Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಮನಸ್ಸೆಂಬ ಚಿಟ್ಟೆ ಹಾಗೂ ಮೊಟ್ಟೆ ಕಲಿಸುವ ಜೀವನಪಾಠ

Wednesday, 19.07.2017, 3:02 AM       No Comments

| ರಾಘವೇಂದ್ರ ಗಣಪತಿ

ತುಂಬಾ ಮುಖ್ಯವಾದ ವಿಷಯ ಮಾತನಾಡಬೇಕು… ಚಡಪಡಿಕೆಯಿಂದ, ಅಂಜುತ್ತಂಜುತ್ತ ಆತ ಹೇಳುತ್ತಾನೆ.

‘ಹೌದಾ ಏನದು?’ ಆಕೆಯದು ನಿರ್ವಿಕಾರ ಮುಖಭಾವ…

ಅದು… ಅದು… ಆತ ಅನುಮಾನಿಸುತ್ತಿರುವಂತೆಯೇ ಆಕೆಗೆ ಉಸಿರುಗಟ್ಟಿದ ಅನುಭವ. ಇದ್ದಕ್ಕಿದ್ದಂತೆ ಅವಳಿಗೆ ‘ವಾಷ್​ರೂಂ’ ನೆನಪಾಗುತ್ತದೆ. ಅದೇ ನೆಪದಲ್ಲಿ ಆಕೆ ಅಲ್ಲಿಂದ ಪರಾರಿಯಾಗುತ್ತಾಳೆ.

ಆಕೆಯ ಹೆಸರು ನಾರಿ. ಸ್ವಭಾವತಃ ಸಿರಿವಂತರನ್ನು ಬೇಟೆಯಾಡುವ ಚಿಟ್ಟೆ. ಎಂದಿಗಾದರೂ ಚಿಟ್ಟೆ ಒಂದೇ ಹೂವಿಗೆ ಅಂಟಿಕೊಳ್ಳುವುದುಂಟೇ? ಜಗತ್ತೆಲ್ಲವೂ ನಂದೇ ಎನ್ನುವ ಮನೋಭಾವ ಅದರದು. ಮನಸ್ಸಿನ ಚಂಚಲತೆಯ ಪ್ರತೀಕವೇ ಚಿಟ್ಟೆ. ಈ ನಾರಿಯೂ ಅಂಥ ಬಣ್ಣದ ಚಿಟ್ಟೆಯೇ. ಹಣವಷ್ಟೇ ಆಕೆಯ ಗುರಿ. ಹಾಗಾಗಿ ಹೊಸ ಶಿಕಾರಿಗಳನ್ನು ಹುಡುಕಿ ಬಲೆಗೆ ಹಾಕಿಕೊಳ್ಳುವುದೇ ಆಕೆಯ ಬದುಕಿನ ದಾರಿಯಾಗಿಬಿಟ್ಟಿರುತ್ತದೆ. ಚಲನಚಿತ್ರದ ಕಥೆಗಳು, ಪಾತ್ರಗಳು ನಿಜಜೀವನದ್ದೇ ಆಗಿರಬೇಕೆಂದಿಲ್ಲ. ಆದರೆ, ಯಾವ ರೀತಿ ಬದುಕಬೇಕು, ಯಾವ ರೀತಿ ಬದುಕ ಬಾರದು ಎಂಬ ದೀವಿಗೆಯಾಗುವ ಸತ್ವ ಈ ಕಥೆಗಳಿಗಿರುತ್ತದೆ. ಮೇಲೆ ಹೇಳಿದ ನಾರಿ ಹಿಂದಿಯಲ್ಲಿ ತೆರೆಕಂಡ ‘ಬದ್ಮಾಷಿಯಾ’ ಎಂಬ ಚಿತ್ರವೊಂದರ ಪಾತ್ರ.

