Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಮಾಹಿತಿ ಯುಗದಲ್ಲಿ ಸ್ನೇಹ, ಸಂಬಂಧ, ಸ್ವಾತಂತ್ರ್ಯ!

Sunday, 13.08.2017, 3:03 AM       No Comments

ಮನುಷ್ಯ ಏಕಕಾಲಕ್ಕೆ ಹಲವು ಸಂಬಂಧಗಳನ್ನು ನಿಭಾಯಿಸಬೇಕಾಗುತ್ತದೆ. ಆದರೆ ಮಾಹಿತಿಯುಗದ ಭರಾಟೆಯಲ್ಲಿ ಒಂದೇ ವೇದಿಕೆಯಲ್ಲಿ ಈ ಸಂಬಂಧಗಳನ್ನು ನಿಭಾಯಿಸುವಾಗ ಒತ್ತಡಕ್ಕೆ ಒಳಗಾಗುತ್ತೇವೆ. ಇಮೇಜಿಗಾಗಿ ನಾವೇ ಸೃಷ್ಟಿಸಿಕೊಂಡ ನಕಲಿ ವರ್ಚಸ್ಸಿನಲ್ಲಿ ಸಿಲುಕುತ್ತಿದ್ದೇವೆ.

***

ಕಳೆದೆರಡು ವಾರಗಳನ್ನು ತೆಗೆದುಕೊಳ್ಳಿ ಸಾಕು! ಭೀಮನ ಅಮಾವಾಸ್ಯೆಯ ಗಂಡನ ಪೂಜೆ, ನಾಗರಪಂಚಮಿಯಂದು ಸೋದರರಿಗೆ ತನಿ ಎರೆಯುವುದು, ಕಳೆದ ಭಾನುವಾರ ಫ್ರೆಂಡ್​ಷಿಪ್ ಡೇ, ಮರುದಿನ ರಕ್ಷಾಬಂಧನ/ರಾಖಿ ಹಬ್ಬ – ಸಂಬಂಧಗಳನ್ನು ಸಂಭ್ರಮಿಸಲು ನಮಗಿರುವ ಅವಕಾಶಗಳು ಒಂದೇ ಎರಡೇ! ಕೂಡು ಕುಟುಂಬದ ಬುನಾದಿ, ಒಗ್ಗಟ್ಟಾದ ಗ್ರಾಮಗಳ ಭದ್ರತೆ, ಭಾಷೆ-ಸಂಸ್ಕೃತಿಗಳೆಂಬ ಆಧಾರಸ್ತಂಭಗಳು, ಸಂಗೀತ-ಸಾಹಿತ್ಯ-ಕಲೆಗಳ ಮೇಲ್ಹೊದಕೆಗಳೆಲ್ಲವೂ ಒಪ್ಪವಾಗಿದ್ದ ಆ ಕಾಲದಲ್ಲಿ ಆರಂಭಗೊಂಡಿರಬಹುದಾದ ಈ ಸಂಬಂಧಗಳ ಸಂಭ್ರಮ, ಅವೆಲ್ಲವೂ ಒಡಕಲಾಗುತ್ತಿರುವ ಇಂದಿನವರೆಗೂ ಮುಂದುವರಿಯುತ್ತಿರುವುದು ಅಚ್ಚರಿಯೇ ಸರಿ. ಬಿರುಕು ಬಿಟ್ಟ ಕುಟುಂಬಗಳಲ್ಲಿ ಮೊದಲು ಅರ್ಥ ಕಳೆದುಕೊಳ್ಳುವುದೇ ಹಬ್ಬಗಳು! ಮುರಿದ ಸಂಬಂಧಗಳ ನಡುವೆ ಆಚರಣೆ ಎಂಥದ್ದು?

