Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಮನೆಯಲ್ಲೇ ಮಲ್ಟಿಪ್ಲೆಕ್ಸ್!

Sunday, 23.07.2017, 3:00 AM       No Comments

| ಟಿ.ಜಿ. ಶ್ರೀನಿಧಿ

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಿವಿ ಇಟ್ಟುಕೊಳ್ಳುವುದು ಸಾಮಾನ್ಯ ಅಭ್ಯಾಸ. ರಿಮೋಟ್ ಕಂಟ್ರೋಲ್​ಗಾಗಿ ನಡೆಯುವ ಜಗಳ ಬಗೆಹರಿಸುವ ದೃಷ್ಟಿಯಿಂದ ಇದು ಅನುಕೂಲಕರ, ನಿಜ. ಆದರೆ ಇಲ್ಲಿ ಸಮಸ್ಯೆಗಳೂ ಇವೆ: ಟಿವಿಗಳನ್ನು ಬೇಕೆಂದಾಗ ಬೇಕಾದ ಕೋಣೆಗೆ ವರ್ಗಾಯಿಸಿಕೊಳ್ಳುವುದು ಕಷ್ಟ, ಹಾಗೆಂದು ಕೋಣೆಗೊಂದು ಟಿವಿ ಕೊಳ್ಳುವುದೂ ಕಷ್ಟ. ಮನೆಯಿಂದ ಹೊರಗೆಲ್ಲೋ ಹೋಗುವಾಗ ಜೊತೆಯಲ್ಲೇ ಟಿವಿಯನ್ನೂ ಕೊಂಡೊಯ್ಯಬಹುದೇ ಎನ್ನುವುದಂತೂ ತೀರಾ ಹಾಸ್ಯಾಸ್ಪದವೆನಿಸುವ ಪ್ರಶ್ನೆ.

ಇವೆಲ್ಲ ಸಮಸ್ಯೆಗಳ ಗೊಡವೆಯಿಲ್ಲದೆ ಕೋಣೆಯ ಗೋಡೆ-ಸೀಲಿಂಗುಗಳನ್ನೇ ಪರದೆಯನ್ನಾಗಿಸಿಕೊಂಡು ನಮಗೆ ಬೇಕಾದ್ದನ್ನು ವೀಕ್ಷಿಸಲು ನೆರವಾಗುವುದು ಪೊ›ಜೆಕ್ಟರುಗಳ ಹೆಗ್ಗಳಿಕೆ. ಈಗಾಗಲೇ ಇರುವ ಟಿವಿ ಜೊತೆಗೆ ಪೊ›ಜೆಕ್ಟರೂ ಸೇರಿದರೆ ಒಂದೇ ಕಟ್ಟಡದೊಳಗೆ ಹಲವು ಪರದೆಗಳಲ್ಲಿ ಚಿತ್ರ ಪ್ರದರ್ಶನ ಮಾಡುವ ಮಲ್ಟಿಪ್ಲೆಕ್ಸ್ ನಮ್ಮ ಮನೆಯಲ್ಲೇ ಸೃಷ್ಟಿಯಾಗಿಬಿಡುತ್ತದೆ.

ಶಾಲೆ, ಕಾಲೇಜು, ಕಚೇರಿಗಳಲ್ಲಿ ಪೊ›ಜೆಕ್ಟರುಗಳು ವ್ಯಾಪಕವಾಗಿ ಬಳಕೆಯಾಗುವುದು ನಮಗೆಲ್ಲ ಗೊತ್ತೇ ಇದೆ. ದೊಡ್ಡ ಗಾತ್ರ, ನಿರ್ವಹಣೆಯ ದುಬಾರಿ ವೆಚ್ಚ, ಬಿಸಿಯಾಗುವ ಬಿಡಿಭಾಗಗಳೇ ಮುಂತಾದ ಸಮಸ್ಯೆಗಳಿಂದ ಅವು ಬಳಲುವುದೂ ನಮ್ಮಲ್ಲಿ ಅನೇಕರಿಗೆ ಗೊತ್ತು. ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಪೊ›ಜೆಕ್ಟರುಗಳು ಈ ಸಮಸ್ಯೆಗಳನ್ನು ಬಹುಪಾಲು ಬಗೆಹರಿಸಿಕೊಂಡಿವೆ ಎನ್ನುವುದು ವಿಶೇಷ.

