Thursday, 20th September 2018  

Vijayavani

ಸಿಎಂ ಕುಟುಂಬದ ವಿರುದ್ಧ ಬಿಜೆಪಿ ಭೂ ಅಸ್ತ್ರ - ಮೈಸೂರು, ರಾಮನಗರದಲ್ಲೂ ಭೂ ಅಕ್ರಮ - ಬಿಜೆಪಿ ನಾಯಕರಿಂದ ಭೂ ಚಕ್ರ        ಹಾಸನದಲ್ಲಿ ಗೌಡರ ಕುಟುಂಬದಿಂದ ಗೋಮಾಳ ಕಬಳಿಕೆ - ದೇಶಪಾಂಡೆಗೆ ದೂರು -ಎ.ಮಂಜುರಿಂದ ಕಂಪ್ಲೆಂಟ್​ ದಾಖಲು        ಬಿಜೆಪಿಯಿಂದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ - ದಂಗೆ ಏಳುವಂತೆ ಸಿಎಂ ಕರೆ - ಎಚ್ಡಿಕೆ ಮಾತಿನ ಬೆನ್ನಲ್ಲೇ ದಾಂಧಲೆ ಶುರು        ಎಚ್​ಡಿಕೆ-ಬಿಎಸ್​ವೈ ವಾಗ್ದಾಳಿ ಬೆನ್ನಲ್ಲೇ ಹೈಡ್ರಾಮಾ -ಯಡಿಯೂರಪ್ಪ ನಿವಾಸದೆದುರು ಕೈ ಕಾರ್ಯಕರ್ತರ ಹಂಗಾಮಾ        ಡಾಲರ್ಸ್ ಕಾಲನಿ ನಿವಾಸದಲ್ಲಿ ಗಲಾಟೆ - ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನ - ಬಿಎಸ್​ವೈ ಭಾವಚಿತ್ರ ಹರಿದು ಹಾಕಿ ಆಕ್ರೋಶ        ಇಲ್ಲಿ ನಿಮ್ಮ ಸರ್ಕಾರ, ಅಲ್ಲಿ ನಮ್ಮ ಸರ್ಕಾರ - ನಿಮ್ಮ ಯಾವುದೇ ಧಮ್ಕಿಗೂ ಹೆದರಲ್ಲ -  ಅಟ್ಯಾಕ್​ಗೆ ಬಿಎಸ್​ವೈ ಕೌಂಟರ್​ ಅಟ್ಯಾಕ್       
Breaking News

…ಮುಂದೆ ದಕ್ಕೀತೆ ಕಾಯಂ ಸ್ಥಾನ?

Wednesday, 22.11.2017, 3:04 AM       No Comments

‘ಇಂದು ನನಗೆ ಬಿದ್ದ ಹೊಡೆತಗಳು, ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳಾಗಲಿವೆ’- ಇದು 1928ರ ಸೈಮನ್ ಆಯೋಗದಲ್ಲಿ ಒಬ್ಬ ಭಾರತೀಯನನ್ನೂ ಸೇರ್ಪಡೆ ಮಾಡಿಕೊಳ್ಳದಿರುವುದರ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಶಾಂತಿಯುತ ಪ್ರತಿಭಟನೆಯ ವೇಳೆ ನಡೆದ ಲಾಠಿಪ್ರಹಾರದಲ್ಲಿ ಭೀಕರ ಪೆಟ್ಟಿಗೆ ತುತ್ತಾದ ನಂತರ ಲಾಲಾ ಲಜಪತ್ ರಾಯ್ ಅವರಿಂದ ಹೊಮ್ಮಿದ ದಿಟ್ಟನುಡಿಗಳು.

‘ಸೂರ್ಯನು ಎಂದಿಗೂ ಮುಳುಗದ ವಿಶಾಲ ಸಾಮ್ರಾಜ್ಯ ಮತ್ತು ಅದರ ಪರಿಮಿತಿಯ ಸ್ವರೂಪವೇನು ಎಂಬುದು ಇನ್ನೂ ಖಚಿತವಾಗಿ ಗೊತ್ತಿಲ್ಲದ ಪ್ರಭುತ್ವ’- ಎಂಬುದು ಶತಮಾನಗಳುದ್ದಕ್ಕೂ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ದಕ್ಕಿದ ಒಂದು ‘ಅಸೂಯೆ ಹುಟ್ಟಿಸುವ ಹಣೆಪಟ್ಟಿ’!.

