Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಮಾಹಿತಿಯುಗದಲ್ಲಿ ಬದಲಾಗುತ್ತಿರುವ ಶಿಕ್ಷಣದ ಪರಿಭಾಷೆ!

Sunday, 03.09.2017, 3:05 AM       No Comments

ನಾಡಿದ್ದು ಶಿಕ್ಷಕರ ದಿನ. ಅದರ ಸುತ್ತಮುತ್ತಲಿನ ಒಂದು ವಾರವೆಲ್ಲ ಶಿಕ್ಷಕರ ಬಗ್ಗೆ ಒಳ್ಳೆಯ ಮಾತುಗಳೇ ಎಲ್ಲೆಲ್ಲೂ ಕೇಳಿಬರುತ್ತವೆ. ಅದು ಸಹಜವೇ. ಈ ವೃತ್ತಿಯನ್ನು ಸಂಭ್ರಮಿಸುವಷ್ಟು ನಾವು ಬಹುಶಃ ಬೇರಾವ ವೃತ್ತಿಯನ್ನೂ ಸಂಭ್ರಮಿಸಬೇಕಿಲ್ಲವೇನೋ! ಜೀವನವನ್ನು ರೂಪಿಸುವ ಈ ‘ನೋಬಲ್ ಪೊ›ಫೆಷನ್’ನ ಸಾಮಾಜಿಕ ಔಚಿತ್ಯದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆದರೆ, ಪ್ರತಿಯೊಂದು ಸಂಭ್ರಮಾಚರಣೆಯೂ ಆತ್ಮಾವಲೋಕನಕ್ಕೆ ಎಡೆಮಾಡಿಕೊಡಬೇಕಾದ್ದು ಅಗತ್ಯವಾದ್ದರಿಂದ ಈ ಲೇಖನದಲ್ಲಿ ಹೊಗಳಿಕೆಯನ್ನು ಬದಿಗಿಟ್ಟು ಶಿಕ್ಷಕರ ಪಾತ್ರವನ್ನು ವಿಮರ್ಶೆಗಿಡುವ ಪ್ರಯತ್ನ ಮಾಡಿದ್ದೇನೆ. ಹಾಗೆ ವಿಮಶಿಸಲು ನನ್ನ ಅರ್ಹತೆ ಒಂದು, ನಾನು ಶಾಲೆಗೆ ಹೋಗುವ ಮಕ್ಕಳ ಪಾಲಕ. ಎರಡು, ದೇಶದ ಪ್ರತಿಷ್ಠಿತ ಬಿ-ಸ್ಕೂಲ್​ಗಳಿಗೆ ನಾನು ಗೆಸ್ಟ್-ಫ್ಯಾಕಲ್ಟಿಯಾಗಿ ಹೋಗುತ್ತೇನೆ. ಹಾಗಾಗಿ, ಒಂದರ್ಥದಲ್ಲಿ ನಾನೂ ಶಿಕ್ಷಕನೇ.

ಮಾಹಿತಿಯುಗದಲ್ಲಿ ಶಿಕ್ಷಕರ ಪಾತ್ರ ಬದಲಾಗಿದೆ. ಏಕೆಂದರೆ, ಶಿಕ್ಷಣದ ಅರ್ಥವೂ ವಿಸ್ತಾರಗೊಂಡಿದೆ. ಇವೆಲ್ಲವನ್ನೂ ಥಿಯರಿಯಲ್ಲಿ ಮಾತ್ರ ಹೇಳಿದರೆ ಅದು ಕೆಟ್ಟ ಶಿಕ್ಷಕ ಹೇಳಿಕೊಟ್ಟಂತಾದೀತು. ಆದ್ದರಿಂದ, ಮೊದಲು ಕೆಲವು ಘಟನೆಗಳನ್ನು ಪರಿಚಯಿಸುತ್ತೇನೆ.

