Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಮಹಾಭಾರತದ ಕತೆಯನ್ನು ಕುಂತಿ ಹೇಳಿದರೆ ಹೇಗೆ?

Sunday, 30.07.2017, 3:00 AM       No Comments

ಇವಳು ಕುಂತಿ! ದೊರೆಯ ಮಗಳಾಗಿ ಹುಟ್ಟಿ, ದೊರೆಯ ಕೈಹಿಡಿದು, ಮೂಲೋಕಶೂರರಾದ ಮಕ್ಕಳನ್ನು ಹೆತ್ತರೂ ಬವಣೆ ತಪ್ಪಲಿಲ್ಲ. ಪಾಪ! ಬದುಕಿನುದ್ದಕ್ಕೂ ಪಡಬಾರದ ಪಾಡುಪಟ್ಟು, ತನ್ನ ಕಣ್ಣೀರನ್ನು ತಾನೇ ಕುಡಿದು, ಅನ್ಯಾಯ-ಅವಮಾನಗಳನ್ನೆಲ್ಲಾ ಅವಡುಗಚ್ಚಿ ಸಹಿಸಿಕೊಂಡು ಬಾಳು ಸೀಸಿದ ಹೆಣ್ಣುಜೀವ. ಇವಳನ್ನು ಕುಂತ್ಯವ್ವ, ಕುಂತಮ್ಮ, ಕೊಂತಿ, ಕೊಂತಿದೇವಿ- ಅಂತ ತಂತಮ್ಮ ನಾಲಿಗೆಗೆ ಒದಗಿದಂತೆ ಕರೆದು ‘ಹೆಣ್ಣುಮಕ್ಕಳ ಭಂಗ-ಬವಣೆ, ಕಷ್ಟ-ಕೋಟಲೆಗಳೆಲ್ಲಾ ನಿನಗೇ ಕೊನೆಯಾಗಲವ್ವ; ನಿನ್ನ ವನವಾಸ, ನೀ ಪಟ್ಟ ಪಾಡು ನಿನ್ನ ಕರುಳಿನ ಕುಲಕ್ಕೆ ಮತ್ತೆ ಬರದಿರಲಿ’ ಅಂತ ಪ್ರಾರ್ಥಿಸುತ್ತಾರೆ ನಮ್ಮ ಕಡೆ ಹಳ್ಳಿಯ ಹೆಣ್ಣುಮಕ್ಕಳು. ‘ಅವ್ವಾ, ನೀನು ಒಳ್ಳೆಯ ಮಗಳು, ಒಳ್ಳೆಯ ಮಡದಿ, ಒಳ್ಳೆಯ ಮಕ್ಕಳನ್ನು ಪಡೆದ ಒಳ್ಳೆಯ ತಾಯಿ. ತಣ್ಣೀರು ತನುವಾಯಿತೋ ನಿನ್ನ ಪೂಜೆಗೆ ತಾವರೆ ಕೊಳವಾಯಿತೋ, ಅಚ್ಚಚ್ಚ ಬೆಳದಿಂಗಳೋ ನಿನ ಪೂಜೆಗೆ ನಿಚ್ಚ ವೈಭೋಗವೋ’ ಅಂತೆಲ್ಲಾ ಹಾಡುಕಟ್ಟಿ ಹಾಡಿ, ಕಾರ್ತೀಕ ಮಾಸದಲ್ಲಿ ಕೂರಿಸಿ ಪೂಜೆಮಾಡಿ ಹುಚ್ಚೆಳ್ಳುಹೂವಿನ ವನಕ್ಕೆ ಕಳುಹಿಸಿಕೊಡುತ್ತಾರೆ.

