Saturday, 23rd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಮಾಯಾಪೆಟ್ಟಿಗೆಯೊಂದರ ನೆನಪಿನಲ್ಲಿ

Wednesday, 06.06.2018, 3:00 AM       No Comments

| ಟಿ.ಜಿ.ಶ್ರೀನಿಧಿ

ಇಂದಿನ ವಿದ್ಯಾರ್ಥಿಗಳಾಗಲಿ, ಹಿಂದಿನ ವಿದ್ಯಾರ್ಥಿಗಳೇ ಆಗಲಿ, ಜೂನ್ ತಿಂಗಳು ಬಂತೆಂದರೆ ಎಲ್ಲರಿಗೂ ಸಂಭ್ರಮ. ಇಂದಿನ ವಿದ್ಯಾರ್ಥಿಗಳು ಹೊಸ ತರಗತಿ ಪ್ರವೇಶಿಸುವ ಸಂಭ್ರಮದಲ್ಲಿದ್ದರೆ ಹಿಂದಿನವರೆಲ್ಲ ಅವರ ಶಾಲಾದಿನಗಳ ನೆನಪಿನಲ್ಲಿ ಮುಳುಗೇಳುತ್ತಾರೆ.

ಹಳೆಯ ನೆನಪುಗಳೇ ಹಾಗೆ, ಬಹಳ ಹೊತ್ತು ಬಾಯಲ್ಲಿಟ್ಟುಕೊಂಡು ಚಪ್ಪರಿಸುವ ಪೆಪ್ಪರ್​ವಿುಂಟಿನಂತೆ ಅವುಗಳ ರುಚಿಯೂ ನಮಗೆಲ್ಲ ಅಚ್ಚುಮೆಚ್ಚು. ಈ ರುಚಿಯನ್ನು ಹೆಚ್ಚಿಸಿಕೊಳ್ಳುವ ಇನ್ನೊಂದು ಅವಕಾಶ ‘ವಿಸಿಆರ್ ದಿನ’ದ ನೆಪದಲ್ಲಿ ಇಂದು (ಜೂನ್ 7) ನಮ್ಮ ಪಾಲಿಗೆ ಬಂದಿದೆ. ಹಿಂದೊಮ್ಮೆ ಮನೆಮನಗಳನ್ನೆಲ್ಲ ಗೆದ್ದು ಆನಂತರ ನೇಪಥ್ಯಕ್ಕೆ ಸರಿದ ವಿಸಿಆರ್ ಅನ್ನು ವರ್ಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳುವ ನೆಪ ಈ ದಿನ.

ಇಂದಿನ ಸನ್ನಿವೇಶದಲ್ಲಿ ವಿಸಿಆರ್ ಎಂಬ ಹೆಸರೇ ಅನೇಕರಿಗೆ ಅಪರಿಚಿತ. ಆದರೆ ಒಂದೆರಡು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬೇಕೆಂದಾಗ ಸಿನಿಮಾ ಟಾಕೀಸುಗಳಿಗೆ ಹೋಗಲಾರದ ಅದೆಷ್ಟೋ ಮಂದಿಗೆ ಆಗ ಅವರ ಇಷ್ಟದ ಸಿನಿಮಾ ತೋರಿಸುತ್ತಿದ್ದದ್ದು ಇದೇ ಮಾಯಾಪೆಟ್ಟಿಗೆ.

ಅಂದಹಾಗೆ ವಿಸಿಆರ್ ಎನ್ನುವುದು ‘ವೀಡಿಯೋ ಕ್ಯಾಸೆಟ್ ರೆಕಾರ್ಡರ್’ ಎಂಬ ಹೆಸರಿನ ಹ್ರಸ್ವರೂಪ. ಇದನ್ನು ವಿಸಿಪಿ, ಅಂದರೆ ‘ವೀಡಿಯೋ ಕ್ಯಾಸೆಟ್ ಪ್ಲೇಯರ್’ ಎಂದೂ ಕರೆಯಲಾಗುತ್ತಿತ್ತು. ಧ್ವನಿಯನ್ನಷ್ಟೇ ಕೇಳಿಸುತ್ತಿದ್ದ ಆಡಿಯೋ ಕ್ಯಾಸೆಟ್​ಗಳಿಗಿಂತ ನಾಲ್ಕಾರು ಪಟ್ಟು ದೊಡ್ಡದಾದ ಕ್ಯಾಸೆಟ್​ಗಳನ್ನು ಬಳಸಿ ಚಲನಚಿತ್ರಗಳನ್ನು ತೋರಿಸುತ್ತಿದ್ದದ್ದು ಈ ಮಾಯಾಪೆಟ್ಟಿಗೆಯ ಹೆಚ್ಚುಗಾರಿಕೆ.

