Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಮಾನವ ರಾಕೆಟ್ ಬೋಲ್ಟ್ ಸಾಧನೆಯ ಓಟಕ್ಕಿಲ್ಲ ಹಾಲ್ಟ್!

Wednesday, 16.08.2017, 3:00 AM       No Comments

ಓಡು.. ಓಡು.. ಓಡು…

ಈ ಜಗತ್ತಿಗೆಲ್ಲ ಓಡುವ ಧಾವಂತ.

ಓಡುವ ವ್ಯಕ್ತಿ, ಓಡುವ ರೀತಿ ಬೇರೆ ಬೇರೆ ಇರಬಹುದು. ಗುರಿಯನ್ನು ಬೆನ್ನಟ್ಟಿ ಓಡುವುದಕ್ಕೂ, ಕಳ್ಳರನ್ನು ಬೆನ್ನಟ್ಟಿ ಓಡುವುದಕ್ಕೂ ವ್ಯತ್ಯಾಸವಿದೆ. ಸಮಸ್ಯೆಗಳನ್ನು ಎದುರಿಸಲಾಗದೆ ಭಯದಿಂದ ಓಡುವುದು ಕೂಡ ಬೇರೆಯೇ ಬಗೆ. ಓಟವೆಂದರೆ, ಕೇವಲ ದೈಹಿಕ ದೌಡಷ್ಟೇ ಅಲ್ಲ… ಆಸೆ, ಕನಸು, ಕಾಮನೆ, ಲಾಲಸೆಗಳ ಹಿಂದೆ ಮನಸ್ಸಿನ ಓಟ ನಿರಂತರ. ಅದು ಮನೋವೇಗದ ಓಟ. ಮನಸ್ಸಿನ ವೇಗಕ್ಕೆ ಸರಿಸಾಟಿ ಇಲ್ಲ.

ಸ್ಥೂಲವಾಗಿ ಹೇಳುವುದಾದರೆ, ಪ್ರಪಂಚದಲ್ಲಿ ಎರಡು ಬಗೆ; ಬೆನ್ನಟ್ಟಿ ಓಡುವವರು ಹಾಗೂ ಬೆನ್ನು ಹಾಕಿ ಓಡುವವರು. ವಿದ್ಯೆ, ಮಹತ್ವಾಕಾಂಕ್ಷೆ, ಯಶಸ್ಸು, ಸಾಧನೆಯ ಹಾದಿಯಲ್ಲಿ ಓಡುವವರು ಸದಾ ಕಷ್ಟ, ಬಡತನ, ಸವಾಲುಗಳ ವಿರುದ್ಧ ಸೆಡ್ಡು ಹೊಡೆದು ಸಾಗುತ್ತಿರುತ್ತಾರೆ. ಉಳಿದವರದು ಪಲಾಯನದ ಓಟ.

ಮೊನ್ನೆ ಮಾನವ ರಾಕೆಟ್, ಮಿಂಚಿನ ವೇಗದ ಉಸೇನ್ ಬೋಲ್ಟ್ ನಿವೃತ್ತರಾದರು. ಲಂಡನ್​ನಲ್ಲಿ ನಡೆದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಬೋಲ್ಟ್ ಕೊನೆಯ ಬಾರಿ ಓಡಿದರು. ಅವರ ನೆಚ್ಚಿನ 100 ಮೀ. ಓಟದಲ್ಲಿ ಕಂಚಿಗೆ ತೃಪ್ತಿಪಟ್ಟರೆ, 4/100 ಮೀ. ರಿಲೆಯಲ್ಲಿ ಗಾಯಾಳುವಾಗಿ ಓಟವನ್ನೂ ಪೂರ್ಣಗೊಳಿಸಲಾಗದೆ ಕಣ್ಣೀರಿನ ವಿದಾಯ ಪಡೆದರು.

