Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಮರಗಳ ರಕ್ಷಣೆಯೇ ನಮ್ಮ ಸಂರಕ್ಷಣೆ

Saturday, 23.09.2017, 3:00 AM       No Comments

ತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆಯಲ್ಲಿ ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 150 ಬೃಹತ್ ಮರಗಳು ಬಿದ್ದಿದ್ದು ಪತ್ರಿಕೆಯಲ್ಲಿ ಓದಿ ಮನಸ್ಸಿಗೆ ವಿಪರೀತ ನೋವಾಯಿತು. ಮರ ಬೆಳೆಯಲು ನೀರು ಅತ್ಯವಶ್ಯಕ. ಆದರೆ ಅವು ಧರೆಗೆ ಉರುಳಲೂ ನೀರೇ ಕಾರಣವೇ?! ಎಂಥ ವಿಪರ್ಯಾಸವೆಂದು ಯೋಚಿಸುತ್ತಿದ್ದಂತೆ ನನಗೆ ಹಳೆಯ ಒಂದು ಕತೆ ನೆನಪಾಯಿತು. ಇಬ್ಬರು ಅಕ್ಕಪಕ್ಕದ ಮನೆಯವರು ಒಂದೇ ದಿನ ಸಸಿ ತಂದು ತಮ್ಮ ಮನೆ ಅಂಗಳದಲ್ಲಿ ನೆಟ್ಟರು. ಒಬ್ಬ ಮರಕ್ಕೆ ಯಥೇಚ್ಛ ನೀರು ಹಾಕುತ್ತಿದ್ದ. ಇನ್ನೊಬ್ಬ ಕೇವಲ ಸಸಿ ಬೆಳೆಯಲು ಎಷ್ಟು ಬೇಕೋ ಅಷ್ಟನ್ನೇ ಮಿತವಾಗಿ ಹಾಕುತ್ತಿದ್ದ. ಭರಪೂರ ನೀರು ಹಾಕಿದವನ ಮರ ಕೆಲವೇ ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆಯಿತು. ಆದರೆ ಮಿತವಾಗಿ ನೀರು ಹಾಕುತ್ತಿದ್ದವನ ಮರ ಚಿಕ್ಕದಾಗಿದ್ದರೂ ಚೆನ್ನಾಗಿಯೇ ಇತ್ತು. ಒಂದು ರಾತ್ರಿ ಭಯಂಕರ ಸುಂಟರಗಾಳಿ ಬಂದಾಗ ಮನೆಯ ಹೊರಗಡೆ ‘ಧೊಪ್’ ಅಂತ ಬಿದ್ದ ಶಬ್ದ ಕೇಳಿ ಇಬ್ಬರೂ ಹೊರಬಂದು ನೋಡಿದರೆ- ಬೃಹದಾಕಾರ

ವಾಗಿ ಬೆಳೆದಿದ್ದ ಮರ ಬುಡಮೇಲಾಗಿ ಬಿದ್ದಿತ್ತು, ಮಿತವಾಗಿ ನೀರು ಹಾಕಿದವನ ಮರದ ರೆಂಬೆ-ಕೊಂಬೆ ಗಾಳಿಗೆ ತೂರಾಡಿದರೂ ಭದ್ರವಾಗಿಯೇ ನಿಂತಿತ್ತು!

