Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಮನಸು ಏಕೆ ಮುಷ್ಕರ ಹೂಡುತ್ತದೆ ಗೊತ್ತಾ…

Wednesday, 19.04.2017, 3:00 AM       No Comments

ಜೀವನವನ್ನು ಅಗಾಧವಾಗಿ ಪ್ರೀತಿಸಬೇಕೆ ವಿನಾ ಬರೀ ಬೇಕುಗಳ ಹಿಂದೆ ಓಡಿದರೆ ನೆಮ್ಮದಿ ಮರೀಚಿಕೆಯಾಗುತ್ತದೆ. ಇದೇ ವೇಗದಲ್ಲಿ ನಾವು ಸಾಗಿದರೆ ಖಿನ್ನತೆ ಮತ್ತು ಒತ್ತಡ ಜಗತ್ತಿನ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂಬ ಎಚ್ಚರಿಕೆ ಗಂಟೆ ಮೊಳಗಿದೆ. ಹಾಗಾಗಿ, ಜೀವನವನ್ನು ಕ್ಲಿಷ್ಟಗೊಳಿಸದೆ ಆಹ್ಲಾದಕರ ಹಾಗೂ ಸರಳಗೊಳಿಸುವುದೇ ಗುರಿಯಾಗಲಿ.

ಮ್ಮ ಜೀವನ ಯಾಕೆ ಹೀಗಿದೆ…? ಅವರು ಮಾತ್ರ ಎಷ್ಟು ಖುಷಿಯಿಂದ ಇದ್ದಾರೆ… ಈ ಪ್ರಶ್ನೆ ಲೆಕ್ಕವಿಲ್ಲದಷ್ಟು ಮನಸುಗಳಲ್ಲಿ, ಮನೆಗಳಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತದೆ. ಹ್ಞಾಂ, ನೋಡಿ ಈಗಲೇ ನಿಮ್ಮ ಕಣ್ಣು ಅರಳಿತಲ್ವಾ?- ‘ನನಗೂ ಕಾಡುವ ಪ್ರಶ್ನೆ ಇದೇ…’ ಎಂದು! ನಮ್ಮಲ್ಲಿ ಬಹುತೇಕರ ಬೆಳಗುಗಳು ಆರಂಭವಾಗುವುದೇ ಹೋಲಿಕೆಯಿಂದ, ಹಳಹಳಿಕೆಯಿಂದ. ರಾತ್ರಿಗೆ ದಿನದ ಕೊನೆಯಾಗುವುದು ಕೂಡ ‘ನಮ್ಮ ಹಣೆಬರಹ ಇಷ್ಟೇ’ ಎಂಬ ನಿರಾಶಾವಾದದಿಂದ. ತಲೆಯಲ್ಲಿ ಯೋಚನೆಗಳ ಎಂಥ ಬಿರುಗಾಳಿ ಎದ್ದಿರುತ್ತದೆಂದರೆ ಮನಸು ಕೂಡ ಮುಷ್ಕರ ಹೂಡಿಬಿಡುತ್ತದೆ! ಅಂದರೆ, ಮನಸು ಒನ್​ವೇಯಾಗಿ ಹೋಗುತ್ತದೆ. ಒಳ್ಳೆಯ ವಿಚಾರಗಳು, ವಾಸ್ತವದ ಸ್ಥಿತಿ ಇದೆಲ್ಲವನ್ನು ಮನಸು ಸ್ವೀಕರಿಸುವುದನ್ನು ನಿಲ್ಲಿಸಿಬಿಡುತ್ತದೆ. ಇದರ ಪರಿಣಾಮ, ಮಿದುಳಿಗೆ ನೇತ್ಯಾತ್ಮಕ ಸಂಗತಿಗಳೇ ರವಾನೆಯಾಗಿ ಹೃದಯ ಭಾರವಾಗುತ್ತದೆ, ಜೀವನ ಬೇಡವೆನಿಸುತ್ತದೆ.

