Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಮುಂದಾಳುಗಳಿಗೊಂದು ಮಾರ್ವಿುಕ ಸಲಹೆ

Tuesday, 28.11.2017, 3:03 AM       No Comments

| ಡಾ. ಕೆ. ಎಸ್​. ನಾರಾಯಣಾಚಾರ್ಯ

ನಮ್ಮ ಕೆಲವು ಜನನಾಯಕರು ನಾಟಕವಾಡುವುದನ್ನು ಕೈಬಿಟ್ಟು ಜನಾನುರಾಗಿಗಳಾಗಬೇಕಿದೆ. ಕೆರೆಗಳ ಹೂಳು ತೆಗೆಸಿ ನೀರು ತುಂಬಿಸುವ, ಕ್ಯಾಪಿಟೇಷನ್ ಇಲ್ಲದ ವಿದ್ಯಾಸಂಸ್ಥೆಗಳನ್ನು ಬಡವರಿಗಾಗಿ ಸ್ಥಾಪಿಸುವ ಕೈಂಕರ್ಯಕ್ಕೆ ಅವರು ಮುಂದಾಗಬೇಕಿದೆ. ಜತೆಗೆ, ನಂಬಿಕೆಗೆ ಅನರ್ಹರನ್ನು ದೂರ ಇಡುವ, ಹಿತೈಷಿಗಳನ್ನು ಕೈಬಿಡದಿರುವ ಕೆಲಸವೂ ಅವರಿಂದ ಆಗಬೇಕಿದೆ.

 ಬರೆದದ್ದೇ, ಬರೆಯುವ ರೀತಿಯಲ್ಲೇ ಬರೆದೂ ಬರೆದೂ, ಕರ್ನಾಟಕ ದಾರಿಗೆ ಬರುವುದಿಲ್ಲ ಅಂತ ಖಾತ್ರಿಯಾಗಿ ಬೇಜಾರಾಗಿ, ಈಗ ಬೇರೆ ರೀತಿಯಲ್ಲಿ ಬೇರೆ ವಿಷಯದ ಬಗ್ಗೆ ಬರೆಯೋಣವೆಂದುಕೊಂಡಾಗ, ದಿಢೀರನೆ ಆ ವಿಷಯವೇ ಹುಡುಕಿಕೊಂಡು ಬಂದಂತೆ ಒಂದು ವರದಿ! ಇದೂ ರಾಜಧರ್ಮ-ರಾಜನೀತಿಯಲ್ಲೇ ಬರುವುದರಿಂದ ನನಗೆ ಶಾಂತಿ, ದೃಢತೆ, ಸಮರ್ಥನೆ, ಪುಷ್ಟಿಗಳೂ ದೊರೆತು ಬರೆಯಲು ಆರಂಭಿಸಿದ್ದೇನೆ. ಈ ‘ಮಾರಯ್ಯ’ ಯಾರು? ನೀವು ನೋಡಿರಬಹುದು. ನಾನು ನೋಡಿಲ್ಲ. ಅಷ್ಟು ಪುಣ್ಯವಂತನಲ್ಲ ನಾನು. ಏಕೆಂದರೆ ಹಿಂದುವಾಗಿ ‘ಕೋಮುವಾದಿ’ ಎನಿಸಿಕೊಳ್ಳಲು ಸಕಲ ಅರ್ಹತೆಯನ್ನೂ ಉಳ್ಳವನೆಂದು ಪ್ರತಿಪಕ್ಷಿಗಳ ಭಾವನೆ ಇರಲಿಕ್ಕೆ ಸಾಕು. ‘ಮುಂದಿನ ಮುಖ್ಯಮಂತ್ರಿ ನಾನೇ, ನೋಡುತ್ತಿರಿ’ ಎಂಬ ಗರ್ಜನೆ ಕೇಳಿದ ಮೇಲೆ ‘ಅಯ್ಯಯ್ಯಪ್ಪ!’ ಎನಿಸಿ ಸುಸ್ತಾದೆ.

