Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಮಾವು, ಹಲಸು ಮೇಳಕ್ಕೆ ಚಾಲನೆ

Saturday, 06.05.2017, 3:01 AM       No Comments

ಲಾಲ್​ಬಾಗ್​ನಲ್ಲಿ 24ರವರೆಗೆ ಪ್ರದರ್ಶನ 1,500 ಟನ್ ಹಣ್ಣುಗಳ ಮಾರಾಟದ ಗುರಿ

ಬೆಂಗಳೂರು: ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಏರ್ಪಡಿಸಿರುವ ಮಾವು ಮತ್ತು ಹಲಸು ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. ದಿಗ್ವಿಜಯ ನ್ಯೂಸ್ LIVE ವೀಕ್ಷಿಸಿ

ಮೇಳಕ್ಕೆ ತಡವಾಗಿ ಬಂದ ಸಿಎಂ, ಬೇಗ ಮರಳುವ ಧಾವಂತದಲ್ಲಿದ್ದರು. ಆದರೂ ಮಾವು, ಹಲಸಿನ ಹಣ್ಣುಗಳ ರುಚಿ ನೋಡಿದರು. ಹಲಸಿನಿಂದ ತಯಾರಿಸಿದ ಹಲ್ವಾ ಸೇವಿಸಿದರು. ಸಿಎಂ ತಮ್ಮ ಮಳಿಗೆಗಳಿಗೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಹಲವು ಮಳಿಗೆಗಳ ರೈತರು ಹೂಗುಚ್ಛವನ್ನಿಟ್ಟುಕೊಂಡು ಕಾಯುತ್ತಿದ್ದವರು ನಿರಾಸೆಗೊಂಡರು.

ಮೇ 24ರವರೆಗೆ ನಡೆಯಲಿರುವ ಮೇಳದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ. ಮಾವಿನಹಣ್ಣು ಮಾರಾಟಕ್ಕೆ 90 ಹಾಗೂ ಹಲಸು ಮಾರಾಟಕ್ಕೆ 15 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮೇಳದ ಮೊದಲ ದಿನ ನಿರೀಕ್ಷಿಸಿದಷ್ಟು ಸಂಖ್ಯೆಯ ಗ್ರಾಹಕರು ಬರಲಿಲ್ಲ. ಆದರೂ ಶನಿವಾರ ಮತ್ತು ಭಾನುವಾರ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ವ್ಯಕ್ತವಾಗಿದೆ.

100 ಉಪಚಾರ ಕೇಂದ್ರ ಸ್ಥಾಪನೆ: ಮಾವು ಮತ್ತು ಹಲಸು ಮೇಳ ಕುರಿತು ಮಾಹಿತಿ ನೀಡಿದ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾವು ಬೆಳೆಯುವುದರಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಮಾವಿನಕಾಯಿಗಳನ್ನು ಕಾರ್ಬೆಡ್ ಮುಕ್ತವಾಗಿ ಮಾಗಿಸಲು ಎಥಲೀನ್ ಅನಿಲ ಉಪಚಾರದ 100 ಕೇಂದ್ರಗಳನ್ನು ಸ್ಥಾಪಿಸಲು ತೀರ್ವನಿಸಲಾಗಿದೆ ಎಂದರು.

ಕೋಲಾರ ಬಳಿಯ ಮಾಡಿಗೇರಿಯಲ್ಲಿ ಮಾವುಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಪೋಷಿಸಲು ಬಿಸಿ ನೀರಿನ ಉಪಚಾರ ನೀಡುವ ಕೇಂದ್ರ ಸ್ಥಾಪಿಸಲಾಗುತ್ತಿದೆ. ಮೇ 15ರ ಹೊತ್ತಿಗೆ ಯಂತ್ರಗಳನ್ನು ಅಳವಡಿಸಿ ಕೇಂದ್ರವನ್ನು ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷದ ಮೇಳದಲ್ಲಿ 1,030 ಟನ್ ಹಣ್ಣುಗಳು ಮಾರಾಟವಾಗಿ 6.30 ಕೋಟಿ ರೂ.ಗಳ ವಹಿವಾಟು ನಡೆದಿತ್ತು. ಈ ಬಾರಿ 1,500 ಟನ್ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಮಾತನಾಡಿ, ರಾಮನಗರ ಹಾಗೂ ಧಾರವಾಡದಲ್ಲಿ ಮಾವು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು 10 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಸಾವಯವ ಪದ್ಧತಿಗೆ ಒತ್ತು