ಈ ಕುಂತಿಯ ಕತೆಯನ್ನು ನಾವೂ ಓದಿದ್ದೇವೆ. ನಾಟಕ, ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ನೋಡಿದ್ದೇವೆ. ಆದರೆ ಎಲ್ಲೂ ಈ ಚೆಲುವಾಂತ ಚೆಲುವೆ ಹೆಣ್ಣುಮಗಳು ತಲೆತುಂಬಾ ಹೂಮುಡಿದುಕೊಂಡು, ಮೊಕ ತುಂಬಾ ನಗು ತುಂಬಿಕೊಂಡು, ಉಟ್ಟ ಲಂಗದ ನೆರಿಗೆ ಚಿಮ್ಮಿಕೊಂಡು ಓಡಾಡಿದ್ದನ್ನು, ನಲಿದಾಡಿದ್ದನ್ನು ನಾವು ನೋಡಲೇ ಇಲ್ಲ. ಅಷ್ಟು ದೊಡ್ಡ ಮಹಾಭಾರತ ಬರೆದ ವ್ಯಾಸಮುನಿಗಳಿಗೂ, ಪಂಪ-ರನ್ನ-ಕುಮಾರವ್ಯಾಸಾದಿಗಳಿಗೂ ಈ ಬಿನ್ನಾಣಗಿತ್ತಿಯ ಚೆಂದ-ಚೆಲುವುಗಳನ್ನು ಚಿತ್ರಿಸಲು ತಾವೇ ಸಿಗಲಿಲ್ಲ. ನಾವು ಕಂಡ ಕುಂತಿ, ಅಪ್ಪ ಕುಂತಿಭೋಜ ಹೇಳಿದ ಅಂತ ಚಿಕ್ಕಂದಿನಲ್ಲೇ ದೊಡ್ಡ ಜವಾಬ್ದಾರಿ ಹೊತ್ತುಕೊಂಡು ದೂರ್ವಾಸನಂಥ ಕೋಪಿಷ್ಟ ಋಷಿಯ ಸೇವೆಗೆ ನಿಂತ ಪಾಪದ ಹುಡುಗಿ! ಆ ದೂರ್ವಾಸಮುನಿ ಕೊಟ್ಟ ಸಂತಾನದ ವರವನ್ನು ಪರೀಕ್ಷಿಸಲು ಹೋಗಿ ಕನ್ಯೆಯಾಗಿದ್ದಾಗಲೇ ಕರ್ಣನನ್ನು ಹೆತ್ತ ಅರಿವುಗೇಡಿ ಹುಡುಗಿ! ಹೆತ್ತ ಕಂದಮ್ಮನನ್ನು ‘ಇದು ನನ್ನ ಮಗು’ ಅಂತ ಹೇಳಿಕೊಳ್ಳಲಾಗದೆ ಲೋಕಾಪವಾದಕ್ಕೆ ಹೆದರಿ, ಗಂಗೆಯಲ್ಲಿ ತೇಲಿಬಿಟ್ಟು ಆ ಪಾಪಪ್ರಜ್ಞೆಯಿಂದ ಬದುಕಿನುದ್ದಕ್ಕೂ ನರಳಿದ ನತದೃಷ್ಟ ಹುಡುಗಿ! ದೊಡ್ಡ ಮನೆತನದ ದೊರೆಯ ಕೈಹಿಡಿದು ಹಸ್ತಿನಾವತಿ ಅರಮನೆಯ ಹೊಸಿಲು ಮೆಟ್ಟಿಬಂದ ಸೊಸೆಯಾದರೂ, ಸವತಿ ಮಾದ್ರಿಯೊಂದಿಗೆ ತನ್ನ ಸತೀತ್ವವನ್ನು ಹಂಚಿಕೊಂಡು ಬದುಕಬೇಕಾದ ಅಸಹಾಯಕ ಹುಡುಗಿ! ಕಿಂದಮ ಋಷಿಯ ಶಾಪಕ್ಕೆ ಗುರಿಯಾದ ಗಂಡ ಪಾಂಡುವಿನ ದೇಹಸ್ಪರ್ಶವನ್ನೂ ಮಾಡದೆ ಅನಿವಾರ್ಯವಾಗಿ ಬದುಕು ದೂಡುತ್ತಿರುವಾಗಲೂ ಸವತಿ ಮಾದ್ರಿಯ ಹುಡುಗಾಟದಿಂದ, ಗಂಡ ಪಾಂಡುವಿನ ಬೇಜವಾಬ್ದಾರಿಯಿಂದ ಹರೆಯದಲ್ಲೇ ವೈಧವ್ಯವನ್ನು ಹೊತ್ತುಕೊಂಡು ಒದ್ದಾಡಿದ ಅದೃಷ್ಟಹೀನೆ! ದೇವತೆಗಳ ಪೌರುಷಾಂಶದಿಂದ ತ್ರೖೆಲೋಕ್ಯವೀರರೂ ಧೀರರೂ ಆದ ಮಕ್ಕಳನ್ನು ಪಡೆದೂ, ಕುರು-ಪಾಂಡವರ ದಾಯಾದಿ ಮತ್ಸರದ ಬೆಂಕಿಯಿಂದ ತನ್ನ ಬಾಳಿನ ಸುಖವನ್ನೇ ಸುಟ್ಟುಕೊಂಡ ನಿರ್ಭಾಗ್ಯೆ! ತನ್ನೈದು ಮಕ್ಕಳ ಹಿತಕ್ಕಾಗಿ ಮತ್ತೊಬ್ಬ ಹೊಟ್ಟೆಯ ಮಗನಿಂದಲೇ ‘ತೊಟ್ಟ ಬಾಣ ತೊಡುವುದಿಲ್ಲ’ ಎಂಬ ವಾಗ್ದಾನ ಪಡೆದು ಆ ಮಗನನ್ನೇ ಬಲಿತೆಗೆದುಕೊಂಡ ‘ಕಠೋರ’ಹೃದಯಿ!

ಪಾಪ ಕುಂತಿ!

ನಾವು ಓದಿದ್ದು, ನೋಡಿದ್ದು ಎಲ್ಲಾ ಗಂಡಸರು ಹೇಳಿದ ಮಹಾಭಾರತದ ಕತೆ. ಗಂಡಸಿಗೆ ಗಂಡಿನದೇ ಒಂದು ದೃಷ್ಟಿಯಿರುತ್ತದೆ. ಮಹಾಭಾರತವನ್ನು ಹೇಳಿದ ಗಂಡಸರಿಗೆ ಎಷ್ಟೇ ಆದರೂ ಹೆಣ್ಣಿನ ಕಣ್ಣು, ಕರುಳು ಇರುವುದು ಸಾಧ್ಯವಿಲ್ಲ. ನಾವು ಕೇಳಿರುವ ಮಹಾಭಾರತದ ಕತೆಯನ್ನು ಕುಂತಿಯೂ ಹೇಳಿದರೆ? ಗಾಂಧಾರಿ ಹೇಳಿದರೆ? ದ್ರೌಪದಿ ಹೇಳಿದರೆ? ಸುಭದ್ರೆ ಹೇಳಿದರೆ?- ಅವರು ಹೇಳುವ ಕತೆ ಬೇರೆಯೇ ಇದ್ದೀತು.