ಏನೇನೋ ನೆನಪಾಗುತ್ತಿದೆ. ದುರ್ಯೋಧನ ಅಂತ ಒಬ್ಬ ಇದ್ದ. ಹಳಬ, ಮಹಾಭಾರತ ಕಾಲದವನು. ಕಾಲವೇನು ಬಂತು? ಮಹಾಭಾರತ ಯುದ್ಧಕ್ಕೆ ಕಾರಣನಾದವನು ಅವನೇ! ತಿಳಿಯಿತಲ್ಲವೇ? ಜೂಜಿನಲ್ಲಿ ಮೋಸ, ತಟವಟ ಮಾಡಿ, ಪಾಂಡವರನ್ನು ಸೋಲಿಸಿ, ‘ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಮುಗಿಸಿ ಬನ್ನಿ. ನಿಮ್ಮ ಪಾಲಿನ ರಾಜ್ಯ ನಿಮಗೆ ಬಿಟ್ಟುಕೊಡುತ್ತೇನೆ’ ಎಂದು ವಚನ ಕೊಟ್ಟು, ಪಾಂಡವರು ನಂಬಿ, ಮುಗಿಸಿ ಬಂದು ರಾಜ್ಯ ಕೇಳಿದಾಗ ‘ಕೊಡುವುದಿಲ್ಲ’ ಅಂತ ಹೇಳಿ ‘ವಚನಭ್ರಷ್ಟ’ ಆದನಲ್ಲ, ಅದೇ ಅವನೇ ಆಗಣ ದುರ್ಯೋಧನ!. ‘ನಿಮಗೇ ಸಹಾಯ ಮಾಡುತ್ತೇನೆ’ ಎಂದು ಹೇಳಿ ನಂಬಿಸಿ, ಕೌರವರತ್ತಲೇ ನಿಂತು ಸತ್ತನಲ್ಲ? ಆ ಶಲ್ಯ? ಅವನೂ ಅಂದಿನ ‘ವಚನಭ್ರಷ್ಟ’ನೇ. ‘ನೂರು ತಪು್ಪಗಳನ್ನು ಸಹಿಸುತ್ತೇನೆ’ ಎಂದ ಶ್ರೀಕೃಷ್ಣ, ಶಿಶುಪಾಲನನ್ನು ನೂರೊಂದನೆಯ ತಪ್ಪಿಗೆ ತಲೆ ತೆಗೆದು ಕೊಂದೇಬಿಟ್ಟನಲ್ಲ? ಅವನು ‘ವಚನಬದ್ಧ, ವಚನಪ್ರಿಯ, ವಚನಪಾಲಕ, ವಚನಾಭಿಮಾನಿ’. ‘ಮಮ ಪ್ರಾಣಾ ಹಿ ಪಾಂಡವಾಃ’, ‘ನ ಮೇ ಮೋಘಂ ವಚೋ ಭವೇತ್’, ‘ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ, ಮಾಶುಚಃ’- ಎಂದೆಲ್ಲ ಹೇಳಿ, ಎಲ್ಲವನ್ನೂ ಪರಿಪಾಲಿಸಿದ ಅಂದಿನ ‘ಮೋದಿ’, ‘ಪ್ರಮೋದಿ’, ‘ಮುದಗೊಳಿಸುವವನು’, ಇದ್ದ ಕಾಲದಲ್ಲೇ ವಚನಭ್ರಷ್ಟರೂ ಇದ್ದರೆಂಬುದು ಸೋಜಿಗವಲ್ಲ. ಎಂದೆಂದಿನ ಸತ್ಯದ ಬೆರುಗು, ಮೆರುಗು, ಸೊಬಗು.