ಬ್ರಿಟಿಷ್ ಪ್ರಭುತ್ವ ಅದೆಷ್ಟು ಉದ್ದಗಲಕ್ಕೆ ಹಬ್ಬಿತ್ತೆಂದರೆ, ಅದರ ಅಧೀನದ ಸೀಮೆಗಳಲ್ಲಿನ ಕನಿಷ್ಠಪಕ್ಷ ಒಂದಾದರೂ ಭಾಗದಲ್ಲಿ ಸೂರ್ಯಪ್ರಕಾಶ ಬೆಳಗುತ್ತಿರುತ್ತಿತ್ತು. ಈ ಬಗ್ಗೆ ಭಾರತದ ಸಂಸದೀಯ ಪಟುವೊಬ್ಬರು, ‘ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗಲಿಲ್ಲ ಎಂಬುದರಲ್ಲಿ ಅಚ್ಚರಿಯೇನಿಲ್ಲ, ಕಾರಣ ಕತ್ತಲಲ್ಲಿ ಬ್ರಿಟಿಷರನ್ನು ನಂಬುವುದಕ್ಕೆ ದೇವರಿಗೂ ಸಾಧ್ಯವಾಗುತ್ತಿರಲಿಲ್ಲ’ ಎಂಬ ಚಮತ್ಕಾರಿಕ ಮಾತಾಡಿದ್ದಾರೆ!