ಇಷ್ಟೇ ಹೇಳಿದರೆ ವಿಸಿಆರ್ ವೈಶಿಷ್ಟ್ಯವನ್ನು ಪೂರ್ತಿಯಾಗಿ ವಿವರಿಸಿದಂತೆ ಆಗುವುದಿಲ್ಲ. ಇಂದಿನ ಹಾಗೆ ಆಗ ಟಿವಿಯಲ್ಲಿ ನೂರೆಂಟು ಚಾನೆಲ್​ಗಳು ಬರುತ್ತಿರಲಿಲ್ಲ. ಎಲ್ಲರ ಕೈಯಲ್ಲೂ ಸ್ಮಾರ್ಟ್​ಫೋನ್ ಕೂಡ ಇರಲಿಲ್ಲ. ಬೇಕಾದ ಸಿನಿಮಾವನ್ನು ಬೇಕೆಂದಾಗ ತೋರಿಸುವ ಯೂಟ್ಯೂಬ್, ನೆಟ್​ಫ್ಲಿಕ್ಸ್, ಪ್ರೖೆಮ್ ವೀಡಿಯೋ ಮುಂತಾದ ಯಾವ ಸೌಲಭ್ಯವೂ ಇಲ್ಲದ ಕಾಲದಲ್ಲಿ ವಿಸಿಆರ್ ಮತ್ತದರ ಕ್ಯಾಸೆಟ್​ಗಳು ಜನರ ಮನರಂಜನೆಯ ಅಗತ್ಯಗಳನ್ನು ಪೂರೈಸುವ ಪ್ರಮುಖ ಮಾರ್ಗವಾಗಿದ್ದವು. ಪುಸ್ತಕಗಳ ಲೈಬ್ರರಿಯಂತೆ ಆಗ ಪ್ರಪಂಚದ ಎಲ್ಲ ಕಡೆಯಲ್ಲೂ ವೀಡಿಯೋ ಕ್ಯಾಸೆಟ್ ಲೈಬ್ರರಿಗಳನ್ನು ನೋಡಬಹುದಿತ್ತು. ವೀಡಿಯೋ ಕ್ಯಾಸೆಟ್ ಮಾತ್ರವೇ ಅಲ್ಲ, ಅದನ್ನು ನೋಡಲು ಬೇಕಾದ ವಿಸಿಪಿ/ವಿಸಿಆರ್ ಕೂಡ ಈ ಲೈಬ್ರರಿಗಳಲ್ಲಿ ಬಾಡಿಗೆಗೆ ದೊರಕುತ್ತಿತ್ತು. ದಿನಕ್ಕಿಷ್ಟು ಬಾಡಿಗೆಗೆಂದು ವಿಸಿಆರ್ ಅನ್ನೂ ಒಂದಷ್ಟು ಕ್ಯಾಸೆಟ್ ಅನ್ನೂ ತಂದು ನಮ್ಮ ಟಿವಿಗೆ ಸಂರ್ಪಸಿದರೆ ಆಯಿತು, ಆ ದಿನದ ಮಟ್ಟಿಗೆ ಮನೆಯೇ ಸಿನಿಮಾ ಥಿಯೇಟರು!