ಇತ್ತೀಚಿನ ಮನೋವೈಜ್ಞಾನಿಕರು ಏನು ಹೇಳುತ್ತಾರೆ ಗೊತ್ತಾ? ಮನುಷ್ಯರು ದುಃಖಿಗಳಾಗಿರುವುದನ್ನೇ ಸ್ವಭಾವ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಎರಡು ವಿಧ. ತಮಗುಂಟಾದ ವೈಫಲ್ಯದ ದುಃಖ ಒಂದಾದರೆ ತಮ್ಮ ಜತೆಗಿರುವ ಅಥವಾ ಸುತ್ತಮುತ್ತಲಿನವರ ಉತ್ಕರ್ಷ, ಏಳ್ಗೆ ಕಂಡು ಇನ್ನೂ ದುಃಖ!! ಇದನ್ನು ಮುಚ್ಚಿಡಲು ಹುಸಿ ಭಾವನೆಗಳ ಮುಖವಾಡ ಹಾಕಿಕೊಳ್ಳುತ್ತಾರೆ. ಆಗ ಮನಸು ಮತ್ತಷ್ಟು ಗೋಜಲಾಗುತ್ತದೆ. ದಿಗಿಲುಗೊಳ್ಳುತ್ತದೆ. ಮನಸಿನ ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದುವರಿಯುತ್ತದೆ! ‘ಥ್ರೀ ಈಡಿಯಟ್ಸ್’ ಸಿನಿಮಾದ ಫೇಮಸ್ ಡೈಲಾಗೊಂದು ನೆನಪಿರಬೇಕಲ್ವ-‘ದೋಸ್ತ್ ಫೇಲ್ ಹೋ ಜಾಯ್ ತೋ ದುಃಖ ಹೋತಾ ಹೈ… ಲೇಕಿನ್ ದೋಸ್ತ್ ಫಸ್ಟ್ ಆ ಜಾಯೇ ತೋ ಜ್ಯಾದಾ ದುಃಖ ಹೋತಾ ಹೈ’(ಸ್ನೇಹಿತ ಪರೀಕ್ಷೆಯಲ್ಲಿ ಫೇಲಾದರೆ ದುಃಖವಾಗುತ್ತೆ… ಆದರೆ ಸ್ನೇಹಿತ ಮೊದಲ ಸ್ಥಾನ ಪಡೆದುಬಿಟ್ಟರೆ ಇನ್ನೂ ಹೆಚ್ಚು ದುಃಖವಾಗುತ್ತದೆ). ಇದು ಮನುಷ್ಯನ ಸಹಜದೌರ್ಬಲ್ಯ. ಆದರೆ, ಏಕೆ ಹೀಗಾಗುತ್ತೆ ಅಂದರೆ ಜೀವನ ‘ನಾನು’ ಮತ್ತು ‘ನನ್ನ’ನ್ನಷ್ಟೇ ಸುತ್ತುವರಿದುಕೊಂಡಾಗ! ‘ನಾನು ಯಶಸ್ಸು ಸಾಧಿಸಬೇಕು, ಚೆನ್ನಾಗಿ ಬಾಳಬೇಕು’ ಎಂಬ ಹಂಬಲ ಇರಬೇಕು ನಿಜ, ಆದರೆ ಇದಕ್ಕೆ ಸ್ವಾರ್ಥದ ಬೇಲಿ ಸುತ್ತುವರಿದುಬಿಟ್ಟರೆ ಇಲ್ಲೇ ನರಕ ಅನುಭವಿಸಬೇಕಾಗುತ್ತದೆ.