ಬೋಲ್ಟ್ ಜಗತ್ತಿನ ಅತ್ಯಂತ ವೇಗದ ಓಟಗಾರ. 100 ಹಾಗೂ 200 ಮೀ. ಓಟಗಳಲ್ಲಿ ಬೋಲ್ಟ್​ರದ್ದು ಅದ್ವಿತೀಯ ಆಧಿಪತ್ಯ. ಸತತ ಮೂರು ಒಲಿಂಪಿಕ್ಸ್ ಗಳಲ್ಲಿ, ವಿಶ್ವ ಚಾಂಪಿಯನ್​ಷಿಪ್​ಗಳಲ್ಲಿ ಅವರು ಮೆರೆದ ಪಾರಮ್ಯ ಬಹುಶಃ ಬೇರೆಯವರಿಂದ ಅನುಕರಿಸಲಾಗದಂಥದ್ದು. ಇದೆಲ್ಲಕ್ಕಿಂತ ಮಿಗಿಲೆಂದರೆ, ಸುದೀರ್ಘ ವೃತ್ತಿಜೀವನದಲ್ಲಿ ಬೋಲ್ಟ್ ವಿರುದ್ಧ ಒಮ್ಮೆಯೂ ಉದ್ದೀಪನದ ಅಪಸ್ವರ ಕೇಳಿಬಂದಿಲ್ಲ. 100ಮೀ. ಓಟವನ್ನು 9.80 ಸೆಕೆಂಡ್​ಗಿಂತ ವೇಗವಾಗಿ ಓಡಿರುವ ವಿಶ್ವದ ಕೇವಲ 7 ಓಟಗಾರರ ಪೈಕಿ ಉದ್ದೀಪನದ ಕಳಂಕಕ್ಕೆ ಸಿಲುಕದ ಏಕೈಕ ಅಥ್ಲೀಟ್ ಬೋಲ್ಟ್. ಅವರ ಅತಿಮಾನುಷ ವೇಗ, ಸಾಧನೆಯಿಂದ, ಪರಿಶ್ರಮದಿಂದ, ದೇಹ ಪ್ರಕೃತಿ ಹಾಗೂ ಇಚ್ಛಾಶಕ್ತಿಯಿಂದ ಸಾಧ್ಯವಾಗಿದ್ದೇ ಹೊರತು, ಬಾಹ್ಯ ಸಂಗತಿಗಳಿಂದಲ್ಲ. ಅಂದರೆ, ಬೋಲ್ಟ್ ಜೀವನದುದ್ದಕ್ಕೂ ಸವಾಲು, ಪ್ರತಿರೋಧ, ಪ್ರತಿಕೂಲ ಸನ್ನಿವೇಶಗಳ ವಿರುದ್ಧ ಓಡಿದರು. ಬಾಲ್ಯದಲ್ಲಿ, ಶಾಲೆಯಲ್ಲಿ, ಕ್ರೀಡಾಕೂಟಗಳಲ್ಲಿ, ಕ್ರೀಡಾ ವೃತ್ತಿಜೀವನದ ಒಂದೊಂದು ಹಂತದಲ್ಲೂ ವೇಗವಾಗಿ, ಇನ್ನಷ್ಟು ವೇಗವಾಗಿ ಓಡುತ್ತಲೇ ಗೆದ್ದರು. ಓಟದ ಒಂದೊಂದು ಹೆಜ್ಜೆಯನ್ನೂ ಆನಂದಿಸಿದರು. ಆಸ್ವಾದಿಸಿದರು. ತಮಗಾಗಿ, ಬೇರೆಯವರಿಗಾಗಿ, ದೇಶಕ್ಕಾಗಿ, ಕ್ರೀಡೆಗಾಗಿ ಓಡಿದರು. ಒಂದೊಂದು ದಾಖಲೆಯನ್ನು ಮುರಿದಾಗಲೂ ಮತ್ತಷ್ಟು ಹುಮ್ಮಸ್ಸಿನಿಂದ ಗುರಿಯತ್ತ ದಾಪುಗಾಲು ಹಾಕುತ್ತ ಓಡಿದರು. ನಡುನಡುವೆ ತಮ್ಮ ಓರಗೆಯವರು, ಪ್ರತಿಸ್ಪರ್ಧಿಗಳು ಟ್ರಾ್ಯಕ್​ನಲ್ಲಿ, ಬದುಕಿನಲ್ಲಿ ಬಿದ್ದಾಗ ತಿರುಗಿ ನೋಡುನೋಡುತ್ತ ಓಡಿದರಾದರೂ, ಇವರು ಎಡವಲಿಲ್ಲ.