ಅಂಥದೊಂದು ಚಂದದ ಮಹಾಭಾರತ ಓದಿದೆ ಮೊನ್ನೆ- ಒಂದು ಕಾದಂಬರಿಯ ರೂಪದಲ್ಲಿ. ಅದರ ಹೆಸರು- ಪೃಥೆ ತೆರೆದ ಪುಟಗಳು. ಬರೆದವರೂ ಓರ್ವ ಹೆಣ್ಣುಮಗಳೇ- ವಿಜಯಾ ಚಂದ್ರಮೌಳೇಶ್ವರ.

ವಿಜಯಾ ಚಂದ್ರಮೌಳೇಶ್ವರ ಕನ್ನಡ ಸಾಹಿತ್ಯಧಾರೆಯಲ್ಲಿ ಅಷ್ಟೇನೂ ಪ್ರಸಿದ್ಧಿ ಪಡೆಯದ ಓರ್ವ ಲೇಖಕಿ. ಬಹುಕಾಲ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಬೇರೆಬೇರೆ ಕಾಲೇಜುಗಳಲ್ಲಿ ಬೇರೆಬೇರೆ ಮಕ್ಕಳಿಗೆ ಪಾಠ ಹೇಳಿ ನಿವೃತ್ತರಾಗಿ ಈಗ ನಮ್ಮ ಮೈಸೂರಿನಲ್ಲೇ ಇದ್ದಾರೆ. ಕತೆ, ಕಾದಂಬರಿ, ಶಿಶುಸಾಹಿತ್ಯ, ನಾಟಕ, ಕಾವ್ಯ, ವಿಚಾರಾತ್ಮಕ ಲೇಖನಗಳು- ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಗಂಭೀರವಾದ, ಮೌಲಿಕವಾದ ಕೃಷಿ ಮಾಡಿದ್ದಾರೆ. ಬೇರು ಮುರಿದ ಮರ, ಪ್ರೇಮಗಂಗೆ, ಹೃದಯನಾದ, ಮುಗಿಲಹಕ್ಕಿ ಮಿನುಗುಚುಕ್ಕಿ, ಮಂಜು ಮುಸುಕಿದ ಸಂಜೆ, ಪೃಥೆ ತೆರೆದ ಪುಟಗಳು ಮುಂತಾದ ಕಾದಂಬರಿಗಳು, ರಜೆ ತಂದ ಮಜ ಎಂಬ ಶಿಶುಸಾಹಿತ್ಯ ಕೃತಿಗಳಲ್ಲದೆ ಖಜಛಿ ಘಛಿಡಿ ಏಟ್ಟಜ್ಢಿಟ್ಞ’ ಎಂಬ ಇಂಗ್ಲಿಷ್ ಕಾದಂಬರಿಯನ್ನೂ, ’ಈಟಟಠ fಟಞ ಠಿಜಛಿ ್ಕಜ್ಞಿಚಿಟಡಿ’ ಎಂಬ ಇಂಗ್ಲಿಷ್ ಕವನಸಂಕಲನವನ್ನೂ ಪ್ರಕಟಿಸಿದ್ದಾರೆ. ಅತ್ತಿಮಬ್ಬೆ, ಗೊರೂರು ಮತ್ತು ಸಾವಿತ್ರಮ್ಮ ದೇಜಗೌ ಪ್ರತಿಷ್ಠಾನಗಳ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೆಲ್ಲಾ ಇರಲಿ.

ಕೆಲವು ದಿನಗಳ ಹಿಂದೆ ನನಗೆ ಪ್ರಾಸಂಗಿಕವಾಗಿ ಪರಿಚಯವಾದ ವಿಜಯಾ ಚಂದ್ರಮೌಳೇಶ್ವರ ಇದೀಗ ವೃದ್ಧಾಪ್ಯದಲ್ಲಿದ್ದಾರೆ. ಒಂದು ಮನೆಯಲ್ಲಿ ಒಬ್ಬರೇ ಬದುಕುತ್ತಿದ್ದಾರೆ. ಬದುಕಿನಲ್ಲಿ ಬಗೆಬಗೆಯ ಕಷ್ಟಕೋಟಲೆಗಳನ್ನು ಅನುಭವಿಸಿಯೂ ಬದುಕಿನ ಬಗೆಗೆ ಉತ್ಸಾಹ, ಪ್ರೀತಿ ಕಳೆದುಕೊಂಡಿಲ್ಲ. ಓದು, ಬರವಣಿಗೆ, ಚಿಂತನೆ ಅವರ ನಿತ್ಯಸಂಗಾತಿ. ನಾನು ಅವರನ್ನು ಭೇಟಿಯಾದಾಗ ಅದೊಂದು ತಾಯ್ತನದ ಕಕ್ಕುಲಾತಿಯಿಂದ ಮಾತಾಡಿದರು. ನನ್ನಲ್ಲಿ ಅನಿಮಿತ್ತ ವಿಶ್ವಾಸ, ಪ್ರೀತಿ ತೋರಿಸಿದರು. ನಾನು ಬರುವಾಗ ಅವರ ಪ್ರಕಟಿತ ಪುಸ್ತಕಗಳ ಕಟ್ಟೊಂದನ್ನು ನನ್ನ ಕೈಗಿತ್ತು ‘ಬಿಡುವಾದಾಗ ಓದಿ’ ಅಂದರು. ಈ ‘ಪೃಥೆ ತೆರೆದ ಪುಟಗಳು’ ಕಾದಂಬರಿಯನ್ನು ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿ ಅಂತ ಒಂದಿಷ್ಟು ಒತ್ತಾಯ ಪೂರ್ವಕವಾಗಿಯೇ ಹೇಳಿದರು. ಕುತೂಹಲಕ್ಕೆಂದು ಕಾದಂಬರಿಯನ್ನು ಕೈಗೆತ್ತಿಕೊಂಡೆ.