ಛೆ! ಹಬ್ಬಗಳ ವಿಷಯ ಮಾತನಾಡುತ್ತಾ ಹೀಗೆ ಅಪಶಕುನ ನುಡಿಯುವುದೇಕೆ? ಎಲ್ಲೋ ಅಲ್ಲೊಂದು ಇಲ್ಲೊಂದು ಸಂಸಾರಗಳು ಮುರಿಯುತ್ತವೆ, ಕೆಲವು ಸಂಬಂಧಗಳು ಸಡಿಲವಾಗುತ್ತಿವೆ ಎಂದಮಾತ್ರಕ್ಕೆ, ಹೀಗೆ ಸಾರಾಸಗಟಾಗಿ ಸ್ನೇಹ, ಸಂಬಂಧಗಳನ್ನೂ ಅವುಗಳ ಆಚರಣೆಗಳನ್ನೂ ಪ್ರಶ್ನಿಸಿಬಿಡುವುದು ಎಷ್ಟರಮಟ್ಟಿಗೆ ಸರಿ? ಅಲ್ಲೊಂದು ಇಲ್ಲೊಂದು ಮಾತ್ರ ಆಗುತ್ತಿದ್ದರೆ ಈ ರೀತಿ ಪ್ರಶ್ನಿಸಬಾರದು. ಆದರೆ, ಎಲ್ಲೆಲ್ಲೂ ಸಂಬಂಧಗಳು ಸಡಿಲವಾಗುತ್ತಿದ್ದರೆ? ಎಲ್ಲರೂ ಆಯಾ ಸಂಬಂಧಗಳಲ್ಲಿನ ತಮ್ಮ ಪಾತ್ರ ನಿರ್ವಹಿಸಲಾಗದೆ ಹೆಣಗುತ್ತಿದ್ದರೆ? ಈ ಸಂಬಂಧಗಳು ನಮಗೆ ನಿತ್ಯವೂ ಸಂತೋಷವನ್ನು ತರುವ ಬದಲು, ಒತ್ತಡವಾಗಿ ಬೇಸರ ತರುತ್ತಿದ್ದರೆ? ಸಂಬಂಧಗಳು ವ್ಯಕ್ತಿಗಳಿಗೆ ರೆಕ್ಕೆಗಳನ್ನು ಕೊಡುವ ಬದಲು, ಹಾರುವ, ಓಡುವ, ನಡೆಯುವ, ಅಷ್ಟೇಕೆ… ಮುಕ್ತವಾಗಿ ಯೋಚಿಸುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಸರಪಳಿಗಳಾಗಿಬಿಟ್ಟರೆ?

ಮನುಷ್ಯ ಜೀವನದ ಮೂಲಾಶಯವೇ ಸ್ವಾತಂತ್ರ್ಯ. ತನ್ನ ಮನದೊಳಗೆ, ಪ್ರತಿಯೊಬ್ಬ ವ್ಯಕ್ತಿಯೂ ಸದಾ ಸ್ವತಂತ್ರವಾಗಿರಲು ಬಯಸುವ, ತನಗನ್ನಿಸಿದಂತೆ ಬದುಕಬೇಕು ಎಂದು ಹಂಬಲಿಸುವ ಜೀವ. ಆದರ್ಶ ಪರಿಸ್ಥಿತಿಯಲ್ಲಿ, ಸ್ನೇಹ ಮತ್ತು ಸಂಬಂಧಗಳು ಈ ಸ್ವತಂತ್ರ ಮನಃಸ್ಥಿತಿಗೆ ಪೂರಕ. ಅವರೊಂದಿಗೆ ಮನುಷ್ಯ ತನ್ನ ಜೀವನವನ್ನು ಸ್ವಇಚ್ಛೆಯಿಂದ ಮತ್ತು ಸ್ವಾರ್ಥದ ಅಪೇಕ್ಷೆಯಿಲ್ಲದೆ ಹಂಚಿಕೊಂಡ ಆದರ್ಶ ಪರಿಸ್ಥಿತಿಯಲ್ಲಿ ಮನುಷ್ಯ ಇನ್ನಷ್ಟು ಸ್ವತಂತ್ರನಾಗಬೇಕಾದ್ದು ಸಹಜಾಪೇಕ್ಷೆ. ಸಾಮಾನ್ಯವಾದ ಜೀವನದೃಷ್ಟಿ ಬೆಳೆಸಿಕೊಂಡು, ಒಟ್ಟಾಗಿ ಸುಖವಾಗಿ ಬದುಕುವುದೇ ಸ್ನೇಹ, ಸಂಬಂಧಗಳ ಉದ್ದೇಶವಾಗಿರುವುದರಿಂದ, ಸಂಬಂಧಗಳ ಹಂದರ ಬಲಗೊಂಡಷ್ಟೂ ಆ ಸಂಬಂಧಗಳಿಗೊಳಪಟ್ಟ ಮನುಷ್ಯರು ಹೆಚ್ಚುಹೆಚ್ಚು ಸ್ವತಂತ್ರರಾಗುತ್ತಾರೆ. ಜೊತೆಗೆ ಎಲ್ಲ ಸಂಬಂಧಗಳೂ ಮೊದಲು ಮನಸ್ಸಿನಲ್ಲಿಯೇ ಏರ್ಪಡುವುದರಿಂದ, ಕೆಲವು ಸಂಬಂಧಗಳಲ್ಲಿ ಸಣ್ಣ ಮಟ್ಟಿಗಿನ ರಾಜಿ ಇದ್ದರೂ, ಅದು ಸ್ವಯಂಪ್ರೇರಣೆಯಿಂದಲೇ ಮಾಡಿಕೊಂಡದ್ದಾಗಿರುತ್ತದೆ. ಸಂಬಂಧಗಳ ಹೆಣಿಗೆ ಗಟ್ಟಿಯಾದಷ್ಟೂ ಮನುಷ್ಯರು ಸ್ವಲ್ಪಮಟ್ಟಿಗೆ ತಮ್ಮ ಸ್ವಾತಂತ್ರ್ಯವನ್ನು ಖುದ್ದಾಗಿಯೇ ತ್ಯಜಿಸಿ, ಅದರಲ್ಲಿ ಸಂತೋಷವನ್ನೂ ಕಾಣುತ್ತಾರೆ. ಬಿಟ್ಟುಕೊಟ್ಟು ಕೃತಾರ್ಥರಾಗುತ್ತಾರೆ. ಕ್ಷಮಿಸಿ ಗೆಲ್ಲುತ್ತಾರೆ, ನಿಜವಾಗಿಯೂ ಸಂಬಂಧಗಳನ್ನು ಸಂಭ್ರಮಿಸುತ್ತಾರೆ. ತಮ್ಮ ಸ್ವಾತಂತ್ರ್ಯವನ್ನು ಮೆರೆಸುತ್ತಲೇ, ಸ್ನೇಹಿತರು-ಸಂಬಂಧಿಕರ ಸ್ವಾತಂತ್ರ್ಯಕ್ಕೆ ಯಾವ ತೊಡಕೂ ಬಾರದಂತೆ ಜಾಗ್ರತೆ ವಹಿಸುತ್ತಾರೆ. ಆದ್ದರಿಂದ, ಒಳ್ಳೆಯ ಸ್ನೇಹ-ಸಂಬಂಧಗಳಲ್ಲಿರುವ ಜನರೆಲ್ಲರೂ ಸದಾ ಸರ್ವಸ್ವತಂತ್ರರು.