ಮನಸೆನ್ನುವುದೊಂದು ಬಣ್ಣಬಣ್ಣದ ಕನಸುಗಳ ಚಿಟ್ಟೆ. ಸದಾ ಚಂಚಲ. ಎಲ್ಲಿ ವಿವೇಚನೆ ಇರುವುದಿಲ್ಲವೋ ಅಲ್ಲಿ ಚಂಚಲತೆ ಇರುತ್ತದೆ. ಅತೃಪ್ತಿಗೂ ಚಾಂಚಲ್ಯಕ್ಕೂ ಹತ್ತಿರದ ಸಂಬಂಧ. ಮನಸ್ಸು ಚಂಚಲವಾಗುವುದಕ್ಕೆ ಬಹುಮುಖ್ಯ ಕಾರಣ ಅತೃಪ್ತಿ. ಅದೊಂದು ರೀತಿ ತಮ್ಮಲ್ಲಿರುವುದೆಲ್ಲವನ್ನೂ ಬಿಟ್ಟು ದೂರದ ಬೆಟ್ಟಕ್ಕಾಗಿ ಹಂಬಲಿಸುವ ಮನೋಸ್ಥಿತಿ. ರೂಪ, ಗುಣ, ಹಣ, ಅಧಿಕಾರ, ಸುಖ-ಸೌಲಭ್ಯಗಳು ಇವೆಲ್ಲವೂ ಅತೃಪ್ತಿಯ ಮೂಲಗಳೇ.

‘ನನಗೆ ರೂಪ ಮುಖ್ಯವಲ್ಲ, ಗುಣ ಮುಖ್ಯ. ನನ್ನನ್ನು ಮದುವೆಯಾಗುವ ಹುಡುಗ ಜಂಟಲ್​ವ್ಯಾನ್ ಆಗಿರಬೇಕು’ ಎಂದು ಎಕನಾಮಿಕ್ಸ್ ಪಾಠ ಮಾಡುವ ಆಕೆ ಸ್ಟಾಫ್​ರೂಮಿನಲ್ಲಿ ಕುಳಿತು ಹೇಳುತ್ತಾಳೆ. ಆಗ ಕನ್ನಡ ಅಧ್ಯಾಪಕನಿಗೆ ಭಾಗ್ಯದ ಬಾಗಿಲೇ ತೆರೆದ ಸಂತೋಷ. ಪ್ರಪೋಸ್ ಮಾಡುವುದಕ್ಕೆ ಇದಕ್ಕಿಂತ ಸುವರ್ಣಮುಹೂರ್ತ ಬೇರೆ ಸಿಕ್ಕೀತೇ? ಇನ್ನೇನು ಆತ ಬಾಯ್ತೆರೆಯಬೇಕು… ಅಷ್ಟರಲ್ಲಿ ಟಿಫಿನ್ ಬಾಕ್ಸ್ ಉರುಳುತ್ತದೆ… ಸುಂದರಾಂಗ ಇಂಗ್ಲಿಷ್ ಲೆಕ್ಚರ್ ರಂಗಪ್ರವೇಶವಾಗುತ್ತದೆ. ನಾಯಕಿಯ ಚಿತ್ತ ಚಂಚಲವಾಗುತ್ತದೆ. ನಾಯಕನ ಹೃದಯ ಒಡೆದ ಮೊಟ್ಟೆಯಾಗುತ್ತದೆ. ಮೋಹವನ್ನು ತ್ಯಾಗ ಮಾಡು, ಆಸೆಯನ್ನು ತ್ಯಾಗ ಮಾಡು, ಲಾಲಸೆಯನ್ನು ತ್ಯಾಗ ಮಾಡು ಎಂದು ನಾಯಕನ ಅಂತರಾತ್ಮ ನುಡಿಯುತ್ತದೆ. ಕನ್ನಡದ ಹೊಸ ಅಲೆಯ ಸಿನಿಮಾಗಳ ಸಾಲಿನಲ್ಲಿ ಒಂದು ಹೆದ್ದೆರೆಯೇ ಆಗಿರುವ ‘ಒಂದು ಮೊಟ್ಟೆಯ ಕಥೆ’ ಕೂದಲಿಲ್ಲದೆ ತಲೆ ಕೋಳಿ ಮೊಟ್ಟೆಯಂತಿರುವ ವ್ಯಕ್ತಿಯ ವ್ಯಥೆಯನ್ನಷ್ಟೇ ಅಲ್ಲ, ಮನಸ್ಸು ಬಣ್ಣದ ಚಿಟ್ಟೆ ಎಂಬ ವಾಸ್ತವ ಪ್ರಜ್ಞೆಯ ಅರಿವನ್ನೂ ಮೂಡಿಸುತ್ತದೆ. ಮೋಹವನ್ನು ಗೆಲ್ಲಬೇಕು ಎಂದು ಉಪದೇಶಿಸುವ ನಾಯಕ ಅನೇಕ ಬಾರಿ ಚಿಟ್ಟೆಗಳಿಗೆ ಚಿತ್ತ ಕೊಟ್ಟು ಚಡಪಡಿಸುತ್ತಾನೆ. ಆಸೆ ಪಟ್ಟಿದ್ದು ಕೈಗೆ ಬರುವ ಸಂದರ್ಭದಲ್ಲಿ ಆತನಿಗೆ ತನ್ನ ಆಯ್ಕೆಯ ಬಗ್ಗೆ ಅತೃಪ್ತಿ ಕಾಡುತ್ತದೆ. ಮನಸ್ಸು ಮತ್ತೆ ಹಾರುವ ಚಿಟ್ಟೆಯಾಗುತ್ತದೆ.

