Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಮನಸಿಗೆ ಮುದ ತಂದ ಮನೆ ನಿರ್ಮಾಣ

Friday, 13.01.2017, 8:51 AM       No Comments

ಗೃಹಮಂಡಳಿ ನಿರ್ವಿುತ ಮನೆಯ ಖರೀದಿಗೆ ಜನ ಬರುತ್ತಿದ್ದರೆಂದರೆ ಅದಕ್ಕೆ ಕಾರಣ ಗುಣಮಟ್ಟದ ನಿರ್ವಣವಾಗಿರಲಿಲ್ಲ; ಭೂಮಿಯ ಹಕ್ಕುಪತ್ರದಲ್ಲಿ ತೊಡಕಿರುತ್ತಿರಲಿಲ್ಲ ಎಂಬುದಕ್ಕೆ! ಈ ಹಿನ್ನೆಲೆಯಲ್ಲಿ, ಕಾರ್ಯಯೋಜನೆ, ಅನುಷ್ಠಾನದಲ್ಲಿ ಸಕಾರಾತ್ಮಕ ಬದಲಾವಣೆ ತಂದದ್ದರ ಪರಿಣಾಮ ಜನರ ವಿಶ್ವಾಸವೂ ಹೆಚ್ಚಿತು.

ಭೂಸೇನಾ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನ್ನನ್ನು ಕರ್ನಾಟಕ ಗೃಹಮಂಡಳಿ (ಕೆಎಚ್​ಬಿ) ಸೇವೆಗೆ ನಿಯೋಜಿಸಲಾಯಿತು. ಕೆಎಚ್​ಬಿಯ ಆರ್ಥಿಕ ಸ್ಥಿತಿಗತಿ ಅಂದಿಗೆ ತೀರಾ ಕಳಪೆಯಾಗಿತ್ತು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಅದು ಮುಚ್ಚಲ್ಪಡುವ ಹಂತಕ್ಕೆ ಬಂದುನಿಂತಿತ್ತು. ಕೆಎಚ್​ಬಿಯು ಸಾರ್ವಜನಿಕ ಉಪಯುಕ್ತತೆಗೆ ಧಕ್ಕೆ ತಂದುಕೊಂಡಿದ್ದ ಕಾರಣ ಮತ್ತು ಪುನಶ್ಚೇತನಗೊಳಿಸುವುದು ತೀರಾ ಕಷ್ಟ ಎಂದು ಭಾವಿಸಲಾದ ಹಂತಕ್ಕೆ ತಲುಪಿದ್ದರಿಂದಾಗಿ, ಅದನ್ನು ಮುಚ್ಚುವ ಕುರಿತಾದ ಗಂಭೀರ ಚರ್ಚೆ ಕೆಲವೊಂದು ವಲಯಗಳಲ್ಲಿ ನಡೆಯುತ್ತಿತ್ತು. ಆ ಕಾಲಘಟ್ಟದಲ್ಲಿ, ನನ್ನ ಪೂರ್ವವರ್ತಿ ಅಧಿಕಾರಿಯು, ಬಹುತೇಕ ತಾಣಗಳಲ್ಲಿ ‘100 ಗೃಹನಿರ್ವಣ’ ಯೋಜನೆಯ ಕುರಿತು ಯೋಜಿಸಿದ್ದರು.