ಅದಕ್ಕೆಂದೇ ಎಲ್ಲರ ಚಠಿ ್ಝಚಠಠಿ ನಮ್ಮವರ, ಸ್ನೇಹಿತರ, ಸಹೋದ್ಯೋಗಿಗಳ, ಬಂಧುಬಳಗ, ಹಿತೈಷಿಗಳ ಯಶಸ್ಸು, ಏಳ್ಗೆ, ಉತ್ಕರ್ಷವನ್ನು ಸಂಭ್ರಮಿಸುವ ಗುಣ ಬೆಳೆಸಿಕೊಳ್ಳಬೇಕು. ಇದು ಬರೀ ದುಃಖ ಕಡಿಮೆ ಮಾಡುವುದಿಲ್ಲ, ಅಂತರಂಗದ ಶುದ್ಧಿಗೂ ದಾರಿ ಮಾಡಿಕೊಡುತ್ತದೆ (ಅದೇಕೋ ತುಂಬ ಜನರ ಮನಸು ಇದಕ್ಕೆ ಒಪ್ಪುವುದಿಲ್ಲ). ಮತ್ತೊಬ್ಬರ ಯಶಸ್ಸನ್ನು ಮನಸಾರೆ ಒಪ್ಪಿಕೊಳ್ಳುವ, ಶ್ಲಾಘಿಸುವ ಗುಣವು ನಮ್ಮಲ್ಲೂ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ನಂಬಿಕೆ ಬರದಿದ್ದರೆ ಪ್ರಯೋಗ ಮಾಡಿ ನೋಡಿ. ಅದೆಷ್ಟೋ ಜನರಿಗೆ ಹೀಗೆ ಮಾಡಬೇಕೆಂದರೆ ಪ್ರಮುಖ ಅಡ್ಡಿಯಾಗುವುದು ‘ಅಹಂ’ ಭಾವ. ಅವರನ್ನು ಹೊಗಳಿಬಿಟ್ಟರೆ, ಸಾಧನೆಯನ್ನು ಒಪ್ಪಿಕೊಂಡು ಬಿಟ್ಟರೆ ತಾನೆಲ್ಲಿ ಸಣ್ಣವನಾಗಿ ಬಿಡುತ್ತೇನೋ, ಕೀಳಾಗಿ ಬಿಡುತ್ತೇನೋ ಎಂಬ ವಿಚಿತ್ರ ಭಯ. ದುರದೃಷ್ಟವೆಂದರೆ, ಇಂಥ ಸಣ್ಣತನಗಳೇ ನಮಗೆ ಸಹಜವಾಗಿ ಸಿಗಬೇಕಾದ ಖುಷಿ, ಸಮಾಧಾನ, ನೆಮ್ಮದಿಯನ್ನು ಕೊಂದುಬಿಡುತ್ತವೆ. ಬೇರೆಯವರ ಒಳ್ಳೆಯತನ ಹಾಗೂ ಅಭಿವೃದ್ಧಿ ನಿಮ್ಮ ನಿದ್ದೆ ಹಾಗೂ ಮನಸಿನ ನೆಮ್ಮದಿ ಕಸಿದುಕೊಂಡಿದೆ ಎಂದರೆ ಖಂಡಿತವಾಗಿಯೂ ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದರ್ಥ.

ಈ ಜೀವನಾನೇ ಸರಿ ಇಲ್ಲ ಅಂತ ದೂರುವವರು ಬದುಕಿನಲ್ಲಿ ಏನೆಲ್ಲ ಇದೆ ಎಂಬುದನ್ನು ಒಮ್ಮೆ ಕಣ್ಣುಬಿಟ್ಟು ನೋಡಬೇಕು. ಜೀವನ ಅನ್ನೋದೇ ಅದ್ಭುತವಾದ ಅಚ್ಚರಿಗಳ ಜಾತ್ರೆ. ಅಲ್ಲಿ ಬಣ್ಣಬಣ್ಣದ ಭಾವಗಳಿವೆ. ಕನಸುಗಳಿವೆ. ಮುಗ್ಧತೆ, ಸ್ನೇಹ, ಪ್ರೀತಿ, ಸೌಂದರ್ಯ, ಬೆರಗು, ಸಂತಸ, ಸಂಭ್ರಮ, ಸಾಂತ್ವನ, ಸಮಾಧಾನ, ನೆಮ್ಮದಿ… ಅಬ್ಬಬ್ಬಾ ಇಂಥ ಅದೆಷ್ಟೋ ಬಣ್ಣಗಳಿಂದ ಜೀವನವನ್ನು ಕಾಮನಬಿಲ್ಲಿಗಿಂತ ಸುಂದರವಾಗಿಸಬಹುದಲ್ಲವೇ? ಆದರೆ ಮನಸು ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ವ್ಯಥೆ, ದುಃಖ, ಹತಾಶೆ, ನಿರಾಸೆಗಳ ಹಿಂದೆಯೇ ಓಡುತ್ತದೆ. ಅಷ್ಟಕ್ಕೂ, ಪ್ರತಿಯೊಬ್ಬರ ಬದುಕು ಭಿನ್ನ. ಮತ್ತೊಬ್ಬರ ಬದುಕಿನೊಂದಿಗೆ ಹೋಲಿಕೆಗೆ ಇಳಿದು ನಮ್ಮ ನೆಮ್ಮದಿ ನಾವೇ ಹಾಳುಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಎಷ್ಟೋ ಯುವಕರು ನನಗೆ ಫೋನ್ ಮಾಡಿ ‘ಸರ್ ತುಂಬ ಅಪ್​ಸೆಟ್ ಆಗಿದ್ದೇನೆ. ಜೀವನಾನೇ ಬೇಡ ಅನಿಸ್ತಿದೆ. ಪದೇಪದೆ ಸೂಯಿಸೈಡ್ ಯೋಚನೆ ಬರುತ್ತೆ’ ಅಂತ ತುಂಬ ನಿರಾಶ ಸ್ವರದಲ್ಲಿ ಮಾತನಾಡುತ್ತಾರೆ. ಕಾರಣ ಕೇಳಿದ್ರೆ-‘ನನ್ ಫ್ರೆಂಡ್ ನನಗಿಂತ ಕಡಿಮೆ ಎಫರ್ಟ್ ಮಾಡಿ ಚೆನ್ನಾಗಿ ಮಾರ್ಕ್ಸ್ ತೆಗೆದಿದ್ದಾನೆ’. ‘ನನ್ನ ಬಹುತೇಕ