ಹೊಸ ತಲೆಮಾರಿನ ಈ ಪೊ›ಜೆಕ್ಟರುಗಳಿಗೆ ಕಂಪ್ಯೂಟರ್ ಅಷ್ಟೇ ಅಲ್ಲದೆ ಮೊಬೈಲ್, ಟ್ಯಾಬ್ಲೆಟ್, ಸೆಟ್ ಟಾಪ್ ಬಾಕ್ಸ್​ನಂತಹ ಇನ್ನಿತರ ಸಾಧನಗಳನ್ನೂ ಸುಲಭವಾಗಿ ಸಂರ್ಪಸಬಹುದು. ಕಡಿಮೆ ಕಾರ್ಯಕ್ಷಮತೆಯ ಬಲ್ಬುಗಳ ಬದಲು ಇವು ದೀರ್ಘಕಾಲ ಬಾಳುವ, ಪ್ರಖರವಾದ ಎಲ್​ಇಡಿ ದೀಪಗಳನ್ನು ಬಳಸುತ್ತವೆ. ಅನೇಕ ಮಾದರಿಗಳಲ್ಲಿ ಬ್ಯಾಟರಿಯೂ ಇರುವುದರಿಂದ ಸದಾಕಾಲ ವಿದ್ಯುತ್ ಸಂಪರ್ಕ ಇರಲೇಬೇಕೆಂಬ ಅನಿವಾರ್ಯತೆಯೂ ಇಲ್ಲ. ಇಷ್ಟರಮೇಲೆ ಇವುಗಳ ಗಾತ್ರವೂ ಸಾಮಾನ್ಯ ಪೊ›ಜೆಕ್ಟರುಗಳ ಹೋಲಿಕೆಯಲ್ಲಿ ಅನೇಕ ಪಟ್ಟು ಕಡಿಮೆಯಿರುತ್ತದೆ. ಹೀಗಾಗಿಯೇ ಇವನ್ನು ‘ಪೀಕೋ ಪೊ›ಜೆಕ್ಟರ್’ಗಳೆಂದು ಕರೆಯಲಾಗುತ್ತದೆ (ಪೀಕೋ = ಬಹಳ ಸಣ್ಣದು). ಮನೆ, ಶಾಲೆ, ಕಚೇರಿಗಳಲ್ಲಷ್ಟೇ ಅಲ್ಲದೆ ಹೊರಾಂಗಣದಲ್ಲೂ ಸುಲಭವಾಗಿ ಬಳಸಲು ಸಾಧ್ಯವಾಗುವುದು ಈ ಪೊ›ಜೆಕ್ಟರುಗಳ ಹೆಚ್ಚುಗಾರಿಕೆ.

ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಗಳು ಈಗಾಗಲೇ ಹಲವು ಮಾದರಿಯ ಪೀಕೋ ಪೊ›ಜೆಕ್ಟರುಗಳನ್ನು ಭಾರತೀಯ ಮಾರುಕಟ್ಟೆಗೂ ಪರಿಚಯಿಸಿವೆ. ಏಸುಸ್ ಸಂಸ್ಥೆ ಈಚೆಗೆ ಬಿಡುಗಡೆ ಮಾಡಿರುವ ’ಜೆನ್​ಬೀಮ್ ಗೋ ಇ1ಜೆಡ್’ ಇಂತಹ ಮಾದರಿಗಳಲ್ಲೊಂದು. ಸಣ್ಣಗಾತ್ರ ಹಾಗೂ ಕಡಿಮೆ ತೂಕದ (ಸುಮಾರು 300 ಗ್ರಾಮ್ ಈ ಪೊ›ಜೆಕ್ಟರಿಗೆ ಕಂಪ್ಯೂಟರ್, ಮೊಬೈಲ್ ಹಾಗೂ ಟ್ಯಾಬ್ಲೆಟ್​ಗಳನ್ನು ಯುಎಸ್​ಬಿ ಮೂಲಕ ಸುಲಭವಾಗಿ ಸಂರ್ಪಸಬಹುದು. 6000 ಎಂಎಎಚ್ ಬ್ಯಾಟರಿ ಇರುವುದರಿಂದ ವಿದ್ಯುತ್ ಸಂಪರ್ಕವಿಲ್ಲದಾಗಲೂ ಚಿತ್ರಗಳನ್ನು ನೋಡಬಹುದು, ಅಗತ್ಯಬಿದ್ದರೆ ಮೊಬೈಲನ್ನೂ ಚಾರ್ಜ್ ಮಾಡಿಕೊಳ್ಳಬಹುದು. ಸ್ಪೀಕರ್ ಸೌಲಭ್ಯವೂ ಈ ಪೊ›ಜೆಕ್ಟರಿನೊಳಗೇ ಅಡಕವಾಗಿರುವುದು ವಿಶೇಷ. ಪರದೆಯಿಂದ ಮೂರು-ಮೂರೂವರೆ ಮೀಟರುಗಳಷ್ಟು ದೂರದಲ್ಲಿಟ್ಟಾಗ ನಮ್ಮ ಚಿತ್ರವನ್ನು 120 ಇಂಚಿನಷ್ಟು ದೊಡ್ಡ ಗಾತ್ರದಲ್ಲಿ ನೋಡುವುದು ಸಾಧ್ಯ!