ಪರಿಪೂರ್ಣ ಬಳಕೆಯ ಉದ್ದೇಶ: ಮಂಡಳಿಯು ನೂರಕ್ಕೂ ಹೆಚ್ಚು ತಾಣಗಳಲ್ಲಿ ಸ್ವತ್ತುಗಳನ್ನು ಹೊಂದಿತ್ತಾದರೂ, ಅವುಗಳ ಅಭಿವೃದ್ಧಿಗೆ ಸಂಬಂಧಿಸಿದ ನಿರ್ದಿಷ್ಟ ಪೂರ್ವಸಿದ್ಧತೆಯನ್ನೇನೂ ಮಾಡಿಕೊಂಡಿರಲಿಲ್ಲ. ಈ ಸ್ವತ್ತುಗಳ ಪರಿಪೂರ್ಣ ಬಳಕೆಯ ಉದ್ದೇಶದೊಂದಿಗೆ, ‘100 ಗೃಹನಿರ್ವಣ’ ಯೋಜನೆಯನ್ನು ಅವರು ಮುಂದುಮಾಡಿದ್ದರು. ನಾನು ಗೃಹಮಂಡಳಿಗೆ ಬಂದಾಗ, ಅದಿನ್ನೂ ಪರಿಕಲ್ಪನೆಯ ಹಂತದಲ್ಲಿತ್ತು. ಅದನ್ನು ಮತ್ತಷ್ಟು ಮುನ್ನಡೆಸಲು ನಾನು ನಿರ್ಧರಿಸಿದ ಪರಿಣಾಮ, ವಾಸ್ತುಶಿಲ್ಪಿಗಳ ಪಟ್ಟಿ ತಯಾರಿಸಿ ಅವರಿಗೆ ‘ಯೋಜನಾ ಮೇಲ್ವಿಚಾರಣಾ ಸಮಾಲೋಚಕರ’ ಹೊಣೆಗಾರಿಕೆ ನೀಡಲಾಯಿತು. ಯಾವುದೇ ಮಾರ್ಪಾಡು/ಬದಲಾವಣೆಗಳಿಲ್ಲದ, ‘ಟರ್ನ್ಕೀ’ ಷರತ್ತಿನ ಆಧಾರದ ಮೇಲೆ ಅವರಿಗೆ ಕಾಮಗಾರಿಯನ್ನು ನಿಯೋಜಿಸಿದೆವು. ಮಾರ್ಪಾಡು/ಬದಲಾವಣೆಗೆ ಆಸ್ಪದ ಕಲ್ಪಿಸುವ ಯಾವುದೇ ಷರತ್ತು/ಕಲಂ ಅದರಲ್ಲಿರಲಿಲ್ಲ. ಟೆಂಡರ್ ಮೌಲ್ಯವು ಅಂತಿಮವಾಗಿತ್ತು. ವಾರದ ಆಧಾರದ ಮೇಲೆ ನಾನು ಯೋಜನೆಯ ಮೇಲ್ವಿಚಾರಣೆ ನಡೆಸಿದೆ. ಯೋಜನೆಯು ಆರಂಭದಿಂದಲೂ ಕ್ಷಿಪ್ರಗತಿಯಲ್ಲಿ ಸಾಗಿತ್ತು. ನೋಡನೋಡುತ್ತಿದ್ದಂತೆಯೇ ಅದಕ್ಕೊಂದು ಆಕಾರ ದಕ್ಕಲಾರಂಭಿಸಿತು. ಅತ್ಯುತ್ತಮರೆನಿಸಿದ ವಾಸ್ತುಶಿಲ್ಪಿಗಳನ್ನೇ ನಾವು ನೇಮಿಸಿಕೊಂಡಿದ್ದರಿಂದಾಗಿ ಮನೆಗಳ ವಿನ್ಯಾಸವು ವಿಭಿನ್ನವಾಗಿತ್ತು. ಕಟ್ಟಡಗಳು ಪರಿಸರ-ಸ್ನೇಹಿಯಾಗಿದ್ದರ ಜತೆಗೆ ಗಟ್ಟಿಮುಟ್ಟಾಗಿದ್ದುದು ವಿಶೇಷವಾಗಿತ್ತು.