ಮೊದಲನೆಯ ಘಟನೆ: ನನ್ನ ತಂಗಿಯ ಮಗ, ಆಗ್ಗೆ ಮೂರೂವರೆ ವರ್ಷದವನಾಗಿದ್ದ ಶಿಬಿ ಹೋಗುತ್ತಿದ್ದ (ಪ್ಲೇ-ಹೋಂ) ಶಾಲೆಯಲ್ಲಿ ಪಾಠ ನಡೆಯುವುದೆಲ್ಲ ಹಾಡು, ಆಟದ ಮೂಲಕವೇ. ಅಂದು, ಮಕ್ಕಳಿಗೆ ಬಣ್ಣಗಳನ್ನು ಪರಿಚಯಿಸುವ ಕಾರ್ಯಕ್ರಮವಿತ್ತು. ಅದಕ್ಕಾಗಿಯೇ ಸಿದ್ಧವಾಗಿದ್ದ ಹಾಡು, ಈ ರೀತಿ ಇತ್ತು… ‘ಇಟ್ಸ್ ಎ ಗ್ರೀನ್ ಬಲೂನ್… ಇಟ್ ಫ್ಲೈಸ್ ಸೋ ಹೈ’. ಎಲ್ಲ ಮಕ್ಕಳೂ ಶಿಕ್ಷಕಿಯ ಜೊತೆಗೂಡಿ, ರಾಗವಾಗಿ ಈ ಹಾಡನ್ನು ಹಾಡುತ್ತಿದ್ದರು. ನಡುನಡುವೆ ಶಿಕ್ಷಕಿ ಯಾವುದಾದರೂ ಮಗುವನ್ನು ಕರೆದು, ‘ನಿನಗೆ ಯಾವ ಬಣ್ಣದ ಬಲೂನು ಇಷ್ಟ?’ ಎಂದು ಕೇಳುತ್ತಿದ್ದರು. ಆಗ, ಯಾವುದೋ ಮಗು, ಕೆಂಪು ಎಂದು ಹೇಳಿದರೆ, ‘ಇಟ್ಸ್ ಎ ರೆಡ್ ಬಲೂನ್…’ ಎಂದು ಹಾಡು ಬದಲಾಗಿ, ಮಕ್ಕಳಿಗೆ ಹೊಸದೊಂದು ಬಣ್ಣದ ಪರಿಚಯವೂ ಆಗುತ್ತಿತ್ತು, ಮಕ್ಕಳು ನೀಲಿ, ಹಳದಿ ಎನ್ನುತ್ತಾ, ನಾ ಮುಂದು ತಾ ಮುಂದು ಎಂದು ಬಣ್ಣಗಳನ್ನು ಹಾಡಿಗೆ ಸೇರಿಸುತ್ತಿದ್ದುದರಿಂದ, ಅವರ ಇನ್​ವಾಲ್ವ್​ಮೆಂಟ್ ಕೂಡ ಹೆಚ್ಚುತ್ತಿತ್ತು. ಹೀಗಿರುವಾಗ, ಶಿಬಿ ತಾನೂ ಕೂಡ ಏನೋ ಹೇಳಲೆಂಬಂತೆ ಶಿಕ್ಷಕಿಯ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದ. ಇವನೂ ಹೊಸದೊಂದು ಬಣ್ಣವನ್ನು ಸೂಚಿಸಲು ಪ್ರಯತ್ನಿಸುತ್ತಿದ್ದಾನೆ ಎಂದುಕೊಂಡ ಶಿಕ್ಷಕಿ, ‘ಹೇಳು ಮಗು, ನಿನಗೆ ಯಾವ ಬಣ್ಣದ ಬಲೂನಿನ ಬಗ್ಗೆ ಹಾಡು ಬೇಕು’ ಎಂದರು. ಪೆಚ್ಚುಮೋರೆ ಹಾಕಿಕೊಂಡಿದ್ದ ಶಿಬಿ ಹೇಳಿದ, ‘ಮೇಡಮ್ ಇಟ್ಸ್ ದ ಲಾಸ್ಟ್ ಬಲೂನ್…(ಇದು ಕೊನೆಯ ಬಲೂನ್ ಆಗಲಿ)’.

ಶಿಬಿಗೆ ಇವರ ಬಣ್ಣಬಣ್ಣದ ಬಲೂನಿನ ಹಾಡು ಸಾಕುಸಾಕಾಗಿ ಹೋಗಿತ್ತು! ಹಾಡು ಕಲಿತಾಯ್ತು, ಬಣ್ಣಗಳೂ ಖಾಲಿಯಾದವು- ಈಗ ನೋಡಿದರೆ, ಬೇರೆ ಮಕ್ಕಳೆಲ್ಲ ಮತ್ತೆ ಮತ್ತೆ ಅದೇ ಬಣ್ಣಗಳನ್ನು ಪುನರಾವರ್ತನೆ ಮಾಡುತ್ತಿದ್ದಾರೆ. ಶಿಬಿಗೆ ಇದೆಲ್ಲವೂ ಒಂದು ಕೊನೆಯಿರದ ಪ್ರಯಾಸವಾಗಿ ಕಂಡಿರಬೇಕು… ಅದಕ್ಕೇ, ತಾನೇ ಶಿಕ್ಷಕಿಯ ಬಳಿ ಹೋಗಿ, ದಯವಿಟ್ಟು ಸಾಕುಮಾಡಿ ಎಂದು ಹಾಡಿನ ಸಾಲಿಗೆ ಹೊಂದುವ ಪರಿಭಾಷೆಯಲ್ಲೇ ಹೇಳಿದ್ದ. ಶಿಕ್ಷಕಿಗೆ ಆಶ್ಚರ್ಯವಾಯಿತು! ಅವರಿಗೆ, ಬಣ್ಣದ ಬಲೂನಿನ ಹಾಡು ಠುಸ್ಸ್ ಆದದಕ್ಕಿಂತ ಹೆಚ್ಚಾಗಿ ಶಿಬಿಯ ಬಗ್ಗೆ ಆತಂಕವಾಯಿತು. ಅವನ ಅಮ್ಮನನ್ನು ಕರೆಯಿಸಿ, ‘ನಿಮ್ಮ ಮಗು ಚುರುಕಿದ್ದಾನೆ. ಆದರೆ, ಅವನ ‘ಅಟೆನ್ಷನ್ ಸ್ಪ್ಯಾನ್’ ತುಂಬಾ ಕಡಿಮೆ ಇದೆ. ಅವನು ಬೇಗ ಕಲಿತುಬಿಡುವುದರಿಂದ, ನಮ್ಮ ಹಾಡು, ನೃತ್ಯ, ಆಟವೂ ಅವನಿಗೆ ಕೆಲವೊಮ್ಮೆ ಬೇಗ ಬೋರ್ ಆಗಿಬಿಡುತ್ತದೆ’ ಎಂದು ಬಲೂನಿನ ವೃತ್ತಾಂತವನ್ನು ವಿವರಿಸಿದರು.