ದುರ್ಯೋಧನ ವಚನಭ್ರಷ್ಟನಾದರೂ, ರೇನ್​ಕೋಟು ಹಾಕಿಕೊಂಡು ಸ್ನಾನಮಾಡಲಿಲ್ಲ. ಹೇಗೆ ಮಾಡುತ್ತಿದ್ದನೋ, ಸ್ನಾನವನ್ನೇ ಮಾಡುತ್ತಿರಲಿಲ್ಲವೋ, ವ್ಯಾಸರು ಬರೆಯಲಿಲ್ಲ. ಒಂದು ಮಾತು ಮಾತ್ರ ನಿಜ. ಅವನು ಬಯಸಿದ್ದು, ಬೇಕಾದ್ದು ಎಲ್ಲ ಅವನ ಅರಮನೆಯಲ್ಲೇ ಇತ್ತು. ಆಗ ಖೋಟಾನೋಟು ಇರಲಿಲ್ಲ. ‘ಅಧಿಕಾರ ಸಂಪಾದನೆಗಾಗಿ ಹಣ, ಹಣ ಸಂಪಾದನೆಗಾಗಿ ಅಧಿಕಾರ’ ಎಂಬ ಸಮಯಸಾಧಕ ಸೂತ್ರ, Vicious Circle,, ಅವನಿಗೆ ಅಂದು ಇರಲಿಲ್ಲ. ಅಧಿಕಾರ? ಹಿಡಿದಿದ್ದ! ಹಣ? ಪಾಂಡವರು ರಾಜಸೂಯದಲ್ಲಿ ಸಂಪಾದಿಸಿದ್ದು ಇತ್ತು. ಉಡಾಯಿಸಿದ. ಅಂದಿನ ಪಾಂಡವರೋ? ಅಧಿಕಾರ ಉಳಿಸಿಕೊಳ್ಳಲಿಲ್ಲ. ಇಂದಿನವರೂ ಅಧಿಕಾರಕ್ಕೆ ಬಂದರೂ ಉಳಿಸಿಕೊಳ್ಳಲಿಲ್ಲ. ಪಾಂಡವರು ಕಿತ್ತಾಡಲಿಲ್ಲ, ಕಚ್ಚಾಡಲಿಲ್ಲ. ಇಂದಿನವರು ಕಚ್ಚಾಡಿದರು. ಅಂದು ವನವಾಸ, ಇಂದು ಜೈಲುವಾಸ. ಅಂದು ಅಜ್ಞಾತವಾಸ, ಇಂದು ಪರದಾಟ, ಜಗಳಾಟ. ಇದೆಲ್ಲದರ ನಡುವೆ ಚುನಾವಣೆಯೆಂಬ ಜೂಜು! ಅದೇ ಸಾಮ್ಯ! ಯಾರು ಮುಂದಿನ ಮುಖ್ಯಮಂತ್ರಿಗಳು?- ಕೇಳಿಕೊಳ್ಳಬೇಕಾದ ಪ್ರಶ್ನೆಯೇ! ಅದರೆ ನಾನು ಜೋಯಿಸನೂ ಅಲ್ಲ, ಮಂತ್ರವಾದಿಯೋ ತಂತ್ರಜ್ಞನೋ ಅಲ್ಲ. Common sense ಎನ್ನಬಹುದಾದ Uncommon sense ಅಷ್ಟಿಷ್ಟು ಇರುವ ಒಬ್ಬ ನಿರ್ಭಾಗ್ಯ ಕನ್ನಡಿಗ. ನೋಡಬಾರದ್ದನ್ನು ನೋಡುತ್ತಲೂ, ಕೇಳಬಾರದ್ದನ್ನು ಕೇಳುತ್ತಲೂ, ಸಹಿಸಲಾಗದೆ ಕುರುಡರಿಗೆ running commentary, ವೀಕ್ಷಕ ವಿವರಣೆ ಇತ್ತ ಅಂದಿನ ಸಂಜಯನಂತೆ, ನಾನೂ ಒಂದರ್ಥದಲ್ಲಿ ವ್ಯಾಸಶಿಷ್ಯನೇ. ಆದುದರಿಂದ ಸಂಬಂಧಪಟ್ಟವರಿಗೆ ಹಿತೋಪದೇಶ ಮಾಡಲು ಅರ್ಹ ಅಂತ ನನ್ನ ಭಾವನೆ.

ಅದಾರೋ ‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದು ಅಬ್ಬರಿಸಿದ್ದಾರೆ. ಚಾಣಕ್ಯ ತಂತ್ರಕ್ಕೆ ನಂದರು ಬಲಿಯಾಗುತ್ತಿದ್ದರೂ ಅಮಾತ್ಯರಾಕ್ಷಸನು ಇನ್ನೂ ತನ್ನಷ್ಟಕ್ಕೆ ‘ನಂದೋ ರಾಜಾ ಭವಿಷ್ಯತಿ’ ಎಂದು ಕನಸು ಕಾಣುತ್ತಿದ್ದನಲ್ಲ?- ಆ ಬಗೆಯ ಅಬ್ಬರಾರ್ಭಟ. ಆದರೆ ಇತಿಹಾಸಪುರುಷನಿಗೆ- ದೇವರಿಗೆ- ಇತಿಹಾಸ ನಡೆಸುವ ಮಹಾಶಕ್ತನಿಗೆ ಗೊತ್ತು, ಯಾರಾಗಬೇಕು, ಯಾರಲ್ಲ ಅಂತ.