ಹಾಗೆ ನೋಡಿದರೆ, ಜಮೈಕಾದಲ್ಲಿ 1986 ಆಗಸ್ಟ್ 21ರಂದು ಜನಿಸಿದ ಬೋಲ್ಟ್ ಸ್ವಭಾವತಃ ಹುಡುಗಾಟಿಕೆಯ ವ್ಯಕ್ತಿ. ಬಡತನದ ಎಲ್ಲ ಮುಖಗಳನ್ನೂ ಕಂಡು, ಸದ್ಯ ವಿಶ್ವ ಶ್ರೀಮಂತ ಅಥ್ಲೀಟ್​ಗಳ ಪೈಕಿ ಒಬ್ಬರೆನಿಸಿರುವ ಬೋಲ್ಟ್, ಬದುಕನ್ನು ಬಿಂದಾಸ್ ಆಗಿ ಕಳೆಯಬೇಕೆನ್ನುವವರು. ಓರ್ವ ಅಥ್ಲೀಟ್ ಆಗಿ ರೂಪುಗೊಳ್ಳುವ ಹಂತದಲ್ಲಿ ಇವರನ್ನು ಶಿಸ್ತಿನ ಚೌಕಟ್ಟಿನೊಳಗೆ ಕಟ್ಟಿ ಹಾಕುವುದೇ ಕೋಚ್​ಗಳ ಪಾಲಿಗೆ ದೊಡ್ಡ ಸಂಗತಿಯಾಗಿರುತ್ತಿತ್ತು. ಸದಾ ತಂಟೆ, ಹುಡುಗಾಟದಲ್ಲೇ ಮುಳುಗಿರುವ ಈತ, ಗಂಭೀರವಾಗಿರುವುದು ಯಾವಾಗ ಎಂದು ಕೋಚ್​ಗಳು ಚಿಂತೆ ಪಡುತ್ತಿದ್ದರು. ಕ್ರೀಡೆಯ ಸಲುವಾಗಿ ತನ್ನಿಷ್ಟದಂತೆ ಬದುಕುವ ಹಕ್ಕನ್ನು ತ್ಯಾಗ ಮಾಡುವುದಕ್ಕೆ ಅವರು ಸಿದ್ಧರಿರಲಿಲ್ಲ. ಇದೇ ಕಾರಣಕ್ಕೆ ಅವರು ಒಲಿಂಪಿಕ್ಸ್, ವಿಶ್ವ ಚಾಂಪಿಯನ್​ಷಿಪ್​ಗಳ ವೇಳೆಯಲ್ಲಿ ಊಟೋಪಚಾರದಲ್ಲಿ ಪಥ್ಯ ತಪ್ಪಿಸುತ್ತಿದ್ದರು. ಸ್ಪರ್ಧೆಗಳ ಮುನ್ನ, ನಂತರದ ರಾತ್ರಿಗಳಲ್ಲಿ, ತಡರಾತ್ರಿವರೆಗೆ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಪಾರ್ಟಿಗಳಲ್ಲಿ ಮದ್ಯ, ಮಾನಿನಿಯರ ಜೊತೆ ಪೋಸ್ ನೀಡುತ್ತಿದ್ದರು. ಆದರೆ, ಟ್ರಾ್ಯಕ್​ಗೆ ಕಾಲಿಟ್ಟೊಡನೆ ಬಾಹ್ಯ ಜಗತ್ತಿನ ಕೊಂಡಿ ಕಳಚಿಕೊಂಡು ಸೂಪರ್​ವ್ಯಾನ್ ಆಗುತ್ತಿದ್ದರು. ಜೊತೆಗೆ ಓರ್ವ ಅಥ್ಲೀಟ್ ಆಗಿ ಯಾವ ಆಹಾರ, ಔಷಧ, ಸಂಗತಿ ನಿಷಿದ್ಧ ಎಂಬ ವ್ಯತ್ಯಾಸವನ್ನು ತಿಳಿದುಕೊಂಡು, ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಅವರು ಯಾವತ್ತೂ ಕಳಂಕಿತ ಅಥ್ಲೀಟ್​ಗಳ ಸಾಲಿಗೆ ಸೇರಲಿಲ್ಲ. ಜೊತೆಗೆ ದೈವದತ್ತ ವೇಗ ಅವರ ದೇಹದಲ್ಲಿದ್ದ ಕಾರಣ, ಅಪ್ರಾಮಾಣಿಕರಾಗುವ ಅಗತ್ಯವೂ ಅವರಿಗಿರಲಿಲ್ಲ.