ಶಿಬಿಯ ಅಪ್ಪ-ಅಮ್ಮಂದಿರು, ಅವನು ಹೆಚ್ಚಿನ ಕಾಲ ಒಂದೆಡೆ ಗಮನ ಕೇಂದ್ರೀಕರಿಸಲಾಗದ ಬಗ್ಗೆ ಆತಂಕ ಪಡಬೇಕೆ? ಅಥವಾ ಚುರುಕಾಗಿ ವಿಷಯವನ್ನು ಕಲಿತು, ಆದರೆ ಅದೇ ವಿಷಯವನ್ನು ಪುನರಾವರ್ತಿಸಲು ಬೇಸರಗೊಂಡು, ತನ್ನ ಮನಸ್ಸಿನ ಇಂಗಿತವನ್ನು ಶಿಕ್ಷಕಿಗೆ ತಿಳಿಸಲು ಹಾಡಿನ ಸ್ವರೂಪವನ್ನೇ ಆಯ್ದುಕೊಂಡ ಅವನ ಸಹಜ ಸೃಜನಾತ್ಮಕತೆಯ ಬಗ್ಗೆ ಹೆಮ್ಮೆ ಪಡಬೇಕೆ? ಅವನಿಗೆ ಬಾಯಿಪಾಠದ ಹಾಡಿಗಿಂತ, ಅದರ ಸಾರವೇ ಮುಖ್ಯವಾಗಿತ್ತು ಎಂದು ಖುಷಿಯಾಗಬೇಕೆ? ಇಲ್ಲಿ ಸೋತದ್ದು ಶಿಕ್ಷಕಿಯೇ?

ಎರಡನೆಯ ಘಟನೆ: ಮತ್ತೊಂದು ಶಾಲೆ. ನನ್ನ ಮತ್ತೊಬ್ಬ ತಂಗಿಯ ಮಗ ಮನು, ಆರನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಆಹೊತ್ತಿನದು ಹೆಚ್ಚಿನ ಮಕ್ಕಳು ಎದುರು ನೋಡುವ ಡ್ರಾಯಿಂಗ್ ಕ್ಲಾಸ್. ಆದರೂ, ಡ್ರಾಯಿಂಗ್/ರೇಖಾಚಿತ್ರದ ವಿಷಯಕ್ಕೆ ಬಂದಾಗ (ಹಾಗೆ ನೋಡಿದರೆ ಯಾವ ವಿಷಯದಲ್ಲಿಯೂ) ಎಲ್ಲ ವಿದ್ಯಾರ್ಥಿಗಳ ಸಾಮರ್ಥ್ಯವೂ ಒಂದೇ ಪ್ರಕಾರವಾಗಿ ಇರುವುದಿಲ್ಲ. ಹೀಗಿರುವಾಗ, ಬೋರ್ಡಿನ ಮೇಲೆ ತಾನು ಬರೆದ ಚಿತ್ರವನ್ನು ಯಥಾವತ್ ನಕಲು ಮಾಡಲಾಗದ ವಿದ್ಯಾರ್ಥಿಗೆ ಆ ಕಲಾಶಿಕ್ಷಕಿ ಏನು ಮಾಡಬೇಕು? ಕೈಹಿಡಿದು ಬರೆಸಬೇಕು, ಸುಲಭಕ್ಕೆ ಬರೆಯಲು ಅನುವಾಗುವ ಸರಳ ತಂತ್ರಗಳನ್ನು ಹೇಳಿಕೊಡಬೇಕು, ಮರಳಿ ಯತ್ನವ ಮಾಡು ಎಂದು ಹುರಿದುಂಬಿಸಬೇಕು. ತಾನೆ?