ಎರಡನೇ ಮಹಾಯುದ್ಧದಲ್ಲಿ ಹಿಟ್ಲರನಿಗೆ ವಾರ್ತಾಪ್ರಸಾರ ಮಂತ್ರಿಯೊಬ್ಬ ಇದ್ದ, ಗೋಬೆಲ್ಸ್ ಅಂತ. ಇಂದಿರಾ ತುರ್ತಕಾಲದ ವಿ.ಸಿ. ಶುಕ್ಲಾ, ಬನ್ಸಿಲಾಲರಂತೆ- ಅವನೂ ದಿನಾ ಹಿಟ್ಲರನ ನಾಜಿ ಸೇನೆ ಸೋಲುತ್ತಾ ಬಂದರೂ ‘ಇದೋ ಇಂದು ಇಲ್ಲಿ ಗೆದ್ದೆವು, ಸಂಜೆ ಇಲ್ಲಿ…’ ಅಂತ ಬರೀ ಸುಳ್ಳಿನಲ್ಲೇ ಜನಭ್ರಾಂತಿ ಮಾಡುತ್ತಿದ್ದನಲ್ಲ? ಹಾಗೆ. ಮಾರಯ್ಯನವರೇ? ಭ್ರಾಂತಿ ಒಳ್ಳೆಯದಲ್ಲ. ಇದು ‘ಕರ್-ನಾಟಕವಯ್ಯ!’. ಕರ್ಣ, ನಾಟಕವಾಡಿ, ಕುಮಾರವ್ಯಾಸನ ಕೈಲಿ ಸುಳ್ಳು, ತಿರುಚಿ ಬರೆಸಿದ ವೃತ್ತಾಂತಗಳಂತೆ, ಕೃಷ್ಣನನ್ನೇ ಮೋಸಗಾರ, ದುರ್ಯೋಧನ ಸತ್ಯವಂತ, ಕರ್ಣ ದಾನಶೂರ ಅಂತ ಭ್ರಾಂತಿಯಾಗುವಂತೆ ಬರೆದು ಅನೇಕ ಶತಮಾನಗಳ ಕಾಲ ಮುಗ್ಧ ಕನ್ನಡ ವಿಮರ್ಶಕ, ಸಾಹಿತ್ಯಕಾರರನ್ನು ತಪು್ಪದಾರಿಗೆಳೆದನಲ್ಲ? ಆ ‘ಕರ್-ನಾಟಕ’. ಈಗ ಜನ ನಾಟಕ ನೋಡುವುದಿಲ್ಲ, ಪೇಪರು ಓದುವುದಿಲ್ಲ. ಎಲ್ಲಾ ಅಂತರ್ಜಾಲದ ಮಾಯಾಕಾಲವಯ್ಯ! ಇಲ್ಲಿ ಜನಾಭಿಪ್ರಾಯ, ಬೇರೊಂದರತ್ತ ಇದೆ. ವಚನಭ್ರಷ್ಟತೆಯ ಸಮ್ಮಿಶ್ರ ಸರ್ಕಾರವನ್ನೋ, ದಬ್ಬಾಳಿಕೆಯ, ಒಣಮಾತಿನ ಸರ್ಕಾರವನ್ನೋ ಜನ ಈಗ ಬಯಸುವುದಿಲ್ಲ. ‘ಶೌಚಗೃಹ, ಸ್ತ್ರೀಯರದ್ದೋ ಪುರುಷರದ್ದೋ?’ ಎಂದೂ ತಿಳಿಯದ ಒಬ್ಬ ಹೈಕಮಾಂಡಾದರೆ, ರಾಜ್ಯವೇ ಎಂಥ ಶೌಚಾಲಯ ಆಗುವುದೆಂದು ತಿಳಿದಿದ್ದಾರಯ್ಯ. ಅದು ಭ್ರಾಂತಿ, ಅವರ ಸರ್ಕಾರ ಬರುತ್ತದೆ ಎಂಬುದು! ಅಲ್ಲಿ ವಚನಭ್ರಷ್ಟತೆ ಎಷ್ಟು ಸಲ, ಯಾರ್ಯಾರಿಗೆ ಆಗಲಿಲ್ಲ?