ಮುನ್ನುಡಿಯನ್ನು ಓದುತ್ತಿದ್ದಂತೆಯೇ ನನಗೆ ವಿಜಯಾ ಅವರ ವಿದ್ವತ್ತಿನ ಆಳಾಂತರಾಳಗಳು ಮನದಟ್ಟಾದವು. ಈ ಕೃತಿಯ ಹಿಂದೆ ಒಂದು ದೊಡ್ಡ ಅಧ್ಯಯನ, ಸಂಶೋಧನೆ, ಆರೋಗ್ಯಕರ, ಸೃಷ್ಟಿಶೀಲ ಮನಸ್ಸು ಕೆಲಸ ಮಾಡಿದೆ ಅನ್ನಿಸಿತು. ಪ್ರೀತಿ ಗೌರವಗಳಿಂದ ಓದಲು ಶುರುಮಾಡಿದೆ. ಸಣ್ಣ ಅಕ್ಷರಗಳಲ್ಲಿ ಮುದ್ರಿತವಾಗಿರುವ 215 ಪುಟಗಳ ಪುಸ್ತಕ. ಓದುವಾಗ ಈ ಪುಸ್ತಕದ ಪುಟಗಳ ಮಧ್ಯೆ ಕಣ್ಣು, ಮನಸ್ಸು ನಿಂತೇಬಿಡುತ್ತಿತ್ತು. ಮನಸ್ಸಿನ ತುಂಬಾ ‘ಕುಂತಮ್ಮ’ ತುಂಬಿಕೊಂಡುಬಿಟ್ಟಳು. ಪುಸ್ತಕ ಕೆಳಗಿಡಲು ಮನಸ್ಸೇ ಆಗಲಿಲ್ಲ. ಪೌರಾಣಿಕ ಕತೆಯೊಂದನ್ನು ಬಿತ್ತರಿಸುವುದಕ್ಕೆ ಉಚಿತವಾದ ಪರ್ಯಾವರಣ, ಪ್ರಬುದ್ಧ ಬರವಣಿಗೆಯ ಶೈಲಿ- ಸುಖವಾಗಿ ಓದಿಸಿಕೊಂಡವು.

ಲೇಖಕಿಯ ಮುನ್ನುಡಿ ಬಗ್ಗೆ ಹೇಳಿದೆ. ಅಲ್ಲಿ ಕುಂತಿಯು ಪುರುಷಸಂಪರ್ಕವಿಲ್ಲದೆ ಮಕ್ಕಳನ್ನು ಪಡೆದ ಪ್ರಸಂಗವನ್ನು ಕುರಿತು ತಾವು ಅಧ್ಯಯನ ಮಾಡಿದ ವಿಜ್ಞಾನದ ಬೆಳಕಿನಲ್ಲಿ ವಿಶ್ಲೇಷಣೆ ಮಾಡಿದ್ದಾರೆ ವಿಜಯಮ್ಮ. ಸ್ತ್ರೀಯಲ್ಲಿ ಗರ್ಭಕಟ್ಟಬೇಕಾದರೆ ಸ್ತ್ರೀಯ ಅಂಡಾಣು ಮತ್ತು ಪುರುಷನ ವೀರ್ಯಾಣು ಸಂಯೋಗವಾಗಬೇಕೆಂಬುದು ವಿಜ್ಞಾನ ನಮಗೆ ನೀಡಿರುವ ತಿಳಿವಳಿಕೆ. ಅಂಡಾಣುವಿನಲ್ಲಿರುವುದು ’ಗಿ’ ಎಂಬ ಲಿಂಗ ವರ್ಣತಂತು (ಖಛ್ಡಿ ಇಜ್ಟಟಞಟಠಟಞಛಿ), ವೀರ್ಯಾಣವಿನಲ್ಲಿ ’ಗಿ’ ಮತ್ತು ’’ ಎಂಬ ಲಿಂಗ ವರ್ಣತಂತುಗಳಿರುತ್ತವೆ. ಈ ಪುರುಷನ ’ಗಿ’ ಗುಣನಿಧಿಯು ಸ್ತ್ರೀಯ ’ಗಿ’ ಗುಣನಿಧಿಯ ಜತೆ ಸಂಯೋಗವಾದರೆ ಪರಿಣಾಮ ಹೆಣ್ಣು ಶಿಶುವೂ, ಪುರುಷನ ’’ ಗುಣನಿಧಿಯು ಸ್ತ್ರೀಯ ’ಗಿ’ ಗುಣನಿಧಿಯ ಜತೆ ಸಂಯೋಗವಾದರೆ ಗಂಡುಶಿಶುವೂ ಫಲಿತವಾಗುತ್ತದೆನ್ನುವುದು ವಿಜ್ಞಾನದ ವಿವರಣೆ. ಆದ್ದರಿಂದ ಹೆಣ್ಣಿನ ಗರ್ಭದಲ್ಲಿ ಬೆಳೆಯುವ ಶಿಶುವಿನ ಲಿಂಗನಿರ್ಧಾರವಾಗುವುದರಲ್ಲಿ ಗಂಡಿನ ವೀರ್ಯಾಣುವಿನ ಗುಣನಿಧಿಯ ಪಾತ್ರವೇ ಮುಖ್ಯ. ಇದು ಗೊತ್ತಿದ್ದರೆ ‘ಹೇಳ್ತಾ ಹೇಳ್ತಾ ನನ್ನ ಹೆಂಡ್ತಿ ಹೆಣ್ಣನ್ನೇ ಹೆತ್ತಳು’ ಅಂತ ಗಂಡಾಗಲೀ, ಅವರಪ್ಪ ಅಮ್ಮಂದಿರಾಗಲೀ ಪಾಪದ ಹೆಣ್ಣುಮಗಳ ಮೇಲೆ ದೋಷಾರೋಪಣೆ ಮಾಡುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ, ಇರಲಿ.