ಆದರೆ, ಈ ಶಿಕ್ಷಕಿ ಮಾಡಿದ್ದೇನು ಗೊತ್ತೇ? ಬರೆಯುವ ಬೆರಳುಗಳಿಗೆ ನೋವಾಗುವಂತೆ ಹೊಡೆದರು! ‘ನಾನು ಸರಿಯಾಗಿ ಬರೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ…’ ಎಂದು ಮನು ಭಯದಲ್ಲಿ ನಿವೇದಿಸಿಕೊಂಡರೆ ‘ನೀನು ಇಂಟರ್ನೆಟ್ ನೋಡಿ ಕಲಿತು ಮನೆಯಲ್ಲಿ ಪ್ರ್ಯಾಕ್ಟಿಸ್ ಮಾಡಬಹುದಿತ್ತು!’ ಎಂಬಿತ್ಯಾದಿಯಾಗಿ ಏನೋ ಅಸಂಬದ್ಧ ಗದರಿದರಂತೆ! ಅಷ್ಟು ಹೊತ್ತಿಗೆ ಹೊಡೆತದ ನೋವು ಮತ್ತು ಅವಮಾನ ಸಹಿಸಲಾರದ ಮನು ಅಳಲಾರಂಭಿಸಿದನಂತೆ. ಆಗ ಆ ಮೇಡಂ ಸ್ವಲ್ಪ ಭಯಗೊಂಡಿರಬೇಕು. ‘ನೀನು ಮನೆಗೆ ಹೋಗಿ ನಿನ್ನ ಅಪ್ಪ-ಅಮ್ಮನಿಗೆ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಹೇಳುವುದಿಲ್ಲ’ ಎಂದು ಪ್ರಾಮಿಸ್ ಮಾಡು ಎಂದು ಮಗುವಿನ ಕೈಲಿ ಪ್ರಮಾಣ ಮಾಡಿಸಿಕೊಂಡರಂತೆ!

ಒಂದು ಸಣ್ಣ ತಪ್ಪಿಗೆ ಅದೆಷ್ಟು ದೊಡ್ಡ ಶಿಕ್ಷೆ ದೊರಕಿತು ನೋಡಿ. ಹೊಡೆತದ ನೋವು. ನೀನು ಮಾಡಲಾರೆ ಎಂಬರ್ಥದ ಅವಮಾನ. ಮನುವಿಗೆ ಮತ್ತು ಇತರ ಮಕ್ಕಳಿಗೆ- ಹೊಡೆತಗಳು ಎಲ್ಲವನ್ನೂ ಕಲಿಸಿಬಿಡುತ್ತವೆ/ಹೊಡೆತವೇ ಪರಿಹಾರಮಾರ್ಗ ಎನ್ನುವ ತಪ್ಪುಪಾಠ. ಎಲ್ಲಕ್ಕೂ ಮಿಗಿಲಾಗಿ, ಮಕ್ಕಳಿಗೆ ಸತ್ಯ ನುಡಿಯದಂತೆ ಪ್ರೇರೇಪಣೆ! ಜೊತೆಗೆ, ಆ ಮಗುವಿಗೆ ಇಂತಹ ಬಲವಂತದ ಪ್ರಮಾಣವನ್ನು ಮುರಿಬೇಕೋ ಇಲ್ಲವೋ ಎನ್ನುವ ಗೊಂದಲ (ಇವೆಲ್ಲವನ್ನೂ ನೋಡುತ್ತಿದ್ದ ಮನುವಿನ ಸಹಪಾಠಿಗಳೂ ಇವೇ ಸಂಕಟ, ಗೊದಲಗಳನ್ನು ಅನುಭವಿಸಿರಬೇಕು). ಪ್ರೀತಿಯಿಂದ ತಿದ್ದುವ ಬದಲು ಆ ಶಿಕ್ಷಕಿ ದೊಣ್ಣೆ ಹಿಡಿಯುವ ನಿರ್ಧಾರ ತೆಗೆದುಕೊಂಡದ್ದರಿಂದ ಎಷ್ಟೆಲ್ಲ ಅನಾಹುತವಾಯಿತು!

ಅದೃಷ್ಟವಶಾತ್, ಮನು ಮನೆಗೆ ಬಂದು ಘಟನೆಯನ್ನು ವಿವರಿಸಿದ್ದರಿಂದ ಪೋಷಕರು ಶಾಲೆಗೆ ಹೋಗಿ ಮುಖ್ಯೋಪಾಧ್ಯಾಯರಿಗೆ ದೂರು ನೀಡಲು ಸಾಧ್ಯವಾಯಿತು. ಅಕಸ್ಮಾತ್ ಮನು ಸುಮ್ಮನಿರಲು ನಿರ್ಧರಿಸಿಬಿಟ್ಟಿದ್ದರೆ? ಮುಂದೆಯೂ ತನಗೆ ಅನ್ಯಾಯ ಮಾಡಿದವರು ತನ್ನಿಂದ ಪ್ರಮಾಣ ಮಾಡಿಸಿಕೊಂಡಾಗಲೆಲ್ಲ ಸಹಿಸಿಕೊಂಡು ಸುಮ್ಮನಿದ್ದುಬಿಡುವ ಮನಸ್ಥಿತಿ ಬೆಳೆಸಿಕೊಂಡುಬಿಟ್ಟರೆ? ಶಿಕ್ಷಕರು ತಮ್ಮ ದುರ್ನಡತೆಯ ದೀರ್ಘಕಾಲಿಕ ಪರಿಣಾಮಗಳನ್ನು ಗಮನಿಸದಿದ್ದಾಗ ಆಗಬಹುದಾದ ಅನಾಹುತಕ್ಕೆ ಇದೊಂದು ಸಣ್ಣ ನಿದರ್ಶನವಷ್ಟೆ. ಅಂದಹಾಗೆ, ಹಿಂದಿನ ಘಟನೆಯಂತೆ ಇಲ್ಲಿಯೂ ವಿದ್ಯಾರ್ಜನೆ ಮಾಡುವಲ್ಲಿ ಸೋತದ್ದು ಶಿಕ್ಷಕರೇ?