ಜಯಲಲಿತಾ, ಶಶಿಕಲಾ, ಲಾಲೂ, ರೆಡ್ಡಿ- ಎಲ್ಲರೂ ಮಲಗಿ ಬರಲು ಜೈಲಿಗೆ ಹೋದರು. ತಂತಮ್ಮ ತಪು್ಪಗಳಿಂದ, ಬೇರೆಯವರ ಕುತಂತ್ರದಿಂದಲ್ಲ. ಅಂದು ತಿಲಕರೂ, ಗಾಂಧಿಯವರೂ ಜೈಲಿಗೆ ಹೋದರು. ಅಂದರೆ, ಜೈಲಿಗೆ ಹೋಗುವವರಲ್ಲಿ ಎರಡು ಬಗೆ- 1) ತಾವಾಗಿ ಸಿಕ್ಕಿಹಾಕಿಕೊಂಡು ಜೈಲು ಸೇರಿ ಮಲಗಿದವರು, 2) ಬೇರೆಯವರ ತಂತ್ರದಿಂದ ಜೈಲುಪಾಲಾದವರು. ಇದೇನು ಮಹಾ? ಶ್ರೀಕೃಷ್ಣ ಜೈಲಲ್ಲೇ ಹುಟ್ಟಿದ! ಕಳಂಕವಾಯಿತೇ? ತನ್ನ ಮನೆಯಲ್ಲೇ ದಿನಾ ಮಲಗುತ್ತಿದ್ದ ಕಂಸನಿಗೆ ಒಂದು ರಾತ್ರಿಯಾದರೂ ಸರಿನಿದ್ರೆ ಬಂತೇ? ಮಾರಯ್ಯ? ನಿಮಗೆ ಹಿತ ಹೇಳುತ್ತೇನೆ. ನಿಮಗೂ ಸಂದರ್ಭಗಳು ಸರಿಯಿಲ್ಲ. ನಿಮ್ಮವರನೇಕರು ಕೈಕೊಟ್ಟು, ಬೇರೆ ಕಡೆ ಹೋಗುತ್ತಿದ್ದಾರೆ. ಅಂದೂ ಒಬ್ಬ ಧೃತರಾಷ್ಟ್ರ ಇದ್ದ. ಅಂದರೆ ರಾಷ್ಟ್ರ ಧರಿಸಿದ್ದ ಒಬ್ಬ. ಪ್ರಧಾನ ಮಂತ್ರಿ ಇದ್ದಂತೆ ಎನ್ನಿ. ಅವನು ‘ರಾಷ್ಟ್ರಂ ಧಾರಯತಾಂ ಧ್ರುವಂ’- ‘ರಾಷ್ಟ್ರವು ಚೆನ್ನಾಗಿ ಧರಿಸಲ್ಪಡಲಿ, ಆಳಲ್ಪಡಲಿ’ ಎಂಬ ವೇದವಾಕ್ಯಕ್ಕೆ ಮರ್ಯಾದೆ ಕೊಡಲಿಲ್ಲ. ‘ಮಗನೇ? ದುರ್ಯೋಧನಯ್ಯ! ಜಗಳ ಬೇಡ, ಪಾಂಡವರಿಗೆ ಅವರ ರಾಜ್ಯ ಕೊಟ್ಟುಬಿಡು’ ಎಂದು ಒಂದು ಮಾತನ್ನು ದೃಢವಾಗಿ ಹೇಳಿದ್ದರೆ, ವೈಶಂಪಾಯನ ಕೊಳದ ಬಳಿ, ದವಡೆ, ತೊಡೆ ಮುರಿಸಿಕೊಂಡು ಆ ‘ಮಗ’ ಸಾಯುತ್ತಿರಲಿಲ್ಲ. ಧೃತರಾಷ್ಟ್ರರೇ ಹಾಗೆ! ಯುಗಯುಗಗಳಲ್ಲೂ ಮಕ್ಕಳಿಗೆ ಬುದ್ಧಿ ಹೇಳುವುದಿಲ್ಲ. ಮಕ್ಕಳು ಸಾಯುವುದನ್ನು ನೋಡಿಯೂ ಜೀವ ಹಿಡಿಯುತ್ತಾರೆ, ಅನ್ಯರ ಅನ್ನ ತಿಂದು ಕಾಳ್ಗಿಚ್ಚಿನಲ್ಲಿ ಸಾಯುತ್ತಾರೆ. ಇಂದು ಕಾಡುಗಳಿಲ್ಲ, ಕಾಳ್ಗಿಚ್ಚು ಇಲ್ಲ. ಹೊಟ್ಟೆಕಿಚ್ಚು ಇದೆ- ಗ್ಯಾಸ್ ಸಿಲಿಂಡರ್​ಗಳಿಗಿಂತಲೂ ಹೆಚ್ಚು ಶಕ್ತಿಯುತವಾಗಿರುವಂಥದು. ದೃತರಾಷ್ಟ್ರರು ಆಡದುದನ್ನು ನನ್ನಂಥ ಬಡಪಾಯಿ ಆಡಬೇಕಾಗಿದೆ. ಏಕೆ? ಧೃತರಾಷ್ಟ್ರನಿಗೆ ಕಾಣದ್ದು ವಿದುರನಿಗೆ ಕಂಡಿತ್ತು! ಏಕೆ? ಹೇಗೆ? ಅವನು ವ್ಯಾಸಶಿಷ್ಯ. ವ್ಯಾಸರ ಕಣ್ಣಲ್ಲಿ ಕಾಣಬೇಕಾದುದು ಬಹಳ ಇದೆ- ರಾಜಕೀಯ ಸತ್ಯಗಳು.

ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ; ಮಾನವಂತನಾಗಿ, ಜೀವಂತವಾಗಿ, ಜನಾದರಣೆಯೊಡನೆ, ಆಯುಷ್ಯ ಸಾರ್ಥಕವಾಗಿ ಬದುಕುವುದೇ ಮುಖ್ಯ. ಈ ಮುಖ್ಯತೆ ಜಾತೀಯತೆಯ ಬಲದಿಂದಲೋ, ಹಣಬಲದಿಂದಲೋ, ತಂತ್ರಬಲದಿಂದಲೋ, ಹೊಗಳುಭಟರು ಹಿಡಿಸುವ ಭ್ರಾಂತಿಗಳಿಂದಲೋ, ಸುಳ್ಳು ಜೋಯಿಸರ ಪೊಳ್ಳುಹರಕೆ, ಭರವಸೆಗಳಿಂದಲೋ, ಮಾಟದಿಂದಲೋ ಬರುವುದಲ್ಲ! ಮೂಢನಂಬಿಕೆಗಳಲ್ಲಿ ಇವೂ ಸೇರುತ್ತವೆ. ಕಾಯ್ದೆ ಜಾರಿಯಾಗುವ ಮುಂಚೆ, ಕಾಯ್ದೆ ತರುವವರು ವೈಶಂಪಾಯನ ಕೊಳದ ಬಳಿ ಇರುತ್ತಾರೆ. ಅದು ಭವಿಷ್ಯ, ಸಂಜಯ ಹೇಳಿದ್ದು, ವಿದುರ ಹೇಳಿದ್ದು. ಅಲ್ಲಿ ಮುರಿದ ದುರ್ಯೋಧನನ ತೊಡೆ, ಹಲ್ಲು ದವಡೆ, ದುಃಶಾಸನನ ಕರುಳು- ಯಾವುದನ್ನೂ ಸರಿಮಾಡಬಲ್ಲ ಯಾವ ವೈದ್ಯನೂ ರಂಗೂನು, ಸಿಂಗಾಪುರ, ಮಾಂಡಲೇ, ಥೈಲೆಂಡ್, ಅಮೆರಿಕ- ಎಲ್ಲೂ ಆಗ ಇರಲಿಲ್ಲ. ಈಗಲೂ ಇರುವುದಿಲ್ಲ. ಅಲ್ಲವಯ್ಯ! ಹೋದ ಮಾನವನ್ನು ಯಾರು ಸರಿಪಡಿಸುತ್ತಾರಯ್ಯ, ದೇಶೀಯಮಾನ, ವಿದೇಶಗಳಲ್ಲಿ ಸಿಗುತ್ತದೆಯೇ? ಯೋಚಿಸಿರಯ್ಯ.

