ನವದೆಹಲಿ: ರಾಷ್ಟ್ರಪತಿ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಲು ತಯಾರಿ ನಡೆಸಿವೆ. ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಅವರು ಬಿಎಸ್ಪಿ ನಾಯಕಿ ಮಾಯಾವತಿಗೆ ಕರೆ ಮಾಡಿ ಪಟನಾದಲ್ಲಿ ಮೇ 27ರಂದು ನಡೆಯಲಿರುವ ರ್ಯಾಲಿಯಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿನ ಅಭೂತಪೂರ್ವ ಯಶಸ್ಸಿನ ನಂತರ ರಾಷ್ಟ್ರಪತಿ ಚುನಾವಣೆಯಲ್ಲಿ ಮತಮೌಲ್ಯ ಹೆಚ್ಚಿಸಿಕೊಂಡಿರುವ ಬಿಜೆಪಿ ಎದುರಿಸಲು ಎಲ್ಲ ವಿಪಕ್ಷಗಳು ಒಟ್ಟಾಗಿ ಯೋಜನೆ ರೂಪಿಸುತ್ತಿವೆ. ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸೋನಿಯಾ ಗಾಂಧಿ ಭೇಟಿ ಮಾಡಿ ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸಂಬಂಧ ರ್ಚಚಿಸಲು ಕಾಂಗ್ರೆಸ್, ಜೆಡಿಯು, ಬಿಎಸ್ಪಿ, ಆರ್ಜೆಡಿ, ಎನ್ಸಿಪಿ, ಎಸ್ಪಿ, ಸಿಪಿಎಂ ಮತ್ತಿತರರ ವಿಪಕ್ಷಗಳ ನಾಯಕರು ಸಭೆ ಸೇರುವ ಸಾಧ್ಯತೆಯಿದೆ. ಈಗಾಗಲೇ ಜೆಡಿಯು ನಾಯಕ ಕೆ.ಸಿ. ತ್ಯಾಗಿ, ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಹಾಗೂ ಆರ್ಜೆಡಿಯ ಶರದ್ ಯಾದವ್ ಅವರು ಸೋನಿಯಾರನ್ನು ಭೇಟಿ ಮಾಡಿ ರ್ಚಚಿಸಿದ್ದಾರೆ.
‘ಮೇಡಂ ನೀವೇ ನಿರ್ಧರಿಸಿ’
ಲಾಲು ಪ್ರಸಾದ್ ಯಾದವ್ ಹಾಗೂ ಸೋನಿಯಾ ಗಾಂಧಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ನೀವು ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೀರೋ, ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಲಾಲು ತಿಳಿಸಿದ್ದಾರೆ ಎನ್ನಲಾಗಿದೆ. ಅನಾರೋಗ್ಯ ಕಾರಣದಿಂದಾಗಿ ಮೇ 27ರ ರ್ಯಾಲಿಗೆ ತಾವು ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಲಾಲುಗೆ ಸೋನಿಯಾ ಗಾಂಧಿ ತಿಳಿಸಿದ್ದಾರೆ ಎನ್ನಲಾಗಿದೆ.