ಇದಕ್ಕೆ ಕಾರಣವೆಂದರೆ, ಮೇಲಿಂದ ನೀರು ಸಿಗದಿದ್ದಾಗ ಬೇರುಗಳು ಆಳವಾಗಿ ಹೋಗುತ್ತವೆ, ಅಂಥ ಮರ ಬೀಳುವುದಿಲ್ಲ. ಆದರೆ ಯಾವ ಮರದ ಬೇರುಗಳು ಆಳಕ್ಕೆ ಹೋಗುವುದಿಲ್ಲವೋ, ಅವು ಮಳೆಗೆ ಸಡಿಲವಾಗಿ ಗಾಳಿಗೆ ಕಾಂಡ ಬಗ್ಗದೇ ಇರುವುದರಿಂದ ಮರ ಬೇರುಸಮೇತ ಬುಡಮೇಲಾಗುತ್ತದೆ. ಬೆಂಗಳೂರಿನಂಥ ಶಹರದಲ್ಲಿ ಜನರು ದೊಡ್ಡ ದೊಡ್ಡ ರೆಂಬೆಗಳನ್ನು ಕಡಿದು ಮರದ ಸಮತೋಲನ ತಪು್ಪವಂತೆ ಮಾಡಿರುತ್ತಾರೆ. ಸಾಮಾನ್ಯವಾಗಿ ರೆಂಬೆಗಳ ವಿಸ್ತಾರಕ್ಕಿಂತ ಒಂದು-ಎರಡೂವರೆ ಪಟ್ಟು ಬೇರು ಅಗಲವಾಗಿ ಪಸರಿಸಿರುತ್ತವೆ. ಆದರೆ ಶಹರದಲ್ಲಿ ಮನೆ ಕಟ್ಟುವವರು ಅಡಿಪಾಯಕ್ಕೆಂದು ಮಧ್ಯ ಬಂದ ಬೇರುಗಳನ್ನು ಕಡಿಯುತ್ತಾರೆ. ಇದರಿಂದ ಪಾಪ ಆ ಮರ ಭದ್ರತೆಯನ್ನು ಕಳೆದುಕೊಳ್ಳುತ್ತದೆ. ಇದಲ್ಲದೆ ಎರಡೂ ಕಡೆಗೆ ಕಟ್ಟಡ ಇದ್ದಾಗ ಆ ಮರ ಅಡ್ಡಡ್ಡ ಬೆಳೆಯದೇ ಉದ್ದ ಬೆಳೆಯುತ್ತದೆ. ಈ ಎಲ್ಲ ಕಾರಣದ ಜತೆಗೆ ಮರದ ಕಾಂಡ ಪೊಳ್ಳಾಗಿದ್ದರೆ ಆ ಮರ ಮಳೆಗಾಳಿಗೆ ಬೀಳುವುದು ಗ್ಯಾರಂಟಿ!

ಹಾಗಾದರೆ ನಾವೇನು ಮಾಡಬೇಕು? ಆದಷ್ಟು ಕಡಿಮೆ ನೀರಲ್ಲಿ ಆಳವಾಗಿ ಬೇರೂರುವ ಬೇವಿನ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಕಡಿಮೆ ಮಳೆ ಆಗಿ ಬರಗಾಲ ಬಂದರೂ ಬೇವಿನ ಮರ ಒಣಗುವುದಿಲ್ಲ. ಕಾರಣ ಅದರ ಬೇರುಗಳು ಆಳವಾಗಿದ್ದು ಅಂತರ್ಜಲದಿಂದ ನೀರು ಪಡೆಯುತ್ತವೆ. ಬಿರುಗಾಳಿಗೆ ಮತ್ತು ಮಳೆಗೆ ನೆಲಕ್ಕುರುಳಿ ಮನೆ, ಕಾರುಗಳಿಗೆ ಹಾನಿಮಾಡುವುದಿಲ್ಲ. ಬೇವು ಉತ್ತಮ ಕೀಟನಾಶಕವಾದ್ದರಿಂದ, ಕೀಟಗಳ ಭಯ ಕಡಿಮೆಯಾಗುತ್ತದೆ. ಅದಲ್ಲದೆ, ಇತರ ಮರಗಳಿಗಿಂತ ಹೆಚ್ಚು ಪ್ರಾಣವಾಯುವನ್ನು ನಮಗೆ ಕೊಡುತ್ತದೆ. ಆದ್ದರಿಂದ ಊರಲ್ಲಿ ರಸ್ತೆಬದಿಗಳಲ್ಲಿ ಬೇವಿನಮರ ಬೆಳೆಸುವುದು ಹೆಚ್ಚು ಆರೋಗ್ಯಕರ ಮತ್ತು ಉತ್ತಮ. ಕಾರಣ, ಇತರ ಗಿಡಗಳಂತೆ ಬೇವಿನ ಮರ ಎಲೆ ಉದುರಿಸಿ ಕೊಳೆ ಮಾಡುವುದಿಲ್ಲ. ಈಗ ಪೌರ ಕಾರ್ವಿುಕರು ಉದುರಿದ ಎಲೆ ಗುಡಿಸಿ ಬೆಂಕಿಹಚ್ಚಿ ವಾಯುಮಾಲಿನ್ಯ ಮಾಡುವುದನ್ನೂ ತಡೆಗಟ್ಟಬಹುದು. ವಾಯುಮಾಲಿನ್ಯ ಅಂದರೆ ನಮಗೆ ನೆನಪಾಗುವುದು ಮನೆ ಅಂಗಳದಲ್ಲಿಯ ತುಳಸಿ. 8-10 ತುಳಸಿಯನ್ನು ಪ್ರತಿ ಮನೆಯವರೂ ಬೆಳೆಸಿದರೆ ರೋಗಾಣು, ವೈರಾಣುಗಳ ನಿಯಂತ್ರಣವಾಗಿ ಹವೆ ಶುದ್ಧವಾಗುತ್ತದೆ. ರಾತ್ರಿ ಕೂಡ ಪ್ರಾಣವಾಯು ಉತ್ಪತ್ತಿ ಮಾಡುವ ತುಳಸಿ ಅತ್ಯಂತ ಆರೋಗ್ಯಕರ.