ಮರ್ಯಾದೆಯಿಂದ ಬಾಳಲು ದಾರಿಗಳು- ಸಿನಿಮಾ ತಯಾರಿಸಿ, ಹುರಿಗಾಳು ಅಂಗಡಿ ಇಡಿ, ‘ಇಂದಿರಾ, ಮಂದಿರಾ, ಮದಿರಾ’ ಕ್ಯಾಂಟೀನು ಬೇಡ. ಕೂಡಿಟ್ಟ ಹಣವನ್ನು ಪಾಳುಬಿದ್ದ ದೇವಾಲಯಗಳ ಜೀಣೋದ್ಧಾರಕ್ಕೆ ಬಳಸಿ, ಜನ ಪ್ರೀತಿಸುತ್ತಾರೆ. ಕೆರೆಗಳ ಹೂಳು ತೆಗೆಸಿ, ನೀರು ತುಂಬಿಸಿ; ಕ್ಯಾಪಿಟೇಷನ್ ಇಲ್ಲದ ವಿದ್ಯಾಸಂಸ್ಥೆಗಳನ್ನು ಬಡವರಿಗಾಗಿ ಸ್ಥಾಪಿಸಿ ನಡೆಸಿ. ನಂಬಿಕೆಗೆ ಅನರ್ಹರನ್ನು ದೂರ ಇಡಿ. ಹಿತೈಷಿಗಳನ್ನು ಕೈಬಿಡಬೇಡಿ. ದಯವಿಟ್ಟು ರಾಜಕೀಯ ಬಿಟ್ಟು ಬೇರೆ ಯಾವ ಸೇವಾಕ್ಷೇತ್ರವನ್ನಾದರೂ ಆರಿಸಿಕೊಳ್ಳಿ. ದಮ್ಮಯ್ಯ! ಯಾವ ಹುತ್ತದಲ್ಲಿ ಯಾವ ಹಾವೋ? ಯಾವ ಮಠದಲ್ಲಿ ಯಾವ ಮಾರೀಚನೋ? ಯಾವ ಮಾಯಾಮೃಗವೋ? ಅದರ ಹಿಂದೆ ಯಾವ ರಾವಣನೋ? ಅವನೂ ಜಾತ್ಯತೀತನಾಗಿ ಬರೀ ಬ್ರಾಹ್ಮಣರನ್ನೇ ಹಿಂಸಿಸುತ್ತಿದ್ದ! ಹಿಂದುತ್ವದ ರಕ್ತ ಅವನಿಗೆ ತಿಳಿಯಲೇ ಇಲ್ಲ! ಮಠಾಧಿಪತಿಗಳ ದ್ವಂದ್ವ ನೋಡುತ್ತಿದ್ದೀರಲ್ಲ? ಕೆಲವು ಕಾಲಗಳು ಮುಗಿದಿರುತ್ತವೆ- ಕಾಂಗ್ರೆಸ್ಸು ಕಾಲ, ಕಮ್ಯುನಿಸ್ಟ್ ಕಾಲ, ಗಾಂಧೀವಾದದ ಕಾಲ, ನೆಹರೂಯಿಸಂ ಕಾಲ, ಇದೀಗ ಸೆಕ್ಯುಲರಿಸಂ ಕಾಲ! ಕಾಲ ಮುಗಿದಿದೆ ಎಂದರೆ ನಾಟಕ ಮುಗಿಯಿತು. ಪರದೆ ಬಿದ್ದಿತು ಎಂದು ಅರ್ಥ. ಆದುದರಿಂದ ಬದುಕಿನ ದಾರಿ ಆರಿಸಿಕೊಳ್ಳಿ. ಸಾವಿನ ದಾರಿ ಸರಿಯಲ್ಲ!

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ

ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top