Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಮಲೆನಾಡಿನಲ್ಲಿ ಅತಿ ಕಡಿಮೆ ಮಳೆ

Sunday, 13.08.2017, 3:00 AM       No Comments

ಬೆಂಗಳೂರು: ಮುಂಗಾರಿನಲ್ಲಿ ಹೆಚ್ಚು ಮಳೆ ಸ್ವೀಕರಿಸುವ ಮಲೆನಾಡಿನ ಜಿಲ್ಲೆಗಳಲ್ಲೇ ಪ್ರಸಕ್ತ ಮುಂಗಾರಿನಲ್ಲಿ ಕಳೆದ 13 ವರ್ಷದಲ್ಲೇ ಮಳೆ ಕೊರತೆಯಾಗಿದೆ. ಜೂ.1ರಿಂದ ಆ.12ರವರೆಗೆ ಮಲೆನಾಡಿನಲ್ಲಿ ವಾಡಿಕೆಯಂತೆ 1,139 ಮಿ.ಮೀ. ಮಳೆಯಾಗಬೇಕು. ಈ ಬಾರಿ ಕೇವಲ 765 ಮಿ.ಮೀ. ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆ.15 ಹಾಗೂ 16ರಂದು ಮತ್ತು ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲೂ ಆ.16,17ರಂದು ಭಾರಿ ಮಳೆ ಆಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.


ಮಳೆ ಭರ್ಜರಿ, ಅಲ್ಲಲ್ಲಿ ಕಿರಿಕಿರಿ

ಕೂಡ್ಲಿಗಿ(ಬಳ್ಳಾರಿ): ತಾಲೂಕಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಕೊಟ್ಟೂರು-ಬಣವಿಕಲ್ಲು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕೊಚ್ಚಿಹೋಗಿದೆ. ರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿದ್ದ ಸುಮಾರು 64 ಕ್ವಿಂಟಾಲ್ ಪಡಿತರ ಅಕ್ಕಿ ಹಾಳಾಗಿದೆ. ಕೂಡ್ಲಿಗಿ ತಾಲೂಕು ಉಜ್ಜಯಿನಿ ಗ್ರಾಮದ ಸದ್ಧರ್ಮ ಪೀಠದ ಮಾಚಿನಾಯಕನ ಕೆರೆಯ ಒಂದು ಭಾಗದಲ್ಲಿ 10 ಅಡಿಗಳಷ್ಟು ಬೋಂಗಾ ಬಿದ್ದ ಪರಿಣಾಮ ನೀರು ಖಾಲಿಯಾಗಿದೆ.


ಮಳೆ ಕೊರತೆ, ಬಿತ್ತನೆ ಹಿನ್ನಡೆ

| ವೆಂಕೋಬಿ ಸಂಗನಕಲ್ಲು

ಹೊಸಪೇಟೆ: ಸತತ ಬರ ಎದುರಿಸುತ್ತಿರುವ ಜಿಲ್ಲೆಯ ಮೇಲೆ ಈ ಬಾರಿಯೂ ವರುಣ ಅವಕೃಪೆ ತೋರಿದ್ದಾನೆ. ಬಿತ್ತನೆ ಕಾರ್ಯ ಕುಸಿತ ಕಂಡಿದೆ. ಕಳೆದ ವರ್ಷ ನಿಗದಿತ ಗುರಿಯಲ್ಲಿ ಶೇ.70 ಬಿತ್ತನೆಯಾಗಿದ್ದ ಜಿಲ್ಲೆಯಲ್ಲಿ ಈಗ ಶೇ.45 ಮಾತ್ರ ಬಿತ್ತನೆಯಾಗಿದ್ದು, ಕಾಲುವೆಗಳಿಗೆ ನೀರು ಹಾಗೂ ಇನ್ನಷ್ಟು ಮಳೆ ಸುರಿಯುವುದನ್ನೇ ರೈತರು ಕಾಯುತ್ತಿದ್ದಾರೆ.

