Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಮಹತ್ವದ ಹೆಜ್ಜೆ

Thursday, 03.08.2017, 3:00 AM       No Comments

ವಿಭಿನ್ನ ನೆಲೆಗಟ್ಟಿನಲ್ಲಿ ಪ್ರಯೋಜನಕಾರಿಯಾಗಿರುವ ಆಧಾರ್ ಗುರುತಿನ ಚೀಟಿ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ. ಸರ್ಕಾರದ ಹಲವು ಯೋಜನೆಗಳ ಫಲಾನುಭವಿಗಳಾಗುವುದಕ್ಕೆ ಆಧಾರ್ ಕಾರ್ಡ ಅಗತ್ಯವಾಗಿರುವುದರ ಜತೆಗೆ, ಆಳುಗ ವ್ಯವಸ್ಥೆಯ ಎಲ್ಲ ವಲಯಗಳಲ್ಲಿ ಹಂತಹಂತವಾಗಿ ಕ್ರಮಬದ್ಧತೆ ಮತ್ತು ಪಾರದರ್ಶಕತೆ ತರುವ ನಿಟ್ಟಿನಲ್ಲೂ ಇದು ಸಹಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಆಸ್ತಿ ನೋಂದಣಿಗೆ ಆಧಾರ್ ಸಂಖ್ಯೆಯ ಪರಿಶೀಲನೆಯನ್ನು ಕಡ್ಡಾಯವಾಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿ ಹೊಸ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿರುವುದು ಮತ್ತೊಂದು ಮಹತ್ವದ ಹೆಜ್ಜೆಯೇ ಸರಿ. ಇದರ ಅನುಸಾರ, ಸಾರ್ವಜನಿಕರು ಆಸ್ತಿ ಖರೀದಿಗೆ ಬಳಸುವ ಬ್ಯಾಂಕ್ ಖಾತೆ ಹಾಗೂ ಪ್ಯಾನ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಿದ ನಂತರವಷ್ಟೇ ನೋಂದಣಿ ಕೈಗೂಡುತ್ತದೆ. ಇದಕ್ಕಾಗಿ 1908ರ ಆಸ್ತಿ ನೋಂದಣಿ ಕಾಯ್ದೆಯ ಪರಿಚ್ಛೇದ 32 ಮತ್ತು 32 (ಎ)ಗೆ ತಿದ್ದುಪಡಿಯಾಗಬೇಕಿದೆ. ಯಾವುದೇ ವ್ಯಕ್ತಿ ಇನ್ನೊಬ್ಬನ ಹೆಸರಲ್ಲಿ ಬೇನಾಮಿ ಸ್ವತ್ತು ಖರೀದಿಸಿದರೆ ಆಧಾರ್ ಪರಿಶೀಲನೆಯ ವೇಳೆ ಅದು ಪತ್ತೆಯಾಗುತ್ತದೆ ಎಂಬುದು ಈ ನೀತಿಯಿಂದಾಗುವ ಪ್ರಯೋಜನ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ಇತ್ತೀಚೆಗೆ ರೇರಾ ಕಾಯ್ದೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಇದೀಗ ಆಧಾರ್ ಜೋಡಣೆ ಮೂಲಕ ಜನರಿಗೆ ಮತ್ತೊಂದು ಅನುಕೂಲ ಮಾಡಿ ಕೊಟ್ಟಿದೆ. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸುಲಭ-ಸುಗಮವಾಗಿ ವ್ಯವಹರಿಸುವುದಕ್ಕೆ ಆಧಾರ್ ಬಳಕೆಯನ್ನು ಕಡ್ಡಾಯಗೊಳಿಸುತ್ತ ಬಂದಿದೆ. ಇದರಿಂದ ಹಲವು ರೀತಿಯಲ್ಲಿ ಅನುಕೂಲಗಳಾಗುತ್ತಿರುವುದು ಹಾಗೂ ಭ್ರಷ್ಟಾಚಾರ ತಗ್ಗಿರುವುದು ಸಾರ್ವಜನಿಕರ ಅನುಭವಕ್ಕೂ ಬರುತ್ತಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕನಸಿನ ಸಾಕಾರದಲ್ಲೂ ಆಧಾರ್ ಮಹತ್ವದ ಪಾತ್ರ ಹೊಂದಿದೆ. ಆದರೆ, ಆಧಾರ್ ಕಾರ್ಡ್​ನ ಇಂಥ ಪರಿಣಾಮಕಾರಿತ್ವವನ್ನೇ ಆಧಾರಭೂತವಾಗಿ ಪರಿಗಣಿಸಿ ಎಲ್ಲೆಡೆ-ಎಲ್ಲ ವ್ಯವಹಾರಗಳಿಗೆ ಅದನ್ನು ಕಡ್ಡಾಯವಾಗಿಸುವ ಸಂದರ್ಭದಲ್ಲಿ ಸರ್ಕಾರ ಇನ್ನಷ್ಟು ಎಚ್ಚರಿಕೆಯನ್ನೂ ವಹಿಸಬೇಕಿದೆ. ಉದಾಹರಣೆಗೆ ಡೆಬಿಟ್, ಕ್ರೆಡಿಟ್ ಕಾರ್ಡ್ ಹಾಗೂ ಆನ್​ಲೈನ್ ಬ್ಯಾಂಕಿಂಗ್ ವ್ಯವಹಾರಗಳು ಗ್ರಾಹಕಸ್ನೇಹಿಯಾಗಿದ್ದರೂ, ವಿವಿಧ ಬಗೆಯ ಹ್ಯಾಕಿಂಗ್, ವಂಚನೆಗಳಿಗೆ ಅಲ್ಲಿ ಅವಕಾಶವಿದ್ದೇ ಇದೆ. ಆಧಾರ್ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬರ ಪ್ರತಿಯೊಂದು ಮಾಹಿತಿಯೂ ಅಡಕವಾಗಿರುವ ಕಾರಣ, ಅದು ಸೋರಿಕೆಯಾಗದಂತೆ, ಹ್ಯಾಕರ್​ಗಳ ಕೈಗೆ ಸಿಗದಂತೆ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕಿದೆ.