ಬೋಲ್ಟ್ 12 ವರ್ಷದ ಹುಡುಗನಿದ್ದಾಗ ಗೆಳೆಯ ರಿಕಾರ್ಡೆ ಜೆಡೆಸ್ ಜತೆ ತಮ್ಮಿಬ್ಬರಲ್ಲಿ ವೇಗದ ಓಟಗಾರ ಯಾರೆಂಬ ಬಗ್ಗೆ ಪಂಥ ಕಟ್ಟಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಪಾದ್ರಿ ರೆ. ನಗೆಂಟ್ ಗೆದ್ದವರಿಗೆ ಊಟ ಕೊಡಿಸುವುದಾಗಿ ಹುರಿದುಂಬಿಸಿದ್ದರು. ಆ ದಿನ ಗೆದ್ದಿದ್ದು ಬೋಲ್ಟ್. ‘ರಿಕಾರ್ಡೆ ವಿರುದ್ಧ ಗೆದ್ದಿರುವ ನೀನು ಯಾರನ್ನು ಬೇಕಾದರೂ ಸೋಲಿಸಬಲ್ಲೆ’ ಎಂದು ಅಂದು ಪಾದ್ರಿ ಹೇಳಿದ್ದ ಮಾತು ಬೋಲ್ಟ್​ಗೆ ಪ್ರೇರಣೆ ತುಂಬಿತ್ತು.

ಬೋಲ್ಟ್ ಅಥ್ಲೀಟ್ ಆಗದಿದ್ದರೆ, ಬಹುಶಃ ಕ್ರಿಕೆಟ್ ಆಟಗಾರ ಆಗಿರುತ್ತಿದ್ದರೋ ಏನೋ. ಅಷ್ಟೇ ಅಲ್ಲ, ಫುಟ್​ಬಾಲ್, ಬೇಸ್​ಬಾಲ್​ನಲ್ಲೂ ಅವರು ನಿಪುಣರು. ನಿವೃತ್ತನಾದ ಮೇಲೆ ಅವಕಾಶ ಸಿಕ್ಕಿದರೆ ಮ್ಯಾಂಚೆಸ್ಟರ್ ಯುನೈಟೆಡ್ ಪರ ಫುಟ್​ಬಾಲ್ ಆಡುವುದು ನನ್ನ ಬಯಕೆ. ವಿಶ್ವ ಶ್ರೇಷ್ಠ ಅಲ್ಲದಿದ್ದರೂ, ಕನಿಷ್ಠ ವೇಯ್್ನ ರೂನಿ ಮಟ್ಟದ ಫುಟ್​ಬಾಲ್ ಆಡಬಲ್ಲೆ ಎಂದು ಹಿಂದೊಮ್ಮೆ ಬೋಲ್ಟ್ ಹೇಳಿದ್ದರು. ಮೊನ್ನೆ ವಿಶ್ವ ಚಾಂಪಿಯನ್​ಷಿಪ್ ಸಂದರ್ಭದಲ್ಲಿ ಗಾಯಗೊಂಡಿರುವ ಬೋಲ್ಟ್ ಶೀಘ್ರ ಚೇತರಿಸಿಕೊಂಡಲ್ಲಿ, ಸೆಪ್ಟೆಂಬರ್​ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ಪ್ರದರ್ಶನ ಪಂದ್ಯವೊಂದರಲ್ಲಿ ಫುಟ್​ಬಾಲ್ ಆಡಲಿದ್ದಾರೆ.

ಇನ್ನು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಬೋಲ್ಟ್, ಸಚಿನ್ ತೆಂಡುಲ್ಕರ್ ಅಭಿಮಾನಿ. ಬಾಲ್ಯದಲ್ಲಿ ವೇಗದ ಬೌಲರ್ ಆಗುವ ಕನಸು ಕಂಡಿದ್ದ ಅವರು ಪ್ರದರ್ಶನ ಪಂದ್ಯವೊಂದರಲ್ಲಿ ಕ್ರಿಸ್ ಗೇಲ್​ರನ್ನೇ ಬೌಲ್ಡ್ ಮಾಡಿದ್ದರು. ಅದೇ ಪಂದ್ಯದಲ್ಲಿ ಗೇಲ್ ಎಸೆತದಲ್ಲಿ ಸಿಕ್ಸರ್ ಸಹ ಬಾರಿಸಿದ್ದರು. ಬೆಂಗಳೂರಿನಲ್ಲೊಂದು ಪ್ರದರ್ಶನ ಪಂದ್ಯ ನಡೆದ ಸಂದರ್ಭದಲ್ಲಿ ಯುವರಾಜ್ ಸಿಂಗ್ ಬೌಲಿಂಗ್​ನಲ್ಲಿ ಬೋಲ್ಟ್ ಸಿಕ್ಸರ್ ಬಾರಿಸಿದ್ದು ದಾಖಲೆ.