ಹಾಗಾಗಿ, ಸ್ನೇಹ, ಸಂಬಂಧಗಳ ವಿಷಯಕ್ಕೆ ಬಂದಾಗ, ಆ ಸಂಬಂಧದ ಚೌಕಟ್ಟಿನೊಳಗೆ ಮಾತ್ರವಲ್ಲದೆ, ಆ ಸಂಬಂಧಕ್ಕೆ ನಿಷ್ಠನಾಗಿರುತ್ತಲೇ ಮಿಕ್ಕ ಜಗತ್ತಿನೊಂದಿಗೆ ತನ್ನಿಚ್ಛೆಯಂತೆ ವ್ಯವಹರಿಸಲು ಸ್ವಾತಂತ್ರ್ಯ ಇರಬೇಕು. ಸಂಬಂಧಗಳು ಅಂದರೆ ಅದೇ ತಾನೇ. ತಾನು ಕೇಂದ್ರವಾಗಿ ಜಗತ್ತಿನ ಇತರರೊಂದಿಗೆ ಸಹೃದಯತೆ ಬೆಳೆಸಿಕೊಳ್ಳುವುದು. ಅವರೊಂದಿಗೆ ವ್ಯವಹರಿಸುವಲ್ಲಿ ಸನ್ಮಾರ್ಗಗಳನ್ನು ಬಳಸಿಕೊಳ್ಳುವುದು. ಓರ್ವ ವ್ಯಕ್ತಿ ತನ್ನ ಪರಿಸರದಲ್ಲಿರುವ ಇತರ ವ್ಯಕ್ತಿಗಳೊಂದಿಗೆ ಬೇರೆಬೇರೆ ಪಾತ್ರ ನಿರ್ವಹಿಸುವುದು. ಸ್ನೇಹಿತ, ಜೀವನಸಂಗಾತಿಗಿಂತ ಬೇರೆಯದೇ ವ್ಯಕ್ತಿ. ಸಹೋದರಿ/ಸಹೋದರ ಎನ್ನುವುದು ಸ್ನೇಹಿತ ಮತ್ತು ಜೀವನಸಂಗಾತಿಗಿಂತಲೂ ವಿಭಿನ್ನವಾದ ಸಹೃದಯಿ ಸಂಬಂಧ. ಹಾಗಾಗಿ, ಓರ್ವ ವ್ಯಕ್ತಿ ಈ ಎಲ್ಲ ಸಂಬಂಧಗಳಲ್ಲಿ ತನ್ನ ಪಾತ್ರಕ್ಕನುಗುಣವಾದ ವ್ಯಕ್ತಿತ್ವವನ್ನು ಆರೋಪಿಸಿಕೊಂಡು, ಅದನ್ನೇ ಪೋಷಿಸಿ ಬೆಳೆಸಿಕೊಂಡು ಬರುವುದು ಸಹಜಕ್ರಮ. ಈ ಮೂರೂ ಪಾತ್ರಗಳು ಮುಖಾಮುಖಿ ಬರುವ ಸಂದರ್ಭಗಳು ಹೆಚ್ಚಿಗೆ ಇರುತ್ತಿರಲಿಲ್ಲವಾದ್ದರಿಂದ, ಹಾಗೆ ಎದುರುಬದುರು ಬಂದರೂ ಅದು ಮೂಲವ್ಯಕ್ತಿಯ ಮಧ್ಯಸ್ಥಿಕೆಯಲ್ಲಿಯೇ ಆಗುತ್ತಿದ್ದುದರಿಂದ, ಈ ಮೂರೂ ಪಾತ್ರಗಳಲ್ಲಿ, ವ್ಯಕ್ತಿಗೆ ಬೇರೆಬೇರೆ ವ್ಯಕ್ತಿತ್ವವನ್ನು ಪೋಷಿಸಿಕೊಳ್ಳುವ ಅವಕಾಶ ಇತ್ತು.

