Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಮಹಿಳಾ ಮೇಲ್ಪಂಕ್ತಿ

Saturday, 04.11.2017, 3:03 AM       No Comments

ಫೋರ್ಬ್ಸ್ ಪತ್ರಿಕೆ ಪ್ರಕಟಿಸಿರುವ 2017ರ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಐವರು ಮಹಿಳೆಯರು ಸ್ಥಾನ ಗಿಟ್ಟಿಸಿದ್ದಾರೆ. ಐಸಿಐಸಿಐ ಬ್ಯಾಂಕ್​ನ ಚಂದಾ ಕೊಚಾರ್, ಎಚ್​ಸಿಎಲ್ ಎಂಟರ್​ಪ್ರೖೆಸಸ್​ನ ರೋಶ್ನಿ ನಾಡಾರ್ ಮಲ್ಹೋತ್ರ, ಬಯೋಕಾನ್​ನ ಕಿರಣ್ ಮಜುಂದಾರ್ ಷಾ, ಎಚ್​ಟಿ ಮೀಡಿಯಾ ಲಿಮಿಟೆಡ್​ನ ಶೋಭನಾ ಭಾರ್ತಿಯ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ಆ ಐವರು ಪ್ರಭಾವಿಗಳೆನಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಸರಿ.

ದೇಶದ ಮೊಟ್ಟಮೊದಲ ಪೂರ್ಣಕಾಲಿಕ ಮಹಿಳಾ ರಕ್ಷಣಾ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿರ್ಮಲಾ ಸೀತಾರಾಮನ್ ಮತ್ತು ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಮ್ಮೆಗೆ ಪಾತ್ರರಾಗಿರುವ ನೀಲಮಣಿ ಎಸ್. ರಾಜು ಇಂಥ ಮತ್ತೆರಡು ಸಂಭ್ರಮ-ಸಡಗರಗಳಿಗೆ ನಿದರ್ಶನಗಳೆನ್ನಬಹುದು. ಒಂದು ಕಾಲಕ್ಕೆ ಅಡುಗೆ ಮನೆ ಕೆಲಸ, ಮಕ್ಕಳನ್ನು ನೋಡಿಕೊಳ್ಳುವಂಥ ಗೃಹಕೃತ್ಯಗಳಿಗಷ್ಟೇ ಸೀಮಿತಳಾಗಿದ್ದ ಮಹಿಳೆಯು ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ, ಅದರಲ್ಲೂ ವಿಶೇಷವಾಗಿ ಮಹಿಳೆ ಕಾರ್ಯನಿರ್ವಹಿಸುವುದೇ ದುಸ್ತರ ಎಂಬಂಥ ವಲಯಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದರ ಜತೆಜತೆಗೆ, ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಮೆರೆಯುತ್ತಿದ್ದಾಳೆ ಎಂಬುದಕ್ಕೆ ಇಂಥ ನಿದರ್ಶನಗಳು ಪುಷ್ಟಿ ನೀಡುತ್ತವೆ. ಆತ್ಮವಿಶ್ವಾಸ, ಹುರುಪು, ಆಸಕ್ತಿಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಹಿಳಾ ವಲಯಕ್ಕೆ ಮೇಲ್ಪಂಕ್ತಿಯಾಗುವಂಥ ವಿದ್ಯಮಾನಗಳಿವು ಎಂದರೂ ಅತಿಶಯೋಕ್ತಿಯಲ್ಲ.