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗದ ಕಾರಣ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಪರಿಣಾಮ ಎಲ್​ಎಲ್​ಸಿ, ಎಚ್​ಎಲ್​ಸಿಗೆ ನೀರು ಹರಿಸಲಾಗಿಲ್ಲ. ಇದರಿಂದ ಭತ್ತ ನಾಟಿಗೆ ಹಿನ್ನಡೆಯಾಗಿದೆ. 54 ಸಾವಿರ ಹೆಕ್ಟೇರ್ ನಿಗದಿತ ಗುರಿಯಲ್ಲಿ ಈವರೆಗೂ ಕೇವಲ 2,800 ಹೆಕ್ಟೇರ್​ನಲ್ಲಿ ಕೂರಿಗೆ (ಮಿತನೀರಿಗೆ ಬೆಳೆಯುವ) ಭತ್ತ ಬಿತ್ತನೆಯಾಗಿದ್ದು, ಹಳೇ ಪದ್ಧತಿಯಂತೆ ಅಂದಾಜು 50 ರಿಂದ 100 ಎಕರೆಯಲ್ಲಿ ನಾಟಿ ಮಾಡಲಾಗಿದೆ. ಅಲ್ಲದೇ, ಈ ಬಾರಿ ಭತ್ತದ ಸಸಿ ಮಡಿಗಳ ಪ್ರಮಾಣವೂ ಕಡಿಮೆಯಾಗಿದೆ.

ಎಲ್​ಎಲ್​ಸಿ, ಎಚ್​ಎಲ್​ಸಿ ಆಶ್ರಿತ ಹೊಸಪೇಟೆ ತಾಲೂಕಿನ ಕಂಪ್ಲಿ, ಬಳ್ಳಾರಿ ತಾಲೂಕು, ಸಂಡೂರು ತಾಲೂಕಿನ ತೋರಣಗಲ್, ಸಿರಗುಪ್ಪ ತಾಲೂಕಿನ ಹಚ್ಚೊಳ್ಳಿ, ತೆಕ್ಕಲಕೋಟೆ, ಕರೂರು ಗ್ರಾಮಗಳಲ್ಲಿ ಪ್ರತಿ ವರ್ಷ ಇಷ್ಟೊತ್ತಿಗೆ ಭತ್ತ ನಾಟಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ನೀರಿನ ಕೊರತೆ ಎದುರಾಗಿರುವುದರಿಂದ ಹಸಿರಿನಿಂದ ಕಂಗೊಳಿಸಬೇಕಾದ ಜಮೀನುಗಳು ಬೀಳು ಬಿದ್ದಿವೆ.

ಬರದಿಂದ ಬೋರ್​ವೆಲ್​ಗಳಲ್ಲಿಯೂ ನೀರಿನ ಪ್ರಮಾಣ ಕುಸಿತ ಕಂಡಿದೆ. ಲಭ್ಯವಾದ ಅಲ್ಪ ಸ್ವಲ್ಪ ನೀರಿನಲ್ಲಿಯೇ ರೈತರು ಭತ್ತ ನಾಟಿ ಮಾಡಿದರೂ, ನೀರಿಲ್ಲ. ಹೀಗಾಗಿ ಕೆಲವೆಡೆ ರೈತರು ಮಿತ ನೀರಾವರಿ ಬೆಳೆಗಳಾದ ಹತ್ತಿ, ಮೆಣಸಿನಕಾಯಿ, ಶೇಂಗಾ ಬಿತ್ತನೆ ಮಾಡಲಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಪ್ರಸಕ್ತ ವರ್ಷ ಕೃಷಿ ಇಲಾಖೆ ಒಟ್ಟು 3.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಈ ಪೈಕಿ ಭತ್ತ (ಕೂರಿಗೆ ಬಿತ್ತನೆ) 2,800 ಹೆಕ್ಟೇರ್, ಹತ್ತಿ 25 ಸಾವಿರ ಹೆಕ್ಟೇರ್, ಶೇಂಗಾ 35 ಸಾವಿರ ಹೆಕ್ಟೇರ್, ಮುಸುಕಿನ ಜೋಳ 54 ಸಾವಿರ ಹೆಕ್ಟೇರ್ ಸೇರಿ ಶೇ.45 ಬಿತ್ತನೆಯಾಗಿದೆ. ಇನ್ನು ಶೇ.55 ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿದೆ.