ಓಟಗಾರನಾಗಿ ಜೀವನದಲ್ಲಿ ಏನೆಲ್ಲ ಗಳಿಸಬಹುದೋ ಅಷ್ಟನ್ನೂ ಸಂಪಾದಿಸಿರುವ ಬೋಲ್ಟ್, ಸಮಾಜಜೀವಿಯೂ ಹೌದು. ಉಸೇನ್ ಬೋಲ್ಟ್ ಫೌಂಡೇಷನ್ ಮೂಲಕ ತಮ್ಮ ದೇಶದಲ್ಲಿ ಯುವಕರಿಗೆ ಕ್ರೀಡಾಕ್ಷೇತ್ರದಲ್ಲಿ ಬೆಳೆಯುವುದಕ್ಕೆ ವಿವಿಧ ರೂಪದಲ್ಲಿ ಉತ್ತೇಜನ ನೀಡುತ್ತಿದ್ದಾರೆ. ದೀರ್ಘಕಾಲದಿಂದ ಬೋಲ್ಟ್ ಜತೆ ಪ್ರಾಯೋಜಕತ್ವ ಒಪ್ಪಂದ ಹೊಂದಿರುವ ಕ್ರೀಡಾ ಪರಿಕರಗಳ ಸಂಸ್ಥೆ ಪೂಮಾ, ಬೋಲ್ಟ್ ಓದಿದ್ದ ವಿಲಿಯಂ ನಿಬ್ ಸ್ಮಾರಕ ಹೈಸ್ಕೂಲ್​ನ ಮಕ್ಕಳಿಗೆ ಪ್ರತೀ ವರ್ಷ ಉಚಿತ ಶೂ ಮತ್ತಿತರ ಕ್ರೀಡಾ ಪರಿಕರ ಒದಗಿಸುತ್ತಿದೆ. ಬೋಲ್ಟ್ ಪ್ರಚಾರ ರಾಯಭಾರಿ ಆಗಿರುವ ಬಹುತೇಕ ಎಲ್ಲ ಕಂಪೆನಿಗಳ ಜಾಹೀರಾತು ಚಿತ್ರೀಕರಣವೂ ಜಮೈಕಾದಲ್ಲೇ ನಡೆಯುತ್ತದೆ. ಈ ಎಲ್ಲದರ ಮೂಲಕವೂ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ, ಅನುಕೂಲವಾಗುವಂತೆ ಬೋಲ್ಟ್ ಗಮನ ವಹಿಸಿರುತ್ತಾರೆ.

ಬೋಲ್ಟ್ ಎಂದೊಡನೆ ಅವರ ವೇಗದ ದಾಖಲೆಗಳು ನೆನಪಾಗುತ್ತವೆ. 100 ಮೀ. ಓಟವನ್ನು 9.58 ಸೆ., 9.63 ಸೆ., 9.69 ಸೆ.ಗಳಲ್ಲಿ ಕ್ರಮಿಸಿ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡಿದ್ದು ನೆನಪಾಗುತ್ತದೆ. 100 ಮೀ.ಗಳನ್ನು 9.58 ಸೆಕೆಂಡ್​ನಲ್ಲಿ ಕ್ರಮಿಸಿದ್ದು ಅತಿಮಾನುಷ ಸಾಧನೆ ಎನ್ನುವುದು ಎಲ್ಲರ ಭಾವನೆ. ಆದರೆ, ಸ್ವತಃ ಬೋಲ್ಟ್ 9 ಸೆಕೆಂಡ್​ಗೂ ಕಡಿಮೆ ಅವಧಿಯಲ್ಲಿ ಒಮ್ಮೆ 100ಮೀ. ಓಡಿರುವುದೂ ವಾಸ್ತವ. ಲಂಡನ್ ಒಲಿಂಪಿಕ್ಸ್​ನ 4/100 ಮೀ. ರಿಲೆಯಲ್ಲಿ ಬೋಲ್ಟ್ 4ನೇ ಹಾಗೂ ಕೊನೆಯ ಚರಣದ 100 ಮೀ.ಗಳನ್ನು ಕೇವಲ 8.70 ಸೆಕೆಂಡ್​ಗಳಲ್ಲೇ ಕ್ರಮಿಸಿದ್ದರು. ಇದು ಯಾರೂ ಅಳಿಸಲಾಗದ ದಾಖಲೆ!