ತುಳಸಿ ಅಷ್ಟೇ ಅಲ್ಲ, ಇತರ ಮರಗಳ ಮಹತ್ವವನ್ನೂ ನಮ್ಮ ಪೂರ್ವಜರು ಹರಿವಂಶ ಪುರಾಣದಲ್ಲಿ ತಿಳಿಸಿದ್ದಾರೆ. ಒಂದು ಸಲ ಕೃಷ್ಣ ಪರಮಾತ್ಮ ತನ್ನ ಮಿತ್ರರೊಂದಿಗೆ ಮಾತನಾಡುತ್ತ ತಿಳಿಸುತ್ತಾನೆ- ‘ಅತ್ಯಂತ ಸುಂದರವಾದ ಹಸಿರುವನ, ಸರೋವರ, ಪಕ್ಷಿಗಳ ಕಲರವ ಇದ್ದ ಸ್ಥಳ ಹೇಗಾಗಿದೆ ನೋಡಿ? ಮರ ಕಡಿದು ಮನೆ ಕಟ್ಟುವುದರಿಂದ ಕೇಡಾಗುತ್ತದೆ ಎಂದು ಅರಿಯಬೇಕು. ಮರ ಕಡಿಯುವುದು ಅತ್ಯಂತ ಅವಶ್ಯಕವಾಗಿದ್ದರೆ ಕಡಿದ ಮರದ ಬದಲು 10 ಮರ ಬೆಳೆಸಬೇಕು’. ಇದಲ್ಲದೆ ದೇವಿ ಭಾಗವತದಲ್ಲಿ ಒಬ್ಬ ಋಷಿ ಹೇಳುತ್ತಾರೆ- ‘ನಿಮಗೆ ನಿಮ್ಮ ಮಕ್ಕಳಿಂದ ಸದ್ಗತಿ ಸಿಗುತ್ತದೋ ಇಲ್ಲವೋ, ಆದರೆ ಪರೋಪಕಾರಿ ಮರವನ್ನು ಬೆಳೆಸಿದರೆ ಸದ್ಗತಿ ಖಂಡಿತ ಸಿಗುತ್ತದೆ’. ಆದ್ದರಿಂದ ಸರ್ಕಾರ ಕೃಷ್ಣ ಹೇಳಿದಂತೆ ಒಂದು ಮರ ಕಡಿದರೆ 10 ಸಸಿ ನೆಡುವುದನ್ನು ಕಡ್ಡಾಯ ಮಾಡಬೇಕು. ಎಲ್ಲ ಕುಟುಂಬದವರು ‘ನಾವಿಬ್ಬರು ನಮಗಿಬ್ಬರು’ ಅನ್ನುವ ಜತೆಗೆ ‘ನಾವಿಬ್ಬರು ನಮಗೆರಡು ಮರಗಳು’ ಎಂದು ಬೆಳೆಸಿದ್ದೇ ಆದರೆ 125 ಕೋಟಿ ಜನಸಂಖ್ಯೆಯ ದೇಶದಲ್ಲಿ 250 ಕೋಟಿ ಮರಗಳನ್ನು ಬೆಳೆಸಬಹುದು.