ಯುಎಸ್​ಬಿ ಸಂಪರ್ಕ ಬಳಸುವ ’ಜೆನ್​ಬೀಮ್ ಗೋ’ನಂತಹ ಮಾದರಿಗಳಷ್ಟೇ ಅಲ್ಲದೆ ಎಚ್​ಡಿಎಂಐ ಸೌಲಭ್ಯವಿರುವ ಪೊ›ಜೆಕ್ಟರುಗಳೂ ಇವೆ. ಗೂಗಲ್ ಕ್ರೋಮ್ಾಸ್ಟ್​ನಂತಹ ಸಾಧನಗಳನ್ನು, ಎಚ್​ಡಿ ಸೆಟ್​ಟಾಪ್ ಬಾಕ್ಸ್​ಗಳನ್ನು ಸಂರ್ಪಸಲು ಅನುವುಮಾಡಿಕೊಡುವುದು ಇಂತಹ ಪೊ›ಜೆಕ್ಟರುಗಳ ವೈಶಿಷ್ಟ್ಯ ‘ಮಿರಾಕಾಸ್ಟ್’ನಂತಹ ತಂತ್ರಜ್ಞಾನಗಳ ನೆರವಿನಿಂದ ಮೊಬೈಲಿನೊಡನೆ ನಿಸ್ತಂತು ಸಂಪರ್ಕವನ್ನು ಸಾಧ್ಯವಾಗಿಸುವ ಪೊ›ಜೆಕ್ಟರುಗಳೂ ಇವೆ.

ಇಂತಹ ಪುಟ್ಟ ಪೊ›ಜೆಕ್ಟರುಗಳನ್ನು ಮೊಬೈಲ್ ಜೊತೆಗೆ ಸರಾಗವಾಗಿ ಬಳಸಬಹುದು ಎಂದಮೇಲೆ ಮೊಬೈಲಿನಲ್ಲೇ ಪೊ›ಜೆಕ್ಟರನ್ನೂ ಸೇರಿಸಿಬಿಡಬಹುದಲ್ಲ? ಇಂತಹ ಪ್ರಯತ್ನವನ್ನೂ ಹಲವು ಸಂಸ್ಥೆಗಳು ಮಾಡಿವೆ. ಮೋಟರೋಲಾ ಸಂಸ್ಥೆಯ ‘ಮೋಟೋ ಜೀ’ ಸರಣಿಯ ಫೋನುಗಳನ್ನು ಇಲ್ಲಿ ಉದಾಹರಿಸಬಹುದು. ’ಇನ್ಸ್ಟಾಶೇರ್ ಪೊ›ಜೆಕ್ಟರ್’ ಎಂಬ ಬಾಹ್ಯ ಘಟಕವನ್ನು (ಮಾಡ್) ಈ ಫೋನುಗಳ ಹಿಂಬದಿಗೆ (ಕವಚ ತೆರೆದು) ಜೋಡಿಸಿದರೆ ಆಯಿತು, ನಮ್ಮ ಮೊಬೈಲ್ ಫೋನೇ ಪೊ›ಜೆಕ್ಟರ್ ಆಗಿ ಬದಲಾಗಿಬಿಡುತ್ತದೆ.