ಆಧಾರ್​ನಲ್ಲಿ ಅಡಕವಾಗಿರುವ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ಸಮರ್ಪಕವಾಗಿ ಕಾಪಿಟ್ಟುಕೊಳ್ಳದಿದ್ದರೆ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲವೇ? ಆಧಾರ್ ದತ್ತಾಂಶ ಎಷ್ಟರಮಟ್ಟಿಗೆ ಸುರಕ್ಷಿತ? ಎಂಬೆಲ್ಲ ಆತಂಕ, ಪ್ರಶ್ನೆಗಳುದ್ಭವಿಸಿದ ಪರಿಣಾಮ ಹಲವು ದಾವೆಗಳು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿವೆ. ಇವುಗಳ ವಾದ ಪ್ರತಿವಾದ ಆಲಿಸಿರುವ ಕೋರ್ಟ್ ಬುಧವಾರ ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಒಟ್ಟಿನಲ್ಲಿ ಮಾಹಿತಿ ಸೋರಿಕೆ, ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ಹಾಗೂ ಆಧಾರ್ ಗುರುತಿನ ಚೀಟಿಯ ದುರುಪಯೋಗ ಆಗದಂತಿರಲು ತಂತ್ರಜ್ಞಾನದ ಉನ್ನತೀಕರಣವೂ ಸೇರಿದಂತೆ ಎಲ್ಲ ತೆರನಾದ ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕಿದೆ. ಆಗ ಮಾತ್ರವೇ ‘ಆಧಾರ್‘ ನಿಜಾರ್ಥದಲ್ಲಿ ಜೀವನಾಧಾರವಾದೀತು.

 

Leave a Reply

Your email address will not be published. Required fields are marked *

Back To Top