ಗೃಹಮಂಡಳಿಯಲ್ಲಿ ನಮ್ಮೆದುರಿಗಿದ್ದ ಪ್ರಮುಖ ಸವಾಲೆಂದರೆ, ಅದಕ್ಕಿದ್ದ ಅಪಖ್ಯಾತಿ. ಈ ಕಾರಣದಿಂದಾಗಿಯೇ ಮಂಡಳಿಯ ಬಹಳಷ್ಟು ಮನೆಗಳು ಮಾರಾಟವಾಗದೆ ಉಳಿದಿದ್ದವು. ಹೀಗೆ ಉಳಿದಿದ್ದವುಗಳಲ್ಲಿ ’ಘಚಠಿಜಿಟ್ಞಚ್ಝ ಏಟ್ಠಠಜ್ಞಿಜ ಎಚಞಛಿ ಕ್ಟಟ್ಜಛ್ಚಿಠಿ’ನಲ್ಲಿನ ಮನೆಗಳು ಮಾತ್ರವಲ್ಲದೆ, ಯಲಹಂಕ ಉಪನಗರ ಟೌನ್​ಷಿಪ್​ನಲ್ಲಿ ಕಟ್ಟಲಾಗಿದ್ದ ಮನೆಗಳೂ ಸೇರಿದ್ದವು. ಅನೇಕ ಪ್ರದೇಶಗಳಲ್ಲಿ, ನಿರ್ದಿಷ್ಟ ವರ್ಗಗಳಿಗೆ ಸೇರಿದ ಬಹುತೇಕ ಮನೆಗಳು ಖಾಲಿಯಿದ್ದವು. ‘ಕಾಮಗಾರಿ ಕಳಪೆಯಾಗಿದೆ’ ಎಂಬುದೇ ಇವುಗಳ ಕುರಿತಾದ ಮುಖ್ಯ ದೂರಾಗಿತ್ತು. ಗೃಹಮಂಡಳಿ ನಿರ್ವಿುಸಿದ ಮನೆಯೊಂದರ ಖರೀದಿಗೆ ಜನ ನಮ್ಮ ಬಳಿಗೆ ಬರುತ್ತಿದ್ದರೆಂದರೆ ಅದಕ್ಕೆ ಕಾರಣ ಗುಣಮಟ್ಟದ ನಿರ್ವಣವಾಗಿರಲಿಲ್ಲ; ಮನೆಗೆ ಸಂಬಂಧಿಸಿದ ಭೂಮಿಯ ಹಕ್ಕುಪತ್ರದಲ್ಲಿ ಯಾವುದೇ ತೊಡಕಿರುತ್ತಿರಲಿಲ್ಲ ಎಂಬುದಕ್ಕೆ! ಈ ಹಿನ್ನೆಲೆಯಲ್ಲಿ ನಾವು ಏಜೆನ್ಸಿಯೊಂದನ್ನು ನಿಯೋಜಿಸಿ, ಜಾಹೀರಾತು ಉಪಕ್ರಮಕ್ಕೆ ಚಾಲನೆ ನೀಡಿ, ಬೆಂಗಳೂರಿನ ಯಲಹಂಕ ಮಾತ್ರವಲ್ಲದೆ, ಹಾಸನದಂಥ ಇತರ ಜಿಲ್ಲಾಕೇಂದ್ರಗಳಲ್ಲಿನ ‘ಹಳೆಯ ಮನೆಗಳ ದಾಸ್ತಾನಿನ’ ತೀರುವಳಿ ಮಾರಾಟಕ್ಕೆ ಶುರುಹಚ್ಚಿಕೊಂಡೆವು. ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದಲ್ಲಿ ಮನೆಗಳ ನೀಡಿಕೆ ಆರಂಭವಾಯಿತು. ಅರ್ಜಿ ಸಲ್ಲಿಸಿದವರು ಯಾರೇ ಇರಲಿ, ಅವರಿಗೆ ಮನೆ ನೀಡಲಾಯಿತು. ಈ ರೀತಿಯಾಗಿ ಮನೆಗಳ ದಾಸ್ತಾನನ್ನೂ, ಗೃಹಮಂಡಳಿಯ ಮೇಲಿದ್ದ ಸಾಲದ ಹೊರೆಯನ್ನೂ ಫೈಸಲುಮಾಡಿದೆವು.