ವಿಸಿಆರ್ ಆವಿಷ್ಕಾರವಾದದ್ದು 1950ರ ದಶಕದಲ್ಲಿ. ಅದರ ಮೊದಲ ಮಾದರಿಯನ್ನು 1953ರಲ್ಲಿ ಜಪಾನಿನ ತಂತ್ರಜ್ಞರೊಬ್ಬರು ರೂಪಿಸಿದ್ದರಂತೆ. ತಮ್ಮ ದುಬಾರಿ ಬೆಲೆಯ ಕಾರಣದಿಂದ ಈ ಯಂತ್ರಗಳು ಮೊದಲಿಗೆ ಹೆಚ್ಚು ಜನರನ್ನು ತಲುಪಲಿಲ್ಲ. ಆದರೆ ಮುಂದಿನ ಒಂದೆರಡು ದಶಕಗಳ ಅವಧಿಯಲ್ಲಿ ನಡೆದ ಅಭಿವೃದ್ಧಿಯ ಪರಿಣಾಮವಾಗಿ ವಿಸಿಆರ್ ತಂತ್ರಜ್ಞಾನ ಬೆಳೆದುದರ ಜತೆಗೆ ಈ ಯಂತ್ರಗಳ ಬೆಲೆಯೂ ಕಡಿಮೆಯಾಯಿತು. ಹಿಂದೆ ರೇಡಿಯೋಗಳು, ಈಗ ಕಂಪ್ಯೂಟರ್​ಗಳು ಮನೆಮನೆಯಲ್ಲೂ ಕಾಣಸಿಗುವಂತೆ ಆಗ ವಿಸಿಆರ್​ಗಳೂ ಅನೇಕ ಮನೆಗಳನ್ನು ಪ್ರವೇಶಿಸಿದವು. ಮೊದಲಿಗೆ ವಿಸಿಆರ್ ತಯಾರಿಸುತ್ತಿದ್ದ ಸಂಸ್ಥೆಗಳ ಪೈಕಿ ಎಲ್ಲವೂ ತಮಗೆ ಸೂಕ್ತವೆನಿಸಿದ ತಂತ್ರಜ್ಞಾನವನ್ನೇ ಬಳಸುತ್ತಿದ್ದವು. ಹೀಗಾಗಿ ಒಂದು ವಿಸಿಆರ್​ನಲ್ಲಿ ಕೆಲಸಮಾಡಿದ ಕ್ಯಾಸೆಟ್ಟು ಇನ್ನೊಂದು ಸಂಸ್ಥೆಯ ವಿಸಿಆರ್​ನಲ್ಲಿ ಕೆಲಸಮಾಡುತ್ತಿರಲಿಲ್ಲ. ಇಂತಹ ಗೊಂದಲಮಯ ಸನ್ನಿವೇಶವನ್ನು ಬದಲಿಸಿದ್ದು ‘ವಿಎಚ್​ಎಸ್’(ವೀಡಿಯೋ ಹೋಮ್ ಸಿಸ್ಟಂ) ತಂತ್ರಜ್ಞಾನ. ಜಪಾನಿನ ಜೆವಿಸಿ ಸಂಸ್ಥೆ 1976ರಲ್ಲಿ ಪರಿಚಯಿಸಿದ ಈ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಪ್ರಪಂಚದ ಬಹುತೇಕ ವಿಸಿಆರ್​ಗಳೂ ವೀಡಿಯೋ ಕ್ಯಾಸೆಟ್​ಗಳೂ ಬಳಸಿದವು.