***

ಪರಿಹಾರ ಕ್ರಮಗಳು ನನೆಗುದಿಗೆ

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಆತಂಕದ ಜತೆಗೆ ನದಿಯ ಹರಿವು ಕಡಿಮೆಯಾಗಿರುವುದು ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ. ಹೂಳಿನ ಸಮಸ್ಯೆಗೆ ಪರಿಹಾರವಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಬಳಿ ಸಮತೋಲನ ಜಲಾಶಯ ನಿರ್ಮಾಣ ಭರವಸೆ ಹಂತದಲ್ಲೇ ಉಳಿದಿದೆ. ನದಿ ಹರಿವು ಹೆಚ್ಚಿಸುವುದಕ್ಕೆ ಪಶ್ಚಿಮವಾಹಿನಿ ನದಿಗಳ ತಿರುವು ಯೋಜನೆ ರೂಪಿಸಬೇಕೆಂಬ ಕೂಗು ಬಲವಾಗಿದೆ. ಅಲ್ಲದೇ, ನದಿ ಪಾತ್ರದುದ್ದಕ್ಕೂ ಆಯ್ದ ಸ್ಥಳಗಳಲ್ಲಿ ಸಮತೋಲನ ಜಲಾಶಯಗಳ ನಿರ್ಮಾಣ ಹಾಗೂ ಕೆರೆಗಳ ಭರ್ತಿ ಕಾರ್ಯಗಳಿಗೆ ಒತ್ತು ನೀಡಬೇಕೆಂಬುದು ಈ ಭಾಗದ ರೈತರ ಒತ್ತಡ.

***

ತುಂಗಭದ್ರಾ ಡ್ಯಾಮ್ೆ ಒಳ ಹರಿವು ಕುಸಿತ

ತುಂಗಭದ್ರಾ ಜಲಾಶಯದಲ್ಲಿ ಆ.12ಕ್ಕೆ ಒಟ್ಟು 48.433 ಟಿಎಂಸಿ ನೀರು ಸಂಗ್ರಹವಿದ್ದು, ಒಳಹರಿವು ದಿನೇದಿನೆ ಕುಸಿಯುತ್ತಿದೆ. ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದ ಕಾರಣ ಸದ್ಯ ಇರುವ ನೀರನ್ನು ಮೂರು ಜಿಲ್ಲೆಗಳ ಒಂದು ಬೆಳೆಗೆ ಹರಿಸುವುದೂ ಕಷ್ಟವಾಗಲಿದೆ. ಜೂನ್​ನಲ್ಲಿ 18 ಮಿಮೀ, ಜುಲೈನಲ್ಲಿ 33 ಮಿಮೀ, ಆಗಸ್ಟ್​ನಲ್ಲಿ 31 ಮಿಮೀ ಮಳೆಯಾಗಿದ್ದು, ಇನ್ನೂ ಎರಡ್ಮೂರು ದೊಡ್ಡ ಮಳೆಯಾಗಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

***

ಕಳೆದ ವರ್ಷ ಈ ಹೊತ್ತಿಗೆ ಶೇ.70 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಕಾಲುವೆಗಳಿಗೆ ನೀರು ಹರಿಸಿದರೆ ಬಿತ್ತನೆ ಪ್ರಮಾಣ ಇನ್ನಷ್ಟು ಹೆಚ್ಚಲಿದೆ.

| ಶರಣಪ್ಪ ಮುದಗಲ್ ಜಂಟಿ ನಿರ್ದೇಶಕರು, ಕೃಷಿ ಇಲಾಖೆ

Leave a Reply

Your email address will not be published. Required fields are marked *

Back To Top