ಈ ಅತೃಪ್ತಿ ಎನ್ನುವುದೇ ಹಾಗೆ. ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ/ಅಷ್ಟು ದೊರಕಿದರೂ ಮತ್ತಷ್ಟರಾಸೆ/ಕಷ್ಟ ಬೇಡೆಂಬಾಸೆ, ಕಡುಸುಖವ ಕಾಂಬಾಸೆ/ ನಷ್ಟ ಜೀವನದಾಸೆ ಪುರಂದರ ವಿಠಲ… ಎನ್ನುವಂತೆ ಕಾಣದ ಕಡಲಿಗೆ ಹಂಬಲಿಸುವ ಮನಸ್ಸು ಕೈಯಲ್ಲಿರುವುದನ್ನು ದೂರ ಸರಿಸುತ್ತಲೇ ಇರುತ್ತದೆ. ಸಾಧಕರಿಗೆ ಅತೃಪ್ತಿ ಇರಬೇಕು. ಆದರೆ, ಪ್ರಾಪಂಚಿಕ ವಸ್ತುಗಳ ಬಗ್ಗೆ ಸಂತೃಪ್ತಿ ಇರಬೇಕು. ಇಲ್ಲವಾದಲ್ಲಿ ಬದುಕು ನರಕವಾಗಿಬಿಡುತ್ತದೆ.

ಜೀವನವೆಂದರೆ, ಜವಳಿ ಖರೀದಿಸಿದಂತಲ್ಲ. ಕೊಂಡ ಸೀರೆ ಇಷ್ಟವಾಗದೇ ಹೋದರೆ ಬದಲಿಸಲು ಅವಕಾಶ ಇದ್ದೇ ಇರುತ್ತದೆ. ಆಸೆ ಪಟ್ಟು ತಂದ ಮೊಬೈಲ್ ಸೆಟ್ ಬೇಸರ ಹುಟ್ಟಿಸಿದರೂ, ಹೊಸ ಮಾಡೆಲ್ ಇಷ್ಟವಾದಾಗ ಬದಲಿಸಿಬಿಡಬಹುದು. ಆದರೆ, ಬದುಕು ಹಾಗಲ್ಲವಲ್ಲ. ನಾವು ಬದಲಾಗಬಹುದು, ನಮ್ಮ ಜೀವನಶೈಲಿ, ಜೀವನಮಟ್ಟ ಎಲ್ಲವೂ ಬದಲಾಗಬಹುದು. ಆದರೆ, ನಮ್ಮ ದೈಹಿಕ ಸ್ವರೂಪ ಮಾತ್ರ ದೇವರು ಕೊಟ್ಟಿದ್ದು, ಅದನ್ನು ಬದಲು ಮಾಡುವುದು ಅಸಾಧ್ಯ. ಹುಡುಗರಿರಲಿ, ಹುಡುಗಿಯರಿರಲಿ ಜೀವನ ಸಂಗಾತಿಗಳನ್ನು ಆಯ್ಕೆ ಮಾಡುವಾಗ ಕೇವಲ ಅಂದ-ಚೆಂದಕ್ಕಷ್ಟೇ ಮಾರುಹೋಗಬೇಡಿ ಎನ್ನುವುದು ಅದಕ್ಕೇ. ಸೌಂದರ್ಯ ನೋಡುವುದಕ್ಕೆ ಬರೀ ಕಣ್ಣು ಸಾಕು, ಆದರೆ, ಆಂತರ್ಯ ಅರಿಯುವುದಕ್ಕೆ ವಿಶಾಲವಾದ ಹೃದಯ ಬೇಕು. ಅಂಥ ಒಳಗಣ್ಣು ಅರಿತಿದ್ದೇ ನಿಜವಾಗಿರುತ್ತದೆ.