ಮಾಹಿತಿ ಯುಗದಲ್ಲಿ ಹಾಗಿಲ್ಲ! ಸ್ನೇಹಿತರು, ಕುಟುಂಬದವರು, ಎಲ್ಲರೂ ಒಟ್ಟಾಗಿರುವ ಫೇಸ್​ಬುಕ್, ವಾಟ್ಸಾಪ್, ಅಥವ ಟ್ವಿಟರನ್ನೋ ಊಹಿಸಿಕೊಂಡರೆ ವಿವರಣೆ ಸುಲಭವಾಗುತ್ತದೆ. ಎಲ್ಲರೂ ಒಂದೇ ವೇದಿಕೆಯಲ್ಲಿರುವುದರಿಂದ, ಅಲ್ಲಿನ ನಮ್ಮ ಸಂದೇಶಗಳು ಎಲ್ಲರಿಗೂ ಏಕಕಾಲಕ್ಕೆ ರವಾನೆಯಾಗುವುದರಿಂದ, ಎಲ್ಲರಿಗೂ ಒತ್ತಡ! ತಾವು ನಿರ್ವಹಿಸಬೇಕಾದ ಪಾತ್ರಗಳಲ್ಲಿ ತಾವು ಅತ್ಯುನ್ನತ ಶ್ರೇಣಿಯಲ್ಲಿಯೇ ತೇರ್ಗಡೆಯಾಗಬೇಕಾದ ಬಲವಂತ! ಇದರರ್ಥ, ಆಗ (ಅಂದರೆ ಮಾಹಿತಿಯುಗದ ಸಾಧನಗಳು ನಮ್ಮ ಜಗತ್ತನ್ನು ಸಂಪೂರ್ಣವಾಗಿ ಆವರಿಸುವ ಮುಂಚಿನ ಕಾಲದಲ್ಲಿ) ಸಂಬಂಧಗಳನ್ನು ನಿಭಾಯಿಸುವಲ್ಲಿ ನಮಗೆ ಸ್ವಾತಂತ್ರ್ಯ ಇತ್ತು. ಈಗ, ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸಂಬಂಧಗಳ ವಿಷಯಕ್ಕೆ ಬಂದಾಗ ನಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾದ, ನಮ್ಮದೇ ರೀತಿಯಲ್ಲಿ ಸಂಬಂಧಗಳನ್ನು ಪೋಷಿಸಿ ಬೆಳೆಸಿಕೊಳ್ಳಬಹುದಾದ ಸ್ವಚ್ಛಂದ ಹಕ್ಕಿಗಳಲ್ಲ. ಬಂಧಿಗಳು! ಇದಕ್ಕೆ ಅನೇಕ ಕಾರಣಗಳಿವೆಯಾದರೂ, ಕೆಲವನ್ನು ಮಾತ್ರ ಉಲ್ಲೇಖಿಸಿದ್ದೇನೆ.