ಸಾಮಾನ್ಯವಾಗಿ ನಿಗಮದಿಂದ ಆಯೋಜಿಸುವ ಮೇಳದಲ್ಲಿ ಕಾರ್ಬೆಡ್​ರಹಿತ ಹಣ್ಣುಗಳನ್ನು ಮಾರಾಟ ಮಾಡುವುದು ತಿಳಿದ ವಿಚಾರ. ಆದರೆ ಈ ಬಾರಿ ಮೇಳದಲ್ಲಿ ಮಾವು ಬೆಳೆಯುವುದರಿಂದ ಹಿಡಿದು ಮಾಗಿಸುವವರೆಗೂ ಸಾವಯವ ಪದ್ಧತಿ ಅನುಸರಿಸಿರುವ ಹಣ್ಣುಗಳ ಮಾರಾಟ ಮಳಿಗೆಗಳು ಹೆಚ್ಚಾಗಿರುವುದು ವಿಶೇಷ. ನಗರದಲ್ಲಿ ನೈಸರ್ಗಿಕ ಮತ್ತು ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಮೇಳದಲ್ಲೂ ಅಂಥದ್ದೇ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇವು ಗ್ರಾಹಕರನ್ನು ಹೇಗೆ ಸೆಳೆಯುತ್ತವೆ ಎಂಬುದನ್ನು ಗಮನಿಸಲಾಗುತ್ತಿದೆ. ಮೇಳದಲ್ಲಿರುವ ಮಾವಿನಹಣ್ಣುಗಳು ರಾಸಾಯನಿಕ ಮುಕ್ತವಾಗಿರುವುದರಿಂದ ಅವುಗಳ ಬಣ್ಣ ಅಷ್ಟೇನೂ ಆಕರ್ಷಕವಾಗಿಲ್ಲ. ಆದರೂ ಮೇಳ ನಡೆಯುತ್ತಿರುವ ಸ್ಥಳದ ಸುತ್ತಮುತ್ತ ಹಣ್ಣಿನ ಸೊಗಡು ಜನರನ್ನು ಸೆಳೆಯುತ್ತಿದೆ.

ಹುಳಿಮಾವು ತಿಂದು ಮುಖ ಹಿಂಡಿದ ಸಿಎಂ

ಮೇಳಕ್ಕೆ ಆಗಮಿಸಿ ಮಾವಿನಹಣ್ಣಿನ ರುಚಿ ನೋಡಲು ಮುಂದಾದ ಸಿಎಂ ಸಿದ್ದರಾಮಯ್ಯ ಅವರಿಗೆ ಹುಳಿ ಹಣ್ಣು ಸಿಕ್ಕಿತು. ಹೀಗಾಗಿ ಮುಖ ಕಿವುಚಿದ ಅವರು, ‘ಏನ್ರೀ ಇದು ಹುಳಿ..’ ಎಂದು ಬೇಸರದಿಂದ ಅಧಿಕಾರಿಗಳನ್ನು ಪ್ರಶ್ನಿಸಿದರು. ಬಳಿಕ ಹಲಸಿನ ಹಲ್ವಾ ಆಸ್ವಾದಿಸಿ ಅದರ ರುಚಿಗೆ ಮಾರುಹೋದರು. ನಂತರ ಮೇಳಕ್ಕಾಗಿ ನಿರ್ವಿುಸಿರುವ ಮೊದಲ ಮಳಿಗೆಯಲ್ಲಿ ಮೇಳಕ್ಕೆ ಚಾಲನೆ ನೀಡಿ ಮರಳಿದರು.

ಗಮನಸೆಳೆಯುತ್ತಿರುವ ಮರಿಗೌಡ ತಳಿ

ಮೇಳದಲ್ಲಿ ತೋಟಗಾರಿಕೆ ಪಿತಾಮಹ ಮರಿಗೌಡ ತಳಿಯ ಮಾವು ಹೆಚ್ಚು ಗಮನಸೆಳೆಯುತ್ತಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಈ ಹಣ್ಣುಗಳು ಇತರ ತಳಿಗಿಂತ ತುಂಬ ವಿಭಿನ್ನವಾಗಿವೆ. ಬಾಕಿ ಹಣ್ಣುಗಳಿಗಿಂತ ತೂಕ ಮತ್ತು ಗಾತ್ರದಲ್ಲಿ ದೊಡ್ಡದಾಗಿವೆ. ಈ ಬಾರಿ 300 ಗ್ರಾಂ ಹಣ್ಣುಗಳು ಮಾತ್ರ ಲಭ್ಯ ಇವೆ. ಸಾಮಾನ್ಯವಾಗಿ ಈ ತಳಿಯಲ್ಲಿ ಪ್ರತಿ ಹಣ್ಣು ಕನಿಷ್ಠ ಒಂದೂವರೆ ಕೆ.ಜಿ. ಇರುತ್ತದೆ ಎಂದು ಚಿಂತಾಮಣಿಯ ರೈತ ಕೋದಂಡರೆಡ್ಡಿ ಹೇಳುತ್ತಾರೆ. ತೋಟಗಾರಿಕೆ ಇಲಾಖೆಯೇ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಹತ್ತು ಎಕರೆ ತೋಟದಲ್ಲಿ ನಾಲ್ಕು ಮರಗಳನ್ನು ಬೆಳೆಸಿದ್ದೇವೆ. ಈ ಹಣ್ಣುಗಳ ರುಚಿಯೂ ಸೊಗಸಾಗಿರುತ್ತದೆ ಎಂದು ತಿಳಿಸುತ್ತಾರೆ.