ಇಷ್ಟೆಲ್ಲ ಬೆಳವಣಿಗೆಗಳಾಗಿದ್ದರೂ ಪೊ›ಜೆಕ್ಟರುಗಳು ಟಿವಿಗೆ ಪರ್ಯಾಯವಾಗಿ ಬೆಳೆಯುವ ಸನ್ನಿವೇಶ ಇನ್ನೂ ಬಂದಿಲ್ಲ ಎಂದೇ ಹೇಳಬೇಕು. ಟಿವಿ ಮನೆಯಲ್ಲೊಂದು ಕಡೆ ಸ್ಥಾವರರೂಪಿಯಾಗಿ ಇದ್ದುಬಿಟ್ಟರೆ ಸಾಕು ಎನ್ನುವುದರಿಂದ ಪ್ರಾರಂಭಿಸಿ ಪೊ›ಜೆಕ್ಟರನ್ನು ಜೋಡಿಸುವುದು – ಬೇರೆಬೇರೆ ಸಾಧನಗಳನ್ನು ಅದಕ್ಕೆ ಸಂರ್ಪಸುವುದೆಲ್ಲ ಕಿರಿಕಿರಿಯ ಸಂಗತಿ ಎನ್ನುವವರೆಗೆ ಇದಕ್ಕೆ ಹಲವು ಕಾರಣಗಳಿವೆ. ಟಿವಿಗಳ ಹೋಲಿಕೆಯಲ್ಲಿ ಪೊ›ಜೆಕ್ಟರುಗಳ ಬೆಲೆ ದುಬಾರಿಯಾಗಿರುವುದು ಹಾಗೂ ಬಹುತೇಕ ಪೊ›ಜೆಕ್ಟರುಗಳಿಂದ ಮೂಡಿಬರುವ ಚಿತ್ರದ ಗುಣಮಟ್ಟ ಟಿವಿ ಹೋಲಿಕೆಯಲ್ಲಿ ಕಡಿಮೆಯೇ ಎನ್ನಿಸುವುದು ಕೂಡ ಸತ್ಯ ಸಂಗತಿಗಳೇ.

ಹೀಗಿದ್ದರೂ ನಮ್ಮ ದೇಶದಲ್ಲಿ ಪೊ›ಜೆಕ್ಟರುಗಳ ಜನಪ್ರಿಯತೆ ನಿಧಾನಕ್ಕೆ ಹೆಚ್ಚುತ್ತಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಕಚೇರಿ ಹಾಗೂ ಶಾಲಾಕಾಲೇಜುಗಳಷ್ಟೇ ಅಲ್ಲದೆ ಮನರಂಜನೆಗಾಗಿ ಪೊ›ಜೆಕ್ಟರ್ ಬಳಸುವವರೂ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಪೊ›ಜೆಕ್ಟರುಗಳಲ್ಲಿ ಬಳಕೆಯಾಗುವ ತಂತ್ರಜ್ಞಾನದ ಬೆಳವಣಿಗೆಯೊಡನೆ ಅವುಗಳ ಬಳಕೆ ಇನ್ನಷ್ಟು ವ್ಯಾಪಕವಾಗಲಿದೆ ಎನ್ನುವುದು ಅವರ ಅಭಿಪ್ರಾಯ. ಆಗಿಂದಾಗ್ಗೆ ಹೊಸ ಟ್ರೆಂಡ್​ಗಳನ್ನು ಸೃಷ್ಟಿಸುವ ತಂತ್ರಜ್ಞಾನ ಕ್ಷೇತ್ರದ ಇತಿಹಾಸ ನೋಡಿದರೆ ಅದು ಅಸಾಧ್ಯವೆಂದೇನೂ ಅನಿಸುವುದಿಲ್ಲ!