ಹೋಲಿಕೆ: ಎಲ್ಲ ಸಂಬಂಧಗಳೂ ಒಂದೇ ವೇದಿಕೆಯಲ್ಲಿರುವುದರ ಮೊದಲ ತೊಂದರೆ ಎಂದರೆ, ಅದರಲ್ಲಾಗುವ ಹೋಲಿಕೆಗಳು. ಗಂಡ-ಹೆಂಡತಿ, ಅಣ್ಣ-ತಂಗಿ, ಸ್ನೇಹಿತರು ಒಂದೇ ವೇದಿಕೆಯಲ್ಲಿ ಇದ್ದಾಗ, ಮತ್ತೊಬ್ಬರ ಅಣ್ಣನನ್ನು ತನ್ನ ಅಣ್ಣನಿಗೋ, ಇನ್ನೊಬ್ಬರ ಅರ್ಧಾಂಗಿಯನ್ನು ತನ್ನವರಿಗೋ, ತಮ್ಮ ಸ್ನೇಹಿತನ ಯೋಗ್ಯತೆಯನ್ನು ಮತ್ತೊಬ್ಬರೊಂದಿಗೋ, ಅವರ ಜೀವನದ ಬಗ್ಗೆ ನಮಗೆ ದೊರೆಯುತ್ತಿರುವ ಪುರಾವೆಯ ಸಮೇತ ಹೋಲಿಸುವುದು ಸರಾಗವಾಯ್ತು. ಎಲ್ಲ ಹೋಲಿಕೆಗಳೂ ಮೂದಲಿಕೆಗಳಾಗಿ ಬದಲಾಗಬೇಕು ಎಂದೇನಿಲ್ಲ. ಅವರು ಹಾಗೆ ಮಾಡಿದರು. ಹೀಗೆ ನುಡಿದರು. ಅದನ್ನು ಕೊಂಡರು. ಇದನ್ನು ತಿಂದರು. ಇವಿಷ್ಟೂ ಮಾಹಿತಿ ನಿತ್ಯವೂ ಫೋನಿನಿಂದ ಹರಿದುಬರುತ್ತಿದ್ದರೆ ಸಾಕು. ನಾವೂ ಹಾಗೆಯೇ ಇರಬೇಕೆ? ಹಾಗೆಯೇ ನುಡಿಯಬೇಕೆ? ನಡೆಯಬೇಕೆ? ಅದನ್ನೇ ಕೊಳ್ಳಬೇಕೆ? ನಮಗೆ ಹಾಗೆ ಬದುಕುವ ಯೋಗ್ಯತೆ ಇದೆಯೇ? ಇಲ್ಲವೇ? ಇತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ.

ಅಸಹಜತೆ: ಮೇಲಿನ ಹೋಲಿಕೆಯ ಒತ್ತಡ ಅತಿಯಾದಾಗ, ನಾನೆಂಬ ಸಹಜ ವ್ಯಕ್ತಿಗೆ ಕೀಳರಿಮೆ ಶುರುವಾಗಿ, ತಾನು ಇನ್ನೊಬ್ಬನಾಗಲು ಹವಣಿಸುತ್ತಾನೆ. ಗಂಡ-ಹೆಂಡಿರ ನಡುವೆ, ಸೋದರ-ಸೋದರಿಯರ ನಡುವೆ, ಸ್ನೇಹಿತರ ನಡುವೆ ಎಲ್ಲರ ಸಂಬಂಧಗಳೂ ಒಂದೇ ರೀತಿಯಾಗಿ ಅಥವಾ ಒಂದೇ ಹದದಲ್ಲಿ ಇರುವುದಿಲ್ಲ. ಹಾಗಾಗಿ, ಪ್ರೀತಿ ತೋರುವ ವಿಷಯದಲ್ಲೋ, ಮಾತನಾಡುವ ಧಾಟಿಯಲ್ಲೋ, ಜಗಳ ಆಡುವ ರೀತಿಯಲ್ಲೋ, ಒಬ್ಬೊಬ್ಬರದ್ದು ಒಂದೊಂದು ಬಗೆ. ಅವರವರ ಸಂಬಂಧದ ಹದಕ್ಕೆ ತಕ್ಕನಾದ ಒತ್ತಾಸೆ, ಒಸಗೆ, ಬೆಸುಗೆ. ಆದರೆ, ಸಾಮಾಜಿಕ ಮಾಧ್ಯಮಗಳ ಸಾಮಾನ್ಯ ವೇದಿಕೆ ಬಯಸುವುದು ಒಬ್ಬಗೆ! ಇಲ್ಲಿ ವೈವಿಧ್ಯತೆಗೆ ಅವಕಾಶ ಕಡಿಮೆ. ಹಾಗಾಗಿ ಸ್ನೇಹಿತನನ್ನು ಪ್ರೀತಿಯಿಂದ ಬಡ್ಡಿ-ಮಗನೆ ಎಂದು ಕರೆಯುತ್ತಿದ್ದವರು ಈಗ ಸೊಫೆಸ್ಟಿಕೇಟೆಡ್ ಆಗಿ ‘ಬಡಿ’ ಎಂದು ಕರೆಯುತ್ತಾರೆ. ‘ಲೇ’, ‘ಲೋ’, ‘ರೀ’, ‘ಇಲ್ನೋಡಿ’ಗಳು ಹೋಗಿ ‘ಡಿಯರ್’/ ‘ಡಾರ್ಲಿಂಗ್’/‘ಸ್ವೀಟ್​ಹಾರ್ಟ್’ಗಳು ಚಿರಸ್ಥಾಯಿಯಾಗಿವೆ. ‘ಬ್ರೋ’ ಎಂದುಬಿಟ್ಟರೆ ಅಣ್ಣನಿಂದ ದೂರದ ಸಂಬಂಧಿಯವರೆಗೆ ಎಲ್ಲರೂ ಓಗೊಡುತ್ತಾರೆ. ಎಲ್ಲರಿಗೂ ಇತರರಂತಿರುವ ಚಪಲ. ಅದು ಹೇಗೋ ಅವರ ಜೀವನ ನಮ್ಮದಕ್ಕಿಂತ ಸುಂದರವಾಗಿಯೂ ಸುಖಕರವಾಗಿಯೂ ಕಂಡಾಗ, ಅವರ ಸಂಬೋಧನೆಗಳು ನಮ್ಮವನ್ನು ಮರೆಮಾಚಿಬಿಡುತ್ತವೆ. ನಮಗೂ ನಟಿಸುವ ಹಂಬಲ ಬಂದುಬಿಡುತ್ತದೆ. ಮೊದಮೊದಲು ಅಸಹಜವೆನಿಸಿದರೂ ಅಸಹ್ಯವೆನಿಸುವುದಿಲ್ಲ. ಅದಕ್ಕೆ ಹೇಗೋ ಒಗ್ಗಿಕೊಂಡು ನಾವು ನಾವಾಗಿರದೆ ಬೇರೆಯವರಾಗಿಬಿಡುತ್ತಿದ್ದೇವೆ!