ಅದು 1947ರ ಆಗಸ್ಟ್ 15ರ ಮಧ್ಯರಾತ್ರಿ. ಜಗವೆಲ್ಲ ಮಲಗಿರುವಾಗ ಭಾರತವು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಂಡಿದ್ದ ಅನುಪಮ ಕ್ಷಣವದು. ನಿಸ್ಸಂಶಯವಾಗಿ ಅದು ಬ್ರಿಟಿಷ್ ಸಾಮ್ರಾಜ್ಯಸೂರ್ಯ ಅಸ್ತಂಗತನಾದ ಘಟ್ಟವಾಗಿತ್ತು. ಆದಾಗ್ಯೂ, ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದು ಬ್ರಿಟಿಷರ ವಿರುದ್ಧದ ನಮ್ಮ ಕಡೆಯ ಹೋರಾಟವಾಗಿರಲಿಲ್ಲ. 1945ರಲ್ಲಿ ಎರಡನೇ ಮಹಾಯುದ್ಧ ಸಮಾಪನಗೊಂಡ ನಂತರ, ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಹೊಸತೊಂದು ತಿರುವು ಸಿಕ್ಕಿತು; ಸುಸ್ಥಾಪಿತ ರಾಷ್ಟ್ರಗಳು ಪ್ರಾಬಲ್ಯಕ್ಕಾಗಿ ಕಸರತ್ತು ನಡೆಸುತ್ತಿದ್ದುದು, ಹೊಸ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಹತ್ವಕ್ಕಾಗಿಯೂ ಹೆಣಗುತ್ತಿದ್ದುದು ಇದಕ್ಕೆ ಸಾಕ್ಷಿ. ಈ ಕಾಲಘಟ್ಟಗಳಲ್ಲಿ, ಅಮೆರಿಕನ್ನರು ಮತ್ತು ಬ್ರಿಟಿಷರಂಥ ವಿಶ್ವಶಕ್ತಿಗಳೊಂದಿಗೆ ಭಾರತವು ರಾಜಕೀಯವಾಗಿಯೂ ಮತ್ತು ಆರ್ಥಿಕವಾಗಿಯೂ ಹಣಾಹಣಿ ನಡೆಸುವುದರಲ್ಲೇ ದಿನದೂಡಬೇಕಾಯಿತು. ಭಾರತದ ಇಂಥ ಕಸರತ್ತುಗಳಲ್ಲೊಂದೆನಿಸಿದ್ದು ಮತ್ತು ಈಗಲೂ ಮುಂದುವರಿದಿರುವಂಥದ್ದು- ವಿಶ್ವಸಂಸ್ಥೆಯ ಮಿಲಿಟರಿ ಅಂಗವಾಗಿರುವ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಳ್ಳುವುದು. 1945ರಲ್ಲಿ ಸ್ಥಾಪಿಸಲ್ಪಟ್ಟ ಮತ್ತು ಒಂದು ಸಾರ್ವತ್ರಿಕ ಅಂತರಸರ್ಕಾರೀಯ ಸರ್ಕಾರಿ ಸಂಘಟನೆಯಾಗಿ ಮುಂದುವರಿಯುತ್ತಿರುವ ವಿಶ್ವಸಂಸ್ಥೆಗೆ, ಅಂತಾರಾಷ್ಟ್ರೀಯ ಸಹಕಾರವನ್ನು ಪ್ರವರ್ತಿಸುವ, ಅಂತಾರಾಷ್ಟ್ರೀಯ ಸುವ್ಯವಸ್ಥೆಯನ್ನು ಹುಟ್ಟುಹಾಕುವ ಮತ್ತು ಕಾಯ್ದುಕೊಂಡು ಹೋಗುವ ಕಾರ್ಯಭಾರವನ್ನು ಹೊರಿಸಲಾಗಿತ್ತು; ವಿಶ್ವಸಂಸ್ಥೆಯು ರೂಪುಗೊಳ್ಳುವುದಕ್ಕೂ ಮುನ್ನ ಎರಡು ಮಹಾಯುದ್ಧಗಳು ಜರುಗಿದ್ದುದು ಇದಕ್ಕಿದ್ದ ಕಾರಣ. ವಿಶ್ವಸಂಸ್ಥೆಯು ತನ್ನ ನಿರ್ಣಯ ತಳೆಯುವ ಪ್ರಕ್ರಿಯೆಯಲ್ಲಿ, ‘ರಾಷ್ಟ್ರಸೌಹಾರ್ದದ’ ಮೂಲಭೂತ ತತ್ತ್ವವನ್ನು ಅನುಸರಿಸಲು ಯತ್ನಿಸುತ್ತದೆ; ಅಂದರೆ, ರಾಷ್ಟ್ರ ರಾಷ್ಟ್ರಗಳ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಕ್ರಿಯೆಗಳಿಂದ ಪರಸ್ಪರ ಮಾನ್ಯತೆಯ ಮುದ್ರೆ ಪಡೆದ ಸೌಜನ್ಯ ಮತ್ತು ಸ್ನೇಹಸೂತ್ರಗಳ ಅನುಸರಣೆಗೆ ಇದು ಯತ್ನಿಸುತ್ತದೆ. ಆರಂಭಿಕ ಹಂತದಲ್ಲಿ 51 ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದ ವಿಶ್ವಸಂಸ್ಥೆಯ ಸದಸ್ಯತ್ವವು, ಭಾರತವೂ ಸೇರಿದಂತೆ ಪ್ರಸ್ತುತ ಇಂಥ 193 ಸದಸ್ಯ ರಾಷ್ಟ್ರಗಳನ್ನುನ ಹೊಂದಿದೆ.

ವಿಶ್ವಸಂಸ್ಥೆಯ ಸ್ವರೂಪವು ಐದು ಮುಖ್ಯ ಅಂಗಗಳನ್ನು ಆಧರಿಸಿರುವಂಥದ್ದು. ಅವೆಂದರೆ-

1) ಸಾಮಾನ್ಯ ಸಭೆ: ಇದು ಪ್ರಮುಖ ಪರ್ಯಾಲೋಚಕ ಘಟಕವಾಗಿದ್ದು ಪ್ರಾತಿನಿಧಿಕ ಸ್ವರೂಪವನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಹತ್ವವಿರುವ ಚರ್ಚಾವಿಷಯಗಳ ಕುರಿತಾಗಿ ಇದು ಠರಾವುಗಳನ್ನು ರೂಪಿಸುತ್ತದೆ.

2) ಭದ್ರತಾ ಮಂಡಳಿ: ದೇಶ ದೇಶಗಳ ನಡುವೆ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ಕಾರ್ಯಭಾರವನ್ನು ಇದಕ್ಕೆ ಹೊರಿಸಲಾಗಿದೆ.