ಸ್ಕಂದ ಪುರಾಣದಲ್ಲಿ ಪರಮೇಶ್ವರ ಪಾರ್ವತಿಗೆ ಹೇಳುತ್ತಾನೆ- ‘‘ಹೇ ಪಾರ್ವತಿ, ಪ್ರತಿ ವೃಕ್ಷದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ. ‘ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣಿ, ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ’ ಎಂದು ನಮಸ್ಕರಿಸುತ್ತಾರೆ. ಅಂದರೆ ಮರದ ಬೇರಿನಲ್ಲಿ ಬ್ರಹ್ಮ, ಕಾಂಡದಲ್ಲಿ ವಿಷ್ಣು ಮತ್ತು ರೆಂಬೆ-ಕೊಂಬೆ, ಫಲ-ಪುಷ್ಪಗಳಲ್ಲಿ ಶಿವನನ್ನು ಕಾಣುತ್ತಾರೆ. ಹಾಗಾಗಿ ತ್ರಿಮೂರ್ತಿಗಳ ದರ್ಶನವಾಗಬೇಕೆಂದರೆ ನಾವು ಮರಗಳನ್ನು ಬೆಳೆಸಬೇಕೇ ಹೊರತು ಕಡಿಯಬಾರದು. ಹೀಗೆ ಮರದಲ್ಲಿ ತ್ರಿಮೂರ್ತಿಗಳನ್ನು ಕಂಡಿದ್ದೇ ಆದಲ್ಲಿ ಎಂಥವರೂ ಮರ ಕಡಿಯಲು ಮುಂದಾಗುವುದಿಲ್ಲ. ಆದ್ದರಿಂದ ಮಕ್ಕಳಿದ್ದಾಗಲೇ ನಾವು ಅವರ ಪುಟ್ಟ ಮನಸ್ಸಿನಲ್ಲಿ ಮರದ ಬಗ್ಗೆ ಪ್ರೀತಿ-ಗೌರವ ತುಂಬಬೇಕು. ಆಗ ಅವರಿಗೆ ಮರಗಳ ಬಗ್ಗೆ ಭಕ್ತಿ ಬಂದು, ಕಡಿದರೆ ಬ್ರಹ್ಮಹತ್ಯೆಗಿಂತಲೂ ಕೆಟ್ಟದು ಎಂದು ಮನದಟ್ಟಾದರೆ ಹಣದ ಆಸೆಗೆ ಮರ ಕಡಿಯುವುದು ತಕ್ಕಮಟ್ಟಿಗೆ ಕಡಿಮೆ ಆಗಬಹುದು. ನಮ್ಮ ಸಂಸ್ಕೃತಿ-ಪರಂಪರೆ ಉಳಿಸಲು ನಾವು ಯಾವುದೇ ಶುಭಕಾರ್ಯ ನಡೆಸುವ ಮೊದಲು ಅದರ ನೆನಪಿಗಾಗಿ ಒಂದೆರಡು ಸಸಿ ನೆಡುವ ಕಾರ್ಯ ಮಾಡಬೇಕು. ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಸಸಿ ನೆಟ್ಟುಬರುತ್ತೇನೆ. ಇತ್ತೀಚೆಗೆ ಗಂಗಾವತಿಗೆ ಕನ್ನಡ ಸಾಹಿತ್ಯದ ಕಾರ್ಯಕ್ರಮಕ್ಕೆ ಹೋದಾಗ ಸ್ನೇಹಿತರು ಬಂದು ಹೇಳಿದರು- ‘ಅಮ್ಮ, ಹತ್ತು ವರ್ಷದ ಹಿಂದೆ ನೀವು ನೆಟ್ಟ ಶ್ರೀಗಂಧದ ಸಸಿ ಇಂದು ನಮ್ಮ ಮನೆಗಿಂತ ಎತ್ತರವಾಗಿ ಬೆಳೆದಿದೆ’. ನೋಡಿದರೆ ಅವರ ಮಗಳಿಗಿಂತ ಮರವೇ ಎತ್ತರವಾಗಿ ಬೆಳೆದಿತ್ತು!