ಇನ್ನು ಪ್ರಪಂಚದಲ್ಲಿ ಇಷ್ಟವಾಗುವುದು, ಕಷ್ಟವಾಗುವುದು ಎಲ್ಲವೂ ಬೇಗ, ವೇಗ. ಅವರಿಬ್ಬರದು ಕಾಪೋರೇಟ್ ದಾಂಪತ್ಯ. ಆತ ಐಟಿ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದರೆ, ಆಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೈತುಂಬಾ ಸಂಬಳ ಬರುವ ಕೆಲಸದಲ್ಲಿದ್ದಾಳೆ. ಖರ್ಚಿಗೆ ಬೇಕಾದಷ್ಟು ಹಣವಿದ್ದ ಮೇಲೆ ಅವರಿಗೆ ಯಾವ ಪ್ರಾಪಂಚಿಕ ಕೊರತೆಯೂ ಇಲ್ಲ. ಆದರೂ, ಆಕೆಗೆ ಅದೇನೋ ಅಸಹನೆ, ಅತೃಪ್ತಿ. ಈ ಬದುಕು ನನ್ನದಲ್ಲ ಎಂಬ ಭಾವ. ಗಂಡ ಎಷ್ಟೇ ಹೊಂದಿಕೊಂಡು ಹೋದರೂ ಅವಳಿಗೆ ಸಮಾಧಾನವಿಲ್ಲ. ಹೀಗಿರುವಾಗ ಗಂಡನಿಗೆ ಅಮೆರಿಕದಲ್ಲಿ ಮತ್ತೊಂದು ಐಟಿ ಕಂಪನಿಯಲ್ಲಿ ಉನ್ನತ ಸ್ಥಾನಮಾನದ ಹುದ್ದೆ ಸಿಗುತ್ತದೆ. ಆತ ಮೊದಲೇ ಹೋಗಿ ಎಲ್ಲ ವ್ಯವಸ್ಥೆ ಮಾಡಲು ಮುಂದಾಗುತ್ತಾನೆ. ತನ್ನ ಹೆಂಡತಿಗೆ ಇಷ್ಟವಾಗುವ ರೀತಿಯಲ್ಲಿ ತಾವು ವಾಸ ಮಾಡುವ ಬಡಾವಣೆ ಹೇಗಿರಬೇಕು. ಮನೆಯ ವಿನ್ಯಾಸ ಹೇಗಿರಬೇಕು? ಒಳಾಂಗಣ ಅಲಂಕಾರಗಳು ಯಾವ ರೀತಿಯಲ್ಲಿರಬೇಕು, ಹೆಂಡತಿ ಬಂದಾಗ ಆಕೆಗೆ ಊಟೋಪಚಾರಕ್ಕೆ ತೊಂದರೆಯಾಗದಂತೆ ಯಾವ ಪದಾರ್ಥಗಳು ಎಲ್ಲಿರಬೇಕು, ಎಷ್ಟಿರಬೇಕು, ತಮ್ಮ ಕೊಠಡಿಯ ಮಂಚದ ವಿನ್ಯಾಸ, ಹಾಸಿಗೆ, ಹೊದಿಕೆಯ ಬಣ್ಣ, ಗುಣಮಟ್ಟದವರೆಗೆ ಆತ ಎಲ್ಲವನ್ನೂ ಹೆಂಡತಿಯ ಅಭಿರುಚಿಗೆ ತಕ್ಕಂತೆ ಸಿದ್ಧಗೊಳಿಸಿರುತ್ತಾನೆ. ಆದರೆ, ಆ ಹೆಂಡತಿ ಅಮೆರಿಕಕ್ಕೆ ಹೋಗುವುದೇ ಇಲ್ಲ. ಗಂಡ ಎಷ್ಟೇ ಒಳ್ಳೆಯವನಾದರೂ, ಹೊಂದಿ ಕೊಳ್ಳುವವನಾದರೂ, ಅವನಿದ್ದಲ್ಲಿಗೆ ನಾನೇಕೆ ಹೋಗಲಿ, ಭಾರತ ಬಿಟ್ಟು ಹೋಗಲ್ಲ ಎಂದು ನಿರ್ಧರಿಸುವ ಅವಳು, ಗಂಡನಿಗೆ ವಿಚ್ಛೇದನದ ನೋಟಿಸ್ ಕಳುಹಿಸುತ್ತಾಳೆ. ಹೊಟ್ಟೆಯಲ್ಲಿ ಮಿಸುಕಾಟದ ಅನುಭವವಾದಾಗ, ತನ್ನ ಇಷ್ಟ ಸಾಧಿಸಿದ ಸಂತೃಪ್ತಿ ಅನುಭವಿಸುತ್ತಾಳೆ. ಇದು ಶೋಭಾ ಡೇ ಅವರ ಕಥೆಯೊಂದರ ಭಾವಾಂತರ.