ನುರಿತ ಶಿಕ್ಷಕರ ಪಾಡೇ ಹೀಗೆ ಎಂದರೆ, ಇನ್ನು ಮಾಹಿತಿಯುಗದ ಇತರ ಶಿಕ್ಷಕರ ಪಾಡೇನು? ಚಿಕ್ಕ ಮಕ್ಕಳನ್ನು ನಿಯಂತ್ರಿಸಲು ತರಬೇತಿ ಪಡೆದುಕೊಂಡು ಕೊಠಡಿಯ ಒಳಹೊಕ್ಕಿರುವ ಶಿಕ್ಷಕರೇ ಮಕ್ಕಳಿಗೆ ಅರ್ಥವಾಗುವಂತೆ ಹೇಳಿಕೊಡಲು ತಡಕಾಡುತ್ತಿರುವಾಗ, ಅವರಿಗೆ ಬೋರ್ ಆಗದಂತೆ ಗಮನ ಹಿಡಿದಿಡಲು ಒದ್ದಾಡುತ್ತಿರುವಾಗ ಇನ್ನು ‘ದೊಡ್ಡ ಮಕ್ಕಳಿಗೆ ದೊಡ್ಡ ಪಾಠ’ಗಳನ್ನು ಕಲಿಸಬೇಕಾದ ಹಠಾತ್ ಜವಾಬ್ದಾರಿ ಹೊತ್ತ, ಶಿಕ್ಷಕರಾಗಲು ಯಾವುದೇ ಪೂರ್ವಾನುಭವ/ ಪೂರ್ವತರಬೇತಿ ಇರದ ಅಭಿನವ ಕಾರ್ಪೆರೇಟ್ ಶಿಕ್ಷಕರ ಕಥೆಯೇನು? ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಬಗ್ಗೆಯೂ ಸ್ವಲ್ಪ ಯೋಚಿಸೋಣ.

ಶಿಕ್ಷಕ ವೃತ್ತಿ ಎಷ್ಟು ಬದಲಾಗಿದೆ ಎನ್ನುವುದರ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಜೊತೆಗೇ, ಹೊಸ ಶಿಕ್ಷಣ ಪದ್ಧತಿಗೆ – ಮಕ್ಕಳಿಗೆ ನಲಿಸಿ-ಕಲಿಸುವ ಕ್ರಮಕ್ಕೆ ಹೊಂದಿಕೊಳ್ಳಬೇಕಾದ ಬಗ್ಗೆ, ಮಾಹಿತಿಯುಗದ ಶಿಕ್ಷಕರಿಗಿರಬೇಕಾದ ಗುಣವೈಶಿಷ್ಟ್ಯಗಳ ಬಗ್ಗೆ ಸಾಕಷ್ಟು ಲೇಖನಗಳು, ನುಡಿಚಿತ್ರಗಳು ಬಂದಿವೆ. ಆದರೆ, ಈ ಎಲ್ಲ ಚರ್ಚೆಗಳು, ಸಾಮಾನ್ಯವಾಗಿ, ಪರಂಪರಾಗತವಾಗಿ ’ಶಿಕ್ಷಕ’ ಎಂದು ಕರೆಸಿಕೊಂಡು ಬಂದ ಶಾಲಾ ಶಿಕ್ಷಕರನ್ನೋ ಅಥವಾ ಕಾಲೇಜು ಶಿಕ್ಷಕರನ್ನೋ ಗುರುತಿಸುತ್ತದೆ. ಅವರ ಕಷ್ಟಗಳ ಬಗ್ಗೆಯೋ ಅಥವಾ ಆ ವೃತ್ತಿಯ ಕೃತಾರ್ಥತೆಯ ಬಗ್ಗೆಯೋ ಟಿಪ್ಪಣಿ ಮಾಡುತ್ತವೆ. ಆದರೆ, ಮಾಹಿತಿಯುಗದಲ್ಲಿ್ಲ ಶಿಕ್ಷಕ ವೃತ್ತಿ ಮಾತ್ರವಲ್ಲ, ‘ಶಿಕ್ಷಕ ಅಂದರೆ ಯಾರು’ ಎನ್ನುವುದರ ’ಡೆಫಿನಿಷನ್’ ಕೂಡ ಬದಲಾಗಿದೆ. ಕಾರ್ಪೆರೇಟ್/ಔದ್ಯಮಿಕ ವಲಯಗಳಲ್ಲಂತೂ, ಗುರುವರ್ಯರ ಪೀಳಿಗೆ, ಪಾರಂಪರಿಕ ಎಲ್ಲೆಗಳನ್ನು ಮೀರಿ ಬೆಳೆದಿದೆ. ಎಲ್ಲರನ್ನೂ ಪಟ್ಟಿ ಮಾಡಲು ಸಾಧ್ಯವಿಲ್ಲವಾದರೂ, ಅಂತಹ ಕೆಲವು ಶಿಕ್ಷಕ ಪಂಗಡಗಳ ಕಿರುಪರಿಚಯ ಇಲ್ಲಿದೆ.