ಬೆಳೆಯುವುದು ಎಂದಾಗ ಮಕ್ಕಳೊಂದಿಗೆ ಮರ ಕೂಡ ಬೆಳೆದಾಗ ಅವರಿಗೆ ಒಂದು ಮಧುರ ಸಂಬಂಧ ಬೆಳೆಯುತ್ತದೆ. ಎಲ್ಲ ಗಿಡಗಳಿಗಿಂತ ಬೊಂಬು ಅಥವಾ ಬಿದಿರು ತುಂಬ ಬೇಗ ಬೆಳೆಯುತ್ತದೆ. ಒಂದು ತಳಿಯ ಬಿದಿರು ದಿನವೊಂದಕ್ಕೆ ಮೂರು ಅಡಿ ಬೆಳೆಯುತ್ತದೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಬಿದಿರಿನ ವಿಶೇಷವೆಂದರೆ ಪ್ರತಿ 3-5 ವರ್ಷಕ್ಕೆ ನಾವು ಅದನ್ನು ಕತ್ತರಿಸಿ, ಬಾಗಿಲು, ಕುರ್ಚಿ, ಮೇಜು, ನೆಲ ಮಾಡಲು ಬಳಸಬಹುದು! ಬೆತ್ತವು ಸ್ಟೀಲ್​ಗಿಂತ ಗಟ್ಟಿ ಎನ್ನುವುದು ಹಲವರಿಗೆ ಗೊತ್ತಿಲ್ಲ. ಮಿಕ್ಕ ಮರದ ಕಟ್ಟಿಗೆ ಮಣಿಯುವುದಿಲ್ಲ ಮುರಿಯುತ್ತದೆ. ಆದರೆ ಬೆತ್ತ ಮಣಿಯುತ್ತದೆ. ಆದ್ದರಿಂದ ಆಕರ್ಷಕ ಕಲಾಕಾರಿ ಅಲಂಕಾರ ಮಾಡಬಹುದು. ಅಷ್ಟೇ ಅಲ್ಲ, ನದಿ ದಂಡೆಯಲ್ಲಿ ಬೆಳೆಸಿದರೆ ಭೂಮಿಸವೆತ ಕೂಡ ತಡೆಯಬಹುದು. ನಮ್ಮ ವಾಯುವಿಹಾರದ ತೋಟದಲ್ಲಿ ಬೆಳೆಸಿದ್ದೇ ಆದರೆ ಶುದ್ಧ ಪ್ರಾಣವಾಯು ಸಿಗುತ್ತದೆ. ಕಾರಣ ಬಿದಿರು ಇಂಗಾಲದ ಡೈಯಾಕ್ಸೆ ೖಡ್ ಅನ್ನು ಇಂಗಿಸಿಕೊಂಡು ಶೇ. 35ರಷ್ಟು ಹೆಚ್ಚು ಪ್ರಾಣವಾಯುವನ್ನು ಕೊಡುತ್ತದೆ. ಆದ್ದರಿಂದ ನೀರು ಹೆಚ್ಚು ಖರ್ಚಾಗದೆ, ಮರ ಬಿದ್ದು ನಾಶವಾಗದೆ ನಮಗೆ ಹೆಚ್ಚು ಪ್ರಾಣವಾಯು ಕೊಡುವ, ಔಷಧ ಗುಣವಿರುವ ಬೇವು, ಬೆತ್ತ ಬೆಳೆಸಲು ಮುಂದಾಗಬೇಕು.