ಜೀವಿಗಳ ಸಂತಾನೋತ್ಪತ್ತಿಯಲ್ಲಿ ಪಾರ್ಥೆನೋಜೆನಿಸಿಸ್ (ಕಚ್ಟಠಿಜಛ್ಞಿಟಜಛ್ಞಿಛಿಠಜಿಠ) ಎಂಬುದೊಂದು ವಿಧಾನವಿದೆ. ಸ್ತ್ರೀ-ಪುರುಷ ಸಂಪರ್ಕವಿಲ್ಲದೆಯೂ, ಕೆಲವು ವಿಶಿಷ್ಟ ಪರಿಸ್ಥಿತಿಯಲ್ಲಿ, ಕೆಲವು ವಿಶಿಷ್ಟ ಪೋಷಕದ್ರವ್ಯಗಳ ಸಹಾಯದಿಂದ ಸಂತಾನೋತ್ಪತ್ತಿಯನ್ನು ಸಾಧ್ಯವಾಗಿಸುವುದೇ ಈ ಪಾರ್ಥೆನೋಜೆನಿಸಿಸ್ ವಿಧಾನ. ಈ ದಿಸೆಯಲ್ಲಿ ಹಲವು ವಿಜ್ಞಾನಿಗಳು ವಿಧವಿಧ ಪ್ರಯೋಗಗಳನ್ನು ಮಾಡಿ ಸಂತಾನೋತ್ಪತ್ತಿಯನ್ನು ಸಾಧಿಸಿರುವುದನ್ನು ಜೀವವಿಜ್ಞಾನ ಹೇಳುತ್ತದೆ. ಇದರ ವಿವರಗಳು ಇಲ್ಲಿ ಬೇಡ. ಕುಂತಿ-ಮಾದ್ರಿಯರಿಗೂ ಪುರುಷ ಸಂಪರ್ಕವಿಲ್ಲದೆ ದೇವತೆಗಳ ಪೌರುಷಾಂಶದಿಂದ ಸಂತಾನವಾದುದನ್ನು ಮಹಾಭಾರತ ಹೇಳುತ್ತದೆ. ಆದ್ದರಿಂದ ದೂರ್ವಾಸಮುನಿ ಕುಂತಿಗೆ ಬೋಧಿಸಿದ ಮಂತ್ರ ಈ ಅಪೌರುಷೇಯ ಚೇತನವಸ್ತುಗಳ ಪೌರುಷಾಂಶವನ್ನೂ, ಆ ಹೆಣ್ಣಿನ ಗಂಡನ ಪೌರುಷಾಂಶವನ್ನೂ ಸಂಯೋಗಿಸಿ ತನ್ನೊಳಗೆ ಪಡೆದುಕೊಳ್ಳುವ ವಿಧಾನವೇ ಇರಬಾರದೇಕೆ? ಎಂದು ಲೇಖಕಿಯ ವಾದ. ಇದು ವಾದವಷ್ಟೆ. ಕಾವ್ಯಗಳು ಅದರಲ್ಲೂ ರಾಮಾಯಣ, ಮಹಾಭಾರತದಂಥ ಪೌರಾಣಿಕ ಕಾವ್ಯಗಳು ನಡೆಯುವುದೇ ಅದೊಂದು ಅಸಂಭವನೀಯವೆನ್ನುವಂಥ ರೂಪಕ ಪ್ರತಿಮೆಗಳಿಂದ. ಅವುಗಳನ್ನು ಅರ್ಥೈಸುವ, ವಿಶ್ಲೇಷಿಸುವ ತಿಳಿವಳಿಕೆಯನ್ನು ಆ ಕಾವ್ಯಗಳೇ ನೀಡುತ್ತವೆ. ಎಲ್ಲೆಲ್ಲಿಗೂ ವಿಜ್ಞಾನವನ್ನೇ ಎಳೆತರುವುದು ಅನಗತ್ಯ. ಆದರೂ ಇಂಥದೊಂದು ಆಲೋಚನೆ, ಅಧ್ಯಯನ ನಿರರ್ಥಕವಾದುದೇನಲ್ಲ.