ಟ್ರೇನರ್​ಗಳು: ಸಾಮಾನ್ಯವಾಗಿ ಕೌಶಲವೃದ್ಧಿಗಾಗಿ ನೇಮಕಗೊಳ್ಳುವ ಕಾರ್ಪೆರೇಟ್ ಟ್ರೇನರ್​ಗಳಲ್ಲಿ ಎರಡು ವಿಧ.

1. ತಾಂತ್ರಿಕ ವಿಷಯಗಳನ್ನು ಕಲಿಸುವ ಟೆಕ್ನಿಕಲ್ ಟ್ರೇನರ್​ಗಳು/ವಿಷಯ ತಜ್ಞರು. 2. ಸಾಫ್ಟ್ ಸ್ಕಿಲ್​ಗಳು ಅಂದರೆ, ಸಹೋದ್ಯೋಗಿಗಳೊಡನೆ ಹೇಗೆ ಸಂಭಾಷಣೆ ನಡೆಸಬೇಕು ಎನ್ನುವುದರಿಂದ ಹಿಡಿದು ಅಮೆರಿಕ ತಲುಪಿದ ಮೇಲೆ ಹೇಗೆ ವರ್ತಿಸಬೇಕು ಎಂದು ಹೇಳಿಕೊಡುವವರೆಗೆ; ‘ಕಾಂಟಿನೆಂಟಲ್’ ಆಹಾರವನ್ನು ಹೇಗೆ ತಿನ್ನಬೇಕು ಎನ್ನುವುದರಿಂದ ಹಿಡಿದು ವಿಶ್ವದ ಮೂರ್ನಾಲ್ಕು ಪ್ರಮುಖ ಭಾಷೆಗಳ ನಿತ್ಯಬಳಕೆಯ ಪದಗಳನ್ನು ಕಲಿಸುವವರೆಗೆ- ಉದ್ಯೋಗಿಗಳ ವೃತ್ತಿಪರತೆಯ ಜೊತೆಜೊತೆಗೇ ಸಂಸ್ಕಾರವನ್ನೂ ತಿದ್ದುವ ನಿಟ್ಟಿನಲ್ಲಿ ತರಬೇತಿ ನೀಡುವ ಪ್ರವೀಣರು. ವಿಶೇಷವೆಂದರೆ, ಎಷ್ಟೋ ಬಾರಿ, ತರಬೇತುದಾರರು ವಿದ್ಯಾರ್ಥಿಗಳಿಗಿಂತ ಚಿಕ್ಕವರಾಗಿದ್ದು, ‘ಗುರುಹಿರಿಯರು’ ಎನ್ನುವುದು, ಈ ವಲಯಗಳಲ್ಲಿ ವರಸೆಗೆ ಮಾತ್ರ ಸೀಮಿತವಾಗಿದೆ. ಆದರೆ, ಈ ವಯೋಮಾನದ ಆಭಾಸ, ಕಲಿಕೆಗೆ ಅಡ್ಡ ಬರುವುದಿಲ್ಲ ಎನ್ನುವುದು ಸಂತೋಷದ ವಿಷಯ.

ಸಲಹೆಗಾರರು/ಕನ್ಸಲ್ಟೆಂಟ್​ಗಳು: ತಾವು ಮಾಡುತ್ತಿರುವ ಕೆಲಸ/ಪ್ರಕ್ರಿಯೆ/ಯೋಜನೆಗಳು ಸರಿಯಾಗಿವೆಯೇ ಎನ್ನುವುದನ್ನು ಪರಾಮಶಿಸಲು ಕಂಪನಿಗಳು ಸಲಹೆಗಾರರನ್ನು ನೇಮಿಸಿಕೊಳ್ಳುತ್ತವೆ. ಮೌಲ್ಯಮಾಪನ ಮಾಡಿ, ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಕಂಪನಿಗಳ ಅಂಕಪಟ್ಟಿ ತಯಾರಿಸುವುದು ಇವರ ‘ಗುರು’ತರ ಜವಾಬ್ದಾರಿಗಳಲ್ಲೊಂದಾದ್ದರಿಂದ, ಇವರಿಗೂ ಒಂದರ್ಥದಲ್ಲಿ ಶಿಕ್ಷಕರ ಸ್ಥಾನ.