ಫ್ರೆಂಡ್ಸ್​ಗೆ ಗರ್ಲ್​ಫ್ರೆಂಡ್​ಗಳಿದ್ದಾರೆ. ನಾನು ಒಂಟಿ ಎಂದೆನಿಸುತ್ತಿದೆ, ಏನು ಮಾಡಲಿ?’ ನನ್ನ ಕಜಿನ್ಸ್ ಹತ್ರ ಒಳ್ಳೊಳ್ಳೆ ಬೈಕ್ ಇದೆ, ನನ್ನಪ್ಪ ನಂಗೆ ಸೆಕೆಂಡ್​ಹ್ಯಾಂಡ್ ಬೈಕ್ ತಗೋ ಅಂತಾರೆ, ಎಷ್ಟೊಂದು ಅವಮಾನ ಅನಿಸುತ್ತೆ ಗೊತ್ತಾ, ಹೀಗೆ ಬದುಕೋಕಿಂತ ಸಾಯೋದೇ ವಾಸಿ ಅನಿಸುತ್ತೆ…’ ಅಂತೆಲ್ಲ ಹೇಳ್ತಾರೆ. ಇದು ಬರೀ ಯುವಕರ ಗೋಳಲ್ಲ. ವಯಸ್ಸಲ್ಲಿ ದೊಡ್ಡವರೆನಿಸಿಕೊಂಡವರೂ ತಮ್ಮ ನೆಮ್ಮದಿ ಹಾಳು ಮಾಡಿಕೊಳ್ಳುವುದು ತಾವು ಯಾರಂತೆಯೋ ಆಗಬೇಕೆಂಬ ಹಠದಿಂದ.

ಬದುಕಲ್ಲಿ ಉನ್ನತಿಯನ್ನು ಸಾಧಿಸಬೇಕೆಂಬ ಹಠ, ಛಲ ಒಳ್ಳೆಯದೇ. ಆದರೆ ಇದಕ್ಕಾಗಿ ನಮ್ಮದೇ ಹಾದಿ ಮತ್ತು ಕನಸುಗಳಿರಬೇಕೇ ಹೊರತು ಬೇರೆಯವರ ಗುರಿಯನ್ನೇ ನಮ್ಮ ಗುರಿ ಎಂದುಕೊಂಡು ಅವರ ಹಾದಿಯಲ್ಲಿ ಸಾಗಿದರೆ ತಲುಪುವುದು ನೆಮ್ಮದಿ ಇಲ್ಲದ ನಿಲ್ದಾಣಕ್ಕೆ. ನಮ್ಮ ಕನಸುಗಳನ್ನು ನಾವೇ ಸಾಕಾರಗೊಳಿಸಲು ಶ್ರಮಿಸಬೇಕು. ಇಲ್ಲದಿದ್ದಲ್ಲಿ ಬೇರೆಯವರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ನಿಮ್ಮನ್ನು ಉಪಯೋಗಿಸಿಕೊಳ್ಳಬಹುದು.