ಜಂಟಿ ಅಭಿವೃದ್ಧಿಯ ಚಿಂತನೆ: ಖಾಸಗಿಯವರೂ ಸೇರಿದಂತೆ ಇತರ ಪಕ್ಷಸ್ಥರನ್ನು ತೊಡಗಿಸಿಕೊಂಡು ಜಂಟಿ ಅಭಿವೃದ್ಧಿಗೆ ಕೈಹಾಕುವುದು ಗೃಹಮಂಡಳಿಯ ಮತ್ತೊಂದು ಯೋಜನಾವಲಯವಾಗಿತ್ತು. ಯೋಜನೆಯ ಪ್ರವರ್ತಕರಿಗೆ ಗೃಹಮಂಡಳಿಯ ಹೆಸರನ್ನು ನೀಡುವ ವಿಷಯವೂ ಚರ್ಚೆಗೆ ಬಂದಿತ್ತು. ಈ ನಿಟ್ಟಿನಲ್ಲಿ ನಮ್ಮದು ಮುಕ್ತಮನಸ್ಸಾಗಿತ್ತು. ಆ ದಿನಗಳಲ್ಲಿ, ಗುಣಮಟ್ಟದ ಕಾಮಗಾರಿಯ ಮನೆಗಳಿಂದಾಗಿಯೇ ಗೃಹಮಂಡಳಿಯ ಹೆಸರು ಸುಧಾರಿಸಿತೆನ್ನಬೇಕು. ಬೀದರ್, ಮಂಡ್ಯ, ಮೈಸೂರು, ಮಂಗಳೂರಿನಂಥ ಕೆಲವೊಂದು ಪ್ರದೇಶಗಳಲ್ಲಿ ಬೇಡಿಕೆ ಅದೆಷ್ಟು ತೀವ್ರವಾಗಿತ್ತೆಂದರೆ, ಅದರ ಈಡೇರಿಕೆಗೆ ನಮ್ಮ ಬಳಿ ಸಾಕಷ್ಟು ಜಮೀನೂ ಇರಲಿಲ್ಲ. ಕೆಲವೊಂದು ಜಾಗಗಳಲ್ಲಂತೂ, ಯಾರೋ ಕೆಲವರಿಂದ ಒತ್ತುವರಿಯಾದ ಕಾರಣಕ್ಕೆ ಜನರು ಜಮೀನನ್ನೇ ತೊರೆದಿದ್ದರು; ಅಂಥ ಒತ್ತುವರಿಯನ್ನು ನಿವಾರಿಸಿದೆವು.

ಹಕ್ಕುಪತ್ರದ ವಿವಾದ ಅಥವಾ ವೈಯಕ್ತಿಕ ಅಹವಾಲುಗಳಂಥ ಬಹಳಷ್ಟು ಹಳೆಯ ಪ್ರಕರಣಗಳೂ ಮಂಡಳಿಯ ವ್ಯಾಪ್ತಿಯಲ್ಲಿದ್ದು ಅವುಗಳ ಇತ್ಯರ್ಥವಾಗಿರಲಿಲ್ಲ. ವಾರಕ್ಕೊಮ್ಮೆ ಅವುಗಳ ವಿಚಾರಣೆ ನಡೆಸಿದೆ. ‘ಹುಡ್ಕೊ’ದಲ್ಲಿ ಕಾರ್ಯನಿರ್ವಹಿಸುವಾಗ, ನಮಗೆ ಅಗಾಧ ಸಂಪರ್ಕಗಳಿದ್ದವು. ದೊಡ್ಡಮಟ್ಟದಲ್ಲಿ ನಮ್ಮನ್ನು ಬೆಂಬಲಿಸಲು ಅವು ಒಪ್ಪಿದ್ದವು. ತತ್ಪರಿಣಾಮ, ಗೃಹಮಂಡಳಿಯು ಕ್ರಮೇಣ ಉತ್ತಮ ಹೆಸರನ್ನು ಸಂಪಾದಿಸಿತು, ಪರಿಣತಿಯನ್ನು ಕೈಗೂಡಿಸಿಕೊಂಡಿತು; ನಾವು ನಿಯೋಜಿಸಿಕೊಂಡಿದ್ದ ಸಮರ್ಥ ವಾಸ್ತುಶಿಲ್ಪಿಗಳೇ ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಸಾಧನೆಯ ಮೈಲಿಗಲ್ಲು: ಇತರ ಇಲಾಖೆಗಳಿಂದಲೂ ಕೆಲಸ ಮಾಡಿಸಿಕೊಳ್ಳು ವಂಥ ಮತ್ತೊಂದು ಉಪಕ್ರಮವನ್ನು ನಾನು ಕೈಗೆತ್ತಿಕೊಂಡಿದ್ದು ತರುವಾಯದಲ್ಲಿ ಸಾಧನೆಯ ಮೈಲಿಗಲ್ಲಾಗಿ ಪರಿಣಮಿಸಿತು. ಅಂದಿನ ಕಂದಾಯ ಸಚಿವರನ್ನು ಭೇಟಿಯಾಗಿ ವಿಚಾರ ವಿನಿಮಯ ನಡೆಸಿದ ಸಂದರ್ಭ ಇದಕ್ಕೊಂದು ಉದಾಹರಣೆ. ಹೊಸದಾಗಿ ಏಳು ಜಿಲ್ಲೆಗಳನ್ನು ಆಗಷ್ಟೇ ರಚಿಸಲಾಗಿತ್ತು ಮತ್ತು ಅವಕ್ಕೆ ಜಿಲ್ಲಾ ಕಚೇರಿ ಸಮುಚ್ಚಯಗಳ ಅಗತ್ಯವಿತ್ತು. ಉಡುಪಿ ಮತ್ತು ಗದಗ ಹೊರತುಪಡಿಸಿ ಉಳಿದ ಐದು ಜಿಲ್ಲೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ನಾವು ಕೈಗೆತ್ತಿಕೊಳ್ಳಲು ಸಾಧ್ಯವಾಯಿತು. ಆ ಕಚೇರಿ ಸಮುಚ್ಚಯಗಳಿಗಾಗಿ ಉತ್ತಮ ವಾಸ್ತುಶಿಲ್ಪ ನಕಾಶೆಗಳನ್ನು ರೂಪಿಸಿದೆವು. ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ವಾಸ್ತುಶಿಲ್ಪಿಗಳ ನೆರವಿನಿಂದ ಕಟ್ಟಡ ವಿನ್ಯಾಸ ರೂಪುಗೊಂಡಿತು. ಜಿಲ್ಲಾಧಿಕಾರಿಗಳ ಹಿಮ್ಮಾಹಿತಿ ಪಡೆದ ನಂತರ, ಈ ಕಾಮಗಾರಿ ಸಂಬಂಧಿತ ಟೆಂಡರ್​ಗಳು ನಮಗೆ ದಕ್ಕಿದವು. ತರುವಾಯದಲ್ಲಿ, ಉಳಿದೆರಡು ಜಿಲ್ಲೆಗಳ ಕಾಮಗಾರಿಗಳನ್ನೂ ನಮಗೆ ವಹಿಸಲಾಯಿತು. ಒಟ್ಟಾರೆ ಹೇಳುವುದಾದರೆ, ಎಲ್ಲ ಏಳು ಕಚೇರಿ ಸಮುಚ್ಚಯಗಳೂ ಗೃಹಮಂಡಳಿಯಿಂದಲೇ ನಿರ್ವಿುಸಲ್ಪಟ್ಟವು ಎಂಬುದು ವಿಶೇಷ. ಅವು ನಿಜಕ್ಕೂ ಅದ್ಭುತ ಸೃಷ್ಟಿಗಳಾಗಿದ್ದು, ಈ ಕಟ್ಟಡಗಳ ನಿರ್ವಣದಿಂದಾಗಿ ಗೃಹಮಂಡಳಿಯ ಪ್ರಸಿದ್ಧಿ ಮತ್ತಷ್ಟು ಹೆಚ್ಚಿತು.