ಸಿಇಓ/ಎಕ್ಸೆಕ್ಯುಟಿವ್ ಕೋಚ್​ಗಳು: ಕಂಪನಿಗಳಲ್ಲಿನ ಉನ್ನತ ಸ್ತರದ ಅಧಿಕಾರಿಗಳಿಗೆ ‘ಟ್ರೇನಿಂಗ್’ ಕೊಡುವುದು, ಅವರ ಘನತೆಗೆ ತಕ್ಕುದಲ್ಲ! ಅವರನ್ನು ಪಳಗಿಸಲು ಹಾಗೂ ತಾಲೀಮು ನೀಡಲು ಎಕ್ಸೆಕ್ಯುಟಿವ್ ಕೋಚ್​ಗಳನ್ನು ಬಳಸಲಾಗುತ್ತದೆ. ಸಿಇಓ ಹಾಗೂ ಇತರ ಉನ್ನತಾಧಿಕಾರಿಗಳ ಆತ್ಮಗೌರವಕ್ಕೆ ಧಕ್ಕೆ ಬರದಂತೆ ಅವರಿಗೆ ಉದ್ಯಮದ ಹೊಸ ಪಾಠಗಳನ್ನು ಹೇಳಿಕೊಡುವುದು ಈ ಹೈ-ಫೈ-ಗುರುಗಳ ವೈಶಿಷ್ಟ್ಯ

ಮೆಂಟರ್​ಗಳು: ಎಲ್ಲರಿಗೂ, ಎಲ್ಲವನ್ನೂ, ಯಾವಾಗಲೂ ಯೋಜಿತವಾಗಿ ಹೇಳಿಕೊಡಲು ಸಾಧ್ಯವಿಲ್ಲ. ‘ಕಂಟಿನ್ಯುಯಸ್ ಲರ್ನಿಂಗ್’/ನಿರಂತರ ಕಲಿಕೆಗೆ ಮಹತ್ವವಿರುವ ಕಂಪನಿಗಳಲ್ಲಿ ಆ ಕಾರಣಕ್ಕಾಗಿಯೇ- ಕಿರಿಯ ಉದ್ಯೋಗಿಗಳಿಗೆ ಹಿರಿಯ ಉದ್ಯೋಗಿಗಳು ಪ್ರಶಿಕ್ಷಣ ಹಾಗೂ ಮಾರ್ಗದರ್ಶನ ನೀಡಲು ಅನುವಾಗುವಂತೆ ‘ಮೆಂಟರ್’ಗಳನ್ನು ನೇಮಿಸಲಾಗುತ್ತದೆ. ಕಿರಿಯ ಉದ್ಯೋಗಿಗಳ ಹಿತಚಿಂತಕರಾಗಿಯೂ, ವೃತ್ತಿಯ ವಿಷಯದಲ್ಲಿ ಆತ್ಮೀಯ ಸಲಹೆಗಾರರಾಗಿಯೂ ವರ್ತಿಸುವ ಇವರದ್ದು, ಪೋಷಕ-ಕಮ್​ಶಿಕ್ಷಕರ ದ್ವಿಪಾತ್ರವೇ ಸರಿ!

ಜ್ಞಾನವನ್ನು ಧಾರೆ ಎರೆಯುವುದು ಸುಲಭದ ಕೆಲಸವಲ್ಲ. ತೀವ್ರ ಸ್ಪರ್ಧೆ ಇರುವ ಕಾರ್ಪೆರೇಟ್ ವಲಯಗಳಲ್ಲಂತೂ, ಒಂದಿನಿತು ಕಡಿಮೆ ತಿಳಿದಿದ್ದರೂ ಅದರಿಂದ ದೊಡ್ಡ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ, ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವ ಪಡೆಯುತ್ತದೆ. ಅಮೆರಿಕದ ಖ್ಯಾತ ವಿದ್ವಾಂಸ ಹಾಗೂ ಲೇಖಕ ವಿಲಿಯಮ್ ಆರ್ಥರ್ ವಾರ್ಡ್ ಹೇಳಿದಂತೆ, ಒಬ್ಬ ಕಳಪೆ ಶಿಕ್ಷಕ ‘ಹೇಳುತ್ತಾನೆ’. ಒಬ್ಬ ಒಳ್ಳೆಯ ಶಿಕ್ಷಕ ‘ವಿವರಿಸುತ್ತಾನೆ’. ಒಬ್ಬ ಅತ್ಯುತ್ತಮ ಶಿಕ್ಷಕ ಮಾಡಿ ‘ತೋರಿಸುತ್ತಾನೆ’. ಒಬ್ಬ ಮಹಾನ್ ಶಿಕ್ಷಕ ‘ಸ್ಪೂರ್ತಿಯಾಗುತ್ತಾನೆ’. ಬದುಕನ್ನೂ, ಬದುಕಿಗೆ ಬೇಕಾದ ಕೌಶಲವನ್ನೂ ಕಲಿಸುವವ ಹಾಗೂ ಇವೆಲ್ಲಕ್ಕೂ ಮಿಗಿಲಾದ ಜೀವನಸ್ಪೂರ್ತಿಯನ್ನು ಉದ್ದೀಪಿಸುವವನೇ ಶಿಕ್ಷಕ ಎಂದಾದರೆ, ಮೇಲೆ ಹೇಳಿದ ಕಾರ್ಪೆರೇಟ್ ತರಬೇತುದಾರರೆಲ್ಲರೂ ಗುರುವರ್ಯರೇ! ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಒಂದು ನಮನ ಈ ಅಭಿನವ ಶಿಕ್ಷಕರಿಗೂ ಸಲ್ಲಬೇಕು.