ಮನುಷ್ಯನಿಗೂ ಸಸ್ಯಗಳಿಗೂ ಇದೆ ಹೋಲಿಕೆ

ಮನುಷ್ಯನ ಮಿದುಳಿನ ಕಾರ್ಯಾಚರಣೆಗೂ ಸಸ್ಯಗಳ ಕೋಶಕಾಯಗಳ ಕಾರ್ಯಾಚರಣೆಗೂ ಸಾಮ್ಯತೆ ಇರುವುದು ಇತ್ತೀಚೆಗೆ ನಡೆದಿರುವ ಅಧ್ಯಯನಗಳಿಂದ ಬೆಳಕಿಗೆಬಂದಿದೆ. ಮಾನವನ ಮಿದುಳು ಬದಲಾಗುತ್ತಿರುವ ವಾತಾವರಣಕ್ಕೆ ಹೊಂದಿಕೊಳ್ಳುವಂತೆಯೇ ಸಸ್ಯಗಳ ಕೋಶಕಾಯಗಳು ಒಂದೇ ರೀತಿಯ ಬೆಳವಣಿಗೆ ಹೊಂದುತ್ತವೆ. 3ಡಿ ಸ್ಕ್ಯಾನಿಂಗ್ ತಂತ್ರಜ್ಞಾನದಿಂದ ಅಧ್ಯಯನ ನಡೆಸಲಾಗಿದ್ದು, ವಿಭಿನ್ನ ಜಾತಿಯ ಸಸ್ಯಗಳ ಬೆಳವಣಿಗೆ ಒಂದೇ ರೀತಿ ನಡೆಯುತ್ತದೆಯೇ ಎಂದು ತಿಳಿಯುವ ಸಲುವಾಗಿ ಮಾಡಿದ ಅಧ್ಯಯನದಲ್ಲಿ ಈ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಸುಮಾರು ಒಂದು ತಿಂಗಳ ಕಾಲ 600 ಜಾತಿಯ ಸಸ್ಯಗಳನ್ನು ಅಧ್ಯಯನ ನಡೆಸಿದ್ದು ಈವೇಳೆ, ಅಜ್ವಾಯಿನ್​ನಂತಹ ಚಿಕ್ಕ ಸಸ್ಯಗಳು ಮತ್ತು ರೆಡ್​ವುಡ್​ನಂತಹ ದೊಡ್ಡ ಮರಗಳ ಕೋಶಕಾಯ ಒಂದೇ ರೀತಿ ಕಾರ್ಯನಿರ್ವಹಿಸುವುದು ಕಂಡುಬಂದಿದೆ.

ಜಾನುವಾರುಗಳಿಂದ ಬೆಳೆ ರಕ್ಷಿಸಲು ಸೆನ್ಸರ್!

ಜಾನುವಾರುಗಳಿಂದ ಕೃಷಿಯನ್ನು ರಕ್ಷಿಸಿಕೊಳ್ಳುವುದು ರೈತರಿಗೆ ದೊಡ್ಡ ತಲೆನೋವು. ಇದೀಗ ಐಐಟಿ ಮದ್ರಾಸ್​ನ ವಿದ್ಯಾರ್ಥಿಗಳು ಇದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಕೃಷಿಭೂಮಿಗೆ ಜಾನುವಾರುಗಳು ಬಂದರೆ ರೈತರಿಗೆ ಅಲರ್ಟ್ ಮಾಡುವಂತ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ವಿದ್ಯಾರ್ಥಿಗಳಾದ ರವಿ ಖತ್ರಿ ಮತ್ತು ಎಸ್. ಶರದತ್ ಸೆನ್ಸರ್ ಸಿಸ್ಟಮ್ ಅಭಿವೃದ್ಧಿಪಡಿಸಿದ್ದು, ಇದನ್ನು ಕೃಷಿ ಭೂಮಿಯಿಂದ 10 ಮೀಟರ್ ದೂರದಲ್ಲಿ ಅಳವಡಿಸಿರಲಾಗಿರುತ್ತದೆ. ಯಾವುದೇ ಪ್ರಾಣಿ ಇದರ ಬಳಿ ಬರುತ್ತಿದ್ದಂತೆಯೇ ಜೋರಾಗಿ ಶಬ್ದ ಮಾಡುತ್ತದೆ. ಜತೆಗೆ ಲೈಟ್​ಗಳೂ ಉರಿಯುತ್ತವೆ. ಇದರಿಂದ ಪ್ರಾಣಿಗಳು ಹೆದರಿ ಓಡಿ ಹೋಗುತ್ತವೆ. ಜತೆಗೆ ಸೆನ್ಸರ್ ರೈತರಿಗೆ ಮಾಹಿತಿಯನ್ನು ರವಾನಿಸುತ್ತದೆ.

ರಕ್ಷಿಸುವುದು ಸುಲಭ: ಈ ಉಪಕರಣವನ್ನು ಬಳಸುವುದು ಕೂಡಾ ಸರಳ. ಬೆಳೆಯ ನಂತರ ಇದನ್ನು ತೆಗೆದಿಟ್ಟು, ಮತ್ತೊಮ್ಮೆ ಬೆಳೆ ಬೆಳೆದಾಗ ಅಳವಡಿಸಿಕೊಳ್ಳಬಹುದಾಗಿದೆ. ಅಲ್ಲದೆ 2,000 ರೂ.ಗೆ ಸಿಗುವಂತದ್ದಾಗಿದ್ದು, ಸಣ್ಣ ಪ್ರಮಾಣದ ರೈತರೂ ಖರೀದಿಸಬಹುದಾಗಿದೆ.

Leave a Reply

Your email address will not be published. Required fields are marked *

Back To Top