Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಮಳೆಯಿಂದ ಸೊರುಗುತ್ತಿರುವ ತಂಬಾಕು

Wednesday, 11.07.2018, 5:16 AM       No Comments

ಶಿವು ಹುಣಸೂರು: ಪ್ರಸ್ತುತ ಹವಾಮಾನ ಏರುಪೇರಿನಿಂದ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಇಳುವರಿಯಲ್ಲಿ ಕುಂಠಿತವಾಗುವ ಸಾಧ್ಯತೆಯಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.

ಏಪ್ರಿಲ್-ಮೇ ತಿಂಗಳಿನಿಂದಲೂ ತಾಲೂಕಿನಾದ್ಯಂತ ಉತ್ತಮ ಮಳೆ ಸುರಿದಿದ್ದು, ಬೆಳೆಗೆ ಬೇಕಾದ ಬಿಸಿಲು ಸಿಗದೆ ತಂಬಾಕು ಬೆಳೆ ತನ್ನ ಗುಣಮಟ್ಟ ಕಳೆದುಕೊಳ್ಳುವುದಲ್ಲದೆ ಇಳುವರಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ತಂಬಾಕು ಕೃಷಿಗಾಗಿ ಸಾಲ ಮಾಡಿರುವ ರೈತರಲ್ಲಿ ಆತಂಕ ಮನೆ ಮಾಡಿದೆ.

ಹೆಚ್ಚಿನ ಮಳೆ, ಭೂಮಿಯ ತೇವಾಂಶ ತಂಬಾಕು ಇನ್ನಿತರ ಕಾರಣಗಳು ಕೃಷಿಗೆ ಹಿನ್ನಡೆಯಾಗಲು ಕಾರಣ ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್​ಐ)ದ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದ ಸೂರ್ಯ ಮರೆಯಾಗಿದ್ದು, ತಂಬಾಕು ಸಸಿಗಳಲ್ಲಿ ದ್ಯುತಿ ಸಂಶ್ಲೇಷಣ ಕ್ರಿಯೆ ನಡೆಯದ ಕಾರಣ ಆಹಾರ ಉತ್ಪಾದನೆಯಾಗದೇ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತಿದೆ.

ಗೊಬ್ಬರದ ತಪ್ಪು ನಿರ್ವಹಣೆ: ಸೂಕ್ತ ಕಾಲಕ್ಕೆ ಅವಶ್ಯಕವಿದ್ದಂತೆ ರಾಸಾಯನಿಕ ಗೊಬ್ಬರ ಪೂರೈಸದಿರುವುದು ಬೆಳೆ ಕುಂಠಿತವಾಗಲು ಮತ್ತೊಂದು ಕಾರಣ. ನಾಟಿ ಮಾಡಿದ 10 ದಿನಗಳೊಳಗೆ ಒಮ್ಮೆ ಮತ್ತು ನಂತರ 30 ದಿನದೊಳಗೆ ಮತ್ತೊಮ್ಮೆ ಹೀಗೆ ಎರಡು ಸಲ ನಿಗದಿತ ಪ್ರಮಾಣದ ರಾಸಾಯನಿಕ ಗೊಬ್ಬರ ಪೂರೈಸಬೇಕಿತ್ತು. ಆದರೆ ಸಾಕಷ್ಟು ರೈತರು ಒಂದೇ ಸಲ ಎಲ್ಲ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ತುಂಬಿದ್ದಾರೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ಗಿಡಗಳಿಗೆ ಹಾಕಿದ್ದ ಗೊಬ್ಬರ ಕೊಚ್ಚಿಕೊಂಡು ಹೋಗಿದೆ. ಇದರಿಂದ ತಂಬಾಕಿನ ಗಿಡದ ಬೇರಿಗೆ ಸೂಕ್ತ ಪೋಷಾಕಾಂಶ ಸಿಗದೇ ಆಳವಾಗಿ ಮತ್ತು ಅಗಲವಾಗಿ ಬೆಳೆಯಬೇಕಾದ ಬೇರು ಪೀಚಲಾಗಿ ಬೆಳೆದು ಸತ್ವವಿಲ್ಲದೇ ಸೊರಗುತ್ತಿದೆ.

ಪೊಟ್ಯಾಷ್ ಕೊರತೆ: ಈ ಎಲ್ಲ ಕಾರಣಗಳಿಂದ ಗಿಡಕ್ಕೆ ಮುಖ್ಯವಾಗಿ ಬೇಕಾದ ಪೊಟ್ಯಾಷ್ ಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗಿಲ್ಲ. ಜತೆಗೆ ಸೂರ್ಯನ ಬೆಳಕು ಸಿಗದೇ ಸಸಿ ಬಳಲುತ್ತಿದೆ. ಎಲೆಗಳು ಅಗಲವಾಗಿ ಬೆಳೆಯದೇ ಉದ್ದಾದ ಚೂಪಾದ ಎಲೆಗಳಾಗಿ ಮೇಲ್ಮುಖವಾಗಿ ನಿಂತು ಸೂರ್ಯಕಿರಣಕ್ಕಾಗಿ ಕಾಯುತ್ತಿವೆ. ಉತ್ತಮ ಬೆಳಕಿಲ್ಲದೆ ಎಲೆಗಳು ಹಸಿರು ಕಳೆದುಕೊಂಡು ಹಳದಿಬಣ್ಣಕ್ಕೆ ತಿರುಗುತ್ತಿವೆ. ಎಲೆಗಳು ಕೂಡ ತೆಳುವಾಗಿದೆ. 3-4 ಅಡಿ ಬೆಳೆಯಬೇಕಾದ ಗಿಡಗಳು 2 ಅಡಿಗೆ ಸುಸ್ತಾಗುತ್ತಿವೆ.