ಹಾಗೆಯೇ, ಪರಾಂಪರಾಗತ ಶಿಕ್ಷಕರು ಮತ್ತು ಈ ಅಭಿನವ ಶಿಕ್ಷಕರು ಪರಸ್ಪರರಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ. ಹೊಸದನ್ನು ಉಣಿಸುವುದು ಹೇಗೆ ಎನ್ನುವುದನ್ನು ಶಿಕ್ಷಕರು ಅಭಿನವರಿಗೆ ಹೇಳಿಕೊಟ್ಟರೆ, ಅಂತರ್ಜಾಲದಿಂದ ಸಂಕೀರ್ಣವಾಗಿರುವ ಪ್ರಪಂಚದಲ್ಲಿ ವಿದ್ಯಾರ್ಥಿಗಳ ಗಮನವನ್ನು ದೀರ್ಘಕಾಲದವರೆಗೆ ಹಿಡಿದಿಡುವುದು ಹೇಗೆ ಎನ್ನುವುದನ್ನು ಅಭಿನವರು ಹೇಳಿಕೊಟ್ಟಾರು. ಅವರು ತಾಳ್ಮೆ ಕಲಿಸಿದರೆ, ಇವರು ಜಾಣ್ಮೆ ಊಡ್ಯಾರು! ಇವರೀರ್ವರ ಕೌಶಲಗಳು ಸಮ್ಮಿಳಿತಗೊಂಡರೆ ವಿದ್ಯಾರ್ಥಿಗಳಿಗೆ ಕಲಿಸುವ ರೀತಿ ಬದಲಾಗಬಹುದು! ಗೆರೆ ತಿದ್ದಲು ಏಟು ಕೊಡಬೇಕಾದ ಪ್ರಸಂಗಗಳು ಇನ್ನಿಲ್ಲವಾಗಬಹುದು! ಹೊಸದೊಂದು ಮಾದರಿಯ ಅರ್ಥಪೂರ್ಣವಾದ ಚಟುವಟಿಕೆ ಆಧಾರಿತ ಪಠ್ಯಕ್ರಮ ಮೊದಲುಗೊಳ್ಳಬಹುದು!

ಶಿಕ್ಷಣಕ್ಕೆ ಶಿಸ್ತಿನ ಚೌಕಟ್ಟು ಬೇಕು, ನಿಜ. ಆದರೆ, ಮಕ್ಕಳು ನಲಿದು ಕಲಿಯುವುದರಲ್ಲಿ ಯಾವ ತಪ್ಪೂ ಇಲ್ಲ. ‘ಎಕ್ಸ್​ಪೀರಿಯನ್ಷಿಯಲ್ ಲರ್ನಿಂಗ್’ (ಅನುಭವ-ಪ್ರೇರಿತ ಕಲಿಕೆ)ಗೆ ಪರ್ಯಾಯವಿಲ್ಲ. ನಗು, ನಲ್ಮೆ, ಚಟುವಟಿಕೆ ಇಲ್ಲದ ಶಿಕ್ಷಣಕ್ಕೂ, ಶಿಕ್ಷೆಗೂ ವ್ಯತ್ಯಾಸವಿಲ್ಲ. ಅಂತೆಯೇ, ಆಟ ಅತಿಯಾದರೆ, ಬಲವಂತ-ಮಾಘ-ಸ್ನಾನವಾದರೆ, ಶಿಬಿಯ ವಿಷಯದಲ್ಲಾದಂತೆ, ಆಟವೇ ‘ಪಾಠ’ದಂತಾಗಿಬಿಡುತ್ತದೆ! ಚಟುವಟಿಕೆಯಾಗಲೀ, ಬೋಧನೆಯಾಗಲೀ, ‘ಒನ್ ಸ್ಶೆಜ್ ಫಿಟ್ಸ್ ಆಲ್’ ಎನ್ನುವ ಧೋರಣೆ ತಪ್ಪು. ನಲಿದು ಕಲಿಯಬಹುದು ಎಂದಾದರೆ, ಕಲಿತು ನಲಿಯಲೂಬಹುದು- ಅನುಭವದಷ್ಟೇ ಆಳವಾದ ಅಂತಃಕರಣವೂ, ಸಾಮರ್ಥ್ಯದಷ್ಟೇ ಸದೃಢವಾದ ಸಹೃದಯವೂ ಉಳ್ಳ ಶಿಕ್ಷಕರಿದ್ದರೆ ಮಾತ್ರ!

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top