ಹೀಗೆ ಆಲೋಚಿಸುವ ಲೇಖಕಿ ಕುಂತಿಯು ದೂರ್ವಾಸಮುನಿಯ ಮಂತ್ರ ಸಹಾಯದಿಂದ ಸೂರ್ಯನ ಚೈತನ್ಯಶಕ್ತಿಯನ್ನು ತನ್ನೊಳಕ್ಕೆ ಪಡೆದುಕೊಂಡ ಬಗೆಯನ್ನು ಅತ್ಯಂತ ಹೃದ್ಯವಾಗಿಯೂ, ಕಾವ್ಯಾತ್ಮಕವಾಗಿಯೂ ನಿರೂಪಿಸುತ್ತಾರೆ. ಹಾಗೆಯೇ ಕುಂತಿ-ಮಾದ್ರಿಯರು ಯಮ, ವಾಯು, ದೇವೇಂದ್ರ ಮತ್ತು ಅಶ್ವಿನೀ ದೇವತೆಗಳಿಂದ ಅವರ ಚೇತನಾಂಶಗಳನ್ನೂ, ಪಾಂಡುವಿನ ಪೌರುಷಾಂಶವನ್ನೂ ಸಂಯೋಗಿಸಿ ತಮ್ಮ ಗರ್ಭಕ್ಕೆ ಸ್ವೀಕರಿಸಿ ಸಂತಾನ ಪಡೆದುದನ್ನು ರ್ತಾಕವಾಗಿಯೂ, ಸುಂದರವಾಗಿಯೂ ಚಿತ್ರಿಸುತ್ತಾರೆ.

‘ಪೃಥೆ ತೆರೆದ ಪುಟಗಳ’ಲ್ಲಿ ಇಡೀ ಮಹಾಭಾರತವೇ ಕುಂತಿಯ ಮೂಲಕವಾಗಿ ನಿರೂಪಿತವಾಗಿದೆ. ಕುಂತಿ ಹೆಚ್ಚೂಕಡಿಮೆ ಮಹಾಭಾರತದ ಕತೆಯುದ್ದಕ್ಕೂ ಇದ್ದವಳು. ಬಹುಸಂದರ್ಭಗಳಲ್ಲಿ ಅವಳು ಎಲ್ಲಕ್ಕೂ ಸಾಕ್ಷಿ, ಎಲ್ಲಕ್ಕೂ ಭಾಗಿ. ಹೀಗಾಗಿ ಕತೆಯ ಬೀಸು ಬಹಳ ಅಗಾಧವಾದುದು. ಆದ್ದರಿಂದ ಲೇಖಕಿ ಮಹಾಭಾರತದ ಯಾವ ಪ್ರಸಂಗವನ್ನು ಲಂಬಿಸಬೇಕು, ಮತ್ತಾವ ಪ್ರಸಂಗವನ್ನು ಹ್ರಸ್ವ ಮಾಡಬೇಕು ಎಂಬುದರ ಬಗ್ಗೆ ವಿವೇಚನೆಯನ್ನು ಉಪಯೋಗಿಸುತ್ತಾರೆ. ಆದ್ದರಿಂದ ಕೆಲವೆಡೆಗಳಲ್ಲಿ ಕುಂತಿ ಇನ್ನೂ ಹೆಚ್ಚು ಮಾತಾಡಬೇಕಿತ್ತೆಂದೂ, ಮತ್ತೆ ಕೆಲವು ಸಂದರ್ಭಗಳಲ್ಲಿ ಕುಂತಿ ಇದನ್ನು ಇಷ್ಟು ವಿಶದವಾಗಿ ಹೇಳುವ ಅಗತ್ಯವಿರಲಿಲ್ಲ ಎಂದೂ ತಕರಾರುಗಳು ಏಳಲು ಸಾಧ್ಯ. ಲೇಖಕಿಯಂತೆಯೇ ಎಲ್ಲಾ ಓದುಗರೂ ಆಲೋಚಿಸಬೇಕೆಂದು ಎಲ್ಲಿದೆ?

ಕುಂತಿ ಹೇಳುವ ಕತೆಯನ್ನು ವಿಜಯಾ ಅವರು ಹೇಳುತ್ತಿರುವುದರಿಂದ ಸಹಜವಾಗಿಯೇ ಕತೆಯುದ್ದಕ್ಕೂ ಒಂದು ಸ್ತ್ರೀಪರವಾದ ಧ್ವನಿ ಇದ್ದೇ ಇದೆ. ಆದರೆ ಆ ಧ್ವನಿ ತೀರಾ ಗಡುಸಾದುದಲ್ಲ, ನಿಷ್ಠುರವಾದುದಲ್ಲ, ಮೃದುವಾಗಿದ್ದರೂ ಗಟ್ಟಿಯಾದುದು.