ಅಷ್ಟಕ್ಕೂ, ಯಶಸ್ಸು ಒಂದೇ ಜೀವನದ ಗುರಿಯಲ್ಲ. ಹಾಗಾಗಿದ್ದರೆ ಈವರೆಗೆ ಯಶಸ್ಸು ಪಡೆದವರೆಲ್ಲ ನೆಮ್ಮದಿಯ ಜೀವನ ತಮ್ಮದಾಗಿಸಿಕೊಳ್ಳುತ್ತಿದ್ದರು. ದೀಪಿಕಾ ಪಡುಕೋಣೆ ಪಡೆದುಕೊಂಡ ಯಶಸ್ಸು ಕಮ್ಮಿ ಅಂತಿರೇನು? ಆದ್ರೂ ‘ನಾನೂ ಖಿನ್ನತೆ ಅನುಭವಿಸಿದ್ದೆ’ ಎಂದು ಆ ಚೆಲುವೆ ಬಹಿರಂಗವಾಗಿಯೇ ಹೇಳಿದಳಲ್ಲ. ತನ್ನದೇ ಅಭಿಮಾನಿವಲಯವನ್ನು ಹೊಂದಿರುವ ಶಾರೂಖ್ ಖಾನ್ ‘ನಾನು ಒಂಟಿ ಎಂದೆನಿಸುತ್ತಿದೆ’ ಎಂದರಲ್ಲ… ಇದು ಒಬ್ಬಿಬ್ಬರ ಕತೆಯಲ್ಲ. ಯಶಸ್ಸೇ ಬೇರೆ ಸಂತೃಪ್ತಿಯೇ ಬೇರೆ. ಹಾಗಾಗಿ, ಯಶಸ್ಸನ್ನು ಬೆನ್ನಟ್ಟುವುದೇ ಜೀವನದ ಓಟವಾಗಬಾರದು. ಜೀವನದಲ್ಲಿ ಸಿಗುವ ಸಣ್ಣ ಖುಷಿಯನ್ನೂ ಅನುಭವಿಸಬೇಕು. ಪ್ರತಿ ಕ್ಷಣದ ಮಹತ್ವ, ಅದು ನೀಡುವ ಅನುಭವ ನಮ್ಮದಾಗಿಸಿಕೊಳ್ಳಬೇಕು. ಸ್ವಾಮಿ ಸುಖಬೋಧಾನಂದರು ಕಾಪೋರೇಟ್ ವಲಯದವರನ್ನು ಉದ್ದೇಶಿಸಿ ಮಾತನಾಡಿದ ಒಂದು ವಿಡಿಯೋ ದೃಶ್ಯಾವಳಿಯನ್ನು ಇತ್ತೀಚೆಗೆ ನೋಡಿದೆ. ತುಂಬ ಅರ್ಥಪೂರ್ಣವಾದ ಮಾತುಗಳನ್ನು ಹೇಳಿದರು- ‘ಜೀವನ ನೀರಸ, ಸಪ್ಪೆ ಅನಿಸುತಿದೆ ಎಂದರೆ ಇದಕ್ಕೆ ಮುಖ್ಯ ಕಾರಣ ನಾವು ಜೀವನದ ಅಚ್ಚರಿಗಳನ್ನು ಅನುಭವಿಸುವುದು ಮತ್ತು ಖುಷಿ ಪಡುವುದನ್ನು ಮರೆತುಬಿಟ್ಟಿದ್ದೇವೆ, ‘ವಾವ್’ ಅನ್ನುವುದನ್ನು ಮರೆತು ಬಿಟ್ಟಿದ್ದೇವೆ. ನಮ್ಮ ಸುತ್ತಲೂ ಇರುವ ನಿಸರ್ಗ, ನಮ್ಮ ದೇಹದ ಎಲ್ಲ ಭಾಗಗಳು ಕಾರ್ಯಮಾಡುವ ವಿಧಾನ ಇದೆಲ್ಲವೂ ಯಾಕೆ ‘ವಾವ್’ ಅನ್ನಿಸುವುದಿಲ್ಲ? ಮತ್ತೊಬ್ಬರ ಬದುಕು ಮಾತ್ರ ಯಾಕೆ ನಿಮಗೆ ‘ವಾವ್’ ಅನಿಸುತ್ತದೆ? ಏಕೆಂದರೆ ನೀವು ಬದುಕುವುದನ್ನೇ ಮರೆತಿದ್ದೀರಿ, ನೀವು ನಿಮ್ಮ ಜೀವನವನ್ನಲ್ಲ, ಮತ್ತೊಬ್ಬರ ಜೀವನ ನೋಡಿ ಬದುಕುತ್ತಿದ್ದೀರಿ. ಹಾಗಿರುವಾಗ ಒತ್ತಡ, ಖಿನ್ನತೆ, ದುಃಖಗಳು ನಿಮ್ಮ ಜೀವನ ಪ್ರವೇಶಿಸದೆ ಇರಲು ಹೇಗೆ ಸಾಧ್ಯ? ಗಂಡ-ಹೆಂಡತಿ ಜಗಳ ದಿನದ ವಿದ್ಯಮಾನವಾಗದಿರಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