ಯಾವುದೇ ಸ್ಥಾನಮಾನ ಅಥವಾ ಮಹತ್ವದ ಹುದ್ದೆಯು ಸುಖಾಸುಮ್ಮನೆ ಒದಗಿ ಬರುವಂಥದ್ದಲ್ಲ. ಅಂಥ ಹುದ್ದೆಗೆ ಅಗತ್ಯವಾದ ಶಿಸ್ತು, ಬದ್ಧತೆ, ಕಾರ್ಯದಕ್ಷತೆ, ಇಚ್ಛಾಶಕ್ತಿಗಳನ್ನು ಹೊಂದಿರಬೇಕಾದ್ದು ಎಷ್ಟು ಮುಖ್ಯವೋ, ಇಂಥವರಿಗೆ ಮಹತ್ವದ ಸ್ಥಾನಮಾನಗಳನ್ನು ಹೊಂದುವಂತಾಗುವುದಕ್ಕೆ ಅವಕಾಶ ಒದಗಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ಹೀಗೆ ದಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಒದಗಿಸಿದಲ್ಲಿ, ಅದು ತರುವಾಯದ ಪೀಳಿಗೆಯವರಿಗೆ ಸ್ಪೂರ್ತಿದಾಯಕ ಮೇಲ್ಪಂಕ್ತಿಯಾಗುತ್ತದೆ. ‘ಯಶಸ್ಸಿನ ಹಿಂದೆ ಓಡುವುದಕ್ಕಿಂತ ಶಕ್ತಿ-ಸಾಮರ್ಥ್ಯ-ಅರ್ಹತೆಗಳನ್ನು ರೂಢಿಸಿಕೊಂಡರೆ ಯಶಸ್ಸು ತನ್ನಿಂತಾನೇ ಹಿಂಬಾಲಿಸುತ್ತದೆ’ ಎಂಬುದು ಜನಪ್ರಿಯ ಹಿಂದಿ ಚಲನಚಿತ್ರವೊಂದರ ಸಂಭಾಷಣೆ. ಫೋರ್ಬ್ಸ್

ಪತ್ರಿಕೆಯ 2017ರ ವಿಶ್ವದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲೀಗ ಸ್ಥಾನ ಗಿಟ್ಟಿಸಿರುವ ಐದೂ ವನಿತೆಯರು ಈ ಮಾತಿಗೆ ಅನುಗುಣವಾಗಿ ದಣಿವರಿಯದೆ ದುಡಿದವರು, ತಂತಮ್ಮ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದವರು. ಅವಕಾಶ ಸಿಕ್ಕರೆ ತಾನು ಯಾವ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಮಾಡಬಲ್ಲೆ, ದೇಶಕ್ಕೆ ಕೀರ್ತಿ ತರಬಲ್ಲೆ ಎಂಬ ಛಲವಿರುವ ಹೆಣ್ಣುಜೀವಗಳಿಗೆ ನಮ್ಮಲ್ಲೇನೂ ಕಮ್ಮಿಯಿಲ್ಲ. ಆದರೆ ಭ್ರೂಣದ ಹಂತದಲ್ಲಿರುವಾಗಲೇ ಹೆಣ್ಣುಶಿಶುವಿನ ಕತ್ತುಹಿಸುಕಲು ಮುಂದಾಗುವವರಿಂದ ಮೊದಲ್ಗೊಂಡು, ‘ಹೆಣ್ಣಲ್ಲವೇ… ಏನು ತಾನೆ ಮಾಡಿಯಾಳು?!’ ಎಂಬ ತಾತ್ಸಾರ ಮನೋಭಾವ ಇರುವವರ ದೆಸೆಯಿಂದಾಗಿ, ಅವಧಿಗೆ ಮುನ್ನವೇ ಮಹತ್ವಾಕಾಂಕ್ಷೆಯು ಮುರುಟಿಹೋಗುವಂತಾಗುವ ವಿಪರ್ಯಾಸವನ್ನೂ ಕಾಣುತ್ತಿದ್ದೇವೆ. ಇದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ‘ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ’ ಎಂಬ ಮಾತು ಎಷ್ಟು ಸತ್ಯವೋ, ಅವಳಿಗೆ ಹೊಣೆಗಾರಿಕೆಯ ಹುದ್ದೆಗಳು ದೊರೆಯುವಂತಾದಲ್ಲಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವುದಕ್ಕೂ ಸಾಧ್ಯವಿದೆ ಎಂಬುದೂ ಅಷ್ಟೇ ಸತ್ಯ.

Leave a Reply

Your email address will not be published. Required fields are marked *

Back To Top