ಪ್ರಾಣವಾಯುವಿಲ್ಲದೆ ನಾವು ಕೇವಲ 3 ನಿಮಿಷ ಬದುಕಬಹುದು. ನಮ್ಮ ಪ್ರಾಣಕ್ಕೆ ಪ್ರಾಣವಾಯು ಪ್ರಮುಖ. ಜಗತ್ತಿಗೆ ಪ್ರಾಣವಾಯು ಸರಬರಾಜು ಮಾಡುವುದೇ ಮರಗಳು. ಒಂದು ಸಲ ಕಾಲೇಜಿನ ಎನ್​ಎಸ್​ಎಸ್ ಕಾರ್ಯಕ್ರಮಕ್ಕೆ ಹಳ್ಳಿಗೆ ಹೋದಾಗ ನಾನು ಸಂವಾದ ಮಾಡುತ್ತ ಹುಡುಗಿಯರಿಗೆ ಕೇಳಿದೆ- ‘ಮರಕ್ಕೂ ಮನುಷ್ಯರಿಗೂ ಏನು ವ್ಯತ್ಯಾಸ?’. ಆಗ ಒಬ್ಬ ಹುಡುಗಿ- ‘ಮನುಷ್ಯರು ಉಸುರಿನಲ್ಲಿ ಪ್ರಾಣವಾಯು ತೆಗೆದುಕೊಂಡು ಇಂಗಾಲದ ಡೈಯಾಕ್ಸೆ ೖಡ್ ಅನ್ನು ಹೊರಗೆ ಬಿಡುತ್ತೇವೆ. ಆದರೆ ಮರಗಳು ಇಂಗಾಲದ ಡೈಯಾಕ್ಸೆ ೖಡ್ ಅನ್ನು ತೆಗೆದುಕೊಂಡು ಪ್ರಾಣವಾಯುವನ್ನು ಉತ್ಪತ್ತಿಗೊಳಿಸಿ ನಮಗೆ ಕೊಡುತ್ತವೆ’ ಅಂದಳು. ನಿಜ ಈ ಉತ್ತರಕ್ಕೆ ಯಾವ ಶಿಕ್ಷಕರಾದರೂ ಪೂರ್ತಿ ಅಂಕ ಕೊಡುತ್ತಾರೆ. ಆದರೆ ಪಕ್ಕದಲ್ಲಿ ಕುಳಿತ ಹಳ್ಳಿಯ ಮಕ್ಕಳ ಉತ್ತರ ಕೇಳಿ ನಾನು ಸ್ತಂಭೀಭೂತಳಾದೆ! ಒಬ್ಬ ಹುಡುಗ, ‘ಅಕ್ಕಾ ಅಕ್ಕಾ, ನಾವು ಮನುಷ್ಯರು ಮಾತನಾಡುತ್ತೇವೆ. ಆದರೆ ಮರಗಳು ಮೌನವಾಗಿರುತ್ತವೆ ಅಕ್ಕಾ’ ಎಂದ. ನಿಜ, ಎಂಥ ವ್ಯತ್ಯಾಸ. ನಾವು ಮಾತನಾಡುತ್ತೇವೆ. ಕೆಲವು ಸಲ ಇತರರಿಗೆ ಚುಚ್ಚಿ ಮಾತನಾಡಿ ಮನನೋಯಿಸುತ್ತೇವೆ. ಆದರೆ ಮರಗಳು ಮೌನವಾಗಿ ನಿಂತು ಕಡಿದ ಮೇಲೆ ಕೂಡ ತೊಲೆಯಾಗಿ ಕಂಬವಾಗಿ ಭಾರಹೊತ್ತು, ನಮ್ಮ ಮನೆಯ ಕಿಟಕಿ-ಬಾಗಿಲುಗಳಾಗಿ ನೂರಾರು ವರ್ಷ ನಾವು ಸತ್ತ ಮೇಲೂ ಇರುತ್ತವೆ! ಎಂಥ ಅದ್ಭುತ ವ್ಯತ್ಯಾಸವೆಂದು ಯೋಚಿಸುತ್ತಿದ್ದಂತೆ ಇನ್ನೊಂದು