ಉದಾಹರಣೆಗೆ, ಆರಂಭದಲ್ಲೇ ಕುಂತಿ ತಾನು ಹುಟ್ಟಿದ ಕತೆಯನ್ನು ಹೇಳುತ್ತಾಳೆ- ಅವಳು ಯದುವಂಶದ ವೃಷ್ಣಿ ಕುಲದ ಶೂರಸೇನನ ಮಗಳು, ವಸುದೇವ (ಕೃಷ್ಣನ ಅಪ್ಪ) ಅವಳ ಅಣ್ಣ. ಮೂವರು ತಂಗಿಯರು. ಆದರೆ ಅವಳು ಹುಟ್ಟುವ ಮೊದಲೇ ಅವಳ ತಂದೆ ಶೂರಸೇನ ತನ್ನ ಸೋದರತ್ತೆಯ ಮಗ ಹಾಗೂ ಪರಮಮಿತ್ರ ಕುಂತಿಭೋಜನಿಗೆ ದತ್ತು ಕೊಡುವೆನೆಂದು ವಾಗ್ದಾನ ಮಾಡಿದ್ದನಂತೆ. ಹಾಗೇ ಶೂರಸೇನ ತನ್ನ ಮಗಳು ‘ಪೃಥೆ’ಯನ್ನು ಹುಟ್ಟಿದ ಕೂಡಲೇ ಕುಂತಿಭೋಜನಿಗೆ ದತ್ತು ಕೊಟ್ಟುಬಿಟ್ಟನಂತೆ. ಹಾಗಾಗಿ ಶೂರಸೇನನ ಮಗಳು ಕುಂತಿಭೋಜನ ಮಗಳಾಗಿ ‘ಕುಂತಿ’ ಎಂಬ ಹೆಸರನ್ನೇ ಹೊತ್ತುಕೊಳ್ಳಬೇಕಾಯಿತಂತೆ. ಇದನ್ನು ಹೇಳುವಾಗ ಕುಂತಿ ಹೇಳುತ್ತಾಳೆ- ‘ಒಂದು ವೇಳೆ ವಸುದೇವ ಹಾಗೂ ನನ್ನ ಹುಟ್ಟಿನ ಕ್ರಮದಲ್ಲಿ ಅದಲು ಬದಲಾಗಿದ್ದರೆ ತಂದೆ ಏನು ಮಾಡುತ್ತಿದ್ದರು ಎಂದು ನಾನು ಅನೇಕ ಬಾರಿ ಯೋಚಿಸಿದ್ದೇನೆ. ಮುಂಚೆಯೇ ಹುಟ್ಟಿದ್ದ ವಸುದೇವನನ್ನು ದತ್ತುಕೊಡಲು ಅವರಿಗೆ ಮನಸ್ಸು ಬರದಿದ್ದುದು ಸಹಜವೇ! ಗಂಡುಮಗನಲ್ಲವೇ ಅವನು? ತಂದೆಯ ಸಂಪತ್ತಿನ ಹಾಗೂ ಉತ್ತರಕ್ರಿಯಾದಿಗಳ ಉತ್ತರಾಧಿಕಾರಿ! ವಂಶವನ್ನು ಬೆಳಗುವ ಕುಲದೀಪಕ! ಆದರೆ ಹೆಣ್ಣುಮಗಳು ಹುಟ್ಟಿದ ದಿನದಿಂದಲೇ ಪರರ ಸ್ವತ್ತು! ಎಂದಾದರೊಂದು ದಿನ ಬೇರೆಯ ಕುಲದವರನ್ನು ವರಿಸಿ ಪರರ ಮನೆಗೆ ಹೋಗಿ ಅಲ್ಲಿ ನಂದಾದೀಪ ಬೆಳಗುವವಳು! ಅಂತಹವಳನ್ನು ಸ್ವಲ್ಪ ಮುಂಚೆಯೇ ಇನ್ನೊಬ್ಬರಿಗೆ ಧಾರೆ ಎರೆದುಕೊಡುವುದು ತಂದೆಗೆ ಹೆಚ್ಚು ಕಷ್ಟದ ತೀರ್ವನವಾಗಿರಲಿಕ್ಕಿಲ್ಲ!’.

ಗೊಂಬೆಯಾಟ ಆಡಿಕೊಂಡು ಬೆಳೆವ ವಯಸ್ಸಿನ ಹುಡುಗಿಯನ್ನು ಕುಂತಿಭೋಜ ಋಷಿಮುನಿಗಳ ಸೇವೆಗೆ ನಿಯೋಜಿಸಿದ ಸಂದರ್ಭವನ್ನು ನೆನೆಸಿಕೊಂಡು ಕುಂತಿ ಹೇಳುತ್ತಾಳೆ- ‘ಕನ್ಯೆಯಾದವಳು ನಿಸ್ಪಹತೆಯಿಂದ ಮುನಿಗಳನ್ನು ಸೇವಿಸಿದರೆ ಬರುವ ಪುಣ್ಯದಲ್ಲಿ ಕನ್ಯೆಯ ತಂದೆಗೂ ಪಾಲಿರುತ್ತದೆಯಂತೆ…. (ಹೀಗೆ ಹೇಳುತ್ತಾ ದಶರಥ ತನ್ನ ಮಗಳು ‘ಶಾಂತ’ಳನ್ನು ರೋಮಪಾದ ಮಹಾರಾಜನಿಗೆ ದತ್ತು ಕೊಟ್ಟುದನ್ನು, ಆ ಸಾಕುತಂದೆ ಆ ಹುಡುಗಿಯನ್ನು ತನ್ನ ದೇಶದ ಕ್ಷಾಮ ನಿವಾರಿಸಿದ ಕೃತಜ್ಞತೆಯ ಕುರುಹಾಗಿ ವಿಭಾಂಡಕ ಮುನಿಯ ಮಗ ಋಷ್ಯಶೃಂಗನಿಗೆ ಧಾರೆಯೆರೆದುಕೊಟ್ಟುದನ್ನು ನೆನಪಿಸುತ್ತಾ)… ನನ್ನ ಪುಣ್ಯ! ಕ್ಷತ್ರಿಯ ರಾಜನೊಬ್ಬನ ಅರ್ಧಾಂಗಿಯಾಗುವ ಎಲ್ಲ ಗುಣಗಳನ್ನೂ ಪಡೆದಿದ್ದ ನನ್ನನ್ನು ನನ್ನ ತಂದೆ ತಾಪಸಿಯೊಬ್ಬನಿಗೆ ಒಪ್ಪಿಸಲಿಲ್ಲ!’.