ತುಂಬ ಪ್ರಚಲಿತವಾದ, ಹೃದಯಕ್ಕೆ ತಟ್ಟುವ ಮಾತೊಂದಿದೆ, ಹಿಂದಿ ಸಿನಿಮಾದಲ್ಲೂ ಇದನ್ನು ಬಳಸಿಕೊಳ್ಳಲಾಗಿದೆ- ‘ಜಿಂದಗಿ ಮೇ ಅಕ್ಸರ್ ಕುಛ್ ಜ್ಯಾದಾ ಪಾನೇ ಕೀ ಚಾಹ್ ಮೇ ಹಮ್ ವೋ ಭೀ ಖೋ ಜಾತೇ ಹೈ ಜೋ ಹಮಾರೆ ಪಾಸ್ ಹೈ’(ಜೀವನದಲ್ಲಿ ಮತ್ತಷ್ಟು ಹೆಚ್ಚು ಪಡೆದುಕೊಳ್ಳುವ ಹಂಬಲದಲ್ಲಿ ನಮ್ಮ ಬಳಿ ಇರುವುದನ್ನೂ ಕಳೆದುಕೊಳ್ಳುತ್ತೇವೆ)! ಹೀಗಾದರೆ ನಿಜಕ್ಕೂ ದುರಂತ ಅಲ್ಲವೇ? ಯಾವುದನ್ನೋ ಪಡೆದುಕೊಳ್ಳುವ ತವಕದಲ್ಲಿ ನಮ್ಮ ಬಳಿ ಇರುವ ನೆಮ್ಮದಿ, ಸಂತಸವನ್ನೇ ಬಿಟ್ಟುಕೊಟ್ಟರೆ ಜೀವನಕ್ಕೇನು ಅರ್ಥ ಹೇಳಿ? ಹಾಗಾಗಿ, ನಮ್ಮ ದಾರಿಯಲ್ಲಿ ನಾವು ಸಾಗೋಣ. ಆ ದಾರಿಯಲ್ಲಿ ಸುಮ್ಮನೇ ಕ್ರಮಿಸೋಣ, ಖಂಡಿತವಾಗಿಯೂ ಗುರಿ ತಲುಪುತ್ತೇವೆ. ಜತೆಗೆ, ಮತ್ತೊಬ್ಬರ ಉತ್ಕರ್ಷವನ್ನು ಸಂಭ್ರಮಿಸುವ, ಎಲ್ಲರೂ ಒಟ್ಟಾಗಿ ಒಳಿತಿನೆಡೆಗೆ ಸಾಗುವ ಸಂಕಲ್ಪ ಮಾಡಿಕೊಂಡರೆ ಮನಸಿನ ಮುಷ್ಕರ ಮುಗಿದು ಅಲ್ಲೊಂದು ಸ್ಪೂರ್ತಿಯ ಚಿಲುಮೆ ಹುಟ್ಟಿಕೊಳ್ಳುತ್ತದೆ, ಬದುಕಿನ ಪ್ರೀತಿ ಅರಳಿಕೊಳ್ಳುತ್ತದೆ.

Leave a Reply

Your email address will not be published. Required fields are marked *

Back To Top