ಮನಸ್ಸು ಮಾಯಾಬಜಾರು. ನಿಂತಲ್ಲಿ ನಿಲ್ಲುವುದಿಲ್ಲ. ಆಸೆಗಳ ಹಿಂದೆ ಓಡೋಡುತ್ತಲೇ ಇರುತ್ತದೆ. ಈ ಕುದುರೆಯನ್ನು ಕಟ್ಟುವುದಕ್ಕೆ ಸ್ಥಿರಬುದ್ಧಿಯೆಂಬ ನಿಗ್ರಹ ಬೇಕು. ಸರಿತಪ್ಪುಗಳ ವಿವೇಚನೆ ಬೇಕು. ಇಡೀ ಬದುಕು ಸದಾ ಒಂದಿಲ್ಲೊಂದು ವಿಚಾರಗಳನ್ನು ಕಲಿಸುವ ಪಾಠಶಾಲೆ ಎನ್ನುವುದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿ ಮನೋಭಾವ ಉಳಿಸಿಕೊಂಡವರಿಗೆ ಸಾರ್ಥಕತೆಯ ಮಾರ್ಗ ಬೇಗ ಸಿಗುತ್ತದೆ. ಸಂತರು, ಮಹಾತ್ಮರು ಬದುಕಲು ಕಲಿಯಿರಿ ಎಂದು ಉಪದೇಶ ಮಾಡುವುದನ್ನು ಇದನ್ನೇ. ಸಚಿನ್ ತೆಂಡುಲ್ಕರ್ ಎಂದಿಗೂ ತಾನೋರ್ವ ಕ್ರಿಕೆಟ್ ವಿದ್ಯಾರ್ಥಿ ಎಂಬ ಮನೋಭಾವ ಹೊಂದಿದ್ದರೇ ಹೊರತು ಮಾಸ್ಟರ್ ಎಂಬ ಅಹಂಕಾರ ಇರಲಿಲ್ಲ. ಕಲಿಯುವ ಆಸಕ್ತಿ ಇದ್ದವರು ಯಾವ ವಯಸ್ಸಿನಲ್ಲೂ ಕಲಿಯುತ್ತಾರೆ. ತನಗೆಲ್ಲ ಗೊತ್ತು ಎನ್ನುವವರು ಬದುಕಿನ ಯಾವ ಹಂತದಲ್ಲೂ ಪಾಠ ಕಲಿಯುವುದಿಲ್ಲ. ಓರ್ವ ವಿದ್ಯಾರ್ಥಿ, ಓರ್ವ ಕ್ರೀಡಾಪಟುವಿನ ಮನೋಭಾವ ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಅನೇಕ ಲಾಭಗಳಿವೆ. ಏಕಾಗ್ರತೆ ಯಾವತ್ತೂ ನಮ್ಮ ಕೈಬಿಡುವುದಿಲ್ಲ. ಪ್ರಯತ್ನಶೀಲತೆ, ಸಹನೆ, ಸಂಯಮ, ಪೂರ್ವಾಪರ ವಿವೇಚನೆಗಳು ಕಠಿಣ ಸಂದರ್ಭಗಳಲ್ಲಿ ಕೈಹಿಡಿದು ಮೇಲೆತ್ತುತ್ತವೆ. ಏಕಾಗ್ರತೆಯಿಂದ ದೃಢನಿರ್ಧಾರ ಕೈಗೊಳ್ಳುವ ಗುಣ ಸಿದ್ಧಿಸುತ್ತದೆ. ಪ್ರಯತ್ನಶೀಲತೆಯಿಂದ ಪರಿಶ್ರಮದಲ್ಲಿ ನಂಬಿಕೆ ಮೂಡುತ್ತದೆ. ಅಂಥವರು ಯಶಸ್ಸಿಗಾಗಲೀ, ಇನ್ನಾವುದೇ ಗುರಿಸಾಧನೆಗಾಗಲೀ ಅಡ್ಡದಾರಿ ಹಿಡಿಯುವುದಿಲ್ಲ. ಇಂಥ ವ್ಯಕ್ತಿಗಳನ್ನು ಯಾವತ್ತೂ ಗೊಂದಲ ಕಾಡುವುದಿಲ್ಲ. ಹೊಸ ಹೊಸ ಸಾಧನೆಗಳ ತುಡಿತ ಅವರಲ್ಲಿದ್ದರೂ, ಸಾಧಿಸಿದ್ದರ ಬಗ್ಗೆ ಅಸಹನೆ, ಅತೃಪ್ತಿ ಇರುವುದಿಲ್ಲ. ಇಂಥವರ ಬದುಕು ಎಲ್ಲರಿಗೂ ಅನುಕರಣೀಯವೆನಿಸುತ್ತದೆ.