‘ಪೃಥೆ ತೆರೆದ ಪುಟಗಳ’ನ್ನು ತಿರುಗಿಸುತ್ತಾ ಹೋದಂತೆ ಇಡೀ ಮಹಾಭಾರತದುದ್ದಕ್ಕೂ- ಅವಳು ಗಾಂಧಾರಿಯಿರಲಿ, ದ್ರೌಪದಿಯಿರಲಿ, ಕುಂತಿಯಿರಲಿ, ಸುಭದ್ರೆ, ಹಿಡಿಂಬೆ, ಉತ್ತರೆ ಮುಂತಾದವರೇ ಇರಲಿ- ಪುರುಷರು ನಿರ್ವಿುಸಿದ ಪರಿಸ್ಥಿತಿಗಳಿಂದ ಸ್ತ್ರೀಯರು ಅದೆಷ್ಟು ವ್ಯಥೆ ಸಂಕಟ ದುಮ್ಮಾನಗಳನ್ನು ಅನುಭವಿಸಿದರೆಂಬುದು ಕುಂತಿಯ ಮಾತುಗಳಲ್ಲಿ ನಿರೂಪಿತವಾಗುತ್ತಾ ಹೋಗುತ್ತದೆ.

ಇಂಥದೊಂದು ಕಾದಂಬರಿಯನ್ನು ಬರೆಯುವುದಕ್ಕೆ ವಿಜಯಮ್ಮನವರು ಮಾಡಿಕೊಂಡಿರುವ ಅಧ್ಯಯನ, ಪೂರ್ವಸಿದ್ಧತೆ ಆಶ್ಚರ್ಯ ಹುಟ್ಟಿಸುವಷ್ಟು ಅಗಾಧವಾಗಿವೆ. ಮಹಾಭಾರತದ ಪರಿಸರದಲ್ಲಿ ಬರುವ ಎಲ್ಲಾ ರಾಜರ, ರಾಜವಂಶಗಳ ಪೂರ್ವಚರಿತ್ರೆ, ವಂಶವೃಕ್ಷಗಳನ್ನೆಲ್ಲಾ ಕಲೆಹಾಕಿದ್ದಾರೆ. ಅದನ್ನೆಲ್ಲಾ ಸ್ಮರಣೆಯಲ್ಲಿಟ್ಟುಕೊಂಡು ಇಷ್ಟು ದೊಡ್ಡಬೀಸಿನ ಕತೆಯನ್ನು ನಿರ್ವಹಿಸುವುದು ತುಂಬಾ ಕಷ್ಟ.

ಕತೆಯ ಮುಖ್ಯ ಪ್ರಸಂಗಗಳಲ್ಲಿ ಅಂಥ ರೋಚಕ ಮಾರ್ಪಾಟುಗಳನ್ನೇನೂ ಮಾಡದಿದ್ದರೂ, ಬಹುಸಂದರ್ಭಗಳಲ್ಲಿ ಆ ಪ್ರಸಂಗಗಳಿಗೊಂದು ರ್ತಾಕತೆಯನ್ನು ತುಂಬಿಕೊಡಲು ಪ್ರಯತ್ನಿಸಿದ್ದಾರೆ ಲೇಖಕಿ. ಇಡೀ ಕಾದಂಬರಿಯನ್ನು ಓದಿದಾಗ ಒಂದು ಮಹಾಭಾರತದ ಮರುಓದೇ ಆಯಿತು ಎನ್ನುವ ಭಾವವಾಗುತ್ತದೆ. ಕತೆಯುದ್ದಕ್ಕೂ ಕಣ್ತುಂಬಿಕೊಂಡು ಕತೆ ಹೇಳುತ್ತಿರುವ ಕುಂತಿಯ ಚಿತ್ರ ನಮ್ಮ ಮನಸ್ಸು ತುಂಬಿಕೊಂಡು ನಿಂತಿರುತ್ತದೆ. ಕತೆ ಮುಗಿದ ಮೇಲೂ ಬರುವ ಉದ್ಗಾರವೊಂದೇ- ‘ಪಾಪ ಕುಂತಿ!‘

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

 

Leave a Reply

Your email address will not be published. Required fields are marked *

Back To Top