3) ಆರ್ಥಿಕ ಮತ್ತು ಸಾಮಾಜಿಕ ಮಂಡಳಿ: ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಹಕಾರ ಹಾಗೂ ಅಭಿವೃದ್ಧಿಯ ಪ್ರವರ್ತನೆ ಇದರ ಹೊಣೆಗಾರಿಕೆ.

4) ಆಡಳಿತ ಕಚೇರಿ: ವಿಶ್ವಸಂಸ್ಥೆಯ ವಿಭಿನ್ನ ಅಂಗಗಳ ಕಾರ್ಯನಿರ್ವಹಣೆಗೆ ಅನುವುಮಾಡಿಕೊಡುವ ಘಟಕವಿದು.

5) ಅಂತಾರಾಷ್ಟ್ರೀಯ ನ್ಯಾಯಾಲಯ: ಇದು ಅತ್ಯಂತ ಮಹತ್ವದ ನ್ಯಾಯಿಕ ಅಂಗವಾಗಿದೆ.

ವಸಾಹತುಶಾಹಿಗಳ ಆಡಳಿತಕ್ಕೊಳಪಟ್ಟ ಅಧೀನ ಪ್ರದೇಶಗಳ ನಿರ್ವಹಣೆಗೆಂದು ಮೂಲತಃ ವಿನ್ಯಾಸಗೊಳಿಸಲಾದ ನ್ಯಾಸಧಾರಿತ್ವದ ಮಂಡಳಿ ಎಂಬ ಆರನೇ ಅಂಗವು- ವಸಾಹತುಶಾಹಿ ಚಿತ್ತಸ್ಥಿತಿ/ವರ್ತನೆಯು ಹೆಚ್ಚೂಕಮ್ಮಿ ಅಂತ್ಯಗೊಂಡಿರುವುದರಿಂದಾಗಿ- ಪ್ರಸ್ತುತ ಸಕ್ರಿಯವಾಗಿಲ್ಲ. ಆದರೆ ವಸಾಹತುಶಾಹಿ ಚಿತ್ತಸ್ಥಿತಿ/ವರ್ತನೆ ನಿಜಕ್ಕೂ ಅಂತ್ಯಗೊಂಡಿದೆಯೇ ಎಂಬುದು ಪ್ರತ್ಯೇಕ ಚರ್ಚೆಯ ವಿಚಾರ.

ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳನ್ನು ನೆರವೇರಿಸುವ ಸಲುವಾಗಿ, ಭದ್ರತಾ ಮಂಡಳಿಯಂಥ ಅಂಗದ ಮೂಲಕ ಅದಕ್ಕೊಂದು ‘ಸೈನಿಕ ಬಲ’ವನ್ನು ಒದಗಿಸಲಾಗಿದೆ. ಇದು ಐದು ಕಾಯಂ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದು, ಇಂಥ ಪ್ರತಿಯೊಂದು ಕಾಯಂ ಸದಸ್ಯರಾಷ್ಟ್ರಕ್ಕೂ ಯಾವುದೇ ನಿರ್ಣಯದ ಕುರಿತಾಗಿ ‘ನಿರಾಕರಣಾಧಿಕಾರ’ (ವೀಟೋ) ಚಲಾಯಿಸುವ ಸ್ವಾತಂತ್ರ್ಯ ನೀಡಲಾಗಿದೆ. ಜತೆಗೆ, ಸರದಿಯ ಆಧಾರದ ಮೇಲೆ ನೇಮಕಗೊಳ್ಳುವ 10 ತಾತ್ಕಾಲಿಕ ಸದಸ್ಯರಾಷ್ಟ್ರಗಳನ್ನೂ ಭದ್ರತಾ ಮಂಡಳಿ ಹೊಂದಿದೆ. ಚೀನಾ, ಫ್ರಾನ್ಸ್, ಇಂಗ್ಲೆಂಡ್ (ಬ್ರಿಟನ್), ರಷ್ಯಾ ಮತ್ತು ಅಮೆರಿಕ 5 ಕಾಯಂ ಸದಸ್ಯರಾಷ್ಟ್ರಗಳೆನಿಸಿಕೊಂಡಿದ್ದರೆ, ಓರ್ವ ತಾತ್ಕಾಲಿಕ ಸದಸ್ಯರಾಷ್ಟ್ರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 7 ಬಾರಿ ಸೇವೆ ಸಲ್ಲಿಸಿರುವ ಭಾರತವು, ಕಾಯಂ ಸದಸ್ಯತ್ವಕ್ಕಾಗಿನ ಯತ್ನವೂ ಸೇರಿದಂತೆ, ಭದ್ರತಾ ಮಂಡಳಿಯ ಸುಧಾರಣೆ/ಮರುರೂಪಣೆಗೆ ಸಂಬಂಧಿಸಿದ ಹೋರಾಟದ ಮುಂಚೂಣಿಯಲ್ಲಿದೆ. ಲಭ್ಯ ಮಾಹಿತಿಗಳನುಸಾರ, ಕಾಯಂ ಸದಸ್ಯತ್ವಕ್ಕೆ ಸಂಬಂಧಿಸಿದಂತಿರುವ ಭಾರತದ ದನಿಗೆ ಐದು ಕಾಯಂ ಸದಸ್ಯರಾಷ್ಟ್ರಗಳ ಪೈಕಿ ನಾಲ್ಕು- ಅಂದರೆ ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ- ಒತ್ತಾಸೆಯಾಗಿ ನಿಂತು ಬೆಂಬಲಿಸಿವೆ. ಆದರೆ ಚೀನಾ ಮಾತ್ರ ‘ಅಡ್ಡಗೋಡೆ ಮೇಲೆ ದೀಪವಿಟ್ಟಂತೆ’ ತಟಸ್ಥ ವರ್ತನೆಗೆ ಅಂಟಿಕೊಂಡಿದೆ. ಭಾರತದ ಭೂ-ರಾಜಕೀಯ ನೆಲೆಗಟ್ಟು, ಆರ್ಥಿಕತೆ ಮತ್ತು ಪ್ರಭಾವ ಈಗಾಗಲೇ ವಿಶ್ವದಲ್ಲಿ ಜಗಜ್ಜಾಹೀರಾಗಿರುವುದರಿಂದ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನವೊಂದನ್ನು ದಕ್ಕಿಸಿಕೊಳ್ಳುವ ಅರ್ಹತೆ ಭಾರತಕ್ಕಿದೆ ಎಂಬುದು ಪ್ರಶ್ನಾತೀತ ಸಂಗತಿ. ಶಾಂತಿಪಾಲನಾ ಧ್ಯೇಯೋದ್ದೇಶದ ತಂಡಗಳಿಗೆ 1 ಲಕ್ಷಕ್ಕೂ ಅಧಿಕ ಯೋಧರನ್ನು ನೀಡುವ ಮೂಲಕ ಬದ್ಧತೆ ಹಾಗೂ ಸಮರ್ಪಣಾ ಮನೋಭಾವವನ್ನು ಮೆರೆದಿರುವ ಭಾರತ, ತನ್ಮೂಲಕ ಸೇನಾಪಡೆಗಳ ಬೃಹತ್ ಕೊಡುಗೆದಾರ ರಾಷ್ಟ್ರಗಳ ಪೈಕಿ ಒಂದೆನಿಸಿದೆ. ಹಾಗೆ ನೋಡಿದರೆ, 2013ರ ವರ್ಷವೊಂದರಲ್ಲೇ, 8,500ಕ್ಕೂ ಹೆಚ್ಚಿನ ಶಾಂತಿಪಾಲಕರನ್ನು ಭಾರತ ನಿಯೋಜಿಸಿತ್ತು ಮತ್ತು ಇದು ವಿಶ್ವಸಂಸ್ಥೆಯ ಐದು ಬೃಹತ್ ಶಕ್ತಿಗಳು ಒಟ್ಟಾಗಿ ನಿಯೋಜಿಸಿದ್ದರ ದುಪ್ಪಟ್ಟು ಪ್ರಮಾಣಕ್ಕೂ ಹೆಚ್ಚಿತ್ತು.

ಈ ಕುರಿತಾದ ಮತ್ತಷ್ಟು ಹೊಳಹುಗಳನ್ನು ಮುಂದಿನ ಕಂತಿನಲ್ಲಿ ಅವಲೋಕಿಸೋಣ.

( ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top