ಕೊನೆಯದಾಗಿ, ತಲೆ ಮೊಟ್ಟೆಯಂತಿದ್ದರೂ ಪರವಾಗಿಲ್ಲ, ಜೀವನ ಖಾಲಿಯಾಗಬಾರದು. ಜಗತ್ತಿನಲ್ಲಿ ಅನೇಕ ದೊಡ್ಡದೊಡ್ಡ ವ್ಯಕ್ತಿಗಳು ಬಕ್ಕತಲೆಯವರು. ವೃತ್ತಿಜೀವನದ ಆರಂಭದ ದಿನಗಳಲ್ಲಿ ಬಣ್ಣಬಣ್ಣದ ಕೇಶಶೈಲಿಗಳ ಮೂಲಕ ಶೋಕೀಲಾಲರಾಗಿದ್ದ ಟೆನಿಸ್ ತಾರೆ ಆಂಡ್ರೆ ಅಗಾಸ್ಸಿ ಜೀವನಕ್ಕೊಂದು ಗಾಂಭೀರ್ಯ ಬಂದಿದ್ದು, ಸಾಧನೆಯ ಉತ್ತುಂಗಕ್ಕೇರಿದ್ದು ತಲೆಯನ್ನು ನುಣ್ಣಗೆ ಬೋಳಿಸಿದ ಮೇಲೆ. ವೀರೇಂದ್ರ ಸೆಹ್ವಾಗ್, ಬ್ರಿಯಾನ್ ಲಾರಾ ಮೊದಲಾದವರ ಆಟವನ್ನು ಜನ ಆನಂದಿಸುತ್ತಾರೆಯೇ ಹೊರತು ಅವರ ತಲೆಗೂದಲು ಎಣಿಸುವುದಿಲ್ಲ. ಹಾಗಾಗಿ ದೇಹ, ರೂಪ ಯಾವತ್ತೂ ಕೀಳರಿಮೆಗೆ, ಅತೃಪ್ತಿಗೆ ದಾರಿ ಮಾಡಿಕೊಡುವುದು ಬೇಡ. ಇಂಥ ಒಂದು ಅರಿವಿಗೆ ಪ್ರೇರಣೆಯಾಗಿದ್ದಕ್ಕೆ ಒಂದು ಮೊಟ್ಟೆಯ ಕಥೆಗೆ ಥ್ಯಾಂಕ್ಸ್…

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top