‘100 ಗೃಹನಿರ್ವಣ’ ಯೋಜನೆಯು ಅನುಷ್ಠಾನದ ಹಂತದಲ್ಲಿದ್ದು, ಮನೆಗಳು ಸಕಾಲದಲ್ಲಿ ನಿರ್ವಣಗೊಳ್ಳುತ್ತಿದ್ದ ಕಾಲಘಟ್ಟವದು. ನಾವು ಅರ್ಜಿಗಳನ್ನು ಆಹ್ವಾನಿಸಿದ್ದೇ ಆಹ್ವಾನಿಸಿದ್ದು, ಜನ ಅಗಾಧ ಪ್ರತಿಕ್ರಿಯೆ ತೋರಿಸಲು ಶುರುಮಾಡಿದರು. ಗುಣಮಟ್ಟದ ಮನೆಗಳ ನಿರ್ಮಾಣ ಎಲ್ಲರ ಪಾಲಿಗೆ ಅಚ್ಚರಿಯ ಸಂಗತಿಯಾಗಿತ್ತು. ನಾವು ಮನೆಗಳನ್ನು ಮಂಜೂರು ಮಾಡುತ್ತಿದ್ದಂತೆ, ತಮಗೆ ಯಾವ ಮನೆ ಮಂಜೂರಾಗಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದ ಫಲಾನುಭವಿಗಳು, ನಿರ್ಮಾಣ ಹಂತದಲ್ಲೇ ಅವುಗಳ ಮೇಲ್ವಿಚಾರಣೆಯನ್ನೂ ನಡೆಸುತ್ತಿದ್ದರು. ಅವರು ಕಾಮಗಾರಿ ವೀಕ್ಷಿಸಲು, ಅಗತ್ಯವಿದ್ದಲ್ಲಿ ಯಾವುದೇ ಮೌಲ್ಯವರ್ಧನೆಗೆ ಮುಂದಾಗಲು, ಅಷ್ಟೇಕೆ, ಮಾರ್ಪಾಡುಗಳನ್ನು ಸೂಚಿಸುವುದಕ್ಕೂ ಅವಕಾಶವಿತ್ತು. ಅಡುಗೆಮನೆ ಇಲ್ಲಿರಬಾರದು, ಮಲಗುವ ಕೋಣೆ ಈ ದಿಕ್ಕಿನಲ್ಲಿರಬಾರದು ಎಂದು ಯಾರಾದರೂ ಬಯಸಿದರೆ ಅಥವಾ ಸಣ್ಣಪುಟ್ಟ ಬದಲಾವಣೆಗಳನ್ನು ಹೇಳಿದರೆ, ಅದಕ್ಕೂ ಆಸ್ಪದ ನೀಡುತ್ತಿದ್ದೆವು; ಕಾರಣ ಅಲ್ಲಿ ವಾಸಿಸುವವರು ಮನೆಯ ಕುರಿತಾಗಿ ಸಂತುಷ್ಟರಾಗಿರಬೇಕು, ಸಂತೋಷದಿಂದಿರಬೇಕು ಎಂಬುದು ನಮ್ಮ ಇರಾದೆಯಾಗಿತ್ತು. ಅಂದರೆ, ಮನೆಯ ನಿರ್ಮಾಣ ಸಂಪೂರ್ಣವಾದ ನಂತರ ಯಾವುದೇ ಮಾರ್ಪಾಡಿನ ಅಗತ್ಯ ಬಾರದ ರೀತಿಯಲ್ಲಿ, ಭಾವಿ ಖರೀದಿದಾರರ ಅಭಿಪ್ರಾಯ/ದೃಷ್ಟಿಕೋನಗಳನ್ನು ನಿರ್ವಣದಲ್ಲಿ ಅಳವಡಿಸಿಕೊಳ್ಳುವಷ್ಟರ ಮಟ್ಟಿಗೆ ನಾವು ಮುಕ್ತವಾಗಿದ್ದೆವು.