ಪರಿಹಾರವೇನು?

ತಂಬಾಕು ಬೆಳೆಗಾರರು ಈಗಲೂ ಧೈರ್ಯಗೆಡಬೇಕಾಗಿಲ್ಲ. 10ಲೀಟರ್ ನೀರಿಗೆ 150 ಗ್ರಾಂ ಪೊಟ್ಯಾಷಿಯಂ ನೈಟ್ರೈಟ್ ಗೊಬ್ಬರ ಸಿಂಪಡಿಸಬೇಕು. ಇದರಿಂದ ಗಿಡದ ಬೆಳವಣಿಗೆ ಸಾಧ್ಯವಿದೆ. ಅಲ್ಲದೇ 40-50 ದಿನಗಳಾಗಿರುವ ಗಿಡಗಳನ್ನು ಕುಡಿ ಮುರಿಯುವ ಕಾರ್ಯ ಆರಂಭಿಸಬೇಕು. ಕುಡಿ ಮುರಿದ ನಂತರ ಮುಖ್ಯವಾಗಿ ಕಂಕುಳ ಕುಡಿ ನಿರ್ವಹಣೆ ಕಾರ್ಯಕೈಗೊಂಡಲ್ಲಿ ಇಳುವರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಉಳಿಸಿಕೊಳ್ಳಲು ಸಾಧ್ಯ.

ಕುಡಿ ನಿರ್ವಹಣೆ ಹೇಗೆ?

ಮೇಲ್ಭಾಗದ ಕುಡಿಗಳನ್ನು ಮೊದಲು ಮುರಿಯುವುದು ಕಡ್ಡಾಯ. ಮುರಿದ ಕುಡಿಗಳಿಗೆ ಸಕ್ಕರ್​ಔಟ್ ಶೇ.4 ಔಷಧ(40 ಎಂಎಲ್ ಔಷಧ ಒಂದು ಲೀಟರ್ ನೀರಿಗೆ)ವನ್ನು ಗಿಡದ ಮೇಲ್ಭಾಗದಿಂದಲೇ ಸಿಂಪಡಿಸಬೇಕು. ಇದರಿಂದಾಗಿ ಗಿಡದ ಬೆಳವಣಿಗೆ ಹೆಚ್ಚಲಿದೆ. ಎಲೆಗಳು ದಪ್ಪವಾಗಿ ಭಾರವಾಗಲಿದೆ. ಕ್ಯೂರಿಂಗ್ ಕೂಡ ಚೆನ್ನಾಗಿ ಆಗುವ ಮೂಲಕ ಗುಣಮಟ್ಟದ ಹೊಗೆಸೊಪ್ಪು ಸಿಗಲಿದೆ. ಹೇನುಕುರಿ ರೋಗ ಬಂದರೆ ಕಾನ್ಪಿಡಾರ್ ಕೀಟನಾಶಕ ಬಳಸುವುದು ಅಗತ್ಯ.

ರೈತರು ಈಗಲೂ ಹೆದರಬೇಕಾಗಿಲ್ಲ. ಮಳೆಯ ನಡುವೆ ಅಲ್ಲಲ್ಲಿ ಬಿಸಿಲು ಬೀಳುತ್ತಿದೆ. ಸ್ವಲ್ಪ ಹೆಚ್ಚಿನ ಬಿಸಿಲು ಬೆಳೆಗಳಿಗೆ ಬಿದ್ದರೆ ಯಾವ ತೊಂದರೆಯೂ ಆಗುವುದಿಲ್ಲ. ಇಷ್ಟು ದಿನ ಮಳೆ ಬಿದ್ದಿದ್ದೂ ಲೆಕ್ಕಕ್ಕೆ ಇಲ್ಲ. ಆದರೆ ಕಂಕುಳು ಕುಡಿ ನಿರ್ವಹಣೆ ಮುಂತಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಇದರಿಂದ ಇಳುವರಿ ತಾನೇ ತಾನಾಗಿ ಸರಿಯಾಗುತ್ತದೆ.

| ಡಾ.ಎಸ್.ರಾಮಕೃಷ್ಣನ್, ಮುಖ್ಯಸ್ಥ ಸಿಟಿಆರ್​ಐ, ಹುಣಸೂರು

Leave a Reply

Your email address will not be published. Required fields are marked *

Back To Top