ಮಗು, ‘ಅಕ್ಕಾ, ನಾವು ನಡೆಯುತ್ತೇವೆ, ಓಡುತ್ತೇವೆ. ಆದರೆ ಮರಗಳು ನಿಂತಲ್ಲೇ ನಿಲ್ಲುತ್ತವೆ’ ಎಂದಿತು! ನಾನು ‘ಭೇಷ್ ಕಣೋ’ ಎಂದು ಬೆನ್ನುತಟ್ಟುತ್ತ ಯೋಚಿಸಿದೆ- ‘ಹೌದು, ನಾವು ನಡೆಯುತ್ತೇವೆ, ಎಡವಿ ಬೀಳುತ್ತೇವೆ. ಓಡುವಾಗ ನಮಗಿಂತ ಮುಂದೆ ಓಡುತ್ತಿರುವವರಿಗೆ ಕಾಲುಕೊಟ್ಟು ಬೀಳಿಸುತ್ತೇವೆ. ಆದರೆ ಮರ ನಿಂತಲ್ಲೇ ನಿಂತು, ನೂರಾರು ಪಕ್ಷಿಗಳಿಗೆ ಗೂಡುಕಟ್ಟಲು ಬದುಕಲು ಆಶ್ರಯ ನೀಡುತ್ತದೆ. ಬಿಸಿಲಿಗೆ ಬಳಲಿ ಬಂದವರಿಗೆ ತಂಪಾದ ನೆರಳು-ನೆಮ್ಮದಿ ಕೊಡುತ್ತದೆ!’. ಅಷ್ಟೊತ್ತಿಗೆ ಮೂರನೇ ಮಗು, ‘ಅಕ್ಕಾ ನಾವು ಮರಕ್ಕೆ ಕಲ್ಲು ಎಸೆಯುತ್ತೇವೆ. ಆದರೆ ಮರ ನಮಗೆ ಹಣ್ಣು ಕೊಡುತ್ತದೆ’ ಎಂದನು. ಎಂಥ ಅಪರೂಪದ ಉತ್ತರ. ದೊಡ್ಡವರ ಮಂದಮತಿಗೆ ಹೊಳೆಯದ ಮರದ ನಿಸ್ವಾರ್ಥತೆಯನ್ನು ಆ ಮಗು ಉತ್ತರಿಸಿತ್ತು.

ನಿಜ, ನಾವು ಮರಗಳನ್ನು ಭಗವಂತನ ಸ್ವರೂಪ, ನಮ್ಮ ಪ್ರಾಣಕ್ಕೆ ಪ್ರಾಣವಾಯು ಕೊಡುವ ಪರಮಾತ್ಮನೆಂದು ರಕ್ಷಿಸಿದರೆ, ಮರಗಳು ಜಗತ್ತಿನ ಜನರಿಗೆ ಪ್ರಾಣವಾಯು ಕೊಟ್ಟು ನಮ್ಮ ಸಂರಕ್ಷಣೆ ಮಾಡುತ್ತವೆ. ಇಂದು ‘ಗ್ಲೋಬಲ್ ವಾರ್ವಿುಂಗ್’ನಿಂದ ಜಗತ್ತು ಉಳಿಯಬೇಕೆಂದರೆ ಮರಗಳನ್ನು ಬೆಳೆಸಬೇಕು, ಉಳಿಸಬೇಕು.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

 

Leave a Reply

Your email address will not be published. Required fields are marked *

Back To Top