Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :

ಮಹತ್ವದ ಉಪಕ್ರಮಗಳು

Monday, 19.06.2017, 3:02 AM       No Comments

ಸಂಚಾರ ದಟ್ಟಣೆಯ ಕಾರಣದಿಂದಾಗಿ ಸಕಾಲದಲ್ಲಿ ಗಮ್ಯಸ್ಥಾನವನ್ನು ತಲುಪಲಾಗದ ಅಥವಾ ಕೆಲಸ-ಕಾರ್ಯಗಳನ್ನು ಮುಗಿಸಿಕೊಳ್ಳಲಾಗದೆ ಸಮಸ್ಯೆ ಅನುಭವಿಸುತ್ತಿದ್ದ ಬೆಂಗಳೂರು ಮಹಾಜನತೆ, ಮೆಟ್ರೋ ಯೋಜನೆಯ ಲೋಕಾರ್ಪಣೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಉರಿಬಿಸಿಲಿನ ಧಗೆ, ಮಳೆಯ ಆವುಟ, ಧೂಳು-ಮಾಲಿನ್ಯದ ಕಿರಿಕಿರಿ, ಗಂಟೆಗಟ್ಟಲೆ ಕಾಯಬೇಕಾದ ಜಂಜಾಟ ಇತ್ಯಾದಿಗಳಿಗೆ ಅಂತ್ಯಹಾಡುವ ನಿಟ್ಟಿನಲ್ಲಿ ಮೆಟ್ರೋ ರೈಲು ಪಯಣ ಪ್ರಮುಖ ಪಾತ್ರವಹಿಸಲಿದೆ ಎಂಬುದು ದಿಟ. ಬೆಂಗಳೂರಿನ ನಾಲ್ಕು ದಿಕ್ಕುಗಳಿಗೆ ಕಲ್ಪಿಸಲಾಗಿರುವ ಈ ಸುಗಮ ಸಂಚಾರ ವ್ಯವಸ್ಥೆಯಿಂದಾಗಿ ಪ್ರತಿನಿತ್ಯ ಸುಮಾರು 7 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂಬ ಲೆಕ್ಕಾಚಾರವೂ ಇಲ್ಲಿದೆ. ಸಮಗ್ರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಇದು ಒಂದೇ ಗುಕ್ಕಿಗೆ ನಿವಾರಿಸುವುದಿಲ್ಲವಾದರೂ, ಸದರಿ ಮಾರ್ಗಗಳು ಹಾದುಹೋಗುವ ಭಾಗದಲ್ಲಾದರೂ ದಟ್ಟಣೆ ತಹಬಂದಿಗೆ ಬರಲಿದೆ ಎನ್ನಲಡ್ಡಿಯಿಲ್ಲ. ಮತ್ತೊಂದೆಡೆ, ಕೊಳವೆಮಾರ್ಗದ ಮೂಲಕ ಮನೆಮನೆಗೆ ನೈಸರ್ಗಿಕ ಅನಿಲವನ್ನು ಪೂರೈಸುವ ಯೋಜನೆಗೂ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ಸಿಲಿಂಡರ್​ಗಳನ್ನು ಕಾದಿರಿಸುವ, ಮನೆಯಲ್ಲಿ ಕಾಪಿಟ್ಟುಕೊಳ್ಳುವ ಜಂಜಾಟಗಳು ಇದರಿಂದ ತಪ್ಪಲಿದ್ದು, ಬಳಸಿದ ಅನಿಲಕ್ಕೆ ಅನ್ವಯವಾಗುವ ಶುಲ್ಕವನ್ನು ಗ್ರಾಹಕರು 2 ತಿಂಗಳಿಗೊಮ್ಮೆ ಪಾವತಿ ಮಾಡಬೇಕಿರುತ್ತದೆ. ಕೊಳವೆಮಾರ್ಗದ ಮೂಲಕ ಅನಿಲ ಪೂರೈಕೆಯಾಗುವುದರಿಂದ, ಸಾಂಪ್ರದಾಯಿಕ ಸಿಲಿಂಡರ್ ಬಳಕೆಗಿಂತ ಇದು ಹೆಚ್ಚು ಸುರಕ್ಷಿತ ಹಾಗೂ ಮಾಲಿನ್ಯದ ಜಂಜಾಟವಿಲ್ಲದ ಕಾರಣ ಪರಿಸರ ಸ್ನೇಹಿಯೂ ಆಗಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಗೃಹಬಳಕೆಗೆ ಮಾತ್ರವಲ್ಲದೆ, ಬೃಹತ್ ಉದ್ಯಮಗಳು, ಕಂಪನಿಗಳು ಹಾಗೂ ಸಾರಿಗೆ ವಾಹನಗಳಿಗೂ ನೈಸರ್ಗಿಕ ಅನಿಲವನ್ನು ಪೂರೈಸಲು ಸಿಎನ್​ಜಿ ಪೂರೈಸುವ ಕೇಂದ್ರಗಳನ್ನು ಆರಂಭಿಸಲಾಗುವುದರಿಂದ, ವೆಚ್ಚದ ದೃಷ್ಟಿಯಿಂದಲೂ ಇದು ಮಿತವ್ಯಯಕಾರಿಯಾಗಲಿದೆ ಎನ್ನುತ್ತವೆ ಇಲಾಖಾ ಮೂಲಗಳು.