ರಿಯಲ್-ಟೈಮ್​ರಸ್ಪಾನ್ಸ್: ಅತ್ಯಂತ ಸಮರ್ಪಕವಾದ ಉತ್ತರವನ್ನು ತಕ್ಷಣವೇ ಅಂದರೆ ರಿಯಲ್-ಟೈಮ್ಲ್ಲಿ ಹೇಳಬೇಕಾದ ಅನಿವಾರ್ಯ ಪರಿಸ್ಥಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಏರ್ಪಡುತ್ತದೆ. ಉದಾಹರಣೆಗೆ, ಯಾವುದೇ ವಿಷಯದ ಬಗ್ಗೆ ನಿನಗೆ ಏನೆನ್ನಿಸುತ್ತದೆ/ನಿನ್ನ ಅಭಿಪ್ರಾಯೇನು? ಎಂದು ಕೇಳಿದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಯೋಚಿಸಿ, ವಿವೇಚಿಸಿ, ಅಭಿವ್ಯಕ್ತಗೊಳಿಸಲು ಇರುವುದು ಕೆಲವು ಕ್ಷಣಗಳು ಮಾತ್ರ. ಹೆಚ್ಚು ಸಮಯ ತೆಗೆದುಕೊಂಡರೆ ಕುಳ್ಳಿಹಗಳು ಬದಲಾಗಿ ಮೂಲ ಪ್ರಶ್ನೆಯೇ ಅಪ್ರಸ್ತುತವಾಗಿಬಿಡಬಹುದು. ಸ್ನೇಹಿತರು-ಸಂಬಂಧಿಕರೆಲ್ಲರೂ ಒಂದೇ ವೇದಿಕೆಯಲ್ಲಿರುವಾಗ ನಾವು ಸೋಲಲೊಲ್ಲರಾಗಿ, ಆ ಕ್ಷಣಕ್ಕೆ ತೋಚಿದ ಏನನ್ನೋ ನಮ್ಮ ಅಭಿಪ್ರಾಯವೆಂಬಂತೆ ಮಂಡಿಸಿಬಿಡುತ್ತೇವೆ. ಆನಂತರ, ಅದು ತಪ್ಪೆಂದು ನಮಗೇ ಅನ್ನಿಸಿದರೂ ಎಲ್ಲರ ಮುಂದೆಯೂ ಆಡಿದ ಮಾತನ್ನು ಹಿಂತೆಗೆಯುವ ಮನಸ್ಸಾಗದೇ ಅದಕ್ಕೇ ಕಟ್ಟುಬೀಳುತ್ತೇವೆ. ಏಕೆಂದರೆ, ಸಂಬಂಧಗಳಲ್ಲಿ ಒಬ್ಬರ ಮುಂದೆ ಸೋಲುವುದು ಸುಲಭ (ಕೆಲವೊಮ್ಮೆ ಹಿತಕರ ಕೂಡ). ಆದರೆ, ಎಲ್ಲರೂ ಒಂದೇ ವೇದಿಕೆಯಲ್ಲಿದ್ದಾಗ, ನಾವು ಬಿಂಬಿಸಿಕೊಂಡ ಅತ್ಯಂತ ಶಕ್ತಿಶಾಲಿ ರೂಪಕ್ಕೆ ಬದ್ಧರಾಗಿರಬೇಕಾದ ಅನಿವಾರ್ಯತೆ ಕಾಡುತ್ತದೆ. ಹೀಗೆ, ತಕ್ಷಣದ/ರಿಯಲ್-ಟೈಮ್​ರೆಸ್ಪಾನ್ಸ್​ನ ಒತ್ತಡ ನಮ್ಮನ್ನು ಆ ಕ್ಷಣಕ್ಕೆ ಮಾತ್ರವಲ್ಲದೆ ಮುಂದಕ್ಕೂ ಕಟ್ಟಿಹಾಕಿಬಿಡುತ್ತದೆ. ನಮ್ಮದೇ ದುಡುಕು ಮಾತಿನ ಹಗ್ಗದಲ್ಲಿ ನಮ್ಮನ್ನು ನಾವು ಕಟ್ಟಿಕೊಂಡುಬಿಡುತ್ತೇವೆ.

