ಎದುರಿಸಿದ ಕೇವಲ 33 ಎಸೆತಗಳಲ್ಲಿ 83 ರನ್ ಕಲೆಹಾಕಿತು. ಮುಂಬೈ ಬೌಲರ್​ಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಮ್ಯಾಕ್ಸ್​ವೆಲ್ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದು ತುದಿಯಲ್ಲಿ ಆಮ್ಲರಿಂದ ಅಗತ್ಯ ಸಾಥ್ ಪಡೆದರೂ, ಬುಮ್ರಾ ಎಸೆದ ಚಾಣಾಕ್ಷತನದ ನಿಧಾನಗತಿಯ ಎಸೆತಕ್ಕೆ ಬೌಲ್ಡ್ ಆಗಿ ನಿರಾಸೆ ಅನುಭವಿಸಿದರು. ಬಳಿಕ ಬಂದ ಸ್ಟೋಯಿನಿಸ್ (1) ನಿರಾಸೆ ಅನುಭವಿಸಿದರು. ಬಳಿಕ ಅಕ್ಷರ್ ಪಟೇಲ್ (4*) ಜತೆಗೂಡಿ 16 ಎಸೆತಗಳಲ್ಲಿ 32ರನ್ ಕಲೆಹಾಕಿತು. ಮಾಲಿಂಗ ಎಸೆದ ಇನಿಂಗ್ಸ್​ನ ಕೊನೇ ಓವರ್​ನ ಮೊದಲ 2 ಎಸೆತಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಆಮ್ಲ ಶತಕ ಪೂರೈಸಿದರು.

ಕಿಂಗ್ಸ್ 11 ಪಂಜಾಬ್: 4 ವಿಕೆಟ್​ಗೆ 198

ಹಾಶಿಂ ಆಮ್ಲ ಅಜೇಯ 104

ಮಾರ್ಷ್ ಸಿ ಪೊಲ್ಲಾರ್ಡ್ ಬಿ ಮೆಕ್ಲೀನಘನ್ 26

ಸಾಹ ಬಿ ಕೃನಾಲ್ ಪಾಂಡ್ಯ 11

ಮ್ಯಾಕ್ಸ್​ವೆಲ್ ಬಿ ಬುಮ್ರಾ 40

ಸ್ಟೋಯಿನಿಸ್ ಸಿ ಪೊಲ್ಲಾರ್ಡ್ ಬಿ ಮೆಕ್ಲೀನಘನ್ 1

ಅಕ್ಷರ್ ಪಟೇಲ್ ಔಟಾಗದೆ 4

ಇತರೆ: 12, ವಿಕೆಟ್ ಪತನ: 1-46, 2-80, 3-163, 4-166. ಬೌಲಿಂಗ್: ಹಾರ್ದಿಕ್ ಪಾಂಡ್ಯ 2-0-18-0, ಮೆಕ್ಲೀನಘನ್ 4-0-46-2, ಹರ್ಭಜನ್ 2-0-12-0, ಮಾಲಿಂಗ 4-0-58-0, ಕೃನಾಲ್ ಪಾಂಡ್ಯ 4-0-29-1, ಬುಮ್ರಾ 4-0-30-1.

ಮುಂಬೈ ಇಂಡಿಯನ್ಸ್: 15.3 ಓವರ್​ಗಳಲ್ಲಿ 2 ವಿಕೆಟ್​ಗೆ 199

ಪಾರ್ಥಿವ್ ಸಿ ಮ್ಯಾಕ್ಸ್​ವೆಲ್ ಬಿ ಸ್ಟೋಯಿನಿಸ್ 37

ಬಟ್ಲರ್ ಸಿ ಮ್ಯಾಕ್ಸ್​ವೆಲ್ ಬಿ ಮೋಹಿತ್ 77

ನಿತೀಶ್ ರಾಣಾ ಅಜೇಯ 62

ಹಾರ್ದಿಕ್ ಪಾಂಡ್ಯ ಔಟಾಗದೆ 15

ಇತರೆ: 8, ವಿಕೆಟ್ ಪತನ: 1-81, 2-166. ಬೌಲಿಂಗ್: ಸಂದೀಪ್ ಶರ್ಮ 3-0-39-0, ಇಶಾಂತ್ ಶರ್ಮ 4-0-58-0, ಮೋಹಿತ್ ಶರ್ಮ 2.3-0-29-1, ಸ್ಟೋಯಿನಿಸ್ 2-0-28-1, ಅಕ್ಷರ್ ಪಟೇಲ್ 2-0-20-0, ಸ್ವಪ್ನಿಲ್ ಸಿಂಗ್ 2-0-22-0.

ಪಂದ್ಯಶ್ರೇಷ್ಠ: ಜೋಸ್ ಬಟ್ಲರ್

-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top