ಬೆಂಗಳೂರು ಒಂದರಲ್ಲೇ ಬರೋಬ್ಬರಿ 60 ಲಕ್ಷದಷ್ಟು ‘ಸಮೂಹ ಸಾರಿಗೆಯೇತರ’ ವಾಹನಗಳಿದ್ದು, ಇವುಗಳಿಂದ ಗಣನೀಯ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಮೆಟ್ರೋ ರೈಲು ಯೋಜನೆಯಂಥ ಸಮೂಹ ಸಾರಿಗೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದಾಗಿ ಈ ಸಮಸ್ಯೆ ತಗ್ಗುವ ಜತೆಗೆ, ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳಿಂದ ಜನರಿಗೆ ಸ್ವಲ್ಪ ನಿರಾಳತೆ ದೊರಕುತ್ತದೆ ಎಂಬುದೂ ದಿಟವೇ. ಮೆಟ್ರೋ 2ನೇ ಹಂತದ ಯೋಜನೆ 2020ರ ವೇಳೆಗೆ ಪ್ರಯಾಣಿಕರ ಸೇವೆಗೆ ಲಭ್ಯವಾಗುತ್ತಿದೆ ಎನ್ನಲಾಗಿದ್ದು, ಇದು ನಿಗದಿತ ಕಾಲಾವಧಿಯೊಳಗೆ ಕೈಗೂಡುವಂತಾಗಲಿ ಎಂಬುದು ಬಹುಜನರ ಆಶಯ.

ಜನಸಮೂಹದ ಯೋಗಕ್ಷೇಮ ಹಾಗೂ ವೆಚ್ಚಕಡಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸುವ ಯೋಜನೆಗಳಿಂದ ಹಲವು ನೆಲೆಗಟ್ಟಿನ ಪ್ರಯೋಜನಗಳಿವೆ ಎಂಬುದಕ್ಕೆ ಮೆಟ್ರೋ ರೈಲು ಹಾಗೂ ಕೊಳವೆಮಾರ್ಗದಲ್ಲಿ ನೈಸರ್ಗಿಕ ಅನಿಲ ಪೂರೈಸುವ ಯೋಜನೆಗಳು ಸಾಕ್ಷಿಯಾಗುತ್ತವೆ. ಇಂಥ ದೂರಗಾಮಿ ಚಿಂತನೆಯನ್ನು ಇಷ್ಟಕ್ಕೇ ಸೀಮಿತಗೊಳಿಸದೆ, ಮತ್ತಷ್ಟು ಕ್ಷೇತ್ರಗಳಿಗೆ ವಿಸ್ತರಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ ಎನ್ನಲಡ್ಡಿಯಿಲ್ಲ. ಹಾಗಂತ ಯಾವುದೋ ರಾಜಕೀಯ ಹಿತಾಸಕ್ತಿಗಳ ಈಡೇರಿಕೆಗೆಂದು ಅವಾಸ್ತವಿಕ, ಅಪ್ರಾಯೋಗಿಕ ಹಾಗೂ ವಿನಾಕಾರಣ ಸುದೀರ್ಘ ಕಾಲದವರೆಗೆ ಎಳೆಸುವ ಯೋಜನೆಗಳ ಕಾರ್ಯಾರಂಭಕ್ಕೆ ಮುಂದಾಗದೆ, ತನ್ಮೂಲಕ ಯೋಜನಾ ವೆಚ್ಚದ ಹೆಚ್ಚಳಕ್ಕೆ ಪರೋಕ್ಷ ಆಸ್ಪದ ನೀಡದೆ, ಸಮಷ್ಟಿಯ ಹಿತದೃಷ್ಟಿಯಿಂದ ಪ್ರಮುಖವೆನಿಸುವ ಯೋಜನೆಗಳಿಗಷ್ಟೇ ಆಳುಗರು ಆದ್ಯಗಮನ ಹರಿಸಬೇಕಿದೆ.

Leave a Reply

Your email address will not be published. Required fields are marked *

Back To Top