ಘರ್ಷಣೆ: ಹೋಲಿಕೆ, ಅಸಹಜತೆಗಳ ನೇರ ಪರಿಣಾಮ ಘರ್ಷಣೆ. ಮೊದಲನೆಯದು, ಆಂತರಿಕ ಘರ್ಷಣೆ. ನಾನು ಹಾಗಿರಬೇಕಿತ್ತು, ಆದರೆ ಹೀಗಿದ್ದೇನೆ ಎಂಬರ್ಥದ, ಮನಃಶಾಸ್ತ್ರದಲ್ಲಿ ಬರುವ ‘ಯು ಆರ್ ಓಕೆ. ಐ ಆಮ್ ನಾಟ್ ಓಕೆ’ ಪರಿಕಲ್ಪನೆಗೆ ಸಮೀಪವಾದ ಸ್ಥಿತಿ ಏರ್ಪಡಬಹುದು. ಎರಡನೆಯದು, ಹೋಲಿಕೆ, ಅಸಹಜತೆಗಳನ್ನು ಪ್ರತಿಭಟಿಸಬೇಕಾಗಿ ಬಂದಾಗ ಆಗುವ ನಮ್ಮವರೊಂದಿಗಿನ ಘರ್ಷಣೆ. ಸಾಮಾನ್ಯ ಸಾಮಾಜಿಕ ವೇದಿಕೆಗಳಲ್ಲಿ, ಒಮ್ಮಸಮ್ಮತದ ಗಡಿಯಾಚೆ ಪಯಣಿಸಬೇಕಾದಾಗ, ನಮ್ಮ ಮೇಲೆ ಒತ್ತಡ ಹೇರಿದ ವ್ಯಕ್ತಿಗಳೊಂದಿಗೆ ಘರ್ಷಣೆಗಿಳಿಯುತ್ತೇವೆ. ಆದರೆ, ಸರಿ-ತಪ್ಪಿನ ವಿವೇಚನೆ ಸ್ಪಷ್ಟವಿರದಿದ್ದಾಗ, ನಮ್ಮೊಳಗೂ ಗೊಂದಲಗಳಿದ್ದು ಇತರರೊಂದಿಗೂ ಹೋರಾಡಬೇಕಾದ ವಿಚಿತ್ರ ವಿರೋಧಾಭಾಸಗಳು ಎದುರಾದಾಗ ಅಸಹಾಯಕರಾಗುತ್ತೇವೆ. ಈ ರೀತಿಯ ಘರ್ಷಣೆ, ಗೊಂದಲಗಳು ಮಾಹಿತಿಯುಗದಲ್ಲಿ ಸ್ನೇಹಿತರು-ಕುಟುಂಬ- ಸಂಬಂಧಿಕರ ವಿಷಯದಲ್ಲಿ ಹೆಚ್ಚುತ್ತಿರುವ ಒಡಕುಗಳಿಗೆ ಪ್ರಮುಖ ಕಾರಣವಾಗಿದೆ.