ಚಿಂತನೆಯಲ್ಲಿ ಭಾರಿ ಬದಲಾವಣೆ: ಅದು ನಮ್ಮ ಚಿಂತನೆಯಲ್ಲಾದ ಭಾರಿ ಬದಲಾವಣೆಯಾಗಿತ್ತು. ನಿರ್ವಣದಲ್ಲಿ ಕೈಗೊಳ್ಳಲಾದ ಮಾರ್ಪಾಡಿನಿಂದ ಏನೇ ಬದಲಾವಣೆ ಆದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಅಂದರೆ, ಬದಲಾವಣೆ ಕೈಗೊಳ್ಳಲು ದುಬಾರಿ ಸಾಮಗ್ರಿಯ ಅಗತ್ಯಬಿದ್ದಲ್ಲಿ, ಅದಕ್ಕೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿತ್ತು ಮತ್ತು ಹೆಚ್ಚೇನೂ ಬದಲಾವಣೆ ಇಲ್ಲದ ಪಕ್ಷದಲ್ಲಿ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪರಿಪಾಠವನ್ನು ಜನ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಚಿಂತನಾಕ್ರಮದಲ್ಲಾದ ಇಂಥ ಬದಲಾವಣೆ ಜನರಿಗೆ ಅರಿವಾಗುತ್ತಿದ್ದಂತೆ, ಮಾರಾಟವಾಗದೆ ಉಳಿದಿದ್ದ ಅನೇಕ ಮನೆಗಳೂ ಖರೀದಿಸಲ್ಪಟ್ಟವು. ಇಂಥ ಖರೀದಿದಾರರು ಇಂದಿಗೂ ನಮಗೆ ಕೃತಜ್ಞತೆ ಸಲ್ಲಿಸುತ್ತಾರೆ. ಈ ಎಲ್ಲ ಕ್ರಮಗಳಿಂದಾಗಿ, ಸಾರ್ವಜನಿಕರಿಂದ ಬಾಕಿಹಣ ವಸೂಲು ಮಾಡುವುದು ನಮಗೆ ಸಾಧ್ಯವಾಯಿತು; ಹುಡ್ಕೊ ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದ ಸಾಲಸೋಲ ತೀರಿತು. ಅನೇಕ ಸಂಸ್ಥೆಗಳಿಂದ ಹೆಚ್ಚಿನ ಬಡಿದ್ದರದ ಸಾಲವನ್ನು ತೆಗೆದುಕೊಳ್ಳಲಾಗಿತ್ತಾದ್ದರಿಂದ, ಸಾಲಸಂಬಂಧಿತ ವ್ಯವಸ್ಥೆಯನ್ನೂ ಮರುರೂಪಿಸಿದೆವು. ಈ ನಿಟ್ಟಿನಲ್ಲಿ ಹುಡ್ಕೊ ಮತ್ತು ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿದೆವು. ಕಡಿಮೆ ಬಡ್ಡಿದರದ ಸಾಲ ನೀಡುವ ಪ್ರಸ್ತಾಪ ಮುಂದಿಟ್ಟ ಬ್ಯಾಂಕುಗಳಲ್ಲಿ ನಮ್ಮ ವತಿಯಿಂದ ಠೇವಣಿಗಳನ್ನೂ ಇರಿಸಲಾಯಿತು. ಇದರಿಂದಾಗಿ ಗೃಹಮಂಡಳಿಗೆ ಹೆಚ್ಚಿನ ಹಣದ ಉಳಿತಾಯವಾಯಿತು. ಆ ದಿನಗಳಲ್ಲಿ, ಪ್ರಗತಿಶೀಲ ಚಿಂತನೆಗೆ ಅವಕಾಶವಿತ್ತು. ಸಾರ್ವಜನಿಕರ ಕುಂದುಕೊರತೆ ಕ್ಷಿಪ್ರವಾಗಿ ಇತ್ಯರ್ಥಗೊಳ್ಳುತ್ತಿದ್ದವು.