ವೃತ್ತಿಜೀವನದುದ್ದಕ್ಕೂ ಗೆಲುವನ್ನೇ ಕಂಡ ಬೋಲ್ಟ್, ವಿದಾಯದಲ್ಲಿ ಮಾತ್ರ ಗೆಲ್ಲಲಿಲ್ಲ ಎಂಬ ನೋವು ಮಾತ್ರ ಅವರಲ್ಲೂ, ಅಭಿಮಾನಿಗಳಲ್ಲೂ ಇರುವುದು ನಿಶ್ಚಿತ. ಅವರು ತಮ್ಮ ಕೊಟ್ಟಕೊನೆಯ ರಿಲೆ ಓಟವನ್ನು ಪೂರ್ಣಗೊಳಿಸಲೂ ವಿಫಲರಾದರು. ಕಾರಣ ಸ್ನಾಯುಸೆಳೆತ. ಬೋಲ್ಟ್​ರ ಈ ವಿಷಾದ ವಿದಾಯಕ್ಕೆ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಕಾರಣವೇ ಎಂಬ ಜಿಜ್ಞಾಸೆಯೂ ಇದೆ. ಬೋಲ್ಟ್​ರ ಕೊನೆಯ ಓಟ 4/100 ಮೀ. ರಿಲೆಗಿಂತ ಮುನ್ನ ನಿಗದಿಯಾಗಿದ್ದ 5000 ಮೀ. ಓಟ ಇಂಗ್ಲೆಂಡ್​ನ ಜನಪ್ರಿಯ ಅಥ್ಲೀಟ್ ಮೋ ಫರಾಹ್ ಪಾಲಿಗೂ ಕೊನೆಯದಾಗಿತ್ತು. ಹಾಗಾಗಿ ಓಟ ಮುಗಿದ ಮೇಲೆ ಸುಮಾರು ಮುಕ್ಕಾಲುಗಂಟೆ ಮೋ ಫರಾಹ್ ಬೀಳ್ಕೊಡುಗೆ ಸಮಾರಂಭವೇ ನಡೆದಿತ್ತು. ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯ ಈ ಸಮಾರಂಭದಿಂದಾಗಿ ರಿಲೇ ಓಟ ವಿಳಂಬವಾಯಿತು. ಅಷ್ಟೂ ಹೊತ್ತು ಬೋಲ್ಟ್ ಟ್ರಾ್ಯಕ್​ನಲ್ಲಿ ಕಾಯಬೇಕಾಗಿ ಬಂತು. ಈ ಅಸಹನೆ, ಆಯಾಸ ಅವರ ಕೊನೆಯ ಓಟವನ್ನು ಮಂಕಾಗಿಸಿತು ಎನ್ನುವ ಅಭಿಪ್ರಾಯವೂ ಇದೆ. ಅದೇನೇ ಇರಲಿ. ಬೋಲ್ಟ್ ವಿಶ್ವ ಶ್ರೇಷ್ಠ ಎನ್ನುವುದು 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್​ನಲ್ಲೇ ಸಾಬೀತಾಗಿತ್ತು. ಆನಂತರ ಸಾಧಿಸಿದ್ದೆಲ್ಲವೂ ಅವರ ಪಾರಮ್ಯದ ವಿಸ್ತರಣೆಯಷ್ಟೇ. ಹಾಗಾಗಿ, ಕೊನೆಯ ಓಟದಲ್ಲಿ ಸೋತರೂ ಅದರಿಂದ ವ್ಯತ್ಯಾಸವೇನೂ ಆಗದು. ಟ್ರ್ಯಾಕ್​ನಲ್ಲಿ ಇನ್ನು ಮುಂದೆ ಅವರು ಓಡುವುದಿಲ್ಲ ಎಂಬ ಬೇಜಾರೊಂದನ್ನು ಬಿಟ್ಟರೆ, ಬೋಲ್ಟ್ ಗೆಲುವಿನ ಓಟಕ್ಕೆ ಕೊನೆಯೆಂಬುದಿಲ್ಲ. ಓರ್ವ ಕ್ರೀಡಾಪಟುವಾಗಿ, ಹೋಟೆಲ್ ಉದ್ಯಮಿಯಾಗಿ, ಸಮಾಜ ಜೀವಿಯಾಗಿ, ಒಳ್ಳೆಯ ವ್ಯಕ್ತಿಯಾಗಿ ಅವರ ಬದುಕಿನ ಓಟ ನಿರಂತರ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top