ಮನುಷ್ಯರಿಗೆ ಅತಿಹೆಚ್ಚಿನ ಒತ್ತಡ ಉಂಟಾಗುವುದು, ಏಕಕಾಲಕ್ಕೆ ಅನೇಕ ಸಂಬಂಧಗಳನ್ನು ನಿಭಾಯಿಸಬೇಕಾಗಿ ಬಂದಾಗ. ಜೀವನಸಂಗಾತಿ, ಜೀವನ್ಮಿತ್ರ, ಸಹೋದರ/ಸಹೋದರಿ-ಮೂರೂ ಜನರನ್ನು ಒಂದೇ ವೇದಿಕೆಯಲ್ಲಿ ಸಮಾನವಾಗಿ ಮುಖ್ಯವಾಗಿಸುವ ಪ್ರಯತ್ನ. ಕೊನೆಗೆ, ನಿವಾರಿಸಲಾಗದ ಹೋಲಿಕೆ, ಅಸಹಜತೆ, ಘರ್ಷಣೆ ಗೊಂದಲ, ಒಡಕುಗಳು. ತತ್ಪರಿಣಾಮವಾದ ಸೋಲು! ಹಾಗಾಗಿಯೇ, ಈ ಎಲ್ಲ ಸಂಬಂಧಗಳನ್ನೂ ಒಂದೇ ವೇದಿಕೆಗೆ ತರುವ ಸಾಮಾಜಿಕ ಮಾಧ್ಯಮಗಳು, ನಿಭಾಯಿಸಬೇಕಾದ ಒತ್ತಡವನ್ನು ಪರಾಕಾಷ್ಠೆಗೆ ಒಯ್ಯುತ್ತವೆ.

ಒಟ್ಟಿನಲ್ಲಿ, ಭಾರತದ ಸ್ವಾತಂತ್ರ್ಯಕ್ಕೆ 70 ತುಂಬಿದ ಸಂದರ್ಭದಲ್ಲಿ ಹೇಳಲೇಬೇಕಾದ ಮಾತಿದು. ಜನರಿಂದು ಹಿಂದಿನ 6 ದಶಕಗಳಿಗಿಂತ ಹೆಚ್ಚು ಬಂಧಿಗಳಾಗಿದ್ದಾರೆ! ಗ್ಯಾಡ್ಜೆಟ್​ಗಳ, ಸಾಮಾಜಿಕ ಮಾಧ್ಯಮಗಳ ಗುಲಾಮರಾಗಿದ್ದಾರೆ. ಸ್ವಂತಿಕೆ ಮರೆತು ಅನುಕರಿಸುತ್ತಿದ್ದಾರೆ. ತಮ್ಮತನ ಬದಿಗೊತ್ತಿ ಮತ್ತೇನನ್ನೋ ಅನುಸರಿಸುತ್ತಿದ್ದಾರೆ. ಅನೇಕರಿಗೆ ಬದುಕುವುದಕ್ಕಿಂತಲೂ, ತಮ್ಮ ಬದುಕಿಗೆ ಇಲ್ಲದ ಬಣ್ಣ ಕಟ್ಟಿ ಜಗತ್ತಿಗೆ ತೋರ್ಪಡಿಸುವುದೇ ಮುಖ್ಯವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟ ಚಿತ್ರವೇ ನಾವೆಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ನಾವೇ ಸೃಷ್ಟಿಸಿಕೊಂಡ ನಕಲಿ ವರ್ಚಸ್ಸಿನೊಳಗೆ ಬಂಧಿಗಳಾಗುತ್ತಿದ್ದೇವೆ. ಮಾಹಿತಿಯುಗದಲ್ಲಿ ನಾವು ಸ್ವತಂತ್ರರಾಗುವ, ಸ್ವಾವಲಂಬಿಗಳಾಗುವ, ಸಬಲರಾಗುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಇಮೇಜ್ ಬೆಳೆಸಲು ಒದ್ದಾಡುತ್ತಿದ್ದೇವೆ. ನಮ್ಮ ಬಗ್ಗೆ, ನಮ್ಮ ಸಂಬಂಧಗಳ ಬಗ್ಗೆ ಗೊಂದಲ ಕ್ಕೊಳಗಾಗಿದ್ದೇವೆ. ಹಬ್ಬ ಮಾಡಿ ಸಂಭ್ರಮಿಸುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಸಂಬಂಧಗಳನ್ನು ನಿತ್ಯೋತ್ಸವವಾಗಿಸಿದ್ದೇವೆ. ಆದರೆ ಆ ಸಂಬಂಧಗಳಲ್ಲಿ ನಾವು ಎಷ್ಟರಮಟ್ಟಿಗೆ ಸ್ವತಂತ್ರರಾಗಿದ್ದೇವೆ ಎನ್ನುವುದು ಈ ಸ್ವಾತಂತ್ರೊ್ಯೕತ್ಸವದ ಸಂದರ್ಭದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬಹುದಾದ ವಿಷಯ. ಏಕೆಂದರೆ, ವ್ಯಕ್ತಿಗಳ ನಡುವಿನ ಸ್ವಾತಂತ್ರ್ಯ ಮತ್ತು ಸಾಮರಸ್ಯದ ಭಾವವೇ ಸ್ವತಂತ್ರ ರಾಷ್ಟ್ರದ ಘನೋದ್ದೇಶ.

Leave a Reply

Your email address will not be published. Required fields are marked *

Back To Top