ಮನೆ ಎಂಬುದು ಪ್ರತಿಯೊಬ್ಬರಿಗೂ ತೀರಾ ಆಪ್ತವೆನಿಸುವಂಥದ್ದು. ಈ ಕಾರಣಕ್ಕಾಗಿಯೇ ಬಾಕಿದಾರರ ಶೇಕಡಾವಾರು ಪ್ರಮಾಣ ತೀರಾ ಕಮ್ಮಿಯಿತ್ತು. ಅದು ಕೂಡ ಮತ್ತೊಂದು ಸ್ವಾರಸ್ಯಕರ ಸಂಗತಿಯೇ. ಬೇರೆ ಬಾಬತ್ತುಗಳಿಗೆ ಹಿಡಿತವಾಗಿ ಅಥವಾ ಮಿತವಾಗಿ ಖರ್ಚುಮಾಡಬೇಕಾಗಿ ಬಂದರೂ, ಮನೆ ಸಂಬಂಧಿತ ಕಂತುಗಳನ್ನು ಜನ ಸಕಾಲದಲ್ಲಿ ಪಾವತಿಸುತ್ತಿದ್ದರು. ಕೊಳೆಗೇರಿ ಪ್ರದೇಶಗಳಲ್ಲಿ ಕೂಡ ನಾವು ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದಿದೆ. ಕೊಳೆಗೇರಿ ನಿಮೂಲನಾ ಮಂಡಳಿಗಾಗಿ ನಿರ್ವಿುಸಲಾದ ಮನೆಗಳಲ್ಲೂ ಗೃಹಮಂಡಳಿಯ ನೆರವು, ಯೋಗದಾನವಿತ್ತು. ಒಟ್ಟಾರೆ ಹೇಳುವುದಾದರೆ, ಗೃಹಮಂಡಳಿಯಲ್ಲಿ ಕಾರ್ಯನಿರ್ವಹಿಸುವಾಗ ನನಗೆ ದಕ್ಕಿದ ಅನುಭವ ಸಮೃದ್ಧವಾಗಿತ್ತು.

(ಲೇಖಕರು ಹಿರಿಯ ಐಎಎಸ್ ಅಧಿಕಾರಿ)

 

Leave a Reply

Your email address will not be published. Required fields are marked *

Back To Top