ಅಂದಹಾಗೆ ವಿಸಿಆರ್ ಕೆಲಸ ಬರಿಯ ಕ್ಯಾಸೆಟ್ಟಿನಲ್ಲಿರುವ ಚಿತ್ರವನ್ನು ತೋರಿಸುವುದಷ್ಟೇ ಆಗಿರಲಿಲ್ಲ. ಹೆಸರೇ ಹೇಳುವಂತೆ ಅವುಗಳಲ್ಲಿ ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಕೂಡ ಇತ್ತು. ಇಂದಿನ ಡಿಟಿಎಚ್ ವ್ಯವಸ್ಥೆಯಲ್ಲಿ ಕೆಲ ಸೆಟ್​ಟಾಪ್ ಬಾಕ್ಸುಗಳು ಟಿವಿ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿಕೊಳ್ಳಲು ಶಕ್ತವಾಗಿರುತ್ತವಲ್ಲ, ಅದೇ ರೀತಿ ಅಂದಿನ ವಿಸಿಆರ್​ಗಳ ಮೂಲಕವೂ ಕಾರ್ಯಕ್ರಮಗಳನ್ನು ಉಳಿಸಿಟ್ಟುಕೊಳ್ಳುವುದು ಸಾಧ್ಯವಿತ್ತು. ಹಲವು ದಶಕಗಳ ಕಾಲ ವಿಸಿಆರ್​ಗೆ ವ್ಯಾಪಕ ಜನಪ್ರಿಯತೆ ದೊರಕಿತ್ತಾದರೂ ಅದರಲ್ಲಿ ಅನೇಕ ಕೊರತೆಗಳಿದ್ದವು. ವಾತಾವರಣದ ಬದಲಾವಣೆಗಳು ಯಂತ್ರ ಹಾಗೂ ಕ್ಯಾಸೆಟ್ಟಿನ ಕಾರ್ಯಾಚರಣೆ ಮೇಲೆ ಬೀರುತ್ತಿದ್ದ ಋಣಾತ್ಮಕ ಪರಿಣಾಮ, ಇಂತಹ ಕೊರತೆಗಳಿಗೊಂದು ಪ್ರಮುಖ ಉದಾಹರಣೆ. ಅಂದಿನ ಮಟ್ಟಿಗೆ ಕ್ರಾಂತಿಕಾರಕ ತಂತ್ರಜ್ಞಾನವೆನಿಸಿದ್ದ ಡಿವಿಡಿಗಳ ಆವಿಷ್ಕಾರವಾದ ನಂತರ ವಿಎಚ್​ಎಸ್ ಕ್ಯಾಸೆಟ್​ಗಳ ಬಳಕೆ ನಿಧಾನಕ್ಕೆ ಕಡಿಮೆಯಾಗುತ್ತ ಬಂತು. ಕ್ಯಾಸೆಟ್​ಗಳಲ್ಲಿ ಉಳಿಸಿಡಬಹುದಾಗಿದ್ದ ಮಾಹಿತಿಗಿಂತ ಹೆಚ್ಚಿನ ಮಾಹಿತಿಯನ್ನು, ಅದಕ್ಕಿಂತ ಹೆಚ್ಚು ಗುಣಮಟ್ಟದಲ್ಲಿ ಶೇಖರಿಸಲು ಈ ಹೊಸ ಮಾಧ್ಯಮದಲ್ಲಿ ಸಾಧ್ಯವಿದ್ದದ್ದು ಈ ಬೆಳವಣಿಗೆಗೆ ಕಾರಣವಾದ ಪ್ರಮುಖ ಅಂಶ.(ಮುಂದೆ ಡಿವಿಡಿ ಸ್ಥಾನದಲ್ಲಿ ಅಂತರ್ಜಾಲ ಆಧರಿತ ಕ್ಲೌಡ್ ಸ್ಟೋರೇಜ್ ಕಾಣಿಸಿಕೊಳ್ಳಲು ಕಾರಣವಾದದ್ದೂ ಇದೇ ಅಂಶವೇ).

ಕ್ಯಾಸೆಟ್​ಗಳೇ ಇಲ್ಲದ ಮೇಲೆ ವಿಸಿಆರ್​ಗೇನು ಕೆಲಸ? ಅದೂ ನಿಧಾನಕ್ಕೆ ಮೂಲೆಗುಂಪಾಯಿತು. ವಿಸಿಆರ್​ಗಳನ್ನು ತಯಾರಿಸುತ್ತಿದ್ದ ಕೊನೆಯ ಸಂಸ್ಥೆ 2016ರಲ್ಲಿ ಉತ್ಪಾದನೆಯನ್ನು ನಿಲ್ಲಿಸಿತಾದರೂ ಆ ವೇಳೆಗೆ ಜನಸಾಮಾನ್ಯರು ಅದರ ಬಳಕೆ ನಿಲ್ಲಿಸಿ ಒಂದು ದಶಕಕ್ಕಿಂತ ಹೆಚ್ಚು ಸಮಯವೇ ಆಗಿತ್ತು. ಬಳಕೆಯಿಂದ ದೂರ ಸರಿದರೂ ಮನದ ಮೂಲೆಯಲ್ಲಿನ ಬೆಚ್ಚಗಿನ ಜಾಗವನ್ನು ಮಾತ್ರ ವಿಸಿಆರ್ ಇನ್ನೂ ಬಿಟ್ಟುಕೊಟ್ಟಿಲ್ಲ. ಜೂನ್ ಬಂದೊಡನೆ ಶಾಲಾದಿನಗಳ ನೆನಪಿನ ಜತೆಗೆ ವಿಸಿಆರ್ ನೆನಪೂ ಮಳೆಗಾಲದ ಹಾಗೆ ಮರುಕಳಿಸುತ್ತದಲ್ಲ, ಇದಕ್ಕಿಂತ ಬೇರೆ ಪುರಾವೆಯೇನು ಬೇಕು?

Leave a Reply

Your email address will not be published. Required fields are marked *

Back To Top