ಹಲಸಿಗಿಲ್ಲ ಆದ್ಯತೆ

ಗಾಜಿನಮನೆಗೆ ತೆರಳುವ ಹಾದಿಯಲ್ಲಿ ಮಾವು ಮೇಳ ನಡೆಯುತ್ತಿದೆ. ಈ ಮಳಿಗೆಗಳು ಆಕರ್ಷಕವಾಗಿ ಕಾಣಿಸುತ್ತಿವೆ. ಗಾಜಿನಮನೆಯ ಬಲಭಾಗದಲ್ಲಿ ಹಲಸು ಮೇಳ ನಡೆಯುತ್ತಿದೆ. ಇದಕ್ಕಾಗಿ 15 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಆದರೆ ಈ ಮಳಿಗೆಗಳ ಬಗ್ಗೆ ಮೇಳಕ್ಕೆ ಆಗಮಿಸುವವರಿಗೆ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ. ಕನಿಷ್ಠ ಸೂಚನಾಫಲಕವನ್ನೂ ಅಳವಡಿಸಿಲ್ಲ. ಹೀಗಾಗಿ ಹಲಸಿನಹಣ್ಣು ಖರೀದಿಸಲು ಬಯಸುವವರು ಅಧಿಕಾರಿಗಳನ್ನು ಕೇಳಿಕೊಂಡು ಅಲ್ಲಿಗೆ ತೆರಳುವ ಸ್ಥಿತಿ ನಿರ್ವಣವಾಗಿದೆ. ಸುದ್ದಿಗಾರರು ಈ ವಿಷಯ ತಿಳಿಸಿದ ಬಳಿಕ ಅಧಿಕಾರಿಗಳು ಆಗಿರುವ ಲೋಪವನ್ನು ಸರಿಪಡಿಸುವ ಭರವಸೆ ನೀಡಿದರು.

ಹಣ್ಣುಗಳ ರಸಾಸ್ವಾದನೆ

ಮಾವು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲರೂ ‘ಹಣ್ಣುಗಳ ರಾಜ’ನನ್ನು ಇಷ್ಟಪಡುವರೇ. ದೊಡ್ಡವರನ್ನೂ ಮಕ್ಕಳನ್ನಾಗಿಸುವ ಮಾವು, ತನ್ನ ರುಚಿಯಿಂದ ಹಿಡಿದಿಡುವ ಸುವಾಸನೆಯಲ್ಲಿಯೂ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇನ್ನೂ ಅಷ್ಟೇ ಗಮ್ಮತ್ತು ಹೊಂದಿರುವ ಹಲಸಿನ ಸುವಾಸನೆ ಬಗ್ಗೆ ಕೇಳಬೇಕೆ? ‘ಹಸಿದಾಗ ಹಲಸು, ಉಂಡ ಮೇಲೆ ಮಾವು’ ಆರೋಗ್ಯಕ್ಕೆ ಹಿತ ಎಂಬುದು ಹಿಂದಿನಿಂದ ಬಂದಿರುವ ಮಾತು. ಸಸ್ಯಕಾಶಿಯಲ್ಲಿ ಆಯೋಜನೆಗೊಂಡಿರುವ ಮೇಳದ ಮೊದಲ ದಿನವೇ ಸಾಕಷ್ಟು ಜನ ಆಗಮಿಸಿ ಹಣ್ಣಿನ ರುಚಿ ಸವಿದಿದ್ದಾರೆ. ವಿವಿಧ ಬಗೆಯ ಹಲಸು, ಹಲಸಿನಿಂದ ತಯಾರಿಸಿದ ಚಿಪ್ಸ್, ಹಪ್ಪಳ ಸೇರಿ ಅನೇಕ ಪದಾರ್ಥಗಳು ಲಭ್ಯವಿವೆ. ಮಕ್ಕಳು ಹಣ್ಣುಗಳನ್ನು ಕೈಯಲ್ಲಿ ಹಿಡಿದು ಮೂಗಿಗೆ ತಾಕಿಸಿಕೊಂಡು ರಸಾಸ್ವಾದನೆ ಮಾಡುತ್ತಿದ್ದುದು ಕಂಡುಬಂತು.

Leave a Reply

Your email address will not